Redheaded league ಅನುವಾದ

Redheaded league ಅನುವಾದ

ಬರಹ

ಓದುಗರಿಗೆ ಸೂಚನೆ: ಪುಟ ೧೫೦ KB ಕಿಂತ ಹೆಚ್ಚು ದೊಡ್ಡದಿರುವುದರಿಂದ ಲೋಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು

ಕೆಂಗೂದಲ ಕಿಡಿಗೇಡಿಗಳು.

ಕಳೆದ ಶರದೃತುವಿನಲ್ಲೊಂದು ದಿನ, ನನ್ನ ಗೆಳೆಯ ಶೆರ್ಲಾಕ್ ಹೋಮ್ಸನ ಮನೆಗೆ ಹೋಗಿದ್ದೆ. ಅಲ್ಲಿ ಹಿರಿಯ ವ್ಯಕ್ತಿಯೊಬ್ಬ ನನ್ನ ಗೆಳೆಯನೊಂದಿಗೆ ಸುಧೀರ್ಘ ಚರ್ಚೆಯಲ್ಲಿ ಮುಳುಗಿದ್ದ. ಅವನು ನೋಡಲು ಸಾಕಷ್ಟು ದಪ್ಪನಾಗಿದ್ದು, ಕಡುಕೆಂಪು ಬಣ್ಣದ ಕೂದಲನ್ನು ಹೊಂದಿದ್ದ. ನಾನು ಅವರಿಬ್ಬರ ಮಧ್ಯೆ ಒಳನುಗ್ಗಿದ್ದಕ್ಕೆ ಕ್ಷಮೆ ಕೇಳಿ, ಬಾಗಿಲು ಮುಚ್ಚಿಕೊಂಡು ಹೊರಬರುವುದರಲ್ಲಿದ್ದೆ, ಅಷ್ಟರಲ್ಲಿ ನನ್ನನ್ನು ನೋಡಿದ ಹೋಮ್ಸ್, ಕೈ ಹಿಡಿದು, ಒಳಗೆ ಎಳೆದುಕೊಂಡು ಬಾಗಿಲು ಮುಚ್ಚಿದ.

"ಎಂಥಾ ಸಮಯ..?? ಸಮಯಕ್ಕೆ ಸರಿಯಾಗಿಯೇ ಬಂದಿದ್ದೀಯಾ ವಾಟ್ಸನ್." ಎಂದ ಲೋಕಾಭಿರಾಮವಾಗಿ.

"ಬಹುಶಃ ನೀನು ಯಾವುದೋ ಕೆಲಸದಲ್ಲಿರುವಂತೆ ಕಾಣುತ್ತದೆ"

"ಹೌದು, ಖಂಡಿತವಾಗಿಯೂ"

"ಹಾಗಿದ್ದರೆ ನಾನು ಪಕ್ಕದ ಕೋಣೆಯಲ್ಲಿ ನಿನಗಾಗಿ ಕಾಯುತ್ತೇನೆ."

"ಬೇಕಿಲ್ಲ.." ಎಂದವನೇ ಆ ಅಪರಿಚಿತ ವ್ಯಕ್ತಿಯ ಕಡೆ ತಿರುಗಿ, "ವಿಲ್ಸನ್, ಇವನು ನನ್ನ ಆತ್ಮೀಯ. ನಾನು ಕಂಡಿರುವ ಅತ್ಯಂತ ಕ್ಲಿಷ್ಟ ಹಾಗೂ ಸಂಕೀರ್ಣ ಕೇಸುಗಳನ್ನು ಬಗೆಹರಿಸಲು ನನ್ನ ಸಹಾಯಕನಾಗಿ ದುಡಿದಿದ್ದಾನೆ. ನಿಮ್ಮ ಕೇಸಿನಲ್ಲಿಯೂ ಇವನ ಸಹಾಯದ ಅಗತ್ಯವಿದೆ ಎಂದು ನನಗನ್ನಿಸುತ್ತಿದೆ" ಎಂದ.

ಆ ವ್ಯಕ್ತಿ ಕುಳಿತಿದ್ದ ಕುರ್ಚಿಯಿಂದ ಅರ್ಧ ಎದ್ದಂತೆ ಮಾಡಿ, ನನಗೆ ವಂದಿಸಿದ. ಅವನ ಕೊಬ್ಬಿನಿಂದಾವೃತವಾದ ಕಣ್ಣುಗಳಲ್ಲಿ ನನ್ನೆಡೆಗೆ ಒಂದು ಚಿಕ್ಕ ಪ್ರಶ್ನಾರ್ಥಕ ನೋಟ ಅಡಗಿದ್ದುದು ನನ್ನ ಗಮನಕ್ಕೆ ಬಂತು.

