೧೨. ಶವಪೆಟ್ಟಿಗೆಯಲ್ಲಿ ಹಣ.
ರಾಜನೂ-ಪಾಳೇಗಾರನೂ ಅತಿಥಿಗಳೊಂದಿಗೆ ಮಾತನ್ನಾಡುತ್ತಲೇ ಇದ್ದರು. ಜೇನಳಿಗೂ ಇತರರಿಗೂ ಬೀಳ್ಕೊಂಡು, ನಾನು ನನ್ನ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಆದರೆ ಹೊರಗಿನ ಗಲಾಟೆಯೆಲ್ಲಾ ನಿರಭ್ರವಾಗಿ ಕೇಳುತ್ತಿತ್ತು. ನಿಧಾನವಾಗಿ ನಡೆಯುತ್ತಾ, ರಾಜನಿಗೂ, ಪಾಳೇಗಾರನಿಗೂ ಗೊತ್ತುಪಡಿಸಲಾಗಿದ್ದ ಕೊಠಡಿಯ ಬಳಿಗೆ ಬಂದೆ. ಒಳಹೋಗಿ ಬಾಗಿಲು ಮುಚ್ಚಿಕೊಂಡೆ. ಆ ಖದೀಮರು ಅಲ್ಲಿ ಬಚ್ಚಿಟ್ಟಿರುವ ಹಣವನ್ನು ಮತ್ತೆ ಮಾಡಬೇಕೆಂಬುದು ನನ್ನ ಯೋಜನೆಯಾಗಿತ್ತು. ಆದರೆ ಒಳಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಲೇ, ಯಾರೋ ಮೆಟ್ಟಿಲನ್ನು ಹತ್ತಿ ಬರುವ ಸದ್ದು ಕೇಳಿ ಬರತೊಡಗಿತು. ಆ ಸದ್ದು ನಿಧಾನವಾಗಿ ಜೋರಾಗಿ ನಾನಿದ್ದ ಕೊಠಡಿಯ ಕಡೆಗೇ ಬರುತ್ತಿರುವ ಹಾಗೆ ಕೇಳಲಾರಂಭಿಸಿತು. ಎಚ್ಚರಿಕೆಯ ಅಂಗವಾಗಿ ನಾನು ಅಲ್ಲೇ ಇದ್ದ ಪರದೆಯ ಹಿಂದೆ ಸರಿದು ಅಡಗಿಕೊಂಡೆ. ದೇವರು ದೊಡ್ಡವನು. ನನ್ನ ಕೋಣೆಯ ಬಾಗಿಲು ಹಿಂದೆಯೇ ತೆರೆದುಕೊಂಡಿತು. ಅಲ್ಲಿಂದ ನಮ್ಮ ರಾಜನೂ, ಪಾಳೇಗಾರನೂ ಒಳ ಬಂದರು. ಅವರನ್ನು ಕಂಡು ಹೆದರಿಕೆಯಿಂದ ನಾನು ಮೂಕನಾಗಿ ನಿಂತುಬಿಟ್ಟೆ. ಅಲ್ಲಿಗೆ ಬಂದ ಅವರಿಬ್ಬರ ನಡುವೆ ಮಾತುಕತೆ ನಡೆಯಿತು. ಅವರ ಮಾತುಕತೆಯ ಅತಿ ಮುಖ್ಯ ವಿಷಯವೆಂದರೆ ಈಗ ಅವರಿಗೆ ಸಿಕ್ಕಿರುವಷ್ಟೇ ಹಣವನ್ನು ಎತ್ತಿಕೊಂಡು ಪಲಾಯನ ಮಾಡುವುದೋ ಅಥವಾ ಇನ್ನೊಂದೆರಡು ದಿನ ಕಾದು, ಮತ್ತಷ್ಟು ಹಣ ಸೇರಿಸಿ ಪರಾರಿಯಾಗಬೇಕೋ ಎಂದಾಗಿತ್ತು. ಅವರ ನಿರ್ಧಾರ ಏನೆಂದು ನನಗೆ ತಿಳಿಯದಿದ್ದರೂ, ಅವರ ಮಾತುಕತೆಯಿಂದ ಒಂದು ವಿಷಯ ಪಕ್ಕಾ ಆಯಿತು. ಅದು ನಾನಲ್ಲಿರುವುದು ಅವರಿಗೆ ಸ್ವಲ್ಪವೂ ಸುಳಿವು ಸಿಕ್ಕಿಲ್ಲ ಎಂದು. ಕೋಣೆಯಿಂದ ಹೊರಹೋಗುವ ಮುನ್ನ ರಾಜ "ಅಲ್ಲಾ,... ನಮ್ಮ ಹಣವನ್ನು ಸಾಕಷ್ಟು