೧೦. ಶೇಕ್‍ಸ್ಪಿಯರ್ ‌ನ ಪುನರುಥ್ಥಾನ.

೧೦. ಶೇಕ್‍ಸ್ಪಿಯರ್ ‌ನ ಪುನರುಥ್ಥಾನ.

ಸಂತೆಯಲ್ಲಿ ಜನಗಳಿಗೆ ಟೋಪಿ ಹಾಕಿದ ಮಾರನೇ ದಿನ ರಾಜನೂ, ಪಾಳೇಗಾರನೂ ಎದ್ದಿದ್ದು, ಹೊತ್ತು ಮೂರು ಮಾರು ಏರಿದ ಮೇಲೆಯೇ. ಏಕೆಂದರೆ ಹಿಂದಿನ ರಾತ್ರಿ ಅವರು ಹೊಟ್ಟೆ ತುಂಬಾ ಗುಂಡು ತುಂಬಿಕೊಂಡು ತಮ್ಮ ಚೋರವಿಜಯವನ್ನಾಚರಿಸಿದ್ದರು. ನದಿಯಲ್ಲಿ ಒಂದೆರಡು ಸುತ್ತು ಈಜಿದ ನಂತರವೇ ಅವರ ಪ್ರಙ್ಞೆ ಮರಳಿ ಬಂದಿದ್ದು. ತಿಂಡಿ ತಿಂದು ಹೊಳೆಯಲ್ಲಿ ಕಾಲಾಡಿಸುತ್ತಾ ತೆಪ್ಪದಲ್ಲಿ ಹೊರಟ ಅವರ ತಲೆಗಳಲ್ಲಿ ಹೊಸ ಹೊಸ ಹಣ ಸಂಪಾದಿಸುವ ಯೋಚನೆಗಳೊ-ಯೋಜನೆಗಳೂ ಮೂಡಲಾರಂಭಿಸಿದವು. ಮುಂದಿನ ಪಟ್ಟಣದಲ್ಲಿ ಏನು ಮಾಡಬೇಕೆಂಬ ನಿಸಿತ ಆಲೋಚನೆಯಲ್ಲಿ ಅವರಿಗೆ ಹೊಳೆದದ್ದು "ನಾಟಕ ಪ್ರದರ್ಶನ" ಏರ್ಪಡಿಸಬೇಕೆಂದು......!

ನಾಟಕ ಪ್ರದರ್ಶನ ಅಂದುಕೊಂಡಷ್ಟು ಸುಲಭವಲ್ಲ. ಅವರಾದರೋ ಇಬ್ಬರೇ.. ನಾನೂ ಜಿಮ್ ಈ ಕ್ಷೇತ್ರದಲ್ಲಿ ಅನುಭವವಿಲ್ಲದವರು. ನಮಗೆ ಜನ ಜಂಗುಳಿಯ ಮುಂದೆ ಹೋಗಲೇ ಇರಾದೆ ಇರಲಿಲ್ಲ. ಇಬ್ಬರ್‍ಏ ನಾಟಕದ ಎಲ್ಲಾ ಪಾತ್ರಗಳನ್ನೂ ಮಾಡಿ ಯಶಸ್ಸು ಗಳಿಸುವುದು ಸಾಧ್ಯವೇ? ಅದಕ್ಕೇ ಅವರು ಎರಡು ನಾಟಕಗಳ ಎರಡು ದೃಶ್ಯಗಳ್ನ್ನು ಅಭಿನಯಿಸಲು ನಿಶ್ಚಯಿಸಿದರು.

ನಾಟಕಗಳಾವುವು ಗೊತ್ತೆ...????

