೧೫. ಸಂಚಿನ ಸುಳಿ.
ಇಲ್ಲಿವರೆಗೂ ನಾವು ಜಿಮ್ನನ್ನು ಕಂಡಿರಲಿಲ್ಲ. ಅಲ್ಲದೇ ನಮಗೆ ಜಿಮ್ ಗೊತ್ತೆಂದೂ ಸಿಲಾಸ್ನಿಗೂ ತೋರಿಸಿಕೊಂಡಿರಲಿಲ್ಲ. ಈ ಕಾರಣದಿಂದ ನಮ್ಮ್ ಮಾತುಕತೆ ಸುತ್ತಾಟ ಎಲ್ಲಾ ಜಿಮ್ ಎಲ್ಲಿದ್ದಾನೆಂದು ಹುಡುಕುವುದರಲ್ಲಿಯೇ ಕಲೆಯಿತು. ಕಡೆಗೂ ಬೇಲಿಗೆ ಹೊಂದಿಕೊಂಡ ಮರದ ಕ್ಯಾಬಿನ್ನಿನಲ್ಲಿ ಜಿಮ್ ಇದ್ದಾನೆಂದು ತಿಳಿದಾಗ ಅವನ ಬಿಡುಗಡೆಯ ಯೋಜನೆಯ ತಯ್ಯಾರಿ ನಡೆಯಿತು. ಜಿಮ್ ಇದ್ದಾನೆಂದು ನಮಗೆ ತಿಳಿದದ್ದು, ಆ ಕ್ಯಾಬಿನ್ನಿಗೆ ಸಮಯಕ್ಕೆ ಸರಿಯಾಗಿ ಸೇವಕರು ಊಟ ತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದುದರಿಂದ. ಜಿಮ್ನನ್ನು ನಾವಿನ್ನೂ ಕಂಡಿರಲಿಲ್ಲ. ನಾನು "ಅಡಗಿಸಿಟ್ಟಿರುವ ತೆಪ್ಪವನ್ನು ಹತ್ತಿರಕ್ಕೆ ತಂದು ಸಿದ್ದವಾದರೆ, ಚಿಕ್ಕಪ್ಪನ ಜೇಬಿನಿಂದ ಕ್ಯಾಬಿನ್ನಿನ ಬೀಗ ಕದ್ದು, ಜಿಮ್ನನ್ನು ಬಿಡಿಸಿ ಕರೆದುಕೊಂಡು ಓಡಿ ಬಿಡುವುದು. ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪ್ರಯಾಣ ಮಾಡಿದರೆ ಸಾಕಲ್ಲವಾ?" ಎಂದೆ.
ಆದರೆ ಟಾಮ್ ಮಹತ್ವಾಕಾಂಕ್ಷಿ."ಯೋಜನೆ ಇಷ್ಟು ಸರಳವಾದರೆ ಕೆಲಸ ಮಾಡಲು ರೋಮಾಂಚನವಾದರೂ ಎಲ್ಲಿರುತ್ತೆ? ಅದಕ್ಕೇ ನನ್ನ ಬಳಿ ಇನ್ನೊಂದು ಕಷ್ಟಕರ ಯೋಜನೆ ಇದೆ. ಸ್ವಲ್ಪ ತಡಿ ಹೇಳ್ತೀನಿ" ಎಂದ. ಅವನ ಯೋಜನೆಯನ್ನು ಈಗ ಕೇಳಿದರೂ ಪ್ರಯೋಜನವಿಲ್ಲ. ಪ್ರತೀ ಐದು ನಿಮಿಷಗಳಿಗೊಮ್ಮೆ ಅದು ಬದಲಾಗುತ್ತಾ ಇರುತ್ತದೆ ಎಂದು ನನಗರಿವಿತ್ತು.
ಅಂದು ಸಂಜೆ ನಿಜವಾಗಿಯೂ ಜಿಮ್ ಅದೇ ಕ್ಯಾಬಿನ್ನಿನಲ್ಲಿದ್ದಾನೆಯೋ ಇಲ್ಲವೋ ಪರೀಕ್ಷಿಸಲೆಂದು ಹೋದೆವು. ಅಲ್ಲಿನ ನಾಯಿಗಳೆಲ್ಲವೂ ನಮಗಾಗಲೇ ಪರಿಚಿತವಾದ್ದರಿಂದ ಅವ್ಯಾವುವೂ ನಮ್ಮನ್ನು ಕಂಡು ಬೊಗಳಲಿಲ್ಲ. ಆ ಕ್ಯಾಬಿನ್ನಿನ ಸುತ್ತಾ ತಿರುಗಿ ಬಂದ ನಮಗೆ, ಕ್ಯಾಬಿನ್ನಿನ ಎಡಭಾಗದಲ್ಲಿದ್ದ ಕಿಟಕಿ ಕಾಣಿಸಿತು. ಸಾಕಷ್ಟು ಎತ್ತರದಲ್ಲಿದ್ದರೂ, ಆ ಕಿಟಕಿ ವಿಶಾಲವಾಗಿತ್ತು. ಅದಕ್ಕೆ ಅಡ್ಡಲಾಗಿ ಹಲಗೆಯೊಂದನ್ನು ಜಡಿಯಲಾಗಿತ್ತು. ಅಲ್ಲಿಂದ ಜಿಮ್ನನ್ನು ಈಚೆ ತರುವುದು ಸಾಧ್ಯವಿತ್ತು. ಅದನ್ನು ಹೇಳಿದೆ.
"ಅದಂತೂ ತುಂಬಾ ಸುಲಭ. ಹಕ್.. ಇನ್ನೂ ಕಷ್ಟ ಇರೋ ದಾರಿಯಲ್ಲಿ ಜಿಮ್ನನ್ನು ಈಚೆ ತರಬೇಕು" ಎಂದುಬಿಟ್ಟ ಟಾಮ್.
ಇನ್ನೊಂದಿಷ್ಟು ಸುತ್ತಾಟದ ನಂತರ ಜಿಮ್ನ ಕ್ಯಾಬಿನ್ನಿನ ಪಕ್ಕದಲ್ಲಿದ್ದ ಶೆಡ್ ಒಂದರ ಒಳಹೊಕ್ಕೆವು. ಅಲ್ಲಿ ಟಾಮ್ "ಹಕ್, ಈಗ ನನಗೊಂದು ಉಪಾಯ ಹೊಳೆಯಿತು. ನಾವು ಜಿಮ್ನನ್ನು ಅಗೆದು ತೆಗೆಯೋಣ" ಎಂದ. ಅಂದರೆ ಕ್ಯಾಬಿನ್ನಿನಿಂದ ಶೆಡ್ವರೆಗೆ ಒಂದು ಸುರಂಗ ತೋಡುವುದು. ಈ ಕೆಲಸಕ್ಕೆ ಕಡೇ ಪಕ್ಷವೆಂದರೂ ಒಂದು ವಾರ ಬೇಕು. ಟಾಮ್ ನಿಧಾನವಾದರೂ ತೊಂದರೆ ಇಲ್ಲ. ಇದೇ ದಾರಿ ಅನುಸರಿಸಬೇಕೆಂದು ಹೇಳಿದ.
ಮಾರನೇ ದಿನ ಬೆಳಿಗ್ಗೆ ನಾನು ಮತ್ತು ಟಾಮ್ ಜಿಮ್ ಇದ್ದಾನೆಂದು ಊಹಿಸಿದ ಕ್ಯಾಬಿನ್ನಿನ ಬಳಿಗೆ ಹೋದೆವು. ಅಷ್ಟರಲ್ಲಾಗಲೇ ಅಲ್ಲಿಗೆ ಊಟೋಪಚಾರದ ಹೊಣೆ ಹೊತ್ತಿದ್ದ ಗುಲಾಮನೊಡನೆ ಸ್ನೇಹ ಗಳಿಸಿದ್ದೆವು. ಅವನು ಅಲ್ಲಿಗೆ ಊಟ ತರುವಾಗ, ಟಾಮ್ "ಯಾರಿಗೆ ಊಟ ನಾಯಿಗಳಿಗಾ..?" ಎಂದ.
ಅದಕ್ಕವನು ನಸುನಗುತ್ತಾ "ಹ್ಞೂ. ಒಂದು ನಾಯಿಗೆ, ಅವನ್ನ ನೀವು ನೋಡ್ತೀರಾ?"
