೧೧. ವಿಲಿಯಂ ಮತ್ತು ಹಾರ್ವೇ ಸೋದರರು.
ಕೆಲವು ದಿನಗಳ ಪ್ರಯಾಣದ ನಂತರ, ಒಂದು ಸುಂದರ ಮುಂಜಾವಿನ ಬೆಳಗಿನಲ್ಲಿ ನೀಟಾದ ಬಟ್ಟೆ ತೊಟ್ಟು ನಾನೂ, ರಾಜನೂ ಚಿಟ್ಟು ದೋನಿಯನ್ನೇರಿ ಸನಿಹದ ನಗರದೆಡೆಗೆ ಹೊರಟೆವು. ಪಾಳೇಗಾರನೇಕೋ ಒಲ್ಲೆ ಎಂದು ತೆಪ್ಪದಲ್ಲಿ ಉಳಿದಿದ್ದ. ಜಿಮ್ ಹೇಗೂ ಬರುವಂತಿರಲಿಲ್ಲ. ನಾನು ಹಾಕುತ್ತಿದ್ದ ಹುಟ್ಟಿನ ತಾಳಕ್ಕೆ ಸಿಳ್ಳೆ ಹಾಕುತ್ತಾ ಕುಳಿತಿದ್ದ ರಾಜ. ಅದಂತೂ ತುಂಬಾ ಮನೋಹರವಾಗಿತ್ತು. ಆದರೂ ನನ್ನ ಮನದಲ್ಲಿ ಏನೋ ಒಂದು ರೀತಿಯ ಉದ್ವಿಗ್ನತೆಯೂ, ಭಯವೂ ಸೇರಿದ ಮಿಶ್ರಭಾವ ಉಯ್ಯಾಲೆಯಾಡುತ್ತಿತ್ತು. ಅವನೇನು ಮಾಡಲಿದ್ದಾನೆ ಎಂದು ನನಗೂ ತಿಳಿದಿರಲಿಲ್ಲ. ಸ್ವಲ್ಪ ದೂರ ಹೋಗುವಷ್ಟರಲ್ಲೇ ನದಿಗುಂಟ ಹಾಯ್ದಿದ್ದ ದಾರಿಯೊಂದು ಕಂಡಿತು. ಆ ದಾರಿ ನದಿಯನ್ನು ಸಂಧಿಸುವೆಡೆಯಲ್ಲಿ, ಮರದ ದಿಮ್ಮಿಯ ಮೇಲೆ ಕೆಂಪಾದ ಮನುಷ್ಯನೊಬ ಕುಳಿತಿದ್ದ. ಜೇಬಿನಿಂದ ಕರವಸ್ತ್ರ ತೆಗೆದು ಬೆವರನ್ನೊರೆಸಿಕೊಳ್ಳುತ್ತಿದ್ದ ಆತನ ಏದುಸಿರು ಕೂಡಾ ಇನ್ನೂ ನಿಂತಿರಲಿಲ್ಲ. ಬಹುಶ: ಆಗ ತಾನೇ ಬಂದು ಕುಳಿತಿರಬೇಕು. ಅವನ ಬಳಿ ಸಾರಿದ ರಾಜ "ಎತ್ತ ಹೊರಟಿದ್ದೀಯಪ್ಪ" ಎಂದು ವಿಚಾರಿಸಿದ. 'ಉಗಿದೋಣಿಗೆ ಕಾಯುತ್ತಿದ್ದೇವೆ?" ಆರ್ಲಿಯಾನ್ಸ್ಗೆ ಹೋಗಬೇಕಿತ್ತು." "ಸರಿ ನಾವೂ ಅಲ್ಲಿಗೇ ಹೋಗತ್ತಿರುವುದು, ಬಂದರೆ ಅಲ್ಲೀವರ್ಗೂ ಬಿಟ್ಟುಕೊಡ್ತೀವಿ." ಎಂದವನೇ ನನ್ನ ಕಡೆಗೆ ತಿರುಗಿ "ಅಡಾಲ್ಫ಼ಸ್ ಅವರ ಲಗ್ಗೇಜು ತೆಗಿದಿಡಲು ಸಹಾಯ ಮಾಡು" ಎಂದ. ನಾನು ಹಾಗೇ ಮಾಡಿದೆ. ಆ ಮನುಷ್ಯ ಉಗಿದೋಣಿಯನ್ನೇರಿ, ನನಗೆ ಕೃತಙ್ಞತೆ ತಿಳಿಸಿ, ರಾಜನ ಕಡೆ ತಿರುಗಿ "ನೀವು ವಿಲ್ಕ್ಸ್ ಅಲ್ಲವಾ?" ಎಂದ. ರಾಜ "ಅಲ್ಲ, ನನ್ನ ಹೆಸರು ಬ್ಲಾಡ್ಗೆಟ್. ಅಲೆಕ್ಸಾಂಡರ್ ಬ್ಲಾಡ್ಗೆಟ್" "ಹೋ ನಿಮ್ಮನ್ನ ನೋಡಿ ವಿಲ್ಕ್ಸ್, ಸರಿಯಾದ ಸಮಯಕ್ಕೇ ಬಂದರು ಎಂದುಕೊಂಡೆ. "ಹಿ.. ನಾನು ಅಲೆಕ್ಸಾಂಡರ್ ಬ್ಲಾಡ್ಗೆಟ್, ಇಲ್ಲಿ ನಮ ಸ್ನೇಹಿತರನ್ನು ನೋಡಲು ಬಂದೆವು. ನೀನು ವಿಲ್ಕ್ಸ್ ಅವರಿಗೆ ಕಾಯುತ್ತಿದ್ದೀಯಾ?" "ಇಲ್ಲ ಅವರ ತಮ್ಮ ಪೀಟರ್, ವಿಲ್ಕ್ಸ್ಗೆ ಕಾಯುತ್ತಿದ್ದ." "ಅಂದ್ರೆ ಪೀಟರ್ ಆ ಊರಿನಲ್ಲಿದ್ದಾನೆಯೇ?" "ನೆನ್ನೆವರೆಗೂ ಇದ್ದ. ಈಗ್ಲೂ ಅವನ ಮನೆ ಅಲ್ಲಿದೆ. ಆದರೆ ಪೀಟರ್ ನಿನ್ನೆ ರಾತ್ರಿ ಸತ್ತು ಹೋದ. ಪಾಪ ಎಂತದೋ ಕಾಯಿಲೆ ಇತ್ತು. ಅವನಿಗೆ ಇಬ್ಬರು ಸೋದರರು. ಅಣ್ಣ ಹಾರ್ವೇ ನೀತಿಭೋಧಕನಂತೆ. ಆದರೆ ಪಾಪ ತಮ್ಮ ವಿಲಿಯಂ ಕಿವುಡ, ಮಾತಾಡೋಕೂ ಬರಲ್ಲ. ಮೂಗ" "ಈ ಊರಲ್ಲಿ ಅವರ ಬಗ್ಗೆ ಎಷ್ಟು ಜನಕ್ಕೆ ಗೊತ್ತು?" "ಪೀಟರ್ನೇ ಅವರನ್ನು ನೋಡಿ ಎಷ್ಟು ವರ್ಷ ಆಗಿದ್ಯೋ?, ಅವರ್ಗೆಲ್ಲಾ ಬರೀ ಪತ್ರ ಮುಖೇನ ಇಲ್ಲಿಯವರ ಪರಿಚಯ. ಇಲ್ಲಿರ್ಓರೂ ಅಷ್ಟೆ. ಅವರ ಬಗ್ಗೆ ಕೇಳಿದಾರೇ ಹೊರತು ನೋಡಿಲ್ಲ. ಅದಕ್ಕೆ ನಾನು ನಿಮ್ಮನ್ನ ವಿಲ್ಕ್ಸೇ ಇರಬಹುದು ಅಂದ್ಕೊಂಡೆ" "ಅವರಿಗೆಷ್ಟು ವಯಸ್ಸಿರಬೇಕು?" "ವಿಲಿಯಂಗೆ ಸುಮಾರು ಮೂವತ್ತು ಮೂವತ್ತೈದಿರಬೇಕು. ಹಾರ್ವೇ ಮಾತ್ರ ನಿಮ್ಮಷ್ಟೇ ವಯಸ್ಸಿನವನು." "ಅವರಿಗೆ ಬೇರೆ ಅಣ್ಣ ತಮ್ಮಂದಿರು-ಅಕ್ಕತಂಗಿಯರು