0೮. ಗ್ಯಾಂ‌ಗರ್ ಫೋರ್ಡ್ ಮನೆತನ.

0೮. ಗ್ಯಾಂ‌ಗರ್ ಫೋರ್ಡ್ ಮನೆತನ.

ಆ ರಾತ್ರಿ ಪೂರ್ಣ ಕಪ್ಪಾಗಿದ್ದಿತು. ಅಂದು ಮಂಜು ಮುಸುಕಿದ್ದ ರಾತ್ರಿಗಿಂತಲೂ ಇಂದು ಇರುಳು ಮಸುಕಿದ್ದ ರಾತ್ರಿ ಕುರುಡಾಗಿತ್ತು. ಕೆಲವೇ ಅಡಿಗಳ ದೂರದಲ್ಲಿರುವ ವಸ್ತುಗಳೂ ಕಾಣುತ್ತಿರಲಿಲ್ಲ. ನಾವು ಬಹು ಹೊತ್ತಿನವರೆಗೂ ನಮ್ಮ ತೆಪ್ಪದಲ್ಲಿ ಕುಳಿತು ನದಿಯ ಹರವಿನೊಡನೆ ತೇಲುತ್ತಿದ್ದೆವು. ಆಗ ಸ್ವಲ್ಪ ದೂರದಲ್ಲಿ ಮಸುಕಾದ ಕಲೆಯೊಂದು ಕಾಣಿಸಿತು. ಆ ಕಲೆ ನಿಧಾನವಾಗಿ ಬೆಳೆಯುತ್ತಾ ಬಂದಂತೆ, ಅದರ ದೀಪಗಳು ನಮಗೆ ಕಂಡವು. ಅದೊಂದು ದೊಡ್ಡ ಉಗಿದೋಣಿ ಇರಬೇಕೆಂದು ನಾನು ನಿರ್ಧರಿಸಿದೆ. ಅದು ನೇರವಾಗಿ ನಮ್ಮೆಡೆಗೇ ಬರುತ್ತಿತ್ತು. ಆ ಹಡಗಿನವರಿಗೆ ಸೂಚನೆ ಕೊಡಲು ಲಾಟೀನು ಹಚ್ಚಿದೆ. ಆದರೂ ಅದರ ವೇಗ ತಗ್ಗಲಿಲ್ಲ. ದಿಕ್ಕು ಬದಲಾಗಲಿಲ್ಲ. ಕೆಲವೊಮ್ಮೆ ಇಂತಹ ದೊಡ್ಡ ಹಡಗುಗಳು ಹೀಗೆ ಬಂದು ಚಟಕ್ಕನೆ ದಿಕ್ಕು ಬದಲಾಯಿಸುವುದುಂಟು. ಆ ಹಡಗಿನ ಕ್ಯಾಪ್ಟನ್ನರು ತಮ್ಮ ಕೈಚಳಕ ತೋರಲು ಹೀಗೆ ಮಾಡುತ್ತಾರೆ. ಆ ಉಗಿದೋಣಿಯ ಯಂತ್ರಗಳ ಸದ್ದೂ ಹುಟ್ಟು ಬಡಿಯುತ್ತಿರುವ ಸದ್ದೂ ನಿಚ್ಚಲವಾಗಿ ಕೇಳಲಾರಂಭಿಸಿತು. ಅದು ತುಂಬಾ ದೊಡ್ಡ ದೋಣಿ, ಹಡಗಿನಂತೆಯೇ ಇತ್ತು. ಆ ರಾತ್ರಿಯಲ್ಲಿ ಅದು ದೊಡ್ಡ ಕರಿಮೋಡವೊಂದನ್ನು ಮಿಣುಕು ಹುಳುಗಳು ಮುತ್ತಿದರೆ ಹೇಗೆ ಕಾಣಬಹುದೋ ಹಾಗೇ ಕಾಣುತ್ತಿತ್ತು. ಇದ್ದಕ್ಕಿದ್ದಂತೆ ಆ ದೋಣಿಯಲ್ಲೇನೋ ದೊಡ್ಡ ಸದ್ದಾಯಿತು. ಎಚ್ಚರಿಕೆಯ ಗಂಟೆಯ ಸದ್ದೂ, ಕೂಗುವ ಧ್ವನಿಗಳೂ, ಎಂಜಿನ್ನಿನ ಶಬ್ದವನ್ನೂ ಮೀರಿ ಕೇಳಲಾರಂಭಿಸಿತು. ಅ ಹೆದ್ದೋಣಿಯಂತೂ ನೇರ ನಮ್ಮೆಡೆಗೇ ಧಾವಿಸಿ ಬರುತ್ತಿತ್ತು. ನಾವು ನಿಸ್ಸಹಾಯಕರಾಗಿದ್ದೆವು. ನೇರ ನಮ್ಮ ತೆಪ್ಪದ ಮಧ್ಯಕ್ಕೆ ಗುದ್ದಿಬಿಟ್ಟಿತು. ಜಿಮ್ ಒಂದು ಕಡೆಗೆ ನಾನೊಂದು ಕಡೆಗೆ ಉರುಳಿಬಿಟ್ಟೆವು.