"ಹ್ಞೂ"
ನಾವು ಒಳಗೆ ಹೋದಾಗ ಆ ಕ್ಯಾಬಿನ್ನಿನಲ್ಲಿ ಕತ್ತಲೆ ತುಂಬಿತ್ತು. ಏನೂ ಕಾಣುತ್ತಿರಲಿಲ್ಲ. ಆದರೆ ಒಳಗಿದ್ದ ಜಿಮ್ ಕತ್ತಲಿಗಾಗಲೇ ಕಣ್ಣು ಹೊಂದಿಸಿಕೊಂಡಿದ್ದರಿಂದ ನಮ್ಮನ್ನು ನೋಡಿ "ಹಕ್.. ದೇವರು ದೊಡ್ಡವನು... ಅದು ಟಾಮ್ ಅಲ್ಲವಾ?" ಎಂದ. ಅವನು ಹಾಗೇ ಮಾಡುತ್ತಾನೆಂದು ನನಗೆ ಗೊತ್ತಿತ್ತು. ಆ ಸಮಯದಲ್ಲಿ ಏನು ಉತ್ತರ ಕೊಡಬೇಕೆಂದು ನನಗೆ ಗೊತ್ತಿರಲಿಲ್ಲ. ಹಾಗಾಗಿ ಮೌನ ತಾಳಿದೆ. ಆದರೆ ಎಲ್ಲರಿಗಿಂತ ಆಶ್ಚರ್ಯವಾಗಿದ್ದು, ನಮ್ಮೊಡನಿದ್ದ ಊಟ ತಂದುಕೊಡುತ್ತಿದ್ದ ನೀಗ್ರೋ ಗುಲಾಮನಿಗೆ.
"ಅರೇ ಅವನು ನಿಮಗೆ ಗೊತ್ತಾ?"
ಟಾಮ್ ಆ ಗುಲಾಮನೆಡೆಗೆ ವಿಚಿತ್ರವಾಗಿ ನೋಡುತ್ತಾ ಕೇಳಿದ"ಯಾರು?'
"ಈ ಓಡಿಹೋಗಿದ್ದ ಗುಲಾಮ"
"ನನಗೇನೋ ಗೊತ್ತಿಲ್ಲ. ಆದರೆ ನಿನಗೆ ಹಾಗಂತ ಯಾರು ಹೇಳಿದರು.?"
"ಅಯ್ಯೋ ಈಗ ನಿಮ್ಮನ್ನು ನೋಡಿ ಅವನು ನಿಮ್ಮ ಹೆಸರು ಹೇಳಲಿಲ್ಲವಾ?"
"ಏನು ತಲೆ ಕೆಟ್ಟಿದೆಯಾ ನಿನಗೆ, ಯರೂ ನಮ್ಮನ್ನು ಮಾತಾಡಿಸಲಿಲ್ಲವಲ್ಲಾ" ಎಂದವನು ನನ್ನ ಕಡೆ ತಿರುಗಿ " ಟಾಮ್, ನಿನಗೇನಾದರೂ ಕೇಳಿಸಿತಾ?"
"ಇಲ್ಲವಲ್ಲಾ ಸಿದ್"
ಜಿಮ್ನ ಕಡೆ ತಿರುಗಿ"ನೀನೇನಾದರೂ ಮಾತಾಡಿದೆಯಾ?"
"ಇಲ್ಲವಲ್ಲ ಧಣೀ"
ಟಾಮ್ ಮತ್ತೆ ನೀಗ್ರೋ ಗುಲಾಮನೆಡೆ ತಿರುಗಿ "ಏನಾಗ್ತಾ ಇದೆ ನಿನಗೆ?" ಅಂದ.
"ದೇವ್ರೇ, ದೇವ್ರೇ... ಮತ್ತೆ ಆ ಮಾಟದ ದೆವ್ವ. ನಾನು ಸತ್ತು ಹೋಗ್ತೀನಿ ಧಣೀ... ಇದೇ ತರಾ ಆ ದೆವ್ವ ನನಗೆ ಕಾಟ ಕೊಡ್ತಾನೇ ಇದೆ. ಧಣೀ ದಯವಿಟ್ಟು ಈ ವಿಷಯಾನ ಯಾರಿಗೂ ಹೇಳಬೇಡಿ"
"ಹಾಗೇ ಆಗಲಿ" ಎಂದ ಟಾಮ್ ಅವನ ಮನಸ್ಸಂತೋಷ ಪಡಿಸಲು ಅವನಿಗೊಂದು ಡೈಮ್ ಕೊಟ್ಟ. ಮತ್ತು ನಾವು ಯಾವಾಗಲಾದರೊಮ್ಮೆ ಅಲ್ಲಿಗೆ ಬರುತ್ತಿರುತ್ತೇವೆಂದು ಹೇಳಿದ.
ಮುಂದಿನ ದಿನಗಳು ಬಹಳ ಚಟುವಟಿಕೆಯವು. ಜಿಮ್ನ ಬಿಡುಗಡೆಗೆ ಟಾಮ್ನ ಮಿದುಳ ಕುಲುಮೆ ನೂರಾರು ಉಪಾಯಗಳ ಎರಕ ಹೊಯ್ಯುತ್ತಿತ್ತು. ಮಂಚದ ಕಾಲಿಗೆ ಜಿಮ್ನನ್ನು ಸರಪಳಿಯಿಂದ ಇಗಿಯಲಾಗಿತ್ತು. ಮಂಚವನ್ನು ಸ್ವಲ್ಪ ಮೇಲೆತ್ತಿ ಆ ಸರಪಳಿ ಮಂಚದಿಂದ ಬಿಡಿಸಿಕೊಳ್ಳುವಂತೆ ಮಾಡಬಹುದಿತ್ತು. ಆ ಕೆಲಸಕ್ಕೆ ನಾವು ಮೂವರು ಸಾಕಾಗಿತ್ತು. ಆದರೆ ಟಾಮ್ ಮಂಚದ ಕಾಲು ಕಡಿಯುವುದೇ ಒಳ್ಳೆಯ ದಾರಿ. ಎಂದ. ಅಷ್ಟೇ ಅಲ್ಲ, ಹಾಗೆ ಮಾಡುವಾಗ ಉದುರುವ ಮರದ ಹೊಟ್ಟನ್ನು ಜಿಮ್ ತಿಂದುಬಿಡಬೇಕೆಂದೂ, ಹಾಗೆ ಮಾಡುವುದರಿಂದ ಮಂಚ ಕತ್ತರಿಸುವುದು ಯಾರಿಗೂ ತಿಳಿಯುವುದಿಲವೆಂದೂ ತಿಳಿಸಿದ. ಇದಕ್ಕೂ ಮುಂಚೆ ಟಾಮ್ ಹೇಳಿದ್ದು ಜಿಮ್ನ ಕಾಲನ್ನೇ ಕತ್ತರಿಸಬೇಕೆಂದು. ಆದರೆ ಜಿಮ್ ಇದಕ್ಕೆ ಒಪ್ಪಲಿಲ್ಲವಾದ್ದರಿಂದ ಟಾಮ್ ಮಂಚದ ಕಾಲು ಕತ್ತರಿಸಲು ಹೇಳಿದ್ದು.
"ಅಷ್ಟೇ ಅಲ್ಲ, ನಮಗೊಂದು ಹಗ್ಗದ ಏಣಿ ಬೇಕು! " ಟಾಮ್ ಘೋಷಿಸಿದಾಗ ನನಗೆ ಅಘಾತವಾಯಿತು. "ಟಾಮ್, ನಮಗಿಲ್ಲಿ ಏಣಿಯಾದರೂ ಏಕೆ ಬೇಕು?" ಎಂದು ಕೇಳಿದೆ. "ಏಕೆಂದರೆ ಎಲ್ಲಾ ಕೈದಿಗಳೂ ಏಣಿ ಬಳಸುತ್ತಾರೆ. ಅದನ್ನು ಜಿಮ್ ಹಾಸಿಗೆಯಡಿ ಬಚ್ಚಿಡಬಹುದು."
"ಸರಿ ಒಂದನ್ನು ಸಂಪಾದಿಸಿಕೊಳ್ಳೋಣ ಬಿಡು"
"ಜೊತೆಗೆ ಜಿಮ್ಗೊಂದು ಅಂಗಿ. ಅದಕ್ಕೊಂದು ಜೇಬಿರಬೇಕು."
"ಅಂಗಿ ಜೇಬು ಯಾಕೆ?"
"ಯಾಕೇಂದ್ರೆ, ಡೈರಿ ಇಡೋದಕ್ಕೆ"
"ಆದ್ರೆ ಜಿಮ್ಗೆ ಬರೆಯೋದಕ್ಕೇ ಬರೋದಿಲ್ವಲ್ಲಾ"
"ಗುರುತು ಹಾಕೋಕೆ ಬರುತ್ತಲ್ಲಾ"
"ಸರಿ ಬರೆಯೋದು ಹ್ಯಾಗೆ?"
"ಮರದ ಒಂದು ಸಣ್ಣ ತುಂಡನ್ನೇ ಪೆನ್ ಹಾಗೆ ಮಾಡ್ಕೊಳ್ಳೋದು. ರಕ್ತಾನೇ ಇಂಕು"
ನಾನು ಬೇರೇನೂ ಮಾತಾಡಲಿಲ್ಲ. ಮುಂದಿನ ಮೂರು ರಾತ್ರಿ ಸುರಂಗ ತೋಡುವಲ್ಲಿಯೇ ಮುಗಿಯಿತು. ಚಾಕು ಬಳಸಿ ನೆಲ ಅಗೆಯಬೇಕೆಂದು ಟಾಮ್ ಹೇಳಿದನಾದರೂ, ಕೆಲಸ ನಡೆಯದ್ದರಿಂದ ಪಿಕಾಸಿ, ಗುದ್ದಲಿ ಬಳಸಿಯೇ ನೆಲ ಅಗೆದವು. ಜಿಮ್ ಮ್ಂಚದ ಕೆಳಗೆ ಅದಕ್ಕೆ ಪ್ರವೇಶ. ಪಕ್ಕದ ಶೆಡ್ನಲ್ಲಿ ಅದರ ಹೊರದ್ವಾರ. ಜಿಮ್ ಇಷ್ಟೆಲ್ಲಾ ಆದ ನಂತರ, ಚಾಣವೊಂದು ಸಿಕ್ಕರೆ ಕಾಲಿನಿಂದ ಸರಪಲಿ ತೆಗೆದುಬಿಡುತ್ತೇನೆಂದು ಹೇಳಿದ. ಆದರೆ ಟಾಮ್ಗೆ ಇದು ತುಂಬಾ ಸುಲಭವೆನ್ನಿಸಿತು. ಅವನು ಜಿಮ್ಗೆ ನಮ್ಮ ಯೋಜನೆಯನ್ನು ವಿವರಿಸಿಅತೊಡಗಿದ. ಅಲ್ಲದೆ ನಮ್ಮ ಯೋಜನೆಯಂತೆ ಕೆಲಸ ಸಾಗುವುದು ನಿಧಾನವಾದರೂ, ಅಲ್ಲಿಂದ ತಪ್ಪಿಸಿಕೊಳ್ಳುವುದು ಕಂಡಿತಾ ಸಾಧ್ಯವೆಂದು ಭರವಸೆ ನೀಡಿದ. ಅಷ್ಟೇ ಅಲ್ಲದೆ ಪರಾರಿಗೆ ಸಹಾಯಕವೆನಿಸುವ ಹಲವಾರು ವಸ್ತುಗಳನ್ನು ಉದಾಹರಣೆಗೆ ನೂಲೇಣಿಯನ್ನು ಊಟದ ಡಬ್ಬಿಯಲ್ಲಡಗಿಸಿ, ಚಾಕು ಹಾಗೂ ಲೇಖನಿಯನ್ನು ಊಟ ಕೊಂಡೊಯ್ಯುವ ಗುಲಾಮನ ಜೇಬಿನಲ್ಲಿಯೇ ಇರಿಸಿ ಕಳಿಸುವುದಾಗಿಯೂ, ಯಾರಿಗೂ ಅರಿವಾಗದಂತೆ ಅವನ್ನು ತೆಗೆದಿಟ್ಟುಕೊಳ್ಳಬೇಕೆಂದೂ ಜಿಮ್ಗೆ ಹೇಳಿದ. ಮುಂದಿನ ದಿನಗಳು ಜಿಮ್ಗೆ ಕೊಡಬೇಕೆಂದು ನಾವಂದುಕೊಂಡಿದ್ದ ವಸ್ತುಗಳನ್ನು ಹೊಂದಿಸಿಕೊಳ್ಳುವುದರಲ್ಲಿಯೇ ಕಳೆಯಿತು. ಜೊತೆಗೆ ಸಾಕಷ್ಟು ಕಾಡು ಸುತ್ತಿ ಬೇಟೆ ಆಡಿದೆವು. ಇದ್ದಕ್ಕಿದ್ದಂತೆ ಟಾಮ್ಗೆ ಏನನ್ನಿಸಿತೋ, ನನ್ನನ್ನು ಕರೆದು "ಜಿಮ್ನ ಕ್ಯಾಬಿನ್ ತುಂಬಾ ನೀಟಾಗಿದೆ. ಅದು ಹಾಗಿದ್ದರೆ ಸರಿಯಾಗುವುದಿಲ್ಲ" ಎಂದ.
"ಹಾಗಿದ್ದರೆ ಏನು ಮಾಡಬೇಕು?"
"ಅಲ್ಲಿ ಇಲಿಗಳೂ ಜಿರಳೆಗಳೂ ಓಡಾಡಿಕೊಂಡಿರಬೇಕು. ಜೇಡಗಳು ಬಲೆ ಕಟ್ಟಿರಬೇಕು. ಹಾವುಗಳು ಓಡಾಡುತ್ತಿರಬೇಕು."
ಯೋಚನೆ ಮನಸ್ಸಿಗೆ ಬಂದ ಮೇಲೆ ತಡಮಾಡಲಿಲ್ಲ.
ಪೇಟೆಗೆ ಹೋಗಿ ಇಲಿಬೋನೊಂದನ್ನು ತಂದು ಉಗ್ರಾಣದಲ್ಲಿ ನಮ್ಮ ಇಲಿಬೇಟೆ ಆರಂಭಿಸಿದೆವು. ಕೇವಲ ಅರ್ಧಗಂಟೆಯಲ್ಲಿ ಹದಿನೈದು ಟೊಣಪ ಇಲಿಗಳು ನಮ್ಮ ಬಂಧಿಗಳಾದವು. ಆ ಬೋನನ್ನು ಅತ್ಯಂತ ಸುರಕ್ಷಿತವೆಂದು ನಾನು ಭಾವಿಸಿದ್ದ ಸ್ಥಳದಲ್ಲಿ ಇರಿಸಿದೆ. ಅದು ಸ್ಯಾಲಿ ಚಿಕ್ಕಮ್ಮನ ಮಂಚದ ಕೆಳಗೆ. ಅಲ್ಲಿ ಬೋನನ್ನು ಇರಿಸಿ ನಾವು ಜೇಡ ಹಿಡಿಯಲು ಹೊರಗೆ ಹೋದಾಗ, ಚಿಕ್ಕಮ್ಮನ ಮಗಳು ಇಲಿಬೋನನ್ನು ನೋಡಿ, ಅದರ ಬಾಗಿಲು ತೆರೆದು ಇಲಿಗಳು ಹೊರಗೆ ಬರುತ್ತವೋ ಇಲ್ಲವೋ ನೋಡಿದಳಂತೆ. ನಾವು ಹಿಂತಿರುಗಿ ಬಂದಾಗ ಸ್ಯಾಲಿ ಚಿಕ್ಕಮ್ಮ ಮಂಚದ ಮೇಲೆ ಹತ್ತಿ ನಿಂತು ಚೀರಾಡುತ್ತಿದ್ದಳು. ನಮಗಂತೂ ಒಳ್ಳೇ ಪ್ರಸಾದ ಸಿಕ್ಕಿತು. ಮತ್ತೆ ಹದಿನೈದು ಇಲಿ ಹಿಡಿಯಲು ನಮಗೆ ಎರಡು ಗಂಟೆಗಳ ಕಾಲವೇ ಹಿಡಿದ್ಯಿತು.
