ಸೇವಾ ಪುರಾಣ -8

ಸೇವಾ ಪುರಾಣ -8

ಬರಹ

                                                           ಸೇವಾ ಪುರಾಣ -8
                                                    ಸರಳುಗಳ ಹಿಂದಿನ ಲೋಕ -1
     ಪಾಪಿಗಳ ಲೋಕವೆಂದೇ ಹೇಳಲಾಗುವ ಬಂದೀಖಾನೆಗೆ ನನ್ನ ಪ್ರಥಮ ಪ್ರವೇಶ ದಿನಾಂಕ 05-08-1975ರಲ್ಲಿ ಆಗಿ ಅಲ್ಲಿ ನನ್ನ ಹೆಸರು ನೋಂದಾವಣೆ ಆಯಿತು. ಹಾಸನದ ಬಂದೀಖಾನೆಯಲ್ಲಿ ನನ್ನ ಹೆಸರು, ಕುಲ, ಗೋತ್ರ, ಅಪರಾಧದ ವಿವರ, ನನ್ನ ಕೈಬೆರಳುಗಳ ಮುದ್ರೆಗಳು, ಇತ್ಯಾದಿಗಳನ್ನೆಲ್ಲಾ ಒಂದು ರಿಜಿಸ್ಟರಿನಲ್ಲಿ ಪಡೆದುಕೊಂಡರು. ನನ್ನ ಜೇಬಿನಲ್ಲಿದ್ದ ಪುಡಿಗಾಸು, ಕೈಯಲ್ಲಿದ್ದ ವಾಚು, ಎಲ್ಲವನ್ನೂ ತೆಗೆದಿರಿಸಿಕೊಂಡು ದಾಖಲಿಸಿ ಇಟ್ಟುಕೊಂಡರು. ನನ್ನ ಮೈಮೇಲಿದ್ದ ಜನಿವಾರ, ಉಡುದಾರಗಳನ್ನು ಹರಿದು ಕಿತ್ತೆಸೆದರು. ಗಬ್ಬು ವಾಸನೆ ಬರುತ್ತಿದ್ದ ಒಂದು ಹರಕಲು ಕಂಬಳಿ,ನೆಗ್ಗಿ ನುಗ್ಗೆಕಾಯಿ ಆಗಿದ್ದ ಒಂದು ಅಲ್ಯೂಮಿನಿಯಂ ಚಂಬು, ತಟ್ಟೆಯ ಅಕಾರವನ್ನೇ ಕಳೆದುಕೊಂಡಿದ್ದ ಒಂದು ಅಲ್ಯೂಮಿನಿಯಂ ತಟ್ಟೆಯನ್ನು ನನ್ನ ಕೈಗೆ ಕೊಟ್ಟರು. ಜೈಲಿನ ದೊಡ್ಡ ಬಾಗಿಲಿನ ಒಂದು ಭಾಗದಲ್ಲಿದ್ದ ಸಣ್ಣ ಬಾಗಿಲಿನಿಂದ ಬಗ್ಗಿ ನಡೆದು ಜೈಲಿನ ಒಳಾಂಗಣಕ್ಕೆ ಕಾಲಿಟ್ಟಾಗ ನನಗೆ ಹೇಗೆ ಹೇಗೋ ಆಯಿತು, ತಳಮಳವಾಯಿತು. ಅಲ್ಲಿ ಇದ್ದ ಎರಡು ದೊಡ್ಡ ಬ್ಯಾರಕ್ ಗಳ ಪೈಕಿ ಒಂದರ ಒಳಗೆ ನನ್ನನ್ನು ತಳ್ಳಿ ಮತ್ತೆ ಬ್ಯಾರಕ್ ಗೆ ಬೀಗ ಹಾಕಿದರು. ಒಳಗೆ ಹೋದ ಕೂಡಲೇ ಒಳಗಿದ್ದವರು ನನ್ನನ್ನು 'ಹೋ' ಎಂದು ಮುತ್ತಿಕೊಂಡರು. ನನಗೆ ಕಕ್ಕಾಬಿಕ್ಕಿಯಾಯಿತು. ಕಾಲೇಜುಗಳಲ್ಲಿ ಹೊಸ ವಿದ್ಯಾರ್ಥಿಗಳನ್ನು ಹಳಬರು ಗೋಳು ಹುಯ್ದುಕೊಳ್ಳುವಂತೆ ಕೆಲವರು ನನ್ನನ್ನು ಗೋಳಾಡಿಸಿದರು. ಕೆಲವರು ನಿರ್ಲಿಪ್ತರಾಗಿ ತಮ್ಮ ಪಾಡಿಗೆ ತಾವು ಇದ್ದರು. ನನ್ನ ಚರಿತ್ರೆ ಕೇಳಿ ತಿಳಿದುಕೊಂಡ ಅವರುಗಳು 