ನಳ ಪಾಕ್ ....

ನಳ ಪಾಕ್ ....

ಬರಹ

ನಮ್ಮ ಕಂಪನೀಯಲ್ಲಿ ಒಬ್ಬ ಹೊಸ ಹುಡುಗ ಸೇರ್ಪಡೆ ಆಗಿದ್ದ. ವಿಚಿತ್ರ ಪ್ರಾಣಿ ಕ್ಷಮಿಸಿ ಮನುಷ್ಯ. ಮತ್ತೆ ಕೇಳಿಸಿಕೊಂಡರೆ ಕಷ್ಟ. ಒಂದು ದಿನ ನನ್ನ ಗೆಳೆಯ, ಅವನಿಗೆ ನಿನ್ನ ಶರ್ಟ್ ಚೆನ್ನಾಗಿದೆ ಎಂದು ಹೇಳಿದ. ಅಷ್ಟಕ್ಕೇ ನೀನು ನಿನ್ನ ವ್ಯವಹಾರ ನೋಡಿಕೊ ಎಂದು ಹೇಳಿದ್ದ. ಕೆಲ ದಿನಗಳ ನಂತರ ಅವನ ಮದುವೆ ಆಯಿತು. ಮೊನ್ನೆ ಒಂದು ದಿನ ನಾನು ಹಾಗೆ ಸಹಜವಾಗಿ ಮನೆಯವರನ್ನೂ ಕರೆದುಕೊಂಡು ಬಂದಿದ್ದೀರ? ಎಂಬ ಉದ್ಧಟ ಪ್ರಶ್ನೆ ಕೇಳಿಬಿಟ್ಟೆ. ಏನಕ್ಕೆ, ಏತಕ್ಕೆ ಕೇಳುತ್ತಾ ಇದ್ದೀರ ಎಂದು ನನಗೆ ಕೇಳಿದ. ನನಗೆ ಘಾಬರಿ. ಏನು? ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟೇನಾ?. ನಾನು ಮುಂದೆ ಮಾತಾಡಲೇ ಇಲ್ಲ. ದಾರಿಯಲ್ಲಿ ಹೋಗುವ ಮಾರಿ ಕರೆದುಕೊಂಡು ಬಂದು ಮನೆಯಲ್ಲಿ ಕೂರಿಸಿದ ಹಾಗೆ ಆಗಿತ್ತು. ನನಗೆ ನನ್ನ ಹೆಂಡತಿನೇ ಸಂಭಾಳಿಸಲೂ ಆಗುವದಿಲ್ಲ ಇನ್ನೂ....ಕಷ್ಟ ಕಷ್ಟ. ಇನ್ನೂ ಮುಂದೆ ಅವನನ್ನು ಮಾತನಾಡಿಸಬಾರದು ಎಂದು ತೀರ್ಮಾನಕ್ಕೆ ಬಂದು ಬಿಟ್ಟೆ.


 


ಕೆಲಸ ಮುಗಿಸಿ ಮನೆಗೆ ಬಂದು ಕೈ ಕಾಲು ತೊಳೆಯಲು ಟವಲ್ ತೆಗೆದುಕೊಂಡೆ. ಅಮ್ಮsss. ನೋಡು ಅಲ್ಲಿ, ಅಪ್ಪ ನಿನ್ನ ಟವಲ್ ತೆಗೆದುಕೊಂಡಿದ್ದಾರೆ ಎಂದ ನನ್ನ ಸುಪುತ್ರ. ಅಷ್ಟಕ್ಕೇ ನನ್ನ ಮಡದಿ ರೀ ನಿಮಗೆ ನನ್ನದೇ ಟವಲ್ ಬೇಕಾ?, ಬೇರೆ ಬೇಕಾದಷ್ಟು ಮನೆಯಲ್ಲಿ ಇವೆ ತೆಗೆದುಕೊಳ್ಳಬಾರದ? ಎಂದು ಉದ್ಗಾರವೆತ್ತಿದಳು. ಲೇ ನಾನು ಸಾಫ್ಟ್‌ವೇರ್ ಇಂಜಿನಿಯರ್ ಕಣೇ, ಒಳ್ಳೇ ಬಿ.ಬಿ.ಎಂ.ಪಿ ಚರಂಡಿ ಸ್ವಚ್ಛ ಮಾಡುವ ನೌಕರನ ಹಾಗೆ ವರ್ತಿಸುತ್ತೀಯಲ್ಲೇ ಎಂದೆ. ಗಂಡನನ್ನ ಎಷ್ಟು ಗೋಳು ಹೊಯ್ದುಕೊಳ್ಳುತ್ತೀಯ ಎಂದೆ. ಗಂಡ ಎಂದರೆ ಏನು ಎಂದು ತಿಳಿದಿದ್ದೀಯ. ಪತಿಯೇ ಪರರ ದೈವ ಗೊತ್ತಾ? ಎಂದೆ. ಅವಳಿಗೆ ಅರ್ಥ ಆಗಲಿಲ್ಲ :). ಬಡ ಜೀವ ಬದುಕೀತು ಮತ್ತೆ.