ಮೂರು ವಾರಗಳಲ್ಲಿ ಜಿಮ್ಗೆ ಅಗತ್ಯವಿರುವ ವಸ್ತುಗಳನ್ನೆಲ್ಲಾ ತಲುಪಿಸಿಯಾಗಿತ್ತು. ಅಷ್ಟೇ ಅಲ್ಲ, ಅವನ ಕೋಣೆಯಲ್ಲೀಗ ಇಲಿಗಳು ಹಾಗೂ ಜೇಡಗಳ ದೊಡ್ಡ ಸೇನೆಯೇ ಇತ್ತು. ಹಾವುಗಳನ್ನು ಅಲ್ಲಿ ಸೇರಿಸಲು ಜಿಮ್ ಒಪ್ಪಿರಲಿಲ್ಲ.
ಇತ್ತ ಫ಼ೆಲ್ಪ್ ಜಿಮ್ನ ಬಗ್ಗೆ ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದರು. ನಮಗೆ ಅದೇನೂ ತೊಂದರೆಯ ವಿಷಯವಲ್ಲವಾದರೂ, ನಮ್ಮ ಊರಿನ ಪತ್ರಿಕೆಗಳಲ್ಲೂ ಜಹೀರಾತು ನೀಡಿದ್ದು, ಸ್ವಲ್ಪ ಆತಂಕಕ್ಕೀಡುಮಾಡಿತ್ತು. ಅಲ್ಲದೆ, ಜಿಮ್ ಹೆಗ್ಗಣಗಳ ಜೊತೆ ವಾಸಿಸಲು ಹಿಂಸೆ ಪಡುತ್ತಿದ್ದ. ಇದರಿಂದಾಗಿ ನಮ್ಮ್ ಯೋಜನೆಯನ್ನು ಬೇಗನೇ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆವು.
"ಹಾಗಿದ್ದರೆ ನಾವು ಬೇಗನೇ ಈ ಬಗ್ಗೆ ಮನೆಯವರಿಗೆ ಸುಳಿವು ಕೊಡೋಣ" ಟಾಮ್ ಹೇಳಿದ.
"ಏಕೆ?"
"ಈ ಸುಳಿವು ಏನೋ ನಡೆಯುತ್ತದೆಮ್ದು ಜನರಿಗೆ ತಿಳಿಸುತ್ತದೆ. ಹೇಗಾದರೂ ದ್ದ್ ಸುಳಿವು ಜನರಿಗೆ ತಿಳಿದೇ ತಿಳಿಯುತ್ತದೆ. ಹದಿನಾಲ್ಕನೇ ಲೂಯಿ ತಪ್ಪಿಸಿಕೊಳ್ಳುವ ಮೊದಲು ಕೆಲಸದ ಹುಡುಗಿ ಸುಳಿವು ಕೊಟ್ಟಳಂತೆ, ಹಾಗೇ"
"ಸರಿಯಪ್ಪಾ, ಟಾಮ್.. ಜಿಮ್ ತಪ್ಪಿಸಿದೊಳ್ಳಲು ಸಹಾಯ ಮಾಡುತ್ತೇವೆಂದು ನಾವೇ ಎಚ್ಚರಿಕೆ ಕೊಟ್ಟರೆ, ಖೈದಿ ಪರಾರಿಯಾಗಲು ಹೇಗೆ ಸಹಾಯವಾಗುತ್ತದೆ?"
"ಆ ರೀತಿ ನಮ್ಮ ಕೆಲಸ ಇನ್ನೂ ಕಷ್ಟವಾಗುತ್ತದೆ. ಅದೂ ಅಲ್ಲದೆ, ನಮ್ಮ ಸಾಹಸಗಳ ಬಗ್ಗೆ ಯಾರಿಗೂ ತಿಳಿಯದಿದ್ದರೆ ಏನು ಪ್ರಯೋಜನ? ಅದಕ್ಕೇ ನೀನು ಕೆಲಸದ ಹುಡುಗಿಯ ವೇಷದಲ್ಲಿ ಒಂದು ಚೀಟಿಯನ್ನಿಡಬೇಕು."
"ಎಲ್ಲಿ ಯಾವಾಗ, ಹೇಗೆ?"
