ಮತ್ತೆ ಅತ್ತಿತು ಗೀಜಗ..?!

ಮತ್ತೆ ಅತ್ತಿತು ಗೀಜಗ..?!

ಬರಹ

ಧಾರವಾಡದ ಸುಭಾಸ ಮಾರುಕಟ್ಟೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಾರಾಟಕ್ಕೆ ತರಲಾಗಿದ್ದ ಗೀಜಗ ಹಕ್ಕಿಯ ಗೂಡುಗಳು. ಜತೆಗೆ ಮಾರಾಟಗಾರ. ಚಿತ್ರ: ಕೇದಾರನಾಥ.

 

ನಿನ್ನೆ ಶುಕ್ರವಾರ ಗಣೇಶೋತ್ಸವ ಹಬ್ಬದ ಮುನ್ನಾದಿನ; ಹಾಗೂ, ಇಂದು ಶನಿವಾರ ಗಣೇಶನ ಹಬ್ಬ. ಈ ಎರಡೂ ದಿನಗಳಂದು ಅವ್ಯಾಹತವಾಗಿ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಪರಿಸರ ಪ್ರೇಮಿಗಳು, ಮಾಧ್ಯಮದವರು ಗೀಜಗ ಹಕ್ಕಿಯ ಗೂಡುಗಳನ್ನು ಕರಿಮುಖ ಗಣಪನ ಮುಂದೆ ಅಲಂಕಾರಕ್ಕಾಗಿ ಬಳಸದಂತೆ ಶ್ರೀಸಾಮಾನ್ಯರಲ್ಲಿ ಅರಿಕೆ ಮಾಡಲು ಸಾಕಷ್ಟು ಶ್ರಮಿಸಿದ್ದರು. 

 

ಧಾರವಾಡ ಜಿಲ್ಲೆಯ ವೈಲ್ಡ್ ಲೈಫ್ ವಾರ್ಡನ್ ಪ್ರೊ. ಗಂಗಾಧರ ಕಲ್ಲೂರ ಅವರ ಸಾರಥ್ಯದಲ್ಲಿ ಪರಿಸರ ಪ್ರೇಮಿಗಳಾದ ಸರೇಶ ಹೆಗ್ಗೇರಿ ಹಾಗೂ ಚಂದ್ರಕಾಂತ ಶಿಂಧೆ ಸಾಕಷ್ಟು ಮುಂಜಾಗ್ರತಾ ತಂತ್ರಗಳನ್ನು ಹೆಣೆದುಕೊಂಡು, ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಸಮೀಪದ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಹ ಮಾಡಿಕೊಂಡಿದ್ದರು. ಅವರ ಕಾಳಜಿ ಅರಿತ ಮಾಧ್ಯಮ ಮಿತ್ರರು ಈ ಆಂದೋಲನಕ್ಕೆ ಪ್ರಚಾರ ನೀಡಿ ಗಮನ ಸೆಳೆದಿದ್ದರು. ಆದರೆ, ಎರಡೂ ದಿನಗಳು ಧಾರವಾಡದ  ಸುಭಾಸ್ ಮಾರುಕಟ್ಟೆಯಲ್ಲಿ ನಮ್ಮ ಹಳ್ಳಿಯ ಜನ ೧೦, ೨೦, ೫೦ ರೂಪಾಯಿಗಳ ಗಳಿಕೆಯ ಆಸೆಯಲ್ಲಿ ನೂರಾರು ಗೂಡುಗಳನ್ನು ಮತ್ತೆ ಕಿತ್ತು ತಂದು, ಅಲಂಕಾರಿಕ ಮುಳ್ಳಿನ ಕಂಟಿಯಲ್ಲಿ ಬಚ್ಚಿಟ್ಟು ಮಾರಾಟಕ್ಕೆ ಯತ್ನಿಸಿದರು. 

