ಅಂಚೆ ವಾಹನಗಳಿಗೂ ಜಿಪಿಎಸ್
ಅಂಚೆ ಇಲಾಖೆಯ ಅಂಚೆ ವಾಹನಗಳ ಓಡಾಟವನ್ನು ಗಮನಿಸಲು ಸ್ಥಾನ ಪತ್ತೆ ಮಾಡುವ ಜಿಪಿಎಸ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.ಚೆನ್ನೈನ ಅಂಚೆ ಸಾಗಿಸುವ ಐದು ವಾಹನಗಳಿಗೆ ಪ್ರಾಯೋಗಿಕವಾಗಿ ಜಿಪಿಎಸ್ ವ್ಯವಸ್ಥೆಯ ಸಾಧನ ಅಳವಡಿಸಲಾಗಿದೆ.ಹೀಗಾಗಿ ಆ ವಾಹನಗಳು ಎಲ್ಲಿ ಸಾಗುತ್ತಿವೆ ಎನ್ನುವುದನ್ನು ಕಚೇರಿಯಿಂದ ಗಮನಿಸುವುದು ಸಾಧ್ಯವಾಗುತ್ತದೆ.ಇದೇ ರೀತಿ ಸಾರಿಗೆ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಆಲೋಚನೆ ಕರಾವಳಿಯ ಖಾಸಗಿ ಬಸ್ ಮಾಲಕರು ಮಾಡಿದ್ದಾರೆ.ಸಾರಿಗೆ ಕಚೇರಿಯ ಅಧಿಕಾರಿಗಳಿಗೆ ಬಸ್ಗಳ ಓಡಾಟದ ಮೇಲೆ ಕಣ್ಣಿಡಲು ಸಾಧ್ಯವಾಗಿಸುವುದು ಈ ಯೋಜನೆಯ ಉದ್ದೇಶ. ಆದರೆ ಅದಿನ್ನೂ ಜಾರಿಗೆ ಬಂದಾಂತಿಲ್ಲ.
ಹೊಸ ತಲೆಮಾರಿನ ಶಾರ್ಟ್ಹ್ಯಾಂಡ್
ಬಾಸ್ ಹೇಳಿದ್ದನ್ನು ಬರೆದುಕೊಳ್ಳಲು ಶಾರ್ಟ್ಹ್ಯಾಂಡ್ ವಿಧಾನ ಬಳಸುತ್ತಿದ್ದ ಪಿ.ಎ.ಗಳು ಈಗ ಕಾಣಸಿಗದಿರಬಹುದು.ಆದರೆ ಮೊಬೈಲಿನಲ್ಲಿ ಕಿರುಸಂದೇಶ ಸೇವೆ ಬಳಸುವ ಯುವಜನತೆ ತಮ್ಮದೇ ಆದ ಹೊಸ ಶಾರ್ಟ್ಹ್ಯಾಂಡ್ ಅಭಿವೃದ್ಧಿ ಪಡಿಸುತ್ತಿದ್ದಾರೆ.ಅಂತರ್ಜಾಲ ಚ್ಯಾಟಿಂಗ್ಗಳಲ್ಲೂ ಈ ತೆರನ ಪದಗುಚ್ಛಗಳ ಪ್ರಯೋಗ ಕಂಡುಬಂದಾಗ ಹೊಸಬರಿಗೆ ಗಲಿಬಿಲಿ ಆಗುವುದು ಸರ್ವೇಸಾಮಾನ್ಯ.GI ಅಂದರೆ Google It,B2W aMdare Back To Work,U2D ಅಂದರೆ Up To Date,LOL ಅಂದರೆ Lots Of Luck!
ಅಂತರ್ಜಾಲದಲ್ಲಿ ಚಂದ್ರಯಾತ್ರೆಯ ಚಿತ್ರಗಳು
1969ರ ಅಪೊಲೋ ಬಾಹ್ಯಾಕಾಶ ವಾಹನದ ಮೂಲಕ ಚಂದ್ರಯಾತ್ರೆಯ ಚಿತ್ರಗಳೀಗ ಅಂತರ್ಜಾಲದ ಮೂಲಕ ಲಭ್ಯವಿವೆ.ಇದು ವರೆಗೆ ನಾಸಾದ ಅಂತರ್ಜಾಲ ತಾಣದಲ್ಲಿ ಚಿತ್ರಗಳು ಸಿಗುತ್ತಿದ್ದವಾದರೂ,ಅವುಗಳ ಸ್ಪಷ್ಟವಾದ ಚಿತ್ರಗಳಾಗಿರಲಿಲ್ಲ.ಈಗ ಒಂದೆಡೆ ಇವನ್ನು ಲಭ್ಯವಾಗಿಸಲಾಗಿದ್ದು,ಚಿತ್ರಗಳು ಅತ್ಯುತ್ತಮ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿದ ಕಾರಣ ಅತ್ಯಂತ ಸ್ಪಷ್ಟವಾಗಿವೆ.ಆದ ಕಾರಣ ಕೆಲವು ಚಿತ್ರಗಳೂ ಗಿಗಾಬೈಟುಗಳಷ್ಟು ದೊಡ್ಡದಿವೆ.http://apollo.sese.asu.edu/ ಈ ವಿಳಾಸದಲ್ಲಿ ಚಿತ್ರಗಳು ಲಭ್ಯವಿವೆ.ಈ ಚಂದ್ರಯಾತ್ರೆಯೇ ನಡೆದಿಲ್ಲ,ಚಿತ್ರಗಳೆಲ್ಲಾ ಪೊಳ್ಳು ಎನ್ನುವ ಆರೋಪಗಳೂ ಇವೆ.
