ಜೇನು ಕುರುಬರ ‘ಮುಚ್ಚ ಬೇಟೆ’; ನನ್ನ ಕಾಡಿದ ಅಪರಾಧಿ ಪ್ರಜ್ಞೆ.

Submitted by harshavardhan … on Thu, 07/08/2010 - 22:37
ಬರಹ

ನನಗೇನಾದರೂ ತಿನ್ನಲು ಕೊಡುವಿರಾ? ಎಂದು ಬೇಡುವಂತಿದೆ ಹನುಮಾನ್ ಲಂಗೂರ್ ಮುಖದ ಈ ಭಾವ. ಚಿತ್ರ: ಮಿಂಚು ಚೈತನ್ಯ ಷರೀಫ್.

 

‘ಮುಸುವಗಳ ಬೇಟೆ’ - ಈ ಬಗ್ಗೆ ಕೇಳಿದ್ದೀರಾ?

 

ನನಗೆ ಇತ್ತೀಚೆಗೆ  ಈ ‘ಮುಸುವ ಬೇಟೆ’ ನೋಡುವ ‘ದೌರ್- ಭಾಗ್ಯ’ ಸಿಕ್ಕಿತ್ತು. ಈ ಬೇಟೆ ನಡೆಸುವವರು ನಮ್ಮ ಉತ್ತರ ಕರ್ನಾಟಕದ ಹಕ್ಕಿ-ಪಿಕ್ಕಿಗಳು, ಹರಿಣಶಿಕಾರಿಗಳು, ಗೋಸಾವಿಗಳು ಅಥವಾ ಚಿಕ್ಕಲಿಗ್ಯಾರು ಎಂದು ಭಾವಿಸಿದ್ದೆ; ಆದರೆ ಅವರು ‘ಜೇನು ಕುರುಬರು’.

 

ದಯವಿಟ್ಟು ನಾನು ಯಾರಿಂದ ಈ ಮಾಹಿತಿ ಪಡೆದೆ?, ಎಲ್ಲಿ ನೋಡಿದೆ?, ಹೇಗೆ ಸಧ್ಯವಾಯಿತು? ಎಂಬೆಲ್ಲ ಪತ್ರಿಕೋದ್ಯಮದ 5- W's and 1-H ಗಳಿಗೆ ನಾನು ಇಲ್ಲಿ ಉತ್ತರಿಸಲಾರೆ. ಅಷ್ಟರಮಟ್ಟಿಗೆ ನಾನು ಪರಾವಲಂಬಿ! ಕೇವಲ ಅನುಭವ ಮಾತ್ರ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅದು ‘ಎಕ್ಸಕ್ಲೂಸಿವ್’ ಸಂಪದಿಗರಾಗಿ!

 

ನಾವು ಇತ್ತೀಚೆಗೆ ಚಾರಣ ಕೈಗೊಂಡಿದ್ದೆವು. ಹೀಗೆ ಹರಟುತ್ತ, ಕಾಡಿನಲ್ಲಿ ‘ಕಂಪಾಸ್’ ಝಳಪಿಸುತ್ತ ಕಾಲೆಳೆಯುತ್ತ, ಆಗಾಗ ನೀರು ಹೀರುತ್ತ ಹೊರಟಿದ್ದೆವು. ಕಾಡಿನ ಮಧ್ಯೆ ಹಠಾತ್ ಒಂದು ‘ಟೋಳಿ’ ಕಾಣಿಸಿತು. ಅನುಮಾನಾಸ್ಪದವಾಗಿದ್ದ ಅವರ ಚಲನವಲನಗಳು ನಮಗೆ ನಿಗೂಢವಾಗಿ ಕಂಡಿತು. ಅವರು ಬೇಟೆಗಾರರು ಎಂಬ ಸಂಶಯ ನಮ್ಮಲ್ಲಿ ಮೊಳಕೆ ಒಡೆಯದಂತೆ ಜಾಗ್ರತೆ ವಹಿಸಿದಂತಿತ್ತು. ನಮ್ಮಂತೆ ಕಾಡು ನೋಡಲು ಬಾರದೇ, ಅರಣ್ಯ ಉತ್ಪನ್ನ ಸಂಗ್ರಹಿಸಿ, ಮರಾಟ ಮಾಡಿ ಬಂದ ಉತ್ಪನ್ನದಲ್ಲಿ ಬದುಕುತ್ತಿರುವಂತೆ ನಮಗೆ ನಂಬಿಸಿದರು. ‘ಪಾಪ ಬಡವರು’ ಎಂದು ನಾವು ಅನುಕಂಪ ತೋರಿಸುವಂತೆ ಅವರ ನಡಾವಳಿ!

