ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ - ಒಂದು ಅವಿಸ್ಮರಣೀಯ ವಾರಾಂತ್ಯ

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ - ಒಂದು ಅವಿಸ್ಮರಣೀಯ ವಾರಾಂತ್ಯ

ಬರಹ

ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ ಕ್ಯಾಂಪಿಂಗ್ ಪ್ರತಿ ವರ್ಷದಂತೆ ಈ ಸಲವೂ ಲೋಮಾ-ಮಾರ್ ನಲ್ಲಿತ್ತು. ಆದರೆ ೨ ವಾರಗಳ ಹಿಂದೆಯಷ್ಟೇ ಕನ್ನಡಕೂಟ ಸೇರಿದ ನಮಗೆ ಇದು ಮೊದಲನೇ ಕ್ಯಾಂಪಿಂಗ್. ಯಾರೂ ಅಷ್ಟಾಗಿ ಪರಿಚಯವಿರಲಿಲ್ಲವಾದ್ದರಿಂದ ಹೇಗೋ ಏನೋ ಎನ್ನುವ ಯೋಚನೆ ಬೇರೆ.

 

ಲೋಮಾ-ಮಾರ್ ಕ್ಯಾಲಿಫ಼ೋರ್ನಿಯಾದ ಬೇ ಏರಿಯಾದಿಂದ ಸುಮಾರು ೪೦ ಮೈಲಿಗಳ ದೂರದಲ್ಲಿರುವ ಒಂದು ಸುಂದರ ತಾಣ. ಬೆಟ್ಟಗಳ ನಡುವೆ ಒಂದು ವಿಸ್ತಾರವಾದ ಕ್ಯಾಂಪ್ಗ್ರೌಂಡ್. ಮಧ್ಯದಲ್ಲಿ ಒಂದು ದೊಡ್ಡ ಮರದ ಕಟ್ಟಡದಲ್ಲಿ ವಿಸ್ತಾರವಾದ ಒಂದು ಹಾಲ್ ಹಾಗೂ ಒಂದು ದೊಡ್ಡ ಅಡಿಗೆಮನೆ (ಈ ಜಾಗಕ್ಕೆ ಲಾಡ್ಜ್ ಎನ್ನುತ್ತಾರೆ). ಅರ್ಧ ಕಿ.ಮೀ ದೂರದಲ್ಲಿ ಒಂದು ಪುಟ್ಟ  amphitheater. ದೂರ ದೂರದಲ್ಲಿ ಕ್ಯಾಬಿನ್ಗಳು. ಕಡಿದಾದ ರಸ್ತೆಗಳ ಮಧ್ಯ ಇರುವ ತಾಣವಾದ್ದರಿಂದ ಕತ್ತಲಾಗುವ ಮುಂಚೆ ಹೋಗಿ ಸೇರುವ ಪ್ರಯತ್ನ ಮಾಡಿ ಸಂಜೆ ೭ ಗಂಟೆಗೆ ಸೇರಿದೆವು(ಬೇಸಿಗೆಯಾದ್ದರಿಂದ ೮ ಗಂಟೆಯವರೆಗೂ ಈಗ ಬೆಳಕಿರುತ್ತದೆ).

 

ಮುಸ್ಸಂಜೆಯ ಚುಮುಚುಮು ಚಳಿಗೆ ಅಲ್ಲಿ ಆದರದ ಸ್ವಾಗತ ಕಾದಿತ್ತು. ಗುರುದತ್ ನಗುಮುಖದಿಂದ ಬರಮಾಡಿಕೊಂಡು ನಮ್ಮ ಕ್ಯಾಬಿನ್ ಬಗ್ಗೆ ತಿಳಿಸಿದರು. ಅದಕ್ಕೂ ಹೆಚ್ಚಾಗಿ ಅಲ್ಲಿ ಬಿಸಿ ಬಿಸಿ ಕಾಫಿ-ಟೀ ಜೊತೆಗೆ ವಡೆ-ಪಫ಼್! ಪ್ರಯಾಣದ ಆಯಾಸ ಆಗಲೇ ಕಳೆದಿತ್ತು. ಕ್ಯಾಬಿನ್ ಗೆ ಹೋಗಿ ನಮ್ಮ ವಸ್ತುಗಳನ್ನು ಇಟ್ಟು ಬೇಗ ಮತ್ತೆ ಲಾಡ್ಜ್ ಗೆ ಹೋದೆವು. ಅಲ್ಲ ಬಿಸಿ ಬಿಸಿ ಊಟ ಕಾದಿತ್ತು. ಚಪಾತಿ, ಕುರ್ಮ, ಘೀ-ರೈಸ್, ಬೆಂಡೆಕಾಯಿ ಪಲ್ಯ, ಮೊಸರನ್ನ ಹಾಗೂ ರಸಮಲಾಯಿ.  ಬೇಗ ಊಟ ಮುಗಿಸಿ ಎಲ್ಲರೂ ಮುಂದಿನ ಕಾರ್ಯಕ್ರಮಕ್ಕೆ ತಯ್ಯಾರು.

 

ಕ್ಯಾಂಪ್ ಅಂದ ಮೇಲೆ ಕ್ಯಾಂಪ್-ಫ಼ೈರ್ ಇರಲೇ ಬೇಕಲ್ಲ? ನಡೆಯಿರಿ amphitheaterಗೆ.

 

ಆ ಚಳಿಯಲ್ಲಿ ಬೆಚ್ಚಗಿರಿಸಲು ದೊಡ್ಡ ಬೆಂಕಿ. ರವಿ  ಕೃಷ್ಣಪ್ಪ ಹಾಗೂ ಪ್ರತಿಭಾವಂತ ತರುಣಿ ಅಪೂರ್ವ ಗುರುರಾಜ್ ಕಾರ್ಯಕ್ರಮ ನಡೆಸಿಕೊಡಲು ಬಂದರು. ಸುಮಾರು ೧೫೦ ಜನ ದೊಡ್ಡವರು ಹಾಗೂ ೩೦ ಪುಟಾಣಿಗಳೊಂದಿಗೆ ಜಾಗ ಗಿಜಿಗುಡುತ್ತಿತ್ತು. ಮೊದಲಿಗೆ ಅಂದು ವರಮಹಾಲಕ್ಷ್ಮಿ ಪೂಜೆ ಆದ್ದರಿಂದ "ಲಕ್ಷ್ಮಿ ಬಾರಮ್ಮ" ಹಾಡಿನಿಂದ ಕಾರ್ಯಕ್ರಮ ಪ್ರಾರಂಭ. ನಂತರ ಸ್ವಲ್ಪ ಪುಟಾಣಿಗಳ ಮನರಂಜನೆ. ೩-ವರೆ ವರ್ಷದ ಅಕುಲ್ "ಒಂದೇ ಒಂದು ಸಾರಿ" ಹಾಡಿಗೆ ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿ ಎಲ್ಲರ ಮನರಂಜಿಸಿದ. ಈ ಹೊತ್ತಿಗೆ ರಾತ್ರಿ ೧೧ ಗಂಟೆ ಸಮಯ. ನಂತರ ಒಂದು ಹಾಸ್ಯಮಯ "ಭಾಗ್ಯಂದು ಲಕ್ಷ್ಮಿಗೆ ಬಾರಮ್ಮ" ನಮ್ಮೆಲ್ಲರನ್ನೂ ನಕ್ಕು ನಗಿಸಿತು. ದೀಪ ಅವರು "ವಾತಾಪಿ ಗಣಪತಿಂ" ಬಹಳ ಚೆನ್ನಾಗಿ ಹಾಡಿದರು. ನಂತರ ಮತ್ತೊಂದು ಚಿಕ್ಕ ಹುಡುಗಿ ಹಾಡಿಗೆ dance  ಮಾಡಲು ಪ್ರಾರಂಭಿಸಿದಾಗ, ಎಲ್ಲರೂ ಎದ್ದು ಕುಣಿದದ್ದೇ.  

