ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು

Submitted by bhatkartikeya on Sat, 08/21/2010 - 12:14
ಬರಹ

 


'ಓ ಶಿಟ್, ಆಲ್ರೆಡೀ ಏಯ್ಟ್ ಥರ್ಟೀ’ ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡು ನಿನ್ನೆಯ ಪರಿಮಳದ ಸಾಕ್ಸನ್ನು ಒಮ್ಮೆ ಮೂಸಿದಾಗ ಜುಮ್ಮೆಂದಿತು. ’ಪರವಾಗಿಲ್ಲ’ ಎಂದು ಕಾಲಿಗೊಂದರಂತೆ ಕೀಲಿಸಿ ಮನೆ ಬಿಟ್ಟಾಗ ಎಂಟೂ ಮೂವತ್ತೈದು. ಗಡಿಬಿಡಿ ದಿನದ್ದೇ ಆದರೂ ಒಂಭತ್ತೂವರೆಗೇ ಶುರುವಾಗುವ ಟ್ರೀನಿಂಗ್ ಇವತ್ತಿನ ವಿಶೇಷವಾಗಿತ್ತು.


ಬಸ್ ಸ್ಟಾಂಡಿನಲ್ಲಿ ನಿಂತಿದ್ದ ಜನರು ಬಸ್ಸಿಗಾಗಿ ಹೊಂಚುಹಾಕುತ್ತಿದ್ದಾರೆ. ಗಾಳಕ್ಕೆ ಹುಳು ಸಿಕ್ಕಿಸಿ ಮೀನಿಗಾಗಿ ದಂಡೆಯಮೇಲೆ ಕಾಯುತ್ತಿದ್ದವರಂತೆ ಕತ್ತುದ್ದ ಮಾಡಿ ಬಸ್ಸಿನ ಬರುವನ್ನು ಕಾಯುತ್ತಿದ್ದಾರೆ. ಕೆಲವೊಬ್ಬರು ಬಸ್ಸು ಈಗಾಗಲೇ ಹೊರಟು ಹೋಗಿದೆ ಎಂಬ ಅಭಿಪ್ರಾಯದಲ್ಲಿ ರಸ್ತೆಯ ಇನ್ನೊಂದು ಬದಿಗೂ ಕಣ್ಣುಹಾಯಿಸಿ ಬಸ್ಸು ಹೋಗಿರಬಹುದಾದ ಸಾಕ್ಷಿಗಳಿಗೆ ಹುಡೂಕುತ್ತಿದ್ದಾರೆ. ರಶ್ಶಿರಲಿ ಬಿಡಲಿ, ಜಾಗ ಸಿಗಲಿ ಬಿಡಲಿ ಜೋತಾಡಿಕೊಂಡಾದರೂ ಸರಿ; ಬರುವ ಬಸ್ಸಿಗೆ ಹೋಗಲೇ ಬೇಕು ಎಂಬ ತೀರ್ಮಾನದಲಿ ಸಿಗ್ನಲ್ಲಿನ ಹಿಂದುಗಡೆ ಬಸ್ ಪ್ರತ್ಯಕ್ಷವಾಗುವ ಮಹಾಪರ್ವಕ್ಕೆ ಹಪಹಪಿಸುತ್ತಿದ್ದಾರೆ. ಸ್ವಲ್ಪ ಸೆಕೆಯಾಗಿರಬೇಕು.. ಅವರಲ್ಲೊಬ್ಬ ಶರ್ಟ್ ಗುಂಡಿ ಬಿಚ್ಚಿದ್ದಾನೆ.. ಉದ್ದ ತೋಳಿನ ಅಂಗಿ ಕೈಯ ಅಂಚನ್ನು ಹಿಡಿದು ಮೇಲಕ್ಕೆಳೆದುಕೊಂಡಿದ್ದಾನೆ. ’ಬಸ್ ಬರದೇ ಇದ್ದರೆ ನಾಲ್ಕು ಬಾರಿಸಿಬಿಡುತ್ತೇನೆ’ ಎಂಬ ನಿಲುವಿನಲ್ಲಿ ಮುಂದೆ ಬಂದು ನಿಂತಿದ್ದಾನೆ. ಆದರೂ ಬಸ್ ಬರುತ್ತಿಲ್ಲ.


ಅಷ್ಟರಲ್ಲಿ ಒಂದಿಷ್ಟು ಜನ ಬಸ್ಸನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಮಾತನಾಡತೊಡಗಿದ್ದಾರೆ. ಸಾರಾಂಶ್ವಾಗಿ ಬಸ್ಸು ಇವತ್ತು ಬರುವುದೇ ಇಲ್ಲ ಎಂಬ ತೀರ್ಮಾನಕ್ಕೂ ಬಂದವರಂತೆ ಕಾಣುತ್ತಿದ್ದಾರೆ. ಒಂದಿಬ್ಬರು ಆಟೋ ಹಿಡಿದು ಹೋಗುವ ಸಲಹೆ ಕೊಟ್ಟರೇ ಹೊರತು ಯಾರೂ ಹೊರಡಲಿಲ್ಲ.ಇನ್ನೋದಿಷ್ಟು ಜನ ಬಸ್ ಸ್ಟಾಂಡೀನ ಕಡೆಗೇ ಬರುತ್ತಿರುವ ಜನರನ್ನು ನೋಡಿ ’ಛೇ ಫುಲ್ ರಶ್ಶಾಗುತ್ತೆ’ ಎಂದು ಮುಖ ಸಿಂಡರಿಸಿದ್ದಾರೆ. ನಿಂತವರ ವೈಯಕ್ತಿಕ ವಿಚಾರಗಳೆಲ್ಲವೂ ಸೇರಿ ಸಾಮೂಹಿಕ ವೇದನೆಯಾಗಿ ಬಸ್ ಸ್ಟಾಂದಿನಿಂದ ಹೊರಬರುತ್ತಿವೆಯೋ ಎಂಬಷ್ಟು ಅಸಹನೀಯ ಮುಖ ಮಾಡಿ ಎಲ್ಲರೂ ನಿಂತಿದ್ದಾರೆ. ಆಗ ಬಸ್ಸು ಬರುತ್ತದೆ.


