ಮಾನವೀಯತೆಯ ಸಾಕ್ಷಾತ್ಕಾರ; ಬಾನಾಡಿಯಾದ ಕೆಂಪು ಬಾಲದ ಪಿಕಳಾರ ಮರಿಗಳು.

ಮಾನವೀಯತೆಯ ಸಾಕ್ಷಾತ್ಕಾರ; ಬಾನಾಡಿಯಾದ ಕೆಂಪು ಬಾಲದ ಪಿಕಳಾರ ಮರಿಗಳು.

ಬರಹ

ಧಾರವಾಡದ ಹಳಿಯಾಳ ರಸ್ತೆಯ ಮೇಲೆ ಭಾರಿ-ಮಳೆಗಾಳಿಯಿಂದಾಗಿ ಗೂಡು ಸಮೇತ ಕಿತ್ತು ಬಿಸಾಡಲ್ಪಟ್ಟ ಕೆಂಪುಬಾಲದ ಪಿಕಳಾರ ಮರಿಗಳನ್ನು ಬದುಕಿಸಿದ ಅರುಣ್ ಪಾಟೀಲ್.

ಕಳೆದ ಐದು ದಿನಗಳ ಹಿಂದೆ ಧಾರವಾಡದಲ್ಲಿ ವಿಪರೀತ ಗಾಳಿಯೊಂದಿಗೆ ಮುಸುಲಾಧಾರ ಮಳೆ ಬಿತ್ತು. ಈ ಭಯಾನಕ ಗಾಳಿ-ಮಳೆಯ ರಭಸಕ್ಕೆ ಸಿಕ್ಕು ಆದ ಅನಾಹುತ ಅಷ್ಟಿಷ್ಟಲ್ಲ. ಆ ಅವಘಡದ ಒಂದು ಸಣ್ಣ ಕಥೆ ಈ ರೆಡ್ ವೆಂಟೆಡ್ ಬುಲ್ ಬುಲ್ ಮರಿಗಳದ್ದು.

ಧಾರವಾಡದಿಂದ ಹಳಿಯಾಳಕ್ಕೆ ಹೋಗುವ ಮಾರ್ಗದಲ್ಲಿ ಕೆಂಪು ಬಾಲದ ಪಿಕಳಾರ ದಂಪತಿಗಳು ಪ್ರೀತಿಯಿಂದ ಹೂಡಿಕೊಂಡಿದ್ದ ಸಂಸಾರ ಆ ಮುಸುಲಾಧಾರ ಮಳೆಗೆ ಥರಗುಟ್ಟಿ ಹೋಯಿತು. ಪುಟ್ಟ ದಾಸವಾಳದ ಗಿಡ ಬುಡ ಸಮೇತ ಧರಾಶಾಯಿ ಆಗಿದ್ದೇ ತಡ, ಆ ಗಿಡದಲ್ಲಿದ್ದ ಪಿಕಳಾರದ ಗೂಡು ಎರಡು ಪುಟ್ಟ ಮರಿಗಳೊಂದಿಗೆ ನೆಲಕ್ಕೊರಗಿತು. ರಾತ್ರಿ ವೇಳೆಯಲ್ಲಿ ಪಿಕಳಾರ ದಂಪತಿಗಳು ಉಪಾಯಗಾಣದೇ ಬೇರೊಂದು ಗಿಡದ ಟೊಂಗೆಯನ್ನು ಆಶ್ರಯಿಸಿ ಮರಿಗಳಿಗಾಗಿ ಮಿಡಿಯುತ್ತ ಕುಳಿತವು.