 

 

ನಾನೂ ನಿಮ್ಮವನೇ ಎನ್ನುತ್ತಿದೆಯೇ ಈ ಮುಸುವ? ಕಾದು ನೋಡಬೇಕು. ಚಿತ್ರ: ಮಿಂಚು ಚೈತನ್ಯ ಷರೀಫ್.

 

ಸುಮಾರು ಒಂದು ಮೈಲಿ ದೂರ ಕ್ರಮಿಸಿರಬೇಕು..ಕಪ್ಪು ಮೂತಿಯ ಮುಸುವಗಳ ಒಂದು ಗುಂಪು ಅತ್ಯಂತ ಭಯಂಕರವಾಗಿ ಕಿರುಚಾಡುತ್ತ, ಇಡಿ ಗಿಡದ ತುಂಬೆಲ್ಲ ಎಗರಾಡುತ್ತ ಸಂಭವನೀಯ ಅಪಾಯದ ಮುನ್ಸೂಚನೆ ನೀಡುತ್ತಿರುವಂತೆ ಪ್ರತಿಭಟಿಸಿದವು. ಬಹಶ: ಅವುಗಳ ಮನೆಯಲ್ಲಿ ನಮ್ಮ ಇರುವಿಕೆ ಸಹನವಾಗಲಿಲ್ಲವೇನೋ? ಹೀಗಂದುಕೊಳ್ಳುತ್ತಿರುವಾಗಲೇ ಟೋಳಿಯ ನಾಯಕ ಗಂಡು ಮುಸ್ಯಾ ಅತ್ಯಂತ ಸಿಟ್ಟಿಗೆ ಬಂದು ಟೊಂಗೆಗಳನ್ನು ಕಿತ್ತೆಸೆದ. ತನ್ನ ಕುಟುಂಬ ಕಾಪಾಡುವ ಹೊಣೆ ಆತ ಹೊತ್ತಿದ್ದ. ಕೂಡಲೇ ಎಲ್ಲ ಹೆಣ್ಣು ಮುಸುವಗಳು ತಮ್ಮ ಮರಿಗಳೊಂದಿಗೆ ಹತ್ತಾರು ಗಿಡಗಳಷ್ಟು ದೂರ ಕ್ರಮಿಸಿ ಕುತೂಹಲದಿಂದ ನಮ್ಮನ್ನು ಬೆರಗುಗಣ್ಣಿನಿಂದ ನೋಡುತ್ತ ತುಸು ವಿಶ್ರಮಿಸಿದವು. ಆದರೆ ಗಂಡು ಮಾತ್ರ ಕೇಕೆ ಹಾಕಿದಂತೆ ‘ಘೂಮ್.ಘೂಮ್’ ಎಂದು ಕೂಗುತ್ತ ಎಲ್ಲರನ್ನು ಎಚ್ಚರಿಸುವ ಧಾಟಿ ತನ್ನದಾಗಿಸಿಕೊಂಡಿದ್ದ.

 