ಸುರಕ್ಷಿತ ಸ್ಥಳದಲ್ಲಿದೆಯೇ ಎಂದು ನನಗೆ ಅನುಮಾನ" ಎಂದನು. ಅದನ್ನೊಪ್ಪಿಕೊಂಡ ಪಾಳೇಗಾರ. ಕೂಡಲೇ ರಾಜ ನಾನು ಪರದೆಯ ಹಿಂದೆ ಅವಿತುಕುಳಿತಿರುವೆಡೆಗೆ ಬಂದ. ನನ್ನುಸಿರು ಮತ್ತೆ ಬಾಯಿಗೆ ಬಂತು. ಸಾಧ್ಯವಾದಷ್ಟೂ ಗೋಡೆಗೆ ಒತ್ತರಿಸಿಕೊಂಡು, ಉಸಿರಾಟವನ್ನೂ ನಿಲ್ಲಿಸಿ ಕಣ್ಣು ಮುಚ್ಚಿಕೊಂಡು ನಿಂತೆ. ನನ್ನಿಂದ ಎರಡು ಅಡಿಗಳ ದೂರದಲ್ಲಿ ಚೀಲವನ್ನೆಳೆಯುವ ಸದ್ದು ಕೇಳಿಸಿತು. ಮೆಲ್ಲನೆ ಕಣ್ಣು ತೆರೆದೆ. ರ್ಆಜ ಕಾಣಿಸಿದ. ಅವನು ತನ್ನ ಕೆಲಸದಲ್ಲಿ ಪೂರ್ಣ ಮಗ್ನನಾಗಿದ್ದ. ಅದು ಹೇಗೆ ಅವನು ನನ್ನನ್ನು ಗಮನಿಸಲಿಲ್ಲವೋ?, ಅಂತೂ ನಾನಲ್ಲಿರುವುದು ಅವನಿಗೆ ಗೊತ್ತಾಗಿರಲಿಲ್ಲ. ಆ ಹಣ ತುಂಬಿದ ಚೀಲವನ್ನೆಳೆದು ನೆಲಹಾಸಿನ ಕಂಬಳಿಯ ಕೆಳಗೆ ಬಚ್ಚಿಟ್ಟ!. ಆಮೇಲೆ ಅವರು ಆ ಕೋಣೆಯನ್ನು ಬಿಟ್ಟು ಹೊರಟು ಹೋದರು. ಹೀಗಾಗೆ ಅವರು ಬಚ್ಚಿಟ್ಟ ಹಣವನ್ನು ಹುಡುಕುವ ಪ್ರಯಾಸ ನ್ನಗೆ ತಪ್ಪಿತು. ಆ ಚೀಲವನ್ನೆತ್ತಿಕೊಂಡು ಮೆಲ್ಲನೆ ನನ್ನ ಕೋಣೆ ಸೇರಿಕೊಂಡು, ಆ ಚೀಲವನ್ನು ನನ್ನೆದೆಯ ಮೇಲೇ ಇಟ್ಟುಕೊಂಡು ಮಲಗಿದೆ. ನಿದ್ದೆ ಮಾಡಲಿಲ್ಲ. ಸ್ವಲ್ಪ ಸಮಯದ ನಂತರ ಗೊರಕೆಯ ಏಕನಾದದಂತಹ ಸ್ವರಗಳು ಕೇಳಲಾರಂಭಿಸಿದ ಮೇಲೆ ಮೆಲ್ಲನೆ ಕೊಠಡಿಯಿಂದ ಹೊರಬಂದೆ. ಸಮಯ ಸುಮಾರು ಬೆಳಗಿನ ಹಾವದ ಮೂರುಗಂಟೆಯಿರಬೇಕು. ಚೂರೂ ಸದ್ದಾಗದಂತೆ ಮಹಡಿಯಿಂದ ಕೆಳಕ್ಕಿಳಿದು, ಊಟದ ಕೊಠಡಿಯ ಮುಂಬಂದು, ಪೀಟರ್ ವಿಲ್ಕ್ಸ್ನ ಪಾರ್ಥಿವ ಶರೀರವನ್ನಿರಿಸಿದ್ದ ಹಜಾರದ ಬಾಗಿಲ ಸಂದಿನಿಂದ ಇಣುಕಿದೆ. ಶವಕ್ಕೆ ಕಾವಲಿದ್ದವರು ಗಾಢನಿದ್ದೆಯಲ್ಲಿದ್ದರು. ಹಜಾರದ ಆಚೆಬದಿಗೆ ಮನೆಯಿಂದ ಹೊರಹೋಗುವ ಮುಖ್ಯಬಾಗಿಲಿತ್ತು. ಅಲ್ಲಿಗೆ ಹೋಗಿ ಬಾಗಿಲನ್ನೆಳೆದೆ. ಆದರೆ ಅದಕ್ಕೆ ಬೀಗ ಹಾಕಿತ್ತು.!! ನಾನು ಬಾಗಿಲನ್ನೆಳೆದು ನೋಡುತ್ತಿರುವಾಗ ಯಾರೋ ಬರುತ್ತಿರುವ ಹೆಜ್ಜೆಯ ಸದ್ದಾಯಿತು. ನನಗೆ ಮತ್ತೊಮ್ಮೆ ಹೃದಯ ಬಾಯಿಗೆ ಬಂದಂತಾಯಿತು. ಅ ಹಣದೊಡನೆ ನನ್ನನ್ನೇನಾದರೂ ಯಾರಾದರೂ ನೋಡಿದರೆಂದರೆ ಮುಗಿಯಿತು. ನಾನು ಕೆಟ್ಟಂತೆಯೇ! ಬೇರೆ ಏನಕ್ಕೂ ಹೆದರದಿದ್ದರೂ, ಆ ಹಣ ನನ್ನ ಬಳಿಯಲ್ಲಿದ್ದರೆ ಅಪಯ ತಪ್ಪಿದ್ದಲ್ಲ. ಅದನ್ನು ಅಡಗಿಸಿಡಲು ಒಂದು ಸ್ಥಳಕ್ಕಾಗಿ ಸುತ್ತೆಲ್ಲಾ ನೋಡಿದೆ. ನನಗೆ ಸೂಕ್ತವಾಗಿ ಕಂಡದ್ದು ಒಂದೇ ಸ್ಥಳ. ಹೆಚ್ಚಿನ ಯೋಚನೆಗೆ ಸಮಯವಿರಲಿಲ್ಲ. ಕೂಡಲೇ ಅಲ್ಲಿಗೆ ಓಡಿದೆ. ಶವಪೆಟ್ಟಿಗೆಯ ಮುಚ್ಚಳ ತೆಗೆದು ಒಳಗೆ, ಪಾರ್ಥಿವ ಶರೀರವಿರುವೆಡೆಯಲ್ಲಿ ಸರಿಯಾಗಿ ಆ ಹಣದ ಎದೆಯ ಮೇಲೆ, ಕೈಗಳನ್ನು ಮಡಿಚಿರುವಲ್ಲಿ ಹಣದ ಆ ಚೀಲವನ್ನಡಗಿಸಿದೆ. ಆ ಕಾರ್ಯದಲ್ಲಿ ಶದ ತಣ್ಣನೆಯ ಕೈ ಸೋಕಿದಾಗ ಒಂದು ಕ್ಷಣ ನನ್ನ ಇಡೀ ದೇಹ ಮರಗಟ್ಟಿದಂತೆ ಸ್ತಬ್ಧವಾಗಿಬಿಟ್ಟಿತು. ಕೂಡಲೇ ಓಡಿ ಒಂದು ದೊಡ್ಡ ಬಾಗಿಲಿನ ಹಿಂದೆ ಅವಿತುಕೊಂಡೆ. ಬಂದವಳು ಮೇರಿ ಜೇನ್. ಶವಪೆಟ್ಟಿಗೆಯ ಬಳಿ ಹೋದ ಅವಳು ಕುಳಿತು ರೋದಿಸತೊಡಗಿದಳು. ನಾನು ಸದ್ದಾಗದಂತೆ ಮೆಲ್ಲನೆ ಅ ಹಜಾರದ ಮೆಟ್ಟಿಲನ್ನೇರಿ, ನನ್ನ ಕೋಣೆಗೆ ಬಂದುಬಿಟ್ಟೆ. ಮರುದಿನ ಪೀಟರ್ ವಿಲ್ಕ್ಸ್ಗೆ ಅಂತಿಮ ನಮನ ಸಲ್ಲಿಸಲು ಹಲವಾರು ಜನರು ಬಂದರು. ಧಾರ್ಮಿಕ ವಿಧಿವಿಧಾನಗಳ ನ್ಂತರ ಶವಪೆಟ್ಟಿಗೆಗೆ ಮೊಳೆಗಳನ್ನು ಹೊಡೆಯಲಾಯಿತು. ನಂತರ ಆ ಶವಪೆಟ್ಟಿಗೆಯನ್ನು ರುದ್ರಭೂಮಿಗೆ ಕೊಂಡು ಹೋಗಿ, ಕುಣಿಯಲ್ಲಿಟ್ಟು, ಮಣ್ಣು ಮುಚ್ಚಲಾಯಿತು. ನಾನಿಟ್ಟ ಹಣ ಅಲ್ಲೇ ಇತ್ತೋ ಇಲ್ಲವೋ ಎಂದು ನನಗೆ ಗೊತ್ತಾಗಲಿಲ್ಲ. ಅಂದು ಸಂಜೆ ರಾಜ ಹಲವಾರು ಮೆಗಳಿಗೆ ಭೇಟಿ ಕೊಟ್ಟ. ಎಲ್ಲರಿಗೂ ಅವನು ತುಂಬಾ ಅವಸರದಲ್ಲಿ ಇಂಗ್ಲೆಂಡಿಗೆ ಮರಳಬೇಕಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದ. ಮರುದಿನ ಆ ದೊಡ್ಡ ಮನೆಯ ಕರಿಗುಲಾಮರನ್ನೆಲ್ಲಾ ಗುಲಾಮ ವರ್ತಕನೊಬ್ಬನಿಗೆ ಮಾರಲಾಯಿತು. ಮೇರಿಜೇನ್ ಮತ್ತು ಸೋದರಿಯರು ಇದರಿಂದ ದುಃಖಿತರಾದರು. ಏಕೆಂದರೆ ಅವರೆಲ್ಲರಿಗೂ ಈ ಗುಲಾಮರನ್ನು ಕಂಡರೆ ಪ್ರೀತಿಯಿತ್ತು. ಮುಂದಿನ ದಿನ ಹರಾಜು. ಪೀಟರ್ ವಿಲ್ಕ್ಸ್ನ ಪೂರ್ಣ ಆಸ್ತಿಯನ್ನು ಹರಾಜು ಮಾಡಬೇಕಿತ್ತು. ಅಂದು ಬೆಳಿಗ್ಗೆಯೇ ರಾಜ ಮತ್ತು ಪಾಳೇಗಾರ ನನ್ನ ಕೊಠಡಿಗೆ ನುಗ್ಗಿದರು. ಅವರಿಬ್ಬರೂ ಹಣ ಕಾಣೆಯಾದದ್ದರಿಂದ ಹುಚ್ಚು ಹಿಡಿದಂತವರಾಗಿದ್ದರು. ಹಣದ ಬಗ್ಗೆ ನನ್ನನ್ನು ವಿಚಾರಿಸಿದರು. ನಾನು ಹಣದ ಬಗ್ಗೆ ನನಗೇನೂ ಗೊತ್ತಿಲ್ಲವೆಂದೂ, ಆದರೆ ನೀಗ್ರೋ ಗುಲಾಮರು ಅವರ ಕೋಣೆಗೆ ಮೂರ್ನಾಲ್ಕು ಬಾರಿ ಹೋಗಿ ಬಂದದ್ದನ್ನ ನೋಡಿದೆನೆಂದೂ, ಅದು ಅವರ ಕೆಲಸವಿರಬೇಕೆಂದೂ ಹೇಳಿದೆ. ಅದನ್ನು ಕೇಳಿ ಅವರಿಬ್ಬರೂ ಒಂದೆರಡೌ ಕ್ಷಣ ಮೌನವಾಗಿ ಕುಳಿತರು. ನಂತರ ಎಲ್ಲಾ ನೀಗ್ರೋ ಗುಲಾಮರಿಗೂ ಕೆಟ್ಟದಾಗಿ ಶಾಪ ಹಾಕಿದರು. ಆ ಮನೆಯ ಗುಲಾಮರು ಬಿಕರಿಯಾಗಿ ಇಷ್ಟೊತ್ತಿಗೆ ತುಂಬಾ ದೂರ ಹೋಗಿರುತ್ತಾರಾದ್ದರಿಂದ ಅವರು ಏನೂ ಮಾಡುವಂತಿರಲಿಲ್ಲ. ಸ್ವಲ್ಪ ಸಮಯದ ನಂತರ ಬೆಳಗಿನ ತಿಂಡಿಗಾಗಿ ನಾನು ಅಡಿಗೆ ಮನೆಗೆ ಹೋದಾಗ ಮೇರಿ ಜೇನ್ ಅಳುತ್ತಿದ್ದಳು. ಅವಳನ್ನು ಸಮಾಧಾನ ಪಡಿಸುತ್ತಾ ಅವಳು ಅಳುವಿನ ಕಾರಣ ಕೇಳಲು ಅವಳು, ತಾನು ಅತ್ಯ್ಂತ ಪ್ರೀತಿಸುತ್ತಿದ್ದ ನೀಗ್ರೋ ಗುಲಾಮರನ್ನು ಮತ್ತೆ ಕಾಣಲಾಗದೆಂದು ತನಗೆ ದುಃಖವಾಗುತ್ತಿದೆ ಎಂದು ತಿಳಿಸಿದಳು. ಅದಕ್ಕೆ ನಾನು "ಇನ್ನೆರಡೇ ವಾರಗಳಲ್ಲಿ ನೀನು ಅವರನ್ನು ಮತ್ತೆ ಕಾಣುವ್ ಕಂಡಿತಾ" ಎಂದೆ. ಅವಳು ಆಶ್ಚರ್ಯಚಕಿತಳಾಗಿ ನನ್ನ ಮುಖವನ್ನೇ ನೋಡುತ್ತಾ "ಹೇಗೆ?" ಎಂದಳು. ಆಗ ಅವಳಿಗೆ ನಮ್ಮ ರಾಜ ಮತ್ತು ಪಾಳೇಗಾರರ ಬಗ್ಗೆ ಎಲ್ಲವನ್ನೂ ತಿಳಿಸಿದೆ. ಹಣ ಅಡಗಿಸಿಟ್ಟ ಜಾಗದ ಬಗ್ಗೆಯೂ ತಿಳಿಸಿ, ಅವರ ಈ ಮೋಸದಾಟದಲ್ಲಿ ನಾನು ಅರಿವಿಲ್ಲದೆ ಸಿಕ್ಕಿಕೊಂಡಿರುವೆನೆಂದೂ, ಅಕಸ್ಮಾತ್ ಸಂದರ್ಭ ಬಂದರೆ, ನನ್ನನ್ನು ರಕ್ಷಿಸಬೇಕೆಂದೂ ಅವಳಿಗೆ ಕೇಳಿಕೊಂಡೆ. ಅದಕ್ಕವಳು