ಸೇವಾ ಪುರಾಣ -1

ಸೇವಾ ಪುರಾಣ -1

ಬರಹ

ಸೇವಾ ಪುರಾಣ -1


ಇವನು ಫುಡ್ ಇನ್ಸ್ ಪೆಕ್ಟರಾ? -1


     ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ರಾಜ್ಯ ಸರ್ಕಾರದ ಪ್ರಥಮ ದರ್ಜೆ ಗುಮಾಸ್ತರ ಹುದ್ದೆಗೆ ನಡೆದ ಕೆ.ಪಿ.ಎಸ್.ಸಿ. ಪರೀಕ್ಷೆ ಕಟ್ಟಿ ಉತ್ತೀರ್ಣನಾಗಿದ್ದು ಕಂದಾಯ ಇಲಾಖೆಗೆ ನಿಯೋಜಿಸಲ್ಪಟ್ಟಿದ್ದೆ. ಹಾಸನ ಜಿಲ್ಲಾಧಿಕಾರಿಯವರ ಕಛೇರಿಯಿಂದ ಪ್ರಥಮ ದರ್ಜೆ ಆಹಾರ ನಿರೀಕ್ಷಕ (ಫುಡ್ ಇನ್ಸ್ ಪೆಕ್ಟರ್)ನಾಗಿ ನೇಮಕಾತಿ ಆದೇಶ ಬಂದಾಗ ಅಂಚೆ ಇಲಾಖೆ ಸೇವೆಗೆ ವಿದಾಯ ಹೇಳಿ 03-05-1973ರಲ್ಲಿ ಹಾಸನ ಜಿಲ್ಲಾಧಿಕಾರಿಯವರ ಮುಂದೆ ಕರ್ತವ್ಯಕ್ಕೆ ಹಾಜರಾದೆ. ಅವರು "ಫುಡ್ ಅಸಿಸ್ಟೆಂಟ್ ಹತ್ತಿರ ರಿಪೋರ್ಟ್ ಮಾಡಿಕೋ ಹೋಗು" ಎಂದರು. ನನ್ನನ್ನು ಅವರು ಏಕವಚನದಲ್ಲಿ ಮಾತನಾಡಿಸಿದಾಗ ಇರುಸುಮುರುಸಾಗಿದ್ದು ಸತ್ಯ. ಫುಡ್ ಅಸಿಸ್ಟೆಂಟರವರಲ್ಲಿ ವರದಿ ಮಾಡಿಕೊಂಡು ಪರಿಚಯಿಸಿಕೊಂಡೆ. ರಂಗು ರಂಗಿನ ಸೇವಾ ಯಾತ್ರೆಗ ಚಾಲನೆ ಸಿಕ್ಕಿತು. ನಾನಾಗ 21 ವರ್ಷದ ತರುಣನಾಗಿದ್ದು ಹೇಳಿಕೊಳ್ಳುವಂತಹ ಮೈಕಟ್ಟಿರದೆ ತೆಳ್ಳಗಿದ್ದರಿಂದ ನನ್ನ ಸ್ನೇಹಿತರು ನನ್ನನ್ನು "ಇವನು ಫುಡ್ ಇನ್ಸ್ ಪೆಕ್ಟರಾ? ಫುಡ್ ಇನ್ಸ್ ಪೆಕ್ಟರಿಗೇ ಫುಡ್ಡಿಲ್ಲ" ಎಂದು ಛೇಡಿಸುತ್ತಿದ್ದರು.


     'ಕಛೇರಿಯಲ್ಲಿದ್ದು ಗುಮಾಸ್ತರ ಬಳಿ ಹೋಗಿ ಕೆಲಸ ಕಲಿತುಕೋ' ಎಂದ ಸಾಹೇಬರ ಮಾತಿನಂತೆ ಕಛೇರಿಯ ಹಳೆಯ, ಹಿರಿಯ ಗುಮಾಸ್ತರ ಬಳಿಗೆ ಹೋದರೆ ಯಾರೂ ಸರಿಯಾಗಿ ಮಾತನಾಡಿಸಲೇ ಇಲ್ಲ. ನಾನು ಅವರ ಟೇಬಲ್ ಹತ್ತಿರ ನಿಂತಿದ್ದರೆ ಅವರು ನನ್ನನ್ನು ಗಮನಿಸದೆ ಅವರ ಪಾಡಿಗೆ ಅವರು ಕೆಲಸ ಮಾಡಿಕೊಂಡಿರುತ್ತಿದ್ದರು. ಒಂದೆರಡು ದಿನದ ನಂತರ ಒಬ್ಬ ಗುಮಾಸ್ತರಿಗೆ ಕರುಣೆ ಬಂದು ನನಗೆ ಒಂದು ದಪ್ಪ ಪುಸ್ತಕ ನೀಡಿ ಒಂದು ರೂಲರ್ ಮತ್ತು ಪೆನ್ಸಿಲ್ಲನ್ನೂ ಕೊಟ್ಟು ಪುಸ್ತಕ ಪೂರ್ತಿ ರೂಲ್ ಹಾಕು ಎಂದು ಅಪ್ಪಣೆ ಮಾಡಿದರು. ನಾನು ಹಾಗೆಯೇ ಮಾಡಿದೆ. ಇದನ್ನು ನೋಡಿ ಇತರ ಗುಮಾಸ್ತರೂ ನನಗೆ ಇಂತಹ ಕೆಲಸಗಳನ್ನೇ ಹೇಳಲು ಪ್ರಾರಂಭಿಸಿದರು.


ರೇಶನ್ ಕಾರ್ಡು ಕದ್ದರು!


     ನಾನು ಕೆಲಸಕ್ಕೆ ಸೇರಿ ಒಂದು ತಿಂಗಳಾಗಿರಬಹುದು. ಹಾಸನ ನಗರದಲ್ಲಿ ಹೊಸ ರೇಶನ್ ಕಾರ್ಡುಗಳನ್ನು ಕೊಡುವ ಸಲುವಾಗಿ ನಗರ ಸಭೆ ಸಿಬ್ಬಂದಿಯಿಂದ ಬರೆಸಿಟ್ಟಿದ್ದ ಕಾರ್ಡುಗಳನ್ನು ತರಲು ನನ್ನನ್ನು ನಗರಸಭೆಗೆ ಕಳಿಸಿದರು. ನಾನು ಕಾರ್ಡು ಪಡೆದಿದ್ದಕ್ಕೆ ಸ್ವೀಕೃತಿ ನೀಡಿ ಬರೆದಿಟ್ಟಿದ್ದ ಸುಮಾರು 18000 ಕಾರ್ಡುಗಳನ್ನು ತಂದು ಸಾಹೇಬರ ಛೇಂಬರಿನಲ್ಲಿ ಇಟ್ಟೆ. ಕಾರ್ಡುಗಳನ್ನು ವಿತರಿಸಲು ತಂಡಗಳನ್ನು ರಚಿಸಿ ಆದೇಶಿಸಲಾಯಿತು. ಮರುದಿನ ಕಾರ್ಡುಗಳನ್ನು ತಂಡಗಳಿಗೆ ಕೊಡುವಾಗ ನೋಡಿದರೆ ಸುಮಾರು 1200 ಕಾರ್ಡುಗಳು ಕಣ್ಮರೆಯಾಗಿದ್ದವು. ಉಳಿದ ಕಾರ್ಡುಗಳನ್ನು ತಂಡಗಳಿಗೆ ಕೊಡಲಾಯಿತು. ನಾನೂ ಒಂದು ತಂಡಕ್ಕೆ ಮುಖ್ಯಸ್ಥನಾಗಿದ್ದೆ. ಕಾರ್ಡುಗಳು ಕಾಣೆಯಾದುದಕ್ಕೆ ನನ್ನ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬಾರದು ಹಾಗೂ ಅದರ ಬೆಲೆ ರೂ. 600 ಅನ್ನು ನನ್ನಿಂದ ಏಕೆ ವಸೂಲು ಮಾಡಬಾರದೆಂದು ನನಗೆ ನೋಟೀಸು ಜಾರಿ ಮಾಡಿದರು. ನಾನು ಬೆಳಿಗ್ಗೆ 8-00 ರಿಂದ ಸಂಜೆ 5-00ರವರೆಗೆ ನನಗೆ ವಹಿಸಿದ್ದ ಬಡಾವಣೆಯ ಮನೆ ಮನೆಗಳಿಗೆ ನನಗೆ ಸಹಾಯಕನಾಗಿದ್ದ ಒಬ್ಬ ನಗರಸಭೆ ಬಿಲ್ ಕಲೆಕ್ಟರನೊಂದಿಗೆ ಹೋಗಿ ಕಾರ್ಡುಗಳನ್ನು ಕೊಡುತ್ತಿದ್ದು, ಸಾಯಂಕಾಲ ಕಛೇರಿಯಲ್ಲಿ ಕುಳಿತು ಕಳುವಾದ ಕಾರ್ಡುಗಳ ವಿವರ, ಅವು ಯಾವ ಅಂಗಡಿಗಳಿಗೆ ಸೇರಿದ್ದು, ಇತ್ಯಾದಿ ವಿವರ ಕಲೆ ಹಾಕುವ ಕೆಲಸ ಮಾಡುತ್ತಿದ್ದೆ. 3 ದಿನಗಳಲ್ಲಿ ಈ ವಿವರ ಸಿದ್ಧಪಡಿಸಿಕೊಂಡು ಸಾಹೇಬರಿಂದ 'ಈ ಕಾರ್ಡುಗಳಿಗೆ ಪರಿಶೀಲನೆಯಾಗುವವರೆಗೆ ಪಡಿತರ ಕೊಡಬಾರದು' ಎಂದು ಆದೇಶ ಮಾಡಿಸಿದೆ. ಒಂದು ತಿಂಗಳ ನಂತರ ಅಂಗಡಿಗಳಿಗೆ ಹೋಗಿ ನೋಡಿದರೆ ಆ ಕಾರ್ಡುಗಳಿಗೂ ರೇಶನ್ ಕೊಡಲಾಗಿದ್ದುದನ್ನು ಕಂಡು ಆಶ್ಚರ್ಯಪಟ್ಟೆ. ವಿಚಾರಿಸಿದಾಗ ಕಛೇರಿಯಿಂದ ಪರಿಶೀಲನೆಯಾದ ನಂತರವೇ ರೇಶನ್ ಕೊಡಲಾಯಿತೆಂದು ಉತ್ತರ ಸಿಕ್ಕಿ ನನಗೆ ಗಲಿಬಿಲಿಯಾಯಿತು. ಇನ್ನೊಂದು ಅಂಗಡಿಗೆ ಹೋದೆ. ಅಕಾಸ್ಮಾತ್ತಾಗಿ ಅಂಗಡಿಯ ಒಂದು ಮೇಲು ಹಲಗೆಯ ಬದಿಯಲ್ಲಿ ಕಾರ್ಡುಗಳ ಕಟ್ಟು ಒಂದು ನನ್ನ ಕಣ್ಣಿಗೆ ಬಿದ್ದು ತೆಗೆದು ನೋಡಿದರೆ ಅಲ್ಲಿ 70 ಕಾರ್ಡುಗಳು ಇದ್ದು ಎಲ್ಲವೂ ಕಳವಾದ ಕಾರ್ಡುಗಳ ಪೈಕಿಯವೇ ಆಗಿದ್ದವು. ಅದಕ್ಕೆ ಫುಡ್ ದೆಪ್ಯುಟಿ ತಹಸೀಲ್ದಾರರು 'ಪರಿಶೀಲಿಸಿದೆ' ಎಂದು