ಸೇವಾ ಪುರಾಣ -11: ಸರಳುಗಳ ಹಿಂದಿನ ಲೋಕ -4

ಸೇವಾ ಪುರಾಣ -11: ಸರಳುಗಳ ಹಿಂದಿನ ಲೋಕ -4

ಬರಹ

                                                  ಸರಳುಗಳ ಹಿಂದಿನ ಲೋಕ -4


ದೂರು ಕೊಡಬಂದವನ ಪಾಡು
     ಪೋಲಿಸ್ ಠಾಣೆಯಲ್ಲಿ ನನ್ನನ್ನು ವಿಚಾರಣೆಗೆ ಕರೆಸಿದ್ದ ಸಂದರ್ಭದಲ್ಲಿ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರರನ್ನು ಕಾಯುತ್ತಾ ಕುಳಿತಿದ್ದ ಸಮಯದಲ್ಲಿ ತನ್ನ ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ಕೊಡಲು ವ್ಯಕ್ತಿಯೊಬ್ಬರು ಬಂದಿದ್ದರು. ಸಬ್ ಇನ್ಸ್ ಪೆಕ್ಟರ್ ರೌಂಡ್ಸ್ ಗೆ ಹೋಗಿದ್ದಾರೆಂದೂ ಕಾಯಬೇಕೆಂದೂ ಅಲ್ಲಿದ್ದ ಪೇದೆ ಹೇಳಿದಾಗ ಅವರು ಬೆಂಚಿನ ಮೇಲೆ ನನ್ನ ಪಕ್ಕದಲ್ಲಿ ಕುಳಿತುಕೊಂಡರು. ಆಗ ರಾತ್ರಿ ಸುಮಾರು 8-00 ಘಂಟೆಯಾಗಿರಬೇಕು. ಠಾಣೆಯಲ್ಲಿದ್ದ ಪೇದೆಯ ಡ್ಯೂಟಿಯ ಅವಧಿ ಮುಗಿದು ಆತ ಹೊರಗೆ ಹೋದಾಗ ಇನ್ನೊಬ್ಬ ಪೇದೆ ತನ್ನ ಪಾಳಿಯ ಡ್ಯೂಟಿಗಾಗಿ ಬಂದ. ಎಲೆ ಅಡಿಕೆ ಮೆಲ್ಲುತ್ತಾ ಬಂದ ಅವನ ಕಣ್ಣುಗಳು ಕೆಂಪಗಿದ್ದವು. ಆತ ಬಂದವನೇ ನನ್ನ ಪಕ್ಕ ಕುಳಿತಿದ್ದವರಿಗೆ ಕಪಾಳಕ್ಕೆ ಫಟಾರನೆ ಹೊಡೆದ ರಭಸಕ್ಕೆ ಅವರು ತತ್ತರಿಸಿ ಕೆಳಗೆ ಬಿದ್ದರು. ಅವರು ಹೆದರಿ ಹೋಗಿ 'ಯಾಕೆ ಸಾರ್?' ಅಂದರು. (ಸಾರ್ ಎಂಬ ಪದ ಬಳಕೆಗೆ ಆ ಪೇದೆ ಅರ್ಹನಾಗಿರಲಿಲ್ಲ. ಆದರೆ ಭಯ ಗೌರವ ಕೊಡಿಸಿತ್ತು.) ಕಳ್ಳತನದ ಬಗ್ಗೆ ದೂರು ಕೊಡಲು ಬಂದ ವಿಷಯ ತಿಳಿದಾಗ 'ಮೊದಲೇ ಹೇಳಬಾರದಿತ್ತೇನ್ರೀ?' ಎಂದು ಅವರದೇ ತಪ್ಪೆಂಬಂತೆ ಹೇಳಿದ. ಇದು ಅವರ ದೃಷ್ಟಿಯಲ್ಲಿ ಠಾಣೆಯಲ್ಲಿ ಡ್ಯೂಟಿ ಮಾಡುವ ರೀತಿ! ಅವರ ದೃಷ್ಟಿಯಲ್ಲಿ ಠಾಣೆಗೆ ಬರುವವರೆಲ್ಲರೂ 'ಬದ್ಮಾಶ್'ಗಳು! ಸಬ್ ಇನ್ಸ್ ಪೆಕ್ಟರ್ ಬಂದಾಗ ಅವರು ಹೆದರುತ್ತಲೇ ಕಳ್ಳತನದ ವಿಷಯ ತಿಳಿಸಿದರು. ಅದನ್ನು ನಿರ್ವಿಕಾರವಾಗಿ ಕೇಳಿಸಿಕೊಂಡ ಸಬ್ ಇನ್ಸ್ ಪೆಕ್ಟರರು ಕಪಾಳಕ್ಕೆ ಹೊಡೆದಿದ್ದ ಪೇದೆಗೇ ದೂರು ಪಡೆಯಲು ಹೇಳಿದರು. ಅಷ್ಟರಲ್ಲಾಗಲೇ ದೂರು ಕೊಡಬಂದಿದ್ದವರಿಗೆ ತಮ್ಮ ದೂರಿನ ಗತಿ ಏನಾಗಬಹುದೆಂಬ ಅರಿವಾಗಿರಬೇಕು! ದೂರು ದಾಖಲಿಸಿ ಹೊರಬಂದರೆ ಸಾಕೆಂಬ ಮನಸ್ಥಿತಿಯಲ್ಲಿ ಅವರಿದ್ದಂತೆ ತೋರುತ್ತಿತ್ತು!



