೧೩. ಜಿಮ್ ಮತ್ತೆ ಬಂಧಿ.
ಅವರಿಬ್ಬರೂ ದೋಣಿ ಹತ್ತಿದಾಗ, ರಾಜ ನನ್ನ ಬಳಿಗೆ ಬಂದು ಕೊರಳ ಪಟ್ಟಿಯನ್ನು ಹಿಡಿದು "ತಪ್ಪಿಸಿಕೊಂಡು ಹೋಗಬೇಕಂತಿದ್ದೀಯಾ, ನಾಯಿ. ನಾವೆಂದರೆ ಬೇಜಾರಾಯಿತೇನು?" ಎಂದ.
"ಇಲ್ಲ ದೊರೆ, ನಿಮ್ಮಿಂದ ತಪ್ಪಿಸಿಕೊಳ್ಳುವುದೇ, ಅಯ್ಯೋ ಬಿಡಿ ಬಿಡಿ ದೊರೆ.."
"ಹಾಗಿದ್ದರೆ ಹೇಳು, ಇಲ್ಲಿ ಓಡಿ ಬಂದು ಮಾಡುತ್ತಿರುವುದೇನು, ನಿಜ ಹೇಳು ಇಲ್ಲಾಂದ್ರೆ ನಿನಗೆ ಇವತ್ತೊಂದು ಗತಿ ಕಾಣಿಸಿಬಿಡುತ್ತೀನಿ"
"ಆಯ್ಯೋ.. ಧಣಿ, ಅಲ್ಲೇನಾಯ್ತು ಗೊತ್ತಾ?, ಎಲ್ಲಾ ದುಡ್ಡು ನೋಡೋಕೆ ಬಗ್ಗಿದಾಗ ನನ್ನ ಕೈ ಹಿಡಿದುಕೊಂಡಿದ್ದನಲ್ಲಾ ಅವನು, ಅವನಿಗೆ ನನ್ನದೇ ವಯಸ್ಸಿನ ಒಬ್ಬ ಮಗ ಇದ್ದನಂತೆ, ಅವನು ಹೋದ ವರ್ಷ ತಾನೇ ತೀರಿಕೊಂಡನಂತೆ, ನನ್ನ ನೋಡಿದರೆ ಅವನಿಗೆ ಅವನ ಮಗನನ್ನು ನೋಡಿದ ಹಾಗೇ ಅಗುತ್ತಿತ್ತಂತೆ. ಅದಕ್ಕೆ ಅವನು 'ಹುಡುಗಾ ಓಡಿ ಹೋಗಿ ತಪ್ಪಿಸಿಕೋ, ಇಲ್ಲೇ ಇದ್ದರೆ ನಿನಗೆ ನೇಣು ಹಾಕ್ತಾರೆ' ಎಂದ. ಸರಿ ಅಲ್ಲಿಂದ ಓಡಿದವನು ಇಲ್ಲಿಗೆ ಬರ್ಓ ತನಕಾ ನಿಲ್ಲಲಿಲ್ಲ. ಇಲ್ಲಿ ಬಂದವನೇ ಜಿಮ್ಗೆ ಬೇಗ ಹೊರಡಲು ತಯಾರಿ ಮಾಡಲು ಹೇಳಿದೆ. ದೇವರು ದೊಡ್ಡವನು ನೀವೂ ಸಹ ಬಂದು ಸೇರಿಬಿಟ್ಟಿರಿ." ಎಂದೆ.
ದೊರೆ "ಹೌದಾ, ಹಾಗಾದರೆ ನಿನ್ನನ್ನು ಈ ಹೊಳೆಗೆ ಎಸೆದರೆ ಎಲ್ಲಾ ಸರಿಯಾಗುತ್ತದೆ" ಎಂದ. ನಾನು ಹೆದರಿ ನಡುಗಿಬಿಟ್ಟೆ.