ಬರೆದು ಸಹಿ ಹಾಕಿದ್ದರು. ಅದೇ ಸಮಯಕ್ಕೆ ಒಬ್ಬರು ಹತ್ತು ಕಾರ್ಡುಗಳನ್ನು ರೇಶನ್ ಪಡೆಯಲು ತಂದಿದ್ದು ನೋಡಿದರೆ ಅವೂ ಅಂತಹವೇ ಕಾರ್ಡುಗಳಾಗಿದ್ದವು. ಅಂಗಡಿಯವನು ಅವು ಇನ್ನೊಂದು ಅಂಗಡಿಯವರದೆಂದೂ ಅವರ ಬಳಿ ಇನ್ನೂ 70-80 ಕಾರ್ಡುಗಳು ಇವೆಯೆಂದೂ ಹೇಳಿದ. ನಾನು ತಕ್ಷಣ ಆ ಅಂಗಡಿಗೂ ಹೋಗಿ ಆ ಕಾರ್ಡುಗಳನ್ನೂ ಪಡೆದೆ. ಇನ್ನು ಕೆಲವು ಅಂಗಡಿಗಳಲ್ಲಿ ರೇಶನ್ ಕೊಡುವ ಸಮಯದಲ್ಲಿ ಕಾದಿದ್ದು ಮತ್ತಷ್ಟು ಕಾರ್ಡುಗಳನ್ನು ವಶಕ್ಕೆ ಪಡೆದೆ. ಹೀಗೆ ಕಳುವಾದ 1200 ಕಾರ್ಡುಗಳ ಪೈಕಿ ಸುಮಾರು 500 ಕಾರ್ಡುಗಳು ನನ್ನ ಕೈಗೆ ಸಿಕ್ಕಿದವು. ಆ ಕಾರ್ಡುಗಳಿಗೆ ಹಲವಕ್ಕೆ ಫುಡ್ ಡೆಪ್ಯಟಿ ತಹಸೀಲ್ದಾರ್ 'ಪರಿಶೀಲಿಸಿದೆ' ಎಂದು ಬರೆದು ಸಹಿ ಮಾಡಿದ್ದರೆ ಕೆಲವಕ್ಕೆ ಕಛೇರಿ ರೌಂಡ್ ಸೀಲು ಹಾಕಿ ಪರಿಶೀಲಿಸಿದ ಕುರಿತು ದಾಖಲಿಸಲಾಗಿತ್ತು. ನನಗೆ ಆಗ ತಿಳಿದ ಮಾಹಿತಿ ಆಘಾತಕಾರಿಯಾಗಿತ್ತು. ಕಾರ್ಡುಗಳನ್ನು ಫುಡ್ ಡೆಪ್ಯುಟಿ ತಹಸೀಲ್ದಾರ್ ಮತ್ತು ಒಬ್ಬರು ಬೆರಳಚ್ಚುಗಾರ್ತಿ ಹಣಕ್ಕಾಗಿ ಅಂಗಡಿಗಳವರಿಗೇ ಮಾರಿದ್ದರು! ಡೆಪ್ಯಟಿ ತಹಸೀಲ್ದಾರರು ಒಂದು ಸಂಜೆ ನನ್ನ ಮನೆಗೆ ಬಂದು ನನ್ನ ಕೈಹಿಡಿದು "ನಾಗರಾಜ, ಕೈ ಮುಗಿದು ಕೇಳುತ್ತೇನೆ. ಎಲ್ಲಾ ಕಾರ್ಡುಗಳನ್ನೂ ತರಿಸಿಕೊಡುತ್ತೇನೆ. ವಿಷಯ ಇಲ್ಲಿಗೇ ಮುಗಿಸಿಬಿಡು. ವರದಿ ಕೊಡಬೇಡ" ಎಂದು ಕೇಳಿಕೊಂಡಾಗ ನನಗೆ ಅಸಹ್ಯವೆನಿಸಿತು. ಬರವಣಿಗೆಯಲ್ಲಿ ವರದಿ ಕೊಡದಿದ್ದರೂ ಜಿಲ್ಲಾಧಿಕಾರಿಯವರಿಗೆ ಮೌಖಿಕವಾಗಿ ವಿಷಯ ತಿಳಿಸಿದಾಗ ಅವರಿಗೆ ಏನೂ ಅನ್ನಿಸಲಿಲ್ಲ. ಇದೆಲ್ಲಾ ಸಹಜವೆಂಬಂತೆ "ಹೋಗು, ನಿನ್ನ ಕೆಲಸ ನೋಡಿಕೋ ಹೋಗು" ಎಂದಾಗ ಪೆಚ್ಚಾದೆ. ಭ್ರಷ್ಟಾಚಾರದ ಒಂದು ಸಣ್ಣ ನಮೂನೆಯ ದರ್ಶನವಾಗಿತ್ತು. ಕಾರ್ಡುಗಳನ್ನು ವಿತರಿಸುವಾಗಲೂ ಸರಿಯಾಗಿ ವಿತರಿಸದೆ ಇದ್ದುದು, ಆ ಕಾರ್ಡುಗಳಲ್ಲೂ ಹಲವನ್ನು ಮಾರಿಕೊಂಡಿದ್ದು, ಬೇಕಾಬಿಟ್ಟಿಯಾಗಿ ಹಂಚಿದ್ದು, ಇತ್ಯಾದಿಗಳು ಜನರು ಕಛೇರಿಗೆ ಅಲೆದಾಡುವುದರಲ್ಲಿ, ದೂರಿಕೊಂಡು ಶಾಪ ಹಾಕುವುದರಲ್ಲಿ ಅಂತ್ಯ ಕಾಣುತ್ತಿತ್ತು.


(ಕಾಲಘಟ್ಟ: 1973)                                                                                                                              .... ಮುಂದುವರೆಯಲಿದೆ.