ಜಿಮ್ ಏನು ಮಾಡಿದನೋ ನನಗೆ ಗೊತ್ತಿಲ್ಲ. ಆದರೆ ನಾನು ನದಿಯ ಸೆಳೆತಕ್ಕೆ ಸಿಕ್ಕಿ ಬಿದ್ದಿದ್ದೆ. ಅಲ್ಲೇ ಸ್ವಲ್ಪ ತೇಲುವ ಪ್ರಯತ್ನದಿಂದಲೇ ಸಾಕಷ್ಟು ದೂರ ಕೊಚ್ಚಿ ಹೋಗುತ್ತಿದ್ದೆ. ಆಗ ಯಾವುದೋ ಮರದ ಹಲಗೆಯೊಂದು ನನ್ನ ಕೈಗೆ ಸಿಕ್ಕಿತು. ಅದನ್ನೇ ಹಿಡಿದು ತೇಲಲಾರಂಭಿಸಿದೆ. ದಡ ತಲುಪುವಷ್ಟರಲ್ಲಿ ಸುಮಾರು ಎರಡು ಮೈಲುಗಳಷ್ಟು ದೂರ ತೇಲಿರಬಹುದು. ಅಲ್ಲಿ ದಡ ಹತ್ತಿ ಸ್ವಲ್ಪ ದೂರ ತೊಪಿನಲ್ಲಿ ನಡೆದಾಗ, ಹಳೆಯ ಕಾಲದ ಮರದ ದಿಮ್ಮಿಗಳಿಂದ ಮಾಡಿದ ಒಂದು ಮನೆ ಕಾಣಿಸಿತು. ಸಂತಸದಿಂದ ಅದರ ಬಳಿ ಸಾರುವಷ್ಟರಲ್ಲಿ ನನ್ನನ್ನು ಮುತ್ತಿದವು ಭಯಂಕರಾಕಾರದ ಬೇಟೆ ನಾಯಿಗಳು. ಅಲ್ಲಡದೇ ನಿಂತಲ್ಲೇ ನಿಲ್ಲುವುದೊಂದೇ ನನಗುಳಿದ ಮಾರ್ಗ.

ಆ ಮನೆಯ ಕಿಟಕಿಯಿಂದ ಇಣುಕಿಹಾಕಿದ ತಲೆಯೊಂದು "ಯಾರು?" ಎಂದಿತು. ನಾಯಿಗಳನ್ನೆಲ್ಲಾ ಸುಮ್ಮನಿರುವಂತೆ ಗದ್ದರಿಸಿತು. ಮತ್ತೆ ನನ್ನ ಕಡೆ ತಿರುಗಿ "ಯಾರು ನೀನು? ನಿನಗಿಲ್ಲಿ ಏನು ಬೇಕು?' ಎಂದು ಜೋರಾಗಿ ಪ್ರಶ್ನಿಸಿತು.

ನಾನು ನನ್ನ ಹೆಸರು ಜಾರ್ಜ್ ಜಾಕ್ಸನ್ ಎಂದೂ, ಉಗಿದೋಣಿಯೊಂದರಿಂದ ನಾನು ಬಿದ್ದುಬಿಟ್ಟೆ ಎಂದೂ ಹೇಳಿದೆ.

"ಜಾರ್ಜ್ ಜಾಕ್ಸನ್, ನಿನ್ನ ಜೊತೆ ಯಾರಾದರೂ ಇದ್ದಾರಾ..?"
"ಯಾರೂ ಇಲ್ಲ ಸರ್..."
ನನ್ನೊಡನೆ ಮಾತಾಡಿದ ದನಿಯ ಒಡೆಯ ನನಗೇನೂ ಕಾಣಿಸುತ್ತಿರಲಿಲ್ಲ. ಅಷ್ಟೇ ಅಲ್ಲ ನಾನು ಉತ್ತರಿಸಿದ ಕೂಡಲೇ ಮನೆ ತುಂಬೆಲ್ಲಾ ಓಡಾಟದ ಸದ್ದು ತುಂಬಿ ಹೋಯಿತು. ಅಲ್ಲೊಮ್ಮೆ, ಇಲ್ಲೊಮ್ಮೆ ದೀಪ ಕಂಡು ಆರುತ್ತಾ ಇದ್ದವು. ಮತ್ತೆ ಒಳಗಿನಿಂದ ಕೂಗು ಕೇಳಿಸಿತು. "ಬೆಟ್ಟಿ, ಮುಠ್ಠಾಳಿ.. ಅಲ್ಲೇಕೆ ಇಡ್ತೀಯಾ? ಆ ದೀಪಾನ ಮುಂಬಾಗಿಲ ಹಿಂದೆ ನೆಲದ ಮೇಲಿಡು. ಬಾಬ್, ಟಾಮ್ ಎಲ್ಲಾ ಸಿದ್ದಾನಾ..? ನಿಮ್ಮ ನಿಮ್ಮ ಜಾಗ ಗೊತ್ತಲ್ಲಾ .. ಹೂಂ.'

ಈ ಗಲಾಟೆಗಳು ನಿಂತ ಮೇಲೆ, ಅದೇ ದನಿ ನನಗೆ ಮನೆಯವರೆಗೂ ನಡೆದು ಹೋಗಿ, ಮೆಲ್ಲಗೆ ಬಾಗಿಲ್ನ್ನು ತೆರೆಯಲು ಅಙ್ಞಾಪಿಸಿತು. ನಾನು ಹಾಗೇ ಮಾಡಿದೆ. ಬಾಗಿಲ ಮೇಲೆ ಕೈಯಿಟ್ಟು ನಿಧಾನವಾಗಿ ಹಿಂದೆ ತಳ್ಳುವಾಗ, ಬಂದೂಕುಗಳ ಈಡು ತುಂಬುವ ಸದ್ದು ಕೇಳಿ ಬಂದವು. "ಸಾಕು, ಅಷ್ಟೇ ಸಾಕು... ಈಗ ತಲೆ ಒಳಗೆ ಹಾಕು" ಮತ್ತೊಂದು ದನಿ ಅಙ್ಞಾಪಿಸಿತು. ನಾನು ಹಾಗೇ ಮಾಡಿದರೂ, ನನ್ನ ತಲೆಯನ್ನು ಉಡಾಯಿಸಿಬಿಡುತ್ತಾರೆಂದು ಹೆದರಿದ್ದೆ.

ಒಳಗೆ.... ಮೇಣದ ಬತ್ತಿ ನೆಲದ ಮೇಲಿತ್ತು. ಅದರ ಬೆಳಕಿನಲ್ಲಿ ನನ್ನ ಮುಖ ಒಳಗಿನವರಿಗೆ ಚೆನ್ನಾಗಿ ಕಾಣುತ್ತಿತ್ತು. ನನಗೂ ಒಳಗಿದ್ದವರೆಲ್ಲ ಚೆನ್ನಾಗಿ ಕಾಣುತ್ತಿದ್ದರು. ಮೂವರು ಗಂಡಸರು ಕೋವಿ ಹಿಡಿದು, ನನ್ನಡೆಗೆ ಗುರಿ ಮಾಡಿ ನೋಡುತ್ತಿದ್ದರು. ನಾನು ಅವರನ್ನು ದಿಟ್ಟಿಸಿದೆ. ಅವರಲ್ಲೊಬ್ಬ ಬಿಳಿ ಕೂದಲ ಮುದುಕ. ಆದರೆ ದೃಢಕಾಯ ಕುಂದಿರಲಿಲ್ಲ. ವಯಸ್ಸು ಅರವತ್ತಿರಬಹುದು. ಇನ್ನಿಬ್ಬರು ಮೂವತ್ತರ ಆಸುಪಾಸಿನ ತರುಣರು, ಸಧೃಡರೂ, ಸುರದ್ರೂಪಿಗಳೂ ಆಗಿದ್ದರು.

ಸ್ವಲ್ಪ ಹಿಂದೆ ಬಿಳಿಕೂದಲಿನ ಹೆಂಗಸೊಬ್ಬಳು ನಿಂತಿದ್ದಳು. ಅವಳ ಹಿಂದೆ ಇಬ್ಬರು ತರುಣಿಯರು.