ನಮಗೆ ಮಂಗಗಳ ಈ ವಿಚಿತ್ರ ನಡವಳಿಕೆ ಒಂಥರಾ ಖಷಿ ಹುಟ್ಟಿಸಿತು. ‘ನಾವೇ ಈ ಕಾಡಿನ ರಾಜರು’ ಎಂಬ ಅಹಮಿಕೆ ಸುಳಿದು ಹೋಯಿತು. ಆದರೆ ನಮ್ಮೊಟ್ಟಿಗಿದ್ದ ಜೇನು ಕುರುಬರ ಹಿರಿಯಾಳು..‘ನಾವು ಅವ್ನ ಕೊಂದು ತಿಂತೇವೆ ಸ್ವಾಮೇರೋ..ಹಂಗಾಗಿ ನಮ್ಮ ಮೈ ವಾಸ್ನೆ ಹಿಡ್ದು ಹಂಗಾಡ್ತವೆ’ ಎಂದ. ದಂಗಾಗುವ ಸರದಿ ನಮ್ಮದು. ನಾನು ಚಕಿತನಾಗಿ ಆ ಹಿರಿಯನನ್ನು ಮಾತಿಗೆಳೆದೆ. ‘ಅಲ್ಲ..ನೀವು ಅಧೆಂಗೆ ಹಿಡಿತೀರಿ?’. ‘ತಡೀರಿ ಬುಧ್ಯೋರು..ನಾವು ಹಿಡ್ದೇ ತೋರಿಸ್ತೀವಿ’ ಅಂದ. ಅಯ್ಯೋ ಇದೊಳ್ಳೆ ಫಜೀತಿಗಿಟ್ಟುಕೊಂಡೆ ಅಂದುಕೊಂಡೆ. ನಾನು ಅಂದಿದ್ದನ್ನೇ ಆತ ಪಣವಾಗಿ ಸ್ವೀಕರಿಸಿದನೇ? ಎಂದು ನನಗೆ ಗುಮಾನಿಯಾಯಿತು.

 

ಅಸಲಿಗೆ ಅವರು ಬಂದಿದ್ದು ಮುಸುವ ಬೇಟೆಗೆ..ಅವರ ಭಾಸೆಯಲ್ಲಿ ಹೇಳಬೇಕು ಎಂದರೆ ‘ಮುಚ್ಚ ಬ್ಯಾಟಿ’ ಮಾಡಲು!  

 

ತಿಂಡಿ ನೀಡಿದ ಮೇಲೂ ಹೊಟ್ಟೆಬಾಕ ಹನುಮಾನ್ ಲಂಗೂರ್ ಮತ್ತೂ ಕೊಡಿ ಎನ್ನುತ್ತಿದೆ! ಚಿತ್ರ: ಮಿಂಚು ಚೈತನ್ಯ ಷರೀಫ್.

 

ನಿಂತು ನೋಡುವುದೋ? ಅಥವಾ ಅವರನ್ನು ಹಾಗೆ ಮಾಡದಂತೆ ತಡೆಯುವುದೋ? ಇಲ್ಲ ‘ಫಾರೆಸ್ಟ್’ ನವರ ಹೆದರಿಕೆ ಹಾಕುವುದೋ? ‘ದೇವರು ಅದು’ ಎಂದು ನಂಬಿಕೆ, ಆಚರಣೆಗಳ ಹೆಸರಿನಲ್ಲಿ ಹೆದರಿಸುವುದೋ? ಏನೆಲ್ಲ ವಿಚಾರಗಳು ನನ್ನ ತಲೆಯಲ್ಲಿ ಹುಳ ಎಬ್ಬಿಸಿದ್ದವು. ಹಿರಿಯ ಮಿತ್ರ ಹೇಳಿದ..‘ತಡಿಯೋ ಅವರ ಕೌಶಲ ತಿಳಿದುಕೊಳ್ಳೋಣ; ನೀವು ಮುಂದುವರಿಸಿಪ್ಪಾ’ ಅಂದು ಬಿಟ್ಟ. ಇವನಿಂದ ಹಸಿರು ನಶಾನೆ ಸಿಕ್ಕಿದ್ದೇ ತಡ ಜೇನು ಕುರುಬರ ಚರ್ಮದ ಚೀಲ ಬ್ರಹ್ಮಾಂಡವನ್ನೇ ತೋರಿಸಿತು. ಬೇಟೆಯ ಎಲ್ಲ ಉಪಕರಣಗಳು ಅದರಲ್ಲಿದ್ದವು. ಆದರೆ ‘ಫೋಟೋ ಕ್ಲಿಕ್ಕಿಸುವಂತಿಲ್ಲ’ ಎಂಬುದು ಅವರ ಆಗ್ರಹದ ವಿನಂತಿ.