ಆಗ ಅಪೂರ್ವ "ಜನ್ಮ ಜನ್ಮದ ಅನುಬಂಧ" ಚಿತ್ರದ "ತಂಗಾಳಿಯಲ್ಲಿ ನಾನು ತೇಲಿ ಬಂದೆ..... ಓ ಇನಿಯಾ"  ಎಂಬ ಹಾಡನ್ನ ಅದ್ಭುತವಾಗಿ ಹಾಡಲು ಪ್ರಾರಂಭಿಸಿದಳು. ಅದುವರೆಗೂ ಹಾಸ್ಯಮಯವಾಗಿ ಮಾತನಾಡುತ್ತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ರವಿ ಇದ್ದಕ್ಕಿದ್ದಂತೆ ನಾಲಿಗೆ ಹೊರಚಾಚಿ ಒಂದು zombie ನಡೆ ನಡೆಯುತ್ತಾ ಬೆಂಕಿಯ ಸುತ್ತ ನರ್ತಿಸಲು ಪ್ರಾರಂಭಿಸಿದರು. ಆ ಸನ್ನಿವೇಷ ಕಣ್ಣಿಗೆ ಕಟ್ಟಿದಂತಿದೆ. ಆ ಹಾಡಿನ ಗುಂಗು ಇನ್ನೂ ಬಿಟ್ಟಿಲ್ಲ!

 

ನಂತರ ಕೆಲವು ಹಾಡುಗಳಿಗೆ ಎಲ್ಲರೂ ನರ್ತಿಸಿ ಸುಸ್ತಾಗಿ ಮಕ್ಕಳೊಂದಿಗೆ ಕ್ಯಾಬಿನ್ ಗಳಿಗೆ ಹೋದ ನಂತರವೂ ಅಲ್ಲಿ ಕೆಲವೊಬ್ಬರು ಇನ್ನೂ ಮಾತನಾಡುತ್ತಾ ಕುಳಿತಿದ್ದೆವು. ಕೆಲವೊಂದು ಹೊಸ ಪರಿಚಯ-ಮಾತುಗಳ ಮಧ್ಯೆ ಶಶಿಕಾಂತರವರು ಗುರುರಾಜುಲು ನಾಯ್ಡು ಅವರ ಹರಿಕಥೆಯ ಒಂದು ಸನ್ನಿವೇಶವನ್ನು ವಿವರಿಸುತ್ತಾ ಭೀಮನ ಡೈಲಾಗನ್ನು ಅಷ್ಟೆ ಆವೇಶದಿಂದ "ಬಂಡಿಬಂಡಿಗಟ್ಟಲೆ ಅನ್ನವನು ತಿಂದು ಬಂಡಿಬಂಡಿಗಳನ್ನೇ ಮುರಿದು ರಣರಂಗದಲ್ಲಿ ಅರಿಗಳ ಗುಂಡಿಗೆಗಳನ್ನು ಚೆಂಡಾಡಿದ ಈ ಭೀಮ ಇಂದು ಆ ನಕುಲ ಸಹದೇವರ ಅಡಿಯಾಳು - ಹು" ಎಂದು ಅಬ್ಬರಿಸಿ ಬೊಬ್ಬರಿದು ನಮ್ಮನ್ನೆಲ್ಲಾ ಮತ್ತೆ ಪುಳಕಗೊಳ್ಳುವಂತೆ ಮಾಡಿದರು. 