ಜೇಬುಗಳ್ಳನಾದೆ!
     ಮಾಮೂಲಿನಂತೆ ಒಂದು ದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಾತಿ ಹಾಕಿ ಹೊರಬರುವಾಗ ಅಕಾಸ್ಮಾತ್ತಾಗಿ ನನ್ನ ದೃಷ್ಟಿ ಠಾಣೆಯ ಹೊರಭಾಗದಲ್ಲಿದ್ದ ಸೂಚನಾ ಫಲಕದ ಮೇಲೆ ಬಿತ್ತು. ಅಲ್ಲಿ ನನ್ನ ಫೋಟೋ ಸಹ ಕಂಡು ಆಶ್ಚರ್ಯಚಕಿತನಾಗಿ ಹತ್ತಿರ ಹೋಗಿ ನೋಡಿದರೆ "ಜೇಬುಗಳ್ಳರಿದ್ದಾರೆ, ಎಚ್ಚರಿಕೆ" ಎಂಬ ಶೀರ್ಷಿಕೆ ಕೆಳಗಡೆ ಹಲವಾರು ಫೋಟೋಗಳ ಜೊತೆಗೆ ನನ್ನ ಫೋಟೋ ಸಹ ಅಂಟಿಸಿದ್ದರು. ನನಗೆ ಸಿಟ್ಟು ಬಂದಿತಾದರೂ ತೋರಿಸಿಕೊಳ್ಳುವಂತಿರಲಿಲ್ಲ. ನಮಸ್ಕಾರ ಮಾಡದಿದ್ದಕ್ಕೆ ನನಗೆ ಬುದ್ಧಿ ಕಲಿಸಲು ಸುಳ್ಳು ಕೇಸು ಹಾಕಲು ಪ್ರಯತ್ನಿಸಿ ಮುಖಭಂಗಿತನಾಗಿದ್ದ ಹೆಡ್ ಕಾನ್ಸ್ ಟೇಬಲ್ಲನ ಕೆಲಸವೇ ಇದೆಂದು ಊಹಿಸಲು ನನಗೆ ಕಷ್ಟವೇನಿರಲಿಲ್ಲ. (ಸಂಬಂಧಿಸಿದ ಸಂಗತಿಯ ವಿವರ ಇಲ್ಲಿ ಗಮನಿಸಬಹುದು:http://sampada.net/article/26984). ನಾನು ನಗರ ಠಾಣೆಯಿರುವ ಕಟ್ಟಡದ ಮೊದಲ ಅಂತಸ್ತಿನಲ್ಲಿದ್ದ ಪೋಲಿಸ್ ಸೂಪರಿಂಟೆಂಡೆಂಟರನ್ನು ಭೇಟಿ ಮಾಡಲು ಹೋದೆ. ಎಸ್.ಪಿ.ಯವರು ಕಛೇರಿಯಲ್ಲೇ ಇದ್ದರು. ಬಾಗಿಲಲ್ಲಿ ನಿಂತಿದ್ದ ಸೆಂಟ್ರಿಗೆ ನನ್ನ ಪರಿಚಯ ಇದ್ದು ಆತ ನನ್ನನ್ನು ಒಳಗೆ ಹೋಗಲು ಬಿಡಲಿಲ್ಲ. ನನಗೂ ಅವನಿಗೂ ವಾದ-ವಿವಾದ ನಡೆಯುತ್ತಿತ್ತು. ಒಳಗಿದ್ದ ಎಸ್.ಪಿ.