ಪವಾಡ ( ಭಾಗ ೧ )

ಪವಾಡ ( ಭಾಗ ೧ )

ಬರಹ

ನೆತ್ತಿಯ ಮೇಲೆ ಕೈಯಿಟ್ಟು ದೂರ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ , ನದಿಯ ಅಲೆಯೊಂದು ಮಂದಗತಿಯಲ್ಲಿ ಸಾಗಿಬರುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಎತ್ತರಕ್ಕೆ ಏರಿ ಸೂಕ್ಷ್ಮವಾಗಿ ಗಮನಿಸಿದರೆ, ಆನೆಗಳು, ಕುದುರೆಗಳು ಮತ್ತು ಮನುಷ್ಯರು ಸಾಗರೋಪಾದಿಯಾಗಿ ಜೊತೆಗೂಡಿ ಬರುತ್ತಿರುವುದು ಕಾಣುತ್ತಿತ್ತು. ನಿಸ್ಸಂಶಯವಾಗಿ ಅದು ಮೌರ್ಯ ಸಾಮ್ರಾಜ್ಯದ ಸೈನ್ಯವಾಗಿತ್ತು.

ಆ ಅಲೆಯನ್ನು ಕಂಡ ಕಣ್ಣುಗಳು, ಅದರ ವಿರಾಠಸ್ವರೂಪವನ್ನು ಕಂಡು, ಬೆರಗಾಗಿ ಅದರ ವೈಶಾಲ್ಯತೆಗೆ, ಶಕ್ತಿಗೆ, ತಲೆದೂಗಲಿಲ್ಲ. ಏಕೆಂದರೆ ಅದನ್ನು ನೋಡುತ್ತಿದ್ದ ಕಣ್ಣುಗಳು, ಸಾಗಿಬರುತ್ತಿರುವ ಮೃತ್ಯುವನ್ನು ಕಾಣುತ್ತಿರುವ ಕಳಿಂಗ ಸೈನ್ಯದ ಕಣ್ಣುಗಳಾಗಿದ್ದವು.
ಅಶೋಕನು ಕಳಿಂಗದ ಮೇಲೆ ದಂಡೆತ್ತಿ ಬಂದಿದ್ದ, ಮೌರ್ಯ ಸಮ್ರಾಜ್ಯ ಪಶ್ಚಿಮದ ಗಾಂಧಾರದ ಪರ್ವತಗಳಿಂದ, ಪೂರ್ವದ ಕರಾವಳಿಯವರೆಗೆ ಹಬ್ಬಿರಬೇಕೆಂಬ ಮಹತ್ವಾಕಾಂಕ್ಷೆ ಕೈಗೂಡುವುದರಲ್ಲಿತ್ತು.

ದೊಡ್ಡ ಅಲೆಯ ಮುಂದೆ ಬಿರುಕಿನ ಮಣ್ಣುಗೋಡೆಯಂತೆ ನಿಂತಿದ್ದ ಕಳಿಂಗ ಸೈನ್ಯದಲ್ಲಿ ಅಲ್ಲಲ್ಲಿ ಗದ್ದಲ ಕೇಳಿಬರುತ್ತಿತ್ತು. ಸುಮ್ಮನೆ ಅಶೋಕನಿಗೆ ಶರಣಾಗದೆ ತಮ್ಮನ್ನೆಲ್ಲಾ ಮೃತ್ಯುಕೂಪಕ್ಕೆ ತಳ್ಳಿರುವ ರಾಜನ ಬಗ್ಗೆ ಕೋಪಗೊಂಡು ಕೆಲವರು ಗೊಣಗಾಡುತ್ತಿದ್ದರು. ಅದು ದಂಡನಾಯಕರ ಕಿವಿಗೆ ಬಿದ್ದು, ಅವರನೆಲ್ಲಾ ಗದರಿಸತೊಡಗಿದರು. ಗೊಣಗುತ್ತಿದ್ದವರು ಸ್ವಲ್ಪ ಹೊತ್ತು ಸುಮ್ಮನ್ನಿದ್ದು, ಮತ್ತೆ ಗೊಣಗಾಟ ಪ್ರಾರಂಭಿಸುತ್ತಿದ್ದರು.
