ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧)

ಬರಹ

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ...

***** ಭಾಗ ೧.

ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ್ಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ ತಾತ ಮುತ್ತಾತಂದಿರು ವೈದಿಕ ಬ್ರಾಹ್ಮಣರಾಗಿದ್ದರಂತೆ. ಚಾಳುಕ್ಯ ವಂಶದ ಪುಲಿಕೇಶಿಯು ಕದಂಬರನ್ನು ಅವರ ರಾಜಧಾನಿಯಾದ ವೈಜಯಂತಿ ನಗರಿಯಲ್ಲಿ ಸೋಲಿಸಿ ಚಾಳುಕ್ಯ ಅರಸುತನವನ್ನು ಸ್ಥಾಪಿಸಿದ್ದನ್ನು ನಮ್ಮ ಅಜ್ಜ ಪ್ರತ್ಯಕ್ಷವಾಗಿ ಕಂಡಿದ್ದರೆಂದು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ಹೇಳಿದ್ದ ನೆನಪು. ನಮ್ಮ ಅಜ್ಜ ಕೊನೆಯ ವರೆಗೂ ಆ ಪಾಳುಬಿದ್ದ ಹಳ್ಳಿಯಲ್ಲೇ ಇದ್ದರಂತೆ. ನಮ್ಮ ತಂದೆ ಆ ಪಾಳು ಹಳ್ಳಿಯನ್ನು ಬಿಟ್ಟು ವಾತಾಪಿ ನಗರಕ್ಕೆ ಬಂದರಂತೆ. ಯಾವಾಗೆಂದು ತಿಳಿಯದು - ನನಗಂತೂ ನೆನಪಿಲ್ಲ. ಬಹುಶಃ ನಾನು ಹುಟ್ಟುವ ಮುನ್ನವೇ ಇರಬಹುದು.

ನಾನು ಬೆಳೆದಿದ್ದೆಲ್ಲ ವಾತಾಪಿ ನಗರದ ಬಳಿಯೇ. ಆಗ ಹಿಂದಿನ ಮಹಾರಾಜನಾದ ಕೀರ್ತಿವರ್ಮನ ಮರಣದ ಸಮಯದಲ್ಲಿ ಯುವರಾಜ ಎರೆಯ ಬಹಳ ಚಿಕ್ಕವನಾದ ಕಾರಣ ಮಹಾರಾಜ ಕೀರ್ತಿವರ್ಮನ ತಮ್ಮನಾದ ಮಂಗಳೇಶ ರಾಜ್ಯವಾಳುತ್ತಿದ್ದು, ಗುರ್ಜರ ಪ್ರದೇಶದ ಕಳಚೂರಿ ನಗರದ ರಾಜ ಬುದ್ಧಿರಾಜ, ರೇವತೀ ದ್ವೀಪದ ಪಾಳೆಯಗಾರ ಸ್ವಾಮಿರಾಜ ಮತ್ತಿತರರನ್ನು ಪರಾಜಯ ಗೊಳಿಸಿ, ಅವರನ್ನು ಚಾಳುಕ್ಯರ ಆಧೀನರಾಗಿಸಿ, ಊರುರಾಣಪರಾಕ್ರಮ, ರಾಣವಿಕ್ರಮ, ಪರಮಭಾಗವತನೆಂಬ ಬಿರುದುಗಳನ್ನು ಹೊಂದಿ ವಾತಾಪಿ ನಗರಿಯಲ್ಲಿ ವೈಶ್ಣವ ದೇವಾಲಯವೊಂದನ್ನು ಕಟ್ಟಿಸಿದ ಕತೆಗಳು ಕೇಳಿಬರುತ್ತಿದ್ದವು. ನಮ್ಮಂತಹ ಸಾಮಾನ್ಯ ಜನರಿಗೆ ಹೀಗೆ ಕೇಳಿ ಬರುತ್ತಿದ್ದ ಸುದ್ಧಿಗಳೆಷ್ಟೋ ಅಷ್ಟೆ. ನಿಜ ಸಂಗತಿ ತಿಳಿಯಲು ಬೇರಾವ ಸಾಧನಗಳೂ ಇರಲಿಲ್ಲ.