ಹಾಗೆ ಒಂದೆರದು ನಿಮಿಷ ನಿಟ್ಟಿಸಿದ ಅವರು, ಅವರವರಲ್ಲೇ ಮಾತಾಡಿಕೊಂಡರು. ಶೆಫ಼ರ್ಡ್‍ಸನ್ನನ ಹಾಗೆ ಕಾಣುವುದಿಲ್ಲವಲ್ಲ ಎಂದುಕೊಂಡರು. ಆಮೇಲೆ ಒಳಗೆ ಕರೆದರು.

ಒಳಗೆ ಹೋದ ನನಗೆ ಪ್ರಶೇಗಳ್ ಮಳೆಯೇ ಎದುರಾಯಿತು. ನಾನು ಯಾರು? ಎಲ್ಲಿಯವನು? ಅಲ್ಲಿಗೇಕೆ ಬಂದೆ? ಹೇಗೆ ಬಂದೆ? ಇತ್ಯಾದಿ ಇತ್ಯಾದಿ. ಕಡೆಗೆ ಬಿಳಿಕೂದಲ ಹೆಂಗಸು ತನ್ನ ಕರಿಯ ಗುಲಾಮಳಿಗೆ ನನಗೊಂದಿಷ್ಟು ಊಟ ಸಿದ್ದಪಡಿಸಲು ಹೇಳಿದಳು. ಆಗ ಒಬ್ಬ ಹುಡುಗ, ನನ್ನದೇ ವಯಸ್ಸಿನವನು ಬಾಗಿಲ ಬಳಿ ಕಂಡ. ಒಂದು ಕೈಯಲ್ಲಿ ಕಣ್ಣುಜ್ಜುತ್ತಾ ಆಕಳಿಸುತ್ತಿದ್ದ ಅವನ ಇನ್ನೊಂದು ಕೈಯಲ್ಲಿ ಕೋವಿಯಿತ್ತು. "ಶೆಫ಼ರ್ಡ್‍ಸನ್ನರೆಲ್ಲಾ ಹೊರಟುಹೋದರೇ?" ಎಂದ. ಅವರೆಲ್ಲಾ "ಯಾರೂ ಬಂದಿರಲಿಲ್ಲ., ನಾವೇ ತಪ್ಪು ತಿಳಿದುಕೊಂಡೆವು" ಎಂದರು. "ಅಯ್ಯಯ್ಯೋ... ಬಂದಿದ್ದರೆ ನಾನು ಒಬ್ಬರನ್ನಾದರೂ ಹೊಡೆದು ಹಾಕಬೇಕಿತ್ತು" ಎಂದ. ಎಲ್ಲಾ ಘೊಳ್ ಎಂದು ನಕ್ಕು ಬಿಟ್ಟರು. "ಬಕ್, ನೀನಿಷ್ಟು ನಿಧಾನವಾಗಿ ಬಂದರೆ ಅವರೇ ನಮ್ಮನ್ನು ಸಾಯಿಸಿಬಿಡ್ತಾರಲ್ಲ.!" ಎಂದು ಹಾಸ್ಯ ಮಾಡಿದರು. ಬಕ್‍ನ ತಾಯಿ ನನ್ನನ್ನೂ ಅವನ ಕೊಠಡಿಗೇ ಕರೆದುಕೊಂಡು ಹೋಗುವಂತೆ ಹೇಳಿದರು. "ಹಾಗೇ ಒಣಗಿರುವ ಬಟ್ಟೆ ಕೊಡು"

ಮಹಡಿಯ ಮೇಲಿದ್ದ ಅವನ ಕೋಣೆಗೆ ಬಂದಾಗ ಅವನು ಹಿಂದಿನ ದಿನ ಹಿಡಿದ ಮೊಲದ ವಿಷಯ ಹೇಳಿದ. ಅಲೇಲೆ ಇನ್ನೂ ಏನೇನೋ ಹೇಳುತ್ತಲೇ ಇದ್ದ. ನನ್ನನ್ನು ಏನೂ ಕೇಳಲಿಲ್ಲ. ಕಡೆಗೆ ಇದ್ದಕ್ಕಿದ್ದಂತೆ "ದೀಪ ಆರಿಹೋದಾಗ ಮೋಸೆಸ್ ಎಲ್ಲಿದ್ದ ಗೊತ್ತೆ?" ಎಂದ. ನನಗೆ ಗೊತ್ತಿಲ್ಲವೆಂದೆ. ಆ ವಿಷಯವನ್ನು ನಾನು ಎಂದೂ ಕೇಳಿರಲಿಲ್ಲ. "ಸ್ವಲ್ಪ ಯೋಚನೆ ಮಾಡು"
"ಅಯ್ಯೋ ನಾನು ಅಲ್ಲಿರಲೇ ಇಲ್ಲವಲ್ಲ ನನಗೆ ಗೊತ್ತಾಗೋಕೆ? ಹೌದು ನೀನು ಯಾವ ಮೇಣದಬತ್ತಿಯ ವಿಷಯ ಹೇಳ್ತಾ ಇದೀಯಾ..?"
"ಯಾವುದೋ ಒಂದು.. ಯಾವ್ದಾದ್ರೂ ಸರಿ"
"ನನಗೊತ್ತಿಲ್ಲ.. ಅವನು ಎಲ್ಲಿದ್ದ?"
"ಕತ್ತಲಲ್ಲಿದ್ದ..!"
"ಹ್ಞಾ!!"
"ಹೌದು ಕತ್ತಲಲ್ಲಿದ್ದ.. ಹೇಳು ನೀನಿಲ್ಲಿ ಎಷ್ಟು ದಿನ ಇರ್‍ತೀಯಾ? ಎಷ್ಟು ದಿನ ಬೇಕಾದ್ರೂ ಇರು, ಇಲ್ಲಂತೂ ಒಳ್ಳೆ ಮಜಾ ಇರುತ್ತೆ."

