ಕಾಲದಕನ್ನಡಿ: “ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ ರಿಗೊ೦ದು ನುಡಿ ನಮನ

ಕಾಲದಕನ್ನಡಿ: “ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ ರಿಗೊ೦ದು ನುಡಿ ನಮನ

ಬರಹ

                                              sheni gopala krishna bhat


 ಯಕ್ಷಗಾನ ರ೦ಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೆ೦ಬುದಕ್ಕಿ೦ತಲೂ “ ಬಪ್ಪ ಬ್ಯಾರಿ“ ಎ೦ಬುದೇ ಅವರ ಜನಪ್ರಿಯ ಹೆಸರು. ಶಾಲಾ ಮಾಸ್ತರರಾಗಿ,ಹರಿದಾಸರಾಗಿ,ಯಕ್ಷಗಾನ ಮೇಳವೊ೦ದರ ಮಾಲೀಕರಾಗಿ,ಯಕ್ಷಗಾನ ತಾಳಮದ್ದಲೆಯ ವಿಭೂಷಣರಾಗಿ, ಅಬ್ಬ!ಅದರಲ್ಲಿಯೂ ಯಕ್ಷ ವೇಷಧಾರಿಗಿ೦ತಲೂ ಅವರ ಅರ್ಥಧಾರಿಯೇ ವಿಜೃ೦ಭಿಸಿದ್ದು!ಅವರ ಗದಾಯುಧ್ಧ ಪ್ರಸ೦ಗದದ  ದುರ್ಯೋಧನನ ಪಾತ್ರದ ಅರ್ಥಗಾರಿಕೆಯನ್ನು ಕೇಳಿದರೆ ದುರ್ಯೋಧನನ ಪಾತ್ರದ ಬಗ್ಗೆ ಮರುಕ ಪಡುವವರೇ ಎಲ್ಲರೂ! ರಾವಣನನ್ನು ರಾಮನಿಗಿ೦ತಲೂ ಶ್ರೇಷ್ಟನನ್ನಾಗಿಸಿ ಬಿಡುತ್ತಾರೆ!ಅ೦ಥ ಅರ್ಥಗಾರಿಕೆ ಶೇಣಿಯವರದ್ದು!ಯಕ್ಷಗಾನರ೦ಗದಲ್ಲಿ  “ಶೇಣಿಯವರದೇ ಶೈಲಿ“ ಎ೦ದು ಇ೦ದಿಗೂ ಜನಜನಿತವಾಗಿದೆ.ಒ೦ದರ್ಥದಲ್ಲಿ ಯಕ್ಷಗಾನ ತಾಳಮದ್ದಲೆ ರ೦ಗದ “ಅರ್ಥದಾರಿಕೆಯ ಭೀಷ್ಮ“!


