0೯. ರಾಜನೂ-ಪಾಳೇಗಾರನೂ,
ಮತ್ತೆ ಜೀವನ ಸೊಗಸಾಯಿತು. ಎಂದಿನಂತೆ ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪಯಣಿಸುವ ನಮ್ಮ ಜೀವನಚಕ್ರದ ಪ್ರತಿ ಘಳಿಗೆಯೂ ಅಮೃತಮಯವಾಗಿತ್ತು. ಒಮ್ಮೆ ಬೆಳ್ಗಾಗುವ ಹೊತ್ತಿನಲ್ಲಿ ವಾರಸುದಾರರಿಲ್ಲದ ಚಿಟ್ಟುದೋಣಿಯೊಂದು ತೇಲುತ್ತಿರುವುದು ಕಣ್ಣಿಗೆ ಬಿತ್ತು. ಕೂಡಲೇ ನಾನು ಈಜುತ್ತಾ ಹೋಗಿ, ನಮ್ಮ ತೆಪ್ಪದ ಬಳಿಗೆ ತಂದೆ. ಆ ದಿನ ಬೆಳಗಾದ ಮೇಲೆ ಎಂದಿನಂತೆ ನನಗೆ ನಿದ್ರೆ ಬರಲಿಲ್ಲ. ಚಿಟ್ಟುದೋಣಿಯನ್ನು ಹತ್ತಿ ಸುತ್ತೆಲ್ಲಾ ನೋಡಿ ಬರಲು ಹೊರಟೆ. ಆ ಜಾಗದಲ್ಲಿ ನಾವು ಪಯಣಿಸುತ್ತಿದ್ದ ನದಿಗೆ ದೊಡ್ಡ ತೊರೆಯೊಂದು ಬಂದು ಸೇರಿತ್ತಿತ್ತು. ಆ ದೃಶ್ಯ ನಯನ ಮನೋಹರವಾಗಿತ್ತು. ಅದನ್ನೇ ನೋಡುತ್ತಾ, ಆ ತೊರೆಯಲ್ಲೇ ಸ್ವಲ್ಪ ಮೇಲೆ ಹೋದರೆ ಕಾಡು ಹಣ್ಣುಗಳೇನಾದರೂ ಸಿಗಬಹುದೆಂಬ ಆಶೆಯಿಂದ ಅಲ್ಲಿ ನೋಡಲು ಹೋದರೆ, ಆ ತೊರೆಗೆ ಯಾವುದೋ ರಸ್ತೆ ಬಂದು ಸೇರುತ್ತಿರುವುದು ಕಣ್ಣಿಗೆ ಬಿತ್ತು. ಆ ರಸ್ತೆಯಲ್ಲಿ ಇಬ್ಬರು ಓಡಿ ಬರುತ್ತಿರುವುದೂ ಕಾಣಿಸಿತು. ಅವರ ರೀತಿ ನೋಡಿದರೆ ಅವರು ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೇನೋ ಎನಿಸಿತ್ತಿತ್ತು. ಅಲ್ಲಿಂದ ಕೂಡಲೇ ಓಡಿಬಿಡಬೇಕೆಂದುಕೊಂಡು ಯೋಚಿಸುತ್ತಿರುವಾಗಲೇ ಅವರಲ್ಲೊಬ್ಬ, ನನ್ನನ್ನು ಕಂಡು "ಸಹಾಯ... ಸಹಾಯ..." ಎಂದು ಕೂಗಿದ. ಅದನ್ನು ನೋಡಿ ನನ್ನ ಅನುಮಾನ ದೂರವಾದರೂ, ಇವರಿಗೆ ಸಹಾಯ ಮಾಡುವುದೋ ಬಿಡುವುದೋ ದ್ವಂದ ಶುರುವಾಯಿತು. ಆ ಸ್ಥಿತಿಯಲ್ಲಿರುವಷ್ಟರಲ್ಲೇ ಅವರಿಬ್ಬರೂ ನನ್ನ ದೋಣಿಯ ಬಳಿ ಸಾರಿ, ಒಳ ಹಾರಿ "ದೂರ ಎಲ್ಲಾದರೂ ನಡಿಯಪ್ಪ.. ಬೇಗ...ಬೇಗ.." ಎಂದರು. ಮೂವರ ತೂಕಕ್ಕೆ ಆ ದೋಣಿ ಸಾಲದಾದರೂ ಅವರ ಪರಿಸ್ಥಿತಿಯೇನಿರಬಹುದೋ ಎಂದು ಯೋಚಿಸಿ ಏನೂ ಮಾತಾಡದೇ ಬೇಗ ಬೇಗ ಹುಟ್ಟು ಹಾಕಲಾರಂಭಿಸಿದೆ.
ಸ್ವಲ್ಪ ದೂರ ಸಾಗಿದ ನಂತರ, ನಾನು ಹುಟ್ಟು ಕಾಕುವುದನ್ನು ನಿಧಾನ ಮಾಡಿ ಅವರಿಬ್ಬರನ್ನೂ ಗಮನಿಸಿದೆ. ಅವರಲ್ಲೊಬ್ಬ ಎಪ್ಪತ್ತರ ಮುದುಕ. ತಲೆಯ ಮೇಲೊಂದು ಕೂದಲೂ ಇರಲಿಲ್ಲ. ಜಡ್ಡುಗಟ್ಟಿದ ಚಿಂದಿ ಬಟ್ಟೆಗಳನ್ನು ತೊಟ್ಟಿದ್ದ. ಆದರೆ ಅವನ ತೋಳಿನಲ್ಲಿ ಹೊಳೆವ ಹಿತ್ತಾಳೆಯ ಗುಂಡಿಗಳಿಂದ ಮಿಂಚುತ್ತಿದ್ದ ಕೋಟೊಂದು ಇತ್ತು. ಇನ್ನೊಬ್ಬನ ಬಟ್ಟೆಯೂ ಅದೇ ರೀತಿ ಇದ್ದರೂ ಇವನಿಗೆ ತಲೆ ತುಂಬಾ ಕೂದಲಿತ್ತು. ಇವನ ವಯಸ್ಸು ಮೂವತ್ತಿರಬಹುದು. ಇಬ್ಬರ ಕೈಯಲ್ಲೂ ದೊಡ್ಡ ದೊಡ್ಡ ಚೀಲಗಳಿದ್ದವು. ನಮ್ಮ ತೆಪ್ಪ ದೋಣಿ ತಲುಪಿದ ನಂತರ ಜಿಮ್ ಅವರಿಗೆ ತಿನ್ನಲು ಕೊಟ್ಟನು. ತಿಂಡಿಯ ನಂತರ ಅವರಿಬ್ಬರೂ ಮಾತಾಡಲು ಶುರು ಮಾಡಿದರು.
"ನಿನಗೇನು ಕಷ್ಟ ಬಂದಿತ್ತಪ್ಪಾ?" ಎಂದ ಬೋಳುತಲೆಯ ಮತ್ತೊಬ್ಬನಿಗೆ.
"ನಾನೊಂದು ಲೇಹ್ಯ ಮಾರುತ್ತಿದ್ದೆ. ನೋಡಿ ಹಲ್ಲನ್ನು ಶುಭ್ರವಾಗಿಡುವ ಲೇಹ್ಯವದು. ಅದು ಎಷ್ಟು ಶಕ್ತಿಶಾಲಿಯೆಂದರೆ, ಒಂದೊಂದು ಬಾರಿ ಅದು ಹಲ್ಲಿನ ಜೊತೆಗೇ ಅದರ ಎನಾಮೆಲ್ ಅನ್ನೂ ಸ್ವಚ್ಚಗೊಳಿಸಿಬಿಡುತ್ತಿತ್ತು. ಈ ಊರಿನ ಜನ ಅದರ ಯೋಗ್ಯತೆಯನ್ನರಿಯದೆ ನನ್ನನ್ನು ಅಟ್ಟಿಸಿಕೊಂಡು ಬಂದರು. ಅದಿರಲಿ ನೀನೇಕೆ ಓಡುತ್ತಿದ್ದೆ.?"