 

ಉಪಾಯ ನನಗೆ ಹೊಳೆಯಲಿಲ್ಲ; ಆದರೆ ಇದು ಸಮಂಜಸ ಕಾರಣವಲ್ಲ. ನನಗೂ ಎಲ್ಲೋ ಮನದ ಒಂದು ಮೂಲೆಯಲ್ಲಿ ಅವರ  ಬೇಟೆಯ ಕಲೆ ಒರೆಗೆ ಹಚ್ಚಬೇಕು ಎಂಬ ಹುಚ್ಚು ತುಡಿತವಿತ್ತು ಎನಿಸುತ್ತದೆ. ಹಾಗಾಗಿ ಇತರರಂತೆ ನಾನೂ ಜೇನು ಕುರುಬರ ಗುಂಪಿನ ಹಿರಿಯನ ಹಿಂಬಾಲಕನಂತಾಗಿ ಬಿಟ್ಟೆ! ‘ಹೋಗ್ರಿ..ಸ್ವಾಮೇರು ಆ ದೊಡ್ಡ ಗಿಡದ ಬುಡತಾವ್ ಮುಚ್ಚಕೊಳ್ಳಿ’ ಅಂದ ಆ ಮಹಾನುಭಾವ. ಅವರ ಹಿಂಬಾಲಕ ಪಡೆಯಲ್ಲಿದ್ದ ಇಬ್ಬರು ಹುಡುಗರು ತಮ್ಮ ಹೆಗಲಿಗಿದ್ದ ಚರ್ಮದ ಚೀಲ ನೆಲಕ್ಕಿಳಿಸಿ, ಬೇಟೆಯ ವಿಶೇಷ ಆಯುಧಗಳನ್ನು ಹರವಿಟ್ಟರು. ಇನ್ನಿಬ್ಬರು ಯುವಕರು ಸರಸರನೇ ಮಂಗನಂತೆ ಮರವೇರಿ ಬಲೆ ಸಿಕ್ಕಿಸಿದರು. ಟಿಸಿಲು ಕೊಂಬೆಗಳನ್ನು ಆಯ್ದು ನಾಲ್ಕೂ ಮೂಲೆಗಳಿಗೆ ಭದ್ರವಾಗಿ ಬಲೆ ಬಿಗಿದು ಇಳಿದು ಬಂದರು.

 

ನನಗೆ ಇದೆಲ್ಲ ತಮಾಶೆಯಾಗಿ ಕಂಡಿತು. ಜಾಣ ಮಂಗಗಳು; ಅದರಲ್ಲೂ ನಮ್ಮ ಪೂರ್ವಜರು ಅಷ್ಟು ಸಲೀಸಾಗಿ ಇಡೀ ಕಾಡು ಬಿಟ್ಟು ಓಡೋಡಿ ಬಂದು ಈ ಬಲೆಗೆ ಬೀಳುತ್ತವೆ ಎಂದರೆ ಮೂರ್ಖ ಕಲ್ಪನೆಯೇ ಸೈ! ಎಂದು ಮನದಲ್ಲಿ ಲೆಕ್ಕಹಾಕಿ ನಕ್ಕೆ. ನಾಲ್ಕಾರು ಜನ ನಮ್ಮನ್ನೆಲ್ಲ ಅಲ್ಲಿಯೇ ಬಿಟ್ಟು ತೆವಳುತ್ತ ಆ ಹತ್ತಾರು ಮಂಗಗಳು ಏರಿ ಕುಳಿತ ಮರದ ಬಳಿ ಸಾಗಿದರು. ಅತ್ತ ಮಂಗಗಳ ಗಲಾಟೆ, ಕಿರುಚಾಟ ಮುಗಿಲು ಮುಟ್ಟಿತ್ತು. ದಿಢೀರ್ ಎದ್ದು ನಿಂತವರೇ ಒಬ್ಬ ಮರವೇರಲು ಶುರುಮಾಡಿದ; ಮತ್ತೊಬ್ಬ ಕೆಳಗೆ ನಿಂತು ಮಂಗಗಳ ಭಾಷೆಯಲ್ಲಿ ಮಾತನಾಡುತ್ತಿರುವಂತೆ ವಿಚಿತ್ರವಾಗಿ ಸದ್ದು ಮಾಡಲಾರಂಭಿಸಿದ. ಉಳಿದಿಬ್ಬರು ಗಿಡದ ಆಚೆ ಬದಿಗೆ ಹೋಗಿ ನಿಂತು ‘ಚಾಟರ ಬಿಲ್ಲು’ ಅರ್ಥಾತ್ ‘ಗುಲೇಲ್’ ಅಂದ್ರೆ ಟಿಸಿಲೊಡೆದ ಗಿಡದ ಪುಟ್ಟ ಟೊಂಗೆಗೆ ಎರಡು ತುದಿಯಿಂದ ರಬ್ಬರ್ ಬಿಗಿದು, ಮಧ್ಯೆ ಗೋಲಿ ಗುಂಡದಷ್ಟು ಕಲ್ಲು ಕೂಡುವಷ್ಟು ಕಾಣಿ ಇರುವ ಬೇಟೆಯ ಅಸ್ತ್ರ ಹಿಡಿದು, ಬೆಂಕಿಯಲ್ಲಿ ಸುಟ್ಟ ಮಣ್ಣಿನ ಗುಂಡಗಳನ್ನು ಹಾಕಿ ಗುರಿ ಇಟ್ಟು ಮಂಗಗಳಿಗೆ ಹೊಡೆಯಲಾರಂಭಿಸಿದರು. ಆ ಮಂಗಗಳ ಟೋಳಿ ನಮ್ಮತ್ತ ಬರುವಂತೆ ಜಾಗ್ರತೆ ವಹಿಸಿ ಹಾಗೆ ಮಾಡುತ್ತಿದ್ದರು.

