ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೩

Submitted by manjunath.kunigal on Tue, 09/21/2010 - 16:53
ಬರಹ

http://sampada.net/article/24590 - ಭಾಗ - ೦೧

http://sampada.net/article/24910 - ಭಾಗ - ೦೨

 

ಭಾಗ - ೦೩
ನಿಗದಿಯಾಗಿದ್ದ ಕಾಬುಲ್-ಕಂದಹಾರ್ ISAF-73 ನ್ಯಾಟೊ ಮಿಲಿಟರಿ ವಿಮಾನ ಕೆಲ ಸುರಕ್ಷತಾ ಕಾರಣದ ನೆಪವೊಡ್ಡಿ ರದ್ದಾಗಿತ್ತು. ಕಂದಹಾರ್ ನಿಂದ ಕಾಬುಲ್ ಬರುವಾಗಲೂ ಇದೇ ರೀತಿಯ ಸಮಸ್ಯೆಯಾಗಿತ್ತು. ಈ ಮಿಲಿಟರಿ ವಿಮಾನಗಳ ವೇಳಾಪಟ್ಟಿ ಅಲ್ಲಿನ ಸುರಕ್ಷತಾ ವಾತಾವರಣದ ಮೇಲೇಯೇ ಅವಲಂಬಿತವಾದ್ದರಿಂದ, ಯಾವುದೇ ಸಣ್ಣ ಪ್ರಮಾಣದ ಅಹಿತಕರ ಘಟನೆಯೂ ಸಹ ಪೂರ್ವನಿಗದಿತ ಯೋಜನೆಗಳನ್ನೆಲ್ಲಾ ಅಲ್ಲೋಲ ಖಲ್ಲೋಲವನ್ನಾಗಿಸುತ್ತವೆ. ಮುಂದಿನ ಪ್ರಯಾಣದ ದಿನ ಸ್ಪಷ್ಟವಾಗಿರಲಿಲ್ಲವಾದ್ದರಿಂದ ಕಂಪನಿಯ ಅತಿಥಿ ಗೃಹದ ಜೈಲು ವಾಸ ಮುಂದುವರೆದಿತ್ತು. ಸುರಕ್ಷತೆಯ ದೃಷ್ಟಿಯಿಂದ ತೀರ ಅಗತ್ಯವಾದಲ್ಲಿ ಮಾತ್ರ ಹೊರಗೆ ಹೋಗಲು ಅನುಮತಿ ಸಿಗುತ್ತಿದ್ದಾದ್ದರಿಂದ ನನಗೆ ಹೊರ ಹೋಗಲು ಅಸಾಧ್ಯವಾಗಿತ್ತು. ಕಾಬೂಲಿನಲ್ಲಿರುವ ಕೆಲ ದೇವಸ್ಥಾನಗಳು, ಬಾಬರ್ ನ ಸಮಾಧಿ ಸ್ಥಳ, ರತ್ನಗಂಬಳಿ ಮಾರುವ ಪೇಟೆಯೂ ಸೇರಿದಂತೆ ಇನ್ನೂ ಕೆಲ ಸ್ಥಳಗಳನ್ನು ಒಮ್ಮೆ ನೋಡಿಬರುವ ಆಸೆಯಂತೂ ಕಮರಿರಲಿಲ್ಲ. ಮೊಹಮ್ಮದ್ ನೊಡನೆ ಈ ವಿಷಯವಾಗಿ ಚರ್ಚಿಸಲಾಗಿ, ಹಿರಿಯ ಅಧಿಕಾರಿಗಳ ಅನುಮತಿ ತೆಗೆದುಕೊಂಡರೆ ನನ್ನದ್ಯಾವ ಅಭ್ಯಂತರವಿಲ್ಲವೆಂದ. ನನ್ನ ಪ್ರವಾಸೀ ಚಟುವಟಿಕೆಗಳಿಗೆ ಅನುಮತಿ ಕೊಡುವಂತಹ ಹುಚ್ಚು ರಿಸ್ಕ್ ತೆಗೆದುಕೊಳ್ಳಲು ಅವರು ಸಿದ್ದರಿರಲಿಲ್ಲ. ನನ್ನ ಆಸೆ ಅಲ್ಲಿಯೇ ಕಮರಿಹೋಗಿತ್ತು.
ಆ ಅತಿಥಿ ಗೃಹದ ಆವರಣ ಸುಮಾರು ಮೂರು ಸಾವಿರ ಚದರ ಮೀಟರ್ ನಷ್ಟಿರಬಹುದು. ನಾ ಮೊದಲೇ ಹೇಳಿದಂತೆ ಲಂಘಿಸಲಸಾಧ್ಯ ಗೋಡೆಗಳ ಆವರಣವದು. ಒಂದು ಮೂಲೆಯಲ್ಲಿ ಇಪ್ಪತ್ತರಿಂದ ಮೂವತ್ತು ಜನ ಉಳಿದುಕೊಳ್ಳುತ್ತಿದ್ದ ’ವಿಲ್ಲಾ’ದಂತಿದ್ದ ಐರೋಪ್ಯ ಶೈಲಿಯ ಕಟ್ಟಡ. ಅದಕ್ಕೊಂದಿಕೊಂಡಂತೆ ಇದ್ದ ಉಪಹಾರ ಗೃಹ. ಅದರ ಎದುರು ಸುಸಜ್ಜಿತವಾದ ಕಂಪನಿಯ ಕಛೇರಿ. ಮತ್ತೊಂದು ಪಾರ್ಶ್ವದಲ್ಲಿ ಬೃಹತ್ ಲಾಂಡ್ರಿ, ಮತ್ತದರ ಗಾರ್ಮೆಂಟ್ ಫ್ಯಾಕ್ಟರಿಯಂತಹ ಶಬ್ದ. ಅದರ ಪಕ್ಕದಲ್ಲಿ ದಿನದ ಇಪ್ಪತ್ನಾಲ್ಕು ಘಂಟೆಯೂ ವಿಚಿತ್ರವಾಗಿ ಕಿರಿಕಿರಿ ಸದ್ದು ಮಾಡುತ್ತಿದ್ದ ಎರಡು ಜೆನರೇಟರ‍್ ಗಳು. ಬೆಳಗ್ಗೆ ಮತ್ತು ಸಂಜೆಯ ಹೊತ್ತು ಲಾಂಡ್ರಿಯ ಕೆಲಸಕ್ಕಾಗಿ ಬಂದು ಹೋಗುತ್ತಿದ್ದ ಅಲ್ಲಿನ ಕೆಲ ಸ್ಥಳೀಯರು, ಅವರ ದೇಹದ ಕಣ-ಕಣ ವನ್ನೂ ಪರೀಕ್ಷಿಸಿ ಒಳ/ಹೊರ ಬಿಡುತ್ತಿದ್ದ ಭದ್ರತಾ ಸಿಬ್ಬಂದಿ, ಹದಿನೈದಿಪ್ಪತ್ತು ಯೂರೋಪಿನ ಜನ ಮತ್ತು ಇಬ್ಬರು ಭಾರತೀಯ ಹುಡುಗರು ಆವರಣದ ಒಳಗೇ ಕಛೇರಿಯಲ್ಲಿ ಕೆಲಸ ಮಾಡುವುದು ಮತ್ತು ಅತಿಥಿ ಗೃಹದಲ್ಲಿ ಮಲಗುವುದು ಇವಿಷ್ಟೇ ನಾ ನೋಡುತ್ತಿದ್ದ ದಿನ ನಿತ್ಯದ ಅಲ್ಲಿನ ಚಟುವಟಿಕೆಗಳು. ಇಂತಹ ವಾತಾವರಣದಲ್ಲಿ ನಾನು ಕಾಲ ದೂಡಬೇಕಾಗಿ ಬಂದಿತ್ತು.