"ಇಂದು ರಾತ್ರಿ ಎಲ್ಲಾ ಮಲಗಿದ ಮೇಲೆ ಬಾಗಿಲ ಸಂದಿನಿಂದ, ಯಾರಿಗೂ ಕಾಣದಂತೆ ಈ ಚೀಟಿಯನ್ನಿಡಬೇಕು."
"ಯಾರೂ ಕಾಣದಂತೆ ಯಾವಾಗ ಬೇಕಾದರೂ ಇಡಬಲ್ಲೆ. ಆದರೆ ಯಾರೂ ನೋಡದಿರುವಾಗ ಕೆಲಸದ ಹುಡುಗಿಯ ವೇಷ ಯಾಕೆ?"
"ಯಾಕೆಂದರೆ, ಅದು ನಿಯಮ. ನಿಯಮಪಾಲನೆಯೇ ನಮ್ಮ ಕರ್ತವ್ಯ. ಯಾರಾದರೂ ನೋಡುತ್ತಾರೋ ಬಿಡುತ್ತಾರೋ ಎಂದು ಕರ್ತವ್ಯ ಪಾಲನೆಯಲ್ಲಿ ತಪ್ಪು ಮಾಡಬಹುದೇ?"
ನಾನು ಟಾಮ್ನ ಸಲಹೆಗೆ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ. ಮತ್ತು ಅದೇ ರಾತ್ರಿ ನಮ್ಮ ಸಂದೇಶದ ಪತ್ರವನ್ನು ಬಾಗಿಲಿನ ಕೆಳಗೆ ಸಿಗಿಸಿಎ. ಅದರಲ್ಲಿ "ಎಚ್ಚರಿಕೆ, ಸಂಚಿನ ಸುಳಿ ಬೆಳೆಯಿತ್ತಿದೆ, ಗಮನವಿರಲಿ -- ಸ್ನೇಹಿತ" ಎಂದಿತ್ತು.
ಮರುದಿನ ಟಾಮ್ ರಕ್ತದಲ್ಲಿ ತಲೆಬುರುಡೆ ಮತ್ತು ಮೂಳೆಗಳ ಚಿತ್ರವನ್ನು ಬರೆದು ಮುಂಬಾಗಿಲಿಗೆ ಅಂಟಿಸಿದ. ಅದರ ಮರುದಿನ ಶವಪೆಟ್ಟಿಗೆಯ ಚಿತ್ರ. ಇಡೀ ಮನೆಯ ಜನರೆಲ್ಲಾ ತಲ್ಲಣಿಸಿ ಹೋದರು. ಬಾಗಿಲು ಕಾಯಲು ಆಳೊಬ್ಬನನ್ನು ನೇಮಿಸಿದರು. ಆದರೆ ರಾತ್ರಿ ಕಳೆದು ಬೆಳಕಾಗುವಾಗ ಕಡೆಯ ಸಂದೇಶವನ್ನೂ ಅಂಟಿಸಿಬಿಟ್ಟೆ. ಕಾವಲು ಆಳು ನಿದ್ರಿಸುತ್ತಿದ್ದ. ಆ ಪತ್ರದಲ್ಲಿದ್ದುದ್ದು "ನೀವು ಹಿಡಿದಿಟ್ಟಿರುವ ಓಡಿ-ಹೋಗಿದ್ದ ಗುಲಾಮನನ್ನು ಅವರು ಈ ರಾತ್ರಿ ಬಿಡಿಸಲಿದ್ದಾರೆ. ಸರಿಯಾಗಿ ಮಧ್ಯರಾತ್ರಿಯ ಹೊತ್ತಿಗೆ, ನಾನು ನಿಮ್ಮ ಸ್ನೇಹಿತನಾಗಲು ಬಯಸುತ್ತೇನೆ. ಅವರು ಕ್ಯಾಬಿನ್ನಿನ ಒಳಗಿದ್ದಾಗ ನಾನು ಕುರಿಯಂತೆ ಕೂಗುತ್ತೇನೆ. ತಕ್ಷಣ ನೀವು ಕ್ಯಾಬಿನ್ ಬೀಗ ಹಾಕಿಬಿಡಿ. ಅವರೆಲ್ಲಾ ಒಳಗೇ ಸಿಕ್ಕಿಕೊಳ್ಳುತ್ತಾರೆ --- ಅನಾಮಿಕ ಸ್ನೇಹಿತ"