0೫. ಹಬೆದೋಣಿಯ ಅವಶೇಷಗಳ ಮೇಲೆ.
ನಾವು ಜಾಕ್ಸನ್ ಐಲ್ಯಾಂಡನ್ನು ಪೂರ್ತಿಯಾಗಿ ಹಾದುಹೋಗುವಷ್ಟರಲ್ಲಿ ರಾತ್ರಿ ತುಂಬಾ ಹೊತ್ತಾಗಿತ್ತು. ಬಹುಶಃ ಒಂದು-ಒಂದೂವರೆಯಾಗಿರಬೇಕು. ನಾವು ಎಷ್ಟು ಹೆದರಿದ್ದೆವೆಂದರೆ, ನಮ್ಮ ಮನಸ್ಸಿನಲ್ಲಿ ಯಾವ ಯೋಚನೆಗಳೂ ಸುಳಿಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ನಮ್ಮನ್ನು ಹಿಂಬಾಲಿಸಿಯೋ ಅಥವಾ ಮತ್ತೊಂದೋ ಏನಾದರೂ ದೋಣಿ ಬಂದರೆ, ನಾವು ತೆಪ್ಪದಿಂದ, ನನ್ನ ಚಿಟ್ಟು ದೋಣಿಗೆ ಹಾರಿ ಸ್ವಲ್ಪ ದೂರ ಹೋಗಿ ಅಡಗಿ ಕುಳಿತು ಮತ್ತೆ ತೆಪ್ಪಕ್ಕೆ ಹಿಂತಿರುಗಬಹುದಿತ್ತು. ಆದರೆ ನಮಗೆ ಅದೇನನ್ನೂ ಯೋಚಿಸುವ ಮನಸ್ಥಿತಿಯೇ ಇರಲಿಲ್ಲ.
ಮರುದಿನ ಪ್ರಥಮ ಉಷಾಕಿರಣಗಳನ್ನು, ಕಂಡದ್ದೇ, ದಡಕ್ಕೆ ತೆಪ್ಪವನ್ನೆಳೆದು ಮರವೊಂದಕ್ಕೆ ಕಟ್ಟಿದೆವು. ತೋಪಿನೊಳಗೆ ಸಾಕಷ್ಟು ಮರದ ರೆಂಬೆಗಳನ್ನೂ , ಸೊಪ್ಪುಗಳನ್ನೂ ಕಡಿದು ಅದರಿಂದ ನಮ್ಮ ತೆಪ್ಪವನ್ನು ಮುಚ್ಚಿಟ್ಟೆವು. ಅದೇ ಹತ್ತಿಯ ಪೊದೆಯ ಮರೆಯಲ್ಲಿ, ನಾವೂ ಮೈ ಒಡ್ಡಿದೆವು. ಆಯಾಸದಿಂದ ನಿದ್ದೆ ಬರುತ್ತಿದ್ದರೂ, ನಾನು ನಿದ್ದೆ ಹೋಗುವ ಮೊದಲು ಸೆಂಟ್ ಪೀಟರ್ಸ್ಬರ್ಗ್ನಲ್ಲಿ ಆ ಹೆಂಗಸು ಹೇಳಿದ ಕತೆಯನ್ನು ಜಿಮ್ಗೆ ಹೇಳಿದೆ.
ಕತ್ತಲು ಹಣಕಲು ಶುರುವಾದ ಮೇಲೆ, ನಾವು ಅವಿತಿದ್ದ ಪೊದೆಗಳಿಂದ ಹೊರಬಂದು ಸುತ್ತಲೂ ಅವಲೋಕಿಸಿದೆವು. ಏನೂ ಕಾಣಿಸಲಿಲ್ಲ. ಮ್ನಸ್ಸಿಗೆ ನೆಮ್ಮದಿಯಾದ ಮೇಲೆ, ಧೈರ್ಯವಾಗಿ ಓಡಾಡಲಾರಂಭಿಸಿದೆವು. ಜಿಮ್ ಮರದ ದಿಮ್ಮಿಗಳು, ಹಾಗೂ ತುಂಡುಗಳಿಂದ ನಮ್ಮ ತೆಪ್ಪದ ಮೇಲೊಂದು ಗುಡಾರ ಹೂಡಿದನು.
ಅದರ ಮೇಲೆ ಮರದ ರೆಂಬ್, ಸೊಪ್ಪು ಹರಡಿ ಎಷ್ಟು ಚೆನ್ನಾಗಿ ಮಾಡಿದನೆಂದರೆ, ಅದರೊಳಗೆ ರಣಬಿಸಿಲ ಸೂರ್ಯಕಿರಣವಾಗಲೀ, ಜವಮಳೆಯ ತುಷಾರವಾಗಲೀ, ಸದಾಕಾಲಕ್ಕೂ ನಿಷೇಧಿಸಲ್ಪಟ್ಟಿತ್ತು. ಅಂತೂ ನಮ್ಮ ಅಮೂಲ್ಯ ವಸ್ತುಗಳಿಗೊಂದು ರಕ್ಷೆ, ತೆಪ್ಪದ ಮೇಲೆ ಒಂದೂವರೆ ಅಡಿ ಎತ್ತರಕ್ಕಿದ್ದ ಆ ಗುಡಾರವಾಯಿತು.