ಚುಮು ಚುಮು ಬೆಳಕು ಹರಿಯುತ್ತಿದ್ದಂತೆ ಬೆಳಗಿನ ವಾಕಿಂಗ್ ಗೆ ಹೊರಟ ಚೆನ್ನಬಸವೇಶ್ವರ ನಗರದ ಅರುಣ್ ಪಾಟೀಲ ಅವರು  ಪುಟ್ಟ ಗೂಡಿನೊಂದಿಗೆ ಎರಡು ಸುಂದರ ಮರಿಗಳು ನೆಲಕ್ಕೊರಗಿದ್ದು ಕಂಡು ಬಂತು. ಆದರೆ  ಅತ್ತ ಕಡೆಯಿಂದ ಎಲ್ಲಿಯೂ ಅವುಗಳ ಅಪ್ಪ-ಅಮ್ಮನ ಸುಳಿವಿಲ್ಲ. ಕೂಡಲೇ ಅರುಣ್ ಪಾಟೀಲ ಅವರು ಪರಿಸರವಾದಿ ಗಂಗಾಧರ ಕಲ್ಲೂರ್ ಅವರಿಗೆ ಕರೆ ಮಾಡಿ ‘ಏನು ಮಾಡಬೇಕು?’ ಎಂಬ ಪ್ರಶ್ನೆ ಮುಂದಿಟ್ಟರು. ಕಲ್ಲೂರ್ ಸೂಚ್ಯವಾಗಿ..‘ಏನೂ ಚಿಂತೆ ಇಲ್ಲ ಅವುಗಳನ್ನು ನಿಮ್ಮ ಮನೆಗೆ ತಂದು ಬಿಡಿ..ಆಮೇಲೆ ನಾನು ಬಂದು ನೋಡುತ್ತೇನೆ’ ಎಂದರು. ಆ ಧೈರ್ಯದಲ್ಲಿ ಪಾಟೀಲ್ ಅತ್ಯಂತ ಜಾಗರೂಕರಾಗಿ ಕೆಂಪು ಬಾಲದ ಪಿಕಳಾರದ ಮರಿಗಳನ್ನು ಗೂಡು ಸಮೇತ ತಮ್ಮ ಶ್ರೀನಿವಾಸಕ್ಕೆ ಹೊತ್ತು ತಂದರು.

 

ತಾಯಿಯ ಕೊಕ್ಕಿನಂತಿರುವ ಇಕ್ಕಳಿನಿಂದ ಪಪ್ಪಾಯಿ ಹಣ್ಣು ಸವಿಯುತ್ತಿರುವ ಪಿಕಳಾರದ ಮರಿ.

 

ತಮ್ಮ ತಂದೆಯ ಈ ಪರಿಯ ಪಕ್ಷಿ ಪ್ರೀತಿ ನೋಡಿದ ಅವರ ಮಕ್ಕಳ ಆನಂದಕ್ಕೆ ಪಾರವೇ ಇರಲಿಲ್ಲ. ಅರ್ಧ ಗಂಟೆ ಕಳೆಯುವ ಹೊತ್ತಿಗೆ ಪ್ರೊ. ಕಲ್ಲೂರ್ ತಮ್ಮ ಮಿತ್ರ ಪಾಟೀಲರ ಮನೆಗೆ ಆಗಮಿಸಿದರು. ಮನೆಯವರನ್ನು, ಮಕ್ಕಳನ್ನು ಸುತ್ತ ಕೂಡಿಸಿಕೊಂಡು ಇಕ್ಕಳ ಬಳಸಿ ಪಪ್ಪಾಯಿ, ಬಾಳೆ ಹಣ್ಣು, ಮಾವಿನ ಹಣ್ಣುಗಳ ಚಿಕ್ಕ ಚಿಕ್ಕ ಚೂರುಗಳನ್ನು ತಿನಿಸಿ ತೋರಿಸಿದರು. ತಾಯಿ ಹಕ್ಕಿ ಗುಟುಕು ಕೊಟ್ಟಂತೆ ಮರಿಗಳಿಗೆ ಹಿತ-ಮಿತವಾದ ಮತ್ತು ಕಾಲಕಾಲಕ್ಕೆ ನೀಡಬೇಕಾದ ಆಹಾರದ ಬಗ್ಗೆ ತಿಳಿವಳಿಕೆ ನೀಡಿದರು. ಈಗ ಒಂದು ವಾರ ಕಳೆಯುವ ಹೊತ್ತಿಗೆ ಎರಡೂ ಮರಿಗಳಿಗೆ ಪುಕ್ಕ ಬಂದಿವೆ; ಮನೆಯವರೊಂದಿಗೆ ಹೊಂದಿಕೊಂಡು ಖುಷಿಯಿಂದ ನೀಡಿದ ಆಹಾರ ತಿಂದು ಮನೆಯ ಮಕ್ಕಳಂತೆ ಆನಂದವಾಗಿವೆ. ಸದ್ಯ ಟೇಕ್ ಆಫ್ ಆಗಲು ಕಾಯ್ದಿವೆ! ಹ್ಯಾಟ್ಸ್ ಆಫ್ ಟು ಪ್ರೊ. ಕಲ್ಲೂರ್ ಹಾಗೂ ಪಾಟೀಲ್ ಫ್ಯಾಮಿಲಿ ಎನ್ನಲು ನನಗೇನೂ ಅಡ್ಡಿ ಇಲ್ಲ.