ಯವರು 'ಏನದು ಗಲಾಟೆ? ಅವನನ್ನು ಒಳಗೆ ಕಳಿಸು' ಎಂದರು. ನಾನು ಒಳಗೆ ಹೋಗಿ ಅವರಿಗೆ ನಮಸ್ಕರಿಸಿದೆ. ಅವರು 'ಏನು?' ಎಂಬರ್ಥದಲ್ಲಿ ನನ್ನನ್ನು ದೃಷ್ಟಿಸಿದರು. ನಾನು "ಇಂದಿನಿಂದ ಹೊಸ ಉದ್ಯೋಗ ಮಾಡಬೇಕೆಂದಿರುವುದಾಗಿಯೂ ಅದನ್ನು ಅವರೇ ಉದ್ಘಾಟಿಸಬೇಕೆಂದೂ" ಕೋರಿದೆ. ಅವರು ಆಗಲೂ ಮಾತನಾಡದೆ 'ಏನು?' ಎಂಬರ್ಥದಲ್ಲಿ ದಿಟ್ಟಿಸಿದರು. "ನಾನು ಪಿಕ್ ಪಾಕೆಟರ್ ಆಗಬಯಸಿರುವುದಾಗಿಯೂ ಮೊದಲನೆಯ ಪಾಕೆಟ್ ಅನ್ನು ತಮ್ಮದನ್ನೇ ಹಾರಿಸಲು ಬಯಸಿರುವುದಾಗಿಯೂ, ದಯವಿಟ್ಟು ಸಹಕರಿಸಬೇಕೆಂದು" ಹೇಳುತ್ತಿದ್ದ ಹಾಗೆ ಅವಡುಗಚ್ಚಿದ ಅವರ ಕೈ ಸಹಜವೆಂಬಂತೆ ಟೇಬಲ್ಲಿನ ಮೇಲಿದ್ದ ಲಾಠಿ ಹಿಡಿದುಕೊಂಡಿತು. ತಡ ಮಾಡಿದರೆ ಕೆಲಸ ಕೆಡುತ್ತದೆಂದು ನಾನು ಅವಸರ ಅವಸರವಾಗಿ ಠಾಣೆಯ ನೋಟಿಸ್ ಬೋರ್ಡಿನಲ್ಲಿ ಜೇಬುಗಳ್ಳನೆಂದು ನನ್ನ ಫೋಟೊ ಅಂಟಿಸಿರುವ ಬಗ್ಗೆ ಹೇಳಿದೆ. ಅವರು ಧಡಕ್ಕನೆ ಕುರ್ಚಿಯಿಂದ ಮೇಲೆದ್ದು ಕೆಳಗಿಳಿದು ಬಂದು ನೋಟಿಸ್ ಬೋರ್ಡು ನೋಡಿದರು. ಅವರು ಧಡಕ್ಕನೆ ಎದ್ದಾಗ ನನಗೆಲ್ಲಿ ಹೊಡೆಯುವರೋ ಎಂದು ನಾನು ಭಯಪಟ್ಟಿದ್ದು ಸುಳ್ಳಲ್ಲ. ನನ್ನ ಫೋಟೋ ಕಂಡು ಸಿಟ್ಟಿಗೆದ್ದ ಅವರು ಅಲ್ಲಿಗೆ ಓಡಿಬಂದ ಎಎಸ್ಸೈರವರ ಕಪಾಳಕ್ಕೆ ಬಾರಿಸಿ ನನ್ನ ಫೋಟೋ ಅಲ್ಲಿಂದ ತೆಗೆಯಲು ಆದೇಶಿಸಿದರು. ನನಗೆ 'ಸಾರಿ' ಎಂದು ಹೇಳುತ್ತಾ ತಿರುಗಿ ನೋಡದೆ ಮೆಟ್ಟಿಲು ಹತ್ತಿ ಹೋದರು. ಅಲ್ಲಿದ್ದ ಪೋಲಿಸರಿಗೆ ನನ್ನ ಮೇಲೆ ಸಿಟ್ಟು ಬಂದಿರುವುದು ಗೊತ್ತಾಯಿತು. ನಾನು ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿದೆ.



