ರೆಕ್ಕೆಯ ಮಿತ್ರ ‘ಉರ್ಚಿಟ್ಲು’ ನಿನ್ನೆಗೆ ಇಹದ ವ್ಯಾಪಾರ ಮುಗಿಸಿದ.

Submitted by harshavardhan … on Sun, 08/15/2010 - 15:25
ಬರಹ

ಧಾರವಾಡದ ಉದಯ ಹಾಸ್ಟೆಲ್ ಬಳಿ ಪ್ರೊ. ಗಂಗಾಧರ ಕಲ್ಲೂರ ಅವರಿಗೆ ದೊರೆತ ವಯೋವೃದ್ಧ ಗುಬ್ಬಿಗಿಡುಗ. ಆಂಗ್ಲ ಭಾಷೆಯಲ್ಲಿ Besra SparrowHawk.

 

ಇದು ಗುಬ್ಬಿ ಗಿಡುಗ. ಗಂಡಿಗೆ ಧೂತಿ (Dhooti), ಹೆಣ್ಣು ಹಕ್ಕಿಗೆ ಬೆಸ್ರಾ (Besra) ಎಂದು ಪೂರ್ವದಲ್ಲಿ ಸೇರಿಸಿ `Sparrowhawk' ಎಂದು ಹಕ್ಕಿ ತಜ್ಞರು ಹೆಸರಿಸುತ್ತಾರೆ. ಕಣ್ಣುಗಳಂತೂ ಆಳವಾದ ಲೆನ್ಸ್ ಕ್ಯಾಮೆರಾದಂತೆ ಕಂಡು, ನೋಡುಗರನ್ನು ಹೆದರಿಸುವಂತೆ ಕೊಕ್ಕಿನ ಮಖ ಗೋಚರಿಸುತ್ತದೆ. ಹಿಂದಿ ಭಾಷೆಯಲ್ಲಿ ‘ಖಾಂಡ್ ಬೆಸ್ರಾ’, ತೆಲುಗಿನಲ್ಲಿ ‘ವೈಷ್ಟಪಾ ಡೆಗಾ’, ಕನ್ನಡದಲ್ಲಿ ‘ಉರ್ಚಿಟ್ಲು’ ಅಂತ ಸಹ ತರಹೇವಾರಿ ಹೆಸರಿನಿಂದ ಈ ಗುಬ್ಬಿ ಗಿಡುಗನನ್ನು ಕರೆಯಲಾಗುತ್ತದೆ.

 

ಬಿಳಿ, ಕಪ್ಪು, ಕಂದು ಹಾಗೂ ಬಂಗಾರ ಬಣ್ಣದ ಪುಚ್ಚಗಳು ಈ ಹಕ್ಕಿಗೆ ಮೆರಗು ತಂದರೆ, ಕೊಕ್ಕೆಯಂತಹ ಮುಂದೆ ಮೂರು ಹಿಂದೆ ಒಂದು ಉಗುರಿನ ಬೆರಳುಗಳು, ಕಾರ್ಯನಿರತ ಬೇಟೆಗಾರನ ಅಸ್ತ್ರಗಳಂತೆ ಕಾಣುತ್ತವೆ. ವಯಸ್ಕ ಹಕ್ಕಿಯ ಬಾಲದ ಮೇಲೆ ನಾಲ್ಕರಿಂದ ಐದು ಕಪ್ಪು ಪಟ್ಟಿಗಳು ಇರುತ್ತವೆ. ತಲೆಯಿಂದ ಬಾಲದ ವರೆಗೆ ಸುಮಾರು ೨೯ ರಿಂದ ೩೪ ಸೆಂ.ಮೀ. ಉದ್ದದಷ್ಟು ಈ ಹಕ್ಕಿ ಬೆಳೆಯಬಲ್ಲದು.

 

ಉರ್ಚಿಟ್ಲು -Besra SparrowHawk ಕಣ್ಮುಚ್ಚಿ ಕುಳಿತ ಅಪರೂಪದ ಚಿತ್ರ.