ನನ್ನ ಜೀವನದ ಬಲು ಬೇಸರದ ದಿನಗಳವು ಎಂದರೆ ತಪ್ಪಾಗಲಿಕ್ಕಿಲ್ಲ. ಒಂದೆರಡು ದಿನಗಳಲ್ಲಿ ಕಂದಹಾರ್ ಪ್ರಯಾಣ ನಿಗದಿಯಾಗಬಹುದೆಂದುಕೊಂಡಿದ್ದ ನನಗೊಂದು ಆಘಾತಕಾರಿ ಸುದ್ದಿ ಬಂದಿತ್ತು. ನ್ಯಾಟೊ ಮಿಲಿಟರಿ ವಿಮಾನ ನಿಲ್ದಾಣದ ಹೊರ ದ್ವಾರದಲ್ಲಿ ನಡೆದ ಆತ್ಮಾಹುತಿ ಧಾಳಿಗೆ ಒಬ್ಬ ತಾಲಿಬಾನಿಯೂ ಸೇರಿದಂತೆ, ಐವರು ಸ್ಥಳೀಯರು, ಇಬ್ಬರು ನ್ಯಾಟೊ ಪಡೆಯ ಸೈನಿಕರು ಮೃತಪಟ್ಟಿದ್ದರು. ಈ ಕಾರಣಕ್ಕಾಗಿ ಆ ದ್ವಾರವನ್ನು ಅನಿರ್ಧಿಷ್ಟ ಕಾಲಾವಧಿವರೆಗೆ ಮುಚ್ಚಲಾಗಿತ್ತು. ಅದರ ಮರು ನಿರ್ವಹಣೆ ಮೊದಲಾಗುವವರೆಗೆ ನಮ್ಮಂತಹವರು ವಿಮಾನ ನಿಲ್ಡಾಣದ ಒಳ ಹೋಗಲು ಸಾಧ್ಯವಿರಲಿಲ್ಲವಾದ್ದರಿಂದ ನನ್ನ ಪ್ರಯಾಣದ ದಿಕ್ಕು-ದೆಸೆಗಳೆಲ್ಲಾ ತಪ್ಪುಬಿಟ್ಟಿತ್ತು.
ಒಂದೆರಡು ದಿನಗಳ ಮಟ್ಟಿಗಿನ ಕಾಬುಲ್ ಭೇಟಿಯೆಂದು ನನ್ನ ಪುಸ್ತಕಗಳನ್ನೆಲ್ಲಾ ಕಂದಹಾರ್ ನಲ್ಲಿ ಬಿಟ್ಟುಬಂದಿದ್ದ ನನ್ನ ಬುದ್ದಿಗೆ ನಾನೇ ಶರಣು ಹೊಡೆದುಕೊಳ್ಳಬೇಕಿತ್ತು! ಇಲ್ಲಿನ ಅಂತರ್ಜಾಲದ ವೇಗ ಆ ದೇವರಿಗೂ ಪ್ರೀತಿಯಾಗೋಲ್ಲ, ಬಹುಪಾಲು ತಾಣಗಳನ್ನು ನಿರ್ಬಂಧಿಸಲಾಗಿತ್ತು, ಅದೆಷ್ಟರಮಟ್ಟಿಗೆ ಎಂದರೆ google.com ತಾಣವೂ ಲಭ್ಯವಾಗುತ್ತಿರಲಿಲ್ಲ. ಅಲ್ಲಿನ ಊಟವಂತೂ ನಾ ನನ್ನ ಜೀವನದಲ್ಲಿ ಎದುರಿಸಿದ ಅಗ್ನಿಪರೀಕ್ಷೆಗಳಲ್ಲಿ ಪ್ರಮುಖವಾದಂತಹದ್ದು. ಬೆಳಗ್ಗೆ ರಟ್ಟಿನಂತಿದ್ದ ಗಟ್ಟಿ ಬ್ರೆಡ್ ಮತ್ತು ಸೂಪ್, ಮಧ್ಯಾಹ್ನ ಬ್ರೆಡ್-ಸೂಪ್ ಮತ್ತು ಹುರಿದ ದನದ ಮಾಂಸ, ಸಂಜೆ ಪಾಸ್ತ ಜೊತೆಗೆ ಕ್ರೀಮ್ ಇಲ್ಲವೇ ಬ್ರೆಡ್-ಸೂಪ್. ಮೊದಲೆರಡು ದಿನ ಹೇಗೋ ಸಹಿಸಿಕೊಂಡಿದ್ದೆನಾದರೂ ಮೂರನೇ ದಿನ ಊಟವೆಂದರೆ ವಾಕರಿಕೆ ಶುರುವಾಗಿಬಿಟ್ಟಿತ್ತು. ಈ ಊಟ ಅಲ್ಲಿನ ಯೂರೋಪಿಯನ್ನರ ನೆಚ್ಚಿನ ಭಕ್ಷ್ಯಗಳಂತೆ! ಅವರೇನೋ ಸರಿ ಆದರೆ ಅಲ್ಲಿದ್ದ ಇಬ್ಬರು ಭಾರತೀಯ ಹುಡುಗರು ಗಂಭೀರವಾಗಿಯೇ ಉಂಡು ತೇಗುತ್ತಿದ್ದದ್ದನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ಮಿಕ್ಕ ದಿನಗಳಲ್ಲಿ ಹಣ್ಣುಗಳೇ ನನ್ನ ನಿತ್ಯ ಊಟವಾಯ್ತು. ಬಹುಶಃ ನನ್ನ ದೇಶದ ಜೈಲಿನಲ್ಲೂ ಈ ತರಹದ ಪರಿಸ್ಥಿತಿ ಇಲ್ಲವೇನೋ?