ಇದಾರಾ ಇಲ್ಲಿ" "ಇದ್ರು, ಈಗ ಅವರೆಲ್ಲಾ ಸತ್ತು ಹೋಗಿದಾರೆ. ಪೀಟರ್ ತಮ್ಮ ಜಾರ್ಜ್ನ ಹೆಣ್ಣು ಮಕ್ಕಳು ಇದ್ರೂ ಪೀಟರ್ಗೆ ಅವನ ಸೋದರರ ಮೇಲೇ ಅವನಿಗೆ ಅಪಾರ ವಾಂಛೆ. ಅವರನ್ನು ನೋಡಬೇಕೆಂದು ತಹತಹಿಸುತ್ತಿದ್ದ. ಪಾಪ ನಿನ್ನೆ ತೀರಿಕೊಂಡ. ಅವನು ದುಡ್ಡನ್ನೆಲ್ಲಾ ಎಲ್ಲಿ ಅಡಗಿಸಿಟ್ಟಿದ್ದಾನೆಂದು ಒಂದು ಕಾಗದ ಬರೆದು ಇಟ್ಟುಕೊಂಡಿದ್ದಾನಂತೆ. ಅವರಣ್ಣನಿಗೆ ಕೊಡೋಕೆ." "ಹಂಗಿದ್ರೆ ಇನ್ನೂ ಹಾರ್ವೇ ಯಾಕೆ ಬಂದಿಲ್ಲ?" "ಅಯ್ಯೋ ಆಗ್ಲೇ ಹೇಳಿದ್ನಲ್ಲ. ಇಂಗ್ಲೆಂಡ್ನಿಂದ ಇಲ್ಲೀವರೆಗೂ ಬರೋದು ತುಂಬಾ ಸಮಯ ಹಿಡಿಯುತ್ತೆ ಅಂತ.' ರಾಜನ ಮಾತು ಮೌನವಾಯಿತು. ಅವನ ಆ ನಿರ್ಭಾವ ಕಣ್ಣುಗಳಲ್ಲೂ, ಮಸ್ತಿಷ್ಕದಲ್ಲಿ ಮಥಿಸುತ್ತಿರುವ ಯೋಜನೆಗಳ ಅಲೆಗಳನ್ನು ನಾನು ಗುರುತಿಸಿದೆ. ಕೆಲವು ಕ್ಷಣಗಳಲ್ಲೇ, ಅವನ ಮುಖದಲ್ಲೊಂದು ಪ್ರಸನ್ನತಾ ಮಂದಹಾಸ ಸುಳಿದುಹೋಯಿತು. ಆ ಮೇಲೆ ಆ ಯುವಕನನ್ನು ವಿಲ್ಕ್ಸ್ ಮನೆತನದ ಬಗ್ಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದನು, ಆ ಯುವಕನು ಪಯಣಿಸಬೇಕಿದ್ದ ಉಗಿದೋಣಿ ಸಿಗುವವರೆಗೂ. ಅವನನ್ನು ಆ ದೋಣಿಗೆ ಹತ್ತಿಸಿ, ಆ ನಗರದೆಡೆಗೆ ಮುಂದುವರೆದಾಗ ರಾಜ ಅಲ್ಲಿಯೇ ದಡದಲ್ಲಿಳಿದು, ಹಿಂದೆ ಹೋಗಿ ಪಾಳೇಗಾರನನ್ನೂ, ಅವನ ಜೊತೆಗೆ ಅವರ ಚೀಲಗಳನ್ನೂ ತರುವಂತೆ ಹೇಳಿದನು. ನಾನು ಹಾಗೇ ಮಾಡಿದೆ. ಅವರಿಬ್ಬರೂ ಬಹುಕಾಲ ತಮ್ಮ ಕಾರ್ಯ ಸಾಧನೆಯ ಬಗ್ಗೆ ಚರ್ಚಿಸಿದರು. ಪಾಳೇಗಾರ ತನಗೆ ಕಿವುಡು-ಮೂಗು ಇರುವಂತೆ ಅಭಿನಯಿಸುವುದು ಕಷ್ಟವಿಲ್ಲ ಎಂದರೆ, ರಾಜ ತನ್ನ ನಾಟಕದ ಅನುಭವಗಳಿಂದಾಗಿ ತಾನು ಇಂಗ್ಲಿಷ್ ಮನುಷ್ಯನಂತೆ ನಟಿಸಬಲ್ಲೆ ಎಂದ. ಹೀಗೆ ಅವರಿಬ್ಬರು ನತದೃಷ್ಟ ಪೀಟರನ ಸಹೋದರರಂತೆ ರಂಗ ಪ್ರವೇಶಿಸಲಿರುವುದು ನನಗೆ ತಿಳಿದು ಬಂತು. ನ್ವು ಅಲ್ಲೇ ಕಾದು, ಆ ಮಾರ್ಗವಾಗಿ ಬಂದ ದೊಡ್ಡ ದೋಣಿಯೊಂದನ್ನು ಹತ್ತಿ ಆ ಊರಿನೆಡೆಗೆ ಹೊರಟೆವು. ಸಣ್ಣ ಊರೊಂದಕ್ಕೆ ದೊಡ್ಡ ದೋಣಿಯಲ್ಲಿ ಬಂದಿಳಿದರೆ ನಾವು ದೂರದ ಇಂಗ್ಲೆಂಡಿನಿಂದ ಬಂದವರೆಂದು ನಂಬಿಸಲು ಸಹಾಯವಾಗುತ್ತದಲ್ಲವೇ? ಇಳಿಯುವ ಸಮಯ ಹತ್ತಿರಬಂದಂತೆ ನಮ್ಮನ್ನು ವಿಸ್ಮಯದಿಂದ ನೋಡುವವರ ಸಂಖ್ಯೆಯೂ ಹೆಚ್ಚಾಯಿತು. ಸಿತ್ತ ಒಂದು ಸಣ್ಣ ಗುಂಪು ಸೇರಿಯೇ ನಾವು ಈ ಊರಿನಲ್ಲಿ ಇಳಿಯಬೇಕಾಯಿತು. ಇಳಿದ ನಂತರ ರಾಜ ಘನಗಂಭೀರ ಧ್ವನಿಯಲ್ಲಿ "ಪೀಟರ್ ವಿಲ್ಕ್ಸ್ರವರು ವಾಸಿಸುವ ಮನೆಯನ್ನು ಯಾರಾದರೂ ತೋರಿಸುತ್ತೀರಾ.? " ಎಂದ. ಆ ಗುಂಪು ತಮ್ಮೊಳಗೇ ಮಾತನಾಡಿಕೊಂಡರು. ಅವರ ಮಾತುಕಾತೆಯ ಧಾಟಿ ನೋಡಿದರೆ, ಆ ಗುಂಪು, ಇವರೇ ಪೀಟರ್ ವಿಲ್ಕ್ಸ್ ಸೋದರರೆಂಬ ಸಮಷ್ಟಿ ಸಮ್ಮತಕ್ಕೆ ಬಂದಂತಿತ್ತು. ಅವರಲ್ಲೊಬ್ಬ "ವಾಸಿಸುವ ಮನೆಯನ್ನು ತೋರಿಸಲಾರೆವು. ನಿನ್ನೆಯವರೆಗೂ ವಾಸಿಸುತ್ತಿದ್ದ ಮನೆಯನ್ನು ತೋರಿಸಬಲ್ಲೆವು" ಎಂದ. ರಾಜ ಮತ್ತೇನೂ ಕೇಳಲಿಲ್ಲ. ಧಾರಾಶ್ರು ಸಹಿತ ಸಶಬ್ದವಾಗಿ ಅಳತೊಡಗಿದ. ಪಾಳೇಗಾರ ಎಲ್ಲವನ್ನೂ ಮಂಕನಂತೆ ನೋಡುತ್ತಿದ್ದ. ಅವನತ್ತ ತಿರುಗಿದ ರಾಜ ಏನೇನೋ ಅಸಂಬಧ್ದ ಸನ್ನೆಗಲನ್ನು ಮಾಡಿದ, ಅದನ್ನು ನೋಡುತ್ತಲೇ ಆ ದುಖಃವಾಹಿನಿಯಲ್ಲಿ ಪಾಳೇಗಾರನೂ ಪಾಲ್ಗೊಂಡ. ಮನೆ ತಲುಪಿದಾಗ ಅಲ್ಲಿ ಮೂವರು ತರುಣಿಯರಿದ್ದರು. ಮೇರಿ ಜೇನ್, ಸೂಸನ್ ಹಗೂ ಜೋನ್ನಾ. ದೊಡ್ಡವಳು ಮೇರಿ ಜೇನ್, ಅವಳಿಗೆ ಹತ್ತೊಂಬತ್ತು ವರುಷ ವಯಸ್ಸಿರಬಹುದು. ಅವರು ಮೂವರೂ ಪೀಟರನ ಅಣ್ಣ ಜಾರ್ಜ್ನ ಮಕ್ಕಳು. ಅವರೆಂದೂ ಇಂಗ್ಲೆಂಡ್ನಲ್ಲಿರುವ ತಮ್ಮ ಪಿತೃಸಂಬಂಧಿಗಳನ್ನು ಕಂಡೇ ಇರದ ಕಾರಣ ಅವರಿಗಾವ ಅನುಮಾನವೂ ಬರಲಿಲ್ಲ. ಅಲ್ಲಿ ಶವಪೆಟ್ಟಿಗೆಯಲ್ಲಿ ಶವವನ್ನಿಡಲಾಗಿತ್ತು. ಅದನ್ನು ಕಾಯಲು ಒಬ್ಬರು ನೇಮಿಸಲ್ಪಟ್ಟಿದ್ದರು. ಸಾವಿನ ಮನೆಯ ಮೌನವಿದ್ದರೂ, ಅತಿಥಿಗಳ ಆಗಮನದಿಂದ, ಉಳಿದ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿತ್ತು. ಪೀಟರನ ಉಯಿಲನ್ನು ಓದಲಾಯಿತು. ಮನೆ ಮತ್ತು ಮೂರು ಸಾವಿರ ಡಾಲರ್ಗಳನ್ನು ಆ ಹುಡುಗಿಯರಿಗೆ ಕೊಡಲಾಗಿತ್ತು. ಆರು ಸಾವಿರ ಚಿನ್ನದ ನಾಣ್ಯಗಳು ಹಾಗೂ ಉಳಿದ ಎಲ್ಲಾ ಚರಾಸ್ತಿಗಳೂ ಈ ಸಹೋದರರ ಪಾಲಿಗೆ ಬಂದಿತ್ತು. ಅವರು ಅದನ್ನು ತಮಗಿಷ್ಟ ಬಂದಂತೆ ಉಪಯೋಗಿಸಬಹುದಾಗಿತ್ತು. ಅವರಿಬ್ಬರೂ ನೆಲಮಾಳಿಗೆಗೆ ಹೋಗಿ ಹಣದ ಥೈಲಿ ಹಿಡಿದು ಮೇಲೆ ಬಂದರು. ಅಷ್ಟೂ ಹಣವನ್ನು ಎಲ್ಲಾ ನೋಡುತ್ತಿರುವಂತೆಯೇ ಆ ಹುಡುಗಿಯರಿಗೆ ಕೊಟ್ಟು ಬಿಟ್ಟರು. ಅದು ಎಲ್ಲರಿಗೂ-ನನಗೂ ಅಶ್ಚರ್ಯಕರವಾಗಿತ್ತು. ಆ ಹೆಣ್ಣುಮಕ್ಕಳೋ ಇದರಿಂದ ಎಷ್ಟು ಸಂತಸಗೊಂಡರೆಂದರೆ, ತಮ್ಮ ಇಂಗ್ಲೆಂಡಿನ ಸಂಬಂಧಿಗಳನ್ನು ತಬ್ಬಿಕೊಂಡು ಅವರನ್ನು ಹಾದಿ ಹೊಗಳಿದರು. ರಾಜ ಅವರ್ನ್ನು ತಬ್ಬಿ ಅತ್ತರೆ, ಪಾಳೇಗಾರ ಮೂಕ ಭಾಷೆಯ ವಿಚಿತ್ರ ಸಂಙ್ಞೆಗಳನ್ನು ಮಾಡುತ್ತಾ ನಿಂತ. ಅದನ್ನು ಕಂಡ ಜನಸ್ತೋಮವೆಲ್ಲಾ ಕಣ್ಣೀರಮಯಾಅಯಿತು. ಇವರಿಬ್ಬರೂ ನಕಲಿಗಳಿರಬೇಕೆಂಬ ಕಿಂಚಿತ್ ಅನುಮಾನವೂ ಯಾರಲ್ಲಿಯೂ ಸುಳಿಯಲಿಲ್ಲ. ರಾಜ ಆ ಘಟನೆಯ ನಂತರ ಪುಟ್ಟ ಭಾಷಣವನ್ನೇ ಬಿಗಿದನು. ಅದರಲ್ಲಿ ತನ್ನ ತಮ್ಮನ ಸದ್ಗುಣಗಳನ್ನೂ, ಧೀರತೆಯನ್ನೂ ವಿವರಿಸಿ, ಅಂತಹವನನ್ನು ಕಳೆದುಕೊಂಡು ತನಗಾಗಿರುವ ದುಖಃ ಹೇಳಲಸಾಧ್ಯ ಎಂದನು. ಹೊಳೆಯದಂಡೆಯಲ್ಲಿ ಸಿಕ್ಕ ಯುವಕನಿಂದ ಸಂಗ್ರಹಿಸಿದ ಹೆಸರುಗಳಲ್ಲಿ ಒಂದೆರಡು ಹೆಸರುಗಳನ್ನೂ ಹೇಳಿದನು. ಆದರೆ ಅವರ್ಯಾರೂ ಊರಿನಲ್ಲಿರಲಿಲ್ಲ. ಅವರಲೊಬ್ಬ ಡಾ||ರಾಬಿನ್ಸನ್ ಅಂದು ಸಂಜೆಯ ವೇಳೆಗೆ ಹಿಂದಿರುಗಬಹುದೆಂದು ತಿಳಿಯಿತು. ಅಲಿಯ ಜನ ಅವರನ್ನು ತುಂಬು ಗೌರವದಿಂದಲೇ ಕಂಡರು. ಇಂಗ್ಲೆಂಡಿನ ಜೀವನಕ್ರಮಗಳನ್ನು ವಿಚಾರಿಸಿಕೊಂಡರು. ರಾಜ್ ಹೇಳಿದ ಮಾತೆಲ್ಲವನ್ನೂ ತುಂಬ ಆಸಕ್ತಿಯಿಂದ ಕೇಳಿಸಿಕೊಂಡರು. ಅಷ್ಟು ಹೊತ್ತಿಗೆ ಡಾ||ರಾಬಿನ್ಸನ್ ಊರಿಗೆ ಹಿಂತಿರುಗಿ ಬಂದಿದ್ದ. ಅವನ್ನನು ಕಂಡ ರಾಜ ಒಂದೆರಡು ಕ್ಷಣ ಅವನನ್ನೇ ದಿಟ್ಟಿಸಿದ. ನಂತರ ಹುಸಿನಗು ನಗುತ್ತಾ, "ನೀವು ನಮ್ಮ ನತದೃಷ್ಟ ಸೋದರನ ಆತ್ಮೀಯ ವೈದ್ಯ ಗೆಳೆಯ........" ಎಂದೇನೋ ಹೇಳಲು ಹೊರಟನು. ಅವನ ಮಾತನ್ನು ಅರ್ಧಕ್ಕೇ ತುಂಡರಿಸುತ್ತಾ "ನಿಮ್ಮ ನಾಟಕ ನನ್ನ ಹತ್ರ ನಡೆಯಲ್ಲ. ನಿನ್ನ ಮಾತು ಕೇಳಿದ್ರೇನೆ ಗೊತ್ತಾಗುತ್ತೆ ನೀನು ಇಲ್ಲಿಯವನೇ ಅಂತ. ಇಷ್ಟು ಕೆಟ್ಟದಾಗಿ ಇಂಗ್ಲೆಂಡಿನಲ್ಲಿರೋ ಇಂಗ್ಲಿಷರಂತೂ ಮಾತಾಡೋದಿಲ್ಲ. ನೀನು ಯಾರೋ ನಕಲಿ ಇರಬೇಕು' ಎಂದನು. ಸುತ್ತಲ ವಾತಾವರಣ ಗರ ಬಡಿದಂತೆ ಸ್ತಬ್ಧವಾಯಿತು. ಮರುಕ್ಷಣದಲ್ಲೇ ಪಿಸುಪಿಸು ಪ್ರಾರಂಭವಾಗಿ ಅದೊಂದು ಸಮಷ್ಠಿ ಸಮ್ಮತದ ದನಿಯಾಗಿ, ಡಾಕ್ಟರ್ ಹೇಳಿದ ಮಾತು ಸುಳ್ಳೆಂದೂ, ಡಾಕ್ಟರ್ ತನ್ನ್ ಮಾತುಗಳನ್ನು ಹಿಂದಕ್ಕೆ . ತೆಗೆದುಕೊಳ್ಳಬೇಕೆಂದೂ ಆಗ್ರಹಿಸಿತು. ಆದರೆ ಆ ವೈದ್ಯ ಸ್ವಲ್ಪವೂ ವಿಚಲಿತನಾಗಲಿಲ್ಲಲ್ಲ. ಆ ಹುಡುಗಿಯರ ಬಳಿಗೆ ಹೋಗಿ, " ಈ ನಕಲಿಗಳ ಮಾತು ಕೇಳಿ ನೀವು ಕುಣಿಯುತ್ತಿದ್ದೀರಲ್ಲಾ..? ಕೂಡಲೇ ಅವರನ್ನು ಮನೆಯಿಂದ ಆಚೆ ಕಳುಹಿಸಿ" ಎಂದನು. ಅಷ್ಟರಲ್ಲಿ ಮೇರಿ ಜೇನ್, ತನಗೆ ರಾಜನಿತ್ತ ಆರು ಸಾವಿರ ಡಾಲರ್ಗಳ ಹಣದ ಗಂಟನ್ನು ತಂದು, ರಾಜನ ಕೈಗೆ ಕೊಟ್ಟು, "ಈ ಹಣವನ್ನು ನನಗಾಗಿ ನೀವೇ ಕಾಪಾಡಿರಿ" ಎಂದು ಬಿಟ್ಟಳು. ಆ ಮಾತಿನಿಂದ ರಾಜನ ಮುಖ ಉಬ್ಬಿಹೋಯಿತು. ಅವನು ಸುತ್ತಲೂ ಹೆಮ್ಮೆ ಮತ್ತು ಅಭಿಮಾನದ ದೃಷ್ಟಿಯನ್ನು ಬೀರುತ್ತಾ ನಿಂತಿದ್ದರೆ, ಮೇರಿಜೇನ್, ಡಾಕ್ಟರನ ಮಾತಿಗೆ ಅದೇ ತನ್ನ ಉತ್ತರ ಎನ್ನುವಂತೆ ಅವನ ಮುಖ ನೋಡುತ್ತಾ ನಿಂತಿದ್ದಳು. ಡಾಕ್ಟರನ ಮುಖ ರೋಷದಿಂದಲೋ, ಅವಮಾನದಿಂದಲೋ ಕೆಂಪಾಗಿತ್ತು. "ಸರಿ ಬಿಡಿ" ಎಂದು ನಿರ್ಭಾವುಕವಾಗಿ " ನಿಮ್ಮ ವಿಷಯ ನನಗೇಕೆ? ಆದರೂ ಮುಂದೊಮ್ಮೆ ಈ ದಿನ ನೆನೆದು ನೀವು ದುಃಖಿಸಿದಾಗ ನಾನು ಹೇಳಿದ ಮಾತು ನೆನೆಸಿಕೊಳ್ಳಿ" ಎಂದನು. ಅದಕ್ಕೆ ಡಾಕ್ಟರನ ದನಿಯನ್ನೇ ಅನುಕರಿಸುತ್ತಾ ರಾಜನು'ಸರಿಬಿಡಿ, ಅಂತಹ ಘಳಿಗೆ ಬಂದಾಗ ಹೇಳಿ ಕಳುಹಿಸುತ್ತೇವೆ" ಎಂದನು. ಈ ಮಾತಿಗೆ ಜನಸ್ತೋಮ ನಕ್ಕು, ರಾಜನ ಸಮಯಸ್ಪೂರ್ತಿಯನ್ನು ಕೊಂಡಾಡಿತು. ಗುಂಪು ಕರಗಿದ ಮೇಲೆ, ನಾವೂ ನಮ್ಮ ಕೊಠಡಿಗೆ ಬಮ್ದೆವು. ರಾಜನಿಗೂ ಪಾಳೇಗಾರನಿಗೂ ಒಂದು ಕೋಣೆ, ನನಗೆ ಮಹಡಿಯ ಮೇಲೆ ದೊಡ್ಡ ಬೀರುವಿನಂತಹ ಒಂದು ಸಣ್ಣ ಕೋಣೆ. ಪೀಟರನ ಎಲ್ಲಾ ಹಳೆಯ ಸ್ನೇಹಿತರಿಗೆ ಅಂದು ರಾತ್ರಿ ಅದ್ದೂರಿ ಭೋಜನಕೂಟ ಏರ್ಪಡಿಸಲಾಗಿತ್ತು. ಆ ಸಮಯದಲ್ಲಿ ಸೋದರಿಯರಲ್ಲಿ ಕಿರಿಯವಳಾದ ಜೋನ್ನಾ ನನ್ನೊಡನೆ ಗಂಟೆಗಟ್ಟಲೆ ಮಾತಾಡಿದಳು. ಇಂಗ್ಲೆಂಡಿನ ಬಗ್ಗೆ ಅವಳಿಗಿದ್ದ ಕೂತೂಹಲಕ್ಕೆ ಎಣೆಯಿರಲಿಲ್ಲ. ಅವಳದಂತೂ ಎಂದೂ ಮುಗಿಯದಷ್ಟು ಬಗೆಬಗೆಯ ಪ್ರಶ್ನೆಗಳು. ನಾನೂ ನನಗೆ ತಿಳಿದಂತೆ ಅವಳ ಪ್ರಶ್ನೆಗಳಿಗೆ ಉತ್ತರಿಸಿದೆ. ಆದರೆ ಅವಳು ನನ್ನ ಮಾತನ್ನು ನಂಬದೆ ಹೋದಳು!. "ನೀನೊಬ್ಬ ಬರೀ ಸುಳ್ಳು ಹೇಳುತ್ತೀಯ" ಎಂದು ಅವಳು ಹೇಳುತ್ತಿದ್ದುದನ್ನು ಕೇಳಿಸಿಕೊಂಡ ಅವಳ ಅಕ್ಕಂದಿರು ಅವಳಿಗೆ ಬಯ್ದರು. ಅದನ್ನು ಕೇಳಿ ನಾಚಿಕೊಂಡಂತಾದ ಅವಳು ಮತ್ತೆ ನನ್ನ ಬಳಿಗೆ ಬಂದು ಕ್ಷಮೆ ಯಾಚಿಸಿದಳು. ಅವಳ ಆ ವರ್ತನೆ ನೋಡಿ ನನಗೇ ನಾಚಿಕೆಯಾಯಿತು. ಮರ್ಯಾದೆಯಿಲ್ಲದ ಆ ಕಳ್ಳ ನಾಯಿಗಳು ಇಂತಹ ಮುಗ್ಧರ ಹಣ ದೋಚುತ್ತಿದ್ದರೆ ನಾನೇನೂ ಮಾಡದೆ ಸುಮ್ಮನಿದ್ದೇನಲ್ಲ ಎನಿಸಿತು. ಏನಾದರೂ ಸರಿ ಈ ಸೋದರಿಯರನ್ನು ರಕ್ಷಿಸಿ, ಅವರ ಹಣವನ್ನುಳಿಸಲು ಅವರಿಗೆ ನಿಜಾಂಶ ತಿಳಿಸಬೇಕೆಂದು ಮನಸ್ಸು ಮಾಡಿದೆ. ಆ ರಾತ್ರಿಯೇ ಆ ದಿಸೆಯಲ್ಲಿ ಕಾರ್ಯೋನ್ಮುಖನಾದೆ.