ಮತ್ತೊಂದೆಡೆ ರಣರಂಗದಲ್ಲಿ ತೋರಬೇಕಾದ ಶೌರ್ಯದ ಬಗ್ಗೆ, ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ತೆತ್ತ ಯೋಧರ ಬಗ್ಗೆ ಹಾಡುಗಳನ್ನು ಹಾಡಿ ಸೈನ್ಯವನ್ನು ಹುರಿದುಂಬಿಸುವ ಪ್ರಯತ್ನ ನಡೆಯುತ್ತಿತ್ತು. ಕೆಲವರು ಅವುಗಳನ್ನು ಕೇಳಿದೊಡನೆ ಉದ್ರೇಕಗೊಂಡು, ವೀರರಸದ ಮತ್ತೇರಿ, ಕೂಗುತ್ತಿದ್ದ ಜಯಕಾರದ ಆರ್ಭಟ ದೂರಕ್ಕೆ ಕೇಳುತ್ತಿತ್ತು. ಇನ್ನು ಕೆಲವರಿಗೆ ಅವೆಲ್ಲಾ ಗಾಳಿಮಾತೆಂದೆನಿಸಿ, ಆ ಕವಿತೆಗಳನ್ನು ಬರೆದವರನ್ನು, ಅವುಗಳನ್ನು ಹಾಡುತ್ತಿರುವವರನ್ನು, ಸಾಗಿಬರುತ್ತಿರುವ ಸೈನ್ಯವು ಕಾಣುವಂತೆ ನಿಲ್ಲಿಸಿದಾಗಲೇ, ಅವರಿಗೆ ಯುದ್ಧದ ನಿಜ ಸಂಗತಿ ತಿಳಿಯುತ್ತದೆ. ಯುದ್ಧಮಾಡುವುದು ಎಲುಬಿಲ್ಲದ ನಾಲಿಗೆ ತಿರುಚಿದಷ್ಟು ಸುಲಭವಲ್ಲವೆಂದು ಆ ಮಂಕುದಿಣ್ಣೆಗಳಿಗೆ ಯಾರಾದರೂ ಹೇಳಬಾರದೇ? ಎಂದು ಮನಸ್ಸಿನಲ್ಲೇ ಗುಡುಗುತಿದ್ದರು.
ಈ ಎಲ್ಲ ಗದ್ದಲಗಳ ನಡುವೆ ಕೆಲವರು ಬಾಣದಂತಹ ನೋಟವನ್ನು ಶತ್ರುವಿನೆಡೆಗೆ ನೆಟ್ಟು, ಅಕ್ಕಪಕ್ಕದವರ ಗಲಾಟೆಗಳ ಪರಿವಿಲ್ಲದೆ ಮೂಕರಾಗಿ, ಕಿವುಡರಾಗಿ ನಿಂತಿದ್ದರು. ಮೃತ್ಯುವಿನ ಭಯ ಶರೀರದ ಕಣಕಣವನ್ನಾವರಿಸಿತ್ತು. ಆದರೆ ರಣರಂಗದಿಂದ ಹಿಮ್ಮೆಟ್ಟಲು ಯಾರಿಗೂ ಮನಸ್ಸಿರಲಿಲ್ಲ. ಮನಸ್ಸಿನ ಮೂಲೆಯೊಂದರಲ್ಲಿ, ದಾಸ್ಯದ ಸಂಕೋಲೆ, ತಮ್ಮ ಮನೆ-ಸಂಸಾರಗಳ ಬಗ್ಗೆ ಶತ್ರುವಿನ ಧೋರಣೆಗಳು ನೆನಪಾದಾಗ, ಭಯವೆಲ್ಲ ಮಾಯವಾಗಿ ಮನಸ್ಸು ಸೆಟೆದು ನಿಲ್ಲುತ್ತಿತ್ತು. ಆದರೆ ವೈರಿಪಡೆಯನ್ನು ಮತ್ತೆ ಕಂಡೊಡನೆ ಅಳುಕಿನಿಂದ ತುಂಬಿಹೋಗುತ್ತಿತ್ತು.
ಹಲವರು ತಮ್ಮ ಜೀವಿತದಲ್ಲಿನ ಪಾಪ-ಪುಣ್ಯಗಳ, ದಾನ-ಧರ್ಮಗಳ ಲೆಕ್ಕಾಚಾರಹಾಕತೊಡಗಿದರು. ತಮಗೆ ಸ್ವರ್ಗ ಸಿಕ್ಕುವುದೋ? ಅಥವ ನರಕಕ್ಕೆ ದೂಡಲ್ಪಡುವೆವೋ? ಎಂಬ ಚಿಂತೆ ಮನಸ್ಸನ್ನು ಕಾಡುತ್ತಿತ್ತು. ಪಾಪ ಪುಣ್ಯಗಳ ಎಣಿಕೆಮಾಡಲು ಶಕ್ತಿಯೇ ಇಲ್ಲದಂತಾಯಿತು. ನಾಸ್ತಿಕರೂ ಆಸ್ತಿಕರಾಗಿ ದೇವರನ್ನು ನೆನೆಯುತ್ತಿದ್ದರು.

ಸಾಗಿಬರುತ್ತಿರುವ ಮೌರ್ಯ ಸೈನ್ಯದಲ್ಲಿ ಬೇರೆ ತರಹದ ಗೊಣಗಾಟಗಳಿದ್ದವು. ಹಿಂದಿನ ಯುದ್ಧದಲ್ಲಿ ಉಳಿಯಿತೋ ಬಡಜೀವ ಎನ್ನುವಷ್ಟರಲ್ಲಿ ಮತ್ತೊಂದು ಎದುರಾಗಿದೆಯಲ್ಲಾ ಎಂಬ ಚಿಂತೆ ಅವರನ್ನೆಲ್ಲಾ ಕುಟುಕುತ್ತಿತ್ತು. ಅಶೋಕನಿಗೆ ಸಾಮ್ರಾಜ್ಯ ವಿಸ್ತರಣೆಯಿಂದ ಸಿಕ್ಕುವುದಾದರೂ ಏನು? ಎಂಬ ಪ್ರಶ್ನೆ ಕೆಲವರಲ್ಲಿ ಉದ್ಭವಿಸಿದ್ದರೂ, ಅಶೋಕನನ್ನು ಬಹಿರಂಗವಾಗಿ ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಸಿಂಹಾಸನದ ಆಸೆಗಾಗಿ ತನ್ನ ಅಣ್ಣತಮ್ಮಂದಿರನ್ನೇ ಕೊಲ್ಲಿಸಿದವನಿಗೆ ನಾವು ಯಾವ ಲೆಕ್ಕ? ಎಂಬ ಯೋಚನೆ ಬುದ್ಧಿಗೆ ಎದುರಾಗಿ, ಹೇಳಬಯಸಿದ ಮಾತು ಗಂಟಲಿನಲ್ಲೇ ನಿಲ್ಲುತ್ತಿತ್ತು.
ದೇಹದ ಭಾರವಲ್ಲದೆ, ಯೋಚನೆಗಳ ಭಾರವನ್ನು ಹೊತ್ತ ಕಾಲುಗಳು ಮಂದಗತಿಯಲ್ಲಿ ಒಂದನ್ನೊಂದು ಹಿಂದೆಹಾಕುತ್ತಿದ್ದವು. ದೂರದಿಂದ ಮಣ್ಣಿನ ಗೋಡೆಯಂತೆ ಕಾಣುತ್ತಿದ್ದ ಕಳಿಂಗ ಸೈನ್ಯದಲ್ಲಿ ಈಗ ಮನುಷ್ಯರ ಆಕೃತಿಗಳು ಕಾಣತೊಡಗಿದವು. ಯುದ್ಧದ ಪ್ರಾರಂಭ ಸನ್ನಿಹಿತವಾಗಿತ್ತು. ಸ್ವಲ್ಪ ಹೊತ್ತು ಯುದ್ಧಭೂಮಿಯಲ್ಲಿ ಸ್ಮಶಾನ ಮೌನ ಆವರಿಸಿತು. ಅದು ಯುದ್ಧಭೂಮಿ ಸ್ಮಶಾನವಾಗುವ ಮುಂಚಿನ ಮೌನ.

