ನಮ್ಮಜ್ಜಿ ಪದ್ದಮ್ಮ...

Submitted by Jayanth Ramachar on Fri, 10/01/2010 - 16:24
ಬರಹ

ನನ್ನ ಹುಟ್ಟೂರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಪುಟ್ಟ ಗ್ರಾಮ...ಹುಟ್ಟಿದ್ದು ಅಲ್ಲಾದರೂ ಬೆಳೆದದ್ದು ನೆಲೆ ಕಂಡುಕೊಂಡಿರೋದು 


ಬೆಂಗಳೂರೆಂಬ ಈ ಮಾಯಾನಗರಿಯಲ್ಲಿ....ಈಗಲೂ ವರ್ಷಕ್ಕೆ ಎರಡು ಬಾರಿ ಭೇಟಿ ಕೊಡುತ್ತೇವೆ...ಹಳ್ಳಿಗೆ ಭೇಟಿ ಕೊಟ್ಟಾಗಲೆಲ್ಲ ನನ್ನನ್ನು ಹೆಚ್ಚಾಗಿ ಕಾಡುವ ನೆನಪು


ನನ್ನ ಅಜ್ಜಿಯದು.


 


ನನ್ನ ಅಜ್ಜಿಯ ಹೆಸರು ಪದ್ಮಾವತಮ್ಮ....ಮೊದಲೆಲ್ಲ ಬೇಸಿಗೆ ರಜೆ ಬಂತೆಂದರೆ ಎರಡು ತಿಂಗಳು ಕಾಲ ನಾನು, ನನ್ನ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು, ಅತ್ತೆಯ ಮಕ್ಕಳು,


ಎಲ್ಲರು ಹಳ್ಳಿಯಲ್ಲೇ ಮೊಕ್ಕಾಂ ಹೂಡುತ್ತಿದ್ದೆವು. ಆ ಎರಡು ತಿಂಗಳುಗಳ ಕಾಲ ಹಳ್ಳಿಯ ಪ್ರತಿಯೊಂದು ಮಾವಿನ ಮರ, ಕಡಲೇಕಾಯಿ, ಕಬ್ಬಿನ ಗದ್ದೆಗಳು ನಮ್ಮ ದಾಳಿಗೆ


ತುತ್ತಾಗಿ ನಲುಗಿ ಹೋಗುತ್ತಿದ್ದವು...ನಮ್ಮ ಹಳ್ಳಿಯ ಸುತ್ತಮುತ್ತ ಮೂರು ಕೆರೆಗಳಿವೆ (ಅಡವಿ ಕೆರೆ,ಹೊಸಳ್ಳಿ ಕೆರೆ ಹಾಗು ಹೊಸಕುಂಟೆ ) ಹೊಸಳ್ಳಿ ಕೆರೆಯ ನೀರು ಕಾಲುವೆ ಮೂಲಕ


ಹರಿದು ನಮ್ಮ ಹಳ್ಳಿಯನ್ನು ದಾಟಿ ಹೋಗುತ್ತಿತ್ತು...ಆ ಕಾಲುವೆಗೆ ನಮ್ಮ ಹಳ್ಳಿಯ ಹತ್ತಿರ ಅದಕ್ಕೆ ಸಣ್ಣದಾದ ಕಟ್ಟೆಯನ್ನು ಕಟ್ಟಿದ್ದರು. ಅದಕ್ಕೆ ನಾವು ಒಡ್ಡು ಎಂದು ಕರೆಯುತ್ತೇವೆ.


ಆ ಎರಡು ತಿಂಗಳ ಕಾಲ ನಾವು ಮನೆಯಲ್ಲಿ ಸ್ನಾನ ಮಾಡಿದ್ದು ತುಂಬಾ ಕಮ್ಮಿ...ಪ್ರತಿದಿನ ಬೆಳಿಗ್ಗೆ ಎದ್ದು ಒಡ್ಡಿಗೆ ಹೋಗಿ ಸ್ನಾನ ಮಾಡಿ ಬರುತ್ತಿದ್ದೆವು (ಆಗ ಬೇಸಿಗೆಯಲ್ಲೂ


ನೀರು ಸಮ್ರುದ್ಧಿಯಾಗಿ ಇರುತ್ತಿತ್ತು...ಈಗ ಮಳೆಗಾಳದಲ್ಲಷ್ಟೇ ನೀರನ್ನು ಕಾಣಬಹುದು).  


