ಗ್ಲೂರ ತ್ರಾಕ: "ಜಗತ್ಸಮರ" - ಭಾಗ ೧
"ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!" - ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ
(ಎಚ್ಚರ ಮನಸ್ಸು ಸುಪ್ತ ನೀಚತೆಯನ್ನು ಮುಚ್ಚಲು ಹವಣಿಸುತ್ತದೆ, ನುಸುಕಿನ ಮಂದ ಕಿರಣಗಳು ಕತ್ತಲೆಯ ವೈಭವವನ್ನು ಮುಚ್ಚಲು ಪ್ರಯತ್ನಿಸಿದಂತೆ!)
೧
ಜಾರ್ಡೈನ್ ವಸತಿಗಳು ಮ್ಯಾನ್ಹಾಟನ ನಲ್ಲಿ ಕೆ.ಎಸ್. ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಅಗ್ಗದ ನಿವಾಸಸ್ಥಳ. ನವದಂಪತಿಗಳಿಗೆ, ಪಿಎಚ್ಡೀ ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದಂತಹಾ ಜಾಗ. ವಿಶಾಲ, ನಿರ್ಜನ, ಶಾಂತಿಯುತ ಸಮುದಾಯ. ಇದೇ ನನ್ನ ಸಧ್ಯದ ವಾಸಸ್ಥಳ. ಆದರೆ ನಾನು ವಿವಾಹಿತನೂ ಅಲ್ಲ, ಡಾಕ್ಟರೇಟ್ ಪದವಿಗಾಗಿ ಓದುತ್ತಲೂ ಇಲ್ಲ. ಕೆಲವು ದಿವಸ ತುಂಬಿದ ವಿದ್ಯಾರ್ಥಿಗೃಹಗಳಿಂದ ದೂರವಿರಲು ಇಲ್ಲಿಗೆ ಬಂದ ಬಡ ಬ್ರಾಹ್ಮಣ ಬ್ರಹ್ಮಾಚಾರಿ. ಜಾರ್ಡೈನ್ ಗೆ ಬಂದ ಕೆಲವೇ ತಿಂಗಳಲ್ಲಿ ನನಗೆ ಕಾಲವೇ ನಿಂತ ಅನುಭವವಾಯಿತು. ಬೆಳಗ್ಗಿನ ತರಗತಿಗಳಿಗೆ ಹೋಗಲಿಲ್ಲವೆಂದರೆ ದಿನಗಟ್ಟಲೇ ಜೀವಂತ ಪ್ರಾಣಿಗಳ ನೋಟವೇ ಸಿಗುತ್ತಿರಲಿಲ್ಲ. ಎರಡು ಕಾಲಿನ ಮೇಲೆ ನಿಂತ ಮನುಷ್ಯರನ್ನು ನೋಡಲೆಂದೇ ವಾಕಿಂಗಿಗೆ ತೆರಳುತ್ತಿದ್ದೆ. ಆದರೆ ಮನೆಯಿಂದ ಹೊರಬಿದ್ದನೆಂದರೆ ಕಾಣುತ್ತಿದ್ದದ್ದು ಮನಸ್ಸಿಗಿನ್ನು ಕಸಿವಿಸಿಯುಂಟು ಮಾಡುವಂತಾದ್ದು. ವಿವಾಹಿತ ಜೋಡಿಗಳು ಕೈಯಲ್ಲಿ ಕೈಹಿಡಿದು ಸದ್ದಿಲ್ಲದೇ ಡ್ಯುಯೆಟ್ ಹಾಡುತ್ತಾ ಆನಂದದಿಂದ ಜಾರ್ಡೈನ್ ನ ಈ ತುದಿಯಿಂದ ಆ ತುದಿಯ ತನಕ ವಾಕ್ ಮಾಡುತ್ತಿದ್ದುದು ಸಾಮಾನ್ಯ. ನನ್ನ ಒಂಟಿತನಕ್ಕೆ ಸವಾಲಿಟ್ಟಂತಾಗುತ್ತಿತ್ತು