ನನ್ನ ಓಟದ ಹಾದಿ

ನನ್ನ ಓಟದ ಹಾದಿ

ಬರಹ

ಇಲ್ಲಿ ಬಂದಾಗ ತಿಳಿದಿದ್ದೆ
ಹಾದಿಯೇ ಇಲ್ಲದ ಬಟ್ಟ ಬಯಲು
ಅಮ್ಮ ತೋರಿಸಿದ ಹಾದಿ ತುಳಿದೆ
ಇದೊಂದೇ ಹಾದಿ ಎಂದು ತಿಳಿದೆ

ಅಪ್ಪ ಒಂದು ಹಾದಿ ತೋರಿಸೇ
ಅಣ್ಣ ಅಕ್ಕಂದಿರ ಬೇರೆ ಬೇರೆ ವರಸೆ
ಮುಂದೆ ತಿಳಿಯಿತು
ಅಂದಾಗಿದ್ದೆ ನಾನೊಂದು ಕೂಪ ಮಂಡೂಕ

ದಿನ ದಿನಕೂ ದಿಗಂತದೆಡೆಗೇ ನೋಟ
ಕಣ್ಣು ಕೀಳದೇ ಒಂದೇ ಸಮನೆ ಓಟ
ಹೆಜ್ಜೆ ಹೆಜ್ಜೆಯಲೂ ಸಿಗುವ ಕಂದಕ
ಕಾಣದಂತೆ ಹಿಂದೆ ಓಡುವುದೇ ಅದರ ಕಾಯಕ

ನೇರ ಹಾದಿಯಲ್ಲೊಮ್ಮೆ ಓಟ
ಕವಲು ಹಾದಿಯಲ್ಲೊಮ್ಮೆ ಓಟ
ಬಟ್ಟ ಬಯಲೆಂದು ತಿಳಿದ ಜಾಗದಲ್ಲಿ
ಎಲ್ಲೆಲ್ಲಿ ನೋಡಿದರೂ ಒಂದೊಂದು ಕಡೆಗೆ ಹಾದಿ

ಹಿರಿಯರಿಂದ ಸರಿದಾರಿ ಕಲಿಯುತಿಹೆನೆಂಬ
ಅನಿಸಿಕೆಗಳೆಲ್ಲ ಸುಳ್ಳಾಯಿತು ಒಮ್ಮೆ
ಕಿರಿಯರಿಗೆಲ್ಲ ದಾರಿ ಸೂಚಕನಾಗಹೋಗಿ
ತಪ್ಪರಿವಾಗಿ ಬೆಪ್ಪನಾಗಿದ್ದೆ ಇನ್ನೊಮ್ಮೆ

ಕಣ್ಣ ಮುಂದೆ ಸಹಚರರ ಬೀಳುವಿಕೆ
ನೆನಪಿನಾಳದಿಂದ ಅವರ ಮಾಸುವಿಕೆ
ತಿಳಿದಿಹೆ ನಾ ಎಲ್ಲರ ಹಿಂದೆ ಹಾಕುತಿರುವೆ
ಮುಂದೆ ಮುಂದೆ ಓಡುತಲೇ ಇರುವೆ

ಹಿನ್ನೋಡದೇ ಅಪ್ರಮತಿಮನೆಂದೆ ತಿಳಿಯುತಿರುವೆ
ಒಮ್ಮೆ ಹಿಂದಾಗಲೂ ಅಳುತ ಕೂರುವೆ
ಒಮ್ಮೆ ಸೆಳೆವುದೇ ಕಂದಕ ತನ್ನ ಬಾಹುವಿನಿಂದ?
ಅಂದು ನಾ ಹೊರಬರುವೆನೇ ಈ ಕನಸಿನಿಂದ?