 


ಕುಡಿಯುವ ನೀರಿಗೆ ಹೊಸಕುಂಟೆ ಕೆರೆಗೆ ನಾವು ಹುಡುಗರೆಲ್ಲರೂ ಒಂದೊಂದು ಕೊಡ ತೆಗೆದುಕೊಂಡು ಹೋಗುತ್ತಿದ್ದೆವು. ಆ ನೀರಿನ ವಿಶೇಷ ಸಿಹಿ ನೀರು. ಹಳ್ಳಿಯಲ್ಲಿ ಬೋರ್ವೆಲ್ ಗಳು


ಇದ್ದರು, ಮನೆಯಲ್ಲೇ ಬಾವಿ ಇದ್ದರು ನಾವು ಆ ಕೆರೆಯ ನೀರನ್ನೇ ತಂದು ಕುಡಿಯುತ್ತಿದ್ದೆವು. ಅಷ್ಟು ಸಿಹಿ ಇತ್ತು ಆ ನೀರು. ( ಈಗೆಲ್ಲ ಮನೆ ಮನೆಗಳಲ್ಲಿ ನಲ್ಲಿ ಇದೆ, ಅದು ಅಲ್ಲದೆ ೧ ಕಿ.ಮೀ. 


ನಡೆದು ನೀರು ತರುವಷ್ಟು ತಾಳ್ಮೆ ಇಲ್ಲ..ಹಾಗೆ ಉಪಯೋಗಿಸದೆ ಆ ಕೆರೆಯ ನೀರು ಕಲುಷಿತವಾಗಿದೆ.. ).


 


ಒಡ್ಡಿನಲ್ಲಿ ಸ್ನಾನ ಮಾಡಿ ಬಂದ ಕೂಡಲೇ ಅಜ್ಜಿ ಬಿಸಿ ಬಿಸಿಯಾಗಿ ತಿಂಡಿ ಮಾಡುತ್ತಿದ್ದರು...ತಿಂಡಿ ತಿನ್ನಲು ನಾವು ನಮ್ಮ ಮನೆ ಎದುರು ಇದ್ದ ಬಾದಾಮಿ ಮರದ ಎಲೆಯನ್ನು ಉಪಯೋಗಿಸುತ್ತಿದ್ದೆವು...


(ದಿನಾಲೂ ತಟ್ಟೆ ತೊಳೆಯಲು ಸೋಮಾರಿತನ). ತಿಂಡಿ ತಿಂದು ಸ್ವಲ್ಪ ಹೊತ್ತು ವಿಶ್ರಮಿಸಿ ಹೊರಗೆ ಹೊರಟರೆ ಮತ್ತೆ ಮನೆ ತಲುಪುತಿದ್ದದ್ದು ಮಧ್ಯಾನ್ಹ ಊಟದ ಸಮಯಕ್ಕೆ..ಹೊರಗೆ ನೆತ್ತಿ ಸುಡುವ


ಬಿಸಿಲು ಇದ್ದರು ಅದು ನಮಗಲ್ಲವೇನೋ ಎಂದು ಆರಾಮಾಗಿ ಸುತ್ತುತ್ತಿದ್ದೆವು. ವಾಪಸ್ ಮನೆಗೆ ಬರಬೇಕಾದರೆ ಅಜ್ಜಿಗೆ ಊಟಕ್ಕೆಂದು ಮುತ್ತುಗದ ಎಲೆ (ನಮ್ಮಜ್ಜಿ ತಟ್ಟೆಯಲ್ಲಿ ಊಟ ಮಾಡುತ್ತಿರಲಿಲ್ಲ) ಯಾರದೋ ತೋಟದ ಮಾವಿನಕಾಯಿಗಳು, ರಸ್ತೆ ಬದಿಯಲ್ಲಿ ಬೆಳೆದ ಹುಣಸೆಕಾಯಿಯ 


ಮರದಿಂದ ಹುಣಸೆಕಾಯಿಗಳನ್ನು ತಂದು ಅಜ್ಜಿಯ ಮುಂದೆ ಹಾಕುತ್ತಿದ್ದೆವು...ಆಗ ನಮ್ಮಜ್ಜಿಯ ಬೈಗುಳ ಕೇಳಲು ಕರ್ಣಾನಂದವಾಗುತ್ತಿತ್ತು. ಜೋಡು ತಗೊಂಡು ಹೊಡಿತೀನಿ ಕತ್ತೆಗಳ ಯಾರ ತೋಟಕ್ಕೆ


ಹೋಗಿದ್ರೋ ...ಯಾಕಾದ್ರೂ ಬರ್ತೀರೋ ನೀವು....ನನ್ನ ಪ್ರಾಣ ತೆಗೆಯಕ್ಕೆ ಅಂತಿದ್ದರು...ನಾವು ಏನು ಆಗೇ ಇಲ್ಲವೇನೋ ಎಂದು ಊಟ ಮಾಡಿ ಪಾತ್ರೆ, ಬಟ್ಟೆ ತೊಳೆಯಲು ಮತ್ತೆ ಒಡ್ಡಿನ ಕಡೆ


ಹೊರಡುತ್ತಿದ್ದೆವು..ಹೋಗಬೇಕಾದರೆ ಮನೆಯಿಂದ ಸ್ವಲ್ಪ ಉಪ್ಪು, ಮೆಣಸಿನಕಾಯಿ ತೆಗೆದುಕೊಂಡು ಹೋಗಿ ಒಡ್ಡಿನ ಹತ್ತಿರ ಇದ್ದ ಹುಣಸೆ ಮರದಿಂದ ಕಾಯಿ ಕಿತ್ತು ಅದನ್ನು ಕಲ್ಲಿಗೆ ಉಜ್ಜಿ ಅದಕ್ಕೆ


ಉಪ್ಪು ಮೆಣಸಿನಕಾಯಿ ಸೇರಿಸಿ ಜಜ್ಜಿ ತಿನ್ನುತ್ತಿದ್ದೆವು.


 


 ನಮ್ಮಜ್ಜಿಯ ಕೈ ರುಚಿ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುವುದು...ಮಾವಿನಕಾಯಿ ಗೊಜ್ಜು, ಹುಣಸೇಕಾಯಿ ತೊಕ್ಕು ಎರಡು ತಿಂಗಳು ದಿನಾಲು ತಿಂದರು ಬೇಸರವಾಗುತ್ತಿರಲಿಲ್ಲ..


 


ಬಟ್ಟೆ, ಪಾತ್ರೆ ತೊಳೆದುಕೊಂಡು ಮತ್ತೆ ಸಂಜೆ ವಾಪಾಸ್ ಮನೆಗೆ ಬಂದು ಅದನ್ನು ಮನೆಯಲ್ಲಿಟ್ಟು ಮತ್ತೆ ಕಡಲೇಕಾಯಿ ಬೇಟೆಗೆ ಹೊರಡುತ್ತಿದ್ದೆವು..ನಮ್ಮ ಮನೆಯಿಂದ ಸ್ವಲ್ಪ ದೂರ ಹೋದರೆ


ಒಂದು ದೊಡ್ಡ ಬಂಡೆಕಲ್ಲು ಇದೆ..ಅದರ ಅಕ್ಕಪಕ್ಕದಲ್ಲಿ ಕಡಲೆಕಾಯಿ ಬೆಳೆದಿರುತ್ತಿದ್ದರು...(ಮುಂಚೆ ಎಲ್ಲ ಬೇಲಿ ಹಾಕುತ್ತಿರಲಿಲ್ಲ...ಅಲ್ಲಲ್ಲಿ ಮುಳ್ಳು ಕಂಟಿಗಳನ್ನು ಇಟ್ಟಿರುತ್ತಿದ್ದರು) ನಾವುಗಳು ಹೋಗಿ


