ಮನಸ್ಸಿಗೆ ಕಿರಿಕಿರಿ ರೂಢಿಯಾಗಿದೆ- ರಘೋತ್ತಮ್ ಕೊಪ್ಪರ

ಮನಸ್ಸಿಗೆ ಕಿರಿಕಿರಿ ರೂಢಿಯಾಗಿದೆ- ರಘೋತ್ತಮ್ ಕೊಪ್ಪರ

ಬರಹ

ಮನಸ್ಸಿಗೆ ಕಿರಿಕಿರಿ ರೂಢಿಯಾಗಿದೆ

ಮಹಾನಗರದ ಯಾಂತ್ರಿಕ ಜೀವನದಲ್ಲಿ ಮನಸ್ಸು ಸಹಜವಾಗಿ ಕಸಿವಿಸಿಗೊಳ್ಳುತ್ತದೆ. ಬೆಳಿಗ್ಗೆ ಕೆಲ್ಸಕ್ಕೆ ಹೋಗುವಾಗ ಲೇಟಾಯ್ತು, ಬೇಗ ಎದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಗೋಳು ಪ್ರತಿದಿನ ಸಾಮಾನ್ಯ. ಅದೇ ಸ್ವಲ್ಪ ಬೇಗ ಎದ್ದು ಬಿಟ್ಟರೆ ಇರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಯಾರೂ ಮಾಡುವುದಿಲ್ಲ ಯಾಕೆಂದರೆ ಮನಸ್ಸಿಗೆ ಕಿರಿಕಿರಿ ಎಂಬುದು ರೂಢಿಯಾಗಿದೆ. ಬೈಕು ಕಿಕ್ ಹೊಡೆವಾಗ ಜೋರಾಗಿ ಹೊಡೆದು ನಮ್ಮ ಸಿಟ್ಟನ್ನು ತೀರಿಸಿಕೊಳ್ಳುವುದು ಯಾಕೆಂದರೆ ಇಡೀ ದಿನ ಆಫೀಸನಲ್ಲಿ ಬಾಸ್ ಕಡೆಗೆ ಅನ್ನಿಸಿಕೊಳ್ಳಬೇಕಲ್ಲ. ಕೆಲವರಿಗೆ ಬಾಸ್ ಚಿಂತೆ ಇರುವುದಿಲ್ಲ ಆದರೂ ಕಿರಿಕಿರಿ ಮಾಡಿಕೊಳ್ಳುತ್ತಿರುತ್ತಾರೆ. ಬಸ್ಸಿನಲ್ಲಿ ಪ್ರಯಾಣ ಮಾಡಬೇಕೆಂದ್ರೆ ಮುಗಿದೇ ಹೋಯಿತು. ಮೊದಲು ಸೀಟ್ ಸಿಕ್ಕರೆ ಸಾಕು ಎಂದು ಹತ್ತುತ್ತೇವೆ. ನಂತರ ಸೀಟ್ ಸಿಕ್ಕರೂ ಕಿಟಕಿ ಬೇಕೆಂದು ಹಂಬಲಿಸುತ್ತೇವೆ. ಎದ್ದು ನಿಲ್ಲುವುದಾದರೆ ಯಾರಿಗೆ ಬೈ ಬೇಕು ಎಂದು ಕಾಯುತ್ತೇವೆ. ಪಕ್ಕದಲ್ಲಿರುವವರು ಎಲ್ಲಿ ಕಾಲು ತುಳಿಯುತ್ತಾರೊ ಎಂದು ನೋಡುತ್ತಿರುತ್ತೇವೆ. ಕಡೆಗೆ ಬಾಗಿಲಲ್ಲಿ ನಿಂತಿರುವ ಯಾರಿಗಾದರೂ ಬೈದು ಸಿಟ್ಟು ತೀರಿಸಿಕೊಳ್ಳಬೇಕೆಂಬ ತವಕವೂ ಮನದಲ್ಲಿರುತ್ತದೆ. ಕೆಲಸ ಮುಗಿಸಿ ಬರುವಾಗ ಸೀಟ್ ಬೇಕೆ ಬೇಕು ಎಂಬ ಛಲ ಮನದಲ್ಲಿರುತ್ತದೆ. ಅಷ್ಟು ಸಾಕಾಗಿರುತ್ತೆ. ನಾವಷ್ಟೆ ಕೆಲಸ ಮಾಡಿ ದಣಿದಿದ್ದೇವೆ ಎಂಬ ಭಾವ ನಮ್ಮ ಮುಖದಲ್ಲಿರುತ್ತದೆ. ಆಗ ಬಸ್ ಸಿಕ್ಕೊಡನೆಯೆ ಹಾರಿ ಜಿಗಿದಾಡಿ ಸೀಟು ಹಿಡಿಯಲು ಹಾತೊರೆಯುತ್ತೇವೆ. ಒಳ್ಳೆಯ ಸೀಟು ಸಿಕ್ಕರೂ ಲೊಚಕ್ ಲೊಚಕ್ ಎಂಬ ಪದ ಬಾಯಲ್ಲಿ ಇದ್ದೆ ಇರುತ್ತದೆ. ಬಸ್ಸಿನಲ್ಲಿ ನಿಂತವರು ಕುಳಿತವರತ್ತ ನೋಡುತ್ತ ನಮಗೂ ಸೀಟ್ ಸಿಕ್ಕಿದ್ದರೆ ಎಂದು ವಾರೆನೋಟ ಬೀರುತ್ತಿರುತ್ತಾರೆ. ಆರಾಮವಾಗಿ ಬಸ್ಸಿನಲ್ಲಿ ಎಫ಼್.ಎಂ. ಕೇಳುತ್ತ ಕುಳಿತವರನ್ನು ನೋಡಿದಾಗ ಹೀಗೆ ಎಂಜಾಯ್ ಮಾಡ್ಬೇಕು ಅನ್ನಿಸುತ್ತೆ. ಆದರೆ ನಮ್ಮ ಮನಸಿಗೆ ಕಿರಿಕಿರಿ ರೂಢಿ ಯಾಗಿದೆಯಲ್ಲ. ಮನೆಯಲ್ಲಿ ಬಂದು ಕುಳಿತರೆ ಸೆಕೆ ಅಥವಾ ಚಳಿ ಎಂದು ಗೊಣಗುವ ಸ್ವಭಾವ ಹಲವರಲ್ಲಿ ಇರುತ್ತೆ. ಫ್ಯಾನನ್ನು ೩ ಕ್ಕಿಟ್ಟರೆ ಚಳಿ ಎನ್ನುವರು ೨ಕ್ಕಿಟ್ಟರೆ ಸೆಕೆ ಅನ್ನುವವರಿಗೆ ಏನು ಹೇಳಬೇಕೊ ಎಂದು ಎಷ್ಟೊ ಬಾರಿ ಗೊಂದಲಕ್ಕೆ ಬಿದ್ದಿರುತ್ತೇವೆ. ಮನೆಯಲ್ಲಿ ಅಡುಗೆ ಏನು ಎಂದು ಕೇಳುವುದು. ಚಪಾತಿ ಎಂದರೆ ಹೌದಾ ಮುದ್ದೆ ಇದ್ದರೆ ಚೆನ್ನಾಗಿರೋದು, ಹೀಗೆ ಏನಿಲ್ಲವೂ ಅದು ಇದ್ದರೆ ಚೆನ್ನಾಗಿರುತ್ತಿತ್ತು ಎಂಬ ಮನೋಭಾವವನ್ನು ಹಲವರಲ್ಲಿ ಕಾಣಬಹುದು. ಭಾನುವಾರ ಬಂತೆಂದರೆ ಹಲವು ಪ್ಲಾನ್ ಗಳನ್ನು ಹಾಕಲು ರೆಡಿ. ಒಬ್ಬರು ಕಬ್ಬನ್ ಪಾರ್ಕ್ ಅಂದರೆ ಒಬ್ಬರು ಲುಂಬಿನಿ ಗಾರ್ಡನ್ ಅನ್ನುತ್ತಾರೆ. ಕಡೆಗೆ ಮನೆ ಹತ್ತಿರವಿರುವ ಯಾವುದಾದರೂ ಒಳ್ಳೆಯ ಹೋಟೆಲ್ ಗೆ ಹೋಗಿ ಸಮಾಧಾನ ಮಾಡಿಕೊಳ್ಳುತ್ತೇವೆ. ನನಗಂತೂ ಈ ಅನುಭವ ತುಂಬಾ ಬಾರಿ ಆಗಿದೆ. ಕೆಲವರನ್ನು ನೋಡಿದರೇ ಸಿಟ್ಟು ಬರುತ್ತದೆ. ಅವರೊಂದಿಗೆ ದ್ವೇಷ ಇರದಿದ್ದರೂ ಅವರನ್ನು ಕಂಡರೆ ಚಿಡರಿಗೇಳುತ್ತೇವೆ. ಅದೇಕೊ ಗೊತ್ತಿಲ್ಲ ಅಂತ ಎಷ್ಟೋ ಬಾರಿ ಅನಿಸಿರುತ್ತದೆ. ಇದೆಲ್ಲವನ್ನು ಆದಷ್ಟು ಕಡಿಮೆ ಮಾಡಿ ಆರೋಗ್ಯದ ಕಡೆಗೆ ಗಮನಕೊಡುವುದು ಈಗ ಅತ್ಯವಶ್ಯವಾಗಿದೆ. ಎನೇ ಆಗಲಿ ಮನಸ್ಸಿಗೆ ಕಿರಿಕಿರಿ ರೂಢಿಯಾಗಿದೆ ಅಲ್ಲವೇ...