ಈ ನೋಟಗಳು. ಸೆಪ್ಟೆಂಬರ್ನ ತಣ್ಣನೆಯೆ ರಾತ್ರಿಗಳಲ್ಲಿ ಒಂಟಿಯಾಗಿ ವಾಕ್ ಮಾಡುವಾಗ ಕೆಲವೊಮ್ಮೆ ಯೋಚಿಸುತ್ತಿದ್ದೆ. ನನ್ನೊಡನೆ ಸಂಗಾತಿಯಾಗಿ ಒಂದು ಭೂತವಿದ್ದರೂ ಸಾಕಿತ್ತು, ನಾನು ಮಾಡುತ್ತಿದ್ದ ಅಡುಗೆಯನ್ನು ಕದ್ದುಮುಚ್ಚಿಯಾದರೂ ತಿನ್ನುತ್ತಿತ್ತು. ಮನೆಯಲ್ಲಿ ನಾನು ಮಾಡಿದ ಕೊಳಕ್ಕನ್ನು ಬಿಟ್ಟು ಬೇರೆಯೊಬ್ಬರು ಮಾಡಿದ ರಾದ್ಧಾಂತವಾದರೂ ನೋಡುವುದಕ್ಕೆ ಸಿಗುತ್ತಿತ್ತು. ಅದಕ್ಕೆ ಅಂತಹಾ ಕೆಟ್ಟ ಪೈಶಾಚಿಕ ಪ್ರವೃತ್ತಿಯಿರದಿದ್ದರೆ, ಸಣ್ಣದಾಗಿ ಜಗಳವಾದರೂ ಆಡಬಹುದೆಂದು ಯೋಚಿಸಿ ಮನಸ್ಸಿನಲ್ಲಿಯೇ ಒಮ್ಮೆ ಹಾಗೆ ನಟಿಸಿದ್ದೆ.
ಡಿಸೆಂಬರ್ ಬರುತ್ತಿದ್ದಂತೆಯೇ ಈ ತರಹದ ಯೋಚನೆಗಳು ಹೆಚ್ಚಾದವು. ಇನ್ನು ಒಂಟಿಯಾಗಿರುವುದು ಕ್ಷೇಮವಲ್ಲವೆಂದು ಅರಿತು ಪುನಃ ದೇಸಿ ವಿದ್ಯಾರ್ಥಿಗಳ ಮನೆಯೊಂದನ್ನು ಹುಡುಕಿ ಜಾರ್ಡೈನ್ನಿಂದ ಜಾಗ ಖಾಲಿಮಾಡಲು ತಯಾರಿ ನಡೆಸಿದೆ. ಆದರೆ ನನ್ನ ಕರ್ಮಕ್ಕೆ ನನ್ನ ಒಂಟಿತನ ನನ್ನ ಜೊತೆಗೇ ಈ ಹೊಸ ಮನೆಗೂ ಕಾಲಿಟ್ಟಿತು. ಡಿಸೆಂಬರ್ನ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ಇಡೀ ಮ್ಯಾನ್ಹಾಟನ್ನೇ ಖಾಲಿಯಾಗುತ್ತದೆ. ಭಾರತೀಯ ವಿದ್ಯಾರ್ಥಿಗಳು ತಿಂಗಳ ರಜೆಗೆ ಭಾರತಕ್ಕೋ ಅಥವ ಅಮೇರಿಕ ಟೂರ್ಗೋ ತೆರಳುತ್ತಾರೆ. ಆರು ಜನರಿರುವ ಮನೆಯಲ್ಲಿ ಈಗ ಎರಡೇ ಜೀವಗಳು. ಒಬ್ಬನ ಮುಖ ಇನ್ನೊಬ್ಬ ನೋಡುವುದಕ್ಕೆ ೨-೩ ದಿನದ ಮುಂಚೆಯೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವ ಸಂದರ್ಭ.. ಆದರೆ ನಾನು ದೃತಿಗೆಡಲಿಲ್ಲ. ೧ ವರ್ಷ ಏಕಾಂಗಿಯಾಗಿದ್ದವ ಇನ್ನೊಂದು ತಿಂಗಳು ಇರಬಲ್ಲೆನೇ ಎಂದು ಸುಮ್ಮನಿದ್ದೆ. ಕ್ರಿಸ್ಮಸ್ ತನಕ ಏನೂ ತೊಂದರೆಯಿಲ್ಲದೇ ಒಂಟಿತನ ಮುಂದುವರೆಸಿದೆ.
೨
ಭೃಗೂಚಿ ಪುರಾತನ ಭಾಷೆ. ಇಂದಿನ ಕಾಲದವರಿಗೆ ಅರ್ಥವಾಗುವಂತೆ ಹೇಳಬೇಕೆಂದರೆ ಇಗೋ ಒಂದು ಸಣ್ಣ ಕತೆ. ಕಂಪ್ಯೂಟರ್ಗಳು ಬಂದಮೇಲೆ ಭಾಷೆಗಳು ವಿಕಾಸವಾದವಲ್ಲ, ಹಾಗೆಯೇ ಮನುಷ್ಯನ ಭಾಷೆಗಳು. ಮೊದಲು ಮಷೀನ್ ಲೆವಲ್ ಭಾಷೆ. ನಂತರ ಹೆಚ್ಚಿನ ನೈಪುಣ್ಯತೆ ಹಾಗು ಸುಧಾರಿತ ಹಾರ್ಡ್ ವೇರ್ಗಳು ಸೇರುತ್ತಾ ಹೋದಂತೆ ಹಲವು ಭಾಷೆಗಳು ಬೆಳೆದವಲ್ಲವೇ.. ಹಾಗೆಯೇ ಮನುಷ್ಯನ ಭಾಷೆಗಳೂ ಕೂಡ. ಭೃಗೂಚಿ ಜೀವಕುಲದ ಮೊತ್ತಮೊದಲ ಬುದ್ಧಿವಂತ ಭಾಷೆ. ಆಗಿನ ಕಾಲಕ್ಕೆ ಅದೊಂದು ಅವಿಷ್ಕಾರವೇ ಸರಿ. ಜಗತ್ತಿನಲ್ಲಿ ಯಾರುಬೇಕಾದರೂ ಮಾತಾಡಬಲ್ಲ ಭಾಷೆ ಅದು. ಪ್ರಾಣಿ ಪಕ್ಶಿ ಪಿಶಾಚಿಗಳಿಂದ ಹಿಡಿದು ಮನುಷ್ಯ, ದೇವ ಭೂತಗಳೆಲ್ಲರೂ ಮಾತಾಡಬಲ್ಲ ಸಾಮಾನ್ಯ ಭಾಷೆಯದು. ತದನಂತರವೇ ಬಂದಿದ್ದು ಪ್ರತ್ಯೇಕ ಪಂಗಡಗಳಿಗೆ ಪ್ರತ್ಯೇಕ ಭಾಷೆ. ಮೊದಲಿಗೆ ದೇವತೆಗಳು ತಮ್ಮದೇ ಆದ ಗುಪ್ತ ಭಾಷೆ ಬೆಳೆಸಿಕೊಂಡರು. ಅದನ್ನದುಮಿಕ್ಕಲು ಭೂತ ಪ್ರೇತಗಳು ತಮ್ಮದೇ ಆದ ಭಾಷೆ ಉಪಯೋಗಿಸಿದರು.. ಹೀಗೆ. ಒಟ್ಟಿನಲ್ಲಿ ಆಗಿನ ಕಾಲಕ್ಕೇ ಮಷೀನ್ ಇಂಡಿಪೆಂಡೆಂಟ್ ಭಾಷೆಯೊಂದಿತ್ತು; ಭೃಗೂಚಿ. ಅಲ್ಲಿಂದ ಮುಂದೆ, ಭಾಷಾವಿಕಸನ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದೂ, ಪತಂಜಲಿಯ ಸಂಸ್ಕೃತವು ಅಂದಿನ ಕಾಲದ ಸಿ ಆದದ್ದೂ ಇನ್ನೊಂದು ಕಥೆಯೇ. ಇದರ ಕಥೆ ಹೇಳಲು ಮತ್ತೊಂದು ಪುಸ್ತಕವೇ ಬೇಕೇನೊ!