ಎಷ್ಟು ಬೇಕೋ ಅಷ್ಟು ಕಿತ್ತು ತಂದು ಆ ಬಂದೆ ಕಲ್ಲಿನ ಮೇಲೆ ಬೆಂಕಿ ಹಾಕಿ ಅದರಲ್ಲಿ ಸುಟ್ಟು ತಿಂದು ವಾಪಾಸ್ ಮನೆಗೆ ಬಂದು ಮತ್ತೆ ಅಜ್ಜಿಯ ಕೈಯಲ್ಲಿ ಬೈಸಿಕೊಂಡು ಊಟ ಮಾಡಿ ಮಲಗುತ್ತಿದ್ದೆವು..


ಪ್ರತಿದಿನ ಸಂಜೆ ಹಳ್ಳಿಯ ಯಾರಾದರು ಒಬ್ಬರು ಬಂದು ನಮ್ಮ ಬಗ್ಗೆ ಅಜ್ಜಿಯ ಹತ್ತಿರ ದೂರುತ್ತಿದ್ದರು..ಪದ್ದಮ್ಮ ನಿಮ್ಮ ಮೊಮ್ಮಕ್ಕಳು ಯಾಕಾದರೂ ಬರುತ್ತಾರೋ, ಮಾಡಲು ಕಳುಹಿಸಿ ಅವರನ್ನು


ಎನ್ನುತ್ತಿದ್ದರು..(ಈಗ ಅದೇ ಹಳ್ಳಿಯವರು ಎನ್ರಪ್ಪ ಹಳ್ಳಿ ಕಡೆ ಬರೋದೆ ಇಲ್ಲ ಅಂತೀರಲ್ಲ, ಅಂತಾರೆ ).ಮನೆಯಲ್ಲಿ ಬೈಯುತ್ತಿದ್ದ ಅಜ್ಜಿ ಅವರ ಮುಂದೆ ಸಮಾಧಾನವಾಗಿ ಮಾತನಾಡಿ ಸಾಗ ಹಾಕುತ್ತಿದ್ದರು...


 


 ಆ ಎರಡು ತಿಂಗಳುಗಳ ಕಾಲ ಇದೆ ದಿನಚರಿ ಆದರು ಬೇಸರವಾಗುತ್ತಿರಲಿಲ್ಲ...ಬೇಸಿಗೆ ರಜೆ ಮುಗಿದ ಕೂಡಲೇ ಅಪ್ಪ ಅಮ್ಮ ಕರೆದೊಯ್ಯಲು ಬರುತ್ತಿದ್ದರು.. ಆಗ ಶುರು ಆಗುತ್ತಿತ್ತು ನಿಜವಾದ ಬೇಸರ..


ಅಷ್ಟು ದಿನ ಬೈದು ನಮ್ಮ ಕಾಟ ಸಹಿಸಿಕೊಂಡಿದ್ದ ಅಜ್ಜಿ ಅಂದು ನಮ್ಮನ್ನು ಬೀಳ್ಕೊಡುವಾಗ ಕಣ್ಣಲ್ಲಿ ನೀರು ಹಾಕಿ ಕೊಳ್ಳುತ್ತಿದ್ದರು...


 


ಕಳೆದ ಆಗಸ್ಟ್ ೨೬ಕ್ಕೆ ನಮ್ಮಜ್ಜಿ ವೈಕುಂಟಕ್ಕೆ ಸೇರಿ ೧೮ ವರ್ಷ ಆಯಿತು...


 


ಪ್ರತಿ ವರ್ಷದ ಹಾಗೆ ವಿಜಯದಶಮಿಗೆಂದು ಊರಿಗೆ ಹೋಗುವ ಬಗ್ಗೆ ಇಂದು ಬೆಳಿಗ್ಗೆ ಮಾತನಾಡುತ್ತಿದ್ದೆ...ಆವಾಗ ಮನಸ್ಸಿಗೆ ಬಂದ ಯೋಚನೆಯೇ ಈ ಲೇಖನ...