ಅದು ಸ್ವಲ್ಪ ಇಳಿಜಾರು ರಸ್ತೆ. ಇಳಿಜಾರಿನ ಪ್ರಾರಂಭದಲ್ಲಿ ಸಿಗ್ನಲ್ ಇದೆ. ಅದರ ಕೆಳಗೆ ಈಗ ಬಸ್ ನಿಂತಿದೆ. ಸಿಗ್ನಲ್ ದಾಟಿದ್ದೇ ಬಸ್ ಸ್ಟಾಂಡು.ಈಗಷ್ಟೇ ಇಲ್ಲಿ ಚಡಪಡಿಕೆ ಪ್ರಾರಂಭವಾಗಿದೆ. ಇಷ್ಟೊತ್ತು ತಮ್ಮ ಜೊತೆಗೇ ಕಾಯುತ್ತಿದ್ದ ಬ್ಯಾಗ್ ಗಳನ್ನು ಮುಟ್ಟಿ ಮುಟ್ಟಿ ಸಿದ್ಧರಾಗುತ್ತಿದ್ದಾರೆ. ಪಕ್ಕದಲ್ಲಿದ್ದವರಿಗಿಂತ ಬೇಗ ಬಸ್ ಹತ್ತಿ ಸೀಟು ಹಿಡಿದು ಕುಳಿತುಬಿಟ್ಟರೆ ಇಳಿಯುವವರೆಗೆ ತೊಂದರೆಯಿಲ್ಲ ಎಂದುಕೊಳ್ಳುತ್ತಲೇ ಸುತ್ತಮುತ್ತಲಿದ್ದವರೆಲ್ಲಾ ಶತ್ರುಪಾಳೆಯದವರಂತೆ ಕಾಣುತ್ತಿದ್ದಾರೆ. ತಮ್ಮ ತಮ್ಮ ಅಸ್ತ್ರಗಳನ್ನು ಕೈಗೆತ್ತಿಕೊಂಡು ದಾಳಿಮಾಡಲು ಸನ್ನದ್ಧರಾದ ಸೈನಿಕರ ಗುಂಪೊಂದು ಈಗ ಬಸ್ ಸ್ಟಾಂಡಿನ ಎದುರಿನ ರಸ್ತೆಯ ಅಂಚಿನಲ್ಲಿದೆ.


  


 


ಕೆಲವರಿಗೆ ಆ ಬಸ್ಸಿನ ಬೋರ್ಡು ಅಲವರಿಕೆಯನ್ನುಂಟು ಮಾಡಿದೆ. ತಮಗೆ ಬೇಕಾದ ಊರಿನ ಹೆಸರನ್ನು ಆರಿಸುವ ಕೆಲಸ ಬಂತಲ್ಲಾ ಎಂದು ಬೇಸರಿಸಿಕೊಂಡಿದ್ದಾರೆ. ಕೆಲವರು ಬೋರ್ಡಿನಲ್ಲಿರುವ ಸಂಖ್ಯೆಮಾತ್ರದಿಂದಲೇ ’ಇದು ನಮ್ಮದೇ ಬಸ್’ ಎಂದು ಕಂಡುಹಿಡೀದಿದ್ದಾರೆ. ಸ್ವಲ್ಪ ಅನುಭವಸ್ಥರಂತೆ  ಕಾಣುವ ಇನ್ನೊಂದಿಬ್ಬರು ಬಸ್ಸಿನ ಬೋರ್ಡಿನ ಕಡೆ ತಿರುಗಿಯೂ ನೋಡದೇ ತಮ್ಮದೇ ಎಂಬ ನಿರ್ಧಾರಕ್ಕ್ಕೆ ಬಂದಿದ್ದಾರೆ ಹಾಗೂ ಬಸ್ಸು ಇಲ್ಲೇ ಬಂದು ನಿಲ್ಲುತ್ತದೆ ಎಂಬ ತೀವ್ರ ವಿಶ್ವಾಸದಿಂದ ಬಸ್ ಸ್ಟಾಂಡಿಗಿಂತ ಎರಡು ಹೆಜ್ಜೆ ಮುಂದೆ ಹೋಗಿ ನಿಂತಿದ್ದಾರೆ. ಉದ್ದ ಜಿಗಿತ ಸ್ಪರ್ಧೆಯ ಕೊನೆಯ ಹಂತದ ಸುತ್ತಿಗೆ,ದೂರದಿಂದ ಓಡಿಬಂದು ಗೆರೆಯ ಮೇಲೆ ನಿಂತವರಂತೆ ಇಲ್ಲಿಂದಲೇ ಬಸ್ಸಿನ ಬಾಗಿಲಿಗೆ ಜಿಗಿಯುತ್ತೇನೆ ಎನ್ನುವ ಉತ್ಸಾಹದಲ್ಲಿ ಇನ್ನೂ ಕೆಲವರಿದ್ದಾರೆ. ಬಸ್ಸು ಹಸಿರಾದ ದಾರಿ ಸಂಕೇತವನ್ನು ಹಿಂಬಾಲಿಸಿ ಮುಂದೆ ಬರುತ್ತಲಿದೆ. ಬೋರ್ಡಿನ ಕೇಸರೀ ಬಣ್ಣದ ಅಕ್ಷರಗಳು ದಿಕ್ಕೆಟ್ಟವರಂತೆ ಓಡೂತ್ತಿವೆ. ಪಕ್ಕದಲ್ಲಿ ಸ್ಥಿರವಾಗಿದ್ದ ಅಂಕೆಗಳು ಹಳೇ ಆಫೀಸಿನ ಕಾರಕೂನ ಬರೆದಿಟ್ಟ ಯಾವುದೋ ರಸೀದಿ ಸಂಖ್ಯೆಯಂತೆ ಕಾಣುತ್ತಿವೆ. ವಿಷಾದಭಾವದಲ್ಲಿ ಖೈದಿಯ ಬಿಳೀ ಬಟ್ಟೆಯ ಮೇಲಿನ ಅಪರಾಹಿ ಸಂಖ್ಯೆಯಂತೆಯೂ ಕಂಡು ’ದಾರಿ-ದಾರ್ಶನಿಕ’ರಿಗೆ ಆಹಾರವಾಗಿದೆ.


ನಿಲ್ಲುವ ಮೊದಲೇ ಟುಸ್ ಎಂದು ಹೈಡ್ರಾಲಿಕ್ ಬಾಗಿಲುಗಳು ಬೇರ್ಪಡುತ್ತಿದ್ದಂತೆಯೇ ಬಿಳೀ ಬಣ್ಣದ ಕಂಡಕ್ಟರ್ ಎದುರಾಗುತ್ತಾನೆ.ಉದ್ದ ಜಿಗಿತದವರು, ಅನುಭಸ್ಥರೆಲ್ಲಾ ಈಗಾಗಲೇ ಬಸ್ ಹತ್ತಾಗಿದೆ. ಹಿಂದಿನಸಾಲಿನ ಸೀಟೊ ಬಿಡದಂತೆ ಆಸೀನರಾಗಿದ್ದಾರೆ. ಇದು ತಮ್ಮ ಹಳೇ ತಲೆಮಾರಿನ ಬಳುವಳಿ; ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಬಿದ್ದು ಕೂತಿರುವಂತೆ ಕಾಣುತ್ತದೆ. ಕೆಲವರಂತೂ ಎಷ್ಟೋ ವರ್ಷ ಇಲ್ಲೇ ಕುಳಿತವರಂತೆ ಕಾಣುತ್ತಾರೆ. ಬಸ್ಸು ಹೊಸದು. ’ಹೆಂಗಸರು/ಗಂಡಸರು’ ಎಂದು ಯಾವುದೇ ಸೂಚನೆ ಬರೆಯದೇ ಇದ್ದರೂ ಹಳೇ ಅಭ್ಯಾಸದಂತೆ ಹೆಂಗಸರೆಲ್ಲಾ ಮುಂದೇ ಕುಳಿತಿದ್ದಾರೆ. ಮತ್ತೆ ಟುಸ್ ಎಂದು ಬಾಗಿಲುಗಳು ಮುಚ್ಚುತ್ತಿದಂತೆಯೇ ಓಡಿ ಬಂದ ಒಬ್ಬ.. ’ಇದು ಮಾರೇನಹಳ್ಳಿ ಫ್ಲೈ ಓವರ್ ಮೇಲೆ ಹೋಗುತ್ತಾ?..."
ಎಂದು ಕೇಳುತ್ತಿದ್ದಾನೆ. ಮುಚ್ಚಿಕೊಳ್ಳುತ್ತಿದ್ದ  ಬಾಗಿಲುಗಳು ಅವನ ಪ್ರಶ್ನೆ ಒಂದು ಪ್ರಶ್ನೆಯೇ ಅಲ್ಲ ಎಂಬರ್ಥದಲ್ಲಿ ವರ್ತಿಸುತ್ತಾ ಹೊರಗಿನ ಧ್ವನಿಯನ್ನು ಕ್ಷೀಣ ಗೊಳಿಸಿ ಕೊನೆಗೊಮ್ಮೆ ಮಾಯ ಮಾಡಿವೆ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕೊನೇ ಪ್ರಶ್ನೆಯೊಂದಕ್ಕೆ ಉತ್ತರ ಸಿಗದವನಂತೆ ಮುಖಮಾಡಿ ನಿಂತವನ ಹಿಂದಿಕ್ಕಿ ಬಸ್ಸು ಹೊರಟಾಗ ಪ್ರಯಾಣಿಕರು ಹೊರಜಗತ್ತಿನ ಕೊಂಡಿಯೊಂದರಿಂದ ಸಂಪೂರ್ಣವಾಗಿ ಕತ್ತರಿಸಲ್ಪಡುತ್ತಾರೆ.


ಈ ಹೊಸಾ ಬಸ್ಸಿನ ಬಾಗಿಲುಗಳು ಜಾಸ್ತಿ ಶಬ್ದ ಮಾಡುವುದಿಲ್ಲ. ಸೀಟಿಗಿನ್ನೂ ಎಣ್ಣೆ ವಾಸನೆ ಹಿಡಿದಿಲ್ಲ. ನಿಂತವರು ಜೋತಾಡಲು ಇರುವ ಗಳುಗಳೆಲ್ಲ ಗಟ್ಟಿಮುಟ್ಟಾಗಿವೆ. ಅದಲ್ಲದೆ ರಸ್ತೆ ಕ್ಯಾಮರಾಗಳ ನೇರಪ್ರಸಾರ ಮಾಡುವ ಟೀವಿಯೊಂದುತನ್ನ ಕ್ಯಾಬಿನ್ನಿನೊಳಗೇ ಬಂಧಿಯಾದ ಚಾಲಕನ ಎದುರಿನಲ್ಲಿದೆ. ಕಂಡಕ್ಟರನ ಕೈಯಲ್ಲಿ ಟಿಕೆಟ್ ಕೊಡುತ್ತಾ ಸುರುಳಿ ಬಿಚ್ಚುವ ಪೆಟ್ಟಿಗೆ, ಬೇಡವೆಂದರೂ ನಿಲ್ಲಿಸದ ಎಫ್.ಎಂ ರೇಡಿಯೋ, ಅಗಲ ಗಾಜಿನ ಒಮ್ಮುಖ ಪಾರದರ್ಶಕ ಗೋಡೆಗಳು, ಅವೇ ಬಸ್ಸಿನ ಕಿಟಕಿಗಳು.. ಹವನಿಯಂತ್ರಿತ ವಾತಾವರಣ, ತಮ್ಮ ತಲೆಗೆ ಮಾತ್ರ ಗಾಳಿ ಬಿಟ್ಟಿಕೊಳ್ಳಲು ಪ್ರತಿ ಸೀಟಿನ ಮೇಲೆ ತಂಪು ಪಂಕಗಳ ವ್ಯವಸ್ಥೆ..ಇನ್ನೂ ಏನೇನೋ.. ಡ್ರೈವರ್ ಈಗ ಕಂಡಕ್ಟರನ ಹತ್ತಿರ ಮಾತಾಡುತ್ತಲೇ ಮುಂದಿನ ಸಿಗ್ನಲ್ನಲ್ಲಿ ಬಸ್ಸನ್ನು ನಿಲ್ಲಿಸುತ್ತಾನೆ. ಸಿಗ್ನಲ್ಲ್ನಲ್ಲಿ ಬಂದು ಬಾಗಿಲು ಬಡಿಯುವವರಿಗೆ ’ತೆಗೆಯುವುದಿಲ್ಲ’ ಎಂಬಂತೆ ಕೈಸನ್ನೆ ಮಾಡಿ ತನಗಿರುವ ಅಧಿಕಾರವನ್ನು ಅಥವಾ ಸಾಧ್ಯತೆಯೊಂದನ್ನು ಪ್ರಯೋಗ ಮಾಡಿದ ಕೃಥಾರ್ಥ ಭಾವನೆಗೆ ಗುರಿಯಾದ ವ್ಯಕ್ತಿಯಂತೆ ಚಾಲಕ ಕಾಣುತ್ತಾನೆ.


ಇನ್ನು ಹತ್ತಿದವರಿಗೆ ಸೀಟಿಲ್ಲ. ಕುಳಿತವರೆಲ್ಲಾ ತಪಸ್ವಿಗಳಂತೆ, ಏನನ್ನೋ ಜಪಿಸುತ್ತಿರುವಂತೆ ಭಾಸವಾಗುತ್ತಿದೆ. ಯಾರೂ ಸಹ ಯಾರ ಮುಖವನ್ನೂ ನೋಡುತ್ತಿಲ್ಲ. ಪುಸ್ತಕಗಲಲ್ಲೋ, ಪತ್ರಿಕೆಗಳಲ್ಲೋ ಮುಖ ಹುದುಗಿಸಿ, ತಾವು ಯಾರಿಗೂ ಕಾಣುತ್ತಿಲ್ಲ ಎಂಬ ಬಧ್ರತೆಯನ್ನು ಅನುಭವಿಸುತ್ತಿರುವಂತೆ ತೋರುತ್ತದೆ. ನಿಂತವರಲ್ಲಿ ಕೆಲವರು ನಿಂತಿದ್ದೇವಲ್ಲ ಎಂಬ ಕಾರಣಕ್ಕೆ ಹೊರಗಡೆ ದೃಷ್ಟಿ ಹಾಯಿಸಿದ್ದಾರೆ. ಇನ್ನು ಸ್ವಲ್ಪ ಮಂದಿ ತಮ್ಮ ಚೀಲಗಳನ್ನು ಆ ಹೆಗಲಿನಿಂದ ಈ  ಹೆಗಲಿಗೆ ವರ್ಗಾಯಿಸುತ್ತಾ ಕಾಲ ಕಳಿಯುತ್ತಿದ್ದಾರೆ. ಕೈಯಲ್ಲಿ ಬ್ಯಾಗ್ ಹಿಡಿದವರು ಕಂಡಕ್ಟರ್ ಬಂದು ಟಿಕೆಟ್ ಅಂದಾಗ ಹಣ ತೆಗೆಯಲು ಪರ್ಸಿಗೆ ಯಾವ ಕೈ ಹಾಕಬೇಕೆಂದು ಗೊತಾಗದೇ ಗೊಂದಲಕ್ಕೀಡಾಗಿದ್ದಾರೆ.’ಬ್ಯಾಗ್ ಅಲ್ ಮೇಲ್ ಇಡಿ.. ಇಲ್ಲಾಂದ್ರೆ ಕೂತವರ ಕೈಗೆ ಕೊಡಿ’ ಅಂದರೆ ಕೇಳುತ್ತಿಲ್ಲ. ಆ ಬ್ಯಾಗುಗಳಲ್ಲಿ  ಅವರ ಹೊರಗಿಣುಕಿ ನೋಡುವ ಫೈಲುಗಳಿವೆ.. ಕನ್ನಡ ಶಾಲೆ ಮಾಸ್ತರ್ರು ಅಥವಾ ಅವರವರ ಅಪ್ಪಂದಿರು ಕೊಟ್ಟ ಹಳೇ ಇಂಕ್ ಪೆನ್ ಇದೆ.. ಅಥವಾ ಇರಬಹುದು. ಮನೆಯಿಂದ ಪಂದ ಟಿಫನ್ ಕ್ಯಾರಿಯರ್ ಗಳಿರಬಹುದು. ಅದರಲ್ಲಿ ಬಿಸಿ ಬಿಸಿ ಪುಳಿಯೋಗರೆ ಗೊಜ್ಜಿರಬಹುದು. ಈಗ ಸ್ವಲ್ಪ ತಣ್ಣಗಾಗಿರಬಹುದು. ಅಥವಾ ಬ್ಯಾಗ್ ಖಾಲಿಯೂ ಇರಬಹುದು. ಖಾಲಿತನವಿರಲಿ ಬಿಡಲಿ, ಒಟ್ಟಿನಲ್ಲಿ ಹಿಡೀದವನ ಮನಸ್ಸಿಗೆ ಜೊತೆಯಲ್ಲಿದ್ದೇನೆ ಎಂಬ ನೆಮ್ಮದಿ ಕೊಡುವ ಬ್ಯಾಗುಗಳನ್ನು ಬಿಟ್ಟು ಅವರು ಇರಲಾರರು. ಅದಕ್ಕೇ ಒಂದು ಕೈಲಿ ಬ್ಯಾಗ್ ಹಿಡಿದೇ ಸಾಹಸ ಮಾಡುತ್ತಿದ್ದಾರೆ.