ಹೀಗೇ ಮಾತನಾಡುತ್ತಲೇ ಇದ್ದ. ಅಲ್ಲಿನ ಕೆಲಸಗಳ ಬಗ್ಗೆ, ಕುದುರೆ ಸವಾರಿ, ಈಜು, ಬೇಟೆ, ಮೀನು ಶಿಕಾರಿ, ಅಷ್ಟೇ ಅಲ್ಲಿನ ಕೆಲಸಗಳು. ಹೀಗೇ ಏನೇನೋ. ಮತ್ತೆ ಊಟಕ್ಕಾಗಿ ಕೆಳಗೆ ಬರುವವರೆಗೂ ಅವನು ಮಾತು ನಿಲ್ಲಿಸಲಿಲ್ಲ. ಊಟದ ನಂತರ ಉಳಿದವರು ಮಾತನಾಡಿದರು.

ಅಂತೂ ಅದೊಂದು ದೊಡ್ಡ ಮನೆತನದ ಮನೆಯೆಂದು ತಿಳಿಯಿತು. ಆ ಮನೆಯ ವಿಶಾಲವಾದ ಹಜಾರದಲ್ಲಿ ಗೋಡೆಗೆ ಹಲವು ಸುಂದರ ಚಿತ್ರಗಳು ತೂಗುಬಿದ್ದಿದ್ದವು. ಕೊಠಡಿಗಳು ವಿಶಾಲವಾಗಿದ್ದವು. ಗಾಳಿ-ಬೆಳಕು ಎಲ್ಲೆಡೆಗೂ ಚೆನ್ನಾಗಿ ಬೀಳುತ್ತಿತ್ತು. ಪೀಠೋಪಕರಣಗಳ ಮೇಲೆ ಸುಂದರ ಚಿತ್ತಾರದ ಬಟ್ಟೆಗಳನ್ನು ಹಾಸಲಾಗಿತ್ತು. ಸಾಕಷ್ಟು ಪುಸ್ತಕಗಳೂ ಆ ಮನೆಯಲ್ಲಿದ್ದವು. ಅವರ ಉಡಿಗೆ-ತೊಡಿಗೆ, ಆಹಾರ-ವಿಹಾರ ಎಲ್ಲವೂ ನಾಜೂಕಿನಿಂದ ಕೂಡಿದ್ದವು. ಅದು ಸುಂದರವಾಗಿತ್ತು ಮತ್ತು ಗತ್ತಿನಿಂದ ಕೂಡಿತ್ತು.

ನಾನವರಿಗೆ ನನ್ನ ಬಗ್ಗೆ ಹೇಳಿದ್ದೆ.! ನಾನು ಅನಾಥನಾಗಿ ಚಿಕ್ಕಪ್ಪನ ಜೊತೆ ಇದ್ದೆನೆಂದೂ, ಚಿಕ್ಕಪ್ಪನೂ ಇತ್ತೀಚಿಗೆ ತೀರಿಕೊಂಡದ್ದರಿಂದಾಗಿ, ಉಳಿದ ವಸ್ತುಗಳನ್ನೆತ್ತಿಕೊಂಡು, ಅದೃಷ್ಟವನ್ನರಸುತ್ತಾ ನದಿಯಲ್ಲಿ ಹೊರಟಾಗ ಅಕಸ್ಮಾತ್ ನೀರಿಗೆ ಬಿದ್ದು ಇಲ್ಲಿಗೆ ಸೇರಿಕೊಂಡೆ, ಎಂದು. ಪಾಪ ಅವರು "ನಿನಗಿಷ್ಟ ಬಂದಷ್ಟು ದಿವಸ ಇಲ್ಲಿಯೇ ಇರು" ಎಂದರು.

ಅಲ್ಲಿ ಕಾಲ ಬಹಳ ಸುಂದರವಾಗಿತ್ತು. ಶಿಕಾರಿ, ಸವಾರಿ, ಈಜು ಜೊತೆಗೆ ಬಕ್‍ನಂಥಾ ಸ್ನೇಹಿತ. ಇನ್ನೇನು ಬೇಕು ಭೂಲೋಕ ಸ್ವರ್ಗವಾಗಲು. ಆದರೆ ಅಲ್ಲೊಂದು ತೊಂದರೆಯಿತ್ತು. ಅದೇ ಊರಿನಲ್ಲೇ ನನ್ನ ಅತಿಥೇಯರಾದ ಗ್ಯಾಂಗರ್‌ ಫ಼ೋರ್ಡ್ ಮನೆತನದ ಮೇಲೆ ದ್ವೇಷ ಕಾರುವ ಶೆಫ಼ರ್ಡ್‍ಸನ್ ಮನೆತನವೂ ಇತ್ತು. ಆದರೆ ದ್ವೇಷಕ್ಕೆ ಕಾರಣವೇನೆಂದು ಈಗಿನ ಪೀಳಿಗೆಯವರಾರಿಗೂ ಗೊತ್ತಿರಲಿಲ್ಲ. ಯಾವಾಗಲೋ ಹುಟ್ಟಿದ ವಿರಸ ಹಾಗೇ ಬೆಳೆದು ಬಂದಿತ್ತು. ಅಕಸ್ಮಾತ್ ಗ್ಯಾಂಗರ್‌ಫ಼ೋರ್ಡ್ ಮನೆತನದವರು ಒಂಟಿಯಾಗಿ ಸಿಕ್ಕರೆ ಶೆಫ಼ರ್ಡ್‍ಸನ್ನರು ಕೊಂದುಬಿಡುತ್ತಿದ್ದರು. ಶೆಫ಼ರ್ಡ್‍ಸನ್ನರು ಒಂಟಿಯಾಗಿ ಸಿಕ್ಕರೆ ಗ್ಯಾಂಗರ್‍‍ಫ಼ೋರ್ಡರು ಕೊಂದು ಬಿಡುತ್ತಿದ್ದರು.

ಒಂದು ದಿನ ಗ್ಯಾಂಗರ್‍‍ಫ಼ೋರ್ಡರ ಸೇವಕನೊಬ್ಬ ಮಧ್ಯಾಹ್ನದಲ್ಲಿ ನನ್ನ ಬಳಿ ಬಂದು "ನೀರು ಹಾವುಗಳನ್ನು ನೋಡಬೇಕೆ?" ಎಂದು ಕೇಳಿದ. ಇದು ಮೂರು ದಿನಗಳಲ್ಲಿ ಎರಡನೇ ಬಾರಿ ಆತ ಕೇಳಿದ್ದು. ಇದರ ಹಿಂದೇನೋ ಮರ್ಮ ಇದೆ ಎಂದೆನಿಸಿ "ಸರಿ ನೋಡೋಣ" ಎಂದೆ. ನನಗೆ ನೀರುಹಾವುಗಳೆಂದರೆ ಕುತೂಹಲ ಎಂದು ಅವನೇಕೆ ತಿಳಿಯಬೇಕು.!!

ಒಟ್ಟಿನಲ್ಲಿ ಜೌಗು ದಾರಿಯಲ್ಲಿ ಸ್ವಲ್ಪ ದೂರ ಸಾಗಿ, ಸಮತಟ್ಟಾದ ಒಣ ನೆಲದ ಬಳಿ ಬಂದೆವು. ಅಲ್ಲಿ ಸಾಕಷ್ಟು ಮರಗಳೂ ಪೊದೆಗಳೂ ಬೆಳೆದು, ಅದು ಸಣ್ಣ ತೋಪೊಂದರ ಹಾಗೆ ಕಾಣುತ್ತಿತ್ತು. ಅಲ್ಲಿಯವರೆಗೂ ಬಂದ ಆ ಸೇವಕ ತಾನು ಸಾಕಷ್ಟು ನೀರು ಹಾವುಗಳನ್ನು ನೋಡಿದ್ದೇನೆಂದೂ, ಸ್ವಲ್ಪ ಮುಂದೆ ಹೋದರೆ ನನ್ನ ಕಣ್ಣಿಗೂ ನೀರುಹಾವುಗಳು ಬೀಳಬಹುದೆಂದೂ ಹೇಳಿದ.