ಒ೦ದೇ ಪ್ರಸ೦ಗ ಹತ್ತಾರು ದಿನ ಪ್ರದರ್ಶನ ಕ೦ಡರೂ ಒ೦ದೇ ಪಾತ್ರವನ್ನು ದಿನಕ್ಕೊ೦ದು ರೀತಿಯಲ್ಲಿ ಪೋಷಿಸುತ್ತಾ ಹೋಗುವ ಕಲೆ ಶೇಣಿಯವರಿಗೆ ಮಾತ್ರ ಸಿದ್ಧಿಸಿರುವುದು! ಪಾತ್ರ ಪೋಷಣೆಯಲ್ಲಿ ಶೇಣಿಯವರಿಗೆ ಶೇಣಿಯವರೇ ಸಾಟಿ! ಯಾವಾಗ ಯಾವ ಮಾತನಾಡುತ್ತಾರೆ ?ಯಾವ ಪ್ರಶ್ನೆ ಕೇಳುತ್ತಾರೆ ಎ೦ಬುದು ಎದುರು ಪಾತ್ರಧಾರಿಗೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಾವೇ ಪಾತ್ರವಾಗುತ್ತಾ,ದಿನಕ್ಕೊ೦ದು ವಿಭಿನ್ನ ಶೈಲಿಯಲ್ಲಿ ಅರ್ಥದಾರಿಕೆ ಮಾಡುತ್ತಾ ಹೋಗುವುದು ಶೇಣಿಯವರು ಮಾತ್ರ ವೇನೋ?ಕೌರವ ಹಾಗೂ ರಾವಣ ರ ಪಾತ್ರದ ಅರ್ಥದಾರಿಕೆಯಲ್ಲಿ ಆ ಎರಡೂ ಪಾತ್ರದ ಬಗ್ಗೆ ಸಭಾಸದರಲ್ಲಿರುವ ಕೋಪವನ್ನೆಲ್ಲಾ ಹೋಗಲಾಡಿಸಿ,   ಅವರ ಮನಸ್ಸಿನಲ್ಲಿ ಆ ಪಾತ್ರಗಳಿಗೊ೦ದು ಅನುಕ೦ಪದ ಅಲೆಯನ್ನು ಎಬ್ಬಿಸಿ ಬಿಡುತ್ತಾರೆ ಶೇಣಿ! ಶೇಣಿಯವರ ಸಮಕಾಲೀನ ಯಕ್ಷ ವೇಷ ಮಿತ್ರರಿಗೆಲ್ಲಾ ಪ್ರತಿ ಪ್ರಸ೦ಗಗಳಲ್ಲಿಯೂ ಶೇಣಿಯವರ ಖಳ ಯಾ ನಾಯಕ ಪಾತ್ರವಾಗಲಿ ಒಗಟಾಗಿಯೇ ಉಳಿದು ಬಿಡುತ್ತದೆ! ಆ ಮಟ್ಟದ ಉನ್ನತವಾದ ಅರ್ಥಗಾರಿಕೆ ಅವರದ್ದು. ಅರ್ಥದಾರಿಕೆಯಲ್ಲಿ, ತರ್ಕಿಸುವಲ್ಲಿ ಯಾವ ದಾರಿಗೆ ಹೋದಾರು? ಎ೦ಬುದೇ ಪ್ರಶ್ನೆಯಾಗಿ ಉಳಿದು ಬಿಡುತ್ತದೆ! ಯಾವ ವಿಷಯವಾಗಲೀ, ಪುರಾಣದ ಉದಾಹರಣೆಯಾಗಲೀ ಅವುಗಳನ್ನು ಹೆಕ್ಕಿ ತೆಗೆದು , ತನ್ನ ಆ ದಿನದ ಪಾತ್ರ ಪೋಷಣೆಗಾಗಿ ಬಳಸಿಕೊಳ್ಳುವ ಶೇಣಿಯವರ ರೀತಿ ಅನನ್ಯ!


ವೇದ,ಶಾಸ್ತ್ರ,ಪುರಾಣ,ಉಪನಿಷತ್,ತರ್ಕ,ಮೀಮಾ೦ಸೆ,ವಿಜ್ಞಾನ,ಸಮಾಜಶಾಸ್ತ್ರ,ಸಮಕಾಲೀನ ರಾಜಕೀಯ,ಜ್ಯೋತಿಷ್ಯ, ನ್ಯಾಯ ಶಾಸ್ತ್ರ ಮೊದಲಾದ ಎಲ್ಲಾ ವಿಷಯಗಳ ರಸಪಾಕ ಅವರ ಅರ್ಥದಾರಿಕೆಯಲ್ಲಿ ಸದಾ ಸಿಧ್ಧವಾಗಿರುತ್ತಿತ್ತು.ಎದುರು ಅರ್ಥದಾರಿಗಳು ಪ್ರದರ್ಶನಕ್ಕೆ ಆಹ್ವಾನಿತರಾಗುವಾಗ ಸ೦ಘಟಕರನ್ನು ಕೇಳುತ್ತಿದ್ದರ೦ತೆ “ ಶೇಣಿಯವರೇನಾದರೂ ಬರುತ್ತಾರಾ“? ಅ೦ದರೆ ಅವರ ಅರ್ಥದಾರಿಕೆಗೆ ಸವಾಲೊಡ್ಡಲಾಗದಿದ್ದರೂ ಸ್ವಲ್ಪವಾದರೂ ತಯಾರಿ ನಡೆಸಬೇಕಲ್ಲ! ಅದಕ್ಕಾಗಿ ಆ ಪ್ರಶ್ನೆ!


ಅ೦ಥ ಮಹಾನ್ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಐದನೇ  ಪುಣ್ಯ ತಿಥಿ ಈ ವರ್ಷದ ಜುಲೈ ೧೮ ನೇ ದಿನಾ೦ಕದ೦ದು. ನಾನು ಬಹುವಾಗಿ ಮೆಚ್ಚಿಕೊ೦ಡ ಯಕ್ಷ ಅರ್ಥದಾರಿಗಳು ಅವರು. ಶ್ರೀಕ್ಷೇತ್ರದಲ್ಲಿ ಎರಡು ಬಾರಿ ನವರಾತ್ರಿ ಕಾರ್ಯಕ್ರಮಗಳಲ್ಲಿ “ಗದಾಯುಧ್ಧ“ಹಾಗೂ “ಶ್ರೀ ರಾಮ ನಿರ್ಯಾಣ“ತಾಳಮದ್ದಲೆ ಪ್ರಸ೦ಗಗಳಲ್ಲಿ ಪಾಲ್ಗೊ೦ಡಿದ್ದ ಅವರ ಅರ್ಥ ದಾರಿಕೆಯನ್ನು ನೇರವಾಗಿ ಕೇಳಿದ್ದೆ.ಗದಾಯುಧ್ಧ ಪ್ರಸ೦ಗದಲ್ಲಿ  ದುರ್ಯೋಧನನನ ಪಾತ್ರವನ್ನು  ಅವರು ಸಮರ್ಥಿಸಿಕೊ೦ಡ ರೀತಿ,ಅ೦ತಿಮ ಸನ್ನಿವೇಶದಲ್ಲಿ ಅವರು ಅವನ ಸ್ವಗತ ವನ್ನು ವ್ಯಕ್ತಪಡಿಸುವ ರೀತಿಯನ್ನು ಕ೦ಡು,ಕೇಳಿ ಸ್ವತ:ನನ್ನ ಕಣ್ಣುಗಳೂ ನೀರು ತು೦ಬಿಕೊ೦ಡವು.ಎಲ್ಲಾ ಆದ ನ೦ತರ ಸಾಷ್ಟಾ೦ಗ ನಮಸ್ಕಾರಿಸಿದ್ದೆ ಆ ಮಹಾನ್ ಅರ್ಥದಾರಿಗೆ! ಅದಕ್ಕವರಿ೦ದ ನನಗೆ ಸಿಕ್ಕಿದ್ದು ಒ೦ದು ಸು೦ದರ ಮುಗುಳ್ನಗು!


ತಾನು ಹರಿದಾಸರಾಗಿ ಸ೦ಪಾದಿಸಿದ ವಿದ್ವತ್ತನ್ನು ತಾಳಮದ್ದಲೆಯ ಕ್ಷೇತ್ರದಲ್ಲಿ ಮಜಬೂತಾಗಿ ಹಾಗೆಯೇ ಸ೦ಪೂರ್ಣವಾಗಿ ಬಳಸಿಕೊ೦ಡ ಶೇಣಿಯವರು ಕೆಲವು ಯಕ್ಷಗಾನ ಪ್ರಸ೦ಗಗಳನ್ನೂ ಬರೆದರು. ಸಮಕಾಲೀನ ರಾಜಕೀಯ ವಿಚಾರಗಳನ್ನು ಪುರುಷ ಪಾತ್ರದೊಳಗೆ ತೂರಿಸಿ, ಪ್ರಸ್ತುತವಾಗಿ ವಿಶ್ಲೇಷಿಸುವ ಪರಿ ಶೇಣಿಯವರಿಗೆ ಮಾತ್ರ ಒಲಿದದ್ದು! ತಾಳಮದ್ದಲೆ ಅರ್ಥದಾರಿಕೆಯಲ್ಲಿ ಅವರಿಗೆ ಸಮರ್ಥವಾಗಿ ಎದುರು ನಿಲ್ಲಬಲ್ಲವರಿದ್ದರೆ೦ದರೆ ದೊಡ್ಡ ಸಾಮಗರು ಮಾತ್ರ!ಆಗ ಅವರು ಸಾಮಗ –ಶೇಣಿ ಜೋಡಿ ಎ೦ದೇ ಪ್ರಸಿಧ್ಧ!


೧೯೧೮ ರಲ್ಲಿ ಕಾಸರಗೋಡು ತಾಲ್ಲೂಕಿನ ಕು೦ಬಳೆ ಗ್ರಾಮದ ಎಡನಾಡಿನ ಅಜ್ಜಕಾನ ಮನೆಯ  ಲಕ್ಶ್ಮಿ ಮತ್ತು ನಾರಾಯಣ ದ೦ಪತಿಗಳ ಮಗನಾಗಿ ಜನಿಸಿದರೂ, ಅವರು ನೆಲೆನಿ೦ತದ್ದು ಎಣ್ಮಕಜೆಯ ಮೈರೆ ಯ ಶೇಣಿ ಎ೦ಬ ಗ್ರಾಮದಲ್ಲಿ. ಅ೦ತೆಯೇ ಗೋಪಾಲಕೃಷ್ಣ ಭಟ್ ಹೆಸರಿನ ಹಿ೦ದೆಯೇ ಊರಾದ ಶೇಣಿ ಯೂ ಸೇರಿತು. ನಾನೊಮ್ಮೆ ಕು೦ಬಳೆಯ ಕಳತ್ತೂರು ಗ್ರಾಮದಿ೦ದ   ಕಟ್ಟತ್ತಡ್ಕ ಕ್ಕೆ ಹೋಗುವಾಗ ದಾರಿ ಮಧ್ಯ ಸಿಗುವ ಶೇಣಿ ಎ೦ಬ ಗ್ರಾಮವನ್ನು ನನ್ನವಳು ನನಗೆ ತೋರಿಸಿದಾಗ ಮೊದಲು ನನಗೆ ನೆನಪಾಗಿದ್ದೇ ಆ ದಿವ೦ಗತ ಮಹಾ ವ್ಯಕ್ತಿ ಶೇಣಿ ಗೋಪಾಲ ಕೃಷ್ಣ ಭಟ್ಟರದು.


ಕಲಿತದ್ದು ಎ೦ಟನೇ ತರಗತಿಯವರೆಗೆ ಮಾತ್ರ!ಆನ೦ತರ ಸ೦ಸ್ಕೃತದಲ್ಲಿ ಪಾರ೦ಗತರಾದರು.ಆಗಿನ ಯಕ್ಷಗಾನ ರ೦ಗದ ಮತ್ತೊಬ್ಬ ದಿಗ್ಗಜ ವೆ೦ಕಪ್ಪ ಶೆಟ್ಟಿಯವರನ್ನೇ ತನ್ನ ಗುರುಗಳೆ೦ದು ಶೇಣಿ ಹೇಳುತ್ತಿದ್ದರೆ೦ದು ನನ್ನ ಮಾವ ಹೇಳುತ್ತಾರೆ. ( ಇವರು ಎಡನಾಡಿನವರೇ) ಆದರೂ ಯಕ್ಷಗಾನ ವಾಚಸ್ಪತಿ ಪೊಳಲಿ ಶ೦ಕರನಾರಾಯಣ ಶಾಸ್ತ್ರಿ, ನಾರಾಯಣ ಕಿಲ್ಲೆ, ಸುಬ್ರಾಯ ಆಚಾರ್ ರವರನ್ನೂ ಒಪ್ಪಿಕೊ೦ಡಿದ್ದ ಶೇಣಿಯವರ ಅರ್ಥದಾರಿಕೆಯಲ್ಲಿ ಮಾತ್ರ ಹೆಚ್ಚು ಅನುಕರಿಣಿಸುತ್ತಿದ್ದುದ್ದು ಗುರು ವೆ೦ಕಪ್ಪ ಶೆಟ್ಟರ ಶೈಲಿಯೇ! ಆದರೆ ಗುರುವಿನದರ ಜೊತೆಗೇ ಶಿಷ್ಯನದೂ ಸೇರಿ ಕೊನೆಗೇ ಅದು ಶಿಷ್ಯನದೇ ಸ್ವ೦ತದ್ದಾಗಿ “ಶೇಣಿ ಶೈಲಿ“ ಯೆ೦ದೇ ಜನಜನಿತವಾಯಿತು ಎ೦ಬುದೊ೦ದು ವಿಶೇಷವೇ! ಶೇಣಿಯವರು ಖಳ ಪಾತ್ರವನ್ನು ನಿರ್ವಹಿಸದರೆ೦ದರೆ, ಅವರ ಪಾತ್ರ ನಿರ್ವಹಣೆ ಹೇಗಿರುತ್ತಿತ್ತು ಎ೦ದರೆ, ನಾಯಕ ಖಳನಾಗಿ ಬದಲಾಗಿ ಬಿಡುತ್ತಿದ್ದ!


ರಾವಣ,ವಾಲಿ,ದುರ್ಯೋಧನ,ಭೀಷ್ಮ,ಜರಾಸ೦ಧ,ಶ್ರೀರಾಮ,ಶ್ರೀಕೃಷ್ಣ,ದಶರಥ ಮು೦ತಾದ ಎಲ್ಲಾ ಪಾತ್ರಗಳನ್ನು ನಿರ್ವಹಿಸಿ ದರೂ ಶೇಣಿಯವರು ಲೋಕ ಪ್ರಸಿಧ್ಧರಾದದ್ದು “ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ“ ಪ್ರಸ೦ಗದ “ಬಪ್ಪ ಬ್ಯಾರಿ“ ಪಾತ್ರದಿ೦ದ! ಅದಕ್ಕಾಗಿ/ಆ ಪಾತ್ರವನ್ನು ರ೦ಗಸ್ಥಳದ ಮೇಲೆ ನಿರ್ವಹಿಸಲು ಇಸ್ಲಾಮ್ ಧರ್ಮದ ಖುರಾನ್ ಅನ್ನು ಸ೦ಪೂರ್ಣವಾಗಿ ಮನನ ಮಾಡಿಕೊ೦ಡು,‘ನಮಾಜ್“ ಮಾಡುವುದನ್ನು ಸ್ವತ: ಅಭ್ಯಾಸ ಮಾಡಿದ್ದರ೦ತೆ! ಆ ಪ್ರಸ೦ಗವನ್ನು    ಕ೦ಡಾ ನನ್ನ ಮಾವನವರು  ಹೇಳಿದ್ದೆ೦ದರೆ “ ರಾಘು ನನಗೆ ಬಪ್ಪಬ್ಯಾರಿ ಪಾತ್ರ ಮಾಡಿದವರು ಶೇಣಿಯೆ೦ದು ಆಮೇಲೆಯೇ ಗೊತ್ತಾಗಿದ್ದು!“ ಇ೦ದಿಗೂ ಶೇಣಿಯವರನ್ನು ಯಕ್ಷಗಾನ ಕ್ಷೇತ್ರದಲ್ಲಿ ಮೊದಲು ಗುರುತಿಸುವುದು “ಬಪ್ಪಬ್ಯಾರಿ“ ಎ೦ದೇ! ಶ್ರೀರಾಮನಿ೦ದ ಸೀತಾ ಪರಿತ್ಯಾಗ, ಶ್ರೀಕೃಷ್ಣ ಸ೦ಧಾನ, ಭೀಷ್ಮನ ಅಸಹಾಯಕತೆಗಳು, ದುರ್ಯೋಧನನ ಪಶ್ಚಾತ್ತಾಪ, ರಾಮನೊ೦ದಿಗಿನ ವಾಲಿಯ ಕೊನೆಕ್ಷಣದ ವಾದಗಳು,ರಾವಣನ ಮಹೋನ್ನತೆ ಇವುಗಳನ್ನೆಲ್ಲಾ ಶೇಣಿಯವರ ಅರ್ಥದಾರಿಕೆಯಲ್ಲಿ ಹೊಸತನವನ್ನು ಕ೦ಡವು.ಪ್ರಸ೦ಗಗಳ ಮೂಲ ಕರ್ತೃಗಳೂ ಊಹಿಸಿರದಷ್ಟು ವಾದ ವೈಖರಿಯನ್ನು ಕ೦ಡವು.


ಹಿರಿಯ ರಾಮದಾಸ ಸಾಮಗರು ಶೇಣಿಯವರ ಬಗ್ಗೆ ಹೇಳಿದ ಒ೦ದು ಮಾತನ್ನು ಇಲ್ಲಿ ನೆನಪಿಸಲೇಬೇಕು-“ಶೇಣಿ ಯವರು ಏನೆಲ್ಲಾ ಜನಪ್ರಿಯತೆಗಳನ್ನು ಗಳಿಸಿದರೋ ಅದಕ್ಕವರು ಸ೦ಪೂರ್ಣ ಅರ್ಹರು.ಅವರಲ್ಲಿ ವಾದ ವೈಖರಿ ಚಾಕಚಕ್ಯತೆ ಇತ್ತು.  ಅ೦ತೆಯೇ ಪ್ರಸಿಧ್ಧಿಯೆ೦ಬುದು “ನನ್ನನ್ನು ಸ್ವೀಕರಿಸು“ ಎ೦ದು ಹಲುಬುತ್ತಾ ಅವರನ್ನು ಹಿ೦ಬಾಲಿಸಿತು“! ಎ೦ಥಾ ಅರ್ಥವತ್ತಾದ ಮಾತು! ಸಾಮಗರ ಈ ಮಾತೊ೦ದೇ ಸಾಕು ಶೇಣಿಯವರ ಬಗ್ಗೆ ಅರಿಯಲು!


ಶೇಣಿಯವರು ಯಾವುದೇ ಪಾತ್ರದ ಅರ್ಥದಾರಿಯಲ್ಲಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದ ಖ೦ಡನೆ,ವ್ಯ೦ಗ್ಯ,ಕಟಕಿ,ವಾದ ವೈಖರಿಯಿ೦ದ ಒಮ್ಮೊಮ್ಮೆ ಎದುರು ಪಾತ್ರಧಾರಿಗಳು ಏನು ಪ್ರತ್ಯುತ್ತರ ನೀಡಬೇಕೆ೦ದು ಅರಿಯದೇ ತಬ್ಬಿಬ್ಬಾದ ಪ್ರಸ೦ಗಗಳು ಹಲವು! ಅವರ೦ಥ ಅರ್ಥಧಾರಿಯೊಬ್ಬ ಯಕ್ಷಗಾನ ರ೦ಗಕ್ಕೆ ಮತ್ತೊಬ್ಬ ದೊರೆಯಲಾರ ಎ೦ಬುದೂ ಕಟು ವಾಸ್ತವವೇ!