ಆ ನದಿಯ ಹರವಿನೆಡೆಗೇ ಹಾಗೆ ಸಾಗಿ ಹೋದೆವು. ನಮ್ಮ ಪಯಣ ರಾತ್ರಿಗಳಲ್ಲಿ ಮಾತ್ರ. ಅದೊಂದು ನಿರಂತರ ತಾಮಸ ಯಾತ್ರೆಯಾಗಿತ್ತು. ಸುತ್ತ ನೀರು, ಆ ನೀರಿನ ಮೇಲೊಂದು ತೆಪ್ಪ, ತೆಪ್ಪದಲ್ಲಿ ಕುಳಿತ ನಾನು, ನನ್ನ ಒತ್ತಿಗೆ ಕರಿಯ ಗುಲಾಮ ಜಿಮ್, ತೆಪ್ಪಕ್ಕೆ ಹಗ್ಗದಿಂದ ಕಟ್ಟಿದ್ದು, ಹಿಂದೆಲ್ಲೋ ತೇಲಿಬರುತ್ತಿದ್ದ ನನ್ನ ಚಿಟ್ಟು ದೋಣಿ. ದಡಗಳಲ್ಲಿ ಬೆಳದಿಂಗಳಿಗೆ ಕಾಣುವ ವಿಪಿನ ವನರಾಜಿ. ಅದೊಂದು ಅದ್ಭುತ ಯಾತ್ರೆ. ನಮ್ಮ ಯಾತ್ರೆಯಲ್ಲಿ ಹಲವು ಪಟ್ಟಣಗಳನ್ನು ನಾವು ಹಾದು ಹೋದೆವು. ಹಲವು ದೂರದ ಬೆಟ್ಟಗಳ ಸಾಲಿನಲ್ಲಿರುವ ಪಟ್ಟಣಗಳು. ಅವುಗಳು ಚುಕ್ಕಿ ಚುಕ್ಕಿ ಬೆಳಕಿನಿಂದ ಕಂಗೊಳಿಸಿ ನಯನ ಮನೋಹರ ದೃಶ್ಯ ನಿರ್ಮಾತೃವಾಗಿದ್ದವು. ಐದನೆಯ ರಾತ್ರಿ, ಸೇಂಟ್ ಲೂಯಿಸ್ ನಗರವನ್ನು ಹಾದು ಹೋಗುವಾಗ, ಆ ಸೌಂದರ್ಯವನ್ನು ನೋಡಿ ಮೂಕನಾದೆ. ನಾನೆಂದೂ ಕಂಡಿರದ ಅದ್ಭುತ ದೃಶ್ಯವಾಗಿತ್ತು ಅದು. ರಾತ್ರಿ ಶುರುವಾಗಲು ಸ್ವಲ್ಪ ಮುಂಚೆ, ಹತ್ತಿರದ ಹಳ್ಳಿಗೆ ಹೋಗಿ, ಕುರಿಮಾಂಸವೋ, ಹಂದಿ ಮಾಂಸವೋ ತರುವುದು, ನಮ್ಮ ನಿತ್ಯ ಕರ್ಮವಾಗಿತ್ತು. ಒಂದೊಂದು ದಿನ ಯಾರದಾದರೂ ಮನೆಯ ಬೇಲಿಯಲ್ಲಿ ಕೋಳಿಯನ್ನೋ, ಕಲ್ಲಂಗಡಿಯನ್ನೋ, ಕಂಡರೆ ಈ ಕರ್ಮಕ್ಕೆ ರಜ. ಮೆಲ್ಲಗೆ ಅದನ್ನು ಲಪಟಾಯಿಸಿಕೊಂಡು ಓಡಿಬಿಡುತ್ತಿದ್ದೆ. ಆಗಾಗ ನೀರ್ಹಕ್ಕಿಗಳನ್ನೂ ಹೊಡೆದು ನಮ್ಮ ಊಟದ ರುಚಿ ಹೆಚ್ಚಿಸಿಕೊಳ್ಳುತ್ತಿದ್ದೆವೆನ್ನಿ.
ಆ ರಾತ್ರಿ ಸೇಂಟ್ ಲೂಯಿಸ್ ನಗರವನ್ನು ಹಾದು ಹೋದ ರಾತ್ರಿ. ಮಧ್ಯರಾತ್ರಿಯ ನಮ್ತರ ಚಂಡಮಾರುತವೆದ್ದಿತು! ಗುಡುಗು-ಸಿಡಿಲುಗಳಸ್ತ್ರವನ್ನೊಳಗೊಂಡ ಮಹಾ ಮುಸಲಧಾರಾ ಮಳೆಯು, ಭುವಿಯ ಮೇಲೆ ಆಕ್ರಮಣಗೈದಿತ್ತು. ನಮಗೇನು ಹೆದರಿಕೆ? ನಾವು ಪ್ರಕೃತಿಯ ಮಕ್ಕಳಲ್ಲವೇ? ಮಹಾ ಮಹಾ ಮಿಂಚುಗಳು ಸರ್ವಾಗಸವ್ಯಾಪಿಯಾಗಿ, ಸೂರ್ಯನಿಗೆ ಸವಾಲೆಸೆಯುವಂತೆ ಕ್ಷಣಗಟ್ಟಲೆ ಭೂಮಿಯನ್ನು ಬೆಳಗುತ್ತಿದ್ದವು. ಒಮ್ಮೆ ಹೀಗೇ ಭೂಮಿ ಬೆಳಕಾಯಿತು. ಆ ಬೆಳಕಿನಲ್ಲಿ "ಜಿಮ್.. ಅಲ್ಲಿ.... ಆ ಕಡೆ ನೋಡಿದೆಯಾ?" ಎಂದು ಕೂಗಿದೆ.
