ಸಮ್ಮಿಲನದ ಸವಿನೆನಪು

ಸಮ್ಮಿಲನದ ಸವಿನೆನಪು

ಬರಹ

೩ ವಾರ ಬೆಂಗಳೂರಿನಲ್ಲಿಲ್ಲದ ಕಾರಣ, ಮೊನ್ನೆ ಶನಿವಾರ ಬಟ್ಟೆಗಳ ರಾಶಿಯೇ ನನ್ನ ಮುಂದಿತ್ತು, ರಾತ್ರಿಗೆ ಎಲ್ಲ ಬಟ್ಟೆ ಮುಗಿದು ಸುಸ್ತಾಗಿ ಹಾಸಿಗೆ ಮೇಲೆ ಬಿದ್ದೆ, ಅಲಾರಂ ಹೊಡೆದುಕೊಂಡಾಗ ಭಾನುವಾರ ಬೆಳಗ್ಗೆ ೭.೩೦, ಕಣ್ತುಂಬಾ ನಿದ್ರೆ, ಹಾಸಿಗೆಯಲ್ಲೇ ಹೊರಳಾಡಿದೆ ಹೋಗಲೋ ಬೇಡವೋ ಅಂತ, ಈ ಚಳಿಯಲ್ಲಿ ಇಂಥ ನಿದ್ರೆ ಹೇಗಪ್ಪ ಬಿಟ್ಟು ಹೋಗೋದು ಅಂದ್ಕೊಂಡು ಸ್ವಲ್ಪ ಹೊತ್ತು ಹೊರಳಾಡಿದೆ.

 

ಛೆ ಇಲ್ಲೇ ಇದ್ದರೂ ಹೋಗಲಿಲ್ಲ ಅಂದ್ರೆ, ಅಲ್ಲದೆ ಸಂಪದದಲ್ಲಿ ಬರುತ್ತೇನೆಂದು ಬೇರೆ ಹೇಳಿದ್ದೇನೆ, ಜೊತೆಗೆ ಇನ್ನೂ ಹುಡುಗ, ಅಲ್ಲದೆ ಅಷ್ಟೊಂದು ಆಸಕ್ತಿಯಿಂದ ಜಾಗ ಹುಡುಕಿ ಕಾರ್ಯಕ್ರಮದ ದಿನ, ಸಮಯ ತಿಳಿಸಿದ್ದಾರೆ, ಕೆಲವರು ಬರುತ್ತೇವೆ ಅಂದಿದ್ದಾರೆ, ಹೋಗದಿದ್ದರೆ ಕೊಟ್ಟ ಮಾತಿಗೆ ದ್ರೋಹ, ಏನನ್ನೋ ಕಳೆದುಕೊಂಡ ಭಾವ.

 

ಅಂತೂ ಎದ್ದೆ, ಅವಲಕ್ಕಿ ಮಾಡಿ ತಿಂಡಿ ತಿಂದು ನವರಂಗ್ ಕಡೆ ಹೆಜ್ಜೆ ಹಾಕಿದೆ, ಬಸ್ ಹತ್ತಿ ಕುಳಿತೆ. ಟ್ರಾಫಿಕ್ಕಿಲ್ಲ ಜೊತೆಗೆ ಸುಂದರ ವಾತಾವರಣ. ಮೆಜೆಸ್ಟಿಕ್ನಲ್ಲಿ  ಕೇವಲ 15 ನಿಮಿಷದಲ್ಲಿದ್ದೆ, ಅಲ್ಲಿಂದ ೩೩೫ ಬಸ್ ಹತ್ತಿದೆ, ೨೦ ನಿಮಿಷದಲ್ಲಿ ದೊಮ್ಮಲೂರಿನ ವಾಟರ್ ಟ್ಯಾಂಕ್ಗೆ ಬಂದು ಬಿದ್ದಿದ್ದೆ.


ಅಲ್ಲಿಂದ ಶುರುವಾಯಿತು ಜಾಗ ಹುಡುಕುವ ಕಥೆ, ೨೦ ನಿಮಿಷ ಇಡೀ ದೊಮ್ಮಲೂರಿನ ೨ನೇ ಹಂತವನ್ನು ಸುತ್ತು ಹಾಕಿದ್ದೆ, ಆಟೋದವನನ್ನ, ಅಂಗಡಿಯವನನ್ನ, ರಸ್ತೆಯಲ್ಲಿ ಹೋಗುವವನನ್ನ, ರಸ್ತೆ ಗುಡಿಸುವವರನ್ನ, ಉಹೂಂ ಯಾರಿಗೂ ಗೊತ್ತಿಲ್ಲ. ಆ ಚಳಿಯಲ್ಲೂ ಬೆವರಿ ಹೋಗಿದ್ದೆ, ವಿಳಾಸ ಹುಡುಕಿ ಹುಡುಕಿ ಸುಸ್ತಾಗಿ ಹೋದ ನಾನು ಒಂದು ಹಂತಕ್ಕೆ ವಾಪಸ್ ಹೋಗುವ ಅಂತ ಅಂದ್ಕೊಂಡೆ, ಇಲ್ಲಿವರೆಗೂ ಬಂದು ಯಾಕೆ ಸೋಲಬೇಕು ಅಂತ ಮತ್ತೆ ಹುಡುಕಲು ಪ್ರಯತ್ನಿಸಿದೆ.