ಬಸ್ಸಲ್ಲಿ ಕುಳಿತವರೆಲ್ಲರೂ ಮೂಕವಿಸ್ಮಿತರು. ಬಸ್ ಹತ್ತುವಾಗ ಮಾತಾಡುತ್ತಿದ್ದವರೂ ಸಹ ಬಸ್ ಹತ್ತಿದ ಮೇಲೆ ಮಾತುಕಳೆದುಕೊಂಡವರಂತೆ, ಪಕ್ಕದಲ್ಲಿದ್ದವ್ರೂ ಅಪರಿಚಿತರಂತೆ ವರ್ತಿಸುತ್ತಿದ್ದಾರೆ. ಕಂಡಕ್ಟರ್ ಮಾತ್ರ ಆಗಾಗ ಅದೂ ಇದೂ ಅಂತ ಬಡಬಡಾಯಿಸುತ್ತಿದ್ದಾನೆ. ’ಎಲ್ಲಿಗೆ? ಪಾಸು ತೆಗಿರ್ರೀ’ ಎಂದೆಲ್ಲಾ ಮೂಕಿಜನರ ಬಾಯಿಬಿಡಿಸಲು ಪ್ರಯತ್ನಿಸುತ್ತಿದ್ದಾನೆ ಶಾಲಾ ಪರೀಕ್ಷೆ ಕೋಂಎಯಲ್ಲಿ ಪರಿವೀಕ್ಷಕರು ತಿರುಗಿದಂತೆ ಬಸ್ಸಿನ ಉದ್ದಗಲಕ್ಕೂ ಒಮ್ಮೆ ತಿರುಗಿ ಬಂದು ಮತ್ತೆ ಆಸೀನನಾಗುತ್ತಾನೆ. ಈ ಪ್ರಕ್ರಿಯೆ ಬಹಳ ಸಾರಿ ನಡೆದರೂ ಪ್ರತಿ ಸಲವೂ ಹೀಗೆ ಏಕೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲದವನಂತೆಯೇ ಇತ್ತು ಅವನ ಮುಖಭಾವ.


ಹಳೇ ಬಸ್ಸುಗಳಂತೆ ಈ ಬಸ್ಸಿಗೆ ಕಿಟಕಿಗಳೇ ಇಲ್ಲ.. ಕಿಟಕಿ ಸರುಗಳೂ ಇಲ್ಲ.. ಎಲ್ಲಾ ಗಾಜಿನ ಗೋಡೆಗಳು.. ಅದರ ಮೇಲೆ ಅಂಟಿಸಿದ ಬಣ್ಣಬಣ್ಣದ ಅರೆಪಾರದರ್ಶಕ ಜಾಹೀರಾತುಗಳು.. ಒಳಗೆ ಕೂತ ಯಾರಿಗೂ ಈ ಬಣ್ಣಗಳು ಕಾಣುವುದೇ ಇಲ್ಲ..ಇವೆಲ್ಲವನ್ನೂ ಮೊದಲೇ ನೋಡಿದ್ದೇನೆ.. ಏನೂ ವಿಶೇಷವಿಲ್ಲ ಎಂಬಂತಿರುವ ಅವರುಗಳು ನೋಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಆಸಕ್ತಿ ತೋರಬಯಸುವ ಮನಸುಗಳೂ ದಾಕ್ಷಿಣ್ಯ ತೋರುತ್ತಿದ್ದಾವೆ... ನಟಿಸುತ್ತಿದ್ದಾವೆ..ಮಾತನಾಡಲು ಕಾರಣವಿದ್ದೂ ಮಾತನಾಡಿದರೆ ಎಲ್ಲಿ ತಪ್ಪಾಗುತ್ತದೋ ಎಂದು ಮೌನವ್ರತ ವಹಿಸಿದ್ದಾವೆ.. ಪಕ್ಕದವರ ಪುಸ್ತಕದಲ್ಲಿ ಅಥವಾ ಪತ್ರಿಕೆಯ ಒಳಗೆ ಹಣಕಲು ಅವಕಾಶವಿದ್ದೂ ವಿಚಿತ್ರ ಹಿನ್ನೆಡೆ ಅನುಭವಿಸಿದ್ದಾವೆ. ಎಲ್ಲಿ ಮಾತಾಡಿಬಿಡುತ್ತೇನೋ ಅಥವಾಇಲ್ಲಿ ಇತರರು ಮಾತಾಡಿದ್ದು ಕೇಳಿಬಿಡುತ್ತದೋ ಎಂದು ಭಯಪಟ್ಟಿದ್ದಾವೆ.. ಈ ಭಯವೇ ಕೂತವರ ದಾಕ್ಷಿಣ್ಯವಾಗಿ ಮಾರ್ಪಟ್ಟೀದೆ. ಮುಖದಲ್ಲಿ ಯಾವ ಭಾವನೆಯೂ ಇಲ್ಲದೆ, ಮನೆಯಿಂದ ಬರುವಾಗ ಬಿಸಿ ಬಿಸಿ ಕಾದ ಇಸ್ತ್ರಿಪೆಟ್ಟಿಗೆಯಿಂದ ಮುಖಕ್ಕೆ ಇಸ್ತ್ರಿ ಹಾಕಿಕೊಂಡು ಬಂದವರಂತೆ ಕೂತುಬಿಟ್ಟಿದ್ದಾರೆ. ಎಫ್.ಎಮ್ ಮಾತ್ರ ತನಗೆ ಬೆಕಾದ ಹಾಡನ್ನು ತನ್ನ ಪಾಡಿಗೆ ತಾನು ಗುನುಗಿಕೊಳ್ಳುತ್ತಿದೆ. ಆರ್ ಜೆಗಳ ಧ್ವನಿಗಳು ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಅಡಿಕೆಯಿಂದ ಮಧ್ಯೆ ಮಧ್ಯೆ ತೂರಿಬರುತ್ತಿವೆ. ಯಾವುದೇ ಭಾಷೆಯ ಯಾವುದೇ ಹಾಡು ಬಂದರೂ ಜನರದ್ದು ಒಂದೇ ಭಾವ. ಸ್ಥಿತಪ್ರಜ್ಞ ಗಂಭೀರವದನಗಳಿಂದ ಅಲಂಕೃತರಾದ ಪ್ರಯಾಣಿಕರು ಯಾವ ಸಂಗತಿಗಳು ಜರ್ಗಿದರೂ ತಾವಿರುವುದು ಹೀಗೇ ಎಂದು ಕುಳಿತ ರಸ್ತೆ ಬದಿಯ ವಿಗ್ರಹಗಳಿಗೆ ಉಪಮೆಯಾಗುತ್ತಾರೆ.


