0೭. ಜಿಮ್ನನ್ನುಳಿಸಿದ ಹಕ್.
ಎಲ್ಲಾ ಸರಿಯಾಗಿದ್ದು ಇದೇ ವೇಗದಲ್ಲೇ ನಾವು ಹೋಗುತ್ತಿದ್ದರೆ, ಕೈರೋ ಇನ್ನು ಮೂರೇ ರಾತ್ರಿಗಳಷ್ಟು ದೂರದಲ್ಲಿತ್ತು. ಅಲ್ಲಿ ಹೋದ ಕೂಡಲೇ ತೆಪ್ಪವನ್ನು ಮಾರಿ, ಓಡಿಯೋ ಕಡೆಯ ಮುಕ್ತ ರಾಜ್ಯಗಳಿಗೆ ಹೋಗಬೇಕೆನ್ನುವ ಯೋಜನೆ ನಮ್ಮದು. ಅಲ್ಲಿ ಗುಲಾಮಗಿರಿ ಇಲ್ಲವಲ್ಲ. ಜಿಮ್ ಸ್ವತಂತ್ರ ಮಾನವ ಆಗುತ್ತಾನಲ್ಲ.
ಎರಡನೇ ರಾತ್ರಿ ಮಂಜು ಮುಸುಕಲ್ ಶುರುವಾಯಿತು. ನಾವು ನ್ದಿಯ ದಡಕ್ಕೆ ಹೋಗಿ ತೆಪ್ಪವನ್ನು ಕಟ್ಟಿ ಸ್ವಲ್ಪ ವಿರಮಿಸಿಕೊಳ್ಳಬೇಕೆಂದಿದ್ದೆವು. ಅದಕ್ಕಾಗಿ ನಾನು ಚಿಟ್ಟು ದೋಣಿಗಿಳಿದು ದಡದ ಕಡೆಗೆ ಹುಟ್ಟು ಹಾಕತೊಡಗಿದೆ. ಆದರೆ ಅಲ್ಲಿ ನೀರಿನ ಸೆಳೆತ ಎಷ್ಟು ಜೋರಾಗಿತ್ತೆಂದರೆ, ನಾನು ದಡ ಸೇರುವುದಿರಲಿ, ತೆಪ್ಪ ವೇಗವಾಗಿ ನೀರಿನ ಸೆಳವಿನ ಜೊತೆ ಮುನ್ನುಗ್ಗಲಾರಂಭಿಸಿತು. ನನ್ನ ದಡ ಸೇರುವ ಪ್ರಯತ್ನಕ್ಕೆ ಹುಟ್ಟು ಹಾಕುತ್ತಿರುವಾಗ ಏನಾಯಿತೋ ಏನೋ, ನನ್ನ ಚಿಟ್ಟು ದೋಣಿಯನ್ನೂ, ತೆಪ್ಪವನ್ನೂ ಬಿಗಿದಿದ್ದ ಹಗ್ಗ ತುಂಡರಿಸಿ, ತೆಪ್ಪ ಬಿಲ್ಲಿನಿಂದ ಹೊರಟ ಬಾಣದಂತೆ, ವೇಗವಾಗಿ ನೀರಿನ ಸೆಳವಿನ ಜೊತೆಗೆ ತೂರಿಹೋಯಿತು. ಮಂಜು ಎಷ್ಟು ದಟ್ಟವಾಯಿತೆಂದರೆ, ಕೆಲವೇ ಕ್ಷಣಗಳಲ್ಲಿ ತೆಪ್ಪ ಕಾಣದಂತಾಯಿತು. ನಾನು ತಡ ಮಾಡಲಿಲ್ಲ. ನನ್ನ ಚಿಟ್ಟು ದೋಣಿಯಲ್ಲೇ ತೆಪ್ಪದ ಬೆನ್ನಟ್ಟಿದೆ. ಕೇಕೆ ಹಾಕಿದರೂ ಉತ್ತರ ಬರಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ದೂರದಲ್ಲೊಂದು ಕ್ಷೀಣ ಸದ್ದಿನ ಕೇಕೆ ಕೇಳಿಸಿತು. ಆ ಸದ್ದನ್ನು ಹಿಂಬಾಲಿಸಿ ವೇಗವಾಗಿ ಹುಟ್ಟುಹಾಕಿದರೂ, ದನಿ ಕೇಳದಂತಾಯಿತು. ಕಡೆಗೆ ಮೌನವಾಗಿ ನದಿಯೊಡನೆ ಸಾಗುವುದೊಂದೇ ನನಗುಳಿದ ಮಾರ್ಗ. ಅಲೆಗಳ ಭೀಷಣ ಗರ್ಜನೆಯನ್ನುಳಿದು ಬೇರೇನೂ ಕೇಳುತ್ತಿರಲಿಲ್ಲ. ಸುರಿದ ಹಿಮವನ್ನು ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ನಾನೆತ್ತ ಹೋಗುತ್ತಿದ್ದೇನೆಂಬ ಅರಿವಂತೂ ಮೊದಲೇ ಇರಲಿಲ್ಲ. ಆಯಾಸ ತಂತಾನೇ ನಿದ್ದೆಯನ್ನೆಳತಂದು, ನಾನೆಷ್ಟೇ ಪ್ರಯತ್ನಿಸಿದರೂ, ಎಚ್ಚರವಿರಲಾರದೆ ಹೋದೆ.
ನಾನು ಕಣ್ಣು ಬಿಟ್ಟಾಗ ಆಗಸದಲ್ಲಿ ನಕ್ಷತ್ರಗಳು ಹೊಳೆಯುತ್ತಿದ್ದವು. ಮಂಜು ಸಂಪೂರ್ಣವಾಗಿ ಕರಗಿತ್ತು. ನಾನೆಲ್ಲಿದ್ದೇನೆ, ಏನಾಗಿತ್ತು ಎಂದು ತಿಳಿದುಕೊಳ್ಳಲು ನನಗೆ ಕೆಲವು ಕ್ಷಣಗಳೇ ಹಿಡಿದವು.
ನೀರಿನ ಮೇಲೆ ಆ ಕಗ್ಗತ್ತಲ ರಾತ್ರಿಯಲ್ಲಿ ಮುಸುಕು ಆಕಾರವೊಂದು ಗೋಚರಿಸಿದಂತಾಯಿತು. ಕೂಡಲೇ ಅಲ್ಲಿಗೆ ಹುಟ್ಟು ಹಾಕುತ್ತಾ ಹೋದೆ. ಅಲ್ಲಿ ನಾಲ್ಕಾರು ಮರದ ದಿಮ್ಮಿಗಳು ಒಟ್ಟಾಗಿ ತೇಲುತ್ತಿದ್ದವಷ್ಟೆ. ಸ್ವಲ್ಪ ಸಮಯದ ನಂತರ ಅಂತದೇ ಮಸುಕು ಆಕೃತಿಯೊಂದು ಗೋಚರಿಸಿತು. ಈ ಬಾರಿಯೂ ಹತ್ತಿರ ಹೋದೆ. ಅದು ನಮ್ಮ ತೆಪ್ಪವೇ ಆಗಿತು. ಅದರ ಮೇಲೆ ಜಿಮ್ ಮೊಣಕಾಲುಗಳ ನಡುವೆ ತಲೆ ತೂರಿಸಿ, ನಿದ್ರಾವಶನಾಗಿದ್ದ. ತೆಪ್ಪ ನೋಡಿದಾಕ್ಷಣ ಅದು ಪಯಣಿಸಿರಬಹುದಾದ ದುರ್ಗಮ ಹಾದಿ ಅರಿವಾಗುವಂತಿತ್ತು. ಅದರ ಹುಟ್ಟು ಮುರಿದುಬಿದ್ದಿತ್ತು. ನದಿಯಲ್ಲಿ ತೇಲಿ ಬಂದ ಕಸಕಡ್ಡಿಗಳೂ, ಎಲೆಗಳೂ ಅದರ ಮೇಲೆಲ್ಲಾ ಬಿದ್ದಿದ್ದವು. ನಾನು ತೆಪ್ಪಕ್ಕೆ ನೆಗೆದು, ನನ್ನ ಚಿಟ್ಟುದೋಣಿಯನ್ನು ಅದಕ್ಕೆ ಕಟ್ಟಿ, ಜಿಮ್ನ ಕಾಲಬುಡದಲ್ಲಿ ತೂರಿಕೊಂಡು ತುಂಬಾ ಹೊತ್ತಿನಿಂದ ಮಲಗಿರುವವನಂತೆ ಮಲಗಿಬಿಟ್ಟೆ. ಆಮೇಲೆ ಆಗ ತಾನೇ ಎದ್ದವನಂತೆ, ಆಕಳಿಸುತ್ತಾ, ಮೈಮುರಿಯುತ್ತಾ.' ಜಿಮ್, ತುಂಬಾ ಹೊತ್ತು ಮಲಗಿಬಿಟ್ಟೆನಾ... ನೀನೇಕೆ ನನ್ನ ಏಳಿಸಲಿಲ್ಲ.?" ಎಂದೆ.
"ದೇವರೇ, ದೇವರೇ.. ಹಕ್..., ನೀವು ಬದುಕಿದ್ದೀರಾ...... ಮುಳುಗಲಿಲ್ಲ ತಾನೇ...? ದೇವರು ದೊಡ್ಡವನು ನೀವು ಮತ್ತೆ ಸಿಕ್ಕರಲ್ಲ." ಎಂದ.
'ಏನಾಗಿದೆ ಜಿಮ್ ನಿನಗೆ... ಕುಡಿದು ಏನಾದರೂ ಮಾತಾಡ್ತಾ ಇದ್ಧೀಯಾ..? ನಾನೆಲ್ಲಿಗೆ ಹೋಗಿದ್ದೆ?"
"ಅಯ್ಯಯ್ಯೋ...! ನನ್ನ ಕಣ್ಣು ನೋಡಿ ಹೇಳಿ. ನೀವೆಲ್ಲೂ ತಪ್ಪಿಸಿಕೊಂಡಿರಲಿಲ್ಲವಾ?"
"ಇಲ್ಲವಲ್ಲಾ.. ನಾವಿಲ್ಲೇ ಕೂತ್ಕೊಂಡು ಮಾತಾಡ್ತಾ ಇದ್ದಿವಿ. ಹತ್ತು ನಿಮಿಷದ ಹಿಂದೆ. ನೀನು ಹೀಗೇ ತೂಕಡಿಸಿಬಿಟ್ಟೆ. ಏನಾದರೂ ಕನಸು ಬಿತ್ತಾ..?"
"ಹತ್ತು ನಿಮಿಷದಲ್ಲೇ ಅಷ್ಟೊಂದು ಕನಸು ಬೀಳುತ್ತಾ..?"
"ಹೂ ಇರಬೇಕು. ಯಾಕೇಂದ್ರೆ ನೀನು ಹೇಳೋದೇನೂ ನಡೆದ ಹಾಗೆ ಕಾಣಿಸೋದಿಲ್ಲವಲ್ಲ..! ಅದ್ಸರಿ ಏನಂತಾ ಕನಸು ನಿನಗೆ ಬಿದ್ದದ್ದು?"