ಕಡೆಗೂ ಯಾರೋ ಒಬ್ಬರು ದೊಮ್ಮಲೂರಿನ ಕ್ಲಬ್ ಹತ್ತಿರ ಇದೆ ಹೋಗಿ ಅಂದರು, ಅಲ್ಲಿ ಹೋದಾಗ ಕಡೆಗೂ ಸಿಕ್ತು. ಹರೀಶ್ ಮೊದಲಿರುತ್ತಾರೆ ಅಂದುಕೊಂಡಿದ್ರೆ ಮಿಕ್ಕಿದವರನ್ನು ಸ್ವಾಗತಿಸುತ್ತಾರೆ ಅಂದ್ರೆ ಗೋಪಿಯವ್ರೆ ಹರೀಶ್ರನ್ನು ಸ್ವಾಗತಿಸಿದ್ದರು.


ನಾನು ಒಳಗೆ ಹೋದಾಗ ಪರಿಚಯವಾಗಿದ್ದು ಮಂಜು, ನನ್ನನ್ನು ಹೆಗಡೆಯವರಿಗೆ ತೋರಿಸಿ ಚಿಕ್ಕು ನೋಡಿ ಅಂದ್ರು, ಯಾವ ಚಿಕ್ಕು ಅಂತ ನೋಡಿದ ಹೆಗಡೆಯವರು ಹೈಸ್ಕೂಲ್ ಮಾಸ್ಟರ್ ತರ ಕಂಡ್ರು. ಹಾಗೆ ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ, ಹರೀಶ್, ತೇಜಸ್ವಿ, ನಾಗರಾಜ್, ಕವಿ ನಾಗರಾಜರು, ಶ್ಯಾಮಲಾ ಜನಾರ್ಧನನ್, ಅ೦ಜನ್ ಕುಮಾರ್,ರೂಪ ರಾವ್ ಎಲ್ಲರ ಪರಿಚಯವಾದ ಮೇಲೆ ಕಾರ್ಯಕ್ರಮ ಶುರುವಾಯ್ತು.


ಹೊರಗೆ ಹಕ್ಕಿಗಳ ಕಲರವ, ಒಳಗೆ ಸಂಪದಿಗರ ಕಲರವ. ಶ್ರೀಮತಿ ಗೋಪಿನಾಥ್ರವರ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ ಹರೀಶ್ರವರ ನಿರೂಪಣೆಯೊಂದಿಗೆ ಮುಂದುವರೆಯಿತು, ಕಾರ್ಯಕ್ರಮಕ್ಕೆ ಚೆನ್ನಾಗಿಯೇ ತಯಾರಾಗಿ ಬಂದಿದ್ದ ಹರೀಶ್ರವರು ಪ್ರತಿಯೊಬ್ಬರನ್ನೂ ಚೆನ್ನಾಗಿ ಪರಿಚಯಿಸಿದರು. ೩ ಗಂಟೆಗಳ ಕಾಲ ಯಾವುದೇ ಅಡೆ ತಡೆಯಿಲ್ಲದೆ ಕಾವ್ಯ, ಕಥೆ, ಸಣ್ಣ ಕಥೆ, ವಿಮರ್ಶೆಗಳಲ್ಲಿ ಮುಂದುವರೆಯಿತು. ತೇಜಸ್ವಿಯವರ ಕವನಗಳು, ಮಂಜುರವರ ಅಪಘಾತದ ಕಥೆ ಮತ್ತೆ ಅವರು ಹೇಳುವ ಪರಿ ಮತ್ತು ಪದಗಳ ಸಂಯೋಜನೆ, ಗೋಪಿಯವರ ಅನುಭವ, ಆಸುಮನದ ಸಾಲುಗಳು, ಶ್ಯಾಮಲಾ ಜನಾರ್ಧನನ್ರವವರ ವಿಮರ್ಶೆ, ರೂಪಾರಾವ್ರವರ ಸಣ್ಣ ಕಥೆ, ಕವಿ ನಾಗರಾಜರ ಹಿತನುಡಿಗಳು, ಶ್ರೀಮತಿ ಶಾಂತೀ ಗೋಪಿನಾಥವರ ಪ್ರಾರ್ಥನೆ, ಅಂಜನ್ ಕುಮಾರರ ಅನುಭವ, ಆತ್ಮೀಯರವರ ಸುಂದರ ಸಾಲುಗಳು. ೩ ಗಂಟೆ ಕೇವಲ ೩ ನಿಮಿಷಗಳಲ್ಲಿ ಮುಗಿದುಹೋದ ಅನುಭವ. ಆಮೇಲೆ ಸಣ್ಣ ವಿರಾಮ.


ಗೋಪಿನಾಥ್ ಮತ್ತವರ ಕುಟುಂಬ, ಮಂಜು ಕುಟುಂಬ ಜೊತೆಗೆ ಶ್ಯಾಮಲಾ ಜನಾರ್ಧನನ್ರವರು ಸೇರಿ ಮಾಡಿದ ಕೋಲ್ಡ್ ಕಾಫಿ ಚೆನ್ನಾಗಿತ್ತು.
ಆಮೇಲೆ ಕೊನೆಯ ಹಂತ ವಂದನಾರ್ಪಣೆ. ಎಲ್ಲ ಮುಗಿದಾಗ ೨ ಗಂಟೆ.


ಅಂತೂ ಭಾನುವಾರವನ್ನು ಸಾರ್ಥಕಪಡಿಸಿಕೊಂಡ ಭಾವ ಬಸ್ಸಿನಲ್ಲಿ ಹತ್ತಿ ಕುಳಿತಾಗ ನನ್ನಲ್ಲಿ.