ಅಲ್ಲೊಂದು ಉಗಿದೋಣಿ ನಿಂತಿತ್ತು. ನದೀ ನೀರ ಪ್ರವಾಹದಲ್ಲಿ, ಏಕೋ, ಏನೋ ಮಧ್ಯೆ ಎದ್ದು ನಿಂತ ಬಂಡೆಗೆ ಅಪ್ಪಳಿಸಿ, ಇನ್ನು ಮಾನವನಿಗೆ ಉಪಯೋಗಕ್ಕೆ ಬಾರದಂತೆ, ಆ ದುಖಃದಲ್ಲೇ, ಅದೇ ನದೀ ನೀರಿನಲ್ಲೇ ಮಹಾಪ್ರಸ್ಥಾನಕ್ಕೆ ಸಿದ್ದವಾಗಿರುವಂತೆ. ನಾನು ಅಲ್ಲಿಗೆ ಹೋಗಿ ನಮಗೇನಾದರೂ ಉಪಯುಕ್ತವಾದುದಿದ್ದರೆ ತೆಗೆದುಕೊಂಡು ಬರಬೇಕೆಂದು ಯೋಚಿಸಿ ಜಿಮ್ಗೆ ಹೇಳಿದೆ. ಶವಸಂಸ್ಕಾರಕ್ಕೆ ಮುನ್ನ ಶವದ ಒಡವೆಗಳನ್ನು ಬಿಚ್ಚಿಕೊಳ್ಳುವುದಿಲ್ಲವೇ...? ಆದರೆ ಜಿಮ್ "ಅಯ್ಯಪ್ಪಾ... ಅಲ್ಲೆಲ್ಲಾ ಹೋಗಿ ನಾವೇ ಮುಠ್ಠಾಳರಾಗುವುದು ಬೇಡ. ಅಲ್ಲ್ಯಾರಾದರೂ ಕಾವಲುಗಾರರು ಇರಬಹುದು' ಎಂದ.
"ನಿಮ್ಮಜ್ಜಿ ತಲೆ, ಮುಳುಗ್ತಾ ಇರೋ ದೋಣಿಗೊಬ್ಬ ಕಾವಲುಗಾರನಂತೆ, ಥೂ ನಿನ್ನ! ಯಾರದ್ರೂ ಜೀವಾನೇ ಒತ್ತೆ ಇಟ್ಟು ಮುಳುಗೋ ದೋಣೀನ ಕಾಯ್ತಾರೇನೋ..?" ಎಂದೆ.
ಜಿಮ್ಗೆ ಏನನ್ನಿಸಿತೋ ಏನೋ ಗೊಣಗುತ್ತಲೇ ನನ್ನ ಜೊತೆ ಉಗಿದೋಣಿಗೆ ಹತ್ತಿದ. ದೋಣಿಯಲ್ಲಿ ನಾವು ಎಲ್ಲೆಡೆ ಓಡಾಡಿದೆವು. ಮೇಲಿನ ಅಟ್ಟ, ಕೆಳಗಿನ ಡೆಕ್ಕು, ಡೆಕ್ಕುಗಳ ಅಂತಸ್ತುಗಳು, ಹೀಗೇ ಬರಬೇಕಾದರೆ, ಬಾಗಿಲು ತೆರೆದಿದ್ದ ಕ್ಯಾಪ್ಟನ್ನನ ಕೊಠಡಿ ಕಾಣಿಸಿತು. ಅದು ಉದ್ದನೆಯ ಓಣಿಯ ಕೊನೆಯಲ್ಲಿತ್ತು, ಮತ್ತು ಅಲ್ಲಿಂದ ದೀಪದ ಬೆಳಕನ್ನೂ ಕಾಣಬಹುದಿತ್ತು. ಮತ್ತೆ ಸಣ್ಣನೆಯ ದನಿ ಕೂಡಾ ಕೇಳಿಸಿತು. "ಅಯ್ಯೋ....... ನನ್ನ ಬಿಟ್ಟು ಹೋಗಬೇಡಿ. ..... ನಾನಾರಿಗೂ ಹೇಳುವುದಿಲ್ಲ."
ಜಿಮ್ಗೆ ಏನೋ ಒಂದು ರೀತಿಯಾಯಿತು ಎನಿಸುತ್ತದೆ. "ನಡಿ... ಇಲ್ಲಿಂದ ಹೋಗಿ ಬಿಡೋಣ" ಎಂದ. ನಾವು ಆ ದೋಣಿಯಿಂದಿಳಿಯುವಷ್ಟರಲ್ಲೇ ಇನ್ನೊಂದು ಧ್ವನಿ ಗಟ್ಟಿಯಾಗಿ "ಜಿಮ್ ಟರ್ನರ್, ಸುಳ್ಳು ಹೇಳಬೇಡ. ನಿನ್ನ ಈ ಥರದ ನಾಟಕವನ್ನೆಷ್ಟೋ ನೋಡಿಯಾಯಿತು" ಎಂದಿತು.
ಮತ್ತೊಂದು ಧ್ವನಿ "ಹೂಞ್, ನಿನಗೇ ದೊಡ್ಡಪಾಲು ಬೇಕಾ? ಕೊಡಲ್ಲಿಲ್ಲಾಂದ್ರೆ ಎಲ್ಲರಿಗೂ ಹೇಳ್ತೀನಿ ಅಂತ ಬೇರೆ ಹೆದರಿಸ್ತೀಯಾ..? ಆದರೆ ಈ ಸರ್ತಿ ನಿನ್ನಾಟ ಕೊನೆಯಾಗುತ್ತೆ" ಎಂದ ಹಾಗೆ ಕೇಳಿಸಿತು.