 

ಆ ಹೊತ್ತಿಗೆ ಸುಸ್ತ್ ಹೊಡೆದಿದ್ದ ನಾನು ಕತ್ತಲೆಯಲ್ಲಿ ಎಡತಾಕುತ್ತ ಮಂಜಿನ ಹನಿ ಬೀಳುತ್ತಿದ್ದ ಚಳಿಯಲ್ಲಿ ಕತ್ತಲೆ ಕ್ಯಾಬಿನ್ ಸೇರಿ ನಮ್ಮ ರೈಲ್ವೆ ಸ್ಲೀಪರಿನಂತಿದ್ದ bunk bed ಹತ್ತಿ ಮಲಗಿದಾಗ ಸಮಯ ಪ್ರಾಯಶಃ ೩ ಗಂಟೆ.

 

ಅಷ್ಟೂ ಜನಕ್ಕೆ ಊಟ-ತಿಂಡಿ ವ್ಯವಸ್ಥೆ ಸಾಮಾನ್ಯವಲ್ಲ. ಪಾಳಿಗೆ ೫-೬ familyಗಳ ಜವಾಬ್ದಾರಿ.ಆಡಿಗೆ ಮಾಡಲು ಅಡಿಗೆಯವನು ಇದ್ದರೂ ಬೇರೆಲ್ಲಾ ಅಡಿಗೆಮನೆ ಕೆಲಸಗಳೂ ಆ ಪಾಳಿಯವರ ಜವಾಬ್ದಾರಿ. ಜವಾಬ್ದಾರಿ ವಹಿಸಿಲಾದವರು ಕೆಲವೊಮ್ಮೆ ಬರದಿದ್ದರೂ executive committee ಸದಸ್ಯರೇ ಯಾವ ಬೇಸರವೂ ಇಲ್ಲದೆ ಕೆಲಸಗಳನ್ನು ಮಾಡುತ್ತ ಇದ್ದುದು ಒಂದು ಬಹಳ ಮನಸ್ಸಿಗೆ ಹತ್ತಿರವಾದ ವಿಷಯ. ಅದರಂತೆ ಶನಿವಾರ ಬೆಳಿಗ್ಗೆ ತಿಂಡಿ ವ್ಯವಸ್ಥೆಗೆ ನಮ್ಮ ಹೆಸರಿತ್ತು.  ೭ ಗಂಟೆಗೆ ಅಡಿಗೆಮನೆಗೆ ಹೋದಾಗ ಆಗಲೇ ಅಡಿಗೆಯವರು ಕಾಫಿ-ಟೀ ಮಾಡಿ, ಇಡ್ಲಿ-ವಡೆ ಮಾಡುವ ತಯ್ಯಾರಿಯಲ್ಲಿದ್ದರು. cereal, bread-jam ಜೊತೆಗೆ  ಇಡ್ಲಿ-ವಡೆ-ಸಾಂಬಾರ್ ದೋಸೆ-ಆಲೂಗೆಡ್ಡೆ ಪಲ್ಯ ತಿಂಡಿಗೆ! ಸುಮಾರು ಇನ್ನೂರು ದೋಸೆ ಕಾವಲಿಯಿಂದ ಎತ್ತಿದ ಆನುಭವ ಮರೆಯಲಸಾಧ್ಯ!!

 