ಶೇಕ್ಸ್‍ಪಿಯರ್‍ನ ರೋಮಿಯೋ ಮತ್ತು ಜೂಲಿಯೆಟ್
ಹಾಗೂ ಮುಮ್ಮಡಿ ರಿಚರ್ಡ್

ಆ ಕಲೆಯಲ್ಲಿ ನಮ್ಮ ಪಾಳೇಗಾರನಿಗೆ ಪರಿಶ್ರಮವಿದ್ದಂತೆ ಕಾಣುತ್ತದೆ. ಅವನೇ ರಾಜನಿಗೂ ಅಭಿನಯ ಪಾಠ ಪ್ರಾರಂಭಿಸಿದ್ದ. ಮೊದಲು ತಮ್ಮ ತಮ್ಮ ಸಂಭಾಷಣೆಯನ್ನು ಉರು ಹೊಡೆಯುವುದು. ಆಮೇಲೆ ಅವಕ್ಕೆ ಶಬ್ದ ಸಿಂಗಾರ ಅಮ್ದರೆ ಭಾವನೆಗಳ ರೂಪವನ್ನು ಧ್ವನಿಯ ಏರಿಳಿತಗಳಿಂದ ನೀಡುವುದು. ಆ ಬೆಳಿಗ್ಗೆಯೆಲ್ಲಾ "ರೋಮಿಯೋ ಮತ್ತು ಜೂಲಿಯೆಟ್"ನ ಅಭ್ಯಾಸದಲ್ಲೇ ಕಳೆಯಿತು. ಅವರ ಅಭ್ಯಾಸದ ಮುಶ್ಯಾಂಶಗಳು.

ಪಾಳೇಗಾರ - "ಹೇ, ಹಾಗೆ ರೋಮಿಯೋ ಅಂತ ಕಿರುಚಬೇಡ. ಒಳ್ಳೆ ಗೂಳಿ ಕೂಗಿದ ಹಾಗೆ ಕೂಗ್ತೀಯಲ್ಲಾ.."
ರಾಜ - "ರೋಮಿಯೋ"
ಪಾಳೇಗಾರ - "ಅಯ್ಯೋ.. ಕತ್ತೆ ಕೂಗಿದ ಹಾಗಲ್ಲ, ಮೆತ್ತಗೆ ಅಂದ್ರೆ, ಜೂಲಿಯೆಟ್ ಹೆಂಗಸು, ಅವಳು ತನ್ನ ಪ್ರಿಯತಮನ್ನ ಕತ್ತೆ ಕೂಗಿದ ಹಾಗೆ ಕೂಗೊಲ್ಲ. ದನಿಯಲ್ಲಿ ಮಾಧುರ್ಯ ಬರಲಿ.

ಹೀಗೇ ಇನ್ನೂ ಏನೇನೊ.

ಈ ನಾಟಕದ ಅಭ್ಯಾಸದ ನಂತರ, ಮುಮ್ಮಡಿ ರಿಚರ್ಡ್‍ನ ಕತ್ತಿ ವರಸೆಯ ಅಭ್ಯಾಸ...! ಉದ್ದುದ್ದ ಕೊಂಬೆಗಳೇ ಅವರ ಕತ್ತಿಗಳು. ಪಾಳೇಗಾರನೇ ಮುಮ್ಮಡಿ ರಿಚರ್ಡ್. ಅವರ ಅಭ್ಯಾಸದ ಜಿಗಿತ ಕುಣಿತಗಳು, ತೆಪ್ಪದುದ್ದಕ್ಕೂ ಬಹುಹೊತ್ತಿನವರೆಗೆ ನಡೆದವು. ಕಡೆಗೊಮ್ಮೆ ರಾಜ ತೆಪ್ಪದಿಂದುರುಳಿ ಬೀಳುವವರೆಗೂ. ಆಮೇಲೆ ಅವರ ವಿದ್ಯಾಭ್ಯಾಸಕ್ಕೂ ಸ್ವಲ್ಪ ವಿಶ್ರಂತಿ ದೊರೆಯಿತು.

ಇದು ಒಂದೆರಡು ದಿನ ನಡೆಯಿತು. ಅಷ್ಟು ಹೊತ್ತಿಗೆ ಅವರು ಖಡ್ಗಕಲಿಗಳೇ ಆಗಿಬಿಟ್ಟಿದ್ದರು. ಅಷ್ಟರಲ್ಲೇ ನಮ್ಮ ದಾರಿಯಲ್ಲೊಂದು ಚಿಕ್ಕಪಟ್ಟಣವೂ ಬಂದಿತು. "ಅಯ್ಯೋ ಈ ಚಿಕ್ಕ ಊರಿನಲ್ಲಿ ನಮ್ಮಂಥವರು ನಾಟಕ ಮಾಡುವುದೇ? ಮೂರುಕಾಸಿನ ಸಂಪಾದನೆ ಆಗುವುದಿಲ್ಲ" ಎಂದುಬಿಟ್ಟನು ರಾಜ. ಪಾಳೇಗಾರನೂ ಈ ಮಾತನ್ನು ಒಪ್ಪಿಕೊಂಡನು.