 

ಬೆಳಿಗ್ಗೆ ೬ ಗಂಟೆಯಿಂದಲೇ ಪರಿಸರ ಪ್ರಹರಿಗಳು ಕಾವಲು ಕಾಯುತ್ತಿದ್ದರು! ಹಾಗಾಗಿ ಸುಮಾರು ನಾಲ್ಕು ಜನ ತಮ್ಮ ಹತ್ತಾರು ಸಿಮೆಂಟ್ ಚೀಲಗಳೊಂದಿಗೆ ಪ್ರೊ. ಗಂಗಾಧರ ಕಲ್ಲೂರ್ ತಂಡಕ್ಕೆ ಸಿಕ್ಕಿಬಿದ್ದರು. ಇವರೆಲ್ಲ ಹಳ್ಳಿಗರು, ನಾಲ್ಕಾರು ರೂಪಾಯಿ ಗಳಿಸುವ ಆಸೆಯಿಂದ ಈ ಕೆಲಸಕ್ಕೆ ಇಳಿದವರು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಹಬ್ಬದ ಈ ಪ್ರಸಂಗದಲ್ಲಿ ಏನಾದರೂ ಕಾಯಕ ಮಾಡಿ, ದುಡ್ಡು ಗಳಿಸುವ ಯೋಜನೆಯೊಂದೇ ಅವರಲ್ಲಿತ್ತೇ ವಿನ:, ಗೂಡು ನೇಯಲು ಗೀಜಗ ಹಕ್ಕಿ  ವ್ಯಯಿಸಿದ ಎರಡು ತಿಂಗಳ ಶ್ರಮ, ಗೂಡಿನೊಂದಿಗೆ ಬೆಸೆದು ಕೊಂಡಿರುವ ಅದರ ಬದುಕು, ಜೀವಿ ವೈವಿಧ್ಯದ ಸಂಕೀರ್ಣ ತಂತುಗಳು ಅವರ ಜ್ಞಾನ ಪರಿಮಿತಿಗೆ ಮೀರಿದ್ದು..

 

 

ಪ್ರೊ. ಗಂಗಾಧರ ಕಲ್ಲೂರ್, ಸುರೇಶ ಹೆಗ್ಗೇರಿ ಹಾಗೂ ಚಂದ್ರಕಾಂತ ಶಿಂಧೆ ಅವರ ತಂಡಕ್ಕೆ ಇಂದು ಬೆಳಿಗ್ಗೆ ಸಿಕ್ಕಿ ಬಿದ್ದ ಗೀಜಗ ಗೂಡಿನ ಮಾರಾಟಗಾರನಿಂದ ವಶಪಡಿಸಿಕೊಳ್ಳಲಾದ ಗೂಡುಗಳು. ಚಿತ್ರ: ಕೇದಾರನಾಥ.

 

ವಶ ಪಡಿಸಿಕೊಳ್ಳಲಾದ ಗೂಡುಗಳಲ್ಲಿ ಒಂದು ಹಿಡಿಯಷ್ಟು ಜೇಡಿ ಮಣ್ಣು- (ಇಲ್ಲಿ ಗೀಜಗನ ನೈಸರ್ಗಿಕ ಜ್ಞಾನ ನಾವು ಗುರುತಿಸಬೇಕು) ಕಾರಣ ಬೀಸುವ ಬಿರು ಗಾಳಿಗೆ ಗೂಡು, ಅದರೊಳಗಿನ ಮೊಟ್ಟೆ ಅಥವಾ ಮರಿ ಅನಾಮತ್ತಾಗಿ ನೆಲಕ್ಕೆ ಒರಗದಿರಲಿ ಎಂದು ತೋಲ ಕಾಯ್ದುಕೊಳ್ಳಲು ಹಾಗೂ ಹತ್ತಿಯ ಮೆತ್ತನೇಯ ಹಾಸಿಗೆಯಿಂದ ಹತ್ತಿ ಹಾರದಿರಲು ಅದು ಅನುಸರಿಸುವ ತಂತ್ರ!, ಹಾಗೆಯೇ, ಮೊಟ್ಟೆಗಳು, ಮರಿಗಳು ಇನ್ನು ಕೆಲವು ನಿರ್ಮಾಣ ಹಂತದಲ್ಲಿದ್ದ ಹಸಿ ನಾರಿನ ಗೂಡುಗಳೂ ಸಹ ಸೇರಿದ್ದವು. ಅನಾಮತ್ತಾಗಿ ೩೦೦ ಗೂಡುಗಳು ಈ ಧನದಾಹಿಗಳ ಕೈಗೆ ಸಿಕ್ಕು ಮಾರಾಟಕ್ಕಾಗಿ ಪೇಟೆ ತಲುಪಿದ್ದವು. ಅಲಂಕಾರಿಕ ಮುಳ್ಳಿನ ಕಂಟಿಗಳೊಂದಿಗೆ ಈ ಗೂಡುಗಳನ್ನು ಸಹ ಕೆಲವರು ಖರೀದಿಸುವ ಪ್ರಯತ್ನದಲ್ಲಿದ್ದರು. ಅವರನ್ನು ಕೇಳಿದರೆ.."ಏನ್ ಮಾಡೋದ್ರಿ..ಮಕ್ಳು ಒತ್ತಾಯ ಮಾಡಿದ್ವು..ಅದಕ್ಕ..!"