ನರೇಶ್ ಮತ್ತು ಪ್ರಮೋದ್ ಅಲ್ಲಿದ್ದ ಭಾರತೀಯ ಹುಡುಗರು. ನರೇಶ್ ನಮ್ಮ ನೆರೆಯ ಆಂಧ್ರದವನಾದರೆ ಪ್ರಮೋದ್ ನಮ್ಮವನೇ! ಅಂದ್ರೆ ಮಂಗಳೂರಿನವ. ಇಬ್ಬರದೂ ಇಪ್ಪತ್ತೈದರ ಆಸುಪಾಸಿನ ವಯಸ್ಸು. ಅಂತಹ ಜೈಲಿನ ವಾತಾವರಣದಲ್ಲೂ ಲವಲವಿಕೆಯಿಂದ ಬೆಳಗ್ಗೆ ಎಂಟರಿಂದ ರಾತ್ರಿ ಹತ್ತರವರೆಗೂ ಕಛೇರಿ ಕೆಲಸದಲ್ಲಿ ತೊಡಗುಕೊಳ್ಳುತ್ತಿದ್ದ ಅವರ ಜೀವನೋತ್ಸಾಹ ನನಗೊಂದು ಪಾಠವನ್ನೇ ಕಲಿಸಿಬಿಟ್ಟಿತ್ತು. ಇಬ್ಬರದೂ ಒಂದೊಂದು ತೆರನಾದ ಕಥೆ-ವ್ಯಥೆಗಳು. ತನ್ನೂರಿನಲ್ಲಿ ಜೀವನ ಪೂರ್ತಿ ದುಡಿದರೂ ಆರಕ್ಕೇರದ ಮೂರಕ್ಕಿಳಿಯದ ತಮ್ಮ ಸ್ಥಿತಿಗತಿಗಳನ್ನು ತ್ವರಿತವಾಗಿ ಹೆಚ್ಚಿಸಿಕೊಳ್ಳಬಹುದೆಂಬ ಒಂದಾಸೆಯಿಂದ ಇಲ್ಲಿ ಬಂದು, ತನ್ನೆಲ್ಲಾ ಆ ಕ್ಷಣದ ಆಸೆಗಳನ್ನು ಹೆರಿಮುಡಿ ಕಟ್ಟಿ, ಇಲ್ಲಿರುವವರೆಗೆ ಸಾಧ್ಯವಾದಷ್ಟು ಗಳಿಸಿ ಒಂದು ದಿನ ಬೆನ್ನು ತೋರಿಸಿ ಹೋದರೆ ಮತ್ತೆಂದೂ ಇಲ್ಲಿಗೆ ಬರವುದಿಲ್ಲವೆಂಬ ಒಂದೇ ಹಠದೊಂದಿಗೆ ಬದುಕುತ್ತಿರುವ ಅವರು, ಅವರಂತೆ ಇಲ್ಲಿರುವ ಅದೆಷ್ಟೊ ಸಾವಿರ ಮಂದಿಯನ್ನು ನೋಡಿದ ನಾನು ಇವರ ಮುಂದೆ ಕುಬ್ಜನಾಗಿಬಿಟ್ಟಿದ್ದೆ. ಇಬ್ಬರಿಗೂ ಸುಮಾರು ೮೦೦-೯೦೦ ಅಮೆರಿಕನ್ ಡಾಲರ್ ಸಂಬಳ. ಖರ್ಚು ಮಾಡುವಂತಹುದು ಏನಿಲ್ಲ. ಊಟ, ವಸತಿ ಎಲ್ಲವೂ ಲಭ್ಯ. ತನ್ನವರಿಗೆ ಕರೆ ಮಾಡಲು ತಿಂಗಳಿಗೆ ೧೦-೧೫ ಡಾಲರ್ ಖರ್ಚಾಗಬಹುದು. ಮಿಕ್ಕ ಹಣವನ್ನೆಲ್ಲಾ ತಮ್ಮವರಿಗೆ ಪ್ರತೀ ತಿಂಗಳೂ ಕಳುಹಿಸುತ್ತಾರೆ. "ಹೆಚ್ಚೆಂದರೆ ಇನ್ನೆರಡು ವರ್ಷ ಅಷ್ಟೇ, ಯಾವುದಾದರೂ ಸಣ್ಣ ವ್ಯವಹಾರಕ್ಕಾಗುವಷ್ಟು ದುಡ್ಡು ಕೈಗೆ ಬಂದರೆ ಸಾಕು. ಜೀವನದಲ್ಲಿ ಮತ್ತೆಂದೂ ಇಲ್ಲಿಗೆ ಬರುವ ಪ್ರಯತ್ನ ಮಾಡುವುದಿಲ್ಲ" ಪ್ರಮೋದ್ ಹೇಳುತ್ತಾ ಗದ್ಗದಿತನಾಗುತ್ತಿದ್ದ.
ಎರಡನೆಯ ದಿನದ ಮಧ್ಯಾಹ್ನ ಮತ್ತೊಬ್ಬ ಭಾರತೀಯ ಹುಡುಗನ ಆಗಮನವಾಗಿತ್ತು. ನನ್ನ ರೂಮಿನಲ್ಲಿಯೇ ಉಳಿದುಕೊಂಡಿದ್ದ. ಆಂಧ್ರದ ಕರೀಮ್ ನಗರ ಜಿಲ್ಲೆಯವನು. ಅವನ ಹೆಸರು ನೆನಪಿನಲ್ಲುಳಿದಿಲ್ಲ, ಆದರೆ ಅವನ ಕಥೆ ಬಹಳ ಆಳಕ್ಕಿಳಿದು ನನ್ನನ್ನು ಆಗಾಗ ಕಾಡುತ್ತಿರುತ್ತದೆ. ಕಂದಹಾರ್ ನಿಂದ ಕಾಬುಲ್ ಗೆ ವರ್ಗಾಯಿಸಿದ್ದಾರೆಂದ. ಅವನ ಮಾತಿನಲ್ಲಿ ಆತ್ಮವಿಶ್ವಾಸದ ಜೊತೆಗೆ ಕೊಂಚ ಭಯದ ಛಾಯೆಯೂ ಇತ್ತು. ವಾಸ್ತವವೆಂದರೆ ಅವನನ್ನು ಕೆಲಸದಿಂದ ತೆಗೆಯಲಾಗಿತ್ತು. ಕೆಲವೇ ದಿನಗಳಲ್ಲಿ ಅವ ದೆಹಲಿಗೆ ತೆರಳಿ ಅಲ್ಲಿಂದ ಹೈದರಾಬಾದ್ ತಲುಪುವವನೆಂದು ನರೇಶ್ ನನಗೆ ಹೇಳಿದಾಗ ನನಗೆ ಎಲ್ಲೋ ಏನೋ ವ್ಯತ್ಯಾಸವಾದಂತೆ ಅನಿಸತೊಡಗಿತ್ತು. ಈ ವಿಷಯವನ್ನು ಅವನಿಗೆ ತಿಳಿಸಿದೆ. ಅವ ತತ್ ಕ್ಷಣ ದಿಗ್ಮೂಢನಾದಂತೆ ಸಪ್ಪೆ ಮೋರೆ ಹಾಕಿದ. ಅವನ ಕಣ್ಣಾಲಿಗಳು ತುಂಬುತ್ತಾ ಹೋದವು. ಏನು ನಿನ್ನ ಕಥೆ? ನನ್ನಿಂದ ಏನಾದರೂ ಸಹಾಯವಾಗುವುದಾದರೆ ಪ್ರಯತ್ನಿಸುತ್ತೇನೆಂದ ಮೇಲೆ ಹೇಳುತ್ತಾ ಹೋದ...  "ನಾನು ಬಡವ ಸಾರ್.. ಅಪ್ಪ-ಅಮ್ಮ, ಶಾಲೆ ಕಲಿತಿರೋ ತಂಗಿ ಎಲ್ಲಾ ಸೇರಿ ಒಟ್ಟಾಗಿರೋ ಕುಟುಂಬ ನಮ್ಮದು. ಹೇಗೋ ಅಲ್ಪ ಸ್ವಲ್ಪ ಇದ್ದ ಹೊಲದಲ್ಲಿ ಬೇಸಾಯ ಮಾಡ್ಕೊಂಡಿದ್ವಿ ಎರಡು ಹೊತ್ತು ಊಟಕ್ಕೇನೂ ತೊಂದರೆ ಇರಲಿಲ್ಲ. ದುಬೈನಲ್ಲಿ ನಾಲ್ಕು ವರ್ಷ ದುಡಿದು ಬಿಟ್ಟರೆ ಸಾಕು, ಜೀವನ ಪೂರ್ತಿ ಅರಾಮಾಗಿರಬಹುದು ಅಂತೆಲ್ಲಾ ಕಥೆಗಳನ್ನು ಕಟ್ಟಿ ವರ್ಣರಂಜಿತವಾಗಿ ಹೇಳುತ್ತಿದ್ದ ನನ್ನ ಸ್ನೇಹಿತನೊಬ್ಬನ ಮಾತು ಕೇಳಿ ದುಬೈಗೆ ಹಾರಿದೆ. ಅಪ್ಪನಿಗೂ ದೂರದ ಆಸೆಗಳನ್ನೆಲ್ಲಾ ಹುಟ್ಟಿಸಿ, ಆತನನ್ನು ಒಪ್ಪಿಸಿ ಹೊಲ ಅಡ ಇಟ್ಟು ಎರಡು ಲಕ್ಷ ಸಾಲ ಮಾಡಿ ಏಜೆಂಟ್ ಗೆ ಕೊಟ್ಟು ದುಬೈ ಕೆಲಸ ಅಂತ ಬಂದೆ. ಆದರೆ ದುಬೈಗೆ ಬಂದ ಮೇಲೆ ನಾನಂದುಕೊಂಡ ಪ್ರಪಂಚ ಅಲ್ಲಿರಲಿಲ್ಲ ಅಂತ ಧಿಡೀರ್ ಗೊತ್ತಾಗಿಬಿಟ್ಟಿತ್ತು. ಒಂದೂವರೆ ತಿಂಗಳಾಗುತ್ತಾ ಬಂದರೂ ಕೆಲಸದ ಮಾತೇ ಇಲ್ಲ. ಯಾವುದೋ ಸಣ್ಣ ಹೋಟೆಲ್ ರೂಮೊಂದರಲ್ಲಿ ನಾವು ಏಳೆಂಟು ಜನರು ಮಲಗಿಕೊಳ್ಳುತ್ತಿದ್ದೆವು. ಹೊರಗೆ ಓಡಾಡಲೂ ಬಿಡುತ್ತಿರಲಿಲ್ಲ. ನಮ್ಮ ಕೈಯಲ್ಲಿ ಬಿಡಿಗಾಸೂ ಇರಲಿಲ್ಲ. ಮಧ್ಯಾಹ್ನ ಮತ್ತು ಸಂಜೆ ಎರಡೆರಡು ಚಪಾತಿಗಳನ್ನಷ್ಟೇ ಕೊಡುತ್ತಿದ್ದರು. ಪ್ರಶ್ನೆ ಮಾಡಿದರೆ, ವಾಪಸ್ ಹೋಗಬಹುದೆನ್ನುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ನಮ್ಮನ್ನೆಲ್ಲಾ ಸಿಟಿ ಮಧ್ಯೆ ಒಂದು ಕಚೇರಿಗೆ ಒಯ್ದು, ಪಾಸ್ಪೋರ್ಟ್ ಸೇರಿದಂತೆ ನಮ್ಮಲ್ಲಿದ್ದ ದಾಖಲೆಗಳನ್ನೆಲ್ಲಾ ತೆಗೆದುಕೊಂಡು, ವೈದ್ಯಕೀಯ ಪರೀಕ್ಷೆಗಳನ್ನೆಲ್ಲಾ ಮಾಡಿ ಮುಗಿಸಿದರು. ನಮಗೆ ಕೆಲಸ ಸಿಕ್ಕಿದೆಯೆಂಬ ಖಾತ್ರಿಯಾಗಿ ನಿಟ್ಟುಸಿರುಬಿಟ್ಟೆವು. ಆ ರಾತ್ರಿ ನಮ್ಮೆಲ್ಲಾ ಬ್ಯಾಗುಗಳನ್ನು ಜೋಡಿಸಿಕೊಂಡು ನೆಮ್ಮದಿಯಿಂದ ನಿದ್ರೆ ಹೋದೆವು. ಆದರೆ ಆ ದಿನ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ನಮ್ಮನ್ನು ಕರೆತಂದಿದ್ದರು. ಈ ಧಿಡೀರ್ ಬೆಳವಣಿಗೆಯಿಂದ ಇದ್ದಕ್ಕಿದ್ದಂತೆ ನಮಗೆ ಆತಂಕ ಶುರುವಾಯ್ತು. ಅಂದು ನಾವೆಲ್ಲಾರೂ ಆಫ್ಘಾನಿಸ್ತಾನಕ್ಕೆ ಹಾರುತ್ತಿದ್ದೆವೆಂದು ಆ ಕ್ಷಣ ಮಾತ್ರ ಗೊತ್ತಾಗಿದ್ದುದು! ಎಲ್ಲರೂ ಪ್ರತಿರೋಧಿಸಿದೆವು. ಹಾಗಾದರೆ ತತ್ಕ್ಷಣ ಎಲ್ಲರೂ ಭಾರತಕ್ಕೆ ವಾಪಸ್ಸು ಹೋಗಿರೆಂದರು. ಅತ್ತ ದರಿ ಇತ್ತ ಪುಲಿ ಎಂಬ ಸನ್ನಿವೇಶವದು. ಕೈಯೆಲ್ಲಾ ಬರಿದು ಮಾಡಿಕೊಂಡು ಮತ್ತೆ ಊರಿಗೆ ಹೋಗಿ ಆತ್ಮಹತ್ಯೆಯಲ್ಲದೆ ಬೇರೇನೂ ದಾರಿಯಿರಲಿಲ್ಲ. ಕಂಗಳು ಮಂಜಾಗಿ ಯೋಚನೆ ನಿಂತು ಹೋಗಿತ್ತು. ಆಪ್ಘಾನಿಸ್ತಾನವೆಂಬ ರಣರಂಗದಲ್ಲಿ ಸತ್ತರೇನು, ಹೇಡಿಯಂತೆ ಊರಿಗೆ ಹೋಗಿ ಸತ್ತರೇನು? ಎರಡೂ ಒಂದೇ! ಎಲ್ಲರೂ ಮನಸ್ಸನ್ನು ಗಟ್ಟಿ ಮಾಡಿಕೊಂಡೆವು. ಕಂದಹಾರ್ ತಲುಪಿದಾಗ ಪರಿಸ್ಥಿತಿಗೆ ಮನಸ್ಸು ಒಗ್ಗಿಕೊಂಡಂತೆನೆಸಿತ್ತು. ಅಂದಿನಿಂದ ಒಂದು ಹೊಸ ಜೀವನ ಆರಂಭವಾಯ್ತು. ಉಳಿದುಕೊಳ್ಳಲು ತಾತ್ಕಾಲಿಕ ಹಾಸ್ಟೆಲ್ ನಂತಹ ಕಂಟೈನರ್ ಕಟ್ಟಡಗಳು. ಒಂದು ರೂಮಿನಲ್ಲಿ ಮೂರು ಜನ ಇದ್ದೆವು. ಜೀವನದಲ್ಲೆಂದೂ ಕಂಡಿರದಿದ್ದ ವಿಧ-ವಿಧ ಭಕ್ಷ್ಯಗಳು. ವಾರದೊಂದು ದಿನ ರಜೆಯಿಲ್ಲವೆಂಬುದೊಂದು ಕೊರತೆ ಹಾಗೂ ಆಗಾಗೊಮ್ಮೆ ಸಣ್ಣ ಪುಟ್ಟ ರಾಕೆಟ್ ಗಳು ಬಂದು ಬೀಳುತ್ತಿದ್ದವು ಎಂಬ ಆತಂಕದ ಹೊರತು ಅಲ್ಲಿನ ಜೀವನ ಕಠಿಣವಾದದ್ದಲ್ಲ. ಪ್ರತಿ ತಿಂಗಳು ನನ್ನ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದ ೬೦೦ ಡಾಲರುಗಳ ರಸೀತಿ ಕೊಡುತ್ತಿದ್ದರು. ಅಲ್ಲಿಗೆ ನಾನಂತೂ ಚೆನ್ನಾಗಿಯೇ ಒಗ್ಗಿ ಹೋಗಿದ್ದೆ. ನನ್ನ ಕೆಲಸವನ್ನ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದರು. ಹೀಗೊಂದು ದಿನ ನನ್ನ ಬೆಳವಣಿಗೆ ಸಹಿಸದ ನಮ್ಮವರೇ ನನ್ನ ಮೇಲೆ ಏನಾದರೊಂದು ಗೂಬೆ ಕೂರಿಸುವ ಕೆಲಸ ಶುರುವಿಟ್ಟುಕೊಂಡರು. ಅವರ ಕುತಂತ್ರ ಕೆಲಸ ಮಾಡಿತ್ತು. ಅತೀ ಸೂಕ್ಶ್ಮ ಯುದ್ಧ ಪ್ರದೇಶವಾದ ’ಹೆಲ್ಮಂಡ್’ ಪ್ರಾಂತ್ಯದ ಮಿಲಿಟರಿ ಶಿಬಿರಕ್ಕೆ ವರ್ಗವಾಗಿದ್ದೆ. ನಾಲ್ಕೂ ದಿಕ್ಕಿಗೂ ಬೆಟ್ಟ. ಕೇವಲ ಹೆಲಿಕಾಪ್ಟರ್ ಮಾತ್ರ ಇಳಿಯಲು ಜಾಗವಿದ್ದ ಕಡಿದಾದ ಪ್ರದೇಶವದು. ಹೆಚ್ಚೆಂದರೆ ಮೂವತ್ತು ಜನರಿದ್ದ ಟೆಂಟ್ ಗಳಿಂದ ನಿರ್ಮಿತವಾದ ಸೈನಿಕ ಶಿಬಿರವದು. ಬರೋಬ್ಬರಿ ಮೂವತ್ತರಿಂದ ನಲವತ್ತು ಸಾವಿರ ಜನರಿದ್ದ ಪುಟ್ಟ ನಗರದಂತೆಯೇ ಇದ್ದ ಕಂದಹಾರ್ ಏರ್ ಬೇಸ್ ನಲ್ಲಿದ್ದ ನಾನು ಇಲ್ಲಿ ಒಗ್ಗಿಕೊಳ್ಳಲು ಆಗುತ್ತಿರಲಿಲ್ಲ. ಗಟ್ಟಿಯಾದ ಬ್ರೆಡ್ ಮತ್ತು ಬೆಣ್ಣೆಯಷ್ಟೇ ಊಟಕ್ಕೆ. ನೀರಿಗಂತೂ ತತ್ವಾರ. ಪ್ರತೀ ದಿವಸ ರಾಕೆಟ್ ಗಳು-ಗುಂಡಿನ ಮಳೆಯ ಸದ್ದು ಮೊರೆಯುತ್ತಿತ್ತು. ಅಲ್ಲಿರುವವರೆಗೆ ಸರಿಯಾಗಿ ನಿದ್ದೆ ಹೋದದ್ದೇ ನೆನಪಿಲ್ಲ. ಅಲ್ಲಿ ಹೋದ ಎರಡನೆಯ ದಿವಸ ಬೆಟ್ಟದ ಕಡೆಯಿಂದ ಬಂದ ರಾಕೆಟ್ ಒಂದು ಆಗ ತಾನೆ ಮೇಲೇರುತ್ತಿದ್ದ ’ಚಾಪರ್’ಒಂದನ್ನು ಉಡಾಯಿಸಿಬಿಟ್ಟಿತ್ತು. ನಾಲ್ಕು ಜನ ಅಮೆರಿಕೆಯ ಸೈನಿಕರು ಸುಟ್ಟು ಕರಕಲಾದದ್ದು ನನ್ನ ಕಣ್ಮುಂದೆಯೇ! ನನಗೆ ಚಳಿ ಜ್ವರ ಬಂದಿತ್ತು. ನನ್ನನ್ನು ಗಮನಿಸಲು ಯಾರೂ ಬರುತ್ತಿರಲಿಲ್ಲ. ಆ ದಿನ ಕೆಲಸಕ್ಕೆ ಹೋಗದೆ ಟೆಂಟ್ ನಲ್ಲಿಯೇ ಮಲಗಿಬಿಟ್ಟೆ. ನಮ್ಮ ಮೇಲ್ವಿಚಾರಕ ಯೂರೋಪಿನವನು. ಭಾಷೆಯ ಸಮಸ್ಯೆಯಿದ್ದರಿಂದ ಕೇವಲ ಕೈ ಸನ್ನೆಯಷ್ಟೇ ನಮ್ಮ ಮಾಧ್ಯಮವಾಗಿತ್ತು. ಆ ದಿನ ನಾ ಏನು ಹೇಳಿ ಸಮರ್ಥಿಸಿಕೊಳ್ಳಲೆತ್ನಿಸಿದರೂ ಅರ್ಥವಾಗದವನಂತೆ ಬೈದು ಹೋಗಿಬಿಟ್ಟ. ಆ ದಿನ ಸಂಜೆ ನನ್ನನ್ನು ಕಂದಹಾರ್ ಏರ್ ಬೇಸ್ ಗೆ ಕರೆತಂದು ಅಲ್ಲಿಂದ ಕಾಬುಲ್ ಗೆ ವರ್ಗವಾಗಿದೆ ಎಂದು ಹೇಳಿ ಇಲ್ಲಿಗೆ ಕಳುಹಿಸಿದರು..." ದೊಡ್ದದೊಂದು ನಿಟ್ಟುಸಿರು ಬಿಟ್ಟು ಶೂನ್ಯಕ್ಕೆ ದೃಷ್ಟಿ ನೆಟ್ಟ.