ಇಷ್ಟೊತ್ತಿಗೆ ಜಿಮ್ ನಮ್ಮ್ ತೆಪ್ಪದೋಣಿಯಲ್ಲಿ ಸೇರಿಯಾಗಿತ್ತು. ಅವನ ಪುಕ್ಕಲುತನಕ್ಕೆ ನಗು ಬಂದರೂ, ಕುತೂಹಲ ಹೆಚ್ಚಿದ್ದರಿಂದ ಆ ಕೊಠಡಿಯ ಬಳಿಗೆ ಸದ್ದು ಮಾಡದೆ ತೆವಳಿದೆ. ಅದರ ಪಕ್ಕದ್ ಕ್ಯಾಬಿನ್ನಿನಿಂದೈದ್ದ ಬಾಗಿಲ ಸಂದಿಯಿಂದ, ಈ ರೂಮಿನಲ್ಲಿ ನಡೆಯುತ್ತಿರುವುದನ್ನೆಲ್ಲಾ ನೋಡಬಹುದಾಗಿತ್ತು. ಅಲ್ಲಿ ಒಬ್ಬ ಮನುಷ್ಯ ನೆಲದ ಮೇಲೆ ಅಂಗಾತ ಬಿದ್ದಿದ್ದ. ಅವನ ಕೈ ಕಾಲುಗಳನ್ನು ಕಟ್ಟಲಾಗಿತ್ತು. ಅವನೆದೆಯ ಮೇಲೆ ಕಾಲಿಟ್ಟು ಇಬ್ಬರು ನಿಂತಿದ್ದರು. ಒಬ್ಬನ ಕೈಯಲ್ಲಿ ಬಂದೂಕೂ, ಇನ್ನೊಬ್ಬನ ಕೈಯಲ್ಲಿ ಲಾಟೀನೂ ಇದ್ದಿತು. ಅವರಿಬ್ಬರೂ ಕೆಳಗೆ ಬಿದ್ದಿದ್ದವನನ್ನು ಕೊಲ್ಲುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದರು. ಲಾಟೀನು ಹಿಡಿದವನು, ಕೊಲ್ಲುವುದು ಬೇಡವೆಂದೂ, ಬಂದೂಕು ಹಿಡಿದವನು ಕೊಲ್ಲಲೇಬೇಕೆಂದೂ ನಿರ್ಧರಿಸಿದ್ದಂತೆ ಕಂಡಿತು. ಅದರಲ್ಲೊಬ್ಬ ಇನ್ನ್ನೊಬ್ಬನಿಗೆ "ನಿನಗೊಂದು ವಿಷಯ ಹೇಳಬೇಕು ಬಾ" ಎಂದು ನಾನಿದ್ದ ಕ್ಯಾಬಿನ್ನಿನ ಕಡೆಗೆ ಬಂದ....!!!!
ಮಿಂಚಿನಂತೆ ಆ ಕ್ಯಾಬಿನ್ನಿನ ಸಾಮಾನುಗಳನ್ನಿಡುವ ಅಟ್ಟಕ್ಕೆ ಹಾರಿದ ನಾನು ಹಾಗೇ ಕಚ್ಚಿಕೊಂಡು, ಮಿಸುಕಾಡದಂತೆ ಕುಳಿತೆ. ಅಲ್ಲಿಂದ ಆ ಇಬ್ಬರು ನನಗೆ ಕಾಣದಿದ್ದರೂ, ಅವರ ಮಾತು, ಉಸಿರಾಟ ಸ್ಪಷ್ಟವಾಗಿ ಕೇಳುತ್ತಿತ್ತು. ಅಷ್ಟೇಕೆ ಅವರು ಕುಡಿದಿದ್ದ ಕಳ್ಳಿನ ವಾಸನೆಯೂ ಹೊಡೆಯುತ್ತಿತ್ತು.
ಅವರಲ್ಲೊಬ್ಬ "ಅವನನ್ನು ಕೊಂದೇ ಸೈ" ಎಂದ.
ಇನ್ನೊಬ್ಬ " ಅದೊಂದು ಕರ್ಮ ನಮಗ್ಯಾಕೆ ಈಗ. ಒಂದು ಕೆಲಸ ಮಾಡೋಣ. ನಮಗೇನು ಬೇಕೋ ಅದನ್ನೆಲ್ಲಾ ತೆಗೆದುಕೊಂಡು ನಮ್ಮ ದೋಣಿಯಲ್ಲಿ ಇಲ್ಲಿಂದ ಹೊರಟು ಬಿಡೋಣ. ಹೇಗೂ ಎರಡು ಗಂಟೆಗಳಲ್ಲಿ ಈ ದೋಣಿ ಮುಳುಗಿ ಹೋಗುತ್ತದೆ. ಆಗ ಅವನೂ ತನ್ನಷ್ಟಕ್ಕೇ ಸಾಯುತ್ತಾನೆ. ಬದುಕಿದರೆ ಅವನ ಅದೃಷ್ಟಾನೋ.. ದುರದೃಷ್ಟಾನೋ.. ಯಾವುದೋ ಒಂದು" ಅಂದ. ಈ ಉಪಾಯ ಅವರಿಬ್ಬರಿಗೂ ಒಪ್ಪಿಗೆಯಾಯಿತೆಂದು ತೋರುತ್ತದೆ. ಬಾ ಬಾ ಎನ್ನುತ್ತಾ ಅಲ್ಲಿಂದ ಅವರಿಬ್ಬರೂ ಹೊರಗೆ ಹೋದರು. ನಾನು ಕೂಡಲೇ ಅಲ್ಲಿಂದ ಓಡಿ ಆ ಉಗಿದೋಣಿಯ ಮುಂಭಾಗಕ್ಕೆ ಬಂದೆ. ಅಲ್ಲೆಲ್ಲಾ ಕಾರ್ಗತ್ತಲು ಕವಿದಿತ್ತು. ಪಿಸುದನಿಯಲ್ಲಿಯೇ "ಜಿಮ್" ಎಂದು ಕರೆದೆ. ಅವನು ತೆಪ್ಪವನ್ನೇರಿ ಅಲ್ಲೇ ನನಗೆಲ್ಲಾದರೂ ಕಾಯುತ್ತಿರಬಹುದೆಂದು ನನ್ನ ಎಣಿಕೆಯಾಗಿತ್ತು. ಆದರೆ ಅವನು ಉಗಿದೋಣಿಯ ಮೇಲೇ, ನನ್ನ ಕೈಕೆಳಗೇ ಅವಿತುಕೊಂಡಿದ್ದ. "ಯಾಕೋ?" ಎಂದೆ.