 


ನನ್ನ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಬರೆದಿದ್ದೀರ ಎಂದಳು. ಯಾರು ಹೇಳಿದರು ಎಂದು ಕೇಳಿದೆ. ಮಂಜಣ್ಣ ಮನೆಗೆ ಬಂದಿದ್ದರು ಎಂದಳು. ಲೇ ಮಂಜ ಎಂದು ಮನಸಿನಲ್ಲೇ ಬೈದು ಹಲ್ಲು ಕಡಿದೆ. ಬರೀ ತೆಗಳಿದ್ದು ಅಷ್ಟೇ ಅಲ್ಲ ಕಣೇ, ನಿನ್ನನ್ನು ಹೋಗಳಿದ್ದು ಇದೆ ಎಂದು ಪೆಕರನಂತೆ ಹೇಳಿ ಬಿಟ್ಟೆ. ಏನು ನನ್ನ ತೆಗಳಿ ಲೇಖನ ಬರೀತೀರಾ? ಎಂದಳು. ಪಾಪ ಅವಳಿಗೆ ಈ ವಿಷಯ ಗೊತ್ತೇ ಇರಲಿಲ್ಲ. ಇಲ್ಲ ಕಣೇ ನನ್ನ ರಾಣಿ ಹಾಗೆ ಎಲ್ಲ ಮಾಡುತ್ತೆನಾ ಎಂದೆ. ನಿಮ್ಮದು ಗೊತ್ತಿಲ್ಲವ "ಇಲಿ ಬಂತು ಎಂದರೆ ಹುಲಿ ಬಂತು" ಎನ್ನುವ ಹಾಗೆ ನನ್ನ ಬಗ್ಗೆ ಬರೆದಿರುತ್ತೀರ ಎಂದು, ತುಂಬಾ ಕೋಪ ಮಾಡಿಕೊಂಡುಬಿಟ್ಟಳು.


 


ಪಕ್ಕದ ಮನೆ ಪೂಜ ಏನಾದರೂ ತಿಂಡಿ ಮಾಡಿದ್ದಾಳ ನೋಡು ಎಂದು ಹಾಗೆ ತಮಾಷೆಗೆ ಹೇಳಿದೆ. ಏನು ಉತ್ತರ ಬರಲಿಲ್ಲ. ಏನು ತಿಂಡಿ ಎಂದೆ. ಏನೋ ಪಕ್ಕದ ಮನೆ ಪೂಜ ಮೇಲೆ ಪ್ರೀತಿ ಉಕ್ಕಿ ಹರೀತಾ ಇತ್ತು ಎಂದಳು. ನದಿ ನೀರು ಎಷ್ಟೇ ರಭಸವಾಗಿ ಹರಿದರು ಕೊನೆಗೆ ಸೇರುವದು ಸಾಗರ ತಾನೇ?. ನೀನು ಒಂದು ತರಹ ಸಾಗರ ಇದ್ದ ಹಾಗೆ ಗೊತ್ತಾ ಎಂದು ಮಸ್ಕ ಹೊಡೆದೆ. ಅಂದ್ರೆ ನಾನು ಉಪ್ಪು ನೀರು, ನೀವು ಸಿಹಿ ನೀರಾ.....? ಎಂದು ಮತ್ತಷ್ಟು ಕೋಪಿಸಿಕೊಂಡಳು.