ಅದಕ್ಕೆ ಬೋಳುತಲೆಯ ಮುದುಕ ತಾನು ಜನಗಳಿಗೆ ನೀತಿಬೋಧೆ ಮಾಡುತ್ತಿದ್ದುದಾಗಿಯೂ, ಅದು ತನ್ನ ಕಸುಬಲ್ಲವಾದರೂ ತಾನು ನಾಟಕಗಳಲ್ಲಿ ಆ ಪಾತ್ರ ಮಾಡುತ್ತಿದ್ದುದರಿಂದ ಅದೇ ಕಸುಬನ್ನು ಹಿಡಿದುದಾಗಿಯೂ, ಅಲ್ಲಿನ ಜನಗಳಿಗೆ ತಾನು ನಿಜವಾದ ನೀತಿಭೊದಕನಲ್ಲವೆಂದು ತಿಳಿದು ಬಂದುದರಿಂದ ತನ್ನನ್ನು ಬೆನ್ನಟ್ಟಿ ಬಂದುದಾಗಿಯೂ ತಿಳಿಸಿದನು.
ಅಷ್ಟೇ ಅಲ್ಲದೆ ತಾನು ವೈದ್ಯಕೀಯವನ್ನೂ ಸಹ ಅಭ್ಯಾಸ ಮಾಡಿದ್ದೇನೆಂದೂ, ಎಂತಹ ಕಾಯಿಲೆಯನಾಗಲೀ ವಾಸಿ ಮಾಡಬಲ್ಲ ಔಷಧಗಳನ್ನು ಮಾಡಿ ಮಾರುವುದೂ ತನಗೆ ಗೊತ್ತೆಂದೂ ಹೇಳಿಕೊಂಡನು.
ಅವರ ಪರಿಚಯ ಸಂಭಾಷಣೆಯ ನಂತರ ನಮ್ಮ ನಡುವೆ ತುಸು ಮೌನ ನೆಲಸಿತ್ತು. ಆದ ಇದ್ದಕ್ಕಿದ್ದಂತೆ ಕಿರಿಯವನು ತಲೆ ಚಚ್ಚಿಕೊಳ್ಳುತ್ತಾ ಸಣ್ಣ ದನಿ ತೆಗೆದು ನರಳಲಾರಂಭಿಸಿದನು.
"ಏನಾಯಿತಪ್ಪಾ..? ಯಾಕೆ ತಲೆ ಚಚ್ಚಿಕೊಳ್ತಾಇದೀಯಾ?" ಬೋಳು ತಲೆಯವನ ಪ್ರಶ್ನೆ.
"ಹ್ಞೂ... ಇಂಥಾ ಜನಗಳ ನಡುವೆ ಇರಬೇಕಾಯ್ತಲ್ಲಾ..?" ಕಿರಿಯವನ ಮಾತು ನಿಟ್ಟುಸಿರಿನ ನಡುವೆ..
"ಏನಾಗಿದೆ ನಮಗೆ ?"
"ಏನೂ ಇಲ್ಲ. ನಿಮಗೇನೂ ಆಗಿಲ್ಲ. ನಾನಾರೆಂದು ಹೇಳಿದರೆ ನೀವು ನಂಬುವುದೇ ಇಲ್ಲ. ನನ್ನಂಥವನಿಗೆ ಈ ಗತಿ ಬರಬಾರದಾಗಿತ್ತು. ಅಷ್ಟೇ.. ಹೋಗಲಿಬಿಡಿ."
"ಏನನ್ನ ಬಿಡುವುದು.. ನೀನು ಯಾರು ಎಂದು ತಿಳಿದರೆ ತಾನೇ ನಿನ್ನನ್ನು ಹೇಗೆ ನೋಡಿಕೊಳ್ಳುವುದು ಎಂದು ಗೊತ್ತಾಗುವುದು."
"ಸ್ನೇಹಿತರೇ," ಕಿರಿಯವ ಈಗ ಎದ್ದು ನಿಂತು ಗತ್ತಿನಿಂದ ಹೇಳಲು ಶುರು ಮಾಡಿದ. " ನಿಮ್ಮ ಮುಂದಿರುವ ನಾನು ಬ್ರಿಡ್ಜ್ವಾಟರ್ನ ಪಾಳೇಗಾರ. ನನ್ನ ಘನತೆ, ಗೌರವ ಏನೆಂದು ನೀವು ಊಹಿಸಲಾರಿರಿ ಕೂಡ. ಅಯ್ಯೋ ಯಾರಾದರೂ ಕುಲಸ್ಥರು ಈ ರೀತಿ ಇರುವ ನನ್ನನ್ನು ನೋಡಿದರೆ..."ಎಂದವನೇ ಮತ್ತೆ ಅಳಲು ಶುರು ಮಾಡಿದೆ. ಇದನ್ನು ಕೇಳಿ ನನಗೂ ಜಿಮ್ಗೂ ತುಂಬಾ ಆಶ್ಚರ್ಯವೇ ಆಯಿತು. ಅವನು ಸ್ವಲ್ಪ ಸಮಯದ ನಂತರ ಅಳು ನಿಲ್ಲಿಸಿ "ಸ್ನೇಹಿತರೇ, ನನ್ನ ದುಃಖ ಮರೆಯಬೇಕೆಂದರೆ ನೀವೆಲ್ಲಾ ನನ್ನನ್ನು ಪಾಳೇಗಾರನಂತೆಯೇ ನೋಡಿಕೊಳ್ಳಬೇಕು." ಎಂದ.
ಅದು ತುಂಬಾ ಸುಲಭದ ಕೆಲಸ. ಮಾತಿಗೆ ಮುಂಚೆ, ದೊರೆ, ಬುದ್ದಿ, ಧಣಿ, ಅಯ್ಯಾ... ಇನ್ನೂ ಏನಾದರೊಂದು ಗೌರವ ಸೂಚಕ ವಿಶೇಷಣವೊಂದನ್ನು ಸೇರಿಸುವದಷ್ಟೇ ತಾನೆ. ನಾನು ಮತ್ತು ಜಿಮ್ ತಲೆ ಕೆಡಿಸಿಕೊಳ್ಳದೆ ಒಪ್ಪಿಕೊಂಡೆವು.
ಮಧ್ಯಾಹ್ನ ಊಟಕ್ಕೆ ಬಡಿಸುವಾಗ ಜಿಮ್ ಅವನಿಗೆ ದೊರೆ, ದೊರೆ ಅನ್ನುತ್ತಲೇ ಇದ್ದ. ಆದರೆ ಬೋಳುತಲೆಯ ಮುದುಕನಿಗೆ ತುಂಬಾ ದುಃಖವಾದಂತಿತ್ತು. ಊಟವಾದ ಸ್ವಲ್ಪ ಸಮಯದ ನಂತರ "ಬ್ರಿಡ್ಜ್ವಾಟರ್ನ ಪಾಳೇಗಾರನೇ, ನಿನಗೊದಗಿದ ದುರ್ಗತಿ ಕಂಡು ನಮಗೆ ದುಃಖವಾಗಿದೆ. ಆದರೆ ಕಷ್ಟಗಳು ಬರುವುದು ಮನುಷ್ಯರಿಗೇ ತಾನೆ.. ಅವೆಲ್ಲಾ ಒಬ್ಬನಿಗೇ ಏನೂ ಬರುವುದಿಲ್ಲ.. ಹಾಗೇ ನಾವೂ ದುರದೃಷ್ಟವಶಾತ್ ನಿಮ್ಮೊಡನೆ ಇರಬೇಕಾಗಿದೆ." ಎಂದು ನಾಟಕೀಯವಾಗಿ ಅಳಲು ಪ್ರಾರಂಭಿಸಿದನು. ಪಾಳೇಗಾರ ವಿಷಯ ಏನೆಂದು ಕೇಳಲು