ಅಪ್ಪ-ಅಮ್ಮರ ಮಮತೆ
     ತುರ್ತು ಪರಿಸ್ಥಿತಿ ಕಾಲದ ದೌರ್ಜನ್ಯಗಳ ಬಗ್ಗೆ ಸುದ್ದಿಗಳು ಕಿವಿಗೆ ಬೀಳುತ್ತಿದ್ದವು. ಜೈಲಿಗೆ ಹೊಸ ಹೊಸ ಕೈದಿಗಳು ಬರುತ್ತಿದ್ದಂತೆಯೇ ಹೊಸ ಹೊಸ ದೌರ್ಜನ್ಯಗಳ ಬಗ್ಗೆ ತಿಳಿದುಬರುತ್ತಿದ್ದವು. ಕೆಲವು ನಮ್ಮನ್ನು ಹತಾಶೆಗೊಳಿಸುತ್ತಿದ್ದರೆ ಕೆಲವು ಘಟನೆಗಳು ನಮ್ಮಲ್ಲಿ ಉತ್ಸಾಹ ತುಂಬುತ್ತಿದ್ದವು. ನನ್ನ ಅಜ್ಜಿ (ತಾಯಿಯ ತಾಯಿ) ಜೈಲಿಗೆ ಬಂದು ಜೈಲರರನ್ನು ಕಾಡಿ ಬೇಡಿ ನನ್ನನ್ನು ಭೇಟಿ ಮಾಡಲು ಅವಕಾಶ ಪಡೆದು ನನ್ನನ್ನು ಮಾತನಾಡಿಸಿದ್ದುದನ್ನು ನಾನು ಮರೆಯಲಾರೆ. ಬರುವಾಗ ಅಜ್ಜಿ ನಾಲ್ಕು ಕಿತ್ತಳೆಹಣ್ಣನ್ನು ತಂದಿದ್ದು ನಾನು "ಅಜ್ಜಿ, ಒಳಗೆ ನನ್ನಂತಹವರು ನೂರಾರು ಜನ ಇದ್ದಾರೆ,ನನಗೊಬ್ಬನಿಗೇ ಹಣ್ಣು ತಂದರೆ, ನಾನು ತೆಗೆದುಕೊಂಡರೆ ಸರಿಯಾಗುವುದಿಲ್ಲ" ಎಂದು ಹೇಳಿದ್ದುದನ್ನು ಅಜ್ಜಿ ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿದ್ದರು. ನನ್ನ ತಂದೆಯವರೂ ಸಹ ಆಗಾಗ್ಗೆ ಜೈಲಿಗೆ ಬಂದು ಜೈಲು ಸಿಬ್ಬಂದಿಗೆ ಲಂಚ ಕೊಟ್ಟು 'ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ಹೇಳಿಹೋಗುತ್ತಿದ್ದರಂತೆ. ಆದರೆ ಎಂದೂ ಅವರು ನನ್ನನ್ನು ಕರೆಸಿ ಮಾತನಾಡಲಿಲ್ಲ. ಬರುವಾಗ ಒಂದು ದೊಡ್ಡ ಫ್ಲಾಸ್ಕಿನ ಭರ್ತಿ ಗಟ್ಟಿ ಹಾಲು ಹಾಕಿ ಮಾಡಿದ ಹಾರ್ಲಿಕ್ಸ್ ಅನ್ನು ತಂದು ಮಗನಿಗೆ ಕೊಡಲು ಹೇಳುತ್ತಿದ್ದರಂತೆ. ಜೈಲಿನ ಗಾರ್ಡು ನನಗೆ ಕೊಡುವುದಾಗಿ ಹೇಳಿ ಒಳಕ್ಕೆ ಹೋಗಿ ತಾನೇ ಎಲ್ಲವನ್ನೂ ಕುಡಿದು ಖಾಲಿ ಫ್ಲಾಸ್ಕನ್ನು ತಂದೆಗೆ ವಾಪಸು ಕೊಡುತ್ತಿದ್ದನಂತೆ. ಈ ವಿಷಯ ಬಹಳ ಸಮಯದ ನಂತರ ನನಗೆ ಗೊತ್ತಾಯಿತು. (ಕಾಕತಾಳೀಯವೆಂಬಂತೆ ಲೇಖನದ ಈ ಭಾಗ ಬರೆಯುತ್ತಿದ್ದ ಸಮಯದಲ್ಲೇ ಹಾಸನ ಜಿಲ್ಲಾ ಉಪಕಾರಾಗೃಹದ ವಾರ್ಡನ್ ಗಳಾದ ಶೋಭಾ, ಸಿದ್ಧಲಿಂಗಪ್ಪ, ವಾಹನ ಚಾಲಕ ಭಾನುಪ್ರಕಾಶ್ ಮತ್ತು ಹಣ ವಸೂಲಿಗೆ ಸಹಕರಿಸುತ್ತಿದ್ದ ಕೊಲೆ ಆರೋಪಿ ಸುರೇಶರನ್ನು ಲೋಕಾಯುಕ್ತ ಪೋಲಿಸರು ಕೈದಿಯೊಬ್ಬರ ಭೇಟಿಗೆ ಅವಕಾಶ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿಸಿದ ವಿಷಯ ದಿನಾಂಕ 30-07-2010ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಓದಿದೆ. ಆರೋಪಿ ಸುರೇಶನ ಬಳಿಯಿದ್ದ ನೂರು ರೂ. ಜೈಲರ್ ನಲ್ಲಪ್ಪರೆಡ್ಡಿಯವರಿಗೆ ಕೊಡುವ ಸಲುವಾಗಿದ್ದೆಂದು ಜೈಲರರನ್ನೂ ಬಂಧಿಸಿದ ಬಗ್ಗೆ ದಿನಾಂಕ 31-07-2010ರ ಪತ್ರಿಕೆಯಲ್ಲಿ ಸುದ್ದಿಯಿದೆ.)