ದೃಶ್ಯ ೨

ದೃಶ್ಯ ೨

ದೃಶ್ಯ ೨
[ದುಷ್ಟಬುದ್ಧಿಯ ಮನೆಯ ಒಂದು ಕೊಠಡಿಯಲ್ಲಿ ಅವನು ಚಿಂತಾಕ್ರಾಂತನಾಗಿ ಕುಳಿತುರುವನು.]

ದುಷ್ಟ:- ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯಮೆನ
ಗೇಕಾಧಿಪತ್ಯಮಾಗಿರ್ದಪುದು, ಮುಂದಿವಂ
ಭೂಕಾಂತನಾದಪಂ ಗಡ! ವಿಪ್ರರೆಂದ ನುಡಿ
ತಪ್ಪದದು! ಎನ್ನಾತ್ಮಜರ್ಗೆ ಬೇಕಾದ
ಸಂಪದಂ ಬಯಲಾಗು ಪೋದಪುದೇ? ಗಾಲವನು
ಏನೆಂದ! ದುಷ್ಟಬುದ್ಧಿಯ ನಾಮವನ್ವರ್ಥ
ವಾಗದಿರೆ ಎನ್ನ ಬಾಳಿದು ವ್ಯರ್ಥ! ಎನ್ನಿಳೆಗೆ,
ಎನ್ನಾತ್ಮಜರ್ಗೆ ಮುಡುಪಾದ ಈ ಪೊಳಲಿಂಗೆ
ಅವನೊಡೆಯನಾಗುವನೆ. ಇಲ್ಲ, ಎಂದೂ ಇಲ್ಲ!
ವಿಪ್ರನಾಡಿದ ಮಾತು ಪುಸಿಯಪ್ಪುವಂತೆಸಗಿ
ಚಾಂಡಾಲರಿಂದಾ ತರಳನಂ ಕೊಲ್ಲಿಪೆಂ!
ಅರಸುಗುವರಿಯನೆನ್ನ ಮುದ್ದು ಮಗ ಮದನಂತೆ
ಕೈಹಿಡಿಸಿ ಪಟ್ಟಗಟ್ಟುವೆನವಗೆ. ಕಿಂಕರನು
ಕಟುಕರಿನ್ನೇಕಿನ್ನು ತರಲಿಲ್ಲ. ಕಾಲೊಳಿಹ
ಕಂತಕವ ಕಿತ್ತಹೊರತೆನಗೆ ಸುಖವಿಲ್ಲ.
ಎನ್ನ ಬಾಳಿನ ಶಾಂತಿ ಬಾಲಕನ ಕೊಲೆಯಲ್ಲಿ
ಮಲಗಿಹುದು. [ಮದನ ವಿಷಯೆ ಬರುವರು]

ಮದನ:- ಅಪ್ಪಾ, ಆ ಬಾಲಕನು ಯಾರು?

ವಿಷಯೆ:- ನಮ್ಮ ಜೊತೆಗಾಡುವವರಾರಿಲ್ಲ. ಅವನಿದ್ದ
ರಾಟವಾಡಲು ಆಗುತಿತ್ತಪ್ಪಾ. ಕರೆಸವನ.
ದುಷ್ಟ:- (ಮಗಳನ್ನು ಎತ್ತಿಕೊಂಡು) ಕರೆಸುವೆನು ತಾಳಮ್ಮ ಎನ್ನ ಮುದ್ದಿನ ಗಿಣಿಯೆ.

[ದುಷ್ಟಬುದ್ಧಿಯ ಹೆಂಡತಿ ತಾರಕಾಕ್ಷಿಯು ಬಂದು]