" ನಮ್ಮ ತೆಪ್ಪ.. ಎಲ್ಲೋ ಕೊಚ್ಕೊಂಡು ಹೋಗಯ್ತೆ" ಎಂದ.
ನನ್ನ ಎಲ್ಲಾ ಆಸೆಗಳೂ, ಜೀವದ ಮೇಲಿನ ಆಸೆಯೂ ಸೇರಿದಂತೆ ಆ ಕ್ಷಣವೇ ಹುಸಿಯಾದವು. ತೆಪ್ಪವಿಲ್ಲದೆ ಆ ತುಂಬು ಹೊಳೆಯಲ್ಲಿ ಈಜುವುದಂತೂ ಅಸಾಧ್ಯ. ಇನ್ನು ಆ ಕೊಲೆಗಡುಕರ ಕೈಗೆ ಸಿಕ್ಕಿಬಿದ್ದರೆ?... ಅಷ್ಟೇ....!
ಇಲ್ಲಿಗೆ ಬರುವ ಮುಂಚೆ, ಕ್ಯಾಬಿನ್ನಿನಲ್ಲಿದ್ದಾಗ, ನಮ್ಮ ತೆಪ್ಪದಲ್ಲಿ ಕೂಡಲೇ ಹತ್ತಿರದ ನಗರಕ್ಕೆ ಹೋಗಿ, ಅಲ್ಲಿಂದ ಅಲ್ಲಿನ ಶರೀಫ಼ನನ್ನು ಕರೆತಂದು, ಈ ಮೂವರು ಕೊಲೆಗಾರರನ್ನೂ ಹಿಡಿದುಕೊಡಬೇಕೆಂದು ಯೋಚಿಸಿದ್ದೆ. ಈಗ ನಾನೇ ಅವರಿಗೆ ಸಿಕ್ಕಿಬೀಳುವುದೋ. ಅವರಿಗೆ ಸಿಕ್ಕಿಬೀಳದಿದ್ದರೂ, ಉಕ್ಕಿ ಹರಿಯುತ್ತಿರುವ ನೀರಿಗೆ ಸಿಕ್ಕೋ ಸಾಯುವಂತಾಗಿತ್ತು. ಆ ಕ್ಷಣ ಮನಸ್ಸಿಗೊಂದು ಯೋಚನೆ ಹೊಳೆಯಿತು. ಮಾತಿನ ಮಧ್ಯೆ ಆ ಖೂನಿಗಾರರು ತಮ್ಮ ದೋಣಿಯ ಬಗ್ಗೆ ಮಾತಾಡಿಕೊಂಡಿದ್ದರಲ್ಲಾ.. ಅದು ಇಲ್ಲೆಲ್ಲೋ, ಈ ದೊಡ್ಡ ಉಗಿದೋಣಿಯಲ್ಲೇ ಇರಬೇಕು ಎಂದು. ಕೂಡಲೇ ಜಿಮ್ಗೆ ವಿಷಯ ತಿಳಿಸಿ, ಅವನು ಎಡಗಡೆಯಿಂದ ಹುಡುಕುವುದೆಂತಲೂ, ನಾನು ಬಲಗಡೆಯಿಂದ ಹುಡುಕುವುದೆಂತಲೂ ನಿರ್ಧರಿಸಿ ಕಾರ್ಯರೂಪಕ್ಕಿಳಿದೆವು. ಆ ಕಾರ್ಗತ್ತಲಿನಲ್ಲಿ ಅದೇನೂ ಸುಲಭದ ಕಾರ್ಯವಾಗಿರಲಿಲ್ಲ.
ನಾನು ಬಲಗಡೆ ದೋಣಿಯ ಅರ್ಧದಷ್ಟು ದೂರ ಹೊಗಿರಬಹುದು. ಅಲ್ಲೇ ಒಂದು ಬಾಗಿಲು ಠಕ್ಕನೆ ತೆಗೆದುಕೊಂಡಿತು. ಅಲ್ಲಿಂದೊಬ್ಬನ ತಲೆ ಕೂಡಾ ಇಣುಕಿತು. ಅವನು ನನ್ನನ್ನು ನೋಡಿರಬೇಕೆಂದುಕೊಂಡೆ. ಆದರೆ ಸರಕ್ಕನೆ ತಲೆ ಒಳಗೆಳೆದುಕೊಂಡ ಅವನು. ಮಾತಾಡುತ್ತಿರುವುದು ಕೇಳಿಸಿತು. ನಾನು ಅವಿತುಕೊಂಡೆ.
"ಏ .. ಆ ಲಾಟೀನು ಆರಿಸು." ಅದರ ಬೆಳಕು ಹೊರಗಡೆ ನಮಗೆ ಅಪಾಯ ತರಬಹುದು."
"ಹೌದು, ಹೌದು..." ಎಂದ ಇನ್ನೊಬ್ಬ ಲಾಟೀನನ್ನು ಆರಿಸಿದನೇನೋ, ಬೆಳಕು ನಂದಿ ಹೋಯಿತು.