ಮತ್ತೆ ಹಲವು ದಿನಗಳಲ್ಲೊಂದು ದೊಡ್ಡ ಪಟ್ಟಣ ಸಿಕ್ಕಿತು. ಅಲೊಂದು ಸರ್ಕಸ್ ಕೂಡಾ ನಡೆಯುತ್ತಿತ್ತು. ಅದನ್ನು ಕಂಡು ಆ ಊರು ತಮ್ಮ ಕಲಾಪ್ರದರ್ಶನಕ್ಕೆ ಸೂಕ್ತವೆಂದು ನಿರ್ಧರಿಸಿದರು. ಆಗಲೇ ನನಗೆ ಪಾಳೇಗಾರನ ಮುಂದಾಲೋಚನೆಯ ಬಗೆಗೆ ತಿಳಿದುಬಂದುದು. ಅವನು ಹಿಂದಿನ ಊರಿನಲ್ಲಿ ಮುದ್ರಕನ ಬಳಿ ಕೆಲಸ ಮಾಡಿದಾಗಲೇ ಕರಪತ್ರ ಮುದ್ರಿಸಿಕೊಂಡು ಬಂದಿದ್ದ. ಅದರಲ್ಲಿ ಹೀಗಿತ್ತು.

ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ
ಬಂದಿದ್ದಾನೆ ಶೇಕ್ಸ್‍ಪಿಯರ್ ನಿಮ್ಮೊರಿಗೆ
ಒಂದೇ ರಾತ್ರಿಗೆ.

ಜಗತ್‍ಪ್ರಸಿದ್ಧ ಕಲಾವಿದರಾದ
ನಟಭಯಂಕರ ಡೇವಿಡ್ ಗ್ಯಾರಿಕ್ ಮತ್ತು
ನಟಲೋಚನ ಎಡ್ಮಂಡ್ ಕೀನ್ ನಿಮಗಾಗಿ ಅಭಿನಯಿಸಲಿದ್ದಾರೆ.

ರೋಮಿಯೋ ಮತ್ತು ಜೂಲಿಯೆಟ್ (ಉಪ್ಪರಿಗೆಯ ದೃಶ್ಯ)

ಹೊಸ ಸೀನರಿ, ಹೊಸ ಪೋಷಾಕು, ಇಡೀ ತಂಡದ ಮನ ಮುಟ್ಟುವ ಅಭಿನಯ

ಜೊತೆಗೆ,

ಮೈನವಿರೇಳಿಸುವ, ರೋಮಾಂಚಕ
ಕತ್ತಿವರಸೆ ಪ್ರದರ್ಶನ
"ಮುಮ್ಮಡಿ ರಿಚರ್ಡ್"ನಿಂದ

ಇದರ ಜೊತೆಗೆ ಇನ್ನೂ ಹಲವು ಕರಪತ್ರಗಳಿದ್ದವು. ಅದರಲ್ಲಿ ಅವರಿಬ್ಬರ ಅಭಿನಯ ಸಾಮರ್ಥ್ಯವನ್ನು ಹೊಗಳಿ ಬರೆದಿತ್ತು. ಒಂದರಲ್ಲಂತೂ ಈ ನಾಟಕ ಪ್ಯಾರಿಸ್ಸಿನಲ್ಲಿ ಮುನ್ನೂರು ಪ್ರದರ್ಶನ ಕಂಡಿದೆಯೆಂದು ಸಾರುತ್ತಿತ್ತು.

ಆ ದಿನ ಹಗಲಿನಲ್ಲಿ ಆ ಊರಿನ ಸುತ್ತಾಟ. ಆ ಸುತ್ತಾಟ ನಾಟಕ ಪ್ರದರ್ಶನಕ್ಕಾಗೆ ರಂಗ ಮಂದಿರವನ್ನು ಗೊತ್ತು ಮಾಡಿ, ಉಳಿದ ಅವಧಿಯಲ್ಲಿ ಊರಿನಲ್ಲೆಲ್ಲಾ ಕರಪತ್ರಗಳನ್ನು ಹಂಚುವುದರಲ್ಲಿಯೇ ಕಳೆಯಿತು. ಆದರೆ ಆ ರಾತ್ರಿಯ ಪ್ರದರ್ಶನಕ್ಕೆ ಬಂದಿದ್ದವರು ಹನ್ನೆರಡು ಜನ. !!! ಪ್ರದರ್ಶನದಲ್ಲೆಲ್ಲಾ ಅವರ ನಗೆಯೇ ತುಂಬಿತ್ತು. ನಿರ್ದೇಶಕ ಮತ್ತು ನಾಯಕನಾದ ಪಾಳೇಗಾರನಿಗೆ ಅದನ್ನು ಕಂಡು ವಿಪರೀತ ಕೋಪ ಬಂತು. ಬಂದರೇನು? ನಾಟಕ ಮುಗಿಯುವ ಮುಂಚೆಯೇ ಹನ್ನೊಂದು ಜನ ಪ್ರೇಕ್ಷಕರು ಜಾಗ ಕಾಲಿ ಮಾಡಿದರು. ಇನ್ನೊಬ್ಬ, ಇನ್ನೂ ಹುಡುಗ ಗಾಢ ನಿದ್ರೆಯಲ್ಲಿದ್ದ. "ಈ ಮಂದಮತಿಗಳಿಗೆಲ್ಲಿಂದ ಬರಬೇಕು, ಶೇಕ್ಸ್‍ಪಿಯರ್‌ನ ನಾಟಕ ನೋಡುವ ಸಂಸ್ಕಾರ. ಇವರಿಗೇನಿದ್ದರೂ ಕೀಳುಮಟ್ಟದ ಹಾಸ್ಯವೇ ಸರಿ" ಎಂದು ಗೊಣಗಿದ ಪಾಳೇಗಾರ. ರಾಜನೂ ಅವನ ಮಾತಿಗೆ ತಲೆಯಾಡಿಸಿದ. ಮಾರನೇ ದಿನ ಹೊಸ ಭಿತ್ತಿಪತ್ರಗಳು ತಯಾರಾಗಿದ್ದವು.

ಕೋರ್ಟ್‍ಹೌಸ್‍ನಲ್ಲಿ
ಮೂರೇ ರಾತ್ರಿಗಳು ಮಾತ್ರ.

ಜಗತ್‍ಪ್ರಸಿದ್ಧ ನವರಸಾಧೀಶರಾದ
ಡೇವಿಡ್ ಗೆರಿಕ್
ಮತ್ತು
ಎಡ್ಮಂಡ್ ಕೀನ್ ಇವರಿಂದ
ಮನಮೋಹಕ ದುಃಖಾಂತ ನಾಟಕ
ರಾಜಗದ್ದುಗೆ ರಹಸ್ಯ
ಅಥವಾ
ರಾಜಾ ಶೂನ್ಯಸೇನ
ಹೆಂಗಸರು ಮತ್ತು ಮಕ್ಕಳಿಗೆ ಪ್ರವೇಶ ನಿಷಿದ್ದ.

ಕಡೆಯ ಸಾಲನ್ನು ಎಲ್ಲಕ್ಕಿಂತಲೂ ದೊಡ್ಡದಾಗಿ ಬರೆದ ಪಾಳೇಗಾರ "ಈ ಸಾಲಿಗೂ ಜನ ಬರದಿದ್ದ್ರೆ, ಅವರು ಮನುಷ್ಯರೇ ಅಲ್ಲ" ಎಂದು ನಿರ್ಧಾರ ಮಾಡಿದ.

ಅಂದು ಅವರಿಬ್ಬರೂ ತುಂಬಾ ಕೆಲಸ ಮಾಡಿದರು. ಏದಿಕೆ ನಿರ್ಮಾಣ, ರಂಗಸಜ್ಜಿಕೆ, ಪ್ರೇಕ್ಷಕರಿಗಾಗಿ ಮೇಣದ ಬತ್ತಿಗಳ ದಾರಿದೀಪ. ಒಟ್ಟಿನಲ್ಲಿ ಅಂದು ರಂಗಮಂದಿರ ಭರ್ತಿಯಾಗಿತ್ತು. ಸಂಪೂರ್ಣ ಭರ್ತಿಯಾದ ಮೇಲೆ, ಪಾಳೇಗಾರ ಟಿಕೆಟ್ ಕೊಡುವುದನ್ನು ನಿಲ್ಲಿಸಿ ಹಿಂಬಾಗಿಲಿನಿಂದ ರಂಗ ಪ್ರವೇಶಿಸಿ ವೇದಿಕೆಯನ್ನೇರಿದ. ಪುಟ್ಟ ಭಾಷಣವನ್ನೇ ಆರಂಭಿಸಿದ. ತಾವಾಡಲಿರುವ ನಾಟಕದ ಬಗ್ಗೆ"ಪ್ರಪಂಚದ ಅತ್ಯಂತ ರಸಪೂರ್ಣ ದುರಂತ ನಾಟಕ" ಎಂದೂ ಇನ್ನೂ ಏನೇನೋ ಹೇಳಿದ. ಅವನ ಭಾಷಣದಿಂದ ಜನಸ್ತೋಮ್ವು ಉದ್ವಿಗ್ನಗೊಂಡು, ನಾಟಕ ದರ್ಶನಕ್ಕಾಗಿ ಕಾತರತೆಯನ್ನು ವ್ಯಕ್ತಪಡಿಸುತ್ತಿರುವಾಗಲೇ ಪಾಳೇಗಾರ ಹಿಂದೆ ಸರಿದು ಅಂಕದ ಪರದೆ ಮೇಲೆದ್ದಿತು.

ಮೊದಲನೇ ದೃಶ್ಯದಲ್ಲೇ ರಾಜ ಮೈತುಂಬಾ ಪಟ್ಟೆ-ಪಟ್ಟೆಯಾಗಿ ವಿವಿಧ ಬಣ್ಣಗಳನ್ನು ಬಳಿದುಕೊಂಡು ಕುಪ್ಪಳಿಸುತ್ತಾ ಬಂದ. ಕಾಮನಬಿಲ್ಲಿನ ಬಣ್ಣಗಳೆಲ್ಲಾ ಅವನ ಮೈಮೇಲಿತ್ತು. ನಾಲ್ಕು ಕಾಲುಗಳ ಮೇಲೆ ಬಂದ ಅವನನು ನೋಡುವುದು ತಮಾಶೆಯಾಗಿದ್ದಿತು. ಅದಕ್ಕೆ ಇನ್ನೂ ಹೆಚ್ಚಿನ ಪರಿಣಾಮ ನೀಡಿದ್ದಿದು ಅವನ ಉಡುಗೆ. ಅವನು ಉಡುಗೆಯನ್ನೇ ತೊಟ್ಟಿರಲಿಲ್ಲ.

ಹಾಗೇ ಅವನು ಒಂದಷ್ಟು ಕುಣಿದು ಹಿಂದೆ ಸರಿದಾಗ ಜನ ಬಿದ್ದೂ ಬಿದ್ದೂ ನಗುತ್ತಿದ್ದರು. "ಒನ್ಸ್ ಮೋರ್" ಬೇಡಿಕೆಯೂ ಬಂತು. ಅವರ ಬೇಡಿಕೆಯನ್ನು ವಿನಮ್ರವಾಗಿ ಪೂರೈಸಲಾಯಿತು. ಅಷ್ಟಕ್ಕೇ ನಿಲ್ಲದೆ ಮೂರನೆಯ ಬಾರಿಯೂ ಈ ಪ್ರದರ್ಶನ ನಡೆಯಿತು. ಆನಂತರ......