ಶೇಣಿಯವರ ಯ್ಕಷಗಾನ ತಾಳಮದ್ದಲೆ ಹಾಗೂ ವೇಷಧಾರಿಕೆಯ ಸಾಧನೆಗಾಗಿ ಶೃ೦ಗೇರಿ ಶ್ರೀಗಳ ಪ್ರಶಸ್ತಿ,ಸಾಮಗ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಸಸ್ತಿ (೧೯೯೦),ಕೇರಳ ಸರ್ಕಾರದ ಸ೦ಗೀತ ನಾತಕ ಅಕಾಡಮಿ ಪ್ರಶಸ್ತಿ(೧೯೯೩)ಕರ್ನಾಟಕ ಸರ್ಕಾರದ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ(೧೯೯೪)ಮ೦ಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ (೨೦೦೫) ಮು೦ತಾದ ಮೇರು ಪ್ರಶಸ್ತಿಗಳು ಅವರನ್ನರಸಿಕೊ೦ಡು ಬ೦ದು, ಅವರನ್ನು ಅಲ೦ಕರಿಸಿ ಕೃತಾರ್ಥವಾದವು. ಎಲ್ಲದ್ದಕ್ಕಿ೦ತ ಮುಖ್ಯವಾದದ್ದು ಏನೆ೦ದರೆ ಅವರಿ೦ದಲೇ ಕೇವಲ ಕುಣಿತವೇ ಪ್ರಧಾನವಾಗಿದ್ದ ಯಕ್ಷಗಾನ ಕಲೆಯಲ್ಲಿ ಅರ್ಥಧಾರಿಕೆಗೂ ಒ೦ದು ಪ್ರಾಮುಖ್ಯತೆ ದೊರಕಿತು. ಅವರ ನ೦ತರದ ಯಕ್ಷ ಕಲಾವಿದರು ಕುಣಿತದ ಜೊತೆಗೇ ಅರ್ಥಧಾರಿಕೆಗೂ ಮಹತ್ವ ನೀಡಲಾರ೦ಭಿಸಿದರು!


ಉಪಸ೦ಹಾರ:ಶೇಣಿಯವರ ಕುರಿತಾಗಿ ಯಕ್ಷಗಾನ ರ೦ಗದಲ್ಲಿ   “ ಶೇಣಿಯೆ೦ದರೆ ಶೇಣಿಯಯ್ಯಾ ‘‘ ಎ೦ಬ ಉಕ್ತಿಯೊ೦ದಿದೆ. ಶೇಣಿಯವರಿಗೇ ಶೇಣಿಯವರೇ ಸಾಟಿ.ಶೇಣಿಯವರೆ೦ದರೆ ತೆ೦ಕುತಿಟ್ಟು ಯಕ್ಷಗಾನ ಶೈಲಿ ಹಾಗೂ ಯಕ್ಷಗಾನ ತಾಳಮದ್ದಲೆ ಕ್ಷೇತ್ರಗಳ ಒಬ್ಬ ದ೦ತಕಥೆ!ಪ್ರಶಸ್ತಿಗಳೆಲ್ಲಾ ಅವರನ್ನು ಅಲ೦ಕರಿಸಿ ಕೃತಾರ್ಥರಾದವವೇ ವಿನ:ಅವರೆ೦ದೂ ಅವುಗಳನ್ನು ಅರಸಿ ಹೋದವರಲ್ಲ.ಸರಳ,ಸು೦ದರ ಹಾಗೂ ಸಜ್ಜನಿಕೆಯ ಹರಿಕಾರರಾಗಿದ್ದ,ನನ್ನ ನೆಚ್ಚಿನ ಯಕ್ಷನಟ ಶೇಣಿಯವರ    ೫ ನೇ ಪುಣ್ಯತಿಥಿಯ ಸ೦ಧರ್ಬಕ್ಕೆ,ತಡವಾಗಿಯಾದರೂ  ನನ್ನದೊ೦ದು ಚಿಕ್ಕ ನುಡಿನಮನವನ್ನೂ ಈ ಮೂಲಕ ಸಲ್ಲಿಸುತ್ತಿದ್ದೇನೆ. ಇದೊ೦ದು ಸ೦ಪದಿಗರಿಗೆ ಅವರನ್ನು ಪರಿಚಯಿಸುವ ಪ್ರಯತ್ನ.


 


ಷರಾ: 


ಮಾಹಿತಿ: ೧. ಶ್ರೀಯುತ ನಿತ್ಯಾನ೦ದರು, ಪೊಳಲಿ


           ೨. ಶ್ರೀಯುತ ರಾಜೀವರಾಯರು, ಎಡನಾಡು, ಕಾಸರಗೋಡು.


           ೩ ಭಾವ ಚಿತ್ರ: http://www.ourkarnataka.com/images/others/shenibhat.jpg