ಆದರೆ ಪಾಳೇಗಾರ"ಹೇ ಬಿಡು ಅವನನ್ನ, ನೀನು ತಪ್ಪಿಸಿಕೊಂಡಾಗ ಅವನಿಗಾಗಿ ಏನಾದರೂ ಹುಡುಕಾಡಿದೆಯಾ? " ಎಂದು ಕಿಸಿದ. ಆ ದೊರೆ ನನ್ನನ್ನು ಬಿಟ್ಟು ಆ ಊರಿನ ಎಲ್ಲಾ ನಾಗರಿಕರಿಗೂ ಶಾಪ ಹಾಕತೊಡಗಿದ. ಆದರೆ ಪಾಳೇಗಾರ "ಅಯ್ಯಾ ದೊರೆ, ನಿನ್ನ ಕೆಲಸ ನೀನು ಸರಿಯಾಗಿ ಮಾಡಿದ್ದರೆ, ನಾವೇಕೆ ಸಿಕ್ಕಿಕೊಳ್ಳಬೇಕಿತ್ತು? ನಿನ್ನನ್ನೇ ಮೊದಲು ಬೈದುಕೋ" ಎಂದ.
ಅಲ್ಲಿಗೆ ದೊರೆಯ ಆವೇಶ ತಣ್ಣಗಾಯಿತು. ಒಂದರ್ಧ ಗಂಟೆಯ ಮೌನದ ನಂತರ, ದೊರೆ ಮತ್ತೆ ಮೌನ ಮುರಿಯುತ್ತಾ, "ನಾವೆಲ್ಲಾ ಚಿನ್ನದ ನಾಣ್ಯ ಕದ್ದವರು ಆ ಗುಲಾಮರು ಎಂದುಕೊಂಡಿದ್ದೆವಲ್ಲಾ" ಎಂದ. ಅದಕ್ಕೆ ಪಾಳೇಗಾರ ವ್ಯಂಗವಾಗಿ "ಹೌದು, ನಾನಂತೂ ಹಾಗೇ ಅಂದುಕೊಂಡಿದ್ದೆ" ಅಂದ.
"ಹಾಗಾದ್ರೆ ನಾವು ಬೇರೆ ಥರಾ ಅಂದ್ಕೊಂಡಿದ್ದೆವಾ"
"ನಿನ್ನ ಬಗ್ಗೆ ನನಗ್ಗೊತ್ತಿಲ್ಲ. ಆದರೆ ಕೆಲವರು ಎಲ್ಲಾ ಗೊತ್ತಿದ್ದೂ ಬೇರೆ ಥರಾ ಅಂದ್ಕೋತಾರೆ."
"ಅಂದ್ರೆ ನೀನು ಹೇಳೋದೇನು? ದುಡ್ಡು ನಾನೇ ಕದ್ದು ಬಚ್ಚಿಟ್ಟಿದ್ದೆ ಅಂತಾನಾ"
"ಅದನ್ನ ಬಾಯಿ ಬಿಟ್ಟು ಬೇರೆ ಹೇಳಬೇಕಾ?"
"ನೀನೇ ಕದ್ದು ಅಲ್ಲಿಟ್ಟಿರ್ಬೇಕು. ಅದಕ್ಕೇ ನನ್ನ ಮೇಲೆ ಹೇಳ್ತಾ ಇದೀಯ."
"ಅಯ್ಯೋ ಪಾಪ ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸೋದೇನೂ ಹೊಸದಲ್ಲ ಬಿಡು"
"ಕಳ್ಳ-ಗಿಳ್ಳ ಅಂದ್ರೆ ನಿನ್ನ ಸಿಗಿದು ಹಾಕ್ತೀನಿ."
ಬೆಳೆದ ಮಾತು ಕೈ-ಕೈ ಮಿಲಾಯಿಸುವ ಹಂತಕ್ಕೆ ತಿರುಗಿತು. ಪಾಳೇಗಾರನ ಆರ್ಭಟಕ್ಕೆ ಹೆದರಿದ ದೊರೆ,"ಬಿಡು ಬಿಡು ನಾವಿಬ್ಬರೂ ಕಳ್ಳರಲ್ಲ" ಎಂದನು. ಆಮೇಲೆ ಅಲ್ಲಿ ಮತ್ತೆ ಒಂದರ್ಧ ಗಂಟೆಯ ಮೌನ. ಅವರಿಬ್ಬರೂ ಬೇರೆ ಬೇರೆ ಕಡೆ ಕೂತು ಕುಡಿಯತೊಡಗಿದರು. ಮತ್ತೆ ಅರ್ಧಗಂಟೆಯಲ್ಲೇ ಅವರಿಬ್ಬರೂ ಎಂದಿನಂತೆಯೇ ಉತ್ತಮ ಗೆಳೆಯರಾಗಿಬಿಟ್ಟರು. ಅವರಿಬ್ಬರೂ ಕುಡಿದು ಮತ್ತಿನಲ್ಲಿ ಮಲಗಿದಾಗ ನಾನು ಜಿಮ್ಗೆ ಆ ಊರಿನಲ್ಲಿ ನಡೆದ ಕತೆಯನ್ನೆಲ್ಲಾ ಹೇಳಿದೆ.
ಹಲವಾರು ದಿನಗಳ ಕಾಲ ನಾವು ನಿಲ್ಲದೇ ಪಯಣ ಮಾಡಿದೆವು. ಹತ್ತಿರದ ಸ್ಥಳದಲ್ಲೆಲ್ಲೂ ನಿಲ್ಲಿಸುವಷ್ಟು ಧೈರ್ಯವಿರಲಿಲ್ಲ. ಆ ಊರಿನಿನ್ಂದ ಸಾಕಷ್ಟು ದೂರ ಬಂದ ಮೇಲೆ ಮತ್ತೆ ಏನಾದರೂ ಮಾಡಿ ಹಣ ಸಂಪಾದಿಸುವ ಯೋಚನೆ ಮಾಡಿದ ದೊರೆ-ಪಾಳೇಗಾರರು, ಒಂದು ಊರಿನಲ್ಲಿ ನೃತ್ಯಶಾಲೆ ತೆರೆದರು. ಆದರೆ ಇವರಿಗೆ ಕಾಂಗರೂಗಳಿಗೆ ಬರುವಷ್ಟೂ ನೃತ್ಯ ಬರುವುದಿಲ್ಲವೆಂದು ತಿಳಿದ ಆ ಊರಿನ ಜನ ಅವರನ್ನು ಓಡಿಸಿದರು. ಮತ್ತೊಂದು ಊರಿನಲ್ಲಿ ಪಾದ್ರಿಗಳಂತೆಯೂ, ಇನ್ನೊಂದು ಊರಿನಲ್ಲಿ ಭವಿಷ್ಯ ಹೇಳುವವರಾಗಿಯೂ ಹಣ ಸಂಪಾದನೆಗೆ ಪ್ರಯತ್ನಿಸಿದರೂ, ಅವರಿಗೆ ಅದೃಷ್ಟ ಎಲ್ಲೂ ಒಲಿಯಲಿಲ್ಲ.
ಆಮೇಲೆ ವರಿಬ್ಬರೂ, ನನ್ನನ್ನೂ-ಜಿಮ್ನನ್ನೂ ದೂರವಿಟ್ಟು ಗುಟ್ಟಾಗಿ ಮಾತಾಡುವುದು ಹೆಚ್ಚಾಯಿತು. ಮಧ್ಯೆ-ಮಧ್ಯೆ ನಮ್ಮೆಡೆಗೆ ಬೀರುತ್ತಿದ್ದ ಕಳ್ಳನೋಟದಿಂದ ಈ ಜನ ಏನೋ ಷಡ್ಯಂತ್ರ ರಚಿಸುತ್ತಿದ್ದಾರೆಂದು ನನಗೆ ಖಚಿತವಾಗಿತ್ತು.
ಅದಾದ ತಿಂಗಳೊಪ್ಪತ್ತಿನಲಿ ನಾವು ಪೈಕಿವಿಲ್ಲೀ ಎಂಬ ನಗರದ ಸನಿಹ ಬಂದೆವು. ಆ ಊರಿನಿನ್ಂದ ಎರಡು ಮೈಲುಗಳ ದೂರದಲ್ಲಿ ತೆಪ್ಪವನ್ನು ಅಡಗಿಸಿ ದೊರೆ ಈ ಊರಿನ ಜನಕ್ಕೆ ತಮ್ಮ "ರಾಜಾ-ಶೂನ್ಯಸೇನ" ನಾಟಕದ ಬಗ್ಗೆ ಏನಾದರೂ ತಿಳಿದಿದೆಯೋ ವಿಚಾರಿಸುತ್ತೇನೆಂದು ಹೋದ. ಮಧ್ಯಾಹ್ನದವರೆಗೂ ಅವನು ಹಿಂತಿರುಗಿ ಬರಲಿಲ್ಲವೆಂದರೆ, ಎನೂ ತೊಂದರೆಯಿಲ್ಲವೆಂದೂ, ನಾನೂ ಪಾಳೇಗಾರನೂ ನಗರ ಪ್ರವೇಶ ಮಾಡಬಹುದೆಂದೂ ನಮ್ಮ ಒಡಂಬಡಿಕೆಯಾಗಿತ್ತು.
ಮಧಾಹ್ನದವರೆಗೂ ನಮ್ಮ ದೊರೆ ಬರಲಿಲ್ಲ. ನಾನೂ ಪಾಳೇಗಾರನೂ ಒಪ್ಪಂದದಂತೆ ನಗರಕ್ಕೆ ಹೋದೆವು. ಅಲ್ಲೊಂದು ಮದ್ಯದಂಗಡಿಯ ಮುಂದೆ ದೊರೆ ಕುಡಿದು ಗಲಾಟೆ ಮಾಡುತ್ತಿದ್ದ. ಅವನ ಸುತ್ತಾ ಒಂದಷ್ಟು ಪುಂಡರು ಸೇರಿದ್ದರು. ಪಾಳೇಗಾರ ದೊರೆಗೆ ಬೈದ. ದೊರೆಯು ಪಾಳೇಗಾರನ ಮೇಲೆ ಬಿದ್ದ. ಅವರಿಬ್ಬರಿಗೂ ಅಲ್ಲಿ ಜಟಾಪಟಿ ಶುರುವಾಯಿತು. ನಾನು ಓಡಿ ನಮ್ಮ ತೆಪ್ಪದ ಬಳಿಗೆ ಬಂದೆ.
"ಜಿಮ್, ಹೊರಡು ಬೇಗ ಹೊರಟುಹೋಗೋಣ, ಕಡೆಗೂ ಆ ಪೀಡೆಗಳ ಕಾಟದಿಂದ ತಪ್ಪಿಸಿಕೊಂಡೆವು"
ಉತ್ತರ ಬರಲಿಲ್ಲ. ತೆಪ್ಪದ ಬಳಿ ಯಾರೂ ಇರಲಿಲ್ಲ!!!
ನಾನು ಹುಚ್ಚನಂತೆ ಎಲಾ ಕಡೆ ಹುಡುಕಿದೆ. ಕೂಗಿದೆ, ಕಿರುಚಿದೆ, ಆದರೆ ಜಿಮ್ ಅಲ್ಲೆಲ್ಲೂ ಇರಲೇ ಇಲ. ಕುಸಿದು ಕುಳಿತು ಅತ್ತೆ. ಆದರೆ ಬೇರೇನೂ ಮಾಡುವಂತೆ ಇರಲಿಲ್ಲ. ನಿಧಾನವಾಗಿ ನಗರದ ಕಡೆಗೆ ಹೊರಟೆ.ದಾರಿಯಲ್ಲೊಬ್ಬ ಹುಡುಗ ಹೊಗುತ್ತಿದ್ದ. ಅವನನ್ನು ನಿಲ್ಲಿಸಿ ಕೇಳಿದೆ. "ಗುರೂ, ಇಲ್ಲಿ ಯಾರಾದರೂ ಗುಲಾಮನನ್ನ ಕಂಡೆಯಾ" ಜಿಮ್ನ ದೇಹ ಲಕ್ಷಣಗಳನ್ನು ಅವನಿಗೆ ವಿವರಿಸಿದಾಗ, ಅವನು "ಹೌದು, ಸಿಲಾಸ್ ಫ಼ೆಲ್ಪ್ನ ಮನೆಯ ಬಳಿ ಅವನನ್ನು ಕಂಡೆ. ಅವನ ಮ್ನೆ ಇಲ್ಲಿಂದ ಎರಡು ಮೈಲಿಗಳಾಗುತ್ತವೆ, ಇದೇ ದಾರಿಯಲ್ಲಿ ಹೋದರೆ. ಅವನೇನೋ ಓಡಿಬಂದ ಗುಲಾಮನಂತಲ್ಲ. ಅವನನ್ನು ನಮ್ಮ ಊರವರು ಹಿದಿದುಬಿಟ್ಟರು." ಅವನ ಧ್ವನಿಯಲ್ಲಿ ಹೆಮ್ಮೆಯಿತ್ತು.