 


ಕಡೆಗೆ ನಾನೇ ಏನಾದರೂ ತಿಂಡಿ ಮಾಡುತ್ತೇನೆ ಎಂದು ಅಡಿಗೆ ಮನೆ ಎಂಬ ಗುಹೆಯೊಳಗೆ ಎಡಗಾಲಿಟ್ಟೆ. ಲೇ ಅವಲಕ್ಕಿ ಎಲ್ಲೇ? ಎಂದು ಕೂಗಿ ಕೇಳಿದೆ, ಏನು ಉತ್ತರ ಬರಲಿಲ್ಲ. ಕಡೆಗೆ ನಾನೇ ಹುಡುಕಲು ಶುರು ಮಾಡಿದೆ. ಅದೇನೋ ನಮ್ಮ ಗಂಗಾವತಿ ಬೀಚಿ ಎಂದೆ ಪ್ರಸಿದ್ದಿಯಾದ ಶ್ರೀ ಪ್ರಾಣೇಶ್ ಹೇಳುತ್ತಾರಲ್ಲ "ಡಬ್ಬಿ ಮ್ಯಾಲೆ ಡಬ್ಬಿ... ಡಬ್ಬಿ ಮ್ಯಾಲೆ ಡಬ್ಬಿ" ಎಂದು, ಹಾಗೆ "ಡಬ್ಬಿ ಒಳಗೆ ಡಬ್ಬಿ...ಡಬ್ಬಿ ಒಳಗೆ ಡಬ್ಬಿ" ಹಾಗೆ ಇತ್ತು. ಇದನ್ನು ನೋಡಿದರೆ ನಮ್ಮ ಪ್ರಾಣೇಶ್ ಅವರು ಕೂಡ ಬ್ಯಾಲೆನ್ಸ್ ತಪ್ಪಿ ಬೀಳಬೇಕು ಅಷ್ಟು ಡಬ್ಬಿ ತೆಗೆದ ಮೇಲೆ ಚಿಕ್ಕ ಅವಲಕ್ಕಿ ಪ್ಯಾಕೆಟ್ ಸಿಕ್ಕಿತು. ಅದನ್ನು ನೋಡಿದರೆ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇತ್ತು.


 


ಚಿಕ್ಕವಾನಿದ್ದಾಗ ಕೂಡ ಹೀಗೆ ನಳ ಪಾಕ್ ಮಾಡುತ್ತಿದ್ದೆ. ಆಗ ಅಮ್ಮ ಎಷ್ಟು ಎಣ್ಣೆ ಹಾಕುತ್ತಿ ಎಂದು ಬೈಯುತ್ತಿದ್ದಳು.


 


ನಾನು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಎಂದು ಹಾಡುತ್ತಾ, ಎಲ್ಲ ಸಾಮಾನುಗಳನ್ನು ಹುಡುಕುತ್ತಾ ಇದ್ದೆ. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ. ನಾನು ಹುಡುಕಿದಷ್ಟು ಯಾರಾದರೂ ಹುಡುಕಿದ್ದರೆ, ಕೊಲಂಬಸ್ ಹುಡುಕಿದ ಹಾಗೆ ಬೇರೆ ಒಂದು ದೇಶವನ್ನು ಹುಡುಕಬಹುದಿತ್ತು. ನಿಜ ಕಣ್ರೀ ಅದೇನೋ ಹೇಳುತ್ತಾರಲ್ಲ ಗಂಡಸರ ಜುಟ್ಟು ಜನಿವಾರ ಎಲ್ಲ ಹೆಂಗಸರ ಕೈಯಲ್ಲಿ ಎಂದು, ಅದು ನಿಜ ಅನ್ನಿಸಿತು. ಕಡೆಗೂ ಏನು ಸಿಗದೆ ಅವಲಕ್ಕಿಗೆ ಮೊಸರು ಹಾಕಿಕೊಂಡು ತಿಂದೆ. ಏನು ಸಾಹೇಬ್ರ ಪಾಕ ಹೇಗಿದೆ ನೋಡುವಾ? ಎಂದು ಬಂದು ನನ್ನನ್ನು ಹೀಯಾಳಿಸಿದಳು. ನೀನು ಮಾಡಿದ ಅವಲಕ್ಕಿ ತುಂಬಾ ಚೆನ್ನಾಗಿದೆ. ಸಕತ್.. ಮಸ್ತ..ಎಂದು ಇದೆ ಚಾನ್ಸ್ ಎಂದು ಅವಳನ್ನು ಮತ್ತಷ್ಟು ಮಸ್ಕ ಹೊಡೆದೆ. ಅದಕ್ಕೆ ಅವಳು ಅವಲಕ್ಕಿ ಅಂಗಡಿ ಇಂದ ತಂದಿದ್ದು ಅದಕ್ಕೆ ವಗ್ಗರಣೆ ಮತ್ತು ಏನು ಹಾಕಿರಲಿಲ್ಲ. ಅದು ನಾನು ಮಾಡಿದ ತಿಂಡಿನಾ? ಎಂದು ನಗುತ್ತಾ ಹುಬ್ಬು ಹಾರಿಸಿದಳು. ನಾನು ಒಂದು ಮುಗುಳ್ನಗೆ ಬೀರಿದೆ. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಹೋಲಿಸಲಾರಿಲ್ಲ..,ನಿನ್ನೀ ಅಂದಕೆ ನೀನೇ ಸಾಟಿ ಬೇರೇ ಯಾರಿಲ್ಲ..ನಿನ್ನ ಹೋಲುವರಾರಿಲ್ಲ.. ಎಂದು ಹಾಡುತ್ತಾ ಅಡುಗೆ ಮನೆಯಿಂದ ಹೊರಗಡೆ ಬಂದೆ.


 


ಸಧ್ಯ ನನ್ನ ಪ್ರತಾಪ ಇಷ್ಟಕ್ಕೆ ಮುಗೀತು. ಇಲ್ಲ ಅಂದ್ರೆ ಒಂದು ದಿನ ನಳ - ಭೀಮ ಪಾಕ್ ದ ಹಾಗೆ ಗೋಪಾಲ್ ಪಾಕ್ ಕೂಡ ಇರುತಿತ್ತು (ಧಾರವಾಡ ದಲ್ಲಿ ಸಿಗುವ ಮೈಸೂರ್ ರಾಕ್ ಕ್ಷಮಿಸಿ ಮೈಸೂರ್ ಪಾಕ್ ಹಾಗೆ). ಅಡುಗೆ ಮನೆ ವ್ಯವಹಾರ ಎಲ್ಲ ಹೆಂಡತಿಗೆ ಸೈ ಎಂದು ಅನ್ನಿಸಿತು. ಭೀಮ ಮತ್ತು ನಳರನ್ನು ಬಿಟ್ಟು. ಭೀಮನಿಗೆ ಆವಾಗ, ಈವಾಗ ನನ್ನ ಹಾಗೆ ಬಾಯೀ ಆಡಿಸಲು ಏನಾದರೂ ಬೇಕು ಎಂದು ಅಡುಗೆ ಮನೆ ವ್ಯವಹಾರದಲ್ಲಿ ಕೈ ಹಾಕಿರಬಹುದು. ನಾನು ಕೂಡ ಆವಾಗ, ಈವಾಗ ಬಾಯೀ ಆಡಿಸುತ್ತಾನೆ ಇರುತ್ತೇನೆ. ಆದರೆ, ಎಲ್ಲವೂ ನನ್ನ ಮಡದಿಯ ಮಹಿಮೆ ಇಂದ ಮಾತ್ರ....:).