ಈ ಮಂಗಳೇಶ ಮಹಾರಾಜನು ಯುವರಾಜ ಎರಯ ವಯಸ್ಸಿಗೆ ಬಂದಾಗ ಸಿಂಹಾಸನ ಬಿಟ್ಟುಕೊಡಬೇಕಾಗಿದ್ದರೂ, ಅಧಿಕರಣದ ಮದವು ಅವನ ತಲೆಗೇರಿ ತನ್ನ ಮಗನಾದ ಸುಂದರವರ್ಮನನ್ನು ಸಿಂಹಾಸನಕ್ಕೇರಿಸುವ ಕುಯೋಜನೆ ಹೂಡಿದ್ದು ಯುವರಾಜ ಎರೆಯನಿಗೆ ತಿಳಿದುಬಂದು, ಯುವರಾಜನು ತನ್ನ ಸ್ವಾಭಾವಿಕ ದಕ್ಷತೆಯಿಂದ ಅವರಿಬ್ಬರನ್ನೂ ನಿರ್ಮೂಲ ಮಾಡಿ, ಪುಲಿಕೇಶಿ ಎಂಬ ಬಿರುದನ್ನು ಹೊತ್ತು, ತಾನೇ ಸಿಂಹಾಸನವನ್ನೇರಿದ್ದು ಚಿರಪರಿಚಿತ ಕತೆಯಾಗಿತ್ತು.

ಸುಮಾರು ಆ ಕಾಲದಲ್ಲಿ ನನ್ನ ಜನ್ಮವಾದದ್ದು ಎಂದು ನಾನು ಬಾಲಕನಾದಾಗ ಅಮ್ಮ ಹೇಳುತ್ತಿದ್ದ ನೆನಪು. ವಯಸ್ಸು ಸುಮಾರು ಏಳೆಂಟು ಇದ್ದಿರಬಹುದು - ಪರಂಪರೆಯಾನುಸಾರವಾಗಿ ನನ್ನನ್ನು ಗುರುಕುಲಕ್ಕಟ್ಟಲಾಯಿತು. ಅಲ್ಲಿ ನಮ್ಮ ಸಂಪ್ರದಾಯದಂತೆ ನನ್ನ ವಿದ್ಯಾಭ್ಯಾಸ ನಡೆಯಿತು. ಸಂಸ್ಕೃತ, ವೇದ-ಪುರಾಣಗಳು ಹಾಗು ವೇದಾಂತ-ಮೀಮಾಂಸಗಳ ವಿಷಯಗಳಲ್ಲಿ ಶಿಕ್ಷಣೆ ಹೊಂದಿದೆ. ಹೀಗೇ ಹಲವಾರು ಸಂವತ್ಸರಗಳು ಕಳೆದವು. ಸುಮಾರು ಹದಿನಾರರ ವಯಸ್ಸಿರಬಹುದು, ಗುರುಗಳು ನಾನು ಗುರುಕುಲದಿಂದ ಹೊರಹೋಗಲು ಸಮರ್ಥನಾಗಿರುವೆ ಎಂದು ಹೇಳಿ ಕಳುಹಿಸಿಕೊಟ್ಟರು.

ಬೇರೆ ದಾರಿ ಕಾಣದೆ ವಾತಾಪಿ ನಗರಕ್ಕೆ ಹಿಂತಿರುಗಿದೆ. ಬಾಲಕನಾಗಿದ್ದಾಗ ನೋಡಿದ್ದು ಬಿಟ್ಟರೆ, ನಾನು ಕಾಣದ ಊರದು, ಎಲ್ಲವೂ ಹೊಸದು. ನಮ್ಮ ತಂದೆಯವರಿಗೆ ನಾನೂ ಅವರಂತೆ ವೈದಿಕ ಕಾರ್ಯ ನಿರ್ವಹಣೆ ನಡೆಸಿಕೊಂಡು, ವಿವಾಹ ಮಾಡಿಕೊಂಡು ವಾತಾಪಿಯಲ್ಲೇ ನೆಲೆಸಬೇಕೆಂಬ ವಿಚಾರ. ಆಗ ನಾನಿನ್ನೂ ಯುವಕ, ಮೇಲಾಗಿ ನನಗೆ ತಲೆಮಾರುಗಳಿಂದ ಬಂದಿರುವ ಬ್ರಾಹ್ಮವಿದ್ಯೆ ಮುನ್ನಡೆಸುವ ವಿಶೇಷ ಆಸೆಯೇನು ಇರಲಿಲ್ಲ. ದೇಶ ಸುತ್ತುವ ಸ್ವಾಭಾವಿಕ ಆಸೆ, ಏನಾದರೂ ಬೇರೆ ಕಾಯಕ ನಡೆಸಿ ಪದವಿ, ಹೊನ್ನು ಗಳಿಸುವ ಆಸೆ.

ಹೀಗೇ ನನ್ನ ಪಾಡೇನಾಗುವುದೆಂದು ಯೋಚಿಸುತ್ತ ಒಂದು ದಿನ ಊರಾಚೆ ಕಾಡಿನಲ್ಲಿ ಹೋಗಿ ಚಿಂತೆ ಮಾಡುತ್ತ ಕುಳಿತಿದ್ದೆ. ಹಾಗೆ ಕುಳಿತಿದ್ದಾಗ ಪ್ರಾಣಿಯೊಂದು ನಡೆದು ಹೋಗುತ್ತಿರುವ ಧ್ವನಿ ಕೇಳಿಸಿತು. ಕುಳಿತಲ್ಲೇ ಕುಳಿತು ಕತ್ತು ತಿರುಗಿಸಿ ನೋಡಿದರೆ ವ್ಯಾಘ್ರವೊಂದು ನೀರು ಕುಡಿಯಲು ಸರೋವರದ ಕಡೆ ಹೊರಟಿದೆ. ಅದರ ಸ್ವಲ್ಪ ಹಿಂದೆಯೇ ವ್ಯಕ್ತಿಯೊಬ್ಬ ಬಿಲ್ಲು ಬಾಣಗಳನ್ನು ಹಿಡಿದು ಅದರ ಮೇಲೆ ಗುರಿಯಿಟ್ಟು ಅದನ್ನೇ ಹಿಂಬಾಲಿಸಿ ಹೋಗುತ್ತಿದ್ದದ್ದು ಕಾಣಿಸಿತು.

ಗುರುಕುಲದ ವಿದ್ಯಾಭ್ಯಾಸದಲ್ಲಿ ನಾನು ಕಲಿತ ಒಂದು ಪಾಠವೆಂದರೆ ಪ್ರಕೃತಿಯ ಸೃಷ್ಟಿಯ ರಕ್ಷಣೆ. ಆ ಪಾಪದ ಪ್ರಾಣಿಯನ್ನು ಸಾಯಲು ಬಿಡುವವ ನಾನಾಗಿರಲಿಲ್ಲ. ನಾನು ಮರದ ಮರೆಯಲ್ಲಿದ್ದೆಯಾದ್ದರಿಂದ ಆ ಮನುಷ್ಯನ ಕಣ್ಣಿಗೆ ನಾನು ಕಾಣಿಸಿರಲಿಲ್ಲ. ವ್ಯಾಘ್ರ ನನ್ನ ಪಕ್ಕದಿಂದ ಸುಳಿದಾಗ ನಾನು ಅದರ ಮೇಲೆ ನೆಗೆದೆ. ಅದಕ್ಕೆ ಆಶ್ಚರ್ಯವಾಯಿತಾದರೂ ಅದು ಹೋರಾಡ ತೊಡಗಿತು. ಹೋರಾಟದಲ್ಲಿ ನನ್ನನ್ನು ಬಗರಿ ಓಡಿಹೋಯಿತು. ನೋವಿನಿಂದ ನರಳುತ್ತ ಬಿದ್ದಿದ್ದಲೇ ಬಿದ್ದಿದ್ದೆನಾದರೂ ವ್ಯಾಘ್ರನ ಜೀವ ಉಳಿಸಿದ ತೃಪ್ತಿಯ ಭಾವ ನನ್ನಲ್ಲಿ ಹರಿಯಿತು. ಆದರೆ ನಾನು ಹುಲಿಯನ್ನು ಅಟ್ಟಿ ಬಂದ ಆ ಮನುಷ್ಯನನ್ನು ಎಣಿಸಿರಲಿಲ್ಲ.