ಜಿಮ್ ತನ್ನ 'ಕನಸ'ನ್ನು ನನಗೆ ವಿವರಿಸಿ ಹೇಳಿದ, ಮಧ್ಯೆ ಉಪ್ಪು-ಕಾರ ಮಸಾಲೆ ಸೇರಿಸಿ. ಅಂತೂ ಅದೊಂದು ರೋಚಕ ಕತೆಯಾಯ್ತು. ಜಿಮ್ ಅದೆಲ್ಲಾ ಹೇಳಿ ಮುಗಿಸಿದ ನಂತರ "ಜಿಮ್ ಇದೆಲ್ಲಾ ಕನಸಾದ್ರೆ, ಈ ಕಸಕಡ್ಡಿ ಎಲ್ಲಾ ಹೇಗೆ ಬಂದಿರಬಹುದು..?" ಎಂದೆ. ಅದನ್ನೆಲ್ಲಾ ನೋಡುತಾ ಜಿಮ್ ಅಂತರ್ಮುಖಿಯಾಗಿ ಹೋದ. ಸ್ವಲ್ಪ ಸಮಯದ ನಂತರ ವಿಷಾದ ತುಂಬಿದ ದನಿಯಲ್ಲಿ ನನ್ನನ್ನೇ ನೋಡುತ್ತಾ "ನೀನು ತಪ್ಪಿಸಿಕೊಂಡುಬಿಟ್ಟಿರಿ ಅಂತ ನನ್ನ ಹೃದಯಾನೇ ನಿಂತ ಹಾಗೆ ಆಗಿಬಿಟ್ಟಿತ್ತು. ಆದರೆ ಎಚ್ಚರವಾದಾಗ ನೀನು ಇಲ್ಲೇ ಕ್ಷೇಮವಾಗಿದ್ದೆ. ನನಗೆಷ್ಟು ಸಂತೋಷ ಆಯ್ತು ಗೊತ್ತಾ..? ಕಷ್ಟಾನ ಕನಸು ಅಂದ್ಕೊಂಡು ಮರೀಬೇಕಂತೆ. ಹಾಗೇ ನಾನೂ ಇದನ್ನು ಕನಸು ಅಂತನ್ಕೊಂಡೆ. ಆದರೆ ನನ್ನ ಮುಠ್ಠಾಳನ್ನ ಮಾಡಬಾರದು. ಬೇರೆಯವರ ತಲೆ ಮೇಲೆ ಮಣ್ಣು ಹುಯ್ದು, ಅವರು ನಾಚಿಕೊಂಡು ತಲೆ ತಗ್ಗಿಸಿದಾಗ ನೋಡೋದು ಚೆನ್ನಾಗಿರಲ್ಲ.' ಎಂದು ಬಿಟ್ಟ.
ನನಗೆ ಬ್ರಹ್ಮಾಂಡದಷ್ಟು ನಾಚಿಕೆಯಾಗಿತ್ತು. ಮೌನವಾಗಿ ಕುಳಿತ ಅವನ ಬಳಿ ಹೋಗಿ "ನನ್ನನ್ನು ಕ್ಷಮಿಸು ಜಿಮ್" ಎಂದೆ. ಕೇಳುವ ಮೊದಲು ಒಬ್ಬ ಕರಿಯನ ಬಳಿ ನಾನು ಕ್ಷಮಾಪಣೆ ಕೇಳಬಹುದೇ ಎಂದು ಯೋಚಿಸಿದ್ದು ನಿಜ. ಆದರೆ ಮತ್ತೆಂದೂ ಅದಕ್ಕಾಗಿ ಪಶ್ಚಾತ್ತಾಪ ಪಡಲಿಲ್ಲ. ಅಷ್ಟೇ ಅಲ್ಲ. ಇಂತಹ ಹುಡುಗಾಟದ ಪ್ರಯೋಗಗಳಿಗೆ ಜಿಮ್ನನ್ನು ಗುರಿ ಮಾಡಿಕೊಳ್ಳುವುದನ್ನು ಸಂಪೂರ್ಣ ನಿಲ್ಲಿಸಿಬಿಟ್ಟೆ.
ಎಂದಿನಂತೆ ಹಗಲು ನಿದ್ರೆಯಲ್ಲೇ ಕಳೆಯಿತು. ರಾತ್ರಿ ನಮ್ಮ್ ಪಯಣ ಮುಂದುವರೆದಿತ್ತು. ಜಿಮ್ ಸ್ವತಂತ್ರನಾಗುವ ಗಳಿಗೆ ಹತ್ತಿರವಾಗುತ್ತಿದೆ ಎನಿಸಿತು, ಆ ಗಳಿಗೆ ಹತ್ತಿರವಾಗುತ್ತಿದ್ದಂತೆ ನನ್ನ ಮನಸ್ಸಿನಲ್ಲೂ ಏನೋ ಅಪರಾಧೀ ಭಾವ ಉದ್ಭವಿಸುತ್ತಿತ್ತು. ಗುಲಾಮನೊಬ್ಬ ಹೀಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುವುದು ಅಪರಾಧ ಎಂದು ಕಾನೂನು ಹೇಳುತ್ತದಲ್ಲ. ಅಲ್ಲದೆ ಜಿಮ್ ಬೇರೆ ಸಂತಸದಿಂದ "ಕೈರೋಗೆ ಹೋಗಿ ನಾಲ್ಕು ಕಾಸು ಸಂಪಾದನೆ ಮಾಡಿ, ನನ್ನ ಹೆಂಡತಿ ಮಕ್ಕಳನ್ನು ಬಿಡಿಸಿಕೊಂಡು ಹೋಗುತ್ತೇನೆ" ಎಂದು ಬೇರೆ ಹೇಳುತ್ತಿದ್ದ. ಗುಲಾಮರನ್ನು ಬಿಡಿಸಿಕೊಂಡು ಹೋಗುವುದು ಎಂದರೆ, ಕದ್ದುಕೊಂಡು ಹೋಗುವುದೇ ತಾನೇ..? ಅಷ್ಟಕ್ಕೂ ವ್ಯಾಟ್ಸನ್ ಆಂಟಿ ಇವನಿಗೇನು ಕಮ್ಮಿ ಮಾಡಿದ್ದಳು.? ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದಳಲ್ಲಾ... ಅಂತಹವಳಿಂದ ಇವನು ಹೀಗೆ ತಪ್ಪಿಸಿಕೊಂಡು ಬರಬಹುದೇ! ಇಂತಹವೇ ಇನ್ನೂ ಏನೇನೋ ಯೋಚನೆಗಳು. ಕಡೆಗೆ ಮುಂದಿನ ಊರಿನಲ್ಲಿ ನಾಲ್ಕು ಜನಕ್ಕೆ ಜಿಮ್ ತಪ್ಪಿಸಿಕೊಂಡು ಬಂದಿರುವ ಗುಲಾಮ ಎಂದು ಹೇಳಿಬಿಡಬೇಕೆಂದೇ ನಿಶ್ಚಯಿಸಿಬಿಟ್ಟೆ.
ಅಷ್ಟರಲ್ಲೇ ನಗರ ಸಮೀಪಿಸಿ, ದೀಪದ ಬೆಳಕು ಕಾರಿರುಳ ರಾತ್ರಿಯಲ್ಲೆ ಭುವಿಗಿಳಿದ ಸ್ವರ್ಗದ ಹಾಗೆ ತೋರಲಾರಂಭಿಸಿತು. ಅದು ಕೈರೋ ಇರಬೇಕೆಂದು ತಿಳಿದ ಜಿಮ್ ಮಕ್ಕಳಂತೆ ಚಪ್ಪಾಲೆ ಹೊಡೆದು, ಕೇಕೆ ಹಾಕಿ ನಗುತ್ತಿದ್ದ.
ಜಿಮ್ಗೆ "ಜಿಮ್ ನಾನು ನನ್ನ ದೋಣಿಯಲ್ಲಿ ಹೋಗಿ ಅದಾವ ಊರೋ ನೋಡಿಬರುತ್ತೇನೆ ." ಎಂದೆ. ಜಿಮ್ ಅದಕ್ಕೆ "ಧಾರಾಳವಾಗಿ ಹೋಗಿ ಬಾ .. ನಿನ್ನುಪಕಾರವನ್ನ ನಾನ್ಯಾವತ್ತೂ ಮರೆಯಲ್ಲ. ನೀನಿಲ್ಲದಿದ್ದರೆ ನಾನಿಷ್ಟು ಬೇಗ ಈ ಗುರಿ ಸಾಧಿಸಲು ಆಗುತ್ತಿರಲಿಲ್ಲ. " ಎಂದು ಏನೇನು ಋಣದ ಮಾತುಗಳನ್ನು ಆಡಲು ಶುರುಮಾಡಿದ. ಅತ್ಯುತ್ಸಾಹದಿಂದ ನನ್ನ ದೋಣಿ ಸಿದ್ದ ಮಾಡಿಕೊಟ್ಟ. "ಇನ್ನು ಕೆಲವೇ ಗಂಟೆಗಳಲ್ಲಿ ನಾನು ಸ್ವತಂತ್ರ ಮನುಷ್ಯ. ನೀವಿಲ್ಲದಿದ್ದರೆ ಇದು ಆಗುತ್ತಿರಲಿಲ್ಲ. " ಎಂದು ಮತ್ತೆ ಕುಯ್ಯಲು ಶುರು ಮಾಡಿದ. ನನಗೇನೋ ಒಂದು ವಿಧದ ಅಸಹನೆ ಕುದಿಯಲಾರಂಭಿಸಿತು. ಯಾರಿಗಾದರೂ ಅವನ ವಿಷಯ ಹೇಳುವುದೇ ಸೈ ಎಂದು ತೀರ್ಮಾನಿಸಿದೆ. ಚಿಟ್ಟುದೋಣಿಯಲ್ಲಿ ಹೊರಟ ಕೆಲವೇ ನಿಮಿಷಗಳಲ್ಲಿ ನನಗಿದುರಾಗಿ ಇನ್ನೊಂದು ಚಿಟ್ಟುದೋಣಿ ಬಂತು. ಅದರಲ್ಲಿ ಇಬ್ಬರು ಬಂದೂಕುಗಳೊಡನೆ ಕುಳಿತಿದ್ದರು. ಅವರು ನನ್ನ್ ಬಳಿ ಬಂದು ನಿಂತು "ಅಲ್ಲಿರುವುದೇನು?" ಎಂದರು. ನಾನು ಗಂಭೀರಸ್ವರದಲ್ಲಿ
"ತೆಪ್ಪ"
"ಅದರಲ್ಲಿ ಯಾರಾದರೂ ಇದ್ದಾರಾ..?"
"ಹೂ.. ಒಬ್ಬನೇ ಒಬ್ಬ."
"ಕರಿಯನೋ..?"
ನಾನು ಉತ್ತರಿಸುವಲ್ಲಿ ಸ್ವಲ್ಪ ತಡಮಾಡಿದೆ. ನಿಜ ಹೇಳಿಬಿಡಬೇಕೆಂದೇ ಪ್ರಯತ್ನಪಟ್ಟು, ಉತ್ತರಿಸಿದಾಗ "ಬಿಳಿಯ" ಎಂದಿದ್ದೆ. ನನ್ನ ಈ ದ್ವಂದ, ತೊಳಲಾಟ ಕಂಡು ಅವರಿಗೇನನ್ನಿಸಿತೋ " ಹೂ ನಾವೇ ಹೋಗಿ ನೋಡುತ್ತೀವಿ. ನಾವು ಇಲ್ಲಿ ತಪ್ಪಿಸಿಕೊಂಡಿರುವ ಗುಲಾಮರಿಗಾಗಿ ಹುಡುಕ್ತಿದೀವಿ" ಎಂದರು.
"ಬೇಕಾದ್ರೆ ಹೋಗಿ ನೋಡಿ. ಅಲ್ಲಿ ನಮ್ಮಪ್ಪ ಇದಾನೆ. ತೆಪ್ಪಾನ ದಡಕ್ಕೆಳೆಯಲು ನೀವೂ ಸ್ವಲ್ಪ ಸಹಾಯ ಮಾಡಬಹುದು. ಅಗೋ ಅಲ್ಲಿ ಆ ದ್ವೀಪದ ಹತ್ತಿರಕ್ಕೆ ಎಳೆದು ಬಿಡೋಣ. ಅವನಿಗೇನೋ ಹುಶಾರಿಲ್ಲ. ಅಮ್ಮ.. ಆನ್... ಯಾರಿಗೂ ಹುಶಾರಿಲ್ಲ."
"ನಮಗೆ ನಿಮ್ಮ ತೆಪ್ಪ ದಡಕ್ಕೆಳೆಯುವಷ್ಟು ಸಮಯ ಇಲ್ಲ. ಅದೇನೋ ನೋಡ್ಕೊಂಡು ನಾವು ಹೊರಡ್ತೀವಿ."
ಮೂವರೂ ಜೊತೆಯಾಗಿ ಹೊರಟೆವು. ಒಂದೆರಡು ಕ್ಷಣ ನಿಧಾನಿಸಿ ಮೆಲುದನಿಯಲ್ಲಿ ಹೇಳಿದೆ. "ನಿಮ್ಮನ್ನ ನೋಡಿದ್ರೆ ಅಪ್ಪನಿಗೆ ಸಂತೋಷವಾಗುತ್ತೆ. ಅವನ್ನ ನೋಡೋಕೆ ಬಂದೋರೆ ಇಲ್ಲ. ಯಾರ ಹತ್ತಿರನಾದ್ರೂ ಸಹಾಯ ಕೇಳಿದ್ರೆ ಅವರೂ ದೂರ ಹೋಗ್ಬಿಡ್ತಾರೆ" ಎಂದೆ.
"ಛೆ! ಛೇ!! ಎಂಥಾ ಕಟುಕರು.. ಆದ್ರೂ ಅದಕ್ಕೇನೋ ಕಾರಣ ಇರಬಹುದು. ಅಷ್ಟಕ್ಕೂ ನಿಮ್ಮಪ್ಪನಿಗೆ ಏನಾಗಿದೆ?"
"ಆ... ಏನೂ ಇಲ್ಲ... ಅಂತ ದೊಡ್ಡ ಕಾಯಿಲೆ ಏನೂ ಅಲ್ಲ."
ಹುಟ್ಟು ಹಾಕುವುದನ್ನು ನಿಲ್ಲಿಸಿದ ಅವರು ನನ್ನನ್ನೇ ದಿಟ್ಟಿಸಿದರು. "ಮಗೂ ನೀನು ಹೇಳುತ್ತಿರುವುದು ಸುಳ್ಳು. ನಿಜ ಹೇಳು ನಿನ್ನ ತಂದೆಗೇನಾಗಿದೆ?"
"ಅಯ್ಯೋ ಎಲ್ಲಾ ಹೇಳುತ್ತೇನೆ. ಮೊದಲು ನೀವು ನಮ್ಮ ತೆಪ್ಪಕ್ಕೆ ಬನ್ನಿ"
'ಜಾನ್ ಹಿಂದೆ ತಿರುಗಿಸು. " ಎಂದು ಹೇಳಿದ ಒಬ್ಬ. ತೆಪ್ಪದಿಂದ ಅವರಿಬ್ಬರೂ ದೂರ ಸರಿದರು.