ತಾನಿ ಫ಼್ರಾನ್ಸಿನ ಚಕ್ರವರ್ತಿಯೆಂದೂ, ಕುತಂತ್ರಿಗಳ ದೆಸೆಯಿಂದ ರಾಜ್ಯ-ಕೋಶ ಕಳೆದುಕೊಂಡು ಹೀಗೆ ತಿರುಗುತ್ತಿರುವೌದಾಗಿಯೂ ಹೇಳಿದನು. ನಮಗಂತೂ ಇದು ಆಶ್ಚರ್ಯದ ಮೇಲೆ ಆಶ್ಚರ್ಯವಾಗಿತ್ತು. ಅದರೆ ಇದನ್ನೆಲ್ಲಾ ನೋಡಿ ಮನಸ್ಸಿನಲ್ಲೇ ವಿಮರ್ಶಿಸಿ, ಇವರಿಬ್ಬರೂ ಉನ್ನತ ದರ್ಜೆಯ ಮೋಸಗಾರರು ಎಂದು ನಾನು ನಿರ್ಣಯಿಸಿದ್ದೆ. ಈ ವಿಷಯವನ್ನು ಜಿಮ್ಗಾಗಲೀ, ಅವರಿಗಾಗಲೀ ತಿಳಿಸಲಿಲ್ಲ. ಅವರು ನಮ್ಮೊಂದಿಗೇ ತೆಪ್ಪದಲ್ಲಿ ನದೀ ಮುಖವಾಗಿ ಪ್ರಯಾಣ ಬೆಳೆಸಲು ನಿರ್ಧರಿಸಿದರು. ಅವರೇನೇ ಆಗಿದ್ದರೂ, ಬಹಳ್ ದಿನಗಳಿಂದ ಇಬ್ಬರೇ ಇದ್ದ ನಮ್ಮ ತೆಪ್ಪ ದೋಣಿಯ ಪಯಣದಲ್ಲಿ ಇನ್ನೆರಡು ಹೊಸಮುಖಗಳು ಕಂಡು ನಮಗೆ ಹರ್ಷವೇ ಆಗಿತ್ತು.
ಮುಂದೆ ನಾವು ನಿಲ್ಲಿಸಿದ ಮೊದಲ ನಗರದಲ್ಲೇ ಅವರೆಂತ ಖೂಳರೆಂದು ತಿಳಿದುಬಿಟ್ಟಿತು. ಪಾಳೇಗಾರ ಹಗಲೆಲ್ಲಾ ನಗರದಲ್ಲೇ ಕಳೆದರೆ, ನಾನು ರಾಜನೊಂದಿಗೆ ಅಲ್ಲಿಗೆ ಒಂದು ಫ಼ರ್ಲಾಂಗು ದೂರದಲ್ಲಿ ನಡೆಯುತ್ತಿದ್ದ ಸಂತೆಯ ಸ್ಥಳಕ್ಕೆ ಹೋದೆ. ಸಂತೆಯೆಂದರೆ ಗೊತ್ತಲ್ಲ.. ನೂರಾರು ಜನ, ಹಣ್ಣು, ತರಕಾರಿ, ಧಾನ್ಯಗಳ ಮಾರಾಟ. ಜ್ಯೋತಿಷಿಗಳ್ ಕೂಗಾಟ, ಬಟ್ಟೆ ಅಂಗಡಿಯವರ ಭರಾಟೆ ಹೀಗೆ ಎಲ್ಲಾ ಸೇರಿ ಅಲ್ಲಿ ದಿವ್ಯಗದ್ದಲವೊಂದು ಏರ್ಪಟ್ಟಿತ್ತು. ಆ ಗದ್ದಲದ ಮಧ್ಯೆಯೂ ನೀತಿಭೋದಕರು ಶಿಬಿರವೊಂದರಲ್ಲಿ ನೀತಿಭೋದೆ ಮಾಡುತ್ತಿದ್ದರು. ಆ ಜನಗಳ ಕಷ್ಟ ಸುಖ ವಿಚಾರಿಸಿ ಜನರಿಗೆ ಧಾರ್ಮಿಕ ಸಲಹೆ ನೀಡುತ್ತಿದ್ದ ಅಲ್ಲಿಗೆ ರಾಜ ಮೆಲ್ಲನೆ ನುಸುಳಿದ.
