ಬೆಂಗಳೂರಿನ್ಯಾಗ ಅದೇನ್ ಆಟೋ ತ್ರಾಸೈತೋ ಮಾರಾಯ ..

Submitted by ಮಂಜು on Fri, 07/30/2010 - 13:39
ಬರಹ

ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually  ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ  ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊಂಟಾವ, sudden ಆಗಿ ನಿಂದ್ರಿಸಿದ. ಆಟೋ ಹಿಂದ ಬರೋ ಬೈಕೂ, ಕಾರೂ, ಬಸ್ಸನ್ಯಾಗ ಇರೋ ಎಲ್ಲಾ ಮಂದಿ ಸೇರಿ ನನಗ ಬೈದಿರಬೇಕ್ರಿ ಅವತ್ತ. ನಾನ ಕೆಳಗ ಮಾರಿ ಹಾಕ್ಕೊಂಡ ಡ್ರೈವರ್ ಗ ಕೇಳಿದೆ "cunningham ರೋಡ್" ಅಂತ .. ಆ ಮನಿಶ್ಯಾ ಎಸ್ಟ fast  ನಿಂದಿರ್ಸಿದ್ನೋ ಅಸ್ಟೆ fast  ಆಗಿ ಹೋಗಿಬಿಟ್ಟ.  ನನಗ ಫುಲ್ ಆಶ್ಚ್ಯರ್ಯ ಆತು; ಕೇಳೂ ಬೇಕಾದ್ರ ಏನರ ತಪ್ಪ ಮಾಡಿದ್ನೆನಪ ಅಂತ. ಆಮ್ಯಲಿಂದ ಸುರೂ ಆಟ ನೋಡ್ರಿ ... ಬುದ್ಧಗ ಯಾದ ಗಿಡದ ಕೆಳಗ enlightenment ಆಗಿತ್ತಂತ .. ನನಗ ಈ ಆಟೋದವರು ರೋಡನ್ಯಾಗ enlightenment ಮಾಡಸಿಬಿಟ್ರ ....

ಒಂದ ಅರ್ಧ ತ್ರಾಸ ಆದ ಮ್ಯಾಲ ಒಬ್ಬಂವ ಪುಣ್ಯಾತ್ಮ ಯಾಕೋ ನಾನೂ ಅತ್ತಾಗ ಹೊಂಟೇನಿ ...  ಬರ್ತೇನಿ ಬರ್ರಿ ಅಂದ .. ನನಗ ಆವಾಗ ಸ್ವರ್ಗನ ಸಿಕ್ಕತಿ ಅನ್ನೂವಸ್ಟ ಖುಷಿ ಆತ್ರಿ. ನೀವ್ ಅನ್ಕೊಂಡಿರಬೇಕ ಆ ಅರ್ಧ ತಾಸಿನ್ಯಾಗ ಯಾದರ ಬಸ್ಸಿಗೆ ಹೋಗಬಾರದಾ ಅಂತ. ಆದ್ರ ನಾನೂ ಗಂಡ ಮಗಾರೀ .. ಅವತ್ತ ಎಸ್ಟ ತ್ರಾಸಾಗ್ಲೀ ಇಲ್ಲಾ ಎಸ್ಟ ಲೇಟ್ ಆಗ್ಲೀ ಆಟೋಕ್ಕ ಹೋಗಬೇಕಂತ "ಭೀಷ್ಮ ಪ್ರತಿಜ್ಞೆ" ಮಾಡೇಬಿಟ್ಟಿದ್ನಿರಿ. ನಾವ್ ಹುಬ್ಬಳ್ಳಿ ಮಂದಿ ಇಂಥಾ ಒಣ ಪ್ರತಿಜ್ಞೆ ಮಾಡಾಕ ಒಟ್ಟ ಹಿಂದ ಬೀಳುದಿಲ್ರಿ. ನಾನ ಆಟೋದೊಳಗ ಕುಂತಿದ್ದ ನೋಡಿದ್ರ ನಿಮಗ ಮೈಸೂರಿನ ದಸರಾ ಒಳಗಾ ಒಡೆಯರ್ ಆನಿ ಮ್ಯಾಲ ಕುಂತಿದ್ದ ನೆನಪ ಬರಬೇಕ್ರಿ.

ಒಂದ ಇಪ್ಪತ್ತ ನಿಮಿಷದಾಗ ನಮ್ಮ ಅಂಬಾರಿ cunningham ರೋಡಿಗೆ ಬಂತ್ರಿ. ಆಟೋ ಮೀಟರ್ ಬರಬ್ಬರಿ ೨೭ ರೂಪಾಯಿ ಅಂತ ಹೊಡ್ಕಂಡ ಹೇಳಕ ಹತ್ತಿತ್ರಿ. ನಾನ್ ಅಂವಗ ೧೦ ರೂಪಾಯಿದ್ದ ೩ ನೋಟ್ ಕೊಟ್ಟ್ನಿರಿ. ಆ ಮಾರಾಯ ನೋಟ್ ಕಿಸೆದಾಗ ಇಟ್ಕೊಂಡು ಇನ್ನೇನ ಹೊಂಟಬಿಟ್ಟಿದ್ದ .. ನಾನ್ ಕರದ "ತಮ್ಮಾ .. ಇನ್ನ ೩ ರೂಪಾಯಿ ವಾಪಸ್ ಕೊಡೋ" ಅಂತ ಕೇಳಿದೆ. ಅಂವ ನನ್ನ ಕಡೆ ಒಂದ ಸಲ ಕ್ಯಾಕರಿಸಿ ಉಗಿವೊಂಗ ನೋಡಿ, ಭಿಕ್ಷೆ ಬೇಡಾವ್ರಿಗಿ ಅನ್ನ ಮ್ಯಾಲಿಂದ ಹಾಕಾವ್ರಗತೆ, ಮ್ಯಾಲಿಂದ ೩ ರೂಪಾಯಿ ಹಾಕಿ ಹೋದಾ.

ನಾನ್ ಅವತ್ತ ಒಂದ ಏನ್ ಯುದ್ಧ ಗೆದ್ದಾವ್ರಗತೆ ಆಫೀಸ್ ಕಡೆ ನಡದ್ಯಾ ....