ತಾರ:- ಕರ್ಣನಂ ಮೀರಿಹಳು ದಾನದಲಿ, ವಿಷಯೆ
ಇಂದೊಂದು ರನ್ನದಲರನು ಯಾರಿಗೋ ಕೊಟ್ಟು ಬಂದಿಹಳು!
ವಿಷಯೆ:- ಯಾರಿಗಿಲ್ಲಪ್ಪಾ ಅವನಿಗೇ!
ನೀಕರೆದು ದಾರಿಯಲಿ ಮಾತನಾಡಿದೆಯಲ್ಲಾ
ಅವನಿಗೇ?
ತಾರಾ:- ಮುಂದವನೆ ಗಂಡನಾಗುವನೇನೋ ನಿನಗೆ?
ದುಷ್ಟ:- ಕೇಳಿದೆಯ ತಾರಾ ಪುರೋಹಿತನು
ಪೇಳ್ದುದನು? ಬೀದಿಯಲಿ ಸಂಚರಿಪ ದೇಸಿಗನು
ಮುಂದೆಮ್ಮ ನಾಡಿಗೆ ದೊರಯಪ್ಪನಂತೆ.
ತಾರಾ:- ಸರಿ, ಗಾಲವನ ಮಾತು. ಕಟ್ಟುಕತೆಗಳ ಕಾಲ
ವೆಂದರಿತನೇನವನು?
ದುಷ್ಟ:- ತಪ್ಪುವದೆ ಹೇಳು
ವಿಪ್ರರೆಂದಾಮಾತು. ಗಾಲವನು ಪ್ರಾಕೃತನೆ?
ತಾರಾ:- ಅವನ ಹಣೆಯಲ್ಲಿ ಬರೆದಂತಾದರೇನಮಗೆ?
ದುಷ್ಟ:- ಯೋಚಿಸಾಡುವೆ ಏನು? ಬಹುದೂರವಿಹುದೆನ್ನ
ನೋಟ.ಹೆಂಗಸು ನೀನು! ನಿನಗೇನು ಗೊತ್ತು?
ಈ ಕುಂತಳೇಂದ್ರಂಗೆ ಸುತರಿಲ್ಲ. ನಮ್ಮ ಮಗ
ಮದಂಗೆ ಪಟ್ಟಾಭಿಷೇಕವಂ ಮಾಡಿ
ಅರಗುವರಿಯಂ ತಂದು ಮದುವೆಯಂ ಮಾಡಿ
ಆತನರಸನಾಗಬೇಕೆಂಬಾಸೆ ಎನಗಿಹುದು
ನನ್ನ ನಿನ್ನೊಳಗಿರಲಿ ಬಯಲಾಗದಿರಲಿ ಇದು.
ಅದಕೆ ಬೇಕಾದೆಲ್ಲ ಯತ್ನಗಳ ನೆಸಗುವೆನು.
ನರಕವಾದರು ಸರಿಯೆ ಈಜುವೆನು ಪೂಣ್ಕಿಯಿದು!
ಹಿಂದಿನಿಂದೆಲ್ಲವನು ನಿನಗೊರೆವೆ. ಮಕ್ಕಳನು

