~ ಮುನ್ನುಡಿ

~ ಮುನ್ನುಡಿ

ಮುನ್ನುಡಿ

'ಕವಿಚೂತವನ ಚೈತ್ರ'ನಾದ ಲಕ್ಷ್ಮೀಶನು ಅಶ್ವಮೇಧಯಾಗವೇ ಮುಖ್ಯ ಕಥೆಯಾಗಿರುವ ತನ್ನ 'ಜೈಮಿನಿ ಭಾರತ'ದಲ್ಲಿ ನಡುನಡುವೆ ಕೆಲವು ರಸಪೂರ್ಣವಾಗಿರುವ ಉಪಕಥೆಗಳನ್ನ್ ಸುಮನೋಹರವಾಗಿ ನೆಯ್ದಿದಾನೆ. ಅವುಗಳಲ್ಲಿ ಚಂದ್ರಹಾಸನ ಕಥೆಯೂ ಒಂದು. ಮರಳಿ ಮರಳಿ ಓದಿ ಸುಖಾನುಭವವನ್ನು ಹೊಂದಿದ ನನಗೆ ಅದನ್ನು 'ದೃಶ್ಯರೂಪದಲ್ಲಿ ಬರೆದರೆ ಚೆನ್ನಾಗಬಹುದೋ ಏನೋ? ನೋಡೋಣ' ಎಂಬ 'ಹುಚ್ಚು' ಹಿಡಿಯಿತು. ಆ ಹುಚ್ಚಿನ ಪ್ರತಿಫಲವೇ ಈ "ಚಂದ್ರಹಾಸ" ನಾಟಕವು.

ಕಥೆಯನ್ನು ದೃಶ್ಯರೂಪಕ್ಕೆ ತಿರುಗಿಸುವಾಗ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಿದರೆ ರೂಪಕಕ್ಕೆ ರಸಪುಷ್ಟಿ ದೊರಕಬಹುದು ಎಂದು ನನಗೆ ತೋರಿತು. ಅದರಂತೆ, ಮಸ್ತುವಿನಲ್ಲಿ ಹಲ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿರುವೆನು. ಲಕ್ಷ್ಮೀಶ ಕವಿಯ ಸುಂದರ ಮಂಜುಳ ಶೈಲಿಯು ನನ್ನ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದಂತೆ ಇದ್ದುದರಿಂದ ನಾಟಕವನ್ನು ಬರೆಯುವಾಗ ಕವಿವರ್ಯನ ಪದ ಪದ್ಯಭಾಗಗಳನ್ನು ಅಲ್ಲಲ್ಲಿ ಉಚಿತ ತೋರಿದಂತೆ ಅನಿವಾರ್ಯವಾಗಿ ಉಪಯೋಗಿಸಿಕೊಂಡಿದ್ದೇನೆ. 'ಜೈಮಿನಿ ಭಾರತ'ವನ್ನು ಪ್ರೀತಿಸುವ ಕನ್ನಡಿಗರಿಗೆ ಈ ನಾಟಕವು ಒಂದಿನಿತಾದರೂ ಸಂತೋಷದಾಯಕವಾದರೆ ನನ್ನ ಅಲ್ಪ ಪ್ರಯತ್ನಕ್ಕೆ ಮಹಾಫಲವು ಲಭಿಸಿತೆಂದು ತಿಳಿದು ವಿನೀತನಾಗುವೆನು.

ಕೆ ವಿ ಪುಟ್ಟಪ್ಪ.
ಶ್ರೀ ರಾಮಕೃಷ್ಣಾಶ್ರಮ,
ಮೈಸೂರು,
೧೧ನೆ ನವೆಂಬರು ೧೯೨೯