ತಿಂಡಿ ಮುಗಿಸಿ ಎಲ್ಲರೂ ಚಾರಣಕ್ಕೆ ಹೊರಡಲು ತಯ್ಯಾರು. ಮಕ್ಕಳನ್ನು strollerನಲ್ಲಿ ಕರೆದೊಯ್ಯುವವರು ೩ ಮೈಲು ಚಾರಣ ಹಾಗೂ ನಡೆಯಲು ಸಾಧ್ಯವಿರುವರು ೬ ಮೈಲು ಆ ಸುಂದರ ರೆಡ್ವುಡ್ ಕಾಡಿನಲ್ಲಿ ಚಾರಣಕ್ಕೆ. ದಾರಿಯಲ್ಲಿ ಅನೇಕ ಹಕ್ಕಿ, ಅಲ್ಲಿನ ವಿಶಿಷ್ಟ banana slug ಎಂಬ ಚಿಪ್ಪು ಹೊರದ ದೊಡ್ಡ ಬಸವನಹುಳ ಇವನ್ನೆಲ್ಲಾ ನೋಡುತ್ತಾ ದಾರಿ ಕಳೆದದ್ದೇ ತಿಳಿಯಲಿಲ್ಲ. ದಾರಿಯಲ್ಲಿ ಪರಿಚಯವಾದ ಸುಮುಖ್ ಎಂಬ ತರುಣನನ್ನು ಏನು ಓದ್ತಾ ಇದ್ದೀಯಾ ಎಂದು ಕೇಳಿದೆ. ಅವನು ಸ್ಪಷ್ಟವಾಗಿ "೧೧ ನೆ ಕ್ಲಾಸ್" ಎಂದ. ಅಮೇರಿಕದಲ್ಲೇ ಹುಟ್ಟಿ-ಬೆಳೆದ ಅವನ ಕನ್ನಡ ಮಾತನಾಡುವ ಶೈಲಿ, ಭಾಷೆಯಲ್ಲಿನ ಸ್ಪಷ್ಟತೆ ಕೇಳಿ ಬಹಳ ಆಶ್ಚರ್ಯವಾಯ್ತು.

 

ವಾಪಸ್ ಲಾಡ್ಜಿಗೆ ಬರುವಷ್ಟರಲ್ಲಿ ಬಿಸಿಬಿಸಿ ಭೋಜನ ಸಿಧ್ಧ. ಅನ್ನ-ಸಾರು-ಪಲ್ಯ-ಮಜ್ಜಿಗೆಯ ಜೊತೆಗೆ ಚಪಾತಿ, ಕುರ್ಮ, ಪನೀರ್ ಕರ್ರಿ, ಬಿಸಿಬೇಳೆಭಾತ್, ಸಿಹಿಗೆ ಜಿಲೇಬಿ. ಚಪ್ಪರಿಸಿ ತಿಂದು ಎಲ್ಲ ವಿಶ್ರಾಂತಿಗೆ ತೆರಳಿದೆವು.

 

 ಮತ್ತೆ ೪ ಗಂಟೆಗೆ ಲಾಡ್ಜ್ ಬಳಿ ಬಂದಾಗ ಅಲ್ಲಿ ಹೊರಾಂಗಣ ಆಟಗಳು ಪ್ರಾರಂಭವಾಗಿದ್ದವು. ವಾಲಿಬಾಲ್, ಕ್ರಿಕೆಟ್, ಥ್ರೋಬಾಲ್ ಆಟಗಳಲ್ಲಿ ದೊಡ್ಡವರೆಲ್ಲ ಮಗ್ನರಾದರೆ ಚೇತನ್ ಮಕ್ಕಳನ್ನು ಕಲೆಹಾಕಿಕೊಂಡು ಅವರನ್ನು ಆಡಿಸುತ್ತಿದ್ದರು. ಎಲ್ಲರೂ ಆಟ ಮುಗಿಸಿ ಬರುವಷ್ಟರಲ್ಲಿ ಮತ್ತೆ ಬೇಲ್, ಚಾಟ್, ಪಾನಿಪುರಿ ಜೊತೆಗೆ barbeque ಕೆಂಡದ ಮೇಲೆ ಜೋಳ, ಪನೀರ್-ತರಕಾರಿಗಳ skewers ಹಾಗೂ ಸಸ್ಯಾಹಾರಿ ಬರ್ಗರ್! ನಿಗಿನಿಗಿ ಕೆಂಡದ ಮೇಲೆ ಜೋಳ ಸುಡುವುದೇ ಒಂದು ಸೊಗಸು. ಜೋಳಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಇದೆಲ್ಲಾ ಆದರೂ ಇನ್ನೂ ಹಸಿವಿದ್ದವರಿಗೆ ಅನ್ನ-ಸಾರು ಲಭ್ಯ.