ಎಲ್ಲಾ ವಿಚಿತ್ರವಾಗಿತ್ತು.

ಅದನ್ನೇ ಅಲೋಚನೆ ಮಾಡುತ್ತಾ ಆ ತೋಪಿನ ಅಂಚಿನಲ್ಲೇ ನಡೆದು ಬರುತ್ತಿದ್ದೆ. ಅಲ್ಲೇ ಪೊದೆಗಳಲ್ಲೇ ಅಂಗಾತ ಮಲಗಿ ನಿದ್ರಿಸುತ್ತಿದ್ದ ನಮ್ಮ ಜಿಮ್.!!!! ನಾನು ಅವನನ್ನು ಏಳಿಸಿದೆ. ನನ್ನನ್ನು ನೋಡಿ ಅವನಿಗೆ ಆಶ್ಚರ್ಯವೇನೂ ಆಗಲಿಲ್ಲ. ಆದರೆ ಅಶ್ರುಭರಿತನಾಗಿದ್ದ. ಅದು ದುಖಾಃಶ್ರುವಲ್ಲ. ಅದು ಆನಂದದ ಕಣ್ಣೀರು. ಆ ರಾತ್ರಿ ಅವನು ನನ್ನ ಹಿಂದೆಯೇ ಈಜಿ ಬಂದಿದ್ದ. ನನ್ನ ಕೂಗು ಅವನಿಗೆ ಕೇಳಿಸುತ್ತಿದ್ದರೂ, ಅವನು ಉತ್ತರಿಸಿರಲಿಲ್ಲ. ಯಾರಾದರೂ ಕೇಳಿದವರು ಅವನನ್ನು ಹಿಡಿದು ಮತ್ತೆ ಗುಲಾಮಗಿರಿಗೆ ತಳ್ಳಿಬಿಡುತ್ತಾರೇನೋ ಎಂದು ಹೆದರಿದ್ದ.

ಅವನೂ ತೀವ್ರವಾಗಿ ಗಾಯಗೊಂಡಿದ್ದ. ಆದರೆ ಗ್ಯಾಂಗರ್‍‍ಫ಼ೋರ್ಡ್ ಮನೆಯ ಗುಲಾಮರ ಶುಷ್ರೂಶೆಯಿಂದ ಅವನು ಗುಣಕಂಡಿದ್ದ. ನಮ್ಮ ತೆಪ್ಪವನ್ನು ರಿಪೇರಿ ಸಹ ಮಾಡಿದ್ದ. ಈಗ ನಾವು ನಮ್ಮ ಪಯಣ ಮುಂದುವರೆಸಲು ಸಾಧ್ಯವಿತ್ತು. ಅದನ್ನೆಲ್ಲಾ ಉತ್ಸುಕತೆಯಿಂದ ಕೇಳಿದ ನಾನು "ಈಗ ನಮ್ಮ ಪಯಣ ಮುಂದುವರೆಸಲು ಸಾಧ್ಯವಿಲ್ಲ, ಯಾವುದಕ್ಕೂ ಕಾಲ ಕೂಡಿ ಬರಬೇಕು. ಆದರೂ ನೀನು ಸದಾ ಕಾಲಕ್ಕೂ ಪಯಣಕ್ಕೆ ಸಿದ್ದನಾಗಿರು" ಎಂದು ಹೇಳಿ ಮನೆಗೆ ಹಿಂತಿರುಗಿದೆ.

ಸ್ವಲ್ಪ ಕಾಲದಲ್ಲೇ ನಮಗೆ ಕಾಲ ಕೂಡಿ ಬಂತು. ಗ್ಯಾಂಗರ್‍‍ಫ಼ೋರ್ಡರ ಮನೆಯ ಹುಡುಗಿ, ಶೆಫ಼ರ್ಡ್‍ಸನ್ನರ ಮನೆಯ ಹುಡುಗನನ್ನು ಪ್ರೀತಿಸಿಬಿಟ್ಟಳು. ಇದೇ ನೆಪವಾಗಿ ಎರಡೂ ಮನೆಗಳ ನಡುವೆ ಘೋರ ಕಾಳಗವೇ ನಡೆಯಿತು. ಗ್ಯಾಂಗರ್‍‍ಫ಼ೋರ್ಡರ ಮನೆಯ ಎಲರೂ ವಿಷಯ ತಿಳಿದ ಕೂಡಲೇ ಕೋವಿ ಹಿಡಿದು ಹೊರಗೋಡಿದರು. ಹಲವಾರು ಗಂಟೆಗಳ ವರೆಗೂ ತೋಪಿನಲ್ಲಿ ಗುಂಡಿನ ಸದ್ದು ಕೇಳಿ ಬರುತ್ತಲೇ ಇತ್ತು. ಈ ಸುಸಂಧಿಯನ್ನು ಕಳೆದುಕೊಳ್ಳದೆ ನಾನು ನದಿಯತ್ತ ಓಡಿದೆ. ಅಲ್ಲಿ ನಮ್ಮ ತೆಪ್ಪ ಇದ್ದ ಜಾಗ ಶೂನ್ಯವಾಗಿತ್ತು.