 

ಚೆನ್ನಬಸವೇಶ್ವರ ನಗರದಲ್ಲಿ ಅರುಣ್ ಪಾಟೀಲರ ಮಗಳು ಪಿಕಳಾರದ ಮರಿಗಳ ಆರೈಕೆಯಲ್ಲಿ ತೊಡಗಿರುವುದು.

 

ಕೆಂಪು ಬಾಲದ ಪಿಕಳಾರಗಳು (ರೆಡ್ ವೆಂಟೆಡ್ ಬುಲ್ ಬುಲ್) ಸಾಮಾನ್ಯವಾಗಿ ಮೈನಾ ಹಕ್ಕಿಯಷ್ಟು ದೊಡ್ಡದಾದ ಹೊಗೆ ಗಪ್ಪು ಬಣ್ಣದ ಹಕ್ಕಿಗಳು. ನೀವು ಚಿತ್ರದಲ್ಲಿ ನೋಡಿದಂತೆ ಮರಿಗಳು ಬಣ್ಣದಲ್ಲಿ ಅಂದಗೇಡಿಯಾದರೂ ಅತ್ಯಂತ ಮುದ್ದು-ಮುದ್ದಾಗಿರುತ್ತವೆ. ತಲೆಯ ಮೇಲೆ ಚೋಟುದ್ದುದ ಕಪ್ಪು ‘ಕಿರೀಟ’- ತುರಾಯಿ ಅಥವಾ ಚೊಟ್ಟಿ ಈ ಹಕ್ಕಿಗೆ ಭೂಷಣ. ಎದೆಯ ಮೇಲೆ ಹಾಗೂ ಬೆನ್ನಿನ ಮೇಲೆ ಮೀನಿನ ಹುರುಪೆಗಳ ರೀತಿ ಸ್ಪಷ್ಟವಾಗಿ ಕಾಣುವಂತೆ ಪುಕ್ಕಳಗಳ ಸುಂದರ ಜೋಡಣೆ ಇರುತ್ತದೆ. ಬಾಲದ ಪುಕ್ಕದ ಬುಡದಲ್ಲಿ ಎದ್ದು ಕಾಣುವಂತೆ ಕೆಂಪು ಬಣ್ಣದ ಚಡ್ಡಿ ಹಾಕಿದ ರೀತಿಯಲ್ಲಿ ಕಾಣಿಸುತ್ತದೆ. ಪಿಕಳಾರ ಪ್ರೌಢಾವಸ್ಥೆಗೆ ಬಂದ ಕುರುಹು ಸಹ ಅದಾಗಿರುತ್ತದೆ. ಬಾಲದ ತುದಿ ಮಾತ್ರ ಬೆಳ್ಳಗಿದ್ದು ಹಾರುವಾಗ ಮಾತ್ರ ಬಿಳಿ ಬಣ್ಣವೇ ಪ್ರಧಾನವಾಗಿ ಗೋಚರಿಸುತ್ತದೆ. ಬಣ್ಣಗಳ ಸೂಕ್ಷ್ಮ ವ್ಯತ್ಯಾಸವನ್ನು ಅನುಸರಿಸಿ ಇವುಗಳನ್ನು ಏಳು ಉಪಜಾತಿಗಳನ್ನಾಗಿ ತಜ್ಞರು ವಿಂಗಡಿಸಿದ್ದಾರೆ. 