ಭೃಗೂಚಿ ಭಾಷೆ ಆ ಕಾಲದ ಜೀವಿಗಳ ಮಿಡಿತವನ್ನು ಸೆರೆಹಿಡಿದಿದೆ. ಜೀವಿಗಳ ಭಾವನೆಗಳು ಇಂದಿನಂತೆ ಸುಧಾರಿತವಾಗಿರಲಿಲ್ಲ ಆ ಪುರಾತನ ಕಾಲದಲ್ಲಿ, ಕೆಟ್ಟದ್ದು ಒಳ್ಳೆಯದು ಇವುಗಳ ನಡುವೆ ವ್ಯತ್ಯಾಸವೇ ಇರದಿದ್ದ ಕಾಲ ಅದು. (ಇವತ್ತು ಅದೇ ತರಹದ ಯೋಚನಾ ಲಹರಿಗಳು ಬರುತ್ತಿರುವುದರಿಂದಲೇ ಈ ಕಥೆಗೆ ಮಹತ್ವ ಇದೆ ಅನ್ನಿ) ದೇವತೆಗಳು, ಭೂತ ಪಿಶಾಚಿ ಮನುಷ್ಯ ಹಾಗು ಇತರೆ ಜೀವಸಂಕುಲಗಳೆಲ್ಲವಕ್ಕೂ ಭೂಮಿಯೇ ಅಂದು ವಾಸಸ್ಥಾನ. ಅಂದೂ ಇವತ್ತಿನಂತೆ ದೇಶ ರಾಷ್ತ್ರಗಳೆಂಬ ಗಡಿಗಳು ಒಂದು ಜಾಗದ ಜೀವಿಗಳನ್ನು ಇನ್ನೊಂದು ಜಾಗದ ಜೀವಿಗಳಿಂದ ಬೇರ್ಪಡಿಸಿದ್ದವಂತೆ. ಅದರ ಪಳೆಯುಳಿಕೆಗಳೇ ಇಂದು ನಾವು ಕಂಡುಹಿಡಿದಿರುವ ಪುರಾತನ ನಾಗರೀಕತೆಗಳು. ಇವೆಲ್ಲವೂ ಇರುವಿಗೆ ಬಂದಿದ್ದು ಒಂದೇ ಕಾಲದಲ್ಲಿಯೇ.. ನಮ್ಮ ವಿಙ್ನಾನಿಗಳಿನ್ನೂ ಇವೆಲ್ಲವನ್ನು ಕಂಡುಹಿಡಿದಿಲ್ಲ ಬಿಡಿ. ಆ ಕಾಲಕ್ಕೆ, ನಮ್ಮ ಭಾರತೀಯ ದೈವಗಳೂ, ಅವರ ದೇವಗಣಗಳೂ, ನಮ್ಮ ರಾಕ್ಷಸರೂ ಬಹಳ ಪ್ರಬಲವಂತೆ. ನಮ್ಮ ಪುರಾಣಗಳೇನು ಸುಳ್ಳಲ್ಲ.. ಆದರೆ ಕೆಲವೊಮ್ಮೆ ಕಾಲಗತಿಯಲ್ಲಿ ಸ್ವಲ್ಪ ಎಡವಟ್ಟಾಗಿದೆಯಷ್ಟೆ. ಹಾಗೆಯೇ ಈಜಿಪ್ಟಿನಲ್ಲೂ ಕೂಡ ಅಲ್ಲಿನ ರಾಜರು ಅಲ್ಲಿನ ದೇವ ಭೂತಗಳೊಡನೆ ನೇರವಾಗಿ ವ್ಯವಹರಿಸುತ್ತಿದ್ದರಂತೆ. ದೇಶಗಳ ಮಧ್ಯೆ ಕಾಳಗವೆಸಗಿದಾಗ ಮಾನವ, ದಾನವ ಎಂಬ ವ್ಯತ್ಯಾಸವಿಲ್ಲದೇ ತಮ್ಮ ತಮ್ಮ ದೇಶಗಳಿಗಾಗಿ ಎಲ್ಲರೂ ಸೇರಿ ಹೊಡೆದಾಡುತ್ತಿದ್ದದು ಸಾಮಾನ್ಯ. ಆದರೆ ಭಾರತ ಮತ್ತು ಈಜಿಪ್ಟಿನ ನಾಗರೀಕತೆಗಳು ಸಮಬಲವಾದ್ದರಿಂದ ಒಂದುತರಹ ಶೀತಲಸಮರ ಬಿಟ್ಟರೆ ಮಿಕ್ಕಂತೆ ಇವೆರೆಡರ ಮಧ್ಯೆ ಹೆಚ್ಚುಕಮ್ಮಿ ಶಾಂತಿಯೇ ಇತ್ತು ಬಿಡಿ. ಒಟ್ಟಿನಲ್ಲಿ ಬಹಳವಾಗಿ ಇಂದಿನ ಪರಿಸ್ಥಿತಿಯೇ.. ಆದರೆ ಈಗಿನಷ್ಟು ಹೋಮೋಜೆನಿಟಿ ಇರಲಿಲ್ಲ.