 

ಅತ್ಯಂತ ಚಾಕಚಕ್ಯತೆಯಿಂದ, ‘ಪ್ರೊಫೆಶನಲ್ ಹಂಟರ್’ ಮಾದರಿಯಲ್ಲಿ ತನ್ನ ಬೇಟೆಯ ಮೇಲೆ ಎರಗುವಲ್ಲಿ ಉರ್ಚಿಟ್ಲಿಗೆ ಹೆಚ್ಚಿನ ಆಸಕ್ತಿ. ಗುಬ್ಬಿ ಗಿಡುಗದ ಹೆಚ್ಚುಗಾರಿಕೆ ಎಂದರೆ, ‘ಗೆರಿಲ್ಲಾ’ ಮಾದರಿಯ ಹೋರಾಟದಲ್ಲಿ ಮೇರು ಸಾಲಿನಲ್ಲಿ ನಿಲ್ಲುವ ಹಕ್ಕಿ. ತನ್ನ ಮೈಬಣ್ಣ ಹೋಲುವ ಗಿಡಗಳಲ್ಲಿ ಅವಿತು ಕುಳಿತು, ಏಕಾಏಕಿ ‘ಬುಲೆಟ್’ ಎರಗುವಂತೆ ತನ್ನ ಬೇಟೆಯ ಮೇಲೆ ಎರಗಿ, ಕೆಲವೇ ಮೈಕ್ರೋ ಸೆಕೆಂಡುಗಳಲ್ಲಿ ಸೆದೆ ಬಡಿಯುವಲ್ಲಿ ಇದು ನಿಷ್ಣಾತ. ಸುಮಾರು ೬೦೦ ರಿಂದ ೮೦೦ ಮೀಟರಗಳಷ್ಟು ದೂರದಿಂದಲೇ ತನ್ನ ಬೇಟೆಯನ್ನು ಗುರುತಿಸಬಲ್ಲ ಕಣ್ಣು ಇದಕ್ಕಿವೆ. ಬೇಟೆಯಿಂದ ತಾನಿರುವ ದೂರ, ಕ್ರಮಿಸಲು ಬೇಕಾಗುವ ಸಮಯ, ಅವಲಂಬಿಸಬೇಕಾದ ವೇಗ ಈ ಮೂರನ್ನು ಕರಾರುವಾಕ್ ಲೆಕ್ಕಿಸಬಲ್ಲ ಮಿದುಳು ಇದಕ್ಕಿದೆ! ಆದರೆ ನಮ್ಮ ಈ ರೇಖಾಗಣಿತ ಅದಕ್ಕೆ ಗೊತ್ತಿಲ್ಲ; ಕೆಲವೊಮ್ಮೆ ಹಾಗಾಗಿ, ಸುದೈವಿಯಾದ ಬೇಟೆ ತಪ್ಪಿಸಿಕೊಳ್ಳುವುದೂ ಉಂಟು. ಐದು ಪ್ರಯತ್ನಗಳಲ್ಲಿ ಒಂದು ಯಶಸ್ವಿಯಾಗುವಲ್ಲಿ ಸಂದೇಹವಿಲ್ಲ!

 

ಪ್ರೊ. ಗಂಗಾಧರ ಕಲ್ಲೂರ್ ಆರೈಕೆ ಮಾಡಲೋಸುಗ ಎತ್ತಿ ಹಿಡಿದ ಉರ್ಚಿಟ್ಲು ಹಿಂದಿನಿಂದ ಕಾಣಿಸಿದ್ದು ಹೀಗೆ. ಚಿತ್ರ: ಬಿ.ಎಂ.ಕೇದಾರನಾಥ.

 

ಉರ್ಚಿಟ್ಲು ತನ್ನ ಆಹಾರವಾಗಿ ಗುಬ್ಬಿ ಮರಿಗಳು, ಚಿಕ್ಕ ಚಿಟಗುಬ್ಬಿ, ಇಲಿ, ಹೆಗ್ಗಣ, ಬಾವಲಿಗಳು, ಹಲ್ಲಿ ಹಾಗೂ ಆ ಪ್ರಜಾತಿಗೆ ಸೇರಿದ ಓತಿಕಾಟ, ಹಾವುರಾಣಿ, ಊಸರವಳ್ಳಿ ಇತ್ಯಾದಿ, ಹುಳು-ಹುಪ್ಪಡಿ ಕೆಲವೊಮ್ಮೆ ಹಬ್ಬದೂಟ ಸವಿಯುವ ಮನಸ್ಸಾದರೆ ಅಳಿಲು, ಅಳಿಲಿನ ಮರಿಗಳನ್ನು, ಕೋಳಿ ಪಿಳ್ಳೆಗಳನ್ನು ಎಗರಿಸಿ ತಿನ್ನಲು ಹಿಂದೆ-ಮುಂದೆ ನೋಡುವುದಿಲ್ಲ. ರೈತನ ಮಿತ್ರನಾಗಿಯೂ ಈ ಹಕ್ಕಿ ಆತನ ಪೀಕನ್ನು ಇಲಿ-ಹೆಗ್ಗಣ ಹಾಗೂ ಆಯ್ದ ಕೆಲ ಕೀಟಗಳಿಂದ ಉಳಿಸಿಕೊಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

 

ಅತ್ಯಂತ ದಟ್ಟ, ಹಸಿರು ಕಾಡುಗಳಾದ ಹಿಮಾಲಯ, ಪೂರ್ವ, ಪಶ್ಚಿಮ, ಆಗ್ನೇಯ ಕಾಡುಗಳಲ್ಲಿ, ಅಂಡಮಾನ್ ಹಾಗೂ ನಿಕೋಬಾರ್ ಸಮೂಹ ದ್ವೀಪಗಳಲ್ಲಿ, ಶ್ರೀಲಂಕಾ, ಬಾಂಗ್ಲಾ ದೇಶ ಸೇರಿದಂತೆ ಕರ್ನಾಟಕದ ವಿಂಧ್ಯ ಪರ್ವತ ಶ್ರೇಣಿಗಳಲ್ಲಿ ಗುಬ್ಬಿ ಗಿಡುಗ ಹೇರಳವಾಗಿ ಕಾಣಸಿಗುತ್ತವೆ. ‘ಟಿಚೀವ್..ಟಿಚೀವ್..ಟ್ಚಿವ್’ ಎಂದು ಕಕರ್ಶವಾಗಿ ಕೂಗುತ್ತ ತನ್ನ ಇರುವಿಕೆಯನ್ನು ತನ್ನ ಮನದನ್ನೆಗೆ ಮಾತ್ರ ಸೂಚ್ಯವಾಗಿ ತಿಳಿಸುವ ಜಾಣ್ಮೆ ಇದಕ್ಕೆ ಕರಗತವಾಗಿದೆ.

 

ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ವರೆಗೆ ಸಂತಾನ ಬೆಳೆಸಲು ತೊಡಗುವ ಉರ್ಚಿಟ್ಲು, ಕೆಲವೊಮ್ಮೆ ಗೂಡುಕಟ್ಟಿ, ಸಾಮಾನ್ಯವಾಗಿ ಕಾಗೆಯ ಗೂಡನ್ನೇ ತುಸು ರಿಪೇರಿ ಮಾಡಿಕೊಂಡು ೩ ರಿಂದ ೫ ಮೊಟ್ಟೆಗಳನ್ನು ಹಾಕುತ್ತದೆ. ಮೊಟ್ಟೆಗಳು ಇತರೆ ಹಕ್ಕಿಗಳ ಮೊಟ್ಟೆಗಳಂತಿರದೇ, ಗುಂಡಗಿದ್ದು ನೀಲಿ-ಬಿಳಿ ಮಿಶ್ರಿತವಾಗಿ ಕೆಂಪು ಶೇಡಿನ ಕಂದು ಬಣ್ಣದವುಗಳಾಗಿ ಹೊಳೆಯುತ್ತ ಗಮನ ಸೆಳೆಯುತ್ತವೆ. ಆದರೆ ಗೂಡಿನ ಬಣ್ಣ, ಮೊಟ್ಟೆಯ ಮೇಲ್ಮೈ ಬಣ್ಣಕ್ಕೆ ಸಮಹೊಂದಿ ಚಿಕಿತ್ಸಕ ಕಣ್ಣುಗಳಿಗೆ ಮಾತ್ರ ಗೋಚರಿಸುವಂತೆ ತೋರುತ್ತದೆ.