ರಣಕಹಳೆಗಳು ಮೊಳಗಲ್ಲಿಲ್ಲ, ಕಳಿಂಗ ಸೈನ್ಯದ ಬಿಲ್ಲುಗಾರರ ಬಾಣಗಳು ಮೌರ್ಯ ಸೈನಿಕರ ಎದೆಯನ್ನು ಚೀರಿದಾಗಲೇ ಅವರಿಗೆ ಯುದ್ಧ ಪ್ರಾರಂಭವಾಗಿರುವ ಸೂಚನೆ ದೊರೆತದ್ದು. ಹಠಾತ್ ಧಾಳಿಯಿಂದ ಚೇತರಿಸಿಕೊಂಡ ಮೌರ್ಯ ಸೈನ್ಯದ ಪದಾತಿಗಳು ಮುನ್ನುಗ್ಗತೊಡಗಿದರು.
ಬಿಲ್ಲುಗಾರರು ಬಾಣಗಳ ಮಳೆಗರೆಸಲು ಪ್ರಾರಂಭಿಸಿದರು. ಎರಡೂ ಸೈನ್ಯದ ಬಿಲ್ಲುಗಾರರು ಗುರಿಯಿಡುವ ಬಗ್ಗೆ ಚಿಂತಿಸುತಿರಲಿಲ್ಲ, ಬದಲಿಗೆ ಬರಿದಾಗುತ್ತಿರುವ ತಮ್ಮ ಬತ್ತಳಿಕೆಯೆಡೆಗೆ ತಮ್ಮ ಗಮನವಿಟ್ಟಿದ್ದರು. ಬಿಲ್ಲಿನ ತಂತುವೆಳೆದು ಹಾರಿಬಿಟ್ಟ ಬಾಣವು ಒಬ್ಬ ಶತ್ರುವನ್ನು ಕೊಂದರೂ ಸಾಕು, ತಮ್ಮನ್ನು ಕೊಲ್ಲುವವನು ಒಬ್ಬ ಕಡಿಮೆಯಾಗುತ್ತಾನೆ ಎಂಬುದೇ ಅವರಿಗೆ ಸಾಕಾಗಿತ್ತು. ಮೌರ್ಯರ ಆಲಿಕಲ್ಲಿನ ಮಳೆಯಂತಹ ಶರವರ್ಷೆಯ ಮುಂದೆ ಕಳಿಂಗ ಬಿಲ್ಲುಗಾರರ ಬಾಣ ಮಳೆ ಸೋನೆ ಮಳೆಯಂತ್ತಿತ್ತು.

ಅಷ್ಟರವರೆಗೂ ತಮ್ಮ ಗುರಾಣಿಗಳಿಂದ ಬಾಣಗಳನ್ನುತಡೆಯುತ್ತಾ ನಿಂತಿದ್ದ ಕಳಿಂಗ ಸೈನ್ಯಾಧಿಕಾರಿಗಳು, ತಮ್ಮೆಡೆಗೆ ನುಗ್ಗುತ್ತಿರುವ ಮೌರ್ಯ ಪದಾತಿದಳವನ್ನು ಕಂಡೊಡನೆ, ಇನ್ನು ತಡಮಾಡಿದರೆ ಅಪಾರ ನಷ್ಟ ಸಂಭವಿಸಬಹುದೆಂದು ಊಹಿಸಿ, ಮುನ್ನುಗ್ಗಲು ಸೈನ್ಯಕ್ಕೆ ಆದೇಶಿಸಿದರು. ತಾವು ಕಂಡಿರದ ಯಾವುದೋ ಒಬ್ಬ ವ್ಯಕ್ತಿ ಹಾರಿಬಿಟ್ಟ ಬಾಣದಿಂದ ಸಾಯುವುದಕ್ಕಿಂತ, ತಮ್ಮೆಡೆಗೆ ಬರುತ್ತಿರುವ ಪದ್ದತಿಗಳೊಂದಿಗೆ ಕಾದಾಡಿ ಸಯುವುದೇ ಮೇಲೆಂದೆಣಿಸಿ, ಬಾಣದ ಮಳೆಯನ್ನು ಲೆಕ್ಕಿಸದೆ ಕಳಿಂಗ ಸೈನಿಕರು ಮುನ್ನುಗ್ಗತೊಡಗಿದರು. ಗುರಾಣಿಗಳ ರಕ್ಷಣೆಯಿಂದ ಹೊರಬಂದೊಡನೆ ಬಾಣಗಳು , ಹಲವರ ದೇಹವನ್ನು ಚೀರಿ ಪ್ರಾಣವನ್ನು ಅದರಿಂದ ಬೇರ್ಪಡಿಸಿತು. ಪದಾತಿಗಳ ಸೆಣೆಸಾಟ ಪ್ರಾರಂಭವಾದೊಡನೆ ಖಡ್ಗಗಳ ಝಣಝಣ ಸದ್ದು ಕೇಳತೊಡಗಿತು. ಕಾಸಿನ ಝಣಝಣಕ್ಕಿಂತ ಈಗ ಖಡ್ಗದ ಝಣಝಣ ಅಮೂಲ್ಯವಾಗಿತ್ತು. ಸೆಣೆಸುವಾಗ ಒಂದು ತಪ್ಪಾದರೂ ಪ್ರಾಣದ ಬೆಲೆ ತೆರಬೇಕಾಗಿತ್ತು. ಬಹುಕಾಲದಿಂದ ರಕ್ತ ಹೀರಲು ಕಾಯುತ್ತಿರುವ ಜಿಗಣೆಗಳಂತೆ ಖಡ್ಗಗಳು ವೈರಿಗಳ ರಕ್ತ ಹೀರತೊಡಗಿದವು. ಹಿಡಿಯಿಂದ ತುದಿಯವರೆಗೆ ರಕ್ತದಲ್ಲಿ ನೆನೆದರೂ ಅವು ನಿಲ್ಲುವಂತಿರಲ್ಲಿಲ್ಲ. ಸಾವು-ನೋವಿಗಳ ಕೂಗು ಹೆಚ್ಚಾಗತೊಡಗಿದರೂ, ಯಾರು ಅದಕ್ಕೆ ಕಿವಿಗೊಡುತ್ತಿರಲಿಲ್ಲ.
ಮೌರ್ಯ ಪದಾತಿದಳ ಸ್ವಲ್ಪ ಹಿಂದೆ ಸರಿದಂತೆ ಕಳಿಂಗದ ದಂದನಾಯಕರಿಗೆ ಕಂಡಾಗ, ಅವರಿಗೆ ಅವರ ಕಣ್ಣುಗಳನ್ನೇ ನಂಬಲಾಗಲಿಲ್ಲ. ತಡಮಾಡದೆ ಅಶ್ವದಳವನ್ನು ಮುನ್ನುಗ್ಗಲು ಆದೇಶಿಸಿ, ಗಜಸೈನ್ಯದೊಂದಿಗೆ ಅಶ್ವದಳಕ್ಕೆ ಒತ್ತಾಸೆ ನೀಡಲು ಮುಂದಾದರು.
ಇದ್ದಕ್ಕಿದ್ದಂತೆ ಮರೀಚಿಕೆಯೆನಿಸಿದ್ದ ಗೆಲುವು ನಿಜವೆನ್ನಿಸತೊಡಗಿ, ಇಡಿ ಸೈನ್ಯದಲ್ಲಿ ಆತ್ಮವಿಶ್ವಾಸ ಸಂಚಲನಗೊಂಡು ಮೌರ್ಯ ಸೈನ್ಯವನ್ನು ಹಿಂದೂಡತೊಡಗಿದರು. ಇಷ್ಟಾದರೂ ಮೌರ್ಯ ದಂಡನಾಯಕರು ದಿಗ್ಭ್ರಾಂತರಾಗಲಿಲ್ಲ. ಯುದ್ಧದ ಫಲಿತಾಂಶವನ್ನು ಮೊದಲೇ ತಿಳಿದವರಂತೆ ಶಾಂತಚಿತ್ತರಾಗಿದ್ದರು. ಇದ್ದಕ್ಕಿದ್ದಂತೆ ಆಗ್ನೇಯ ಮತ್ತು ವಾಯವ್ಯ ದಿಕ್ಕುಗಳಿಂದ ಅಡಗಿದ್ದ ಮೌರ್ಯ ಅಶ್ವದಳವು ಎರಗಿ ಬಂತು. ಈ ಹಠಾತ್ ಧಾಳಿಯು ಕಳಿಂಗ ಸೈನ್ಯದ ಆತ್ಮವಿಶ್ವಾಸವನ್ನು ಘಾಸಿಗೊಳಿಸಿತು. ಯುದ್ಧ ಪ್ರಾರಂಭವಾಗುವ ಮೊದಲು, ಮೌರ್ಯರ ಸಣ್ಣ ಅಶ್ವದಳವನ್ನು ಕಂಡು ಕಳಿಂಗದ ದಂಡಾಧಿಕಾರಿಗಳಿಗೆ ಸಂಶಯ ಬಂದಿತ್ತು. ಆದರೆ ಮೌರ್ಯರ ಪದಾತಿದಳ ಹಾಗು ಗಜಸೈನ್ಯಗಳನ್ನೆ ಕೇಂದ್ರೀಕರಿಸಿ ತಮ್ಮ ಯುದ್ಧತಂತ್ರಗಳನ್ನು ರೂಪಿಸಿದ್ದರಿಂದ, ಅವರ ಸಂಶಯ ಸಮಾಧಾನದ ನಿಟ್ಟುಸಿರಿನಲ್ಲಿ ಮರೆಯಾಗಿತ್ತು. ಪದಾತಿದಳ ಹಾಗು ಗಜಸೈನ್ಯ ಮುನ್ನುಗಿದ್ದರಿಂದ, ಬಿಲ್ಲುಗಾರರಿಗೆ ಯಾವ ಆಸರೆಯೂ ಇರಲ್ಲಿಲ್ಲ. ಅವರು ಮೌರ್ಯರ ಅಶ್ವದಳಕ್ಕೆ ಸುಲಭವಾಗಿ ತುತ್ತಾದರು.
ಗಜಸೈನ್ಯವು ಮೌರ್ಯ ಬಿಲ್ಲುಗಾರರ ಬಣಗಳಿಗೆ ಸಿಕ್ಕಿ ನಲುಗಿತು. ಕ್ಷಣದಲ್ಲಿ ಯುದ್ಧದ ಗತಿ ಬದಲಿಸಿತ್ತು.
ಪಾದಾತಿದಳವನ್ನು ಮೌರ್ಯ ಸೈನ್ಯ ಸುತ್ತುವರೆದಿದ್ದರಿಂದ, ತಪ್ಪಿಸಿಕೊಂಡು ಓಡಲೂ ಸಾಧ್ಯವಗುತ್ತಿರಲಿಲ್ಲ.
ಬೆಂಕಿಗೆ ಸಿಕ್ಕಿ ಸಾಯುವ ಪತಂಗಗಳಂತೆ ಪಾದಾತಿದಳವು ಸಾಯತೊಡಗಿದರು. ಆ ಕಳಿಂಗ ಸೈನ್ಯದ ಮೋಟು ಗೋಡೆಯನ್ನು ಮೌರ್ಯ ಸೈನ್ಯದ ಅಲೆಯು ಛಿದ್ರಗೊಳಿಸಿತ್ತು.
ಪ್ರಾಣಭೀತಿಯಿಂದ ಕಳಿಂಗದ ಸೈನ್ಯವು ದಿಕ್ಕಾಪಾಲಾಗಿ ಓಡತೊಡಗಿತು. ಎಷ್ಟೋ ಸೈನಿಕರು ಶರಣಾದರೆ, ಮತ್ತೆ ಕೆಲವರ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೌರ್ಯ ಸೈನಿಕರಿಂದ ಕೊಲ್ಲಲ್ಪಟ್ಟರು. ಅಂತೂ ಅಶೋಕನ ಕನಸು ನನಸಾಗಿತ್ತು.
ವಿಜಯದ ಹರ್ಷೋದ್ಗಾರಗಳ ಕೂಗು ರಣರಂಗವನ್ನು ತುಂಬಿತು. ಸ್ವಲ್ಪ ಸಮಯದ ನಂತರ ಮೌನವು ಆವರಿಸಿತು. ಆದರೆ ಈ ಮೌನ ಯುದ್ಧಭೂಮಿ ಸ್ಮಶಾನವಾದ ನಂತರದ ಮೌನ.