ಮುಂದಿನ ಸರ್ಕಲ್ಲಿನಲ್ಲಿ ಮತ್ತೆ ಸಿಗ್ನಲ್ಲು.. ಹಸಿರಿಂದ ಕೆಂಪಗಾಗುವ ಹಂತದಲ್ಲಿ.. ಬಸ್ಸಿನ ವೇಗೋತ್ಕರ್ಷ ಹೆಚ್ಚುತ್ತಿದೆ. ರೊಯ್ಯನೆ ಸರ್ಕಲ್ ದಾಟುತ್ತಿದ್ದಂತೆಯೇ ಎದುರಿಗೆ ಮೋಟರ್ ಬೈಕ್ ಸವಾರನೊಬ್ಬ ಅಡ್ಡ ಬಂದ.. ಬಸ್ಸಿಗೆ ಬಡಿದೇ ಬಿಟ್ಟ ಎಂಬಷ್ಟರಲ್ಲಿ ಹಾರಿಕೊಂಡ.. ಬಿದ್ದ.. ಬಸ್ಸಿನಲ್ಲಿ ಕೆಲವು ಜನ ಎದ್ದು ನಿಂತಿದ್ದಾರೆ.. ಗೋಡೆಗಳಂತಿದ್ದ ಕಿಟಕಿಯಲ್ಲಿ ಕಣ್ಣಿಟ್ಟಿದ್ದಾರೆ. ಬಿದ್ದವನ ಬಳಿ ಗುಂಪು ಸೇರಿತು.. ಬಿದ್ದವ ಈಗ ಏಳುತ್ತಿದ್ದಾನೆ.. ಬಸ್ ಬಳಿಗೇ ದುರುಗುಟ್ಟಿ ನೋಡುತ್ತಿದ್ದಾನೆ.. ಏನೋ ಕೂಗುತ್ತಿದ್ದಾನೆ.. ಸಿಟ್ಟಿನಲ್ಲಿ ತುಟಿಗಳು ಅದುರುತ್ತಿವೆ.. ಕೈ ಮೇಲೆತ್ತಿ ಬಸ್ ನಿಲ್ಲಿಸಲು ಕಿರುಚುತ್ತಾ ಬರುತ್ತಿದ್ದಾನೆ..  ಅವನು ಕೂಗಿದ್ದು ಮಾತ್ರ ಬಸ್ಸಿನಲ್ಲಿರಿವ ಯಾರಿಗೂ ಕೇಳುತ್ತಿಲ್ಲ.. ಬಯ್ಯುತ್ತಿರಬೇಕು ಅಂದುಕೊಂಡಿರಬೇಕು.. ಮೂಕಿ ಚಿತ್ರ ನೋಡಿದಂತೆ ಅವರವರ ಮನಸ್ಸಿಗೆ ಬಂದಂತೆ ಅಂದುಕೊಂಡು ಅಯ್ಯೋ ಪಾಪ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಡ್ರೈವರ್ ಮಾತ್ರ ಹೆದರಿಕೆಯಿಂದ ವೇಗವನ್ನು ಇನ್ನೂ ಹೆಚ್ಚಿಸುತ್ತಲೇ ಇದ್ದಾನೆ.. ಬಿದ್ದವ ಸಣ್ಣವನಾಗುತ್ತಾ ಆಗುತ್ತಾ ಕೊನೆಗೊಮ್ಮೆ ಮಾಯವಾಗುವ ಹೊತ್ತಿಗೆ ಬಸ್ಸು ದಿನವೂ ಹೊಗುವ ದಾರಿ ಬಿಟ್ಟು ಯಾವುದೋ ಒಳ ದಾರಿ ಹಿಡಿದು ನುಗ್ಗಿತ್ತು.


ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಕೆಂಪು ಧ್ವಜ ಸಿಕ್ಕಿಸಿದ ಬೈಕುಗಳಲ್ಲಿ ಹಿಂಬಾಲಿಸುತ್ತ ಬಂದ ಹಲವರಲ್ಲಿ ಬಿದ್ದವನೂ ಇದ್ದಾನೆ!! ಚಾಲಕನ ಎದೆ ಧಸ್ ಎನ್ನುತ್ತದೆ. ಧಸ್ ಎಂದದ್ದು ಎಲ್ಲರಿಗೂ ಕೇಳಿದಂತೆ ಕುಳಿತವರೆಲ್ಲಾ ಕಂಗಾಲಾಗುತ್ತಾರೆ. ರೋಷಾವೇಷಗಳಿಂದ ತನ್ನನ್ನು ಬೀಳಿಸಿದ ಬಸ್ಸನ್ನು ಮುತ್ತಲು ಬರುವ ಉಮೇದಿಯಲ್ಲಿ ಅವನ ಮುಖ ಕೆಂಪಾಗಿದೆ. ಇಷ್ಟು ಹೊತ್ತು ತಟಸ್ಥವಾಗಿದ್ದ ಬಸ್ಸಿನ ಒಳಗಿನ ಲೋಕದಲ್ಲಿ ತಣ್ಣನೆಯ ಹೆದರಿಕೆಯ ಅಲೆಯೊಂದು ಎದ್ದು ಕೂತಿದೆ. ಅಕ್ಕ ಪಕ್ಕದವರ ಮುಖ ನೋಡಿ ಭಯವನ್ನೂ ಆತಂಕವನ್ನೂ ಹಸ್ತಾಂತರಿಸುತ್ತಾ ಅದರಲ್ಲೇ ನೆಮ್ಮದಿ ಕಂಡಂತೆಲ್ಲಾ ಆಗುವ ಭಾವನೆ ಎಲ್ಲರ ಮುಖವನ್ನು ಅಲಂಕರಿಸಿದೆ. ಬಸ್ಸಿನ ವೇಗವನ್ನು ಹೆಚ್ಚಿಸುತ್ತಾನೆ ಚಾಲಕ. ಗುಂಪು ಹಿಂಬಾಲಿಸುತ್ತಲೇ ಇದೆ. ಬಲಗಡೆಯ ಕ್ರಾಸಿನಲ್ಲಿ ಬಸ್ ತಿರುಗುತ್ತಿದ್ದಂತೆ ದೊಡ್ಡದೊಂದು ಕಲ್ಲು ಬಸ್ಸಿಗೆ ಬಡಿಯುತ್ತದೆ. ಗಾಜು ಪುಡಿಪುಡಿಯಾಗಿ ಕಲ್ಲು ಒಳನುಗ್ಗುತ್ತದೆ.. ಚಾಲಕ ಇನ್ನೂ ವೇಗ ಹೆಚ್ಚಿಸಿದ್ದಾನೆ.. ಗುಂಪು ನಿಧಾನವಾಗಿ ದೂರವಾಗುತ್ತಿದೆ.. ಬಿದ್ದ ಕಲ್ಲು ಬಸ್ಸಿನ ಒಳ ಜಗತ್ತಿನ ಪರಿಚಯವಿಲ್ಲದೆ ಸುಮ್ಮನೆ ಬಿದ್ದುಕೊಂಡಿದೆ.