ಅಂಕದ ಪರದೆ ಬಿದ್ದಿತು.! ಪಾಳೇಗಾರ ಮತ್ತೆ ವೇದಿಕೆ ಹತ್ತಿ, ಸಭಿಕರಿಗೆ ವಂದಿಸಿ, ಅಲ್ಲಿಗೆ ಅಂದಿನ ಪ್ರದರ್ಶನ ಮುಕ್ತಾಯವೆಂದೂ, ತಾವು ಲಂಡನ್ ನಗರದಲ್ಲಿ ಪ್ರದರ್ಶನ ನೀಡಬೇಕಾಗಿರುವುದರಿಂದ ಇನ್ನು ಎರಡು ಪ್ರದರ್ಶನಗಳನ್ನು ಮಾತ ಆ ಊರಿನಲ್ಲಿ ನಡೆಸುವುದಾಗಿಯೂ ತಿಳಿಸಿದ. ಅವನು ಹಿಂದೆ ಸರಿದು ವೇದಿಕೆಯಿಂದಿಳಿಯಬೇಕಾದರೆ ಸಭಿಕರ ಮಧ್ಯೆಯಿಂದ ಧ್ವನಿಯೊಂದು "ನಾಟಕ ಮುಗಿದುಹೋಯ್ತಾ?" ಎಂದು ಕೇಳಿತು.
"ಸಭಿಕರೇ ಇಲ್ಲಿಗೆ ಈ ಪ್ರದರ್ಶನ ಮುಕ್ತಾಯ"
"ಹೋ .. ಮೋಸ " ಎಲ್ಲ ಸಭಿಕರೂ ಒಮ್ಮೆಲೇ ಮೇಲೆದ್ದು ಕೂಗಿದರು. ಅವರಲ್ಲಿ ಕೆಲವರು ವೇದಿಕೆಯ ಮೇಲೆ ಬರಲೂ ಪ್ರಯತ್ನಿಸಿದರು. ಆಗ ಅವರಲ್ಲೇ ಒಬ್ಬ ಯುವಕ ಬೆಂಚೊಂದರ ಮೇಲೆ ಹತ್ತಿ "ಒಂದು ನಿಮಿಷ ಮಹಾಜನಗಳೇ" ಎಂದು ಕೂಗಿದ.
"ನಾವಿಂದು ಮೂರ್ಖರಾದೆವು. ನಿಜ ಆದರೆ ಈಗ ಗಲಾಟೆ ಮಾಡಿದರೆ ನಾವು ಮೂರ್ಖರಾದದ್ದು ಎಲ್ಲರಿಗೂ ತಿಳಿಯುತ್ತದೆ. ಆಗ ಇದಕ್ಕಿಂತಲೂ ದೊಡ್ಡ ಮೂರ್ಖರಾಗುತ್ತೇವೆ. ಆದ್ದರಿಂದ ಏನೂ ಮಾಡದೆ ಇಲ್ಲಿಂದ ಹೊರಟು ಹೋಗೋಣ. ಈ ನಾಟಕ ನಿಜಕ್ಕೂ ಚೆನ್ನಾಗಿಯೇ ಇದೆಯೆಂದು ಎಲ್ಲರಿಗೂ ಹೇಳೋಣ. ಬೇರೆಯವರೂ ಈ ನಾಟಕ ನೋಡಲು ಬಂದು ಆರೂ ಮೂರ್ಖರಾದರೆ, ನಮ್ಮ ಮನಸ್ಸುಗಳಿಗೂ ಸ್ವಲ್ಪ ನಿರಾಳವಾಗುತ್ತದಲ್ಲವೇ?"
ಎಲ್ಲರಿಗೂ ಈ ಯೋಚನೆ ಹಿಡಿಸಿತೆಂದು ಕಾಣುತ್ತದೆ. ಎಲ್ಲರೂ ಮೌನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿದರು. ಮರುದಿನ ಊರಲ್ಲೆಲ್ಲಾ ಈ ನಾಟಕದ್ದೇ ಸುದ್ದಿ ತುಂಬಾ ಚೆನ್ನಾಗಿತ್ತೆಂದು.!!