"ಸೈತಾನನ ಮಗ ನೀನು. ನಿಜ ಹೇಳು ನಿಮ್ಮಪ್ಪನಿಗೆ ಸಿಡುಬು ಬಂದಿದೆ ಅಲ್ವಾ..? ನೋಡು ಮಗೂ ಬೇಜಾರು ಮಾಡಿಕೋಬೇಡ. ತಗೋ.. ಈ ಇಪ್ಪತ್ತು ಡಾಲರ್ ನೀನಿಟ್ಕೋ. ನಮಗೆ ಸಿಡುಬು ಬಂದ್ರೆ ನಮಗೂ ಕಷ್ಟ ಅಲ್ವಾ..ನಾವಿಲ್ಲಿಂದ ಹೋಗ್ತೀವಿ." ಎಂದವರೇ ಒಂದು ಮರದ ಹಲಗೆಯ ಮೇಲೆ ಆ ನೋಟನ್ನಿಟ್ಟು, ಅದರ ಮೇಲೆ ಭಾರಕ್ಕೆ ಸಣ್ಣ ಕಲ್ಲನ್ನಿಟ್ಟು ಅವರು ದೂರ ಹೋದರು. ತೇಲುತ್ತಾ ಬಂದ ಹಲ್ಗೆಯ್ ಮೇಲಿನ ಆ ನೋಟನ್ನು ಗಬಕ್ಕನೆ ಎತ್ತಿಕೊಂಡೆ. ಹಿಂತಿರುಗಿ ತೆಪ್ಪಕ್ಕೆ ಬಂದರೆ ಅಲ್ಲಿ ಜಿಮ್ ಇರಲಿಲ್ಲ. ತೆಪ್ಪದ ಪಕ್ಕದಲ್ಲಿ ನೀರಿನಲ್ಲಿ ಹಾರಿ ಮೂಗಿನವರೆಗೂ ಮುಳುಗಿಬಿಟ್ಟಿದ್ದ. ಭಯದಿಂದ ಸರಿಯಾಗಿ ಮಾತಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದ.
ಸ್ವಲ್ಪ ಸುಧಾರಿಸಿಕೊಂಡ ಮೇಲೆ, ನನ್ನ ಚತುರಮತಿಗೆ ತುಂಬಾ, ತುಂಬಾ.. ತುಂಬಾ ಪ್ರಶಂಸಿಸಿದ. ಆ ದಿನ ಬೆಲಕು ಹರಿಯುವ ಹೊತ್ತಿಗೆ ಜಿಮ್ ಎಲ್ಲವನ್ನೂ ನೀಟಾಗಿ ಪಿಂಡಿ ಕಟ್ಟಿಟ್ಟಿದ್ದ. ರಾತ್ರಿ ಕೈರೋ ಎಂದು ನಾವು ಭಾವಿಸಿದ್ದ ನಗರವನ್ನು ತಲುಪಿದೆವು. ನಾನು ಚಿಟ್ಟುದೋಣಿಯಲ್ಲಿ ಅದರ ಬಳಿಗೆ ಹೋಗುತ್ತಾ ಇರಬೇಕಾದರೆ ಎದುರಿನಿಂದ ಬಂದ ಇನ್ನೊಬ್ಬನನ್ನು "ಅದು ಕೈರೋನಾ..?" ಎಂದು ಕೇಳಿದೆ. ಅವನು ಇಲ್ಲವೆಂದು ಹೇಳಿದ.
ಜಿಮ್ಗೆ ಆದ ನಿರಾಸೆ ಹೇಳತೀರದು. ಮಂಜು ಮುಸುಕಿದ ಪ್ರಯಾಣದ ಆ ರಾತ್ರಿಯಲ್ಲಿ ನಾವು ಕೈರೋವನ್ನು ದಾಟಿ ಬಮ್ದಿರಬೇಕೆಂದು ಭಾವಿಸಿದೆವು.
ಆ ಬೆಳಿಗ್ಗೆ ತೆಪ್ಪವನ್ನು ಮರಕ್ಕೆ ಕಟ್ಟಿ, ಪಕ್ಕದ ಹತ್ತಿ ಹೊಲಗಳಲ್ಲಿ ಅಡಗಿ ನಿದ್ರಿಸಿದೆವು. ನಮಗೆಚ್ಚರವಾದಾಗ ನನ್ನ ಚಿಟ್ಟುದೋಣಿ ಕೊಚ್ಚಿಕೊಂಡು ಹೋಗಿಬಿಟ್ಟಿತ್ತು. ಅದು ನಮಗೊಂದು ರೀತಿ ಅಶುಭ ಶಕುನವಾಗಿತ್ತು. ಏಕೆಂದರೆ.. ಇನ್ನೂ ದುರದೃಷ್ಟ ಮರುರಾತ್ರಿ ಬರುವುದರಲ್ಲಿತ್ತು.