"ಅವನನ್ನು ಹಿಡಿದವರು ಯಾರು?" ತೀಕ್ಷ್ಣವಾಗಿ ಕೇಳಿದೆ.
"ಒಬ್ಬ ಬೋಳುತಲೆಯ ಅಪರಿಚಿತ. ಅವನೇ ಸಿಲಾಸನಿಗೆ ಈ ಬಗ್ಗೆ ಮಾಹಿತಿ ಕೊಟ್ಟದ್ದು. ಅವನಿಗೆ ಸಿಲಾಸ್ ನಲವತ್ತು ಡಾಲರ್ ಕೊಟ್ಟ. ಅದೇ ಆ ಮುದುಕನೇ ಹಿಡಿದಿದ್ದರೆ ಅವನಿಗೆ ಇನ್ನೂರು ಡಾಲರ್ಗಳಾದರೂ ಸಿಗುತ್ತಿತ್ತು. ಅವನಿಗೆಲ್ಲೋ ಹುಚ್ಚಿರಬೇಕು."
ಅವನಿಗೆ ಕೃತಙ್ಞತೆ ತಿಳಿಸಿ, ತೆಪ್ಪದೆಡೆಗೆ ತೆರಲಿ, ತಣ್ಣಗೆ ಕುಳಿತು ಚಿಂತಿಸಿದೆ.
ಈ ಇಬ್ಬರೂ ಖೂಳರೂ ನನ್ನ ಜಿಮ್ನನ್ನು ಹಿಡಿದುಕೊಟ್ಟಿದ್ದರು. ನಾವು ಅವರಿಗಾಗಿ ಮಾಡಿದ್ದೆಷ್ಟು? ಅದಕ್ಕೆ ಸರಿಯಾದ ಬಹುಮಾನ ನೀಡಿದ್ದರು. ನಲವತ್ತು ಡಾಲರುಗಳ ಕೊಳಕು ಹಣಕ್ಕೆ ಕೊಳಕು ಕೆಲಸ ಮಾಡಿದ್ದರು.
ಅವರ ಬಗ್ಗೆ ಹೆಚ್ಚು ಯೋಚಿಸಲು ಮನಸ್ಸಾಗಲಿಲ್ಲ. ಮನಸ್ಸು ಜಿಮ್ ಕಡೆಗೆ ಹರಿಯಿತು. ಜಿಮ್ ಗುಲಾಮನಾಗಿಯೇ ಇರಬೇಕೆಂದರೆ ಅವನು ಮನೆಯಲ್ಲೇ ಇರಬಹುದು. ಶ್ರೀಮತಿ ವ್ಯಾಟ್ಸನ್ ಸಹ ತುಂಬಾ ಒಳ್ಳೆಯ ಹೆಂಗಸು. ಆಕೆಗೊಂದು ಪತ್ರ ಬರೆದು ಜಿಮ್ ಎಲ್ಲಿದ್ದಾನೆಂದು ತಿಳಿಸಲೇ ಎಂದು ಯೋಚಿಸಿದೆ. ಆದರೆ ಶ್ರೀಮತಿ ವ್ಯಾಟ್ಸನ್ ಮೊದಲಿನಂತೆ ಜಿಮ್ನನ್ನು ನೋಡಿಕೊಳ್ಳುತ್ತಾರೆಂದು ಏನು ಖಚಿತ? ಅಲ್ಲದೆ ಜನ ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ? ಹಕಲ್ಬೆರಿ ಫ಼ಿನ್ ಓಡಿಹೋಗುವ ಗುಲಾಮರಿಗೆ ಸಹಾಯ ಮಾಡುತ್ತಾನೆ" ಅಂದರೆ ನನ್ನ ಗೌರವ ಏನಾಯಿತು.
