ಜೆಕೆ ಹೇಳಿದ್ದು: ಆದರ್ಶವಾದಿ ಪ್ರೀತಿಯನ್ನು ಅರಿಯಲಾರ

ಜೆಕೆ ಹೇಳಿದ್ದು: ಆದರ್ಶವಾದಿ ಪ್ರೀತಿಯನ್ನು ಅರಿಯಲಾರ

ಬರಹ

ದೇವರನ್ನು ಕಾಣಬೇಕೆಂದು ಪ್ರಯತ್ನಿಸುತ್ತಾ ಅದಕ್ಕಾಗಿ ಬ್ರಹ್ಮಚರ್ಯವನ್ನು ಪಾಲಿಸಲು ಹೆಣಗುವವರು ಅಪವಿತ್ರರು. ಸೆಕ್ಸ್‌ನ ಬಗ್ಗೆ ಭಯಪಟ್ಟು, ಅದನ್ನು ದೂರ ಮಾಡಿ, ಸೆಕ್ಸ್‌ಗೆ ಪ್ರತಿಯಾಗಿ ದೇವರನ್ನು ಪಡೆಯುವ ಲಾಭಕ್ಕೆ ಆಸೆಪಡುತ್ತಿರುತ್ತಾರೆ. ಸೆಕ್ಸ್‌ನ ಬದಲಾಗಿ ದೇವರನ್ನು ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳುತ್ತಾರೆ. ಅವರ ಮನಸ್ಸಿನಲ್ಲಿ ಪ್ರೀತಿ ಇರುವುದಿಲ್ಲ. ಶುದ್ಧಿ ಇರುವುದಿಲ್ಲ. ಶುದ್ಧವಾದ ಮನಸ್ಸು, ಶುದ್ಧವಾದ ಹೃದಯ ಇರದಿದ್ದರೆ ಸತ್ಯ ಕಾಣುವುದಿಲ್ಲ. ಕಠಿಣ ಶಿಸ್ತಿಗೆ ಒಳಪಟ್ಟ ಹೃದಯ, ದಮನಕ್ಕೆ ಒಳಗಾದ ಹೃದಯ, ಪ್ರೀತಿ ಎಂದರೇನೆಂದು ಅರಿಯಲಾರದು. ಅಭ್ಯಾಸಗಳಿಗೆ, ದೈಹಿಕ ಮಾನಸಿಕ ಸಂವೇದನೆಗಳಿಗೆ ಸಿಕ್ಕಿಬಿದ್ದ ಹೃದಯವೂ ಪ್ರೀತಿಯನ್ನು ಕಾಣಲಾರದು. ಆದರ್ಶವಾದಿಯಾದವನು ತಾನು ಕಲ್ಪಿಸಿಕೊಂಡ ಆದರ್ಶವನ್ನು ಅನುಸರಿಸುವವನು, ಅಷ್ಟೆ. ಆದ್ದರಿಂದಲೇ ಆತ ಪ್ರೀತಿಯನ್ನು ಅರಿಯಲಾರ. ತನ್ನ ಬಗ್ಗೆ ತಾನು ಚಿಂತಿಸದೆ ಉದಾರಿಯಾಗಿ ಇರಲಾರ. ಮನಸ್ಸು ಮತ್ತು ಹೃದಯಗಳು ಭಯರಹಿತವಾಗಿದ್ದಾಗ, ಇಂದ್ರಿಯ ಸಂವೇದನೆಗಳ ಅಭ್ಯಾಸದಿಂದ ಮುಕ್ತವಾಗಿದ್ದಾಗ, ಆಗ ಮಾತ್ರ ಔದಾರ್ಯ, ಕಾರುಣ್ಯ, ತೀವ್ರಭಾವ (ಕಂಪ್ಯಾಶನ್), ಪ್ರೀತಿ ಇರಬಲ್ಲವು. ಅಂಥ ಪ್ರೀತಿ ಪವಿತ್ರವಾದದ್ದು.
[ಅನುದಿನ ಚಿಂತನ ಪುಸ್ತಕದಿಂದ]