 

ಧಾರವಾಡದ ಉದಯ್ ಹಾಸ್ಟೆಲ್ ಬಳಿ ವಯೋವೃದ್ಧ ಗುಬ್ಬಿ ಗಿಡುಗ ಮರದಿಂದ ಬಿದ್ದು ಗಾಯಗೊಂಡು ಪ್ರೊ. ಗಂಗಾಧರ ಕಲ್ಲೂರ್ ಕೈಗೆ ಸಿಕ್ಕು ಆರೈಕೆಹೊಂದುತ್ತಿರುವಾಗ. ಚಿತ್ರ: ಬಿ.ಎಂ.ಕೇದಾರನಾಥ.   

 

ಒಟ್ಟು ೨೧ ದಿನಗಳ ನಿರಂತರ ಕಾವು ಕೊಡುವಿಕೆಯಿಂದ ಮೊಟ್ಟೆ ಒಡೆದು ಮೂರರಿಂದ ನಾಲ್ಕು ಮರಿಗಳು ಜೀವ ತಳೆಯುತ್ತವೆ. ನಂತರ ಮುಂದಿನ ೨೧ ದಿನಗಳಲ್ಲಿ ರೆಕ್ಕೆ-ಪುಕ್ಕಗಳು ಬಲಿತು ಅಪ್ಪ-ಅಮ್ಮನಿಂದ ಹಾರುವ, ಬೇಟೆಯಾಡುವ ಪಟ್ಟುಗಳನ್ನು ಕಲಿಯುತ್ತ ಅವು ಜೀವಜಗತ್ತಿಗೆ ಸ್ವಾವಲಂಬಿಯಾಗಿ ಸೇರ್ಪಡೆಗೊಳ್ಳುತ್ತವೆ. ಹಾಗೆ ಯಶಸ್ವಿಯಾಗುವ ಹಕ್ಕಿಗಳ ಸಂಖ್ಯೆ ಕೇವಲ ೧, ಅಬ್ಬಬ್ಬಾ ಎಂದರೆ ೨! ಸುಮಾರು ೭ ರಿಂದ ೮ ವಸಂತಗಳನ್ನು ಅವು ತಮ್ಮ ಬದುಕಿನಲ್ಲಿ ಕಣುತ್ತವೆ. ಒಂದು ದಶಕದ ಕಾಲ ಸಹ ಬದುಕಬಹುದು ಎಂಬ ಉಲ್ಲೇಖಗಳಿವೆ; ಆದರೆ, ಮಹತ್ವಪೂರ್ಣ ಸಂಶೋಧನೆಗಳು ಈ ನಿಟ್ಟಿನಲ್ಲಿ ಇನ್ನೂ ನಡೆಯಬೇಕಿದೆ.

