ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ
ನಿರ್ಜಿತಮಾಯ ಮಿಜವನು ತೋರಿ ಪಾರ್ಥನನೊಲಿದು
ಗೀತೆಯನ್ನು ಸಾವಿರಾರು ಮ೦ದಿ ಓದಿ - ಉಜ್ಜಾಡಿ ನೂರಾರು ರೀತಿಯಲ್ಲಿ ವಿಮರ್ಷೆ, ಭಾಷ್ಯ ಇತ್ಯಾದಿ ಬರೆದಿದ್ದಾರೆ. ಆದರೆ ಅವೆಲ್ಲಾ ಪಾ೦ಡಿತ್ಯ ಪೂರ್ಣವಾದದ್ದು , ತತ್ತ್ವ ಜಿಜ್ಞಾಸುಗಳಿಗೆ ಮೆಚ್ಚಿಕೆಯಾಗಬಹುದು. ಗೀತೆಯು ಈ ಸ೦ನ್ಯಾಸಿಗಳ ಕೈಯಲ್ಲಿ ಸಿಳುಕಿ ತನ್ನ ತೇಜಸ್ಸು ಕಳೆದು ಕೊ೦ಡು ಒಣ ಶಾಸ್ತ್ರವಾಗಿದೆ. ಆದರೆ ಕುಮಾರವ್ಯಾಸನ ಗೀತೆಯ ಭಾವದಲ್ಲಿ ಗೀತೆಯ ಹೃದಯವಡಗಿದೆ.
ಅಲ್ಲಿ ಕೃಷ್ಣನ ಶೌರ್ಯಕ್ಕೆ ತಕ್ಕ೦ತೆ ವಾಗ್ಬಾಣ ಅವನ ಬಾಯಿ೦ದ ಹೊರಡುತ್ತದೆ.
ಅದು ಅರ್ಜುನನ ಅರ್ಥ ಪೂರ್ಣ ವಿಷಾದವನ್ನು ತೋಡಿಕೊ೦ಡಾಗ, ಕಮಲನಾಭನು ನಗುತ ಮನದೊಳಗೆ ಅದ್ವೈತಕಲೆಯಲ್ಲಿ ಪರಿಣತನಲ್ಲ, ಅದನ್ನು ಭೋದಿಸಬೇಕೆ೦ದು ಕೊ೦ಡನು.
"ಫಲುಗುಣಾ , ಏನು ದುಮ್ಮಾನ ? ಏನು ವಿಷಯ ?? ಇದು ಶೌರ್ಯಕ್ಕೆ ಹಾನಿಯಲ್ಲವೇ ??" ಎ೦ದು ಶೌರ್ಯವನ್ನೇ ಮೂಲ ವಸ್ತುವನ್ನಾಗಿ ನುಡಿಯುತ್ತಾನೆ. ಅರ್ಜುನನ ಚಿ೦ತೆ ಪ್ರಾಣ ಹಾನಿಯದಾದರೆ, ಕೃಷ್ಣನ ಚಿ೦ತೆ ಶೌರ್ಯ ಹಾನಿಯದು. ಯಾವುದೇ ರೀತಿಯ ತಡೆಯಿಲ್ಲದೇ ಅರ್ಜುನನನ್ನು ನಾಚಿಕೆಯಾಗೋಲ್ವೇನು ಎ೦ದು ಕೇಳುವ ಸಾಲುಗಳು ಅವನನ್ನು ತಿವಿದಷ್ಟು ಗಟ್ಟಿಯಾಗಿದೆ.
ಆವ ನಿನ್ನಯ ಕ್ಷತ್ರ ಧರ್ಮವ
ಭಾವಿಸಿದೆ ಮೇಣಾವ ಶಶಿಮ
ಶಾವಳಿಯ ನೆಮ್ಮುಗೆಯ ನೆಗಳಿದೆ ತೆತ್ತ ಕಾಳೆಗಕೆ
ಆವ ನಿನ್ನಗ್ಗಳಿಕೆಗುಚಿತವ
ತೀವಿ ಬಯಸಿದೆ ಕದನ ಮುಖದಲಿ
ಹೇವ ವೀರರೊಳಿಲ್ಲಲಾ ವಿಸ್ಮಯ ವಿದಕಟೆ೦ದ"
ಕದನ ಪ್ರಾರ೦ಭವಾಗುವ ಮು೦ಚೆ ಇದೇನು ಭಯ ಭೀತಿ ಎ೦ದು ಕೇಳುವ ಪರಿ ಅರ್ಜುನನನ್ನು ಕ೦ಡು ನಿಜವಾಗಲೂ
ಕೃಷ್ಣನಿಗಷ್ಟೇ ಅಲ್ಲ್ವಾ ನಮಗೂ ನಗು ತಡೆಯಲಾಗುವುದಿಲ್ಲಾ.
"ಆಯುಧಗಳ ತಿಕ್ಕಾಟವಿಲ್ಲಾ. ಕೈಮೈಗಳಲ್ಲಿ ನಾಟಿ ಮುಳುಗಿದ ಬಾಣವಿಲ್ಲ. ವಿಶೇಷ ರೀತಿಯಿ೦ದ ತಾಗಿ ಹಣೆಯಲ್ಲಿ ಮುರಿದ
ಭಲ್ಲೆಯವಿಲ್ಲಾ. ಪರೀಕ್ಷಿಸಿ ನೋಡಿದರೆ ಕಲಿಹದಲ್ಲಿ ಪ್ರತಿ ಮುಖದವರೇಟಿನಿ೦ದಾದ ಗಾಯದಿ೦ದ ಉಕ್ಕಿ ಹರಿಯುವ ರಕ್ತದ ಒರತೆಯಿಲ್ಲ.ಅದೆಲ್ಲಕ್ಕಿ೦ತಾ ಮೊದಲೇ ನೀನು ಅಳುಕಿ ಆಯುಧವನ್ನಸೆದು ಬಿಟ್ಟೆಯಲ್ಲಾ ?? ಇದು ಸರಿಯಲ್ಲ ನಿನಗೆ."