ಕೋಪದಿಂದ ನನ್ನ ಬಳಿ ದುರ-ದುರನೆ ನಡೆದು ಬಂದ. ಬಹಳ ಎತ್ತರವಾಗಿದ್ದು, ತೆಳುವಾದ, ಎಲುಬು ಕಾಣುವಂತಹ ಮೈಕಟ್ಟು ಹೊಂದಿದ್ದ. ಅವನ ಮುಖದಲ್ಲಿ ಕಠಿಣ, ನಿಷ್ಟುರ ರೇಖೆಗಳಿದ್ದು, ಕಣ್ಣುಗಳು ಗರುಡನ ಕಣ್ಣುಗಲಹಾಗೆ ರಕ್ತ-ಕೆಂಪಾಗಿದ್ದವು. ಅವನ ದಟ್ಟವಾದ ಒರಟಾದ ತಲೆಗೂದಲು ಅವನ ಮುಖದಸುತ್ತ ಚದುರಿ ಅವನಿಗೇ ವ್ಯಾಘ್ರನ ರೂಪ ಕೊಟ್ಟಿದ್ದವು. ಅವನೆ ಎದೆಯ ಮೇಲೆ ಒಂದು ವರಾಹದ ಲಾಂಛನವಿತ್ತು. ಸಮೀಪ ಬಂದು ಘರ್ಜಿಸಿದ:

"ನಮ್ಮ ಬೇಟೆಯನ್ನು ತಪ್ಪಿಸಲು ಎಷ್ಟು ಧೈರ್ಯವೋ ನಿನಗೆ? ನಾವು ಯಾರೆಂದು ಬಲ್ಲೆಯಾ"

ನಾನು ವಿನಯದಿಂದಾದರೂ ಸ್ವಲ್ಪ ಹೆಮ್ಮೆಯಿಂದ ಉತ್ತರಿಸಿದೆ "ನೀನು ಯಾರಾದರೇನು? ಆ ಮೂಕ ವ್ಯಾಘ್ರನನ್ನು ಕೊಲ್ಲುವ ಹಕ್ಕು ನಿನಗಿಲ್ಲ. ಆ ಕಾರಣದಿಂದ ನಾನು ಅದಕ್ಕೆ ಓಡಿಹೋಗಲು ದಾರಿ ಮಾಡಿಕೊಟ್ಟೆ."

ಅವನಿಗೆ ಕೋಪ ಇನ್ನಷ್ಟು ಹೆಚ್ಚಾಯಿತು. ಅಷ್ಟು ಹೊತ್ತಿಗೆ ಕಾಡಿನಲ್ಲಿ ಯಾರೋ ಬರುತ್ತಿದ್ದ ಸದ್ದು ಕೇಳಿಸಿತು. ಆತ ಒದರಿದ "ಯಾರಲ್ಲಿ"

ಕೆಲವೇ ಕ್ಷಣಗಳಲ್ಲಿ ಇಬ್ಬರು ರಾಜ ಭಟರು ಬಂದು ಆತನಿಗೆ ಬಾಗಿ ಆದರ ತೋರಿ "ಅಪ್ಪಣೆ ಮಹಾರಾಜ" ಎಂದರು. ಮಹಾರಾಜನ ತಂಡದ ಉಳಿದವರು ಒಬ್ಬೊಬ್ಬರಾಗಿ ಪ್ರತ್ಯಕ್ಷರಾಗಲು ಆರಂಭಿಸಿದರು.

