ಭಿನ್ನ ಅರ್ಥ, ವಿರುದ್ಧ ಅರ್ಥ ಮತ್ತು ಸಮಾನ ಅರ್ಥ

ಭಿನ್ನ ಅರ್ಥ, ವಿರುದ್ಧ ಅರ್ಥ ಮತ್ತು ಸಮಾನ ಅರ್ಥ

ಬರಹ

ಈ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸುತ್ತೀರೆಂದು ನಂಬಿದ್ದೇನೆ. ಇಲ್ಲಿ ನಾನು ಮಂಡಿಸುತ್ತಿರುವ ವಾದ ಇದು-ವಿರುದ್ಧ ಅರ್ಥ ಮತ್ತು ಸಮಾನ ಅರ್ಥ ಎಂಬುದು ನಮ್ಮ ಮನಸ್ಸು, ಮನೋಧರ್ಮ ಮತ್ತು ಸಾಮಾಜಿಕ ಪರಿಸರಕ್ಕೆ ಸಂಬಂಧಿಸಿದ ಸಂಗತಿಯೇ ಹೊರತು ಭಾಷೆಗೆ ಸಂಬಂಧಿಸಿದ ಸಂಗತಿಯಲ್ಲವೇ ಅಲ್ಲ, ವಿರುದ್ಧಾರ್ಥ ಮತ್ತು ಸಮಾನಾರ್ಥ ಪದಗಳು ಎಂದು ಚಿಕ್ಕಂದಿನಲ್ಲೇ ಮಕ್ಕಳಿಗೆ ಕಲಿಸುವ ಮೂಲಕ ಅವರ ಮನಸ್ಸನ್ನು ಕುಬ್ಜ ಮತ್ತು ಪರಿಮಿತಗೊಳಿಸುತ್ತಿದ್ದೇವೆ. ಭಾಷೆಗೂ ತಾತ್ವಿಕತೆಗೂ ಇರುವ ಸಂಬಂಧವನ್ನು ಗಂಭೀರವಾಗಿ ಚಿಂತಿಸದಿದ್ದರೆ ನಮ್ಮ ತಲೆಮಾರಿನ ಮತ್ತು ಹಿರಿಯ ತಲೆಮಾರಿನ ಜನ ಮಾಡಿದ ತಪ್ಪುಗಳನ್ನೇ ಮುಂದಿನ ಮಕ್ಕಳೂ ಮಾಡಿಯಾರು! ವ್ಯಾಕರಣವೆಂಬುದು ಭಾಷೆಯೊಂದರ ಲಕ್ಷಣಗಳನ್ನು ಖಚಿತವಾಗಿ ವಿವರಿಸುವ ಶಾಸ್ತ್ರ. ಕೆ, ಗೆ, ಇಂದ ಮೊದಲಾದ ಪ್ರತ್ಯಯಗಳು, ಹ್ರಸ್ವ ದೀರ್ಘ ಸ್ವರಗಳು, ಅಲ್ಪ ಪ್ರಾಣ ಮಹಾಪ್ರಾಣ ಉಚ್ಚಾರಣೆಗಳು ಇತ್ಯಾದಿಗಳೆಲ್ಲ ಭಾಷೆಯೊಳಗೇ ಅಂತರ್ಗತವಾಗಿರುವ, ಪರಿಶೀಲನೆಗೆ ದಕ್ಕುವ ಸಂಗತಿಗಳು. ಆದ್ದರಿಂದಲೇ ಇವು ಭಾಷೆಯ ರೂಪ ಲಕ್ಷಣಕ್ಕೆ ಸಂಬಂಧಿಸಿದ ಸಂಗತಿಗಳು. ಆದರೆ ವಿರುದ್ಧ ಅರ್ಥ ಮತ್ತು ಸಮಾನ ಅರ್ಥ ಎಂಬ ಕಲ್ಪನೆಗಳು ನಾವು ನಮ್ಮ ಮನಸ್ಸಿನಲ್ಲಿ ಮೂಡಿಸಿಕೊಂಡ ತೀರ್ಮಾನಗಳಿಂದ ಹುಟ್ಟುತ್ತವೆ, ಅವಕ್ಕೂ ಭಾಷೆಗೂ ಸಂಬಂಧವಿಲ್ಲ. ನನ್ನ ಗುರುಗಳಾಗಿದ್ದ ಪ್ರೊ. ಸಿ. ಡಿ. ನರಸಿಂಹಯ್ಯನವರು ಒಮ್ಮೆ “always use the word, not its cousin” ಎಂದು ತರಗತಿಯಲ್ಲಿ ಹೇಳಿದ್ದು ನೆನಪಾಗುತ್ತಿದೆ. ಭಾಷೆಯಲ್ಲಿ ಒಂದೇ ಅರ್ಥದ ಎರಡು ಪದಗಳು ಇರುವುದೇ ಇಲ್ಲ. ಯಾಕೆಂದರೆ ಪ್ರತಿಯೊಂದು ಪದವೂ ಒಂದು ನಿರ್ದಿಷ್ಟ ಭಾವವನ್ನೋ, ವಸ್ತುವನ್ನೋ, ಆಲೋಚನೆಯನ್ನೋ ಸೂಚಿಸಲೆಂದೇ ರಚನೆಗೊಂಡಿರುತ್ತದೆ. ಆನಂದ, ಸುಖ, ಸಂತೋಷ, ಉಲ್ಲಾಸ, ಸಂಭ್ರಮ, ಖುಷಿ, ಇತ್ಯಾದಿಗಳೆಲ್ಲ ಸ್ಥೂಲವಾಗಿ ಒಂದೇ ಬಗೆಯ ಭಾವವನ್ನು ಸೂಚಿಸುತ್ತವೆ ಅನ್ನಿಸಿದರೂ ಒಂದೊಂದು ಪದವೂ ಭಾವ ಮತ್ತು ಅರ್ಥಗಳ ಬೇರೆ ಬೇರೆ ನೆರಳುಗಳನ್ನು ರೂಪಿಸುತ್ತವೆಯಲ್ಲವೆ? ಆದ್ದರಿಂದಲೇ ಯಾವ ಪದವೂ ಇನ್ನೊಂದು ಪದದ ಸಮಾನಾರ್ಥಕ ಆಗಿರಲು ಸಾಧ್ಯವೇ ಇಲ್ಲ. ಇದರಂತೆಯೇ ವಿರುದ್ಧ ಪದಗಳ ಕತೆಯೂ ಕೂಡ. ಲೋಕದಲ್ಲಿಯಾಗಲೀ, ಭಾಷೆಯಲ್ಲಿಯಾಗಲೀ ಯಾವುದೂ ಯಾವುದಕ್ಕೂ ವಿರುದ್ಧ ಅಲ್ಲವೇ ಅಲ್ಲ. ನಮ್ಮ ಮನಸ್ಸು ಈ ವಿರೋಧಗಳನ್ನು ಗ್ರಹಿಸಿ ಅದನ್ನು ಭಾಷೆಯ ಮೂಲಕ ಹೇಳಿಕೊಳ್ಳಲು ಯತ್ನಿಸುತ್ತದೆ, ಅಷ್ಟೆ. ವಿರೋಧವಿರುವುದು ನಮ್ಮ ಮನಸ್ಸಿನಲ್ಲಿಯೇ ಹೊರತು, ನಮ್ಮ ಸಾಮಾಜಿಕ ಪರಿಸರದಲ್ಲಿಯೇ ಹೊರತು ಭಾಷೆಯ ರೂಪ, ಲಕ್ಷಣಗಲ್ಲಿ ಅಲ್ಲ. ತೆಂಗಿಗೆ ತುಂಬೆ ವಿರುದ್ಧವೇ? ಹಿಂದೂವಿಗೆ ಮುಸ್ಲಿಂ? ಕತ್ತಲೆಗೆ ಬೆಳಕು? ಒಳಿತಿಗೆ ಕೆಡುಕು? ಇವೆಲ್ಲ ವಿರೋಧಗಳು ನಮ್ಮ ನಮ್ಮ ಮನಸ್ಸುಗಳು ರೂಪಿಸಿಕೊಂಡ ವಿರೋಧಗಳೇ ಹೊರತು ವ್ಯಾಕರಣಕ್ಕೂ ವಿರೋಧ ಅರ್ಥಕ್ಕೂ ಸಂಬಂಧವಿಲ್ಲ. ನಿಸರ್ಗದಲ್ಲೂ ಭಾಷೆಯಲ್ಲೂ ಭಿನ್ನತೆ ಇದೆಯೇ ಹೊರತು ವಿರೋಧ ಅರ್ಥವಾಗಲೀ ಸಮಾನ ಅರ್ಥವಾಗಲೀ ಇಲ್ಲ. ಆದರೆ ನಾವು ಭಾಷೆಯನ್ನು ಕಲಿಸುವ ನೆಪದಲ್ಲಿ ವಿರುದ್ಧಾರ್ಥ, ಸಮಾನಾರ್ಥಕಗಳಿಗೆ ಇಲ್ಲದ ಮಹತ್ವ ನೀಡಿ ಮಾಡಿಕೊಂಡಿರುವ ಅಪಾಯವನ್ನು ನೋಡಿ: ಯಾವುದೇ ಪದಕ್ಕೆ ಒಂದು (ಒಂದೇ ಒಂದು) ವಿರುದ್ಧಾರ್ಥಕ ಪದವಿರುತ್ತದೆ, ಅದನ್ನು ಗಟ್‌ ಮಾಡಿದರೆ ಸಾಕು ಅನ್ನುವ ಶಿಕ್ಷಣ ಎಲ್ಲ ವಿಚಾರ-ಭಾವನೆಗಳನ್ನೂ ಪರ-ವಿರುದ್ಧಗಳಂತೆಯೇ ನೋಡಲು ಒದಗಿಸುವ ಪ್ರೇರಣೆಯಲ್ಲವೆ? ಕೊಂಚ ವಿಚಾರ ಮಾಡುವ ಮನಸ್ಸಿಗೆ ಈ ವಿರುದ್ಧ ಅರ್ಥಗಳು ಕೂಡ ತರ್ಕರಹಿತ ಮತ್ತು ಪ್ರಶ್ನಾರ್ಹ ಅನಿಸುವುದಿಲ್ಲವೆ? ಉದಾಹರಣೆಗೆ “ಸರಿ” ಎಂಬುದಕ್ಕೆ “ತಪ್ಪು” ಹೇಗೆ ವಿರುದ್ಧಾರ್ಥ? ಒಂದು “ಸರಿ” ಇನ್ನೊಂದು “ಸರಿ”ಗೆ ವಿರುದ್ಧವಾಗಿರುವುದನ್ನು ಲೋಕದಲ್ಲಿ ನಾವು ಕಾಣವುದಿಲ್ಲವೆ? “ಕತ್ತಲೆ”ಗೆ “ಬೆಳಕು” ಹೇಗೆ ವಿರುದ್ಧಾರ್ಥ? ಎರಡೂ ಇರುತ್ತವೆ, ಅವು ಪರಸ್ಪರ ವಿರೋಧಿಗಳೇನೂ ಅಲ್ಲ, ಕತ್ತಲೆ ಮತ್ತು ಬೆಳಕುಗಳ ನಡುವೆ ನಾವು ವಿರೋಧವನ್ನು ಕಲ್ಪಿಸಿಕೊಳ್ಳುತ್ತೇವೆ. ಇದೇ ಮನೋಧರ್ಮ ಮೇಲು ಕೀಳುಗಳ, ಜಾತಿ ಧರ್ಮಗಳ ವಿರೋಧವನ್ನೇ ಮನಸ್ಸಿನಲ್ಲಿ ಗಟ್ಟಿಗೊಳಿಸಲು ಕಾರಣವಾಗುತ್ತದಲ್ಲವೆ? ನಾವು ವಾಸ್ತವವನ್ನು ನೋಡುವುದೇ ಅರಿಯುವುದೇ ಭಾಷೆಯ ಮುಖಾಂತರ, ಆದ್ದರಿಂದಲೇ ಚಿಕ್ಕಂದಿನಲ್ಲಿ ಆದ ವಿರುದ್ಧಾರ್ಥಗಳ ಪಾಠ ಬದುಕಿನುದ್ದಕ್ಕೂ ಕೇವಲ ವಿರೋಧಗಳನ್ನು ಗ್ರಹಿಸುವುದನ್ನು ಮಾತ್ರ ಕಲಿಸೀತು. ಬೈನರಿ ಆಪೋಸಿಟ್ ಗಳ ಕಲ್ಪನೆಯ ಮುಖಾಂತರ ಮನುಷ್ಯ ಮನಸ್ಸು ಅನ್ವೇಷಿಸಿರುವ ಅಗಾಧ ಜಗತ್ತು ನಮಗೆಲ್ಲ ಗೊತ್ತು. ಅಂತೆಯೇ ಬೆಳಕನ್ನು ರೇಖೆಯೆಂದು ಅಥವ ಅಲೆಯೆಂದು ವಾದಿಸುತ್ತ, ಅದು ಎರಡೂ ಅಗಿರಬಹುದು ಎಂಬ ಕಾಣ್ಕೆಯನ್ನು ಪಡೆದದ್ದೂ ನಮಗೆ ತಿಳಿದಿದೆ. ಅಥವಾ ಕ್ವಾಂಟಂ ಥಿಯರಿಗಳ ಬೆರಗು ಇದೆಯಲ್ಲ ಅದನ್ನು ಏನು ಮಾಡುವುದು? ಬೈನರಿ ಅಪೊಸಿಷನ್‌ಗಳ ಲೌಕಿಕ ಸೌಲಭ್ಯಗಳನ್ನು ಇಟ್ಟುಕೊಂಡೂ ಪರ ವಿರೋಧಗಳು ಮಾತ್ರವಲ್ಲದೆ ಇನ್ನೊಂದು ಸಾಧ್ಯತೆಯ ಸತ್ಯವನ್ನು ಅರಿಯ ಬಯಸುವ ಕ್ವಾಂಟಂ ಲೋಕ—ಅದರ ಬಗೆಗೆ ಮಾತನಾಡಲು ನಾನು ಅಧಿಕಾರಿಯಲ್ಲ. ನನಗೆ ತಿಳಿದಿರುವುದು ಇಷ್ಟು. ನಮ್ಮ ಮಕ್ಕಳ ಬದುಕಿನ ನೋಟ ಬದಲಾಗಬೇಕಾದರೆ ನಾವು ಭಾಷೆಯನ್ನು ಕುರಿತು ತಳೆದಿರುವ ಧೋರಣೆಗಳೂ ಬದಲಾಗಬೇಕು, ಆ ಬಗ್ಗೆ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.