ಆ ರಾತ್ರಿಯ ಪ್ರದರ್ಶನಕ್ಕೂ ಸಾಕಷ್ಟು ಜನ ಸೇರಿದ್ದರು. ಪ್ರದರ್ಶನ ಮುಗಿದ ನಂತರ ನಾವು ತೆಪ್ಪಕ್ಕೆ ಹಿಂದಿರುಗಿ ಊಟ ಮಾಡಿದೆವು. ಆ ಮೇಲೆ ಅವರಿಬ್ಬರೂ ಜಿಮ್‍ಗೆ ನಾವು ಲಂಗರು ಹಾಕಿದ ಜಾಗದಿಂದ ತೆಪ್ಪವನ್ನು ತೆಗೆಸಿ, ನದಿಯಲ್ಲಿ ಎರಡು ಮೈಲುಗಳಷ್ಟು ದೂರದವರೆಗೂ, ಹೋಗಿ ಅಲ್ಲಿ ಲಂಗರು ಹಾಕಿಸಿದರು.

ಮೂರನೆಯ ಪ್ರದರ್ಶನಕ್ಕೂ ಜನಸ್ತೋಮ ಕಿಕ್ಕಿರಿದಿತ್ತು. ಆದರೆ ಮೊದಲ ಎರಡು ಪ್ರದರ್ಶನಕ್ಕೆ ಬಂದಿರುವವರೇ ಮೂರನೇ ಪ್ರದರ್ಶನಕ್ಕೂ ಬಂದಿರುವುದನ್ನು ನಾನು ಗಮನಿಸಿದೆ. ಅವರ ಮುಖದಲ್ಲಿ ಬಿಗುಮಾನವಿತ್ತು. ವಾತಾವರಣದಲ್ಲಿ ಕೊಳೆತ ಮೊಟ್ಟೆಗಳ, ಹಳಸಿದ ತರಕಾರಿಗಳ ವಾಸನೆ ತೇಲಿಬರುತ್ತಿತ್ತು. ಪಾಳೇಗಾರ ಬಾಗಿಲಿನಲ್ಲಿ ಏನೂ ಆಗದವನಂತೆ ಟಿಕೇಟು ಕೊಡುತ್ತಲೇ ಇದ್ದ. ಜನರೆಲ್ಲಾ ಒಳಹೊಕ್ಕ ಮೇಲೆ ಯಾರನ್ನೋ ಕರೆದು " ಒಂದು ನಿಮಿಷ ಈ ಗೇಟು ನೋಡಿಕೋ" ಎಂದ. ಆಮೇಲೆ ನಿಧಾನವಾಗಿ ರಂಗದ ಹಿಂಬದಿಗೆ ಬಂದ. ನಾನೂ ಅವನನ್ನು ಹಿಂಬಾಲಿಸಿದೆ. ಸ್ವಲ್ಪ ಕತ್ತೆಲೆಯೆಡೆಗೆ ಬಂದ ಕೂಡಲೇ ಅವನು ನನಗೆ "ಹಕ್, ಊರು ಬಿಡುವ ತನಕ ನಿನಗೆಷ್ಟು ಸಾಧ್ಯವೋ ಅಷ್ಟು ವೇಗವಾಗಿ ನಡಿ. ಆಮೇಲೆ ನಮ್ಮ ತೆಪ್ಪದವರೆಗೂ ಎಲ್ಲಿಯೂ ನಿಲ್ಲದೆ ಓಡು. " ಎಂದ.

ನಾವು ತೆಪ್ಪ ತಲುಪಿ ನದಿಯಲ್ಲಿ ತೇಲಲುಪಕ್ರಮಿಸಿದ ಮೇಲೆಯೇ ನನಗೆ ಬೇರೆ ಯೋಚನೆಗಳು ಬಂದದ್ದು. ರಾಜನಿಗೆ ಅಲ್ಲಿ ಬಹಳ ಕಷ್ಟವಾಗಿರಬೇಕು ಎನಿಸಿತು. ಅಷ್ಟರಲ್ಲೇ ತೆಪ್ಪದ ಗುಡಿಸಲೊಳಗಿಂದ ತೆವಳಿ ಬಂದ ರಾಜ "ಹೇಗಿತ್ತು ಈ ದಿನ..?" ಎಂದ. ಈ ಕಂತ್ರಿ ಆವತ್ತು ತೆಪ್ಪವನ್ನೇ ಬಿಟ್ಟಿರಲಿಲ್ಲ. ...!!!
ಹತ್ತು ಮೈಲುಗಳವರೆಗೂ ದೀಪ ಕೂಡಾ ಹಚ್ಚಲಿಲ್ಲ. ಆಮೇಲೆ ದೀಪ ಹಚ್ಚಿ ಉಂಡೆವು. ಅವರಿಬ್ಬರಿಗೂ ನಗು ತಡೆಯಲಾಗಿರಲಿಲ್ಲ. "ಹ್ಹ.. ನನಗ್ಗೊತ್ತಿತ್ತು. ಇವತ್ತು ಅವರು ಹೀಗೇ ಮಾಡ್ತಾರೇಂತ, ಈಗೇನು ಮಾಡ್ತಿರ್‍ತಾರೋ..?"
"ಹೂ ಬೇಕಂದ್ರೆ ಅಷ್ಟೊಂದು ಮೊಟ್ಟೆ, ತರಕಾರಿ ತಗೊಂಡು ಹೋಗಿದಾರಲ್ಲ, ಆಮ್ಲೆಟ್ ಮಾಡ್ಕೊಂಡು ಪಿಕ್‍ನಿಕ್ ಮಾಡ್ಕೊಳ್ಳಲಿ"
ಹೀಗೇ ಮಾತಾಡಿಕೊಳ್ಳುತ್ತಾ ಸಾಕಷ್ಟು ನಕ್ಕರು. ಮೂರು ದಿನಗಳಲ್ಲಿ ನಾನೂರ ಅರವತ್ತೈದು ಡಾಲರ್‌ಗಳಷ್ಟು ಹಣ ಸಂಗ್ರಹವಾಗಿತ್ತು.

ಆ ಹಣ ಆ ಖೂಳರು ದುಡಿದಿದ್ದೇ (!) , ಆದರೂ ಅದರಲ್ಲಿ ತಿಳಿದೋ ತಿಳಿಯದೆಯೋ ನಮ್ಮ ಪಾಲೂ ಇತ್ತು. ಅದ್ದರಿಂದ ನಾವೂ ಅದಕ್ಕೆ ಹಕ್ಕುದಾರರೆಂದು ಭಾವಿಸಿದ್ದೆವು. ಮುಂದಿನ ಪಟ್ಟಣದಲ್ಲಿ ಅವರು ನನಗೊಂದು ಜೊತೆ ಬಟ್ಟೆಗಳನ್ನು ತಂದರು. ಅವರಿಗೂ ಹೊಸ ಸೂಟುಗಳನ್ನು ಕೊಂಡು ತಂದರು. ಆದರೆ ಅದನ್ನು ಹಾಕಿಕೊಳ್ಳಲಿಲ್ಲ. ಯಾವುದೋ ವಿಶೇಷ ದಿನಕ್ಕೆಂದು ತೆಗೆದಿಟ್ಟರು. ಜಿಮ್ ನೀಲಿ ಬಣ್ಣದ ಅಭಿಷೇಚನದಿಂದ ವಿಚಿತ್ರವಾಗಿ ಕಾಣುತ್ತಿದ್ದುದರಿಂದ ನಮ್ಮ ಬಳಿಗೆ ಯಾರೂ ಬರಲಿಲ್ಲ.

ಮುಂದಿನ ನಗರದಲ್ಲೂ ಇದೇ ಉಪಾಯ ಮಾಡಿದರೆ ಹೇಗೆ ಎಂದವರು ಯೋಚಿಸುತ್ತಿದ್ದರು. ಆದರೆ ಇದು ಅಪಾಯಕಾರಿ ಎಂಬ ಅನಿಸಿಕೆಯೊಂದಿಗೆ ಕೈಬಿಟ್ಟರು. ಆ ಖೂಳರು ಮುಂದಿನ ಪಟ್ಟಣದಲ್ಲೂ ಏನಾದರೂ ಕಿತಾಪತಿ ಮಾಡಿಯೇ ಮಾಡುತ್ತಾರೆಂದು ನನಗೆ ಗೊತ್ತಿತ್ತು.