ಪ್ರಶಸ್ತಿ

Submitted by Iynanda Prabhukumar on Sun, 09/19/2010 - 20:11
ಬರಹ

ನನ್ನ ಪರಿಚಿತರ ಮನೆಗೊಮ್ಮೆ ಹೋಗಿದ್ದೆ. ಅವರ ಮನೆಯ ಬಳಿ ತಲಪುತ್ತಲೇ ಅವರು ತಮ್ಮ ಪಕ್ಕದ ಮನೆಯವನೊ೦ದಿಗೆ ಜಗಳವಾಡುತ್ತಿರುವುದು ಕಂಡುಬಂತು. ಸ್ವಲ್ಪ ಹೊತ್ತು ಬಿಟ್ಟು ತಿರುಗಿ ಬರೋಣಾ ಎಂದುಕೊಳ್ಳುತ್ತಿರುವಷ್ಟರಲ್ಲೇ ನೆರೆಯಾತ, "ಹೋಗೋ ಬೋ…ಮಗನೇ…" ಎಂದು ನನ್ನ ಪರಿಚಿತರನ್ನು ಬಯ್ದುಬಿಟ್ಟ.


"ಏನೋ ಅಂದೇ?" ಅಂತ ಈತ ತೋಳೇರಿಸಿಕೊಂಡು ಆತನನ್ನು ಹೊಡೆಯಲು ಹೊರಟರು.


ಪರಿಸ್ಥಿತಿ ವಿಷಮಕ್ಕೇರುತ್ತದೆಯೆಂದು ನಾನು ಧಾವಿಸಿ, ಈತನನ್ನು ತಬ್ಬಿ ಹಿಡಿದು, "ಬೇಡ ಬನ್ರೀ..", ಎಂದೆನ್ನುತ್ತಾ ಅವರ ಮನೆಯೊಳಕ್ಕೆ ತಳ್ಳಿದೆ. ಅವರ ಪತ್ನಿ ಬಂದು ಮುಂಬಾಗಿಲು ಹಾಕಿದರು.ಅವರಿನ್ನೂ ಕೂಗಾಡುತ್ತಲೇ ಇದ್ದರು:
"
ಅವನ್ಯಾವನು ನನ್ನ ಬೋ…ಗಾಂತ ಕರೆಯೋದಕ್ಕೆ? ಅವನು ಹುಟ್ಟಿಲ್ಲಾಂತನ್ನಿಸ್ಬಿಡ್ತೀನಿ…"


ನಾನು, "ಅಯ್ಯೋ, ಸುಮ್ನಿರೀಪ್ಪಾ. ಅಂಥಾವರ್ ಜತೆ ಪದ್ಮಶ್ರೀ ಪ್ರಶಸ್ತಿ ಪಡೆದ ನೀವು ಜಗಳಾಡ್ಬಾರ್ದು…" ಎಂದೆ.


ತುಸು ಆಶ್ಚರ್ಯದಿಂದ ನನ್ನೆಡೆಗೆ ನೋಡಿ, "ನನಗ್ಯಾರ್ರೀ ಪದ್ಮಶ್ರೀ ಪ್ರಶಸ್ತಿ ಕೊಟ್ರು?" ಎಂದು ಕೇಳಿದರು.


"ನಾನೇಪ್ಪಾ."


"ಇದೊಳ್ಳೆ ತಮಾಶೆ. ನೀವು ಪದ್ಮಶ್ರೀ ಪ್ರಶಸ್ತಿ ಕೊಡೋರಾ? ನೀವು ಕೊಟ್ರೆ ನನಗದು ಬಂದ್ಬಿಡ್ತಾ.. ಚೆನ್ನಾಗಿದೆ!" ಎಂದು ತುಸು ನಕ್ಕರು.


"ಮತ್ತೆ? ಅವರು ನಿಮಗೆ ಬೋ… ಅಂತ ಪ್ರಶಸ್ತಿ ಕೊಟ್ಟಾಗ ಅದನ್ನ ತೊಗೊಂಡು ಥ್ಯಾಂಕ್ಸ್ ಹೇಳೊಕ್ ಹೋಗ್ತಿದ್ರಿ?"


ಮತ್ತೆ ಕೋಪ ಮರುಕಳಿಸಿತು: "ಅವನ್ಯಾವನ್ರೀ ನನ್ನ ಹಾಗೆಲ್ಲಾ ಅನ್ನೋದಕ್ಕೆ…?"


"ಅಲ್ವೇ ಮತ್ತೆ? ಪ್ರಶಸ್ತಿ ಕೊಡೋದಕ್ಕೆ ನಾನೂ ಯಾವನೂ ಅಲ್ಲ; ಅವನೂ ಅಲ್ಲ. ಪದ್ಮಶ್ರೀಯಂತ ಒಳ್ಳೇ ಪ್ರಶಸ್ತಿ ಕೊಟ್ಟದ್ದನ್ನ ಒಪ್ಪಿಕೊಳ್ಳದ ನೀವು ಕೆಟ್ಟ ಮಾತಿನ ಪ್ರಶಸ್ತೀನೂ ಒಪ್ಪಿಕೋಬಾರದಲ್ವೇ? ಬಿಟ್ಬಿಡಿ… ಪ್ರಶಸ್ತಿ ಅವ್ನಿಗೇ ಇರುತ್ತೆ."


ಒಂದು ಕ್ಷಣ ಸುಮ್ಮನಿದ್ದು ನನ್ನ ಮಾತನ್ನು ಮನನ ಮಾಡಿ, ಜೋರಾಗಿ ನಗಲಾರಂಭಿಸಿದರು.