ಮುನಿಸು...
ಬರಹ
ಇದಾವ ಮೋಹ ಹೀಗೆ ಕಾಡುತಿದೆ ನನ್ನನು
ಕಪ್ಪು ಛಾಯೆಗಳ ಮಧ್ಯ ತೋರುತಿದೆ ಬೆಳಕನು.
ಸಾಕಿನ್ನು ಮುನಿಸು ದಣಿದಿಹೆನು ನಾನು,
ಬರಬಾರದೆ ಒಮ್ಮೆಯಾದರು ಮನ ತಣಿಸುವ
ತುಂತುರು ಮಳೆಯಾಗಿ ನೀನು.
ಮನಸು ಮನಸುಗಳ ನಡುವೆ ಬೇಲಿಗಳು ಬೆಳೆಯುತಿವೆ
ಸುರಿವ ಹನಿ ಹನಿ ಮಳೆಗೆ ಅಲ್ಲಲ್ಲಿ ಬೆಳೆವ ಕಾಟು ಗಿಡ-ಬಳ್ಳಿಗಳಂತೆ
ಮೂಂದೊಂದು ದಿನ ಮರೆಯಾಗಬಹುದು ನಾವು ,
ಅಳಿಸಿ ಹೋಗಬಹುದು ನೆನಪು ಕಾಲದ ಕೈಚಳಕದಲಿ,
ಕಳೆದು ಹೋಗಬಹುದು ಮತ್ತೆ ಸಿಗದ ವಸ್ತುಗಳಾಗಿ
ಬಾಡಿ ಹೋಗಬಹುದು ಮುಡಿದ ಮಲ್ಲಿಗೆಯಂತೆ
ಕೀಳದಿದ್ದರೆ ಇಂದು ಈ ಕಾಟು ಬೇಲಿಗಳನು...
ಪೂರ್ಣಿಮಾ ಹೆಬ್ಬಾರ್