ಆಗ ನನಗೆ ಜಿಮ್ನ ಬಗ್ಗೆ ಕೋಪ ಬಂದಿತು. ಶ್ರೀಮತಿ ವ್ಯಾಟ್ಸನ್ನಳ ಮನೆಯಿಂದಲೇ ಓಡಿ ಬರಬೇಕೆಂ ಅವನೆಂತಹ ಕೃತಘ್ನನಿರಬೇಕು. ಕೂಡಲೇ ಶ್ರೀಮತಿ ವ್ಯಾಟ್ಸನ್ನರಿಗೊಂದು ಕಾಗದ ಬರೆದೆ. ಅದರಲ್ಲಿ ಜಿಮ್ ಇರುವ ಜಾಗವನ್ನು ತಿಳಿಸಿ, ಒಂದಿಷ್ಟು ಹಣ ಕಳಿಸಿದರೆ ಆಕೆ ಮತ್ತೆ ಜಿಮ್ನನ್ನು ಪಡೆಯಬಹುದೆಂದು ಬರೆದಿದ್ದೆ. ಪತ್ರ ಬರೆದು ಮುಗಿಸಿದ ಮೇಲೆ, ಅದನ್ನೊಮ್ಮೆ ಓದಿದೆ. ತೃಪ್ತಿಕರವಾಗಿತ್ತು. ಆದರೆ ಅಷ್ಟರಲ್ಲೇ ಇನ್ನೊಂದಿಷ್ಟು ಆಲೋಚನೆಗಳು ಮುತ್ತಿಕೊಂಡವು. ಜಿಮ್ ನಾನೂ ಹೊಳೆಯುದ್ದಕ್ಕೂ ಪಯಣಿಸಿದ್ದು ನೆನಪಿಗೆ ಬಂತು. ಹಲವಾರು ತಿಂಗಳುಗಳು ನಾವಿಬ್ಬರೂ ಒಟ್ಟಿಗಿದ್ದೆವು. ನಕ್ಕಿದ್ದೆವು, ಹಾಡಿದ್ದೆವು, ಮಾತಾಡಿದ್ದೆವು. ಅವನೊಮ್ಮೆ ನನಗಾಗಿ ತನ್ನ್ ಜೀವವನ್ನೇ ಪಣವಾಗಿಟ್ಟಿದ್ದ. ಯಾವಗಲೂ ನನ್ನನ್ನು ಮಗೂ ಎಂದೋ ಧಣಿ ಎಂದೋ ಕರೆಯುತ್ತಿದ್ದ. ಅವನಿಗಿರುವ ಏಕೈಕ ಸ್ನೇಹಿತನೆಂದರೆ ನಾನೇ ಎಂದು ಹೇಳಿದ್ದ. ಹಾಗಿದ್ದರೆ ಸ್ನೇಹವೆಂದರೇನು? ನನಗಾಗಿ ಅವನು ಜೀವದಾಸೆ ಬಿಟ್ಟು ದುಡಿದಿರಬೇಕಾದರೆ, ಅವನನ್ನು ನಾನೀಗ ಏಕೆ ರಕ್ಷಿಸಬಾರದು?