೩
ಇವನಿಗೆ ಇದೆಲ್ಲಾ ಹೇಗೆ ತಿಳಿಯಿತು ಎಂದು ನೀವು ಯೋಚಿಸುತ್ತಿರಬಹುದು. ಬಂದೆ, ಅಲ್ಲಿಗೇ ಬಂದೆ. ಸುಪ್ತಮನಸ್ಸಿನಲ್ಲಿ ಯಾವ ಬಗೆಯ ಯೋಚನೆಗಳು ಬರುವವೋ ಅದು ಭಗವಂತನಿಗೂ ಗೊತ್ತಿರದ ವಿಷಯವಿರಬಹುದು (ಅವನ ಸುಪ್ತ ಮನಸ್ಸಿನ ಯೋಚನೆಗಳನ್ನು ಅರಿತವರ್ಯಾರು!). ಜಾರ್ಡೈನ್ ನಿಂದ ಮನೆ ಖಾಲಿ ಮಾಡಿದ ಮೇಲೆ ನನಗೆ ಒಂದು ಅನಿರೀಕ್ಷಿತ ಮಾಹಿತಿ ದೊರೆಯಲಾರಂಭಿಸಿತು. ಜಾರ್ಡೈನ್ ಆನ್-ಕ್ಯಾಂಪಸ್ ವಸತಿವೃಂದ. ಅಲ್ಲಿ ಇಂಟರ್ನೆಟ್ ಕನೆಕ್ಷನ್ ವಿಶ್ವವಿದ್ಯಾಲಯದ್ದು. ಅದರಿಂದಾಗಿ ನನಗೆ ಬೇಕಾದ ಸಂಗೀತವನ್ನು ಅಂತರ್ಜಾಲದಿಂದ ಇಳಿಸಲಾಗುತ್ತಿರಲಿಲ್ಲ. ನಾನು ಹೊಸದಾಗಿ ಬಂದ ಜಾಗ ಕಾಲೇಜ್ ಹೈಟ್ಸ್ ಅಂತ. ಇದು ಖಾಸಗೀ ಜಾಗವಾದ್ದರಿಂದ ಅಂತರ್ಜಾಲದಲ್ಲಿ ಏನು ಬೇಕಾದರು ಮಾಡಬಹುದು. ತಕ್ಶಣವೇ ಶುರುಮಾಡಿದೆ ನೋಡಿ, ಮೊದಲೇ ಒಂಟಿ ಜೀವ, ಸೊರಗಿದ್ದ ನನ್ನ ಡೆತ್ ಮತ್ತು ಬ್ಲ್ಯಾಕ್ ಮೆಟಲ್ ಸಂಗ್ರಹವನ್ನು ಇನ್ನಿಲ್ಲದಂತೆ ವೃದ್ಧಿಸಿದೆ. ಗೋಥೆನ್ಬರ್ಗ್ ಶೈಲಿಯ ಹಾಡುಗಳಿಂದ ಹಿಡಿದು NWOADM (new wave of american death metal), gore grind, vedic metal, ಹೀಗೆ ಜಗತ್ತಿನ ನಾನಾ ಮೂಲೆಗಳಿಂದ ತಯಾರಿಸಲ್ಪಟ್ಟ ಮೆಟಲ್ ಸಂಗೀತ ತಾನಾಗಿಯೇ ನನ್ನ ಬಾಗಿಲನ್ನು ಬಡಿಯಲು ಪ್ರಾರಂಭಿಸಿತು.
ಮೆಟಲ್ ಸಂಗೀತದಲ್ಲಿ ಒಂದು ವಿಶೇಷವಿದೆ. ದೂರಕ್ಕೆ ನೋಡಿದರೆ ಇದು ಸಂಗೀತವೇ ಅಲ್ಲ. ಸ್ವಲ್ಪ ಹತ್ತಿರದಿಂದ ಬಲ್ಲವರಿಗೆ ತಿಳಿಯುತ್ತದೆ ಇದು, ಮನುಷ್ಯನ ವಿಕಾರಗಳನ್ನು ಸಂಗೀತದ ಮೂಲಕ ತೆರೆದಿಡುವ ಪ್ರಯತ್ನ ಅಂತ. ನನ್ನ ಬ್ಲಾಗನ್ನು ನೋಡಿದರೆ ಕೆಲವೊಮ್ಮೆ ಈತರಹದ ಬರಹಗಳನ್ನು ನೀವು ಗುರುತಿಸಬಹುದು. ಆದರೆ, ತೀರ ಸನಿಹದಿಂದ ನೋಡಿ. ವಿಚಿತ್ರ ಸಂಗತಿಯೊಂದು ಬಯಲಾಗುತ್ತದೆ. ಇಂದು ಅತ್ಯಂತ ಸುಪ್ರಸಿದ್ಧ ಮೆಟಲ್ ಬ್ಯಾಂಡುಗಳು ತಯಾರಿಸುವ ಸಂಗೀತ ಪುರಾತನ ನಾಗರೀಕತೆಗಳಿಗೆ ಸಂಬಂಧಿಸಿದ್ದು. ಉದಾಹರಣೆಗೆ, ರುದ್ರ: ಸಿಂಗಾಪುರದ ತಂಡ. ಇವರ ವಿಷಯ ಪುರಾತನ ವೈದಿಕ ನಾಗರೀಕತೆ, ನೈಲ್, ಬೆಹಿಮೋತ್, ಮಾರ್ಬಿಡ್ ಏಂಜಲ್: ಇವುಗಳ ವಿಷಯ ಈಜಿಪ್ಟ್/ಸುಮೇರಿಯನ್ ನಾಗರೀಕತೆ. ಯೂರೋಪಿನ ಅನಂತ ಬ್ಲಾಕ್ ಮೆಟಲ್ ತಂಡಗಳ ವಿಷಯ: ನಾರ್ಡಿಕ್, ವೈಕಿಂಗ್ ಪುರಾಣಗಳು. ಆದರೆ ಕೆಲವು ಅರೆಬೆಂದ ಮೆಟಲ್ ಬ್ಯಾಂಡ್ಗಳೂ ಇವೆಯನ್ನಿ. ಇವುಗಳ ಸಂಗೀತ ಭೂತ ಪಿಶಾಚಿಗಳದ್ದು, ಮನುಷ್ಯನ ಮಾನಸಿಕ ವಿಕಾರಗಳನ್ನು ತೆರೆದಿಡುವ ಸ್ಪರ್ಧೆ ಇವುಗಳ ನಡುವೆ. ಈ ತರಹದ ಬ್ಯಾಂಡ್ಗಳ ವಿಷಯವನ್ನೂ ಪ್ರಸ್ತಾಪಿಸಿದ್ದೇನೆ ನನ್ನ ಬ್ಲಾಗಿನಲ್ಲಿ.. ಹೋಗಲಿ ಬಿಡಿ.. ಇಂತಹ ಸಂಗೀತದ ರುಚಿಯುಳ್ಳವರೇ ತೀರ ಕಮ್ಮಿ ಈ ಜಗತ್ತಿನಲ್ಲಿ. ಅಲ್ಲ್ದೇ, ಇವೆಲ್ಲವನ್ನು ಅರ್ಥೈಸಿಕೊಂಡೂ, ಎಲ್ಲಾ ನಾಗರೀಕತೆಗಳ ಬಗ್ಗೆ ಬರೆದಿರುವಂತಹ ಸಂಗೀತವನ್ನು ಒಟ್ಟಿಗೇ ಕೇಳುತ್ತಿರುವಂತಹ ಶ್ರೋತೃಗಳು ಇನ್ನೂ ವಿರಳ. ನನ್ನಂತಹ ಬ್ರಾಹ್ಮಣ ಬ್ರಹ್ಮಾಚಾರಿಗೆ ಈ ಚಟ ತಗುಲಿದ್ದು ನನ್ನ ಪೂರ್ವಜನ್ಮಗಳ ಕರ್ಮವೆಂದೇ ನನ್ನ ಪ್ರಬಲವಾದ ನಂಬಿಕೆ.
