ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು
ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ
ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳವರ ಶ್ರೀ ಶಾರದಾಮಂದಿರ
ವಿದ್ಯಾಸಂಸ್ಥೆಯ ಮೂಲಕ ಮೊದಲಬಾರಿಗೆ ಲೋಕದ ಬೆಳಕು ಕಂಡಿದೆ.
ಅಲ್ಲಿ ಸಾಬ್ ಮಲ್ಲಪ್ಪನ ಹಳ್ಳಿ ಎಂಬಲ್ಲಿ ಎಂಟುರೂಪಾಯಿ ಸಂಬಳದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ನಿವೃತ್ತರಾಗುವ ವೇಳೆಗೆ ಇಪ್ಪತ್ತೈದು ರೂ ಸಂಬಳ ಪಡೆದಿರಬಹುದು. ಅವರು ಕೇವಲ ತಮ್ಮ ಸಾಹಿತ್ಯ ಪರಿಚಯದ ಆಧಾರದ ಮೇಲೆ ಸುಮಾರು ಇಪ್ಪತ್ತು ಸಾವಿರ ಪದಗಳ ಈ ನಿಘಂಟನ್ನು ಐದುನೂರು ಪುಟಗಳ ನೋಟುಬುಕ್ಕಿನಲ್ಲಿ ಬರೆದು ಸಿದ್ಧಪಡಿಸಿದ್ದರಂತೆ. ಬಿಡುವಾದಾಗ ಅಷ್ಟಿಷ್ಟು ಬರೆದೆ ಎಂದು ಬೆಳಗೆರೆಯವರಿಗೆ ತಿಳಿಸಿದ್ದು, ಅವರು ಆ ಹಸ್ತಪ್ರತಿಯಲ್ಲಿ ಒಂದೇ ಚಿತ್ತು ಕಾಟು ಕೂಡ ಇಲ್ಲದ್ದು ಕಂಡು ಆಶ್ಚರ್ಯ ಚಕಿತರಾದದ್ದು ಇವನ್ನೆಲ್ಲ ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಅವರು ಈ ನಿಘಂಟನ್ನು ರಚಿಸುವ ಕಾಲಕ್ಕೆ ಕೇವಲ ಶ್ರೀ ಗಂಗಾಧರ ಮಡಿವಾಳೇಶ್ವರ ತೂರಮರಿಯವರ "ಕರ್ಣಾಟಕ ಶಬ್ದಮಂಜರೀ ಕೋಶ" ಮತ್ತು ಕಿಟೆಲ್ರ ಕನ್ನಡ ಕನ್ನಡ ನಿಘಂಟು ಮಾತ್ರ ಉಪಲಬ್ಧವಿದ್ದವು. ಹಾಗೆ ನೋಡಿದರೆ ಅಲ್ಲಿ ಸಾಬ್ ಅವರದ್ದು ಹೊಸಗನ್ನಡದ ಮೂರನೆಯ ನಿಘಂಟು! ಮುಖ್ಯವಾಗಿ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿರುವ ಶಬ್ದಗಳನ್ನೂ ಅವುಗಳ ಅರ್ಥವನ್ನೂ ಅಲ್ಲೀ ಸಾಬ್ ನೀಡಿದ್ದಾರೆ. ಅನೇಕ ಪದಗಳಿಗೆ ಈಗ ಬಳಕೆ ತಪ್ಪಿ ಹೋಗಿರುವ ಅರ್ಥಗಳೂ ಇಲ್ಲಿ ಕಾಣುತ್ತವೆ. ಸಂಕೇತಾಕ್ಷರಗಳು, ಗಾದೆ ನುಡಿಗಟ್ಟುಗಳು, ಮತ್ತು ಜನಬಳಕೆಯ ನ್ಯಾಯ (ಕಾಕತಾಲೀಯ ನ್ಯಾಯ ಇತ್ಯಾದಿ) ಇವುಗಳ ವಿವರಣೆ ಈ ನಿಘಂಟಿನಲ್ಲಿದೆ. ಶ್ರೀ ಜಿ. ವೆಂಕಟಸುಬ್ಬಯ್ಯನವರು "ಶಬ್ದದ ಮೂಲವನ್ನು ನಿರ್ಧರಿಸುವಲ್ಲಿ ಸಂಸಕೃತದ ಗಾಢವಾದ ಪರಿಚಯ ಇರುವುದು ತಿಳಿಯುತ್ತದೆ. ಶಬ್ದ ಸಂಗ್ರಹ ವಿಪುಲವಾಗಿದೆ. ಈಗ ಇರುವ ಹಾಗೆ ಇದು ಕನ್ನಡ ವಿದ್ವಾಂಸನೊಬ್ಬನು ನಿಘಂಟು ರಚನೆಯಲ್ಲಿ ಆಸಕ್ತನಾಗಿ ಸಿದ್ಧಪಡಿಸಿದ ಪ್ರಥಮ ಹಸ್ತಪ್ರತಿ ಎಂದು ತಿಳಿಯಬೇಕು. ಚಾರಿತ್ರಿಕ ದೃಷ್ಟಿಯಿಂದ ಈ ನಿಘಂಟಿಗೆ ಮಹತ್ವವಿದೆ" ಎಂದು ಬೆನ್ನುಡಿಯಲ್ಲಿ ಹೇಳಿದ್ದಾರೆ.