 

ಇತ್ತೀಚೆಗೆ ಧಾರವಾಡದ ಕರ್ನಾಟಕ ಕಾಲೇಜಿನ ಹಿಂಭಾಗದಲ್ಲಿರುವ ಉದಯ ಹಾಸ್ಟೆಲ್ ಎದುರಿಗೆ ಅರೆಜೀವವಾಗಿ ಉರ್ಚಿಟ್ಲು ಬಿದ್ದಿತ್ತು. ಸಾಮಾನ್ಯವಾಗಿ ಹಕ್ಕಿಗಳು ಗಾಯಗೊಂಡಾಗ ಹೀಗೆ ನೆಲಕ್ಕೊರಗುವುದುಂಟು. ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದ ಪ್ರೊ. ಗಂಗಾಧರ ಕಲ್ಲೂರ ಹತ್ತಾರು ಹಕ್ಕಿಗಳ ಕೂಗಾಟ ಕೇಳಿ, ಗಿಡದ ಬುಡದ ಬಳಿ ಬಂದಾಗ ಉರ್ಚಿಟ್ಲು ಯಾವುದೇ ಪ್ರತಿಕ್ರಿಯೆ ತೋರದೇ ಹಾಗೆ ಕಣ್ಮುಚ್ಚಿ ಕುಳಿತಿತ್ತು. ಪ್ರೊ. ಕಲ್ಲೂರ ಜೋಪಾನವಾಗಿ ತಮ್ಮ ಕರವಸ್ತ್ರಬಳಸಿ ಹಿಡಿದುಕೊಂಡು ತುಸು ನೀರು ಕುಡಿಸಿದರು. ಅನಾರೋಗ್ಯದಿಂದ ಬಳಲುತ್ತಿದೆ ಎಂದುಕೊಳ್ಳುಷ್ಟರಲ್ಲಿ, ತೀರ ವಯಸ್ಸಾಗಿದೆ ಎಂಬುದು ಅವರ ಗಮನಕ್ಕೆ ಬಂತು. ಹೀಗೆ ನೆಲದ ಮೇಲೆ ಬಿಟ್ಟರೆ ಬೇರೆ ಯಾವುದಾದರೂ ಪ್ರಾಣಿಗೆ ಆಹುತಿಯಾಗಬಹುದು ಎಂದು, ಮನೆಗೆ ತಂದು ಎರಡು ದಿನ ಆರೈಕೆ ಮಾಡಿದರು.

 

 

ಪ್ರೊ. ಕಲ್ಲೂರ್ ತಮ್ಮ ಮನೆಯಲ್ಲಿ ಆರೈಕೆ ಮಾಡಿದ ನಂತರ ತುಸು ಗೆಲುವಾಗಿದ್ದ ಉರ್ಚಿಟ್ಲು. ಆದರೆ ವೃದ್ಧಾಪ್ಯ ಸಹಜ ಕಾಯಿಲೆಯಿಂದ ಅದು ಮೃತಪಟ್ಟಿತು. ಚಿತ್ರ: ಬಿ.ಎಂ.ಕೇದಾರನಾಥ.

 

ನಿನ್ನೆ ಈ ಹಕ್ಕಿ ಸುಖವಾಗಿ ಇಹದ ವ್ಯಾಪಾರ ಮುಗಿಸಿತು. ಪ್ರೊ. ಕಲ್ಲೂರ ಅದೇ ಹಾಸ್ಟೆಲ್ ಆವರಣಕ್ಕೆ ತೆರಳಿ ಅದನ್ನು ಮಣ್ಣು ಮಾಡಿಬಂದರು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಮತ್ತೆಲ್ಲೋ ಗೂಡು ಕಟ್ಟಿ ಬದುಕು ಸವೆಸಿದ್ದ ಗಂಡು ಉರ್ಚಿಟ್ಲ ಆಗಂತುಕ ಅತಿಥಿ ಪ್ರೊ. ಕಲ್ಲೂರ ಕೈಗೆ ಸಿಕ್ಕು ಸದ್ಗತಿಗೆ ಹೊರಟಿತು. ಈ ರೆಕ್ಕೆಯ ಮಿತ್ರನ ಆತ್ಮಕ್ಕೆ ಶಾಂತಿ ಸಿಗಲಿ.