ಅಷ್ಟೇ ಮುಂದೇನೂ ಯೋಚಿಸಲಿಲ್ಲ. ಕೈಲಿದ್ದ ಪತ್ರವನ್ನು ಹರಿದೆಸೆದೆ. ಅಲ್ಲೇ ತೋಪಿನಲ್ಲೇ ಅಂದು ರಾತ್ರಿ ಮಲಗಿ ನಿದ್ರಿಸಿದೆ.
ಬೆಳಿಗ್ಗೆ ಕಟ್ಟಿದ್ದ ತೆಪ್ಪವನ್ನು ಬಿಚ್ಚಿ ಅಲ್ಲಿಂದ ಎರಡು ಮೈಲಿ ದೂರದ ಬೇರೊಂದು ಸ್ಠಳದಲ್ಲಿ ಕಟ್ಟಿದೆ. ಮತ್ತು ನಿಧಾನವಾಗಿ ಆ ನಗರ ಪ್ರವೇಶಿಸಿದೆ.
ಅಲ್ಲಿ ನನಗೆ ಕಣ್ಣಿಗೆ ಕಂಡ ಮೊದಲ ಪುರುಷ, ನಮ್ಮ ಪಾಳೇಗಾರನೇ. ಅವನು ರಾಜಾಶೂನ್ಯಸೇನ ನಾಟಕದ ಕರಪತ್ರ ಅಂಟಿಸುವಲ್ಲಿ ಮಗ್ನನಾಗಿದ್ದ. ನನ್ನನ್ನು ನೋಡಿ,
"ಇದುವರೆಗೂ ಎಲ್ಲಿ ಹಾಳಾಗಿದ್ದೆ, ತೆಪ್ಪವನ್ನು ಸುರಕ್ಷಿತ ಸ್ಥಳದಲ್ಲಿಟ್ಟುರುವೆಯಾ?" ಎಂದ.
"ಯಾಕೆ, ಆ ವಿಷಯಾನ, ನಾನೇ ನಿನ್ನ ಹತ್ತಿರ ಕೇಳಬೇಕು ಅಂತಿದ್ದೆ."
"ಅಂದ್ರೆ, ನೀನು ಹೇಳೋದರ ಅರ್ಥ?"
ನಿನ್ನೆ, ನಿನ್ನೂ, ರಾಜನ್ನೂ ಬಿಟ್ಟು ನದೀ ಹತ್ತಿರ ಹೋದರೆ ಅಲ್ಲಿ ತೆಪ್ಪ ಇರಲಿಲ್ಲ. ಜಿಮ್ ಕೂಡಾ ಇರಲಿಲ್ಲ. ಯಾರೋ ನನ್ನ ತೆಪ್ಪಾನೂ, ಗುಲಾಮನನ್ನೂ ಕದ್ದಿದ್ದಾರೆ."
"ನಿನ್ನ ಗುಲಾಮ ಎಲ್ಲಿದ್ದಾನೇಂತ ಗೊತ್ತು. ರಾಜ ಅವನ್ನ ನಲವತ್ತು ಡಾಲರ್ಗಳಿಗೆ ಮಾರಿಕೊಂಡ."
"ಮಾರಿಕೊಂಡ..." ಹೇಳುತ್ತಾ ನನಗೆ ಅಳುವೇ ಬಂದುಬಿಟ್ಟಿತು. ತಡೆದುಕೊಳ್ಳುತ್ತಾ ಕೇಳಿದೆ "ಅದು ಹೇಗೆ ಸಾಧ್ಯ? ಜಿಮ್ ನನ್ನ ಗುಲಾಮ. ನನಗೀಗ ನನ್ನ್ ಗುಲಾಮ ವಾಪಸ್ಸು ಬೇಕು."
"ಅದಕ್ಯಾಕೆ ಗಂಟಲು ಹರ್ಕೋತೀಯಾ ಅದೀಗ ಆಗೋಹೋಗೋ ಮಾತಲ್ಲ. ನೋಡಿಲ್ಲಿ ನಮ್ಮ ನಾಟಕದ ವಿಷಯಾನ ನೀನು ಇಲ್ಲಿ ಯಾರ ಹತ್ರನಾದ್ರೂ ಹೇಳಿದೀಯಾ?"