ಬಾಗಿಲು ತೆಗೆದುಕೊಂಡು ಬಂದ ಅವನು ಅಲ್ಲೇ ಎಡಗಡೆ ಮೂಲೆಗೆ ತನ್ನ ಕೈಯಲ್ಲಿದ್ದ ಚೀಲವನ್ನೆಸೆದುಆ ಕಡೆ ನಡೆದು ಹೋದನು. ಅಂದರೆ ಅವರ ಜೀವರಕ್ಷಕ ದೋಣಿ ಅಲ್ಲಿದೆ. ! ಅವರಿಬ್ಬರೂ ನಿಧಾನವಾಗಿ ಅದರಲ್ಲಿ ಇಳಿದರು. ನಾನು ನಿಸ್ಸಹಾಯಕನಾಗಿ ನೋಡುತ್ತಲೇ ಇದ್ದೆ. ಆಗ ಅವರಲ್ಲೊಬ್ಬ " ಹೇ.. ಅವನ ಜೇಬನ್ನೂ ತಡವಿ ನೋಡಬೇಕಿತ್ತು. ಅವನೊಬ್ಬ ಕಂತ್ರಿ. ಜೇಬಲ್ಲೂ ಏನಾದ್ರೂ ಬಚ್ಚಿಟ್ಟುಕೊಂಡಿರ್ತಾನೆ" ಎಂದ.
"ನೀನು ನೋಡಲಿಲ್ಲವಾ... ನೀನು ನೋಡಿರ್ತೀಯಾ ಅಂತ ನಾನು ಸುಮ್ಮನಾದೆ."
"ಇಲ್ಲ, ನೋಡಲಿಲ್ಲ. ಬಾ... ಹೋಗಿ ನೋಡ್ಕೊಂಡು ಬರೋಣ"
ಇಬ್ಬರೂ ಅಲ್ಲಿಂದೆದ್ದು ತಾವು ಹೊರಬಂದಿದ್ದ ಬಾಗಿಲಿನ ಮೂಲಕವೇ ಒಳಗೆ ಹೋದರು. ನನಗಂತೂ ಇದು ಸುವರ್ಣಸಂಧಿಯಾಗಿತ್ತು. ಜಿಮ್ನನ್ನು ಕೂಗುವುದೇನೂ ಬೇಕಾಗಲಿಲ್ಲ. ಅವನಾಗಲೇ ನನ್ನ ಹಿಂದೆ ಇದ್ದ. ನನ್ನ ಬಳಿ ಇದ್ದ ಪುಟ್ಟ ಕತ್ತಿಯಿಂದ ಆ ಪುಟ್ಟುದೋಣಿಯ ಲಂಗರು ಹಗ್ಗ ಕಡಿದು, ಅದರ ಜೋಡುಹುಟ್ಟು ಬಾರಿಸುತ್ತಾ, ನದಿಯಲ್ಲಿ ನಮ್ಮ ಯಾನ ಕ್ಷಣಮಾತ್ರದಲ್ಲೇ ಆರಂಭವಾಯಿತು. ಒಂದರ್ಧ ಮೈಲಿ ಹೋದ ಮೇಲೆ, ಆ ಉಗಿ ದೋಣಿಯಲ್ಲಿದ್ದ ಖೂನಿಗಾರರಿಗೆ ಆಗಿರಬಹುದಾದ ಅಘಾತವನ್ನು ನೆನೆದು ನನಗೆ ಮೈಯೆಲ್ಲಾ ಜುಮ್ಮೆಂದಿತು. ಜಿಮ್ಗೆ ಹೇಳಿದೆ "ಜಿಮ್, ಹತ್ತಿರ ಎಲ್ಲಾದರೂ ದೀಪ ಕಂಡ ಕೂಡಲೇ ದಡ ಹತ್ತಿ, ಏನಾದರೂ ಕತೆ ಹೇಳಿ, ಯಾರನ್ನಾದರೂ ಅವರ ರಕ್ಷಣೆಗೆ ಕಳಿಸೋಣ. ಆಮೇಲೆ ಅವರನ್ನು ನೇಣು ಬೇಕಾದರೂ ಹಾಕಿಕೊಳ್ಳಲಿ" ಎಂದೆ.
ಜಿಮ್ ಮಾತಾಡಲಿಲ್ಲ.
ಆದರೆ ಈ ಯೋಜನೆ ಕಾರ್ಯಗತವಾಗಲಿಲ್ಲ. ಏಕೆಂದರೆ ಮಳೆ ಮತ್ತೆ ಮುಸಲಧಾರೆಯಾಗಿ ತನ್ನ ಕರಾಳ ಸ್ವರೂಪ ತೋರಲು ಪ್ರಾರಂಭಿಸಿತು. ಗಗನ ಮಿಂಚು-ಗುಡುಗುಗಳ ಆಡೊಂಬಲವಾಯಿತು. ಆ ಮಿಂಚಿನ ಬೆಳಕಿನಲ್ಲೇ ಅಲ್ಲೇ ಸಮೀಪದಲ್ಲಿ ತೇಲುತ್ತಿದ್ದ ಮಸುಕು ಗುರುತು ನಮ್ಮದೇ ತೆಪ್ಪವೆಂದು ತಿಳಿದು, ನಮ್ಮ ಅದೃಷ್ಟಕ್ಕೆ ಮನದಲ್ಲೇ ಹಿಗ್ಗಿದೆವು. ಅದನ್ನೇ ಹಿಡಿದು ಅದರ ಹಿಂದೆಯೇ ಸಾಗಿ ಬಂದ ನಮಗೆ ದೂರದಲ್ಲೊಂದು ದೀಪ ಉರಿಯುವ ಬೆಳಕು ಕಾಣಿಸಿತು. ಕೂಡಲೇ ನಮ್ಮ ಪುಟ್ಟದೋಣಿಯಲ್ಲಿದ್ದ ಸಕಲವನ್ನೂ ನಮ್ಮ ತೆಪ್ಪದೋಣಿಗೇರಿಸಿ, ಜಿಮ್ನನ್ನು ತೆಪ್ಪಕ್ಕೇರಿಸಿ, ಎರಡು ಮೈಲು ಕೆಳಗಿಳಿದು ಜಿಮ್ ದೀಪವೊಂದನ್ನು ಹತ್ತಿಸಬೇಕೆಂದೂ, ನಾನು ಆ ನತದೃಷ್ಟ ಖೂನಿಗಾರರ ಅದೃಷ್ಟ ಪರೀಕ್ಷಿಸಿ, ಅವನನ್ನು ಸೇರಿಕೊಳ್ಳುವುದಾಗಿಯೂ ತಿಳಿಸಿ, ಬೆಳಕಿನತ್ತ ಧಾವಿಸಿದೆ.