"ನಿನ್ನ ಸಾಲ ತೀರಿತೇನು"? ಹಾ ಎಂದು ಕತ್ತನ್ನಾಡಿಸಿದ. "ಮತ್ತೆ ಇಲ್ಯಾಕೆ ಸಾಯುವೆ? ಹೊರಟುಬಿಡು" ಎಂದೆ. "ಬಂದು ಕೇವಲ ಐದಾರು ತಿಂಗಳಾಗಿವೆ. ಇಲ್ಲಿಯವರೆಗೆ ಪ್ರಾಣ ಒತ್ತೆ ಇಟ್ಟು ದುಡಿದದ್ದು ಸಾಲ ತೀರಿಸಲಾಯ್ತು ಅಷ್ಟೇ..! ಇನ್ನೈದಾರು ತಿಂಗಳು ಸಾಕು ನನಗೆ. ಇನ್ನೂ ಹೆಚ್ಚಿನ ಶ್ರಮವಹಿಸಿ ದುಡಿಯುವೆ. ದಯವಿಟ್ಟು ನೀವು ಅವರಿಗೆ ಹೇಳಿ, ಸಹಾಯಮಾಡಿ.." ಕೈ ಜೋಡಿಸಿ ಬಿಕ್ಕುತ್ತಿದ್ದ. ಅವನು ಎಲ್ಲಾ ರೀತಿಯಲ್ಲೂ ಸರಿ ಎನಿಸುತ್ತಿತ್ತು. ಕೆಲ ಯೂರೋಪಿನ ಜನರು ಭಾರತೀಯ ಕೆಲಸಗಾರರನ್ನು ತುಂಬಾ ನಿಕೃಷ್ಟವಾಗಿ ನೋಡುತ್ತಿದುದ್ದನ್ನು ಕಣ್ಣಾರೆ ನೋಡಿದ್ದೆ. ನನ್ನ ಕೈ ಕೆಳಗೆ ಕೆಲಸ ಮಾಡಬೇಕಾಗಿ ಬಂದ ಕೆಲ ಬಿಳಿಯರ ಅಸಹನೆಯನ್ನು ಅವರ ಬುಸುಗುಟ್ಟುವಿಕೆಯಿಂದಲೇ ಗ್ರಹಿಸುತ್ತಿದ್ದೆ. ಅಲ್ಲಿದ್ದ ಅಧಿಕಾರಿ ವರ್ಗ ನನ್ನೊಡನೆ ಆಪ್ತವಾಗಿ ಬೆರೆತಿರಲಿಲ್ಲ. ಏನೇ ಆಗಲಿ ಒಮ್ಮೆ ಪ್ರಯತ್ನಿಸೋಣವೆಂದು ಗಾಝ್ಮೆಂಡ್ ನೊಡನೆ ಚರ್ಚಿಸಿದೆ. ಅವನಂತೂ ಇದು ನನ್ನ ನಿರ್ಧಾರವಲ್ಲ, ಉನ್ನತಾಧಿಕಾರಿಗಳದು ಎಂದು ಕೈ ತೊಳೆದುಕೊಂಡುಬಿಟ್ಟಿದ್ದ. ಕೊನೆಯ ಪ್ರಯತ್ನವೆಂದು ನನ್ನ ಉನ್ನತಾಧಿಕಾರಿಯನ್ನು ಸಂಪರ್ಕಿಸಿ ಶಿಫಾರಸ್ಸು ಮಾಡಲು ಪ್ರಯತ್ನಿಸಲಾಗಿ ಅವ ನಿನ್ನ ಕೆಲಸ ಎಷ್ಟೋ ಅಷ್ಟು ನೋಡಿಕೊ ಎಂದು ನಯವಾಗಿ ನನ್ನ ಬಾಯ್ಮುಚ್ಚಿಸಿದ. ಆ ಹುಡುಗನ ಮುಂದೆ ನನ್ನ ಅಸಹಾಯಕತೆಯನ್ನು ತೋರ್ಪಡಿಸಿದ್ದಷ್ಟೇ ನನ್ನ ಕೈಲಾದ ಸಹಾಯ! ಇವರಂತೆಯೇ ಹಾಗೂ ಇನ್ನೂ ವೈಚಿತ್ರ್ಯ ಹಿನ್ನೆಲೆಯ ಅದೆಷ್ಟೋ ಮಂದಿಯನ್ನು ನನ್ನ ಅಫ್ಘಾನಿನ ಭೇಟಿಯ ಅವಧಿಯಲ್ಲಿ ಕಂಡು ಬೆರಗಾಗಿದ್ದೇನೆ. (ಅವರೆಲ್ಲರ ಕಿರು ವಿವರಗಳನ್ನೂ ಕೂಡ ಮುಂದಿನ ಬರಹದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತೇನೆ).
