ವಚನಚಿಂತನ: ೧೧ : ಮಲಗುವುದು ಅರ್ಧ ಮಂಚ!

ವಚನಚಿಂತನ: ೧೧ : ಮಲಗುವುದು ಅರ್ಧ ಮಂಚ!

ಬರಹ
ಆನೆ ಕುದುರೆ ಭಂಡಾರವಿರ್ದಡೇನೋ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ ಒಡಲು ಭೂಮಿಯ ಸಂಗ ಒಡವೆ ತಾನೇನಪ್ಪುದೋ ಕೈವಿಡಿದ ಮಡದಿ ಪರರ ಸಂಗ ಪ್ರಾಣ ವಾಯುವಿನ ಸಂಗ ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ ನಿಃಕಳಂಕ ಮಲ್ಲಿಕಾರ್ಜುನಾ [ಪಡಿ-ಒಂದು ಅಳತೆ; ಆವು-ಹಸು] ಆನೆ ಕುದುರೆ ಸಂಪತ್ತು ಬೇಕಾದ್ದಕ್ಕಿಂತ ಸಾವಿರಪಟ್ಟು ಹೆಚ್ಚು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ. ಉಣ್ಣುವುದು ಒಂದಳತೆ ಅನ್ನ, ಕುಡಿಯುವುದು ಒಂದು ಹಸು ಕರೆದ ಒಂದಿಷ್ಟು ಹಾಲು, ಮಲಗುವುದು ಅರ್ಧಮಂಚ. ನಾವು ಪಡಬಹುದಾದ ಸುಖಕ್ಕೆಲ್ಲ ಮಿತಿ ಇದೆ ಎಂಬುದನ್ನು ಮರೆತು ಸುಖಕ್ಕೆ ಮೂಲ ಎಂದು ನಾವು ತಿಳಿದ ವಸ್ತುಗಳನ್ನೆಲ್ಲ ಕೂಡಿಟ್ಟುಕೊಳ್ಳುವುದಕ್ಕೆ, ಅವು ಇಲ್ಲ ಎಂದು ತಹತಹಿಸುವುದಕ್ಕೆ ಅರ್ಥವಿದೆಯೇ? ನಮ್ಮ ದೇಹ ಭೂಮಿಯ ಸಂಗಮಾಡುತ್ತದೆ, ನಾವು ಗಳಿಸಿದ ಒಡವೆಯ ಗತಿ ಏನು? ಒಡಲೆಂಬ ಒಡವೆಯೇ ಭೂಮಿಯ ಪಾಲಾದಮೇಲೆ ನಮ್ಮದೆಂದುಕೊಂಡಿದ್ದ ಒಡವೆ ಇನ್ನಾರದೋ ಪಾಲು. ಸಾವು ಮಾತ್ರ ನಮ್ಮದು, ಅದರಲ್ಲಿ ನಮ್ಮ ಜೊತೆ ಆಗುವವರು ಯಾರೂ ಇಲ್ಲ. ಸುಖಕ್ಕೆ ಇರುವ ಮಿತಿ ನಮಗೆ ಅರ್ಥವೇ ಅಗಿಲ್ಲವೇನೋ! ಮೋಳಿಗೆ ಮಾರಯ್ಯ ಕಾಶ್ಮೀರದವನು, ಬಹುಶಃ ಒಬ್ಬ ಪುಟ್ಟ ರಾಜ. ತನ್ನ ಹೆಂಡತಿಯೊಡನೆ ಕಲ್ಯಾಣಕ್ಕೆ ಬಂದು, ಕಟ್ಟಿಗೆ ಮಾರುವ ಕೆಲಸ ಮಾಡುತ್ತ ಬದುಕಿದ ಒಬ್ಬ ಶರಣ. ಶ್ರೀಮಂತಿಕೆ ಮತ್ತು ಅಧಿಕಾರಗಳಿದ್ದೂ ಅವನ್ನೆಲ್ಲ ಬಿಟ್ಟು ಬದುಕಿದವನ ಈ ಮಾತು ವಸ್ತು ಮತ್ತು ಧನ ಮೋಹಗಳಿಗೆ ಬಲಿಯಾದ ನಮ್ಮ ಕಾಲದ ಮನಸ್ಸುಗಳಿಗೆ ಒಂದು ಎಚ್ಚರಿಕೆಯಂತಿದೆ. ನಾನಿಲ್ಲವಾದಮೇಲೆ ನನ್ನ ಮಡದಿ ಬೇರೆಯವರ ಸಂಗಕ್ಕೆ ಸಲ್ಲುವಳು. ನನ್ನ ಉಸಿರು ಗಾಳಿಯ ಸಂಗದಲ್ಲಿ ಕರಗಿಹೋಗುವುದು. ನನ್ನ ಸಾವಿನಲ್ಲಿ ನಾನು ಏಕಾಂಗಿ. ಬಹುಶಃ ನಾವೆಲ್ಲ ಏಕಾಂಗಿಗಳೇ. ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಆಸ್ತಿ, ಒಡವೆ, ಹೆಣ್ಣು, ದುಡ್ಡು ಎಂದೆಲ್ಲ ಯಾವು ಯಾವುದೋ ಸಂಪಾದನೆಯಲ್ಲಿ ಈ ಅನಿವಾರ್ಯ ಒಂಟಿತನವನ್ನು ಮರೆಯಲು, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆಂದು ತೋರುತ್ತದೆ. ಒಳಗಿನ ಒಂಟಿತನವನ್ನು ಎದುರಿಸಿ ಒಪ್ಪಿಕೊಳ್ಳಲು ಕಲಿತರೆ ನಾವು ಸಂಪಾದಿಸುವ ಸಂಪತ್ತಿಗೂ ಅರ್ಥ ಬಂದೀತು. ಇನ್ನೂ ಬೇಕು ಅನ್ನುವುದಕ್ಕಿಂತ ಇಷ್ಟು ಸಾಕು ಅನ್ನಿಸುವುದು ಯಾವಾಗ?