ಬೆಳಕು ಬೀರುತ್ತಿದ್ದುದು, ದೊಡ್ಡ ಹಾಯಿದೋಣಿಯೊಂದರ ದೀಪವಾಗಿತ್ತು. ಅದನ್ನು ಸಮೀಪಿಸಿ ಯಾರಾದರೂ, ದೋಣಿಯ ಕಾವಲುಗಾರನೋ, ಕ್ಯಾಪ್ಟನ್ನನೋ ಕಾಣುತ್ತಾನೇನೋ ಎಂದು ದೃಷ್ಟಿ ಹಾಯಿಸಿದೆ. ದೋಣಿಯ ಮೇಲೆ ಸುರಕ್ಷಿತವಾದ ಜಾಗದಲ್ಲಿ ಆತ ನಿದ್ರಾದೇವಿಯ ವಶನಾಗಿ ಪವಡಿಸಿದ್ದ. ಎರಡು ಮೂರು ಬಾರಿ ಅಲ್ಲಾಡಿಸಿದ ಮೇಲೆ ಅವನಿಗೆ ಎಚ್ಚರವಾಗುವ ಹಾಗೆ ಕಂಡಿತು. ನಾನು ದೊಡ್ಡ ದನಿ ತೆಗೆದು ಅಳತೊಡಗಿದೆ.
ಗಲಿಬಿಲಿಗೊಂಡು ಎದ್ದ ಅವನು, ನಾನೊಬ್ಬನೇ ಇದ್ದುದನ್ನು ಮನಗಂಡು, ಆಕಳಿಸಿ ಮೈಮುರಿದು "ಯಾಕೋ ಮಗು? ಯಾಕಳ್ತಿದೀಯಾ ಏನಾಯ್ತು? " ಎಂದ. ನಾನು 'ಅಪ್ಪ... ಅಮ್ಮ... ತಂಗಿ... ಎಲ್ಲಾ... ಎಲ್ಲಾ.....ಊ ಊಊ ಊಊ .." ಇನ್ನಷ್ಟು ದೊಡ್ಡ ದನಿ ತೆಗೆದು ಅಳತೊಡಗಿದೆ.
ಅವನು ಬೇಸರದ ದನಿಯಲ್ಲಿ "ಅಳುವುದನ್ನು ನಿಲ್ಲಿಸಿ ಏನಾಯ್ತೆಂದು ಹೇಳೋ?" ಎಂದ.
"ಅವರೆಲ್ಲಾ... ಅವರೆಲ್ಲಾ.... ನೀನು ಈ ಹಡಗಿನ ಕಾವಲಿನವನೇ?"
"ಹೂಞ್.... ಕಾವಲುಗಾರ, ಕಫ಼್ತಾನ...ಅಡಿಗೆಯವ.. ಪರಿಚಾರಕ, ಮಾಲಿಕ ಎಲ್ಲಾ ನಾನೇ..ಜಿಮ್ ಹಾರ್ನ್ಬ್ಯಾಕ್ನಷ್ಟು ದೊಡ್ಡ ಮನುಷ್ಯ ಅಲ್ಲದಿದ್ದರೂ, ನಾನಂತೂ ಖುಶಿಯಾಗಿದ್ದೀನಿ.. ಅದಿರಲಿ ನಿನ್ನ ವಿಷಯ ಏನು?" ಅಂದ.
"ಅಯ್ಯೋ, ನಮ್ಮಪ್ಪ, ಅಮ್ಮ, ತಂಗಿ.. ಹೂಕರ್ ಆಂಟಿ.. ಎಲ್ಲಾ ಅಲ್ಲಿದ್ದಾರೆ. ನಿನ್ನ ದೋಣಿ ಎತ್ಕೊಂಡು ಬೇಗ ಹೋಗಿ ಅವರನ್ನುಳಿಸು"
"ಅಲ್ಲಿ ಎಂದರೆ ಎಲ್ಲಿ?"
"ಅಧೇ ಆ ಮುರಿದಿರೋ ಉಗಿದೋಣಿ ಇದೆಯಲ್ಲಾ ಅದರಲ್ಲಿ"
"ಏನು?, ಅವರಿಗೇನಾದ್ರೂ ತಲೆ ಕೆಟ್ಟಿದೆಯಾ? ಯಾವ ನಿಮಿಷದಲ್ಲಿ ಅದು ಮುಳುಗೊತ್ತೋ ಏನೋ? ಅದರಲ್ಲಿ ಅವರೇನು ಮಾಡ್ತಾ ಇದಾರೆ?"
