ದೀಪಾವಳಿ - ಮಧುರ ನೆನಪುಗಳು..

Submitted by Jayanth Ramachar on Wed, 11/03/2010 - 11:59
ಬರಹ

ದೀಪಾವಳಿ...ಈ ಹೆಸರೆಂದರೆ ಮನಸಿಗೆ ಏನೋ ಒಂದು ರೀತಿ ಆನಂದ, ಸಂಭ್ರಮ, ಪುಳಕ...ವರ್ಷಕ್ಕೊಮ್ಮೆ ಬರುತ್ತಿದ್ದ ಈ ಹಬ್ಬ ಎರಡು ಮೂರು ಬಾರಿ ಬರಬಾರದೇ ಎಂದು ಅಂದುಕೊಂದಿದ್ದೂ ಉಂಟು..ಮೊದಲೆಲ್ಲ ದೀಪಾವಳಿ ಎಂದರೆ ನವರಾತ್ರಿಯಿಂದಲೇ ಸಿದ್ಧತೆಗಳು ನಡೆಸುತ್ತಿದ್ದೆವು. ಶಾಲೆಯಲ್ಲಿ, ಮನೆಯಲ್ಲಿ ಸ್ನೇಹಿತರೊಡನೆ ಬರೀ ಅದೇ ಮಾತು...ಕಳೆದ ಬಾರಿ ಹೇಗಿತ್ತು. ಈ ಬಾರಿ ಹೇಗೆ ಮಾಡಬೇಕು ಹೊಸ ಬಟ್ಟೆ ತೆಗೆದುಕೊಳ್ಳುವ ಬಗ್ಗೆ ಪಟಾಕಿಗಳನ್ನು ಹೇಗೆ ವಿಧವಿಧವಾಗಿ ಹೊಡೆಯಬೇಕೆಂದು ಚರ್ಚೆಗಳು ನಡೆಯುತ್ತಿದ್ದವು.

ಇನ್ನು ದೀಪಾವಳಿಗೆ ಒಂದು ವಾರ ಮುಂಚೆ ನಮ್ಮ ತಂದೆ ಪಟಾಕಿ ತಂದು ನಾವು ಮೂರು ಜನ ಅಣ್ಣ ತಮ್ಮಂದರಿಗೆ ಹಂಚುತ್ತಿದ್ದರು ಹಾಗೆ ಒಂದು ಷರತ್ತು ಸಹ ಇರುತ್ತಿತ್ತು...ಅದೇನೆಂದರೆ ಇದೆ ಪಟಾಕಿಯನ್ನು ತುಳಸಿ ಹಬ್ಬಕ್ಕೂ ಉಳಿಸಿಕೊಳ್ಳಬೇಕೆಂದು ಹಾಗೆ ಒಬ್ಬರ ಪಟಾಕಿ ಇನ್ನೊಬ್ಬರು ಮುಟ್ಟುವಂತಿಲ್ಲ. ಸರಿ ಇನ್ನು ದೀಪಾವಳಿಯ ಹಿಂದಿನ ದಿನ ನೀರು ತುಂಬುವ ಹಬ್ಬದಂದು ಶಾಲೆಗೆ ಹೋಗುವ ಮನಸ್ಸಿಲ್ಲದಿದ್ದರೂ ಹೋಗಿ ಅರ್ಧ ದಿನ ಏನೋ ಒಂದು ನೆವ ಹೇಳಿ ಮನೆಗೆ ಬಂದು ಬ್ಯಾಗ್ ಒಂದು ಕಡೆ ಬಿಸಾಡಿದರೆ ಇನ್ನು ಅದನ್ನು ಮುಟ್ಟುತ್ತಿದ್ದದ್ದು ಬಲಿಪಾಡ್ಯಮಿಯ ನಂತರದ ದಿನವೇ... ಆ ಮೂರು ದಿನ ಪಟಾಕಿಯೇ ನಮಗೆ ಸರ್ವಸ್ವ...ನೀರು ತುಂಬುವ ಹಬ್ಬದ ದಿನ ಗೆಳೆಯರ ಜೊತೆ ಸೇರಿ ಯಾರು ಯಾರ ಮನೆಯಲ್ಲಿ ಎಷ್ಟೆಷ್ಟು ಪಟಾಕಿ ತಂದಿದ್ದಾರೆ, ಎಲ್ಲೆಲ್ಲಿ ಹೊಡೆಯುವುದು ಎಂದು ಮಾತಾಡಿಕೊಂಡು ಮನೆಗೆ ಹೋಗಿ ಊಟ ಮಾಡಿ ನಿದ್ದೆ ಬರದಿದ್ದರೂ ಸುಮ್ಮನೆ ಮಲಗುತ್ತಿದ್ದೆವು.. ಆಗ ನಮ್ಮಲ್ಲಿ ಒಂದು ಸ್ಪರ್ಧೆ ಇತ್ತು ಯಾರು ಮೊದಲ ಪಟಾಕಿ ಹೊಡೆಯುವರೆಂದು...ಹಾಗಾಗಿ ನಮಗೆ ನಿದ್ದೆ ಬರುತ್ತಿರಲಿಲ್ಲ...ಬೆಳಿಗ್ಗೆ ೪.೩೦ ಅಥವಾ ೫ ಗಂಟೆಗೆ ಎದ್ದು ಮೊದಲ ಪಟಾಕಿ ಹಚ್ಚಿದಾಗ ಸಿಗುತ್ತಿದ್ದ ಸಂಭ್ರಮ ಅಷ್ಟಿಷ್ಟಲ್ಲ...ಅದು ವರ್ಣನಾತೀತ ಅನುಭವ..ಹೆಚ್ಚುಕಮ್ಮಿ ಪ್ರತಿಸಲ ಮೊದಲನೇ ಪಟಾಕಿ ನಂದೇ ಆಗಿರುತ್ತಿತ್ತು...ನಂತರ ಮನೆಗೆ ಬಂದು ಎಣ್ಣೆ ಸ್ನಾನ ಮಾಡಿ ಹೊಟ್ಟೆಗೆ ಇದ್ದರು ಸರಿ ಇಲ್ಲದಿದ್ದರೂ ಸರಿ ಪಟಾಕಿ ಹೊಡೆಯೋಕೆ ಆಚೆ ಬಂದರೆ ಮತ್ತೆ ಮನೆ ಸೇರುತ್ತಿದ್ದು ಊಟದ ಸಮಯಕ್ಕೆ..ಸಂಜೆಯ ತನಕ ಟಿ.ವಿ. ನೋಡಿಕೊಂಡೋ ಇಲ್ಲ ಗೆಳೆಯರ ಜೊತೆ ಮಾತಾಡಿಕೊಂಡ್ ಕಾಲ ಕಳೆದು ಮತ್ತೆ ಸಂಜೆ ಪಟಾಕಿ ಹೊಡೆಯಲು ಹೋದರೆ ಮತ್ತೆ ಮನೆ ಸೇರುತ್ತಿದ್ದು ರಾತ್ರಿ ೧೧ , ೧೨ ಗಂಟೆಗೆ...ಎರಡನೇ ದಿನ ಶಾಲೆಗೆ ಸ್ವಘೋಷಿತ ರಜೆ. ಮತ್ತೆ ಮೂರನೇ ದಿನ ಅಂದರೆ ಬಲಿಪಾಡ್ಯಮಿ ದಿನ ಅದೇ ಮರುಕಳಿಸುತ್ತಿತ್ತು...ನಾವು ಪಟಾಕಿಗಳನ್ನು ಹೊಡೆಯಲು ಬಳಸುತ್ತಿದ್ದ ವಿಧಾನಗಳು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ...ನಾವು ಇದ್ದಿದ್ದು ಒಂದು ವಟಾರದಲ್ಲಿ...ಅಲ್ಲಿ ಒಂದು ಬಾಂಬ್ ಹಚ್ಚಿಟ್ಟು ಅದರ ಮೇಲೆ ಒಂದು ಹಳೆ ಡಬ್ಬ, ಇಲ್ಲವೇ ತೆಂಗಿನ ಚಿಪ್ಪು ಮುಚ್ಚಿಟ್ಟು ಅದು ಮಾಡುವ ಶಭ್ದ ಪ್ರತಿಧ್ವನಿಸಿ ಕೇಳಲು ಅದೇನೋ ಆನಂದ...ರಾಕೆಟ್ಗಳನ್ನು ಎಷ್ಟೋ ಬಾರಿ ನೆಲದ ಮೇಲಿಟ್ಟು ಹೊಡೆದು ಬೈಸಿಕೊಂಡಿದ್ದು ಇದೆ...ಕೆಲವೊಮ್ಮೆ ರಾಕೆಟ್ಗಳನ್ನು ಕೈಯಲ್ಲಿ ಹಚ್ಚಿ ಯಾರು ಹೆಚ್ಚು ಮೇಲಕ್ಕೆಸೆಯುತ್ತಾರೆ ಎಂದು ನೋಡುತ್ತಿದ್ದೆವು...ಕೆಲವೊಮ್ಮೆ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡರು ಲೆಕ್ಕಿಸದೆ ಪಟಾಕಿ ಹೊಡೆದದ್ದು ಇದೆ...