"ಕುಳಿತುಕೋ" ಎನ್ನುತ್ತಾ ಶೆರ್ಲಾಕ್ ತನ್ನ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡ. ತೀವ್ರ ವಿಚಾರಣೆಯಲ್ಲಿ ಅವನು ಯಾವಾಗಲೂ ಕುಳಿತುಕೊಳ್ಳುವಂತೆ ತನ್ನ ಕೈಗಳನ್ನು ಜೋಡಿಸಿ "ವಾಟ್ಸನ್, ದಿನನಿತ್ಯದ ಕೆಲಸಕಾರ್ಯಗಳಿಗೆ ಭಿನ್ನವಾದ ಘಟನೆಗಳು, ನನ್ನಲ್ಲಿ ಆಸಕ್ತಿ ಉಂಟು ಮಾಡುವುದು ನಿನಗೆ ತಿಳಿದೇ ಇದೆ. ಇಂತಹ ಘಟನೆಗಳ ತಾರ್ಕಿಕ ಜೋಡಣೆಯೇ ಸಮಸ್ಯೆಗಳ ಪರಿಹಾರವೆಂದು ನನ್ನ ಅನುಭವ. ಇದರಲ್ಲಿ ನಿನಗೂ ಇರುವ ಆಸಕ್ತಿಯಿಂದಾಗಿ, ಈಗಾಗಲೇ ನಡೆದ ಒಂದೆರಡು ಘಟನೆಗಳನ್ನು ನೀನು ಅಕ್ಷರರೂಪದಲ್ಲಿ ದಾಖಲಿಸಿ, ನನ್ನ ಹೆಸರೂ ಪ್ರಸಿದ್ಧಿಗೆ ಬರಲು ಕಾರಣನಾಗಿದ್ದೀಯೆ"

ನಾನು ಮಧ್ಯೆ ಬಾಯಿ ಹಾಕಿದೆ. "ನಿನಗೆ ಬಂದ ಕೇಸುಗಳೂ, ಅವುಗಳನ್ನು ನೀನು ಬಗೆಹರಿಸುವ ರೀತಿಯೂ ತುಂಬಾ ಅಸಕ್ತಿಕರ"

"ಬಹುಶಃ ಮಿಸ್ ಮೇರಿ ಸುದರ್‌ಲ್ಯಾಂಡ್‍ರವರ ಕೇಸಿನಲ್ಲಿ ನಾನು ಹೇಳಲಿಲ್ಲವೇ? ವಿಚಿತ್ರ ಪರಿಣಾಮಗಳು ಮತ್ತು ಸಂಬಂಧವಿಲ್ಲದ ಘಟನಾವಳಿಗಳನ್ನು ಅರಿಯಬೇಕೆಂದರೆ ನಾವು ನಿಜಜೀವನಕ್ಕೇ ಮೊರೆ ಹೋಗಬೇಕು. ನಮ್ಮೆಲ್ಲಾ ಕಲ್ಪನಾಶಕ್ತಿಯ ಕಲ್ಪನೆಗಳಿಗಿಂತಲೂ, ಜೀವನದ ನಿಜ ಘಟನೆಗಳು ರೋಚಕವಾಗಿರುತ್ತವೆಂದು ನನ್ನ ಅಭಿಪ್ರಾಯ"

"ಆಗ ನಾನು ನನಗೆ ಬಂದ ಅನುಮಾನಗಳನ್ನು ತಿಳಿಸಿದ್ದೆ. ಅಷ್ಟೆ."

"ನಿಜ ಡಾಕ್ಟರ್, ಆದರೆ ನಾನು ನಿಮಗೆ ಘಟನೆಗಳನ್ನು ಒಂದರ ಹಿಂದೆ ಒಂದರಂತೆ ತಿಳಿಸುತ್ತಲೇ ಇದ್ದೆ. ನಿಮ್ಮ ತರ್ಕಸರಣಿ ಅವನ್ನು ಪೋಣಿಸಲಾರದೆ ಬಿಟ್ಟು ಹೋಗಿ, ನಾನು ಹೇಳಿದ್ದೇ ನಿಜ ಎಂದು ನಂಬುವಂತಾಯಿತು. ಅಷ್ಟೆ. ಇರಲಿ ಈಗ ಜಾಬೆಜ಼್ ವಿಲ್ಸನ್ ನಮ್ಮಲ್ಲಿಗೆ ಮತ್ತೊಂದು ಕುತೂಹಲಕಾರಿ ಪ್ರಸಂಗ ಕೊಂಡು ