ವಚನ ಚಿಂತನ:೧೦: ದೇವರ ಹಂಗೇಕೆ?

ವಚನ ಚಿಂತನ:೧೦: ದೇವರ ಹಂಗೇಕೆ?

ಬರಹ
ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸರಿ. ನಾವೇ ಮಾಡಬೇಕಾದ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಮ್ಮ ಕಾಯಕದಿಂದ ಬಂದ ಫಲವನ್ನು ನಮಗಿಂತ ಹಿರಿಯರಾದವರಿಗೆ (ಗುರು), ಲೋಕಕ್ಕೆ (ಲಿಂಗ), ಪ್ರಜ್ಞಾವಂತರಾದವರಿಗೆ (ಜಂಗಮ) ಅರ್ಪಿಸಬೇಕು. ಉಳಿದದ್ದನ್ನು ನಮ್ಮದೆಂದು ಪಡೆದುಕೊಳ್ಳಬೇಕು. ಮಾಡಬೇಕಾದದ್ದು ಇಷ್ಟೇ. ಇದರಾಚೆಗೆ ರೋಗ ಬಂದರೆ ನರಳಬೇಕು, ನೋವಾದರೆ ಒರಲಬೇಕು, ಜೀವ ಹೋದರೆ ಸಾಯಬೇಕು. ಬದುಕು ಇಷ್ಟು. ಇದರಲ್ಲಿ ದೇವರ ಹಂಗು ಯಾಕೆ ಬೇಕು? ಒಕ್ಕು ಎಂಬ ಮಾತಿಗೆ ಪ್ರಸಾದ ಮತ್ತು ಶುಭದ ಹಾರೈಕೆ ಎಂಬ ಎರಡದು ಅರ್ಥಗಳಿವೆ. ನಮ್ಮ ದುಡಿಮೆಯಿಂದ ದಕ್ಕಿದ್ದೇ ಪ್ರಸಾದ. ನಮ್ಮ ದುಡಿಮೆಯಿಂದ ಹಾರೈಸಬೇಕಾದದ್ದು ಒಳಿತನ್ನೇ. ಈ ದುಡಿಮೆಯ ಗುರಿಯಾದರೋ ಸ್ವಾರ್ಥವಲ್ಲ. ಬದುಕಿಗೆ ದಾರಿ ತೋರುವ ಗುರು, ವಿಶ್ವದ ಚೈತನ್ಯ, ಪ್ರಜ್ಞಾವಂತ ಜೀವಿಗಳು ಇವರೆಲ್ಲರಿಗೆ ನಮ್ಮ ದುಡಿಮೆಯ ಫಲವನ್ನು ಅರ್ಪಿಸಿ, ಉಳಿದದ್ದನ್ನು ನಮ್ಮದು ಎಂದುಕೊಳ್ಳಬೇಕು. ಪಡೆಯುವುದಲ್ಲ ಕೊಡುವುದು ಬದುಕು. ಬದುಕು ಇಷ್ಟೇ. ನಿಷ್ಠಾವಂತ ದುಡಿಮೆ, ಆ ದುಡಿಮೆಯ ಮೂಲಕ ಅಹಂಕಾರದ ತ್ಯಾಗ. ಇದರಾಚೆಗೆ ಏನೂ ಇಲ್ಲ. ಸುಮ್ಮನೆ ದೇವರನ್ನು ಯಾಕೆ ಕಟ್ಟಿಕೊಂಡು ಗೋಳಾಡುತ್ತೇವೆ? ಕಾಯಿಲೆ ಆದಾಗ ನರಳಬೇಕು, ಬೇರೆ ವಿಧಿಯಿಲ್ಲ. ನೋವಾದರೆ ಅಯ್ಯೋ ಎಂದು ಚೀರಬೇಕು, ಬೇರೆ ವಿಧಿಯಿಲ್ಲ. ಜೀವ ಹೋದಾಗ ಸಾಯಬೇಕು, ಬೇರೆ ವಿಧಿಯಿಲ್ಲ. ರೋಗ, ಬೇನೆ, ಸಾವು ಇವೆಲ್ಲ ಅನಿವಾರ್ಯವೇ ಆಗಿರುವಾಗ ಇವೆಲ್ಲದರಿಂದ ಕಾಪಾಡು ದೇವರೇ ಎಂದು ಕೇಳುವುದೇ ಮೂರ್ಖತನವಿದ್ದೀತು. ಕೊಟ್ಟ ಕುದುರೆ ಎಂಬ ಅಲ್ಲಮನ ವಚನವನ್ನು ನೆನೆದುಕೊಂಡರೆ ನಮ್ಮ ಪಾಲಿಗೆ ಬಂದ ನಮ್ಮ ಕೆಲಸ ಮಾಡುವುದಷ್ಟೆ ನಿಜ, ಶುಭದ ಹಾರೈಕೆಯಷ್ಟೇ ನಮಗೆ ಸಾಧ್ಯ, ಈ ದುಡಿಮೆ, ಈ ಹಾರೈಕೆಗಳಷ್ಟೇ ಪ್ರಸಾದ; ದೇವರು ಗೀವರು ಎಂಬುದೆಲ್ಲ ಬರಿಯ ಪಲಾಯನ ಎಂದು ಈ ವಚನಕಾರ ಹೇಳುವಂತಿದೆ. ಲದ್ದೆಯ ಸೋಮ ಎಂಬಾತ ಬೀದರ್ ಜಿಲ್ಲೆಯವನು. ೧೨ನೆಯ ಶತಮಾನದವನು. ಲದ್ದೆ ಎಂದರೆ ಹುಲ್ಲಿನ ಹೊರೆ. ಹುಲ್ಲಿನ ಹೊರೆಯನ್ನು ಕಟ್ಟಿ, ಮಾರಿ, ಬಂದದ್ದರಲ್ಲಿ ಬದುಕಿದ್ದ ವ್ಯಕ್ತಿ ಈತ.