ಬ್ಲಾಗ್ ಮೂಲಕ ವೈರಸ್ ದಾಳಿ
ಅಂತರ್ಜಾಲದ ವೈರಸ್ ದಾಳಿಗಳ ಬಗ್ಗೆ ನೀವು ಕೇಳಿದ್ದೀರಿ.ಇ-ಮೇಲ್ ಮೂಲಕ ಬರುವ ಸಂದೇಶಗಳು ಇಂತಹ ವೈರಸ್ ಹೊತ್ತು ಬಂದು,ಅದರ ಜತೆ ಬಂದ ಕಡತವನ್ನು ತೆರೆದಾಗ,ಕಂಪ್ಯೂಟರ್ ದಾಳಿಗೆ ತುತ್ತಾಗುವುದು ಸಾಮಾನ್ಯ.ಈ ವಿಧಾನ ಈಗ ಹೆಚ್ಚಿನವರಿಗೂ ಗೊತ್ತು.ಆದುದರಿಂದ ಮಿಂಚಂಚೆಯಲಿ ಬಂದ ಕಡತಗಳನ್ನು ಸ್ಕ್ಯಾನ್ ಮಾಡಿ,ವೈರಸ್ ಮುಕ್ತವೇ ಎಂದು ನೋಡಿ,ಮತ್ತೆಯೇ ತೆರೆಯುವಂತಹ ಮುನ್ನೆಚ್ಚರಿಕೆಯನ್ನು ಬಳಕೆದಾರರು ಕೈಗೊಳ್ಳುತ್ತಾರೆ.ಹಾಗಾಗಿ ಅಂತರ್ಜಾಲದ ಕಿಡಿಗೇಡಿಗಳು ಹೊಸ ವಿಧಾನಗಳನ್ನು ಕಂಡುಹಿಡಿಯುವುದು ಅನಿವಾರ್ಯವಾಗಿದೆ.ಈಗ ಜನಪ್ರಿಯವಾಗಿರುವ ಬ್ಲಾಗ್ಗಳನ್ನು ತಮ್ಮ ದಾಳಿಗೆ ಬಳಸಿಕೊಳ್ಳುವ ಚತುರತೆಯನ್ನು ಈಗವರು ಬಳಸುತ್ತಿದ್ದಾರಂತೆ.ಕುತೂಹಲಕಾರಿಯಾಗಿ ಇರುವ ಬ್ಲಾಗ್ ಬರಹಗಳ ನಡುವೆ,ಹೆಚ್ಚಿನ ವಿವರ,ಚಿತ್ರ ಅಥವ ವಿಡಿಯೋ ಕೊಂಡಿಗಳನ್ನು ನೀಡುವುದುಂಟು.ಆದರೆ ಇಂತಹ ಕೊಂಡಿಗಳಲ್ಲಿ ವೈರಸ್ ತಾಣಗಳ ಕೊಂಡಿಗಳನ್ನು ನೀಡುವುದು ದಾಳಿಕೋರರ ವಿಧಾನ.ಈ ಕೊಂಡಿಗಳ ಮೇಲೆ ಕ್ಲಿಕ್ಕಿಸಿದಾಗ ಕಂಪ್ಯೂಟರಿನ ಮೇಲೆ ವೈರಸ್ ದಾಳಿಯಾಗುತ್ತದೆ.ನೈಜ ಬ್ಲಾಗುಗಳಲ್ಲಿ ಇಂತಹ ಕೊಂಡಿಗಳನ್ನು ಹುದುಗಿಸಿ,ಬ್ಲಾಗ್ ಓದುಗರಿಗೆ ಅನುಮಾನವೇ ಬರದ ಹಾಗೆ ಮಾಡಲು ದಾಳಿಕೋರರಿಗೆ ಸಾಧ್ಯವಾಗಿರುವುದು ಹೇಗೆ ಎನ್ನುವುದು ಸ್ಪಷ್ಟವಾಗಿಲ್ಲ.ದಾಳಿಕೋರರೇ ಬ್ಲಾಗ್ ಬರೆದು ಪ್ರಕಟಿಸಿರುವುದೂ ಉಂಟು.
ಧೂಳಿನ ಕಣದ ಗಾತ್ರದ ಚಿಪ್ಗಳು!