ಒಟ್ಟಿನಲ್ಲಿ ಹೇಳುವುದಾದರೆ, ಇಂದು, ಭೃಗೂಚಿ ಭಾಷೆಯ ಕಾಲದ ನಾಗರೀಕತೆಗಳ ಬಗ್ಗೆ ಡೆತ್ ಮತ್ತು ಬ್ಲ್ಯಾಕ್ ಮೆಟಲ್ ಸಂಗೀತದಲ್ಲಿ ಉಲ್ಲೇಖವಿದೆ. ಆದರೆ, ಭೃಗೂಚಿ ಭಾಷೆಯಾಗಲಿ ಅಥವ ಅಂದಿನ ಕಾಲದ ಅಂತರ್-ನಾಗರೀಕತೆಯ ಯುದ್ಧಗಳ ಬಗ್ಗೆಯಾಗಲಿ ಎಲ್ಲಿಯೂ ಪ್ರಸ್ತಾಪವಿಲ್ಲ. ನನ್ನ ಮೆಟಲ್ ಸಂಗೀತದ ಸಂಗ್ರಹವನ್ನು ವಿಸ್ತರಿಸುವ ಗಡಿಬಿಡಿಯಲ್ಲಿ ಅಕಸ್ಮಾತ್ತಾಗಿ ಈ ಎಲ್ಲಾ ಸಂಗತಿಗಳು ತುಂಡು ತುಂಡಾಗಿ ನನ್ನ ಕಿವಿಗೆ ಬೀಳಲು ಪ್ರಾರಂಭವಾದದ್ದು ಇತ್ತೀಚೆಗಷ್ಟೆ.
೪
ಮ್ಯಾನ್ಹಾಟನ್ ವಿಚಿತ್ರವಾದ ಜಾಗ. ಇಲ್ಲಿ ಒಂದೇ ದಿನದಲ್ಲಾಗುವ ಹವಾಮಾನದ ಏರುಪೇರುಗಳು ಹಲವು ಸ್ಥಳಗಳಲ್ಲಿ ಒಂದು ವರ್ಷದಲ್ಲಿಯೂ ಆಗುವುದು ವಿರಳವೇ. ಉತ್ತರ ಅಮೇರಿಕಾದ ಭೌಗೋಳಿಕ ಕೇಂದ್ರಬಿಂದುವಿಗೆ ಬಹಳ ಸಮೀಪ ಮ್ಯಾನ್ಹಾಟನ್. ನಾನೀಗಿರುವ ಜಾಗ, ಕಾಲೇಜ್ ಹೈಟ್ಸ್, ಕೆ. ಎಸ್. ಯೂ ವಿಶ್ವವಿದ್ಯಾನಿಲಯದ ನ್ಯೂಕ್ಲಿಯರ್ ರಿಯಾಕ್ಟರ್ ನ ತೀರ ಸಮೀಪದಲ್ಲಿದೆ. ನಮ್ಮ ಮನೆಯೋ ಮೂರು ಮಹಡಿಯ ಕಟ್ಟಡ. ನನ್ನ ರೂಮಿರುವುದು ಬೇಸ್ಮೆಂಟಿನಲ್ಲಿ. ಕಿಟಕಿಯಿ ನೋಟದಲ್ಲಿ ವಿಶೇಷವೇನು ಇಲ್ಲ ಬಿಡಿ (ಯಾವ ಹುಡುಗಿಯರೂ ಕಾಣುವುದಿಲ್ಲ ಇಲ್ಲಿ!) ಆದರೆ, ಭೂಮಿಯ ಒಳಗಿಂದ ಆಕಾಶದೆಡೆಗೆ ನೋಡಿದಂತಾಗುವ ಅನುಭವ ಮಾತ್ರ ರೋಮಾಂಚಕ. ನಾನಿಲ್ಲಿ ಸಧ್ಯಕ್ಕೆ ಏಕಾಂಗಿಯಾಗಿ ಇರಲು ಪ್ರಾರಂಭಿಸಿದ್ದೂ, ಮೆಟಲ್ ಸಂಗೀತವನ್ನು ೨೪/೭ ಕೇಳಲು ಶುರುಮಾಡಿದ್ದು ನಿಮಗೆ ತಿಳಿದ ವಿಚಾರವೆ.
ತೋಚಿದ ಕಾಲಕ್ಕೆ ನಿದ್ದೆ, ತೋಚಿದ ಕಾಲಕ್ಕೆ ಊಟ. ಒಂದು ದಿನ ರಾತ್ರಿ ನಾಲ್ಕು ಗಂಟೆಗೆ ನೈಲ್ನ "the blessed dead" ಹಾಡು ಕೇಳಿ ಮಲಗಿದೆ. ನಿದ್ದೆ ಬರದೇ ಬೆಳಗಿನಜಾವದ ತನಕ ಹಾಸಿಗೆಯಲ್ಲಿ ಹೊರಳಾಡುತ್ತಿದ್ದೆ. ಸುಮಾರು ೬:೩೦ಯ ಹೊತ್ತಿಗೆ ನಿದ್ದೆ ಬಂದ ಹಾಗಾಯಿತು. ನುಸುಕಿನ ಬೆಳಕು ಕಿಟಕಿಯ ವಿಂಡೋ ಪೇನ್ ಮೂಲಕ ಒಳಗೆ ಸೇರಲು ಹಣಾಹಣಿ ನಡಿಸಿತ್ತು. ಕತ್ತೆತ್ತಿ ನೋಡಿದರೆ ಕಿಟಕಿಯ ಹಿಂಭಾಗದಲ್ಲಿರುವ ಬೋಳುಮರದ ಕೊಂಬೆಯ ತುದಿಯಲ್ಲಿ ಎನೋ ವಿಚಿತ್ರವಾದ ಪ್ರಾಣಿ ಕಾಣಿಸಿತು. ಹೀಟರ್ ಬಂದ್ ಮಾಡಿದ್ದ ನನ್ನ ರೂಮ್-ಮೇಟ್ ಧಡಕ್ಕನೆ ಕದ ತೆಗೆದು ಒಳಗೆ ಬಂದ. ಬೆಚ್ಚಿ ಬಿದ್ದೆ. ಹೆದರಿದ್ದರೂ ಬೆವರಲೂ ಆಗದಿರದಂತಹ ಶೀತಲ ಗಾಳಿ ಬೀಸುತ್ತಿತ್ತು. ಮರುಕ್ಷಣದಲ್ಲಿ ಕೊಂಬೆಯ ಮೇಲೆ ಕೂತಿದ್ದ ಪ್ರಾಣಿ ಮಾಯವಾಗಿತ್ತು. ಇತ್ತ ತಿರುಗಿದರೆ ನನ್ನ ರೂಮ್-ಮೇಟ್ ಕೂಡ ಮಾಯ. ನಡುಕ ಬರಲಾರಂಭಿಸಿತು. ಇದಾದ ನಂತರ ವಿಚಿತ್ತ ಸ್ವಪ್ನಗಳು ಸಾಮಾನ್ಯವಾದವು. ನಿದ್ದೆ ಮಾಡುವುದಕ್ಕೇ ಹೆದರಿದ್ದೆ. ರಾತ್ರಿಯೆಲ್ಲಾ ಎದ್ದಿರಲು ಪ್ರಯತ್ನಿಸಿ ಬೆಳಗಿನ ಜಾವ, ಅಪರಾಹ್ನ ಹೀಗೆ ಕಂಡ ಕಂಡ ಕಾಲಕ್ಕೆ ನಿದ್ರೆಯ ಆಕ್ರಮಣ ಶುರುವಾಯುತು. ಯಾವಾಗಲೂ ಅರೆನಿದ್ದ್ರೆ. ದುಃಸ್ವಪ್ನಗಳು ಮನಸ್ಸನ್ನು ಹಿಂಡಿದವು. ಎದ್ದಾಗಲೋ ಪೈಶಾಚಿಕ ಸಂಗೀತದ ಗೀಳಿನಿಂದ ಅದೇ ಯೋಚನೆ ಮುಂದುವರೆಯುತ್ತಿತ್ತು. ಒಂದು ದಿನ ಏನಾದರೂ ಮಾಡಿ ಇವೆಲ್ಲವನ್ನು ತೊಲಗಿಸುತ್ತೇನೆಂದು ಹೇಳಿ ರಾತ್ರಿ ಒಂಭತ್ತಕ್ಕೇ ಮಲಗಿದೆ. ಅಂದು ನಾನು ಒಟ್ಟು ಮಲಗಿದ್ದು ಹದಿನೆಂಟು ಗಂಟೆಗಳು. ಕಂಡ ಸ್ವಪ್ನಗಳನ್ನು ನೆನೆದರೆ ಈಗಲು ಮೈ ನಡುಗುತ್ತದೆ. ಅಂದೇ ತಿಳಿದೆ..ಇನ್ನು ಹೋರಾಡಿ ಫಲವಿಲ್ಲ. ನನ್ನ ಜೀವನ ಇದರ ಶೋಧನೆಗೇ ಮುಡುಪಾಗಿಡಬೇಕೆಂಬುದು ಖಾತ್ರಿಯಾಯಿತು.