ಚರಿತ್ರೆ ಬಗ್ಗೆ ಇನ್ನೊಂದು ಅಭಿಪ್ರಾಯ
ಮನುಷ್ಯನ ಬುದ್ಧಿ ಅನ್ವೇಷಿಸಿರುವ ಅತ್ಯಂತ ಅಪಾಯಕಾರಿಯಾದ ಉತ್ಪಾದನೆ-ಚರಿತ್ರೆ. ಚರಿತ್ರೆಯ ಗುಣಗಳು ಸುವಿದಿತ. ಕನಸುಗಳಿಗೆ ಜನ್ಮ ನೀಡುತ್ತದೆ, ಜನರಿಗೆ ಅಮಲೇರುವಂತೆ ಮಾಡುತ್ತದೆ, ಸುಳ್ಳು ನೆನಪುಗಳನ್ನು ಹುಟ್ಟಿಹಾಕುತ್ತದೆ, ಜನರ ಪ್ರತಿಕ್ರಿಯೆಗಳು ಉತ್ಪ್ರೇಕ್ಷಿತವಾಗುವಂತೆ ಮಾಡುತ್ತದೆ, ಹಳೆಯ ಗಾಯಗಳನ್ನು ಕೆದಕುತ್ತದೆ, ಜನತೆಯ ನಿದ್ರೆ ಕಡಿಸುತ್ತದೆ, ತಮ್ಮ ನಾಡಿನ ಹಿರಿಮೆ ಮತ್ತು ವೈಭವಗಳ ಬಗ್ಗೆ ವ್ಯಾಮೋಹ ಭರಿತ ಭ್ರಮೆಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ, ಅಥವಾ ತಾವು ಪೀಡನೆಗೆ ಒಳಗಾದ ಜನಾಂಗ ಎಂದು ಕೊರಗುವಂತೆ ಮಾಡುತ್ತದೆ, ರಾಷ್ಟ್ರಗಳ ಮನಸ್ಸನ್ನು ಕಹಿಮಾಡಿ, ಉದ್ಧಟತನವನ್ನು ತುಂಬಿ, ಬಡಾಯಿಕೊಚ್ಚಿಕೊಳ್ಳುವಂತೆ ಮಾಡುತ್ತದೆ...
ಚರಿತ್ರೆ ಏನನ್ನು ಬೇಕಾದರೂ ಸಮರ್ಥಿಸಬಲ್ಲುದು. ಚರಿತ್ರೆ ಎಲ್ಲವನ್ನೂ ಒಳಗೊಂಡು ಯಾವುದೇ ವಾದಕ್ಕೂ ತಕ್ಕ ಉದಾಹರಣೆಗಳನ್ನು ಒದಗಿಸಬಲ್ಲುದು. ಹಾಗಾಗಿ ಕೇವಲ ಉದ್ರೇಕವನ್ನು ಉಂಟುಮಾಡೀತೇ ಹೊರತು ಸಮಾಧಾನದ ಅರಿವು ಚರಿತ್ರೆಯಂದ ದೊರೆಯದು.
ಜಗತ್ತು ಈಗಿರುವ ಸ್ಥಿತಿಯಲ್ಲಿ ನಾವೆಲ್ಲ ಚರಿತ್ರೆಯಿಂದ ಭ್ರಷ್ಟಗೊಳ್ಳುವ ಅಪಾಯ ಅತಿ ಹೆಚ್ಚು.
[ಇದು ಪಾಲ್ ವೆಲರಿ ಎಂಬ, ೧೮೭೧ರಲ್ಲಿ ಜನಿಸಿದ, ಫ್ರೆಂಚ್ ಕವಿ, ಚಿಂತಕನ ಮಾತು. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಮಹಾಕವಿ ಎಂದು ಪ್ರಸಿದ್ಧನಾದವನು ಈತ. ಅವನ ಬಗ್ಗೆ ಯಾವುದೋ ಪುಸ್ತಕ ಓದುತ್ತಿದ್ದಾಗ ನಿನ್ನೆ ಕಣ್ಣಿಗೆ ಬಿದ್ದ ಮಾತುಗಳು ಇವು.]