 

ಕೆಲವು ಗಿಡದಿಂದ ಗಿಡಕ್ಕೆ ಹಾರಿದರೆ; ಮತ್ತು ಕೆಲವು ಗಿಡದ ತುತ್ತ ತುದಿಗೆ, ಕಾಣಿಸದಂತೆ ಟೊಂಗೆಗೆ ಮರೆಯಾಗಿ ಅವಿತಿಟ್ಟುಕೊಳ್ಳುತ್ತಿದ್ದವು. ಆದರೆ ಗಿಡ ಹತ್ತಿದವ ಅವುಗಳನ್ನು ಅಲ್ಲಿಂದ ಓಡಿಸುತ್ತಿದ್ದ. ಹಾಗೂ ಹೀಗೂ ನನ್ನ ಪ್ರಾರ್ಥನೆ ಫಲಿಸದೇ ಒಂದು ಮಂಗಕ್ಕೆ ಇವರ ಗುರಿ ತಾಗಿತು. ಸುಟ್ಟ ಮಣ್ಣಿನ ಗೋಲಿ ಬಲವಾಗಿ ಆ ಮಂಗದ ಕೈಗೆ ತಾಗಿತು. ನೋವಿನಿಂದ ಅರಚಿ ಕೊಂಬೆಗೆ ಜಿಗಿಯಲು ಯತ್ನಿಸಿ ಹಿಡಿದುಕೊಳ್ಳಲಾಗದೇ ಆಯತಪ್ಪಿ ಒಂದೆರೆಡು ಟೊಂಗೆಗಳಿಗೆ ಬಡಿಸಿಕೊಂಡು ಮತ್ತಷ್ಟು ಘಾಸಿಗೊಂಡು ಜೋತು ಬಿದ್ದಿತು. ಹರಸಾಹಸ ಪಟ್ಟು ಈ ಜೇನುಕುರುಬರು ಅದನ್ನು ಗುಂಪಿನಿಂದ ಪ್ರತ್ಯೇಕಿಸಿ ಬಲೆ ಕಟ್ಟಿದ ಗಿಡಗಳ ಮಧ್ಯೆ ತರುವಲ್ಲಿ ಯಶಸ್ವಿಯಾದರು. ನಾಲ್ಕೂ ದಿಕ್ಕುಗಳಿಂದ ಅಸಡ್ಡೆಯ ಚಕ್ರವ್ಯೂಹದಲ್ಲಿ ಸಿಲುಕಿದ್ದ ಈ ಅರೆಹೊಟ್ಟೆ ಅಭಿಮನ್ಯುಗಳು ಮಂಗವನ್ನು ಚಕ್ರವ್ಯೂಹದಲ್ಲಿ ನೂಕಿ, ಚಾಟರ ಬಿಲ್ಲಿನಿಂದ ಒಂದೇ ಸವನೆ ಗುಂಡುಗಳ ಮಳೆಗರೆಯಲಾರಂಭಿಸಿದರು. ಕೆಲವನ್ನು ತಪ್ಪಿಸಿಕೊಂಡು; ಮತ್ತೆ ಕೆಲ ಗೋಲಿಯಿಂದ ಪೆಟ್ಟು ತಿಂದ ಮಂಗ ಬಲೆಗೆ ಜಾರಿ ಬಿತ್ತು. ಕೂಡಲೇ ಅದನ್ನು ಹಗ್ಗದ ಮೂಲಕ ಮೇಲೆತ್ತಿ ಬಂಧಿಸಲಾಯಿತು. ಕೆಳಕ್ಕಿಳಿಸಿ ದೂರದಿಂದಲೇ ಪೂಜೆ ಮಾಡಿ, ಹರಿತವಾದ ಭರ್ಚಿಯಿಂದ ಇರಿದು ಕೊಲ್ಲಲಾಯಿತು. ಪಾಪ ಬಡಪ್ರಾಣಿಯ ರಕ್ತ ಒಣಗಿ ಚೆಲ್ಲಿದ್ದ ಗಿಡದ ಎಲೆಗಳ ಮೇಲೆ ತೊಟ್ಟಿಕ್ಕಿ, ಹನಿ ಹನಿಯಾಗಿ ಭೂಮಿಗೆ ತರ್ಪಣವೀಯುತ್ತಿದ್ದ ದೃಷ್ಯ ನಮ್ಮ ಕರುಳು ಹಿಚುಕಿತ್ತು. 