ನನಗಾಗ ಹೊಳೆಯಿತು. ಈತ ಮಹಾರಾಜ ಪುಲಿಕೇಶಿ - ವ್ಯಾಘ್ರನ ಕೇಶ ಉಳ್ಳವನು. ಸಿಂಹಾಸನವನ್ನೇರಿದಮೇಲೆ ಈತ ಅಪ್ಪಯಕ ಹಾಗು ಗೋವಿಂದರೆಂಬ ದಂಗೆಯೆದ್ದ ಪಾಳೆಯಗಾರರನ್ನು ಸದೆಬಡೆದು ಅವರು ಕಪ್ಪ ಸಲ್ಲಿಸುವಂತೆ ಮಾಡಿದವ. ವೈಜಯಂತಿಯ ಕದಂಬರನ್ನು ಪೂರ್ಣ ನಿರ್ಮೂಲ ಮಾಡಿ, ನಂತರ ತಲಕಾಡಿನ ಗಂಗರನ್ನು ಹಾಗು ಕರಾವಳಿಯ ಅಲೂಪರನ್ನು ಯುದ್ಧ ದಲ್ಲಿ ಸೋಲಿಸಿ ಸಾಮಂತರನ್ನಾಗಿಸಿದವ. ಕೊಂಕಣ ಕರಾವಳಿ ಹಾಗು ಪುರಿ ಬಂದರನ್ನು ಸಮುದ್ರ ಕಾಳಗದ ನಂತರ ಗೆದ್ದವ. ಲತರು, ಗುರ್ಜರರು ಹಾಗು ಮಾಳವರನ್ನು ಪೂರ್ಣ ಸದೆಬಡೆದು ದಕ್ಷಿಣಪಥಕ್ಕೇ ಅಧಿಪತಿಯಾದಂತವ. ಕೆಲವೇ ಸಂವತ್ಸರಗಳ ಹಿಂದೆ ಮಹಾರಾಜನು ಪಲ್ಲವ ಚಕ್ರವರ್ತಿ ಮಹೇಂದ್ರವರ್ಮನ ತಾಣವಾದ ಕಾಂಚೀಪುರಕ್ಕೆ ಧಾಳಿಯಿಟ್ಟು, ಪುಳ್ಳಲೂರಿನ ಯುದ್ಧದಲ್ಲಿ ಪಲ್ಲವರನ್ನು ಸೋಲಿಸಿ ಮಹೇಂದ್ರವರ್ಮನು ಕಾಂಚೀಪುರದ ಕೋಟೆಯೊಳಗೆ ಅಡಗಿಕೊಳ್ಳುವ ಪರಿಸ್ಥಿತಿ ಬಂದಾಗ, ಆ ಕೋಟೆಗೆ ಧಾಳಿಯಿಟ್ಟು, ಕಾಂಚೀನಗರದೊಳಗೆ ಹೊಕ್ಕಿ, ಅಲ್ಲಿ ಪಲ್ಲವರನ್ನು ಸದೆಬಡೆದು, ಅವರನ್ನೂ ಕಪ್ಪ-ಕಾಣಿಕೆ ಸಲ್ಲಿಸಲು ಒತ್ತಾಯ ಮಾಡಿದವ. ನಾನು ಇಂತಹ ಮಹಾರಾಜನ ಬೇಟೆ ತಪ್ಪಿಸಿದ್ದೆ! ನನಗೇನು ಕಾದಿತ್ತೋ ಯೋಚನೆ ಮಾಡಲು ಭಯವಾಗುತ್ತಿತ್ತು.

ಇಷ್ಟೆಲ್ಲ ಯೋಚನೆ ಮಾಡಲು ನನಗೆ ಕೆಲವೇ ಕ್ಷಣಗಳ ಸಮಯ ಬೇಕಾಗಿದ್ದದ್ದು. ನನಗಷ್ಟೂ ಸಮಯ ಕೊಡದೆ ಮಹಾರಾಜನು "ಇವನನ್ನು ಒಯ್ದು ಕಾರಾಗ್ರಹಕ್ಕೆ ತಳ್ಳಿ" ಎಂದು ಹೇಳಿ ಹೊರಟು ಹೋದನು.