ಸಂಪೂರ್ಣ ಆಶ್ಚರ್ಯಚಕಿತಳಾಗಿಬಿಟ್ಟಳು. ಸ್ವಲ್ಪ ಸಮಯದ ನಂತರ ನನ್ನನ್ನು ರಕ್ಷಿಸುವುದಾಗಿ ಹೇಳಿದಳು. ಕೆಲವು ದಿನಗಳ ಮಟ್ಟಿಗೆ ಈ ಮನೆಯಿಂದ ಹೊರಹೋಗಿ ತನ್ನ ಸ್ನೇಹಿತೆಯರ ಮನೆಯಲ್ಲಿ ಇದ್ದು ಬರುವೆನೆಂದೂ, ಅಲ್ಲಿಯವರೆಗೂ ಇಲ್ಲಿನ ಆಟಾಟೋಪಗಳನ್ನೂ ನಿಯಂತ್ರಿಸಿ, ಎಲ್ಲರಿಗೂ ಸರಿಯಾದ ದಾರಿ ಮಾಡಬೇಕೆಂದೂ ನನ್ನನ್ನು ಕೇಳಿಕೊಂಡಳು. ಸ್ವಲ್ಪವೇ ಸಮಯದಲ್ಲಿ ಮನೆಯಲ್ಲಿ ಉಳಿದ ವಸ್ತುಗಳ ಹರಾಜು ಶುರುವಾಯಿತು. ಅದು ಮುಗಿಯುವ ಲಕ್ಷಣವೇ ಕಾಣಲಿಲ್ಲ. ಗಂಟೆಗಟ್ಟಳೆ ನಡೆದೇ ನಡೆಯಿತು. ಇತ್ತ ಹರಾಜು ನಡೆಯುತ್ತಿರುವಂತೆಯೇ ಅತ್ತ ಒಂದು ಉಗಿದೋಣಿ ಬಂದು ನಿಂತಿತು. ಅದಾದ ಎರಡೇ ನಿಮಿಷಗಳಲ್ಲಿ ಒಂದು ಸಣ್ಣ ಗುಂಪು ಜಯಕಾರದ ಕೇಕೆಗಳೊಂದಿಗೆಅಲ್ಲಿಗೆ ಬಂತು. ಆ ಗುಂಪಿನ ಮುಂದೆ ಒಬ್ಬ ಹಿರಿಯ ಹಾಗೂ ಕಿರಿಯ ವ್ಯಕ್ತಿ ನಡೆದು ಬರುತ್ತಿದ್ದರು. ಕಿರಿಯನ ಕೈಗೆ ಪಟ್ಟಿಹಾಕಿ ಕತ್ತಿಗೆ ನೇತುಹಾಕಲ್ಪಟ್ಟಿತ್ತು. ಆತನ ಕೈ ಮುರಿದಿತ್ತಂತೆ. ಅವರಿಬ್ಬರೂ ಬಂದವರೇ ತಾವೇ ಪೀಟರ್ ವಿಲ್ಕ್ಸ್ನ ಸೋದರರೆಂದು ಹೇಳಿಕೊಂಡರು!! ಜನಗಳ ವಿಷಯ ನಿಮಗೆಲ್ಲಾ ಗೊತ್ತು ತಾನೇ? ಈ ಪ್ರಕರಣಕ್ಕೆ ಹೊಸ ತಿರುವು ಬರುತ್ತಿದ್ದಂತೇ, ಜನರೆಲ್ಲಾ ಆ ಇಬ್ಬರು ಹೊಸಬರು ಮತ್ತು ನಮ್ಮ ರಾಜ-ಪಾಳೇಗಾರರ ಸುತ್ತಾ ಗುಂಪು ಕಟ್ಟಿತು. ಬಂದ ಹೊಸಬರಲ್ಲಿ ಹಿರಿಯ ತಾನು ಲಂಡನ್ನಿನಿಂದ ಬರುವಾಗ ತನ್ನ ಚೀಲಗಳು ಕಳುವಾದವೆಂದೂ, ಇಲ್ಲಿಗೆ ಹೇಗೋ ಕಷ್ಟಪಟ್ಟು ಬಂದರೆ, ತನಗೆ ಆಶ್ಚರ್ಯವಾಗುತ್ತಿದೆಯೆಂದೂ ಹೇಳಿದ. ಈ ವಿಷಯ ಎಲ್ಲಾ ಇತ್ಯರ್ಥವಾಗುವವರೆಗೂ ತಾನು ಬೇಕಾದರೆ ಹೋಟೆಲಿನಲ್ಲಿ ಇರುತ್ತೇನೆಂದೂ ಹೇಳಿದ. ಆಗ ಮುಂಚೆ ಮಾತನ್ನಡಿ ಮುಖಭಂಗವನ್ನನುಭವಿಸಿದ್ದ ಡಾಕ್ಟರ್ ಗುಂಪಿನ ಮಧ್ಯೆ ಜಾಗ ಮಾಡಿಕೊಂಡು ಮುಂದೆ ಬಂದು ಸಭೆಯನ್ನುದ್ದೇಶಿಸಿ, ಎತ್ತರದ ದನಿಯಲ್ಲ್ಲಿ "ಸ್ನೇಹಿತರೇ, ಹೊಸದಾಗಿ ಬಂದಿರುವ ಆ ಇಬ್ಬರೂ ನಕಲಿಗಳೋ ಅಲ್ಲವೋ ಹೇಳಲಾರೆ. ಆದರೆ ಈ ಹಳಬರು ನಕಲಿಗಳಲ್ಲವೆಂದು ಹೇಳಿದರೆ ನನ್ನಂಥ ಮುಠ್ಠಾಳ ಇನ್ನೊಬ್ಬನಿರಲಾರ. ಈಗ ನಾವು, ನೆರೆಹೊರೆಯವರು, ಅಸಲಿಗಳು ಯಾರು ಎಂದು ನಿರ್ಧರಿಸಿ, ಅವರಿಗೆ ಈ ಆಸ್ತಿ ಸೇರುವಂತೆ ಮಾಡುವ ಜವಾಬ್ದಾರಿ ಹೊರಬೇಕಾಗಿದೆ. ಅದಕ್ಕಾಗಿ ಇವರೆಲ್ಲರಿಗೂ ತಾವ್ಯಾರೆಂದು ನಿಜವನ್ನು ತಿಳಿಸುವಂತೆ ಮಾಡುವ" ಎಂದವನೇ ಮುಂದೆ ಬಂದು ನನ್ನ ಕೈ ಹಿಡಿದುಕೊಂಡ. ಹೀಗೆ ನಮ್ಮೆಲ್ಲರನ್ನೂ ಬಂಧಿಗಳನ್ನಾಗಿಸಿ, ಹತ್ತಿರದ ಹೋಟೆಲೊಂದಕ್ಕೆ ಕರೆದೊಯ್ದು, ಅಲ್ಲಿನ ನೆಲಮಾಳಿಗೆಯಲ್ಲಿನ ಕೋಣೆಯಲ್ಲಿ ಬಂಧಿಸಿಟ್ಟರು. ಅಲ್ಲಿ ಈ ಡಾಕ್ಟರನೂ, ಮತ್ತೊಬ್ಬ ಸಂಭಾವಿತನೂ ವಿಚಾರಣೆ ಮಾಡಿದರು. ಆಮೇಲೆ ಆ ಸಂಭಾವಿತ ಕೂಡಾ ಪೀಟರ್ ವಿಲ್ಕ್ಸ್ನ ಸ್ನೇಹಿತನೆಂದೂ ವೃತ್ತಿಯಿಂದ ವಕೀಲನೆಂದೂ ತಿಳಿಯಿತು. ಈ ವಿಚಾರಣೆಯಲ್ಲಿ ನಿಜವಾದ ವಿಲಿಯಂ ಹಾರ್ವೇ ಯಾರೆಂದು ತಿಳಿಯಲು ವಕೀಲನೊಂದು ಉಪಾಯ ಮಾಡಿದನು. ಎಲ್ಲರಿಗೂ ಒಂದೊಂದು ಹಾಳೆಯನ್ನು ಕೊಟ್ಟು ಏನನ್ನಾದರೂ ಬರೆಯಿರಿ ಎಂದು ಹೇಳಿದನು. ಎಲ್ಲರೂ ಬರೆದ ನಂತರ ತನ್ನ ಜೇಬಿನಿಂದ ಅಸಲಿ ವಿಲಿಯಂ ಹಾರ್ವೇ ಬರೆದ ಪತ್ರಗಳನ್ನು ತೆಗೆದು ಆ ಕೈಬರಹಕ್ಕೂ ಅಸಲಿ ಕೈ ಬರಹಕ್ಕೂ ಹೋಲಿಸಿ ನೋಡಿದನು. ನಮ್ಮಲ್ಲಿ ಕೈಗೆ ಪಟ್ಟಿ ಕಟ್ಟಿ ಕೊಂಡಿದ್ದ ವ್ಯಕ್ತಿಯನ್ನು ಬಿಟ್ಟು ಉಳಿದವರೆಲ್ಲಾ ಬರೆದರು. ಆದರೆ ಅವನೆಣಿಕೆಯಂತೆ ಯಾವ ಕೈಬರಹವೂ ಅಸಲೀ ಬರಹದ ಜೊತೆಗೆ ಹೊಂದಾಣಿಕೆಯಾಗಲಿಲ್ಲ.! ಆದರೆ ಆ ಕೊಠಡಿಯಲ್ಲಿದ್ದ ಇಬ್ಬರು ವಿಲಿಯಂ ಹಾರ್ವೇಗಳಲ್ಲಿ ಹೊಸಬನು ತಾನು ಎಂದೂ ಪತ್ರ ಬರೆಯುತ್ತಿರಲಿಲ್ಲವೆಂದೂ, ಕೈಗೆ ಪಟ್ಟಿ ಕಟ್ಟಿಕೊಂಡಿದ್ದ ಇನ್ನೊಬ್ಬನಿಂದ ಪತ್ರ ಬರೆಸುತ್ತಿದ್ದೆನೆಂದೂ ಹೇಳಿದನು. ಇದರಿಂದಾಗಿ ಅವರ ಸಮಸ್ಯೆ ಪರಿಹಾರವಾಗದೆ ಮತ್ತಷ್ಟು ಜಟಿಲವಾಯಿತು. ಆದರೆ ಡಾಕ್ಟರ್ ಅಷ್ಟಕ್ಕೆ ಬಿಡದೆ, "ಈ ಹೊಸಜೋಡಿ ಅಸಲಿಯೋ ಅಲ್ಲವೋ ಎಂದು ನಿರ್ಧರಿಸಲು ಇದರಿಂದಾಗದೇ ಇದ್ದರೂ, ಈ ಹಳೇ ಜೋಡಿಯಂತೂ ಅಸಲಿಯಲ್ಲ ಎಂದು ಇದರಿಂದ ನಿರ್ಧರಿಸಬಹುದು" ಎಂದನು. ಯಾರಿಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಅಲ್ಲೊಂದು ಅಸಹನೀಯ ಮೌನ ವ್ಯಾಪಿಸಿಕೊಂಡುಬಿಟ್ಟಿತು. ಪ್ರತಿಯೊಬ್ಬರೂ ಸತ್ಯಶೋಧನೆಗೆ ತಮ್ಮದೇ ಆದ ಮಾರ್ಗ ಹುಡುಕುತ್ತಾ ಇದ್ದು. ಕಡೆಗೆ ಈ ಮೌನವನ್ನು ಹೊಸಜೋಡಿಯಲ್ಲಿದ್ದ ಮುದುಕನೇ ಮುರಿದನು. "ಯಾರಾದರೂ ನನ್ನ ತಮ್ಮನ ಎದೆಯನ್ನು ನೋಡಿದ್ದೀರಾ..??" ಪೀಟರನ ಮರಣಾನಂತರ ಶವವನ್ನು ಹೊರಗೆ ಮಲಗಿಸಿದ ಇಬ್ಬರು, ತಾವು ನೋಡಿದ್ದೇನೆಂದು ಮುಂದೆ ಬಂದರು. "ಸರಿ ಹಾಗಿದ್ದರೇ" ಎಂದವನೇ ನಮ್ಮ ರಾಜ ಮತ್ತು ಪಾಳೇಗಾರನ ಕಡೆ ತಿರುಗಿ "ಪೀಟರನ ಎದೆಯ ಮೇಲೇನಿದೆ?" ಎಂದನು ಈಗ ನಮ್ಮ್ ದೊರೆ ತನ್ನ ತಪ್ಪನೊಪ್ಪಿಕೊಳ್ಳಲೇಬೇಕೆಂದು ನನಗನ್ನಿಸುತ್ತಿತ್ತು. ಆದರೆ ಅವನು ಜಿಜವಾಗಿಯೂ ಭಂಡ. "ಪೀಟರನ ಎದೆಯಲ್ಲೊಂದು ನೀಲೀಬಾಣದ ಗುರುತಿನ ಹಚ್ಚೆಯಿದೆ" ಎಂದು ಸರಾಗವಾಗಿ ಸ್ವಲ್ಪವೂ ತಡವರಿಸಿದೆ ಹೇಳಿಬಿಟ್ಟನು! ಈ ಮಾತನ್ನು ಕೇಳಿ ಹೊಸದಾಗಿ ಬಂದಿದ್ದ ಮುದುಕ ನಸುನಗುತ್ತಾ, ಪೀಟರನ ಎದೆಯನ್ನು ನೋಡಿದ್ದೇವೆಂದು ಹೇಳಿದವರ ಕಡೆ ತಿರುಗಿ" ಏನ್ರಪ್ಪಾ, ನೀವು ನೋಡಿದ್ದು ಪಿ.ಬಿ.ಡಬ್ಲ್ಯು. ಎಂಬ ಅಕ್ಷರಗಳಲ್ಲವೇ?" ಎಮ್ದನು ಆದರೆ ಆ ಇಬ್ಬರೂ ಮಹಾಶಯರೂ ಪೀಟರನ ಎದೆಯ ಮೇಲೆ ಏನೂ ಇರಲಿಲ್ಲ ಎಂದುಬಿಟ್ಟರು. ಮತ್ತೆ ಅಲ್ಲಿ ಕ್ಷಣಕಾಲ ಮೌನ ವ್ಯಾಪಿಸಿತು. ಆ ಮೌನದಿಂದ ಶುರುವಾದ ಪಿಸುಪಿಸು ಗುಸುಗುಸು ಜೋರಾಗುತ್ತಾ ಬಂದು "ಎಲ್ಲರೂ ಮೋಸಗಾರರು, ಎಲ್ಲರನ್ನೂ ನದಿಯಲ್ಲಿ ಮುಳುಗಿಸಿ, ಎಲ್ಲರನ್ನೂ ನೇಣುಹಾಕಿ" ಮುಂತಾದ ಶಬ್ದಗಳೊಂದಿಗೆ ಒಂದು ಸ್ಥಿತಿಗೆ ಬಂದಿತು. ಆದರೆ ತನ್ನ ಎಂದಿನ ಸಮಯಸ್ಪೂರ್ತಿಯೊಂದಿಗೆ ಮೇಲೆದ್ದ ಡಾಕ್ಟರನು "ಹಾಗಿದ್ದರೆ ನಾವು ಹೂತಿಟ್ಟ ಶವಪೆಟ್ಟಿಗೆ ತೆರೆದು ಪರೀಕ್ಷೆ ಮಾಡಿಬಿಡೋಣ" ಎಂದನು. ಈ ಉಪಾಯ ಎಲ್ಲರಿಗೂ ಒಪ್ಪಿಗೆಯಾಯಿತು. ಎಲ್ಲರೂ ಅಲ್ಲಿಂದ ಸ್ಮಶಾನದೆಡೆಗೆ ಹೊರಟೆವು. ಆಹೊತ್ತಿಗಾಗಲೇ ಕತ್ತಲಾಗುತ್ತಿತ್ತು. ಅಲ್ಲದೇ ಮಳೆಯೂ ಶುರುವಾಗಿ ಧಾರಾಕಾರವಾಗಿ ಸುರಿಯಲಾರಂಭಿಸಿತು. ಆಗಸದಲ್ಲಿ ಮಿಂಚುಗಳ ಬೆಳಕಿನ ನರ್ತನ, ಗುಡುಗುಗಳ ಹಿಮ್ಮೇಳದಲ್ಲಿ ಉತ್ಖನನ ನಡೆಯಿತು. ಕಡೆಗೂ ನೆಲದಾಳದಿಂದ ಪೀಟರನ ಶವಪೆಟ್ಟಿಗೆ ಮೇಲೆದ್ದು ಬಂತು. ಎಲ್ಲರೂ ಬಗ್ಗಿ ಬಗ್ಗಿ ಶವಪೆಟ್ಟಿಗೆಯನ್ನೇ ನೋಡಿದರು. ಇನ್ನು ಕೆಲವೇ ಕ್ಷಣಗಳಲ್ಲಿ ಆ ಶವವೇ ಈ ವ್ಯಾಜ್ಯದ ಸಾಕ್ಷ್ಯ ನೀಡಲಿತ್ತು. ಶವಪೆಟ್ಟಿಗೆ ಬಿಚ್ಚುತ್ತಿದ್ದಂತೆಯೇ ಜೋರಾದ ಮಿಂಚೊಂದು ಫಳಕ್ಕನೆ ಮಿಂಚಿತು. ಆ ಬೆಳಕಿನಲ್ಲಿ ........ "ಪೀಟರನ ಎದೆ ಮೇಲೆ ಚಿನ್ನ ತುಂಬಿದ ಚೀಲವಿದೆ..!!!" ಯಾರೋ ಉದ್ವೇಗಗೊಂಡು ಕೂಗಿದರು.!!!೧ ಅಷ್ಟೇ,, ಆ ಜನಸಾಗರದಲೊಂದು ಸಂಚಲನೆ ಶುರುವಾಯ್ತು. ನನ್ನ ಕೈಯನ್ನು ಇದುವರೆಗೂ ಬಿಗಿಯಾಗಿ ಹಿಡಿದಿದ್ದ ವ್ಯಕ್ತಿ, ಈ ಗೊಂದಲದಲ್ಲಿ ತನ್ನ ಹಿಡಿತ ಸಡಲಿಸಿದನು. ಅವನಿಗ್ ಹಣದ ಚೀಲವನ್ನು ನೋಡುವ ಆತುರವಿರುವಂತೆ ಕಂಡಿತು. ಆದರೆ ನನಗಷ್ಟೇ ಅವಕಾಶ ಸಾಕಾಗಿತ್ತು. ಅಲ್ಲಿಂದ ಓಟ ಕಿತ್ತೆ. ನದೀದಡದವರೆಗೂ ಎಲ್ಲಿಯೂ ನಿಲ್ಲಲಿಲ್ಲ. ಅಲ್ಲಿದ್ದ ದೋಣಿಯೊಂದನ್ನೇರಿ ನನ್ನ ತೆಪ್ಪದೆಡೆಗೆ ಹುಟ್ಟುಹಾಕುತ್ತಾ ಹೊರಟೆ. ತೆಪ್ಪದ ಬಳಿ ಬಂದಾಗ "ಜಿಮ್ ಬಿಚ್ಚು., ಮೊದಲಿಲ್ಲಿಂದ ಹೊರಡೋಣ" ಎಂದು ಕೂಗುತ್ತಾ, ತೆಪ್ಪದೊಳಕ್ಕೆ ಹಾರಿದೆ. ಹತ್ತೇ ನಿಮಿಷಗಳಲ್ಲಿ ನಾವು ನದಿಯ ಮೇಲಿನ ನಮ್ಮ್ ಪಯಣವನ್ನು ಚಾಲೂಗೊಳಿಸಿದ್ದೆವು. ಖುಷಿಯಿಂದ ನನಗೆ ಕುಣಿಯುವಂತಾಗಿತ್ತು. ಆಗಲೇ ಏನೋ ಸದ್ದು ಕೇಳಿಸಿತು, ಯಂತ್ರದ ದೋಣಿ ಬರುವಂತಹದ್ದು. ಅದನ್ನೇ ನೋಡಿದೆ. ಅದರಲ್ಲಿ ರಾಜನೂ, ಪಾಳೇಗಾರನೂ ಇದ್ದರು!!! ನನಗೆ ಅಳು ಬಂದುಬಿಟ್ಟಿತು.