 

ಸಾಮಾನ್ಯವಾಗಿ ಕೆಂಪು ಬಾಲದ ಪಿಕಳಾರಗಳು ಜೋಡಿಯಾಗಿ ಕಾಣಸಿಗುತ್ತವೆ. ಕೆಲವೊಮ್ಮೆ ಚದುರಿದ ಗುಂಪುಗಳಲ್ಲಿ ಕಾಡುಗಳಲ್ಲಿ, ಮನೆಗಳ ಅಕ್ಕಪಕ್ಕದ ತೋಟ-ಉದ್ಯಾನಗಳಲ್ಲಿ ಕಾಣಸಿಗುತ್ತವೆ. ಮನುಷ್ಯರ ವಾಸದ ಸಮೀಪದಲ್ಲಿ ಇವು ಹೆಚ್ಚು ಕಾಣಸಿಗುತ್ತವೆ. ಗೋಣಿ, ಆಲ, ಬಸರಿ ಮರಗಳು ಹಣ್ಣು ಬಿಟ್ಟಾಗ ಹಲವಾರು ಹಕ್ಕಿಗಳೊಂದಿಗೆ ಈ ಹಕ್ಕಿ ಸಹ ಅಲ್ಲಿ ನೆರೆದಿರುತ್ತದೆ. ಕೆಮ್ಮೀಸೆ ಪಿಕಳಾರದಂತೆ ಇದು ಸದಾ ಗಲಾಟೆ ಮಾಡುವ ಹಕ್ಕಿಯಲ್ಲ. ಬಹಳ ಮೆಲು ದನಿಯಲ್ಲಿ ‘ಕ್ರಿಮ್..ಕ್ರಿಮ್..ಕ್ರೀಮ್’ ಎಂದು ಮಧುರವಾಗಿ ಕೂಗುತ್ತದೆ. ತರಹೇವಾರಿ ಕೀಟಗಳು, ಪಾತರಗಿತ್ತಿ, ಹಣ್ಣುಗಳು ಹಾಗೂ ಹೂವಿನ ಮಕರಂಧ ಈ ಹಕ್ಕಿಯ ಇಷ್ಟದ ಆಹಾರ.

 

ಅಮ್ಮ ನೀನೆಲ್ಲಿದ್ದೀ? ಎಂದು ಕೂಗುತ್ತಿರಬಹುದೇ ಕೆಂಪು ಬಾಲದ ಪಿಕಳಾರ ಮರಿ?

 

ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಭರ್ಮಾ ದೇಶಗಳಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಫೆಬ್ರುವರಿಯಿಂದ ಮೇ ವರೆಗೆ ಪೊದೆಗಳ ಕವಲುಗಳಲ್ಲಿ ನಾರುಹುಲ್ಲು ಮತ್ತು ಜೇಡರಬಲೆ ಎಗರಿಸಿತಂದು ಬಟ್ಟಲಾಕಾರದ ಗೂಡನ್ನು ಕೆಂಪು ಬಾಲದ ಪಿಕಳಾರಗಳು ಆಸ್ಥೆಯಿಂದ ಕಟ್ಟುತ್ತವೆ. ಅಂತೂ ಪ್ರೊ. ಗಂಗಾಧರ ಕಲ್ಲೂರ್ ಮಾರ್ಗದರ್ಶನದಲ್ಲಿ ಅರುಣ್ ಪಾಟೀಲ ಅವರ ಕುಟುಂಬದ ಸಮಗ್ರ ಆರೈಕೆಯಲ್ಲಿ ನಿಸರ್ಗದ ಕೌತುಕವೊಂದನ್ನು ಬದುಕಿಸಿ ಬಾನಾಡಿಯಾಗಿಸಿದ ಸಮಾಧಾನ ನಮ್ಮಲ್ಲಿ ಮನೆ ಮಾಡಿದೆ.

 

ನನಗೂ ಅಮ್ಮ ಬೇಕು ಎನ್ನುತ್ತಿದೆ ಮತ್ತೊಂದು ಕೆಂಪು ಬಾಲದ ಪಿಕಳಾರ ಮರಿ.