ಕರೆದುಕೊಂಡೀಗ ನೀಹೊರಡು. ಗುಟ್ಟಾದ
ಕಜ್ಜವಿಹುದೆನಗೆ. [ಮಾತನಾಡದೆ ಅವರು ಹೊರಡುವರು]
ನೆತ್ತರಿಗೆ ಹಸಿದಿಹೆನು
ಬಾಲನಾದೊಡೆ ಏನು? ಚೇಳು ಮರಿಯಾದೊದೇಂ?
ಆಳ್ಕರಿಂದಪ್ಪಿದೊಡೆ ಕಚ್ಚದೇ? ಹುಲಿ ಹಸುಳೆ ಎಂದು
ಹಾಲೂಡಿ ಸಾಕಿದರೆ ವಿಶ್ವಾಸಿಯಾಗುವುದೆ?
ಬೆಳೆವ ಮುಳ್ಳನು ಮೊಳೆಯುವಾಗಲೇ ಮುರಿಯುವುದು
ಮತಿವಂತರಿಗೆ ಲೇಸು! [ಕಾಕರನು ಮೂವರು ಚಾಂಡಾಲರನ್ನು
ಕರೆದುಕೊಂಡು ಬರುವನು]
ಏಕಿಷ್ಟು ಹೊತ್ತಾಯ್ತು!
ನಿಮ್ಮ ಮೈ ಕೈಗಲಲಿ ನೆತ್ತರಿನ ಕಲೆಯೇನು?
ಭೀಷಣ:- ಸೆರೆಹಿಡಿದ ಬೇಹುಗಾರನೀಗಲೇ ಕೊಂದು
ಬಂದಿಹೆವು. ಕೈ ತೊಳೆಯಲೂ ಕೂಡ ಸಮಯ
ಸಿಗಲಿಲ್ಲ. ಮುಂದೇನು ತಮ್ಮಾಜ್ಞೆ?
ದುಷ್ಟ:- (ಕಿಂಕರನಿಗೆ) ಕಿಂಕರಾ
ಆಚೆನಡೆ. (ಅವನು ಹೋಗುವನು) ಭೀಷಣಾ ಬಳಿಗೆ ಬಾ
ಇಂದೊಂದು ಕೊಲೆಯಾಗಬೇಕು. ಆಯಾಸದ ಕೊಲೆಯಲ್ಲ,
ಬಲಿಯ ಮಿಗವಾಗುವನು ಬಾಲಕನು.
ಭೀಷಣ:- ಅದಕೇನು ಮಾಸಾಮಿ. ಬೆಸಸಿದೆಡೆ ಕಾರ್ಯ ಕೈಗೂಡಿದಂತೆ.
ಯಾರವನು? ಎಲ್ಲಿಹನು?
ದುಷ್ಟ:- ತಂದೆತಾಯಿಲ್ಲದೇ ಬೀದಿಗಳಲಲೆಯುತಿಹ ದೇಸಿಗನು.
ಭೀಷಣ:- ಯಾವ ಅಪರಧ?
ದುಷ್ಟ:- ನಿನಗೇಕೆ ಆ ಚಿಂತೆ, ಸೇವಕರು ಬೇಕು
ಬೇಡನ್ನದೆ ಕಾರ್ಯಕನುವಾಗಬೇಕು.
"ಹೇಳುವುದಕವರಲ್ಲ! ಕೇಳುವುದಕವರಲ್ಲ;
ಮಾಡಿ ಮಡಿವುದಕವರು!" ತಿಳಿಯಿತೇ ಭೀಷಣ;
ಭೀಷಣ:- ತಪ್ಪಾಯ್ತು ನನ್ನೊಡೆಯ.
ದುಷ್ಟ:- ಈ‌ಪುರದ ಬೀದಿಯೊಂದೊಳೋರ್ವ ಮುದುಕಿಯ ಕೂಡಿ
ವಾಸಿಸುವನೋರ್ವ ತೇಜಸ್ವಿಯಾಗಿಹ ತರಳಂ
ಹೊಸಬರವರಲ್ಲಿಗೈತಂದು ಬಹು ಕಾಲವಾಗಿಲ್ಲ. ನೀವವರ ನೆಲೆಯರಿತು ಮುದುಕಿಯಂ
ಕೊಂದೆಲ್ಲೆ ಕಾನನಾಂತರದೊಳಾತರಳನಂ ಸಂಹರಿಸಿ ಕುರುಪು ತಂದೆನಗೆ
ತೋರುವುದು ಯಾರರಿಯದಂತೆ;
ಭೀಷಣ:- ಕುಂದಲ್ಲದಂತೆ ಕೊಲೆ ಮಾಡುವೆವು
ದುಷ್ಟ:- ತರಳನಂದವಕಂಡು ಎದೆಗರಗಬೇಡಿ.
ಭೀಷಣ:- ಎದೆಗರಗುವುದೆ? ಮರುಗಕವೆಂಬುದನರಿಯೆ.
ದುಷ್ಟ:- ರೋದನಕೆ ಮರುಳಾಗಬೇಡಿ.
ಭೀಷಣ:- ರೋದನವ ಕೇಳಿಕೇಳೆಮ್ಮ ಕರ್ಣಗಳು ಕಿವುಡಾಗಿ ಹೋಗಿಹವು; [ಕಟುಕರು ಹೋಗುವರು]
ದುಷ್ಟ:- ನೆತ್ತರಿನ ಕಡಲಲ್ಲಿ ಅರೆವಾಸಿಜಿಹೆನು, ಹಿಂಜರಿವುದೇಕಿನ್ನು. ತೀರವನು
ಸೇರುವೆನು. ಇಲ್ಲವಾದರೆ ನಡುವೆ ಮುಳುಗುವೆನು!

(ಪರದೆ ಬೀಳುವುದು)