ಹೊಳೆಯಲ್ಲಿ ಎರಡು ಮೃತದೇಹಗಳು ಬೋರಲು ಬಿದ್ದಿದ್ದವು. ಏನೋ ಅನುಮಾನ ಬಂದು ಅವುಗಳ ಮುಖ ನೋಡಲು ತಿರುಗಿಸಿದೆ. ಅವುಗಳಲ್ಲೊಂದು ನಮ್ಮ ಬಕ್‍ನದಾಗಿತ್ತು. ನನಗೆ ವಿಪರೀತ ಅಳುಬಂದುಬಿಟ್ಟಿತು. ಅವನ ಮುಖ ಮುಚ್ಚಿ ನಾನು ಚೆನ್ನಾಗಿ ಅತ್ತುಬಿಟ್ಟೆ. ವಾಚಾಳಿತನವನ್ನು ಬಿಟ್ಟರೆ ಬಕ್ ನಿಜಕ್ಕೂ ಅತ್ಯುತ್ತಮ ಸ್ನೇಹಿತ. ನನ್ನನ್ನಂತೂ ತುಂಬಾ ಚೆನ್ನಾಗಿ ನೋಡಿಕೊಂಡಿದ್ದ. ಅಷ್ಟರಲ್ಲಾಗಲೇ ಮಬ್ಬು ಕವಿಯುತ್ತಿತ್ತು. ತೆಪ್ಪ ಕಾಣದಾಗಿದ್ದು ನೆನಪಿಗೆ ಬಂತು. ಜೋರಾಗಿ ಜಿಮ್‍ಗಾಗಿ ಕೂಗಿದೆ. ಇಪ್ಪತ್ತೈದು ಅಡಿಗಳ ದೂರದಲ್ಲಿದ್ದ ಪೊದೆಯೊಂದರಿಂದ ಜಿಮ್ ಎದ್ದು ಬಂದ. ಅವನು ಹೆದರಿದ್ದು ಸ್ವಷ್ಟವಾಗಿ ಕಾಣುತ್ತಿತ್ತು. "ದೇವರು ದೊಡ್ಡೋನು" ಎನ್ನುತ್ತಾ ನಿಂತ. ಅವನ ಧ್ವನಿ ಅಷ್ಟು ಮಧುರವಾಗಿ ನನಗೆಂದೂ ಕೇಳಿರಲಿಲ್ಲ. ಮತ್ತೆ ಸಮಯ ಹಾಳುಮಾಡದೆ, ತೆಪ್ಪವನ್ನು ನೀರಿಗಿಳಿಸಿದೆವು. ಎರಡು ಮೈಲುಗಳಷ್ಟು ದೂರ ಸಾಗುವವರೆಗೂ, ಮನದ ತುಂಬೆಲ್ಲಾ ವಿಷಾದ ಆವರಿಸಿಕೊಂಡಿತ್ತು.

ಗ್ಯಾಂಗರ್‌ಫ಼ೋರ್ಡ್ ಮನೆಯವರು ನನ್ನನ್ನು ಆ ರಾತ್ರಿ ಹುಡುಕುವ ಸಾಧ್ಯತೆ ಇರಲಿಲ್ಲ. ಬೆಳಿಗ್ಗೆ ನಾನಿಲ್ಲದಿರುವುದನ್ನು ಗಮನಿಸಿದರೂ, ಗಲಭೆಯಲ್ಲಿ ನಾನು ಸತ್ತು ಹೆಣ ಹೊಳೆಯಲ್ಲಿ ತೇಲಿ ಹೋಗಿರಬೇಕೆಂದು ಭಾವಿಸಿರುತ್ತಾರೇನೋ..! ಅವರಲ್ಲಿ ಯಾರಾದರೂ ಬದುಕಿದ್ದರೆ...!!