 

ಕೂಡಲೇ ಪ್ರೊ. ಗಂಗಾಧರ ಕಲ್ಲೂರ ಧಾರ್ವಾಡದ ತೆಶೀಲ್ದಾರ ರವೀಂದ್ರ ಕರಿಲಿಂಗೆಣ್ಣವರ್ ಅವರನ್ನು ಕೂಡಲೇ ಅಲ್ಲಿಗೆ ಕರೆಯಿಸಿಕೊಂಡರು. ಆ ಎಲ್ಲ ಗೂಡುಗಳನ್ನು ಅವರು ಜಪ್ತಿ ಮಾಡಿಕೊಳ್ಳುವಂತೆ, ಕೂಡಲೇ ಪೊಲೀಸರಿಗೆ ಹಸ್ತಾಂತರಿಸಿ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸುವಂತೆ ಮನವಿ ಮಾಡಿದರು. ತೆಶೀಲ್ದಾರ ರವೀಂದ್ರ ಅವರು, ಅರಣ್ಯ ಇಲಾಖೆಯವರಿಗೆ ಈ ಗೂಡುಗಳ ಬಗ್ಗೆ ಮಾಹಿತಿ ಮತ್ತು ಜನ ಕಿತ್ತು ಮಾರಾಟ ಮಾಡದಂತೆ, ಹಾಗೇನಾದರೂ ಒಂದು ವೇಳೆ ಮಾಡಿದರೆ  ಅಂಥವರ  ಪ್ರತಿ ಕ್ರಮ ಕೈಗೊಳ್ಳಲು ಅರಣ್ಯ ಕಾನೂನಿನಲ್ಲಿ ಉಲ್ಲೇಖಗಳಿದ್ದರೆ ತಿಳಿಸುವಂತೆ ನಿರ್ದೇಶಿಸಿದರು. ಮಾರಾಟ ಮಾಡಲು ಬಂದ ಹಳ್ಳಿಗರ ವಿಳಾಸ, ಸಂಪರ್ಕ ಪಡೆದು ಅವರನ್ನು ಅಲ್ಲಿಂದ ಕಳುಹಿಸಿದರು.

 

ಧಾರವಾಡದ ಸುಭಾಸ ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ಗೀಜಗ ಹಕ್ಕಿಯ ಗೂಡು ಮಾರಾಟದಲ್ಲಿ ನಿರತನಾದ ಸಮೀಪದ ಹಳ್ಳಿಯ ರೈತ. ಚಿತ್ರ: ಕೇದಾರನಾಥ.

 

ಆದರೆ, ಅವರಲ್ಲಿ ಬಹುತೇಕರು ಧಾರ್ವಾಡದ ಸ್ಲಂ ಗಳಿಂದ ಬಂದ ಕೊರಚರು, ಕೊರವರು, ಹಕ್ಕಿಪಿಕ್ಕಿಗಳು, ಗೋಸಾವಿಗಳೂ ಸಹ ಇದ್ದರು. ಇವರು ಬಹುತೇಕ ನಾಲ್ಕಾರು ದಿನ ಧಾರ್ವಾಡ ಸಮೀಪದ ಕುರುಚಲು ಕಾಡುಗಳಲ್ಲಿ ಅಡ್ಡಾಡಿ ಸಾಕಷ್ಟು ಗೂಡುಗಳನ್ನು ಕಲೆ ಹಾಕಿಕೊಂಡು ಬಂದಿದ್ದು ಮೇಲ್ನೋಟಕ್ಕೇ ಸಾಬೀತಾಗುವಂತಿತ್ತು. ಆದರೆ ಅವರು ಶಾಲೆಯ ಮುಖವನ್ನೇ ನೋಡದವರು. ಓದಲು-ಬರೆಯಲು ಸಹ ಗೊತ್ತಿಲ್ಲದವರು. ಮೇಲಾಗಿ ಬಡವರು. ಅಂಥವರ ಮೇಲೆ ಏಕಾಏಕಿ ಕಾನೂನು  ಕ್ರಮ ಜರುಗಿಸಿದರೆ? ಹೀಗೊಂದು ನೈತಿಕ ಸಮಸ್ಯೆ ಪ್ರೊ. ಕಲ್ಲೂರ ಅವರನ್ನು ಕಾಡಿತು. ಅವರಿಗೆ ಅರಿಕೆ ಮೂಡಿಸಿ, ಮುಂದಿನ ವರುಷವಾದರೂ ಈ ಕೆಲಸಕ್ಕೆ ಕೈ ಹಾಕದಂತೆ ಮಾಡಲು ಅವರು ನಿಂತಲ್ಲೇ ತಿಳಿ ಹೇಳಿದರು. ಆದರೆ ಅವರು ಕೇಳಿಸಿಕೊಳ್ಳುವ ಗೊಡವೆಗೆ ಹೋದಂತೆ ಕಾಣಲಿಲ್ಲ. 

 

ಗೂಡು ಮಾರಾಟ ಮಾಡಲು ನಿಂತವರಲ್ಲಿ ಬಹುತೇಕ ಮಹಿಳೆಯರು ಹಾಗೂ ಮಕ್ಕಳೇ ಇದ್ದರು ಎನ್ನುವುದು ಸಂಕಟದ ಸಂಗತಿ. ಅವರಿಗೆ ಭರ್ಜರಿ ವ್ಯಾಪಾರ ಕಳೆದುಕೊಳ್ಳುವ ಇಷ್ಟವಿಲ್ಲ, ಮೇಲಾಗಿ ತಂದ ಗೂಡುಗಳೆಲ್ಲ ಮುಟ್ಟುಗೋಲಾಗಿ ನಷ್ಟ ಬೇರೆ, ಹಾಗಾಗಿ ಆ ನಷ್ಟವನ್ನೇ ತುಂಬಿಕೊಡುವಂತೆ ಅವರು ಕಲ್ಲೂರ್ ಅವರಿಗೆ ದುಂಬಾಲು ಬಿದ್ದರು. ಕಾನೂನಿನ ಅನ್ವಯ ನಿಮ್ಮ ಮೇಲೆ ಕ್ರಮ ಜರುಗಿಸಬಹುದು ಎಂದ ಮೇಲೆ ಅವರು ತಣ್ಣಗಾಗಿದ್ದು!

 

ನೋಡಿ ಈ ಮಹಿಳೆಯ ಅಮಾಯಕ ಮುಖ. ಪಾಪ ಬಡತನ ಏನೆಲ್ಲಾ ಕೆಲಸಗಳನ್ನು ಮಾಡಲು ಹಚ್ಚುತ್ತದೆ ಎಂಬುದಕ್ಕೆ ಜೀವಂತ ಉದಾಹರಣೆ. ಚಿತ್ರ: ಕೇದಾರನಾಥ.

 

ಕಳೆದ ಸರಿ ಸುಮಾರು ಒಂದು ವಾರದಿಂದ ನಮ್ಮ ಮಾಧ್ಯಮಗಳು ಈ ಕುರಿತಂತೆ ಅರಿವು ಮೂಡಿಸಲು ಪ್ರಯತ್ನ ಮಾಡಿದರೂ, ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಮೇಲಾಗಿ, ಈ ಕುರಿತಂತೆ ಅರಣ್ಯ ಪರಿಪಾಲನೆ ಅಥವಾ ವನ್ಯ ಜೀವ ಪರಿಪಾಲನಾ ಕಾನೂನಿನ ಅಡಿಯಲ್ಲಿ ಲಭ್ಯವಿರುವ ಕಾನೂನು, ದಂಡನೆ ಕುರಿತಂತೆ ಓದಿಕೊಂಡು ಯಾವುದೇ ಪೂರ್ವ ತಯಾರಿಯನ್ನು ಅವರು ಮಾಡಿಕೊಂಡಿರಲಿಲ್ಲ. ಸ್ವತ: ವೈಲ್ಡ್ ಲೈಫ್ ವಾರ್ಡನ್ ಗಳೇ ಮುಂದಾಗಿ ಈ ಕೆಲಸಕ್ಕೆ ಇಳಿದಾಗಲೂ ಅವರಿಂದ ಪೂರಕ ಸ್ಪಂದನೆ ಸಿಗಲಿಲ್ಲ. ಇನ್ನು ಪೊಲೀಸ್ ಇಲಾಖೆ ಎರಡೂ ಹಬ್ಬಗಳನ್ನು ಏಕಕಾಲಕ್ಕೇ ಪ್ರಬಂಧಿಸುವ ಏಕಮೇವ ಏಜೆಂಡಾ ಅವರಿಗೆ ಮೊದಲೇ ಇದ್ದಿದ್ದರಿಂದ, ಕೆಲವರು ಖಾಲಿ ಇದ್ದವರು ಈ ಕೆಲಸಕ್ಕೆ ಬಾರದ ಕೆಲಸಗಳನ್ನು ಹಮ್ಮಿಕೊಂಡು ನಮ್ಮ ಜೀವ ಹಿಂಡುತ್ತಾರೆ ಎಂಬ ಮನೋಧೋರಣೆ ಅಲ್ಲಿ ಮನೆಮಾಡಿತ್ತು! 

 

ತೆಹಶೀಲ್ದಾರ ನಿರ್ದೇಶನದಂತೆ ಮುಟ್ಟುಗೋಲು ಹಾಕಿಕೊಳ್ಳಲಾದ ಗೂಡುಗಳನ್ನು ಎಲ್ಲಿಗೆ ಸಾಗಿಸಬೇಕು? ಯಾರಿಗೆ ನೀಡಬೇಕು? ಪ್ರಕರಣ ಯಾವ ಫಿರ್ಯಾದುದಾರನ ಹೆಸರಿನಲ್ಲಿ ದಾಖಲಿಸಬೇಕು? ಯಾವ ಕಲಂ ಅಡಿಯಲ್ಲಿ ಗೀಜಗ ಗೂಡಿನ ಪ್ರಕರಣ ಫಿಕ್ಸ್  ಮಾಡಬೇಕು ಎಂಬ ದ್ವಂದ್ವ! ಯಾರನ್ನು ಬಂಧಿಸಬೇಕು? ಹೀಗೆ ಉತ್ತರವಿಲ್ಲದ ಸಮಸ್ಯೆ ಎದುರಿಸುವ, ಮತ್ತೆ ಎರಡೂ ಹಬ್ಬಗಳ ಬಂದೋಬಸ್ತ್ ನಿರ್ವಹಿಸುವ ಧಾವಂತದಲ್ಲಿ ಮುಖ್ಯ ಮಾರಾಟಗಾರರು, ಚೀಲಗಳನ್ನು ತಿಪ್ಪೆ ಗುಂಡಿಯಲ್ಲಿ ಎಸೆದು ಎಲ್ಲರ ಕೈಯಿಂದ ತಪ್ಪಿಸಿಕೊಂಡು ಪಾರಾಗುವಲ್ಲಿ ಯಶಸ್ವಿಯಾದರು. ಅವರಿಂದ ಖರೀದಿಸಿ ಮಾರಾಟಕ್ಕೆ ಅಣಿಗೊಳ್ಳುತ್ತಿದ್ದವರು ನಮ್ಮ ಕೈಗೆ ಸಿಕ್ಕಬಿದ್ದರು!

 

 

ಬಾಲಕನೋರ್ವ ಗೀಜಗನ ಗೂಡು ಮಾರಾಟಮಾಡುತ್ತಿರುವುದು. ಚಿತ್ರ: ಕೇದಾರನಾಥ.

 

ಸಂತೆಯೊಳಗೆ ಮೊಳ ಸೀರೆ ನೇಯುವ ಕಾಯಕ ನಾವು ಕೈಬಿಡುವುದು ಯಾವಾಗ? ಎಂಬುವುದು ನಮ್ಮ ಮುಂದಿರುವ ಸವಾಲು. ಹಾಗೆಯೇ, ಸಂಬಂಧ ಪಟ್ಟ ಇಲಾಖೆಗಳು ಸೂಕ್ತ ಪೂರ್ವ ತಯಾರಿಗೆ ಮುಂದಾಗುವುದು ಯಾವಾಗ? ಬಹುಶ: IUCN ಗೀಜಗ ಹಕ್ಕಿಯನ್ನು  Most Endangered Species ಎಂದು ಉಲ್ಲೇಖಿಸುವವರೆಗೆ ನಾವು ಹೀಗೆ ಮೈಮರೆವು ಮೆರೆಯುತ್ತಿರುವುದೋ?