ಐ.ಬಿ.ಎಮ್.ಕಂಪೆನಿಯು ಪ್ರಕಟಿಸಿರುವ ಸಂಶೋಧನಾ ಪ್ರಬಂಧದ ಪ್ರಕಾರ ಧೂಳಿನ ಕಣದ ಗಾತ್ರದ ಕಂಪ್ಯೂಟರ್ ಚಿಪ್ಗಳು ಹಲವು ಗಿಗಾಬೈಟುಗಳಷ್ಟು ಸ್ಮರಣ ಸಾಮರ್ಥ್ಯವನ್ನು ಹೊಂದಿರಬಲ್ಲುವುದು.ಈ ತಂತ್ರಜ್ಞಾನದ ಪ್ರಕಾರ ಪರಮಾಣುಗಳು ಬಿಟ್ಗಳನ್ನು ಹಿಡಿದಿಡಬಲ್ಲುವು.ಪರಮಾಣುಗಳು ಮುಖ ಮಾಡಿರುವ ದಿಕ್ಕಿನ ಆಧಾರದಲ್ಲಿ ಅದು ಸೊನ್ನೆ ಅಥವ ಒಂದು ಈ ಮಾಹಿತಿಯನ್ನು ಹಿಡಿದಿಡುವಂತೆ ಮಾಡುವುದು ಹೊಸ ವಿಧಾನ.ಇದನ್ನು ಸಾಕ್ಷಾತ್ಕರಿಸಿ,ಈ ತಂತ್ರಜ್ಞಾನ ಆಧರಿಸಿದ ಚಿಪ್ಗಳ ತಯಾರಿಕೆಗೆ ಇನ್ನೂ ಕಾಲ ಹಿಡಿಯಬಹುದು.ಸದ್ಯದ ಚಿಪ್ ತಯಾರಿಕಾ ತಂತ್ರಜ್ಞಾನದ ಮೂಲಕ ಅಂತದ್ದನ್ನು ನಿಜವಾಗಿಸುವುದು ಅಸಾಧ್ಯ. ಅಂತಹ ಚಿಪ್ ಬಂದಾಗ ಕಂಪ್ಯೂಟರುಗಳು ಈಗಿನದ್ದಕ್ಕಿಂತ ಸಾವಿರ ಪಟ್ಟು ಅಧಿಕ ಸ್ಮರಣ ಸಾಮರ್ಥ್ಯ ಹೊಂದಿರುವುದು ಖಂಡಿತ.
ಸುಳ್ಳಿನ ಚಿತ್ರ
ಅಪರಾಧಿಗಳು ಹೇಳುತ್ತಿರುವುದು ನಿಜವೇ ಎಂದು ಪರೀಕ್ಷಿಸಲು ಪಾಲಿಗ್ರಾಫ್ ಪರೀಕ್ಷೆ,ಸುಳ್ಳು ಪತ್ತೆ ಹಚ್ಚುವ ಯಂತ್ರದ ಪರೀಕ್ಷೆ ನಡೆಯುವುದು ಪತ್ರಿಕೆಗಳಲ್ಲಿ ವರದಿಯಾಗುತ್ತದೆ. ಈ ಪರೀಕ್ಷೆಗಳ ಫಲಿತಾಂಶಕ್ಕೆ ನ್ಯಾಯಾಲಯದ ಮಾನ್ಯತೆ ಸಿಕ್ಕಿರುವುದು ಕಡಿಮೆ.ಆದರೂ ಇಂತಹ ಪರೀಕ್ಷೆಗಳನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಈಗ ಸ್ಯಾನ್ ಡಿಯಾಗೋದ ಕಂಪೆನಿಯೊಂದು ಮಿದುಳಿನ ಎಂ ಆರ್ ಐ ಪರೀಕ್ಷೆ ಮೂಲಕ,ಸುಳ್ಳು ಹೇಳುವುದನ್ನು ಪತ್ತೆ ಹಚ್ಚಲು ತನಗೆ ಸಾಧ್ಯವೆಂದು ಹೇಳಿಕೊಂಡಿದೆ.ಫಂಕ್ಷನಲ್ ಎಂ ಆರ್ ಐ ಎನ್ನುವ ಮಿದುಳಿನ ಒಳಭಾಗದ ಚಿತ್ರ ಹಿಡಿಯುವ ತಂತ್ರಜ್ಞಾನದಲ್ಲಿ ಸುಳ್ಳು ಹೇಳಿಕೆ ನೀಡುವಾಗ,ಮಿದುಳಿನ ಒಳಪದರದಲ್ಲಿ ರಕ್ತ ಪರಿಚಲನೆ ಕಂಡುಬರುವುದನ್ನು ಚಿತ್ರ ಗ್ರಹಿಸುತ್ತದೆಯಂತೆ.ಪ್ರಯೋಗಾಲಯದ ಪರೀಕ್ಷೆಗಳು ಬಹುತೇಕ ಯಶಸ್ವಿಯಾಗಿವೆ ಎಂದು ಕಂಪೆನಿ ಹೇಳಿಕೊಂಡಿದೆ. *ಅಶೋಕ್ಕುಮಾರ್ ಎ