 

ಅಂತೂ ಮಾನವನ ದುರಾಸೆಗೆ, ಮೂರ್ಖತನಕ್ಕೆ ಅಮಾಯಕ, ಮೂಕ ಲಂಗೂರ್ ಬಲಿಯಾಯಿತು. ಚಿತ್ರ: ಮಿಂಚು ಚೈತನ್ಯ ಷರೀಫ್.

 

ಲಗುಬಗೆಯಿಂದ ಮಂಗದ ಜೀವ ತೆಗೆದ ಈ ಜನ, ಅಂತಿಮವಾಗಿ ನಮಸ್ಕರಿಸಿ ಚರ್ಮ ಸುಲಿದು ಗಿಡವೊಂದಕ್ಕೆ ನೇತು ಹಾಕಿದರು. ಮಾಂಸ ಬೇರ್ಪಡಿಸಿ ಪಾತ್ರೆಯೊಂದರಲ್ಲಿ ಹಾಕಿ ಕುದಿಸಲು ನಿಂತರು. ಸಾಕಷ್ಟು ಉರುವಲು ಸುಟ್ಟು, ಅಂತಿಮವಾಗಿ ತಮ್ಮಲ್ಲಿದ್ದ ವಿವಿಧ ಪೊಟ್ಟಣಗಳಿಂದ ರುಚಿಗೆ ಬೇಕಾಗುವ ಮಸಾಲೆ ಸಾಮಾನು ಅದಕ್ಕೆ ಸುರಿದರು. ಹತ್ತಕ್ಕೂ ಹೆಚ್ಚು ಜನರಿದ್ದ ಆ ಟೋಳಿಯಲ್ಲಿ ಮಾಂಸ ಬೇಯುವ ವರೆಗೆ ಕಾಯುವ ತಾಳ್ಮೆ ಇದ್ದಂತೆ ನನಗೆ ಕಾಣಲಿಲ್ಲ. ಕಟ್ಟಿಗೆಯನ್ನೇ ಸೌಟು ಮಾಡಿ, ಕುದಿಯುತ್ತಿದ್ದ ಮಾಂಸ ತಿರುಗಿಸುವ ನೆಪದಲ್ಲಿ ಎಲ್ಲರೂ ಚೂರು ರುಚಿ ನೋಡಿ; ಕುದಿಯುವ ವೇಳೆಗೆ ಅರ್ಧದಷ್ಟು ಹಸಿಯಾದುದನ್ನೇ ಪರೀಕ್ಷೆಯ ಹೆಸರಿನಲ್ಲಿ ಹೊಟ್ಟೆಗೆ ಇಳಿಸಿದ್ದರು! ಒಂದು ಹಂತದಲ್ಲಿ ಹೆಚ್ಚು ಬಾರಿ ಸೌಟು ತಿರುವಿದವನಿಗೂ ಕಡಿಮೆ ಬಾರಿ ಸೌಟು ತಿರುವಿದವನಿಗೂ ಜಗಳ ಬಂದು ಕೈಕೈ ಮೀಲಾಯಿಸುವ ಹಂತಕ್ಕೂ ಹೋದರು. ನಾವೆಲ್ಲ ಮೂಕ ಪ್ರೇಕ್ಷಕರಾಗಿ ಶಾಕ್ ಟ್ರೀಟಮೆಂಟ್ ನಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದೆವು.

 

ನಮಗೂ ‘ಟೇಶ್ಟ್’ ನೋಡುವಂತೆ ಹಿರಿಯ ‘ನಳ’ನೊಬ್ಬ ಕರೆದ. ದೂರದಿಂದಲೇ ನಾನು ಕೈಮುಗಿದು ಅವನನ್ನು ಮನಸಾ ಶಪಿಸಿದೆ. ಗುಂಪಿನ ಮುಖಂಡ ನನ್ನ ಬಳಿಗೆ ಬಂದು ‘ಕಪಿಯ ಸುಲಿದ ಚರ್ಮ ಬೇಕೆ?’ ಎಂದ. ಬೇಡವೆಂದು ನಯವಾಗಿ ತಿರಸ್ಕರಿಸಿದೆ. ‘ಮುಚ್ಚ ಬೇಟೆ ಚರ್ಮ ಯಾರಿಗ್ ಬೇಕ್ರೋ’ ಎಂದು ಏರಿದ ಧ್ವನಿಯಲ್ಲಿ, ಹರಾಜು ಹಾಕುವವನಂತೆ ಕೇಳಿದ. ಒಬ್ಬ ಎದ್ದು ಬಂದು ಐದು ರೂಪಾಯಿ ಪಾವಲಿ ನೀಡಿ ಅದನ್ನು ಪಡೆದ. ಅವರು ಬಾರಿಸುವ ಸಾಂಪ್ರದಾಯಿಕ ವಾದ್ಯಕ್ಕೆ ಅದನ್ನು ತೊಡಿಸುವುದಾಗಿ, ಇನ್ನೊಂದು ಬಾಜು ಚೀಲ ಹೆಣೆದುಕೊಳ್ಳುವುದಾಗಿ ಹೇಳಿದ.  ಕ್ಷಣದಲ್ಲಿ ಅಡುಗೆ ಮಾಡಿದ ಜಾಗೆ ಯಾರೂ ಗುರುತಿಸಬಾರದು ಎಂಬಂತೆ ಮಣ್ಣು ಮುಚ್ಚಿ, ಎಲೆಗಳನ್ನು ಹರಡಿ ಕುರುಹುಗಳೇ ಕಾಣ್ದಂತೆ ಮಾಡಿದರು. ಹೀಗೆ ಮತ್ತೆಷ್ಟು ಕಡೆ ಮಾಡಿದ್ದಾರೋ ನಾ ಕಾಣೆ?

 

‘ಸಾಕು ನೇಡೀರೋ..’ ಎಂದು ನನ್ನೊಟ್ಟಿಗೆ ಇದ್ದವರಿಗೆ ಹೇಳಿದೆ. ಬೇಟೆ ಆರಂಭವಾಗುವಾಗ ನೋಡಬೇಕು ಎಂಬ ಕುತೂಹಲ ನಮ್ಮಲ್ಲಿ ಮನೆ ಮಾಡಿತ್ತು. ಮುಸುವನ ಸಾವಿನೊಂದಿಗೆ ಅಂತ್ಯಗೊಂಡಾಗ ನಾವು ಈ ಘಟನೆಯ ಭಾಗವಾಗಬಾರದಿತ್ತು ಎಂದಿತು  ಭಾರವಾಗಿದ್ದ ಮನಸ್ಸು. ಎರಡಕ್ಕೂ ನಾನು ಸಾಕ್ಷಿ ಎಂಬುದು ಸತ್ಯ; ಸೋಜಿಗ. ಅಪರಾಧಿ ಪ್ರಜ್ಞೆ ಈಗ ನನ್ನನ್ನು ಕಾಡುತ್ತಿದೆ.