ಬರೋಬ್ಬರಿ ಐದು ದಿನಗಳ ಜೈಲು ವಾಸದಿಂದ ಅಂದು ಮುಕ್ತಿ ಸಿಗಲಿತ್ತು. ಬೆಳಗ್ಗೆ ಸುಮಾರು ಒಂಭತ್ತು ಘಂಟೆಗೆ ಅತಿಥಿ ಗೃಹವನ್ನು ಬಿಟ್ಟು ಕಾಬುಲ್-ಜಲಾಲಬಾದ್ ರಸ್ತೆಯಲ್ಲಿದ್ದೆವು. ಕಾರಿನಲ್ಲಿ ಆ ದಿನ ಹಾಜಿ ಮೊಹಮ್ಮದ್ ಇರಲಿಲ್ಲ. ಗಾಝ್ಮೆಂಡ್ ಮತ್ತು ಇನ್ನೊಬ್ಬ ’ಫೆಟಾನ್ ಸೆಫ’ ಎಂಬಾತ ನನ್ನ ಜೊತೆಯಲ್ಲಿದ್ದರು. ಫೆಟಾನ್ ಕೂಡ ನನ್ನೊಡನೆ ಕಂದಹಾರ್ ಗೆ ಬರುವವನಿದ್ದ. ಗಾಝ್ಮೆಂಡ್ ಸ್ವತಃ ಕಾರನ್ನು ಚಲಾಯಿಸುತ್ತಿದ್ದ. ಹತ್ತು ನಿಮಿಷಗಳ ನಂತರ ಕಾಬುಲ್ ಏರ್ ಪೋರ್ಟ್ ರಸ್ತೆಗೆ ಸೇರಿಕೊಂಡೆವು. ಆ ರಸ್ತೆಯಲ್ಲಿ ಕೆಲವೇ ದೂರ ಕ್ರಮಿಸಿರಬಹುದಷ್ಟೇ, ರಸ್ತೆ ಮಧ್ಯದಲ್ಲಿ ಸ್ಥಳೀಯ ಆರಕ್ಷಕನೊಬ್ಬ ನಿಂತು ಕಾರನ್ನು ತಡೆದು ಒಳಗೆ ಇಣುಕು ಹಾಕಲು ಮೊದಲಾದ. ತಮ್ಮ ಕತ್ತಿಗೆ ನೇತು ಹಾಕಿಕೊಂಡಿದ್ದ ಎದೆಯಗಲದ 'NATO ISAF ID' ಯನ್ನು ಅವನ ಮುಖದ ಹತ್ತಿರ ಹಿಡಿದ ಆ ಯೂರೋಪಿಯನ್ನರು ಅವನಿಗೆ ಇಂಗ್ಲೀಷಿನಲ್ಲಿ ಕೆಟ್ಟದಾಗಿಯೇ ಬೈಯ್ಯುತ್ತಾ ಗೊಣಗಾಡಲು ಶುರುಮಾಡಿದರು. ಅವನಿಗೂ ಏನೋ ಅರ್ಥವಾದಂತಾಗಿ ನಾನು ಭಾರತೀಯನೋ ಅಥವಾ ಪಾಕಿಸ್ತಾನಿಯೋ ಎಂದು ಮನಗಂಡ ಅವ ಅರ್ದಂಬರ್ಧ ಉರ್ದುವಿನಲ್ಲಿ ಅವರಿಗಿಂತ ಕೆಟ್ಟದಾಗಿಯೇ ಬೈಯ್ಯುತ್ತಿದ್ದುದು ನನಗೆ ಆ ಕ್ಷಣ ನಗು ಉಮ್ಮಳಿಸಿ ಬಂದಿತ್ತಾದರೂ ಏನೂ ಗೊತ್ತಿಲ್ಲವೇನೋ ಎಂಬಂತೆ ಮುಗಮ್ಮಾಗಿಯೇ ಕುಳಿತಿದ್ದೆ. ಬಲವಂತವಾಗಿಯೇ ಎರಡು ಬಾಟಲ್ ನೀರನ್ನು ಕಸಿದುಕೊಂಡ ಆತ ನಮ್ಮನ್ನು ಮುಂದೆ ಹೋಗಲು ಅನುವು ಮಾಡಿಕೊಟ್ಟ. ಅವನು ಬಿಟ್ಟರೂ ಇವರಂತೂ ಇನ್ನೂ ಬೈಯ್ಯುವುದನ್ನು ನಿಲ್ಲಿಸಿರಲಿಲ್ಲ.
ಕಳೆದ ವಾರ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಾದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಎಂದಿಗಿಂತ ಹೆಚ್ಚು ಬಿಗಿ ಬಂದೋ ಬಸ್ತ್ ಮಾಡಿದ್ದರೆಂದು ಗೊತ್ತಾಗುತ್ತಿತ್ತು. ಕಾಬುಲ್ ವಿಮಾನ ನಿಲ್ದಾಣಕ್ಕೆ ಎರಡು ದ್ವಾರಗಳು. ಒಂದು ಸಾರ್ವಜನಿಕರಿಗಾಗಿ ಮತ್ತೊಂದು ನ್ಯಾಟೊ ಮಿಲಿಟರಿಯ ವಿಮಾನಗಳಿಗಾಗಿ. ಪ್ರಸ್ತುತ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆಯೇ ತಮಗನುಕೂಲವಾಗುವಂತೆ ಬಹು ವಿಸ್ತೀರ್ಣ ವ್ಯಾಪ್ತಿಯಲ್ಲಿ ನ್ಯಾಟೊ ಪಡೆ ಕಾಬುಲ್ ವಿಮಾನ ನಿಲ್ದಾಣವನ್ನು ವಿಸ್ತರಿಸಿ ಹೊಸದಾಗಿ ಕಟ್ಟಿಕೊಂಡಿದೆ. ನಮಗೆ ನ್ಯಾಟೊ ವಿಮಾನ ನಿಲ್ದಾಣದ ದ್ವಾರ ಹತ್ತಿರವಾಗುತ್ತಿತ್ತು. ನಿಲ್ದಾಣದ ಸರಹದ್ದಿನ ಒಂದಷ್ಟು ದೂರದಲ್ಲಿಯೇ ಎರಡು ಚೆಕ್ ಪೋಸ್ಟ್ ಗಳಿದ್ದವು. ಅದರ ಬಗಲಿಗೆ ಬಾಂಬ್ ನಿಷ್ಕ್ರಿಯ ದಳದವರು ಧರಿಸುವಂತಹ ಧಿರಿಸನ್ನು ಹೊದ್ದಿದ್ದ ಇಬ್ಬರು ನ್ಯಾಟೊ ಸೈನಿಕರು ಸ್ಟೆನ್ ಗನ್ ಗಳನ್ನು ಗುರಿ ಹಿಡಿದು ನಿಂತಿದ್ದ ರೀತಿ ಭಯ ಹುಟ್ಟಿಸುವಂತಿತ್ತು. ಕಾರು ಅನತಿ ದೂರದಲ್ಲಿ ನಿಂತಿತು. ಎಲ್ಲರನ್ನೂ ಕೆಳಗೆ ಇಳಿಯುವಂತೆ ಆದೇಶಿಸಲಾಯ್ತು. ಉದ್ದ ಕಬ್ಬಿಣದ ಕೋಲಿನ ಕೆಳಗೆ ಬಳೆಯಾಕಾರದಲ್ಲಿ ಅಂಟಿಸಿದ್ದಂತಹ ಲೋಹ ಶೋಧಕವನ್ನು ಹಿಡಿದ ಒಬ್ಬ ಸೈನಿಕ ಕಾರನ್ನು ಜಾಲಾಡತೊಡಗಿದ. ಇತ್ತ ಚೆಕ್ ಪೋಸ್ಟ್ ನ ಒಳಗೆ ಕರೆದು ನಮ್ಮ ದೇಹದ ಕಣ ಕಣವನ್ನೂ ಪರೀಕ್ಷಿಸುತ್ತಿದ್ದರು. ಕಣ್ಣಿನ ಚಿತ್ರವನ್ನು ತೆಗೆದು ತಮ್ಮ ಕಂಪ್ಯೂಟರಿನಲ್ಲಿ ಹಾಕಿ ಏನನ್ನೋ ತಾಳೆ ಮಾಡುತ್ತಿದ್ದುದು ಬಹಳ ಸಮಯವನ್ನೇ ತಿನ್ನುತ್ತಿತ್ತು. ನಮ್ಮಂತೆಯೇ ಪರೀಕ್ಷೆಗೊಳಗಾಗುತ್ತಿದ್ದ ಹಲವಾರು ಸ್ಥಳೀಯರನ್ನು ಅಲ್ಲಿ ನೋಡಿದೆ. ವಿಶೇಷವಾಗಿ ಅವರನ್ನು ಅಗತ್ಯಕ್ಕಿಂತ ಹೆಚ್ಚೇ ತಪಾಸಿಸುತ್ತಿದ್ದರು. ಪೂರ್ವಾಪರವನ್ನೆಲ್ಲಾ ವಿಚಾರಿಸಿ, ಕೈದಿಗಳಂತೆ ಪ್ರಶ್ನೆಗೈಯುತ್ತಿದ್ದರು. ಆದರೆ ಯಾರೊಬ್ಬರೂ ತುಟಿಕ್ ಪಿಟಿಕ್ ಅನ್ನುತ್ತಿರಲಿಲ್ಲ. ಇವರ ಮಾತು ಅರ್ಥವಾದರೆ ತಾನೇ ಅವರು ಉತ್ತರಿಸುವುದು! ಅವರ ನಾಯಕನೊಬ್ಬ ಎಲ್ಲಾ ಪ್ರಶ್ನೆಗಳಿಗೆ ಹರುಕು ಮುರುಕಾಗಿ ಉತ್ತರಿಸುತ್ತಿದ್ದ. ಇವರೆಲ್ಲಾ ವಿಮಾನ ನಿಲ್ದಾಣದೊಳಗೆ ದಿನಗೂಲಿ ಮಾಡಲು ಬರುವ ಸ್ಥಳೀಯರೆಂದು ಅರ್ಥವಾಗಿತ್ತು. ಅಲ್ಲಿನ ಸುರಕ್ಷತಾ ನಿಯಮಗಳು, ವ್ಯವಸ್ಥೆಗಳು ಬಹು ವಿಚಿತ್ರವಾಗಿತ್ತು. ಚೆಕ್ ಪೋಸ್ಟ್ ಗೆ ಅಡ್ಡಲಾಗಿ ರೋಡಿನ ನೆಲದಲ್ಲಿ ಹುದುಗಿದ್ದ ಗರಗಸದಂತಿದ್ದ ಉದ್ದನೆಯ ಬ್ಲೇಡುಗಳು ಅದರ ಮೇಲೆ ಹಾಯ್ದ ವಾಹನದ ಚಕ್ರಗಳನ್ನು ಹುತ್ತರಿಸಿಹಾಕುವಂತಿತ್ತು. ತಪಾಸಣೆ ಮುಗಿದ ನಂತರ ಅದು ಯಾಂತ್ರಿಕವಾಗಿ ನೆಲದಲ್ಲಿ ಇನ್ನಷ್ಟು ಆಳಕ್ಕೆ ಹುದುಗಿ ವಾಹನಗಳು ಓಡಾಡಲು ಅನುವು ಮಾಡಿಕೊಡುತ್ತಿತ್ತು. ಅಲ್ಲಿದ್ದ ಒಂದು ಬೃಹತ್ತಾದ ಕಾಂಕ್ರೀಟಿನ ಮೋಟು ಗೋಡೆಗೆ ಒಂದು ಕಿರಿದಾದ ತೂತನ್ನು ಮಾಡಿ "Ammunition Bin" ಎಂದು ಹೆಸರಿಸಲಾಗಿತ್ತು. ನನ್ನೊಡನಿದ್ದ ಯೂರೋಪಿಯನ್ನರು ತಮ್ಮ ಬಂದೂಕುಗಳಲ್ಲಿದ್ದ, ಜೇಬಿನಲ್ಲೂ ತುಂಬಿಕೊಂಡಿದ್ದ ಗುಂಡುಗಳನ್ನು ಅದರೊಳಗೆ ತುರುಕುತ್ತಿದ್ದರು. ಸುರಕ್ಷತಾ ನಿಯಮದಂತೆ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಅಲ್ಲಿ ಎಸೆದು ಖಾಲಿ ಕೈನಲ್ಲಿ ಹೋಗಬೇಕಿತ್ತು. ವಾಪಸ್ ಬರುವಾಗಲೂ ಅದನ್ನು ತೆಗೆದು ಕೊಳ್ಳುವ ಹಾಗಿಲ್ಲ. ಹಾಗಾಗಿ ಗಾಝ್ಮೆಂಡ್ ವಿಮಾನ ನಿಲ್ದಾಣದಿಂದ ಕಂಪನಿಯ ಅತಿಥಿ ಗೃಹದವರೆಗೆ ನಿರಾಯುಧನಾಗಿಯೇ ಹೋಗಬೇಕಿತ್ತು! ನಿರಾಯುಧನಾಗಿ ಎರಡು ನಿಮಿಷಗಳೂ ಹೊರಗಿರಬಾರದೆಂಬುದು ಅಲ್ಲಿನ ಅಲಿಖಿತ ನಿಯಮ. ನಲವತ್ತು ನಿಮಿಷಕ್ಕೂ ನಡೆದ ಅಲ್ಲಿನ ಸುದೀರ್ಘ ತಪಾಸಣೆಯನ್ನು ಮುಗಿಸಿಕೊಂಡು ನ್ಯಾಟೊ ಟರ್ಮಿನಲ್ ನೆಡೆಗೆ ನಮ್ಮ ಕಾರು ಹೊರಟಿತು. ನನಗಂತೂ ಏನನ್ನೋ ಜಯಿಸಿ ಹೊರಟೆವೇನೋ ಎಂಬಂತೆ ಭಾಸವಾಗಹತ್ತಿತು...

(ಮುಂದುವರೆಯುವುದು....)