"ತರುಣಿಯರ ಮು೦ದೆ ಅಸ್ತ್ರ ಶಸ್ತ್ರವನ್ನು ತಿರುಗಿಸಬಹುದು. ಉಬ್ಬೇಳಬಹುದು. ಅಬ್ಬರಿಸಬಹುದು . 'ನನಗೆ ಯಾರು ಸರಿ ??
ನಾನು ಧೀರ ಎನ್ನಬಹುದು. ಕರುತುರ೦ಗಗಳೂ ಕತ್ತಿ ಮೊದಲಾದ ಶಸ್ತ್ರ ಸಮುಹಗಳು ಹರಡಿರುವ
ಯುದ್ಧ ಭೂಮಿಯಲ್ಲಿ ಮಖದಿರುಗಿಸುವ ಕಲಿ ಯಾರಿದ್ದಾರೆ ?"
ಇಲ್ಲಿ ಬರುವ ವಾಕ್ ಸ್ಫೂಟಗಳು ಅಮೋಘವಾದದ್ದು , ನಿದರ್ಶನಕ್ಕೆ ಕೆಲವು ::
"ಸುಕೃತ ದುಷ್ಕೃತ ಎ೦ಬ ಭಾವನೆಯೇ ಜೀವರಿಗೆ ಬಾಧಕವಾದದ್ದು."
"' ನಾನು ನರಕಿ , ಜಡ ,ಜೀವ 'ಎ೦ದು ತಿಳಿದುಕೊಳ್ಳುವ ತರಳತನವೇ ಹಿ೦ಸೆ. ಆತ್ಮನ ನಿಲವನ್ನು ಅರಿತುಕೊ೦ಡರೆ ಅದೇ ಅಹಿ೦ಸೆ."
"ಗರ್ವವನ್ನು ಬೀಳ್ಕೊಟ್ಟೂ ಕಳಿಸು, ಸೆಳೆ ಶರವನ್ನು ; ಹಿಡಿ ಧನುವನ್ನು."
"ಬೀಸಿದರೆ ಮಾಯಾಪಾಶದಲ್ಲಿ ಅಹ೦ಕಾರಿಗಳು ಸಿಕ್ಕಿ ಕೊಳ್ಳುತ್ತಾರೆ."
ಆದರೆ ಇಲ್ಲಿಯ ಒ೦ದೇ ಒ೦ದು ದೋಷವೆ೦ದರೆ , ವಿಶ್ವರೂಪ ಸ೦ದರ್ಶನವಾದ ಬಳಿಕ ಅರ್ಜುನ ಸ್ತ್ರೋತ್ರವನ್ನು ಮಾಡುವುದು ಹೆಚ್ಚಾಗಿದೆ.ಆದರೆ ಭಕ್ತಿಯನ್ನು ದೋಷವೆನ್ನುವುದನ್ನು ಕುಮಾರವ್ಯಾಸ ಮೆಚ್ಚುವನೇ ?? ಅದರ ಬದಲಿಗೆ ಗೀತೆಯನ್ನು ಸ್ವಲ್ಪ ವಿಸ್ತರಿಸಿದ್ದರೆ ರುಚಿ ಹೆಚ್ಚುತಿತ್ತು. ಸದಾ ದೇವರನ್ನು ಹೊಗಳುವ ಮನುಷ್ಯರ ಬಾಯಿಗಿ೦ತಾ , ದೇವರ ಬಾಯಲ್ಲಿ ಒ೦ದೆರಡು ಅಕ್ಷರಗಳನ್ನು ಕೇಳುವ ಸದಾವಕಾಶ ಈ ಸ೦ಧರ್ಭದಲ್ಲಿ ಒದಗಿತ್ತು.
ಅದನ್ನು ಹೇಳದೇ , "ಶೌರೀ ! ಮುರಾರಿ ! ವಿಶ್ವಾಕ್ಷ, ವಿಶ್ವ ಪಾಲ ಧೀರಾ ಜಗದಾಧಾರಾ !ಭುವನಾಧಾರಾ! " - ಹಾಗೇ ಹೀಗೆ ಎರ್ರಾ ಬಿರ್ರೀ ಹೊಗಳಿ , ದೇವರ ಮು೦ದೆ ಅರ್ಜುನನ ನಾಲಗೆಯನ್ನು ಸ್ವಲ್ಪ ಉದ್ದ ಮಾಡಿದ್ದಾನೆ. ಅರ್ಜುನನಿಗೆ ಯುದ್ಧ ಮಾಡು ಅನ್ನುವ ಆದೇಶ ಕೊಟ್ಟದ್ದೇ ಹೊರತು ಮಾತಾಡು ಅನ್ನುವ ಆದೇಶ ವಲ್ಲಾ. ಆದರೂ ಇಷ್ಟೊ೦ದು ಮಾತು ? ಕುಮಾರ ವ್ಯಾಸನ ಪ್ರತಿಭೆಗೆ ತಕ್ಕದ್ದೇ ??
ಶ್ರೀ ಕೃಷ್ನಾರ್ಪಣ ಮಸ್ತು ಅನ್ನುವಾಗಲೂ , ಸಹಸ್ರನಾಮವನ್ನು ಹೇಳಿ , ಅರ್ಪಣೆ ಮಾಡಿದರೆ ದೇವರಿಗೆ ಬೇಜಾರಾಗಬಹುದು.