'ಓ, ಇಂದಿರಾಗಾಂಧಿ ಕೇಸು' ಎಂದು ಚಪ್ಪಾಳೆ ಬಡಿದು ನಕ್ಕರು. ಆ ದೊಡ್ಡ ಹಾಲಿನಲ್ಲಿ ಸಮಾಧಿಗಳ ಆಕಾರದಲ್ಲಿ ಗಾರೆ,ಸಿಮೆಂಟಿನಲ್ಲಿ ಕಟ್ಟೆಗಳನ್ನು ಕೈದಿಗಳು ಮಲಗುವ ಸಲುವಾಗಿ ಕಟ್ಟಿಸಿದ್ದರು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ಕಟ್ಟೆಗಳ ನಡುವಿನ ಸ್ಥಳಗಳಲ್ಲೂ ಕೈದಿಗಳು ಮಲಗಬೇಕಾಗಿತ್ತು. ಕಟ್ಟೆಗಳನ್ನು ಸಮಾಧಿ ಎಂದೇ ಕರೆಯುತ್ತಿದ್ದರು. ಕಟ್ಟೆಯ ಮೇಲೆ ಮಲಗುವುದು ಎಂದರೆ ಸಮಾಧಿಯ ಮೇಲೆ ಮಲಗುವುದು ಎಂತಲೂ ಮಧ್ಯದ ಸ್ಥಳದಲ್ಲಿ ಮಲಗುವುದು ಎಂದರೆ ಸಮಾಧಿಯ ಒಳಗೆ ಮಲಗುವುದು ಎಂತಲೂ ಹೇಳುತ್ತಿದ್ದರು.ಅಂತಹ ಒಂದು ಸಮಾಧಿಯ ಒಳಗೆ ನಾನು ಮಲಗಬೇಕೆಂದು ಅಲ್ಲಿದ್ದ ಹಳಬರು ಅಪ್ಪಣೆ ಕೊಟ್ಟರು.ನನಗೆ ಕೊಟ್ಟಿದ್ದ ಹರಕಲು ಕಂಬಳಿಯಲ್ಲಿ ತಿಗಣೆಯೊಂದು ಹರಿಯುತ್ತಿದ್ದುದನ್ನು ನೋಡಿದ ನಾನು ಕಂಬಳಿಯನ್ನು ಪಕ್ಕಕ್ಕೆ ತಳ್ಳಿ ಅಲ್ಲಿದ್ದವರನ್ನು ಗಮನಿಸುತ್ತಾ ಗೋಡೆಗೆ ಒರಗಿ ಕುಳಿತುಕೊಳ್ಳಲು ಹೋದವನು ಒರಗಿಕೊಳ್ಳಲಿಲ್ಲ, ಏಕೆಂದರೆ ಗೋಡೆಯ ಮೇಲೆಲ್ಲಾ ತಿಗಣೆಗಳನ್ನು ತೀಡಿ ಸಾಯಿಸಿದ, ಸೊಳ್ಳೆಗಳನ್ನು ಸಾಯಿಸಿದ ರಕ್ತದ ಕಲೆಗಳು ರಾರಾಜಿಸುತ್ತಿದ್ದವು.ಅಲ್ಲಿದ್ದವರ ಮುಖಗಳಲ್ಲಿ ಕೆಲವರು ಕೇಡಿಗರಂತೆ ಕಂಡರೆ ಕೆಲವರು ಅಮಾಯಕರಂತೆ ಕಾಣುತ್ತಿದ್ದರು. ಕೆಲವರು ಚಿಂತಿತರಾಗಿದ್ದರೆ ಕೆಲವರು ಏನೂ ಆಗೇ ಇಲ್ಲವೆಂಬಂತೆ ಇದ್ದರು.ನಾಲ್ಕು ಗೋಡೆಗಳು, ಭದ್ರವಾದ ಬಾಗಿಲು, ಅಲ್ಲಿದ್ದ ಅದೇ ಜನಗಳು, ಇಷ್ಟೇ ಪ್ರಪಂಚ. ಆ ಮುಚ್ಚಿದ ಬ್ಯಾರಕ್ಕಿನ ಮೂಲೆಯಲ್ಲಿಯೇ ಶೌಚಾಲಯವಿತ್ತು. ನಾನು ಅಲ್ಲಿಗೆ ಹೋಗಿ ನೋಡಿದರೆ ವಾಂತಿ ಬರುವಂತಾಯಿತು. ಶೌಚ ಹೋಗುವ ಪೈಪು ಕಟ್ಟಿಕೊಂಡು ಶೌಚ ಹೊರಗೆ ಹೋಗುತ್ತಿರಲಿಲ್ಲ. ಶೌಚಾಲಯದ ಒಳಗೆ ಕಾಲಿಡಲು ಸಾಧ್ಯವೇ ಆಗದಷ್ಟು ಹೇಸಿಗೆ ತುಂಬಿಹೋಗಿತ್ತು. ನಾರುತ್ತಿದ್ದ ಗಬ್ಬು ವಾಸನೆ ಬ್ಯಾರಕ್ಕಿನಲ್ಲೂ ಹರಡಿತ್ತು. ಹಾಗೆಯೇ ವಾಪಸು ಬಂದೆ.

