ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ

ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ

ಬರಹ

ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ. ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಕಷ್ಟದ ಕೆಲಸ. ಈ ಕೆಲಸ ಏಕಾಂತದಲ್ಲಿ, ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹುದಾದ ಕೆಲಸವಲ್ಲ. ನಮ್ಮನ್ನು ನಾವು ತಿಳಿಯುವುದು ಮುಖ್ಯ. ಆದರೆ ಅದಕ್ಕಾಗಿ ನಾವು ಸಂಬಂಧಗಳನ್ನೆಲ್ಲ ಕಡಿದುಕೊಳ್ಳಬೇಕಾಗಿಲ್ಲ. ಒಂಟಿಯಾಗಿದ್ದು, ಏಕಾಂತದಲ್ಲಿದ್ದು ಅಥವಾ ಮನಶ್ಶಾಸ್ತ್ರಜ್ಞರನ್ನು ಕಂಡು, ಆಚಾರ್ಯರ ದರ್ಶನ ಪಡೆದು, ಅಥವಾ ಪುಸ್ತಕಗಳನ್ನು ಓದಿ ನಮ್ಮನ್ನು ನಾವು ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವೆಂಬುದು ತಪ್ಪು ಕಲ್ಪನೆ. ನಮ್ಮ ಬಗ್ಗೆ ನಾವು ಪಡೆಯುವ ಅರಿವು ಒಮ್ಮೆ ಸಾಧಿಸಿ ಮುಗಿಸಿಬಿಡಬಹುದಾದ ಗುರಿಯಲ್ಲ. ಅದೊಂದು ನಿರಂತರವಾದ ಕಾರ್ಯ. ನಮ್ಮನ್ನು ನಾವು ತಿಳಿಯಬೇಕಾದರೆ ಕ್ರಿಯೆಗಳಲ್ಲಿ ನಮ್ಮನ್ನು ನೋಡಿಕೊಳ್ಳಬೇಕು. ನಮ್ಮ ಕ್ರಿಯೆಗಳೆಂದರೆ ಸಂಬಂಧಗಳು. ಗಂಡನೊಡನೆ, ಹೆಂಡತಿಯೊಡನೆ, ಸೋದರನೊಡನೆ, ಸಮಾಜದೊಡನೆ, ಮನುಷ್ಯರೊಡನೆ ನಿಮ್ಮ ಸಂಬಂಧ ಹೇಗಿದೆ ಎಂದು ನೋಡಿಕೊಳ್ಳಿ. ನೀವು ಹೇಗೆ ಪ್ರತಿಕ್ರಿಯೆ ತೋರುತ್ತೀರಿ ಎಂಬುದನ್ನು ಗಮನಿಸಿ. ಆದೆ ಹೀಗೆ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಮನಸ್ಸು ಬಹಳ ಎಚ್ಚರವಾಗಿರಬೇಕು. ನಮ್ಮಲ್ಲಿ ತೀಕ್ಷ್ಣವಾದ ಗ್ರಹಿಕೆ ಇರಬೇಕು.

[ಇದು ಜೆಕೆಯವರ ದಿ ಬುಕ್ ಆಫ್ ಲೈಫ್ ಎಂಬ ಪುಸ್ತಕದ ಕನ್ನಡ ಅನುವಾದ "ಅನುದಿನ ಚಿಂತನ"ದಿಂದ ಆಯ್ದದ್ದು. ನನ್ನ ಈ ಅನುವಾದವನ್ನು ಬೆಂಗಳೂರಿನ ಜೆಕೆ ಫೌಂಡೇಶನ್ನಿನ ದಿ ಸ್ಟಡಿ ೨೦೦೨ರಲ್ಲಿ ಪ್ರಕಟಿಸಿದೆ. ಸಂಪದದ ಗೆಳೆಯರ ಪ್ರತಿಕ್ರಿಯೆಯನ್ನು ನೋಡಿಕೊಂಡು ಆಗಾಗ ಜೆಕೆ ಚಿಂತನೆಗಳನ್ನು ಹಂಚಿಕೊಳ್ಳುವ ಆಸೆ ಇದೆ.]