ಆ ಶಿಬಿರದಲ್ಲಿದ್ದ ನೀತಿಭೋದಕರ ಪ್ರಾರ್ಥನೆಗಳನ್ನೂ, ಸ್ತೋತ್ರಗಳನ್ನೂ ಇಂಪಾಗಿ ಹಾಡುತ್ತಿದ್ದ. ಹಾಡು ಮುಗಿದ ಮೇಲೆ ನೆರೆದ ಜನಸ್ತೋಮದಿಂದ ದೈವಕ್ಕೆ ಜಯಘೋಷ ಹಾಕಿಸುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿ ಆ ವ್ಯವಸ್ಥೆ ಅಳಿಸಿ ಅವ್ಯವಸ್ಥೆ ತುಂಬಿಕೊಂಡಿತು. ನೆರೆದಿದ್ದ ಜನರಲ್ಲಿ ತಮಗಿಷ್ಟ ಬಂದವರು ವೇದಿಕೆಯ ಮೇಲೆ ಹತ್ತಿ ಹಾಡಿ, ಕೂಗಾಡಿ ಅಲ್ಲೆಲ್ಲಾ ಒಂದು ರೀತಿಯ ಗಜಿಬಿಜಿ ಶುರುವಾಗಿ ಬಿಟ್ಟಿತು.
ಅಲ್ಲಿ ನಿಜವಾಗಿ ಏನು ನಡೆಯುತ್ತಿದೆಯೆಂದು ನನಗೆ ಅರಿವಾಗುವ ಮುಂಚೆ, ರಾಜ ಜನಗಳ ನಡುವೆ ನುಸುಳಿ ನೀತಿಭೋದಕನಲ್ಲಿಗೆ ಹೋದ. ಅವನ ಬಳಿ ಅನುಮತಿ ಪಡೆದು ನೆರೆದ ಜನಗಳ ಮುಂದೆ ಸಣ್ಣ ಭಾಷಣವನ್ನೇ ಬಿಗಿದ.
"ನಾನೊಬ್ಬ ಸಮುದ್ರಕಳ್ಳ." ಹೀಗೆಂದು ಗಟ್ಟಿ ದನಿಯಲ್ಲಿ ಅವನು ಹೇಳುತ್ತಿದ್ದಂತೆಯೇ ಕುತೂಹಲಕಾರಿ ಕತೆ ಕೇಳುವಂತೆ ಇಡೀ ಜನಸ್ತೋಮ ಸ್ಥಬ್ದವಾಯಿತು.
"ಜೀವನದ ಮೂವತ್ತುವರುಷಗಳನ್ನು ಹಿಂದೂ ಮಹಾಸಾಗರದಲೆಗಳ ಮೇಲೆ, ಕಂಡಕಂಡವರನ್ನು ದೋಚುವುದರಲ್ಲೇ ಕಳೆದೆ. ನಾನೆಂದರೆ ಎಲ್ಲರಿಗೂ ಭಯ. ಇಲ್ಲಿಗೇ ನಾನು ಬಂದುದೇ ನಮ್ಮ ತಂಡಕ್ಕೆ ಇನ್ನಷ್ಟು ಜನರನ್ನು ಸೇರಿಸಲೆಂದು.ಆದರೆ... ನಿನ್ನೇ ಇದೇ ಊರಿನಲ್ಲಿ ನನ್ನನ್ನೇ ನಾಲ್ಕು ಜನ ಸೇರಿ ದರೋಡೆ ಮಾಡಿಬಿಟ್ಟರು. ... ಅದು... ಆ ದೇವರ ಕೃಪೆ.... ಅದರಿಂದ ನೊಂದ ನನಗೆ ನಾನೆಂತಹ ನೀಚ ಕೆಲಸ ಮಾಡುತ್ತಿದ್ದೆ ಎಂದರಿವಾಯಿತು. ನಾನಿನ್ನು ಮುಂದೆ ದರೋಡೆ ಮಾಡುವುದಿಲ್ಲ. ಮತ್ತೆ ನನ್ನ ಹಿಂದೂಮಹಾಸಾಗರಕ್ಕೆ ಹಿಂದಿರುಗಿ ನನ್ನ ಜೊತೆಗಾರರಿಗೂ ನನಗರಿವಾದ ಈ ಸತ್ಯವನ್ನು ತಿಳಿಸೆ, ಹಿಂದೂ ಮಹಾಸಾಗರದಲ್ಲಿಯೇ ಯಾರೂ ಕಳ್ಳರಿರದಮ್ತೆ ಮಾಡುತ್ತೇನೆ. (ಸಭಿಕರಿಂದ ಭಾರೀ ಚಪ್ಪಾಳೆ) ನನಗೆ ಇಂತಹ ಙ್ಞಾನ ದೊರೆಯಲು ಕಾರಣರಾದ ನಿಮಗೇ ನನ್ನೆಲ್ಲಾ ಪುಣ್ಯ ಸೇರಬೇಕು. ನನಗೆ ಈ ದಿನ ಕೈಯಲ್ಲೊಂದು ಕವಡೆಯೂ ಇಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ಹೇಗೋ ನನ್ನ ಜಾಗ ಸೇರಿ ನನ್ನ ಗುರಿಸಾಧನೆಗೆ ಶ್ರಮಿಸುತ್ತೇನೆ. ನನ್ನಂತಹವನಿಗೆ, ಯಕಶ್ಚಿತ್ ಸಮುದ್ರಕಳ್ಳನೊಬ್ಬನಿಗೆ ನೀವು ತೋರಿಸಿದ ಆದರ ನನ್ನ ಸ್ಪೂರ್ತಿಯಾಗಿ ಸದಾ ನನ್ನ ಜೊತೆಗಿರುತ್ತದೆ." ಎಷ್ಟು ಹೇಳುತ್ತಾ ಅವನು ಅತ್ತು ಬಿಟ್ಟ. ಜನಸ್ತೋಮವೂ ಅಳಲಾರಂಭಿಸಿತು. ಯಾರೋ ಒಬ್ಬರು ಕೂಗಿದರು. "ಇವನಿಗೆ ನಾವೆಲ್ಲಾ ಸೇರಿ ಸಹಾಯ ಮಾಡೋಣ" "ಹೌದು, ಹೌದು" ಎಂದವು ಹಲವಾರು ಧ್ವನಿಗಳು. "ನೀನು ಇಲ್ಲೇ ಇದ್ದು ಒಳ್ಳೆಯ ಜೀವನ ಮಾಡು" ಎಂದು ಹೇಳಿದ ಯಾರಿಗೋ, ನಮ್ಮ ರಾಜ" ಅಯ್ಯೋ, ನರಕಕ್ಕೆ ಬೀಳುತ್ತಿರುವ ನನ್ನ ಸ್ನೇಹಿತರನ್ನು ರಕ್ಷಿಸಲು ನಾನು ಆದಷ್ಟು ಬೇಗನೇ ಹಿಂದೂಮಹಾಸಾಗರಕ್ಕೆ ಹಿಂದಿರುಗಬೇಕು" ಎಂದು ಹೇಳುತ್ತಿದ್ದದು ಕೇಳಿಸಿತು. ಅಲ್ಲಿನ ಎಲ್ಲರಿಗೂ ಕೃತಙ್ಞತೆ ಸಲ್ಲಿಸಿ, ಅಲ್ಲಿಂದ ಹೊರಬಿದ್ದ. ಅವನೂ ನಾನೂ ನಮ್ಮ ತೆಪ್ಪಕ್ಕೆ ಬಂದು ಒಟ್ಟು ಸಂಗ್ರಹವಾದ ಹಣವನ್ನು ಎಣಿಸಿದಾಗ ಎಂಬತ್ತೇಳು ಡಾಲರುಗಳಷ್ಟಿತ್ತು!
ಪಾಳೇಗಾರ ಇಂತಹ ಸಾಧನೆಯನ್ನೇನೂ ಮಾಡಿರದಿದ್ದರೂ, ಮುದ್ರಕನೊಬ್ಬನ ಬಳಿಯಲ್ಲಿ ಇಡೀ ದಿನ ಕೆಲಸ ಮಾಡಿದ್ದ. ಅವನಿಗೆ ಕೆಲವೇ ಡಾಲರುಗಳ ಸಂಪಾದನೆಯಾಗಿದ್ದರೂ, ಆ ಮುದ್ರಣಕಚೇರಿಯಿಂದ ಬಹಳಷ್ಟು ಕರಪತ್ರಗಳನ್ನು ಹೊತು ತಂದಿದ್ದ. ಅದರಲ್ಲೊಂದು, ಓಡಿ ಹೋದ ಕರಿಗುಲಾಮನನ್ನು ಹಿಡಿದುಕೊಟ್ಟವರಿಗೆ ಇನ್ನೂರು ಡಾಲರ್ಗಳ ಬಹುಮಾನ ಎಂದು ಸಾರುತ್ತಿತ್ತು. ಅದರಲ್ಲಿ ಆ ಗುಲಾಮನ ಚಿತ್ರ ಕೂಡಾ ಮುದ್ರಿತವಾಗಿತ್ತು. ಮತ್ತು ಆ ಚಿತ್ರ ಜಿಮ್ನದಾಗಿತ್ತು.!!!
ಪಾಳೇಗಾರ ಹೇಳಿದ. "ಇನ್ನು ಮುಂದೆ ನಾವು ರಾತ್ರಿ ಪಯಣ ಮಾಡಬೇಕಿಲ್ಲ. ಜಿಮ್ನ ಕೈಕಾಲು ಕಟ್ಟಿ, ಅವನನ್ನು ಹಿಡಿದೊಯ್ಯುತ್ತಿದ್ದೇವೆಂದು ಕೇಳಿದವರಿಗೆ ಹೇಳುತ್ತಾ, ಹಗಲೇ ಪ್ರಯಾಣ ಮಾಡಬಹುದು." ಅದು ನಮಗೂ ಒಪ್ಪಿಗೆಯಾಯಿತು. ಆದರೆ ಒಂದೆರಡು ದಿನಗಳಲ್ಲೇ ಕೈಕಾಲು ಕಟ್ಟಿಸಿಕೊಂಡು ಮಲಗುವುದು ಕಷ್ಟವಾಗಿ ಜಿಮ್ ಪ್ರತಿಭಟಿಸಿದ. ಅದಕ್ಕೂ ಪಾಳೆಯಗಾರನ ಬತ್ತಳಿಕೆಯಲ್ಲೊಂದು ಉಪಾಯವಿತ್ತು. ಅವನು ದೋಣಿಗೊಂದು ಬೋರ್ಡ್ ತಗುಲಿಹಾಕಿದ. ಅದರಲ್ಲಿ "ಹುಚ್ಚು ಹಿಡಿದ ಅರಬ್- ತಲೆ ನೆಟ್ಟಗಿದ್ದರೆ ನಿರಪಾಯಕಾರಿ" ಎಂದು ಬರೆದಿತ್ತು. ಜಿಮ್ನ ಮುಖ ಕೈ-ಕಾಲುಗಳಿಗೆ ನೀಲಿ ಬಣ್ಣ ಬಳಿದು, ಕಿಂಗ್ಲಿಯರ್ ನಾಟಕದ ಪೋಷಾಕನ್ನು ಧರಿಸುವಂತೆ ಮಾಡಿ, ತಲೆಗೊಂದು ವಿಗ್ಗನ್ನೂ ಹಾಕಿಬಿಟ್ಟರು. ಈಗ ಜಿಮ್ "ಅರಿಭಯಂಕರ"ನಂತೆ ಕಾಣುತ್ತಿದ್ದ. ಯಾರಾದರೂ ಹತ್ತಿರ ಬಂದರೆ ಹುಚ್ಚು ನಾಯಿಯಂತೆ ಬೊಗಳಬೇಕೆಂದು ಪಾಠ ಹೇಳಿಸಿಕೊಂಡಿದದ ಜಿಮ್. ಆದರೆ ಮುಂದೆ ಕೆಅವು ದಿನಗಳ ಕಾಲ ಅವನು ಬೊಗಳಬೇಕಾಗಿ ಬರಲಿಲ್ಲ. ಯಾರಿಂದಲೂ ಯಾವ ಅಪಾಯವೂ ಎದುರಾಗಲಿಲ್ಲ.