     ಊಟಕ್ಕಾಗಿ ಬೀಗ ತೆಗೆದು ಹೊರಬಿಟ್ಟಾಗ ಎಲ್ಲರ ಜೊತೆ ಸಾಲಿನಲ್ಲಿ ನಿಂತರೆ ನನ್ನ ತಟ್ಟೆಗೆ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ನೀರು ಸಾಂಬಾರು ಬಿತ್ತು. ಸಾಂಬಾರಿನಲ್ಲಿದ್ದ ಬೇಳೆ ಬೆಂದಿರಲೇ ಇಲ್ಲ.ಒಬ್ಬಿಬ್ಬರ ತಟ್ಟೆಯಲ್ಲಿ ತರಕಾರಿ ಹೋಳುಗಳು ಕಂಡವು. ಕಲ್ಲಿನಂತಿದ್ದ ಮುದ್ದೆ ಕಂಡು ತಿನ್ನಲು ಮನಸ್ಸಾಗದೆ ಹಾಗೆಯೇ ಹಿಡಿದುಕೊಂಡಿದ್ದೆ. ನನ್ನನ್ನು ಗಮನಿಸುತ್ತಿದ್ದವನೊಬ್ಬ ನನ್ನನ್ನು ಕೇಳಿ ನನ್ನ ಊಟವನ್ನೂ ತೆಗೆದುಕೊಂಡ.ಎಲ್ಲರೂ ಅದನ್ನೇ ತಿಂದರು.ಕೆಲವರು ತಟ್ಟೆಯನ್ನೇ ನೆಕ್ಕುತ್ತಿದ್ದರು. ತಿಂದಾದ ಮೇಲೆ ಕೈತೊಳೆಯಲು ಇದ್ದ ಪಾಚಿಗಟ್ಟಿದ್ದ ತೊಟ್ಟಿಯ ನೀರಿಗೆ ತಟ್ಟೆಯನ್ನೇ ಅದ್ದುತ್ತಿದ್ದರು.ಸ್ನಾನ ಮಾಡಲೂ ಅದೇ ತೊಟ್ಟಿಯ ನೀರನ್ನು ಬಳಸಬೇಕಾಗಿತ್ತು. ಅದನ್ನು ಕಟ್ಟಿಸಿದಾಗಿನಿಂದಲೂ ಸ್ವಚ್ಛಗೊಳಿಸಿರಲಿಲ್ಲವೆಂಬಂತೆ ಕಾಣುತ್ತಿತ್ತು. ಅದರಲ್ಲಿದ್ದ ನೀರು ಚರಂಡಿಯ ನೀರಿನಂತೆ ಇತ್ತು. ಅಲ್ಲಿದ್ದ ಸ್ಥಿತಿ ನೋಡಿದರೆ ಕಾರಾಗೃಹ ಕಾಯಿಲೆಗಳ ಉಗಮಸ್ಥಾನ ಎಂಬುದರಲ್ಲಿ ಅನುಮಾನ ಕಾಣಲಿಲ್ಲ. ಏಕೆಂದರೆ ಕಾಯಿಲೆಗಳಿಂದ ನರಳುವವರ ಸಂಖ್ಯೆ ಕಡಿಮೆಯಿರಲಿಲ್ಲ. ಕೆಮ್ಮುವವರು, ಸೀನುವವರು, ಎಲ್ಲೆಂದರಲ್ಲಿ ಉಗುಳುವವರು, ಇತ್ಯಾದಿ ನೋಡಿದಾಗ ಹಿಂಸೆಯೆನಿಸುತ್ತಿತ್ತು. ನೀರಿನ ತೊಟ್ಟಿಯ ಹತ್ತಿರದಲ್ಲೇ ಕ್ಷೌರಿಕನೊಬ್ಬ ಕಟಿಂಗ್, ಶೇವಿಂಗ್ ಮಾಡಿಸಿಕೊಳ್ಳುವ ಬಂದಿಗಳಿಗೆ ಕ್ಷೌರ ಮಾಡುತ್ತಿದ್ದ. ಕಟಿಂಗ್ ಮಾಡಿಸಿಕೊಂಡ ಒಬ್ಬ ಬಂದಿ ತನ್ನ ತಲೆಯನ್ನೇ ತೊಟ್ಟಿಗೆ ಅದ್ದಿ ಹೊರತೆಗೆದಿದ್ದುದನ್ನು ಕಂಡೆ. ಅದೇ ಮತ್ತು ಅಷ್ಟೇ ಅವನ ಸ್ನಾನವಾಗಿತ್ತು. ನಾನು ತೊಟ್ಟಿಗೆ ನೀರು ಬಿಡಲು ಇದ್ದ ನಲ್ಲಿಯಿಂದ ಸೋರುತ್ತಿದ್ದ ಚಂಬಿನಲ್ಲಿ ನೀರು ಹಿಡಿದುಕೊಂಡು ಮುಖ ತೊಳೆದುಕೊಂಡೆ. ಊಟಕ್ಕೆ ಬಿಟ್ಟಿದ್ದ ಸಮಯದಲ್ಲಿ ಕೆಲವು ಒಂಟಿ ಸೆಲ್ ಗಳು ಹಾಗೂ ಒಂದು ಸಣ್ಣ ಬ್ಯಾರಕ್ ಇದ್ದುದನ್ನು ಗಮನಿಸಿದೆ. ಒಂಟಿ ಸೆಲ್ ಗಳಲ್ಲಿ ಗಲಾಟೆ ಮಾಡುವವರು, ಅಪಾಯಕಾರಿಗಳೆಂದು ಕಂಡವರನ್ನು ಇಡುತ್ತಿದ್ದರು. ಸಣ್ಣ ಬ್ಯಾರಕ್ಕಿನಲ್ಲಿ ಮಹಿಳಾ ಕೈದಿಗಳಿದ್ದು ಅವರಿಗೆ ಬೇರೆ ಸಮಯದಲ್ಲಿ ಊಟ, ಸ್ನಾನಗಳಿಗೆ ಹೊರಬಿಡುತ್ತಿದ್ದರು. ಕೆಲವರು ಕೈದಿಗಳು ಮಹಿಳಾ ಕೈದಿಗಳ ಬ್ಯಾರಕ್ಕಿನ ಬಾಗಿಲಿನ ಕೆಳಗಿನ ಸಂದಿಯಿಂದ ಕೈಬೆರಳುಗಳನ್ನು (ಕೈ ಹಿಡಿಸುತ್ತಿರಲಿಲ್ಲ, ಒಳಗಿದ್ದವರು ಕಾಣುತ್ತಿರಲಿಲ್ಲ) ಹಾಕುತ್ತಿದ್ದರು.ಅದಕ್ಕೆ ಒಳಗಿದ್ದವರೂ ಬೆರಳುಗಳನ್ನು ಸ್ಪರ್ಶಿಸಿ ಪರಸ್ಪರ ಸಂತೋಷಿಸುತ್ತಿದ್ದರಂತೆ. ಬಹಳ ಕಾಲದಿಂದ ಜೈಲಿನಲ್ಲಿದ್ದವರು ಸ್ವಲಿಂಗಿಗಳೊಂದಿಗೇ ವಿಹರಿಸುತ್ತಿದ್ದುದು ವಿಶೇಷವಾಗಿರಲಿಲ್ಲ. ಲೈಂಗಿಕ ಹಸಿವು ಅವರನ್ನು ಹಾಗೆ ಮಾಡಿಸಿದ್ದಿರಬಹುದು. ಸ್ವಲ್ಪ ಸಮಯದ ನಂತರ ಎಲ್ಲರನ್ನೂ ಒಳಗೆ ಕಳಿಸಿ ತಲೆಗಳನ್ನು ಎಣಿಸಿ ಬೀಗ ಹಾಕಿದರು.ಸಾಯಂಕಾಲದ ಹೊತ್ತಿಗೆ ನನ್ನ ತಂದೆ ನನ್ನನ್ನು ಜಾಮೀನಿನ ಮೇಲೆ ಬಿಡಿಸಿ ಹೊರಕರೆತಂದರು.ಮನೆಗೆ ಹೋಗಿ ಸ್ನಾನ ಮಾಡಿದ ನಂತರವೇ ನನಗೆ ಉಸಿರಾಡುವಂತೆ ಆಗಿದ್ದು. ಸುಧಾರಿಸಿಕೊಂಡನಂತರ  ಮಾಡಿದ ಅಮ್ಮನ ಕೈಯಿನ ಊಟ ಅಮೃತಸಮಾನವಾಗಿತ್ತು!


(ಕಾಲಘಟ್ಟ:1975)                                                                                       .. ಮುಂದುವರೆಯುವುದು.