 


  


 


ಕಲ್ಲು ಬಿದ್ದದ್ದೇ ತಡ ಇಷ್ಟೊತ್ತಿಲ್ಲದ ಹೊರ ಜಗತ್ತು ಒಡೆದ ಕಿಟಕಿಯಲ್ಲೇ ಒಳನುಗ್ಗುತ್ತದೆ.ಮತ್ತೆ ಆಫೀಸಿನ,ಫೈಲುಗಳ,ಬ್ಯಾಗುಗಳ,ಪೆನ್ನುಗಳ,ಟಿಫಿನ್ ಕ್ಯಾರಿಯರ್ ಗಳ ವಿಚಾರಗಳ ಆವರಣವನ್ನು ಛೇದಿಸಿ ಹೊರಗಿನ ಸದ್ದೆಲ್ಲವೂ ಒಳಗೆ ತುಂಬಿಕೊಳ್ಳುತ್ತಾ ಹೋಗುತ್ತದೆ. ’ಸಧ್ಯ ಕಲ್ಲು ಯಾರಿಗೂ ಬಡಿಯಲಿಲ್ಲ’ ಎಂದು ಸಮಾಧಾನದಿಂದ ಪಕ್ಕದವರ ಮುಖ ನೋಡುತ್ತಾರೆ. ’ಅರೆ ಇಷ್ಟೊತ್ತು ಇಲ್ಲಿ ಕೂತಿದ್ದು ನೀವೇನಾ,, ಗೊತ್ತೇ ಆಗಲಿಲ್ಲ’ ಎಂಬ ಭಾವನೆ ಇಬ್ಬರಲ್ಲೂ ಮೂಡುತ್ತದೆ. ಕೆಲವೊಬ್ಬರು ಮೊಬೈಲು ಕಿವಿಗಿಟ್ಟು ಜೋರಾಗಿ ಯಾರ ಜೊತೆಯೋ ನಡೆದ ಘಟನೆಯ ವಾರ್ತಾಪ್ರಸಾರ ನಡೆಸಿದ್ದಾರೆ.ಒಟ್ಟಿನಲ್ಲಿ ಯಾವುದೋ ವರ ಸಿಗುತ್ತಿರುವ ಹಾಗೆ ಪದೇ ಪದೇ ಆ ಒಡೆದ ಕಿಟಕಿ ಗಾಜನ್ನೇ ನೋಡುತ್ತಿದ್ದಾರೆ. ಪುಸ್ತಕಗಳಲ್ಲಿ ತಲೆ ಹುದುಗಿಸಿದವರೆಲ್ಲರೂ ಎಫ್.ಎಂ ಹಾಡಿಗೆ ತಲೆ ತೂಗುತ್ತಿದ್ದಾರೆ. ತಮ್ಮ ಬ್ಯಾಗುಗಳನ್ನು ಹೆಚ್ಚು ಒತ್ತಿಕೊಂಡು ನಿಂತಿದ್ದವರು ಕೂತವರ ಕೈಗೆ ಕೊಟ್ಟು ’ಸ್ವಲ್ಪ ಹಿಡ್ಕೊಳ್ಳಿ’ ಅಂದಿದ್ದಾರೆ. ಕುಳಿತವರು ’ಏನೋ ಆಗುತ್ತದೆ ಅಂದುಕೊಂಡಿದ್ದೆವು.. ಸದ್ಯ ಏನೂ ಆಗಲಿಲ್ಲ’ ಎನ್ನುತ್ತಾ ಬ್ಯಾಗು ಇರಿಸಿಕೊಂಡಿದ್ದಾರೆ. ಬ್ಯಾಗುಗಳ ಆತ್ಮೀಯತೆ ಅವರಿಗೂ ಇಷ್ಟವಾಗುತ್ತದೆ. ’ಯಾರೂ ಹೆದ್ರಬೇಡಿ.. ಏನೂ ಅಗಿಲ್ಲ’ ಎಂದು ಕಂಡಕ್ಟರ್ ಮಾತನ್ನು ಹಾರಿಸುವ ಯತ್ನದಲ್ಲಿದ್ದಾನೆ. ಆಗಲೇ ಕಂಡಕ್ಟರ ನೆರಮನೆಯ ಸಂಬಂಧಿಕನಂತೆ ಕಾಣುತ್ತದೆ. ವೇಗವನ್ನು ಹೆಚ್ಚಿಸುತ್ತಲೇ ಇದ್ದ ಚಾಲಕ ನೂರು ಮೀಟರ್ ಓಟಕ್ಕೆ ಮೊದಲು ಸೂಚನೆಗಾಗಿ ಕಾಯುತ್ತಿರುವವರಂತೆ ಮೈ ಬಗ್ಗಿಸಿ ಗಾಡಿ ಓಡಿಸುತ್ತಿದ್ದಾನೆ. ಬಸ್ಸು ಈಗ ಹಳೇ ಪರಿಚಯದ ಗೆಳೆಯನ ಮನೆಯಂತೆ ಕಾಣುತ್ತಿದೆ. ಆತಂಕ, ಗಾಬರಿ,ಕೋಪಗಳೆಲ್ಲಾ ಹೊಸ ಉಲ್ಲಾಸವಾಗಿ ನಗು ಬರುತ್ತಿದೆ. ಗಾಜು ಚೂರಾಗಿ ನಿರ್ಮಾಣವಾದ ಕಿಟಕಿಯಿಂದ ಸೂರ್ಯ ಬಿಸಿಲು ಕೋಲನ್ನು ನುಗ್ಗಿಸಿದ್ದಾನೆ. ಬಿಸಿಗಾಳಿ ಒಳಬರುತ್ತಿದೆ. ಅದರ ಬೆಚ್ಚನೆಯ ಅನುಭಾವಕ್ಕೆ ನೈಸರ್ಗಿಕ ಅನಿಲದ ಆಸ್ವಾದನೆಗೆ ಮುಖ ಕೊಟ್ಟವರು ಹಲವರು.


ಬಸ್ಸು ಕೊನೆಗೂ ತಿರುಗಿ ತಿರುಗಿ ತನ್ನ ಹಳೇ ಹಾದಿಗೆ ಬರುತ್ತದೆ. ದಾರಿಯನ್ನು ವೇಳೆಯಲ್ಲಿ ಅಳೆಯುವವರು ಹತ್ತು ನಿಮಿಷ ಲೇಟಾಯ್ತು ಅಂದಿದ್ದಾರೆ. ಆ ಕಿಡಿಗೇಡಿಗಳ ಗುಂಪು ದೂರಾಗಿರುವುದನ್ನು ಧೃಢಪಡಿಸಿಕೊಂಡ ಚಾಲಕ ನಿಧಾನವಾಗಿ ಸಮಚಿತ್ತಕ್ಕೆ ಮರಳುತ್ತಿದ್ದಾನೆ. ಮುಂದಿನ ಶ್ತಾಪಿನಲ್ಲಿ ಬಸ್ ನಿಲ್ಲಿಸಿ ಬಾಗಿಲು ತೆರೆಯುತ್ತಾನೆ.’ಟುಸ್’ ಎಂದ ಬಾಗಿಲುಗಳು ಈಗ ಮಹತ್ವವನ್ನು ಕಳೆದುಕೊಂಡಿವೆ. ಕುಳಿತವರು,ನಿಂತವರು,ಜೋತುಬಿದ್ದವರಿಗೆಲ್ಲಾ ಬೆಕಾದ ಹೊರಸಂಪರ್ಕ ಒಡೆದ ಕಿಟಕಿಯಿಂದಲೇ ಲಭ್ಯವಾಗಿದೆ. ಈಗ ಬಾಗಿಲ ಹೊರಗೆ ಸಿಮೆಂಟ್ ಚೀಲವನ್ನು ಹಿಡಿದ ಅಪ್ಪ, ಪುಟ್ಟ ಮಗನೊಡನೆ ನಿಂತಿದ್ದಾನೆ. ಗಾರೆ ಕೆಲಸಕ್ಕೆ ಬೆಕಾದ ಕೆಲವು ಪರಿಕರಗಳು ಚೀಲದ ಹರುಕು ಬದಿಯಿಂದ ಹೊರಗಿಣುಕುತ್ತಿವೆ. ’ಎಲೆಕ್ಟ್ರಾನಿಕ್ ಸಿಟಿ..? ಎಷ್ಟು?’ ಅಪ್ಪ ಕೇಳುತ್ತಾನೆ. ಮಗ ಒಳನುಗ್ಗಲು ಒಂದು ಕಾಲು ಫೂಟ್ ಬೋರ್ಡಿನ ಮೇಲೆ ಇಟ್ಟಾಗಿದೆ. ’ಇಪ್ಪತ್ತೈದು’ ಕಂಡಕ್ಟರ್ ಎನ್ನುವಷ್ಟರಲ್ಲೇ ಡ್ರೈವರ್ ಬಾಗಿಲು ಮುಚ್ಚಿದ್ದಾನೆ. ಅಪ್ಪ ಮಗನನ್ನು ಹೊರಗೆಳೆದುಕೊಳ್ಳುತ್ತಾನೆ. ಬಸ್ ವೇಗ ಗಳಿಸುತ್ತಿದೆ. ’ ಅದಕ್ಕೆ ಇಪ್ಪತ್ತೈದಂತೆ.. ಬೇರೆ ಬಸ್ಸಿಗೆ ಹೋಗೋಣ..’ ’ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು’ ಮಗು ಹಠಹಿಡಿದಂತೆ ಕಾಣುತ್ತಿದೆ.. ಅಪ್ಪ ಬರುತ್ತಿಲ್ಲ.. ಮಗನನ್ನೂ ಬಿಡುತ್ತಿಲ್ಲ. ಅಪ್ಪನ ಕೈಯಿಂದ ತಪ್ಪಿಸಿಕೊಂಡು ಬಸ್ ಹಿಂದೆಯೇ ಮಗ ಓಡಿ ಬರುತ್ತಿರುವುದನ್ನು ಬಸ್ಸಿನಲ್ಲಿ ಯಾರೋ ನೋಡಿದ್ದಾರೆ.. ಮತ್ತು ಎಲ್ಲರಿಗೂ ತೋರಿಸಿದ್ದಾರೆ. ’ನಾನೂ ಬರ್ತೀನಿ’ ಎಂದು ಕೂಗುತ್ತಾ ಬರುತ್ತಿರವ ಅವನನ್ನು ಬಾ ಬಾ ಎಂದು ಕೂಗುತ್ತಿದ್ದಾರೆ. ಅವನು ಕೈ ಮೇಲೆ ಮಾಡಿ ಬಸ್ಸನ್ನು ಸಮೀಪಿಸುತ್ತಿದ್ದಂತೆಯೇ ಜನ ಒಡಕು ಕಿಟಕಿಯಲ್ಲಿ ಕೈ ಹಾಕಿ ಅವನನ್ನು ಎತ್ತಿ ಒಳಕ್ಕೆಳೆದುಕೊಳ್ಳುತ್ತಾರೆ. ಬಸ್ಸಿನೊಳಗಿಂದಲೇ, ಅದೇ ರಂಧ್ರದಲ್ಲಿ ತಲೆ ಹೊರಗೆ ಹಾಕಿ ಅಪ್ಪನನ್ನೂ ಕರೆಯುತ್ತಿದ್ದಾನೆ. ನಡೆಯುತ್ತಿದ್ದ ಘಟನೆ ನೋಡಿ ದಂಗಾದ ಅಪ್ಪ ಈಗ ಬಸ್ಸಿನ ಹಿಂದೆಯೇ ಓಡಿ ಬರುತ್ತಿದ್ದಾನೆ...

ಲೇಖನ ವರ್ಗ (Category)