"ನನಗ್ಯಾಕೆ ಆ ವಿಷಯ, ನಾನೀಗ ನನ್ನ ಗುಲಾಮನನ್ನು ಹುಡುಕಬೇಕು. ನನ್ನ ಮುಂದಿರುವ ಕೆಲಸ ಅದೊಂದೇ"
ಚಿಂತಾಕ್ರಾಂತನಂತೆ ಕಂಡ ಪಾಳೇಗಾರ.... ಒಂದೆರಡು ಕ್ಷಣಗಳ ನಂತರ ನುಡಿದ. "ನೋಡು ನಮ್ಮ ವಿಷಯ ನೀನಾರಿಗೂ ಹೇಳೊದಿಲ್ಲ ಅಂದರೆ ನಿನ್ನ ಗುಲಾಮ ಎಲ್ಲಿದಾನೇಂತ ನಾನು ಹೇಳ್ತೀನಿ"
"ಕಂಡಿತಾ, ನಿಮ್ಮ ವಿಷಯ ಕಟ್ಕೊಂಡು ನನಗೇನಾಗಬೇಕು"
"ಸರಿ, ಯಾರೋ ಒಬ್ಬ ಜಮೀನ್ದಾರ. ಅವನಾ ಹೆಸ್ರು ಸಿಲಾಸ್..." ನಿಜ ಹೇಳಲು ತೆರೆದಿದ್ದ ಅವನ ಬಾಯಿ ಮುಚ್ಚಿತು. ಕೆಲವೇ ಸೆಕೆಂಡುಗಳ ಮೌನದ ನಂತರ ಮಾತು ಮುಂದುವರೆಸಿದ. "ಅವನ ಹೆಸರು ಅಬ್ರಹಾಂ, ಅಬ್ರಹಾಂ ಫ಼ಾಸ್ಟರ್ ಅಂತ. ಇದೇ ದಾರಿಯಲ್ಲಿ ಹೋದರೆ ಅವನ ಜಮೀನಿಗೆ ನಲವತ್ತು ಮೈಲಿಗಳಾಗುತ್ತವೆ.
"ಅಷ್ಟು ದೂರ ನಡೆಯೋಕೆ ನನಗೆ ಮೂರು ದಿನ ಸಾಕು. ಸ್ವಲ್ಪ ಬಿಸಿಲು ಕಮ್ಮಿ ಆಗ್ತಿದ್ದ ಹಾಗೇ ನಾನು ಹೊರಡ್ತೀನಿ."
"ಬೇಡ ನೀನು ಈಗಲೇ ಹೊರಡಬೇಕು. ನಿನ್ನಿಂದ ನಮಗೇನೂ ತೊಂದರೆ ಆಗಬಾರದು ನೋಡು ಅದಕ್ಕೆ"
"ಸರಿ" ಎಂದು ಹೇಳಿದವನೇ ಅಲ್ಲಿಂದ ಹೊರಟೆ. ಅವನು ನನ್ನನ್ನೇ ನೋಡುತ್ತಿದ್ದ. ಅವನು ತೋರಿಸಿದ ದಾರಿಯಲ್ಲೇ ಒಂದೆರಡು ಫ಼ರ್ಲಾಂಗುಗಳಷ್ಟು ದೂರ ನಡೆದೆ. ಅವರಿಂದ ನನಗೆ ಯಾವ ತೊಂದರೆಯೂ ಆಗದಿದರೆ ಸಾಕಿತ್ತು. ಇನ್ನು ಈ ಜನ್ಮದಲ್ಲೇ ಅವರುಗಳ ಮುಖ ನೋಡಬಾರದೆಂಬಷ್ಟು ಅಕ್ರೋಶ ನನಗಾಗಿತ್ತು.
ಆನಂತರ ದಾರಿ ಬದಲಿಸಿ ಸಿಲಾಸ್ ಫ಼ೆಲ್ಪನ ತೋಟದೆಡೆಗೆ ನಡೆಯತೊಡಗಿದೆ.