"ನಾವೆಲ್ಲಾ ನಮ್ಮ ದೋಣೀಲಿ ಬರಬೇಕಾದರೆ ಆ ದೋಣಿಗೆ ಡಿಕ್ಕಿ ಹೊಡೆದು ನಮ್ಮ ದೋಣಿ ಮುಳುಗ್ಹೋಯ್ತು. ಹೇಗೋ ಹೂಕರ್ ಆಂಟಿ ಆ ದೋಣೀನ ಹಿಡ್ಕೊಂಡ್ಲು, ಅಂತೂ ನಾವೆಲ್ಲಾ ಹೇಗೋ ಕಷ್ಟಪಟ್ಟು ಆ ದೋಣೀನ ಹತ್ಕೊಂಡು, ಅದರಲ್ಲಿದ್ದ ಈ ದೋಣೀನ ತಗೊಂಡು ಸಹಾಯಕ್ಕೆ ಯಾರದ್ರೂ ಸಿಗ್ತಾರೇನೋ ನೋಡೋಣ ಅಂತ ನಾನು ಬಂದೆ"
"ಸರಿ ಮಗೂ, ನಾನೇನೋ ಅವರನ್ನ ಬದುಕಿಸಬಹುದು. ಆದರೆ ನನಗೆಷ್ಟು ಖರ್ಚು ಬರುತ್ತೆ ಗೊತ್ತಾ? ಅದನ್ನ ಹೇಗೆ ನಿಭಾಯಿಸೋದು. ನಿಮ್ಮಪ್ಪ ಏನು...?"
" ಅವನ ಮಾತನ್ನು ಅರ್ಧಕ್ಕೆ ತುಂಡರಿಸುತ್ತಾ"ಹೂಕರ್ ಆಂಟಿ ಹೇಳ್ತಾ ಇದ್ಲು.. ಅವಳ ಚಿಕ್ಕಪ್ಪ ಹಾರ್ನ್ಬ್ಯಾಕ್..."
"ಯೋ .. ಹಾರ್ನ್ಬ್ಯಾಕ್ ಅವಳ ಚಿಕ್ಕಪ್ಪಾನಾ..? ಸರಿ ಮುಂಚೇನೆ ಯಾಕೆ ಹೇಳ್ಲಿಲ್ಲ. ಸರಿ ನೀನು ಹೊರಡು. ಸ್ವಲ್ಪ ಮುಂದೆ ಊರೊಂದಿದೆ. ನಾನು ಕೆಳಗೆ ಹೋಗಿ ಇನ್ನೊಂದು ಸ್ವಲ್ಪ ಜನ ಕರ್ಕೊಂಡು ಅವರತ್ರ ಹೋಗ್ತೀನಿ" ಎಂದವನೇ ತನ್ನ ಕ್ಯಾಬಿನ್ನಿನಿಂದ ಹಡಗು ನಿಯಂತ್ರಣ ಕೊಠಡಿಯೆಡೆಗೆ ಓಡಿದ. ನಾನು ನದಿಯ ಮಧ್ಯಕ್ಕೆ ಹುಟ್ಟು ಹಾಕಿ ನದಿಯ ಹರವಿನೊಡನೆ ತೇಲಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲಿಯೇ ಆ ಉಗಿದೋಣಿ ನೀರಲ್ಲಿ ಮುಳುಗುತ್ತಾ, ತೇಲುತ್ತಾ ನಾನಿರುವೆಡೆಗೇ ಬಂತು. ಅದನ್ನು ನೋಡಿದ ಕೂಡಲೇ ನನಗೆ ಕಾಲ್ಬೆರಳಿಂದ ಮಿದುಳವರೆಗೂ ಚಳಕು ಹೊಡೆದಂತಾಯಿತು. ಅದಾಗಲೇ ಮುಕ್ಕಾಲು-ಮೂರು ಪಾಲು ನೀರಿನಲ್ಲಿ ಮುಳುಗಿತ್ತು. ಅದರಲ್ಲಿದ್ದವರು ಜೀವದಿಂದ ಇರುವ ಸಾಧ್ಯತೆಯೇ ಇರಲಿಲ್ಲ. ಹಾಗೂ ಒಂದೆರಡು ಬಾರಿ ಕೂಗಿ ನೋಡಿದೆ. ಆದರೆ ಯಾರೂ ಓಗೊಡಲಿಲ್ಲ. ಮನಸ್ಸಿಗೇನೋ ವಿಷಾದ ಆವರಿಸಿಕೊಂಡಿತು.
ಜಿಮ್ನ ತೆಪ್ಪ ತಲುಪುವಷ್ಟರಲ್ಲಿ ಎಷ್ಟೋ ಸಮಯ ಹಿಡಿಯಿತು. ಅಷ್ಟರಲ್ಲಾಗಲೇ ಮೂಡಲಲ್ಲಿ ಬೆಳಕು ಕಾಣುತ್ತಿತ್ತು. ಮೋಡದಿಂದ ತುಂಬಿದ್ದ ಆಗಸದಲ್ಲಿ ಕಂದು ಬಣ್ಣದ ಬೆಳಕು ಧಾರೆಯಾಗಿ ಹರಿದು ಭೂಮಂಡಲವನ್ನೆಲ್ಲಾ ವ್ಯಾಪಿಸುತ್ತಿತ್ತು. ನಾವು ಪುಟ್ಟ ದೋಣಿಯನ್ನು ನೀರಿನಲ್ಲಿ ಮುಳುಗಿಸಿ, ನಮ್ಮ ತೆಪ್ಪ ಅವಿಸಿಟ್ಟು, ದಡದ ತೋಪೊಂದರಲ್ಲಿ ಆಡಗಿ ಮಲಗಿದೆವು. ಸತ್ತವರಂತೆ.....!