ಬೆಳಗೆರೆ ಕೃಷ್ಣಶಾಸ್ತ್ರಿಯವರು ೨೦ನೆಯ ಶತಮಾನದ ನಾಲ್ಕನೆಯ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಎಂ ಆರ್ ಶ್ರೀ ಯವರನ್ನೂ, ಆನಂತರ ಕನ್ನಡ ಪುಸ್ತಕ ಪ್ರಾಧಿಕಾರವನ್ನೂ ಈ ನಿಘಂಟಿನ ಪ್ರಕಟಣೆಗಾಗಿ ಕೋರಿ, ಯಶ ದೊರೆಯದೆ ತಾವೇ ಸ್ವತಃ ಪ್ರಕಟಿಸಿದ್ದಾರೆ. ನಾವು ಕಟ್ಟಿಕೊಂಡಿರುವ ಕನ್ನಡ ಸೇವೆಯ ಅಧಿಕೃತ ಸಂಸ್ಥೆಗಳು ಮಾಡಲಾರದ ಕೆಲಸವನ್ನು ಬೆಳಗೆರೆಯವರು ಮಾಡಿದ್ದಾರೆ.
ಒಬ್ಬ, ನಮ್ಮ ಈಗಿನ ದೃಷ್ಟಿಯಿಂದ ಅನಾಮಧೇಯನಾದ, ಮುಸ್ಲಿಂ ಶಿಕ್ಷಕ ಕನ್ನಡದ ನಿಘಂಟನ್ನು ಸಿದ್ಧಪಡಿಸಿದ್ದು ಇನ್ನು ಕೆಲವು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟಿಸೀತು. ಇಪ್ಪತ್ತನೆಯ ಶತಮಾನದ ಮೂರು ನಾಲ್ಕನೆಯ ದಶಕದವರೆಗೆ ಹಳ್ಳಿಗಾಡಿನ ಪ್ರಾಥಮಿಕ ಶಾಲಾ ಶಿಕ್ಷಕರೂ ನಿಘಂಟು ರಚನೆಯಲ್ಲಿ ಆಸಕ್ತಿ ತೋರುವಂತಿದ್ದ ವಾತಾವರಣ ಈಗ ಏನಾಗಿದೆಯಲ್ಲ ಎಂಬ ಪ್ರಶ್ನೆ ಒಂದು. ಇನ್ನೊಂದು ಮುಸ್ಲಿಮರನ್ನು ಕನ್ನಡ ವಿರೋಧಿಗಳೆಂದು ತಿಳಿಯುವ ಒಂದು ಮನಸ್ಥಿತಿ ಕೆಲವರಲ್ಲಾದರೂ ಇದೆಯಲ್ಲ ಅದು ಎಷ್ಟು ಅನಾರೋಗ್ಯಕರವಾದ್ದು ಎಂಬುದು ಇನ್ನೊಂದು. ಕನ್ನಡ ಕಟ್ಟುವ ಕೆಲಸ ಕೇವಲ ಖ್ಯಾತನಾಮರದ್ದಲ್ಲ, ಅನಾಮಧೇಯರಾದ ಸಹಸ್ರಾರು ಜನರ ಪರಿಶ್ರಮದಫಲವಾಗಿ ಕನ್ನಡ ರೂಪುಗೊಂಡಿದ್ದನ್ನು ನಾವು ಮರೆಯುತ್ತಿದ್ದೇವಲ್ಲ ಎಂಬುದು ಇನ್ನೊಂದು. ಕುತೂಹಲಿಗಳು ದಯವಿಟ್ಟು ಈ ನಿಘಂಟನ್ನು ಒಮ್ಮೆ ನೋಡಿ.