 

ಬರಿ ತಿಂಡಿಗಳ ಬಗ್ಗೆಯೇ ಬರೆದಿದ್ದೇನೆಂದುಕೊಳ್ಳುವಿರೋ? ಆದರೆ ಈ ಪರದೇಶದಲ್ಲಿ ೨ ದಿನಗಳಲ್ಲಿ ಅಷ್ಟು ಬಗೆ ನಮ್ಮ ಊಟ-ತಿಂಡಿ ಆ ಕಾಡಿನ ಮಧ್ಯೆ ದೊರಕಿಸಿದ್ದು KKNCಯ ಒಂದು ಸಾಧನೆಯೇ!!

 

 ಮತ್ತೆ ರಾತ್ರಿ amphitheater ಗೆ. ರವಿ ನಡೆಸಿಕೊಡುತ್ತಲಿದ್ದ ಆ ಕಾರ್ಯಕ್ರಮದಲ್ಲಿ ಮಿಮಿಕ್ರಿ, ಹಾಡುಗಳ ಮಧ್ಯ ವಿಶೇಷ ಎಂದರೆ ಎಲ್ಲಕ್ಕೂ ಇನ್ನೂ ಎದ್ದಿದ್ದ ಮಕ್ಕಳೇ ಜಾಸ್ತಿ ಕುಣಿದದ್ದು. ೭ ವರ್ಷದ ಶ್ರೇಯಾ "ಇಂದು ಬಾನಿಗೆಲ್ಲಾ ಹಬ್ಬ" ಹಾಡನ್ನು ಮನಮುಟ್ಟುವಂತೆ ಹಾಡಿದಾಗ ದೊಡ್ಡವರೆಲ್ಲ ಎದ್ದು ಹೆಜ್ಜೆ ಹಾಕಿದರು. ಪ್ರಾಯಶಃ ಅಷ್ಟೇ ವಯಸ್ಸ್ನಿನ ಅನಘಾ "ಉಳ್ಳವರು ಶಿವಾಲಯವ... " ವಚನಗಳನ್ನು ಹೇಳಿದಳು. ಮಧ್ಯೆ KKNC committee  ಸದಸ್ಯರಿಂದ ಒಂದೆರಡು ಮಾತುಗಳು. ಮುಂಬರುವ KKNC ಕಾರ್ಯಕ್ರಮಗಳ ಪರಿಚಯ. ಮತ್ತೆ ಮಧ್ಯೆ ಹಾಡುಗಳು, ಕುಣಿದಾಟ.

 

ನಾವು ಬೆಳಿಗ್ಗೆ ಕಾರಣಾಂತರಗಳಿಂದ ಬೇ ಏರಿಯಾದಲ್ಲಿ ಇರಬೇಕಾದ್ದರಿಂದ ಅರ್ಧಕ್ಕೇ ಹೊರಡಬೇಕಾಯ್ತು. ಆದರೆ ಬೇರೆಯವರೆಲ್ಲಾ ಬೆಳಗ್ಗೆ ತಿಂಡಿ ಮುಗಿಸಿ ಹೊರಡುವವರಿದ್ದರು. ನಿಜಕ್ಕೂ ಈ ವಾರಾಂತ್ಯವನ್ನು ಕನ್ನಡಮಯವಾಗಿಸಿ, ಅವಿಸ್ಮರಣೀಯಗೊಳಿಸಿದ ಕನ್ನಡ ಕೂಟಕ್ಕೆ, ಅದರ ಸಮಿತಿ ಸದಸ್ಯರುಗಳಿಗೆ ನನ್ನ ಹಾರ್ದಿಕ ವಂದನೆ-ಅಭಿನಂದನೆಗಳು.