ಸೇವಾಪುರಾಣ-17: ಗುಲ್ಬರ್ಗ ತೋರಿಸಿದರು-2

ಸೇವಾಪುರಾಣ-17: ಗುಲ್ಬರ್ಗ ತೋರಿಸಿದರು-2

ಬರಹ

ಅಚ್ಚರಿಯ ಸ್ವಾಗತ
     ಕೆಲಸದ ನಿಮಿತ್ತ ತಾಲ್ಲೂಕಿನ ಒಂದು ಹಳ್ಳಿಗೆ ಸಂಬಂಧಿಸಿದವರಿಗೆ ಪೂರ್ವಸೂಚನೆ ಕೊಟ್ಟು ಹೋಗಿದ್ದೆ. ಹಳ್ಳಿಗೆ ಬಸ್ ನಲ್ಲಿ ಹೋಗಿ ಇಳಿದಾಗ ಅಲ್ಲಿ ವಾದ್ಯ ಮೊಳಗುತ್ತಿತ್ತು. ಸುಮಾರು 30-40 ಜನರು ಇದ್ದರು. ನಾನು ಯಾವುದೋ ಮೆರವಣಿಗೆ ಇರಬೇಕು ಅಂದುಕೊಂಡು ಪಕ್ಕಕ್ಕೆ ಹೋದರೆ ಅಲ್ಲಿಗೂ ಆ ಗುಂಪು ವಾದ್ಯಸಹಿತ ನನ್ನ ಮುಂದೆಯೇ ಬಂದಿತು. ಒಬ್ಬರು ಬಂದು ನನಗೆ ಹಾರ ಹಾಕಿದಾಗ ನನಗೆ ಗಲಿಬಿಲಿಯಾಯಿತು. ಗ್ರಾಮದ ಕುಲಕರ್ಣಿ ಸಹ ಅಲ್ಲಿದ್ದು ಈ ಸ್ವಾಗತ ನನಗಾಗಿಯೇ ಎಂದಾಗ ಅಚ್ಚರಿಯಾಯಿತು. ನನಗೆ ಹಾರ ತೆಗೆಯಲು ಬಿಡದೆ ಹಾಗೆಯೇ ಮೆರವಣಿಗೆಯಲ್ಲಿ ಗ್ರಾಮದ ಚಾವಡಿಗೆ ಕರೆತರಲಾಯಿತು. ಅಲ್ಲಿ ಗ್ರಾಮದ ಮುಖ್ಯಸ್ಥ ಮಾತನಾಡಿ ತಮ್ಮ ಹಳ್ಳಿಗೆ ಅಧಿಕಾರಿಗಳು ಬರುವುದೇ ಇಲ್ಲವೆಂದೂ ನಾನು ಬಂದದ್ದು ಅವರಿಗೆಲ್ಲಾ ಸಂತೋಷವಾಗಿದೆಯೆಂದೂ ಹೇಳಿದಾಗ ನನಗೆ ಮರುಕವೆನಿಸಿತು. ಅಲ್ಲಿನ ಕೆಲಸ ಮುಗಿಸಿ ಗ್ರಾಮಸ್ಥರ ಆತಿಥ್ಯ ಸ್ವೀಕರಿಸಿ ಅಂದು ಅಲ್ಲಿಯೇ ತಂಗಿದ್ದು ಅವರಿಗೆ ತುಂಬಾ ಸಂತೋಷ ತಂದಿತ್ತು. ಆಗ ಹಳ್ಳಿಗಳಿಗೆ ಒಳ್ಳೆಯ ರಸ್ತೆಗಳಿರಲಿಲ್ಲ. ಅಧಿಕಾರಿಗಳು ತಮ್ಮ ಹಳ್ಳಿಗೆ ಬರಬಾರದೆಂದು ಬಂದರೆ ತಮಗೆ ಅನಗತ್ಯ ಕಿರುಕುಳವಾಗುತ್ತದೆಂದು ರಸ್ತೆ ಮಾಡುವುದನ್ನು ಅಡ್ಡಿಪಡಿಸಿದ್ದ ಕೆಲವು ಗ್ರಾಮಗಳೂ ಇದ್ದ ಬಗ್ಗೆ ಆಗ ನನಗೆ ತಿಳಿದು ಮಿಶ್ರಭಾವನೆಯುಂಟಾಗಿತ್ತು.


ನಾನು ಕಂಡಿದ್ದ 35 ವರ್ಷಗಳ ಹಿಂದಿನ ಸೇಡಂ
      ಸೇಡಂ ತಾಲ್ಲೂಕಿನ ಹಳ್ಳಿಗಳನ್ನು, ಅಲ್ಲಿನ ಜನರನ್ನು ಕಂಡು ನನಗೆ ಅಲ್ಲಿನ ಜನರ ಮುಗ್ಧತೆ, ಒಳ್ಳೆಯತನ, ಬಡತನಗಳ ದರ್ಶನವಾಯಿತು. ಆ ಹಳ್ಳಿಗಳನ್ನು ನೋಡಿದಾಗ ನಮ್ಮ ಹಳೆಯ ಮೈಸೂರಿನ ಪ್ರದೇಶ ಸ್ವರ್ಗಸದೃಶವೆಂದು ಅನ್ನಿಸಿದ್ದು ಸುಳ್ಳಲ್ಲ. ಬಿರುಬಿಸಿಲು, ದೊಡ್ಡ ಗಿಡಮರಗಳಿಲ್ಲದ ಬಯಲು ಪ್ರದೇಶ, ಕಲ್ಲುಮರಟಿಯ ಭೂಮಿ, ಆಳ ಬೇರುಗಳುಳ್ಳ ಗಿಡ ಮರಗಳು ಬೆಳೆಯಲು ಅಸಾಧ್ಯವಾದ ನೆಲ. ಜೋಳ, ತೊಗರಿ ಅಲ್ಲಿನ ಮುಖ್ಯ ಬೆಳೆ. ನಮ್ಮಲ್ಲಿ 2-3 ಎಕರೆ ಗದ್ದೆ ಇದ್ದವರು ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದರೆ ಅಲ್ಲಿ 40-50 ಎಕರೆ ಜಮೀನು ಹೊಂದಿರುವವರಿಗೆ ಕೆಲವು ಸಲ ಬೀಡಿ ಸೇದಲೂ ಕಾಸಿರುತ್ತಿರಲಿಲ್ಲ. ಕಡಪ ಕಲ್ಲಿನ ಕ್ವಾರಿಗಳು ಅಲ್ಲಿ ಸಾಮಾನ್ಯವಾಗಿದ್ದವು. ಮನೆಗಳಿಗೂ ಹೆಂಚಿನ ಬದಲಿಗೆ ಕಡಪ ಕಲ್ಲುಗಳನ್ನೇ ಬಳಸುತ್ತಿದ್ದರು. ಬಿರುಬಿಸಿಲಿನ ಝಳಕ್ಕೆ ಹಗಲಿನಲ್ಲಿ ಕಲ್ಲಿನ ಮನೆಗಳು ಹಗಲು ಹೊತ್ತಿನಲ್ಲಿ ತಂಪಾಗಿದ್ದರೂ, ಹಗಲು ಕಾದ ಕಾವಿನ ಝಳದಿಂದ ರಾತ್ರಿ ಹೊತ್ತು ಮನೆಗಳ ಮುಂಭಾಗದಲ್ಲಿ ಜನರು ಮಲಗುತ್ತಿದ್ದುದು ಸಾಮಾನ್ಯವಾಗಿತ್ತು. ಎಲ್ಲಾ ಮನೆಗಳಲ್ಲೂ ಶೌಚಾಲಯಗಳು ಇರುತ್ತಿರಲಿಲ್ಲ. ಬಂಗಲೆಯಂತಹ ಕಲ್ಲಿನ ಮನೆಗಳಲ್ಲಿಯೂ ಶೌಚಾಲಯಕ್ಕೆ ಆದ್ಯತೆ ಕೊಡದಿದ್ದು ಆಶ್ಚರ್ಯದ ವಿಷಯವಾಗಿತ್ತು. ಪ್ರಾತರ್ವಿಧಿಗಾಗಿ ಬೆಳಿಗ್ಗೆ ಬೇಗ ಎದ್ದು ನೀರಿನ ಚೊಂಬು ಹಿಡಿದು ಜನರು ಹೋಗುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು. ಶೌಚಾಲಯಗಳಿದ್ದ ಮನೆಗಳಲ್ಲಿಯೂ ಇಂಗುಗುಂಡಿಗಳು ಇರುತ್ತಿರಲಿಲ್ಲ. ಸಂಗ್ರಹವಾಗುವ ಮಲ ಸಾಗಿಸುವ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದರು. ಜನರು ತಂಬಾಕು ಹಾಕಿಕೊಂಡು ಎಲ್ಲೆಂದರಲ್ಲಿ ಉಗಿಯುತ್ತಿದ್ದು ಕಂಡುಬರುತ್ತಿತ್ತು. ಕಟ್ಟಡಗಳ ಮೂಲೆಗಳು, ಮೆಟ್ಟಿಲುಗಳು, ಕಛೇರಿಗಳು, ಹೋಟೆಲುಗಳ ಆವರಣಗಳಲ್ಲಿ ಕೆಂಪು ಪಿಚಕಾರಿಯ ಗುರುತುಗಳು ರಾರಾಜಿಸುತ್ತಿದ್ದವು. ಸಾಂಕ್ರಾಮಿಕ ರೋಗಗಳು ಹರಡದಂತೆ ಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದುಗಳನ್ನು ಶಾಲೆಗಳಲ್ಲಿ ಹಾಕಲಾಗುತ್ತಿತ್ತು. ಆಗ ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಕಾವಲು ಕಾಯುತ್ತಿದ್ದುದು, ರಸ್ತೆಗಳಲ್ಲಿ ಸಿಕ್ಕ ಮಕ್ಕಳನ್ನು ಹಿಡಿಹಿಡಿದು ಅವರ ಕೈಕಾಲುಗಳನ್ನು ಹಿಡಿದು ಚುಚ್ಚುಮದ್ದು ಹಾಕುತ್ತಿದ್ದ ದೃಶ್ಯ ನಾನು ಬೇರೆ ಊರುಗಳಲ್ಲಿ ಕಂಡಿರಲಿಲ್ಲ. ಆಗೆಲ್ಲಾ ಮಕ್ಕಳು ರಸ್ತೆಯಲ್ಲಿ ಕಾಣಸಿಗದೆ ಮನೆಯಲ್ಲಿ ಅಡಗಿ ಕೂರುತ್ತಿದ್ದುದು ನನಗೆ ವಿಶೇಷವಾಗಿ ತೋರುತ್ತಿತ್ತು. ಹಬ್ಬ ಹರಿದಿನಗಳನ್ನು ಬಡತನವಿದ್ದರೂ ಅಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದರು. ಹೋಳಿಹಬ್ಬದಂದು ಎತ್ತಿನಗಾಡಿಗಳಲ್ಲಿ ಬಣ್ಣದ ಓಕಳಿ ತುಂಬಿದ ಡ್ರಮ್ಮುಗಳನ್ನು ಹೇರಿಕೊಂಡು ದಾರಿಯಲ್ಲಿ ಎಲ್ಲರಿಗೂ ಓಕಳಿ ಹಾಕುತ್ತಿದ್ದುದು ನೆನಪಿನಲ್ಲಿ ಉಳಿದಿದೆ. ನಾನೂ ಸಹ ಆ ಸಂಭ್ರಮದಲ್ಲಿ ಭಾಗಿಯಾಗಿದ್ದು ನಾನು ಬಣ್ಣಬಣ್ಣದ ಓಕಳಿಯಲ್ಲಿ ನನ್ನ ಗುರುತು ನನಗೇ ಸಿಗದಂತೆ ಆಗಿತ್ತು.


     ಬಿಸಿಲಿನ ಪ್ರತಾಪ ಎಷ್ಟಿರುತ್ತಿದ್ದೆಂದರೆ ಬೇಸಿಗೆ ಕಾಲದಲ್ಲಿ 4 ತಿಂಗಳುಗಳು ಮುಂಜಾನೆ 8-00ರಿಂದ 12-00ರವರೆಗೆ ಮಾತ್ರ ಶಾಲಾ. ಕಾಲೇಜುಗಳು, ಕಛೇರಿಗಳು ನಡೆಯುತ್ತಿದ್ದು, ಆ ಸಮಯದ ನಂತರ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿರುತ್ತಿತ್ತು. ಒಮ್ಮೆ ಮಧ್ಯಾಹ್ನ ಹಳ್ಳಿಯಿಂದ ಬಂದವನು ತಣ್ಣೀರಿನ ಸ್ನಾನ ಮಾಡುವ ಸಲುವಾಗಿ ನಲ್ಲಿ ತಿರುಗಿಸಿ ತಲೆಯನ್ನು ನೀರಿಗೊಡ್ಡಿದಾಗ ತಲೆ ಬೆಂದುಹೋದಂತಾಗಿತ್ತು. 5-10 ನಿಮಿಷಗಳು ನೀರು ಹರಿಯಲು ಬಿಟ್ಟು ನಂತರ ಸ್ನಾನ ಮಾಡಬೇಕೆಂದು ಅಕ್ಕಪಕ್ಕದವರಿಂದ ಉಚಿತ ಸಲಹೆ ಕೇಳಬೇಕಾಯಿತು. ಮನೆಯ ಮುಂಭಾಗಕ್ಕೆ ನೀರು ಹಾಕಿದರೆ ಕಾವಿಗೆ ನೀರು ಬಿಸಿಯಾಗಿಬಿಡುತ್ತಿತ್ತು.  ಆನೆಕಾಲು ರೋಗದವರು ಅಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದರು. ಚಾ ದುಖಾನಿನಲ್ಲಿ ಚಹ ಕುಡಿಯಲು ಹೋದರೆ (ಅಲ್ಲಿ ಒಳ್ಳೆಯ ಕಾಫಿ ಸಿಗುತ್ತಿರಲಿಲ್ಲ, ಸಿಕ್ಕರೂ ಬ್ರೂ ಕಾಫಿ ಮಾತ್ರ) ಅಲ್ಲಿಯೂ 4-5 ಆನೆಕಾಲು ರೋಗಿಗಳು ಇರುತ್ತಿದ್ದು ಚಹ ಕುಡಿಯಲೂ ಮನಸ್ಸು ಬರುತ್ತಿರಲಿಲ್ಲ. ಆದರೆ ತಿಂಡಿ ತಿನ್ನಲು ಹೋಗಲೇಬೇಕಿತ್ತು. ಸಿರಾ(ಕೇಸರಿಬಾತ್), ಇಡ್ಲಿ, ಉಪ್ಪಿಟ್ಟು ಅಲ್ಲಿ ಸಿಗುವ ಸಾಮಾನ್ಯ ತಿಂಡಿಗಳಾಗಿದ್ದವು. ಒಮ್ಮೆ ತಿಂಡಿ ಏನಿದೆಯೆಂದು ವಿಚಾರಿಸಿದಾಗ ತಿಂಡಿಯ ಪಟ್ಟಿಯಲ್ಲಿ ಪಂಚರಂಗಿ ಎಂಬ ಹೆಸರು ಕೇಳಿ ಅದೇನೆಂದು ಕೊಡಲು ಹೇಳಿದರೆ ಅದು ಚುರುಮುರಿಯಾಗಿತ್ತು. ನಾನು ಕಾಫಿ ಕುಡಿಯುವ ಸಲುವಾಗಿಯೇ ವಾರಕ್ಕೊಮ್ಮೆ ದೂರದ ಗುಲ್ಬರ್ಗಕ್ಕೆ ಹೋಗಿ ಅಲ್ಲಿದ್ದ ಕಾಮತ್ ಹೋಟೆಲಿನಲ್ಲಿ ಮಸಾಲೆ ದೋಸೆ, ಕಾಫಿ ತಿಂದು ಸಿನೆಮಾ ನೋಡಿ ಸೇಡಂಗೆ ವಾಪಸು ಬರುತ್ತಿದ್ದೆ. ಅಲ್ಲೆಲ್ಲಾ ಸಾಮಾನ್ಯವಾಗಿದ್ದ ಜೋಳದರೊಟ್ಟಿ, ಹುಚ್ಚೆಳ್ಳು ಚಟ್ನಿ, ಈರುಳ್ಳಿ, ಮೆಣಸಿನಕಾಯಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡೆ. ಹಳ್ಳಿಗಳಲ್ಲಿ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುವುದೇ ಕ್ಷೇಮಕರವಾಗಿತ್ತು. ಏಕೆಂದರೆ ನಾರುಹುಳದ ಕಾರಣದಿಂದ ನಾರುಹುಣ್ಣು ಉಂಟಾಗುವ ಸಾಧ್ಯತೆ ಇತ್ತು. ಕಾಲಿನಲ್ಲಿ ಅಥವ ಕೈನಲ್ಲಿ ಸಾಮಾನ್ಯವಾಗಿ ಗೋಚರಿಸುತ್ತಿದ್ದ ನಾರುಹುಣ್ಣು ಆದರೆ ಅದಕ್ಕೆ ಆಗ ಪರಿಣಾಮಕಾರಿ ಚಿಕಿತ್ಸೆ ಇರಲಿಲ್ಲ. ಹುಣ್ಣು ಕೀವು ತುಂಬಿ ಹಣ್ಣಾದ ನಂತರ ಶರೀರದಲ್ಲಿ ಚೆನ್ನಾಗಿ ಬೆಳೆದ ನಾರುಹುಳ ಹುಣ್ಣನ್ನು ಕೊರೆದುಕೊಂಡು ಹೊರಗೆ ತಲೆ ಹಾಕಿದ ಸಂದರ್ಭದಲ್ಲಿ ಒಂದು ಸಣ್ಣ ಕಡ್ಡಿಯನ್ನು ಅದರ ಪಕ್ಕದಲ್ಲಿಟ್ಟು ಎರಡನ್ನೂ ಸೇರಿಸಿ ದಾರದಿಂದ ಹುಳ ಸಾಯದಂತೆ ನೋಡಿಕೊಂಡು ಕಟ್ಟಲಾಗುತ್ತಿತ್ತು. ಏಕೆಂದರೆ ಹುಳ ಮತ್ತೆ ಶರೀರದ ಒಳಗೆ ಹೋಗದಿರಲಿ ಎಂಬುದು ಅದರ ಉದ್ದೇಶವಿರುತ್ತಿತ್ತು. ಹುಳ ಹೊರಗೆ ಬಂದಹಾಗೆಲ್ಲಾ ದಾರ ಸುತ್ತುವುದನ್ನು ಮುಂದುವರೆಸಲಾಗುತ್ತಿತ್ತು. ಹುಳ ಪೂರ್ಣ ಹೊರಬರಲು 4-5 ದಿನಗಳಾಗುತ್ತಿದ್ದುದೂ ಉಂಟು. ಆಮೇಲೂ ಸಹ ಸುಧಾರಿಸಿಕೊಳ್ಳಲು ಕೆಲವು ದಿನಗಳೇ ಬೇಕಿತ್ತು. ಒಟ್ಟಾರೆಯಾಗಿ ನಾರುಹುಣ್ಣಾದರೆ ತಿಂಗಳುಗಟ್ಟಲೇ ನೋವಿನಿಂದ ನರಳಬೇಕಾಗುತ್ತಿತ್ತು.