ಇನ್ನು ಆ ರಾತ್ರಿ ಬಂದು ಮಲಗಿದರೆ ನಿದ್ದೆಯಲ್ಲೆಲ್ಲಾ ಅದೇ ನೆನಪುಗಳು ಮೂಡಿ ನಿದ್ದೆ ಮಾಡಲು ಮನಸೇ ಆಗುತ್ತಿರಲಿಲ್ಲ....ಮರುದಿನ ಶಾಲೆಯಲ್ಲೂ ಅದೇ ಅನುಭವಗಳ ಸುರಿಮಳೆ ಆಗುತ್ತಿತ್ತು...ದಿನ ಕಳೆದಂತೆ ಪಟಾಕಿ ಹೊಡೆಯುವ ಆಸಕ್ತಿ ಕಮ್ಮಿಯಾಗುತ್ತ ಬಂತು...ಈಗ ನಮ್ಮ ಮನೆಯಲ್ಲಿ ಪಟಾಕಿ ತಂದು ಸುಮಾರು ೪ ವರ್ಷಗಳಾಯಿತು..ಮೊದಮೊದಲು ತಮ್ಮಂದಿರು ಹೊಡೆಯುತ್ತಿದ್ದರು ನಂತರದ ದಿನಗಳಲ್ಲಿ ಅದೂ ಇಲ್ಲವಾಯಿತು...ಈಗ ಬೇರೆಯವರು ಪಟಾಕಿ ಹೊಡೆಯುವುದು ನೋಡುವುದೇ ಒಂದು ರೀತಿ ಖುಷಿ ಕೊಡುತ್ತದೆ...ಆದರೂ ಆ ಹಳೆ ನೆನಪುಗಳು ಮರುಕಳಿಸಿದಾಗ ಏನೋ ಒಂದು ರೀತಿ ಆನಂದ ಹಾಗೆ ಬೇಸರ ಸಹಾ ಆಗುವುದು....


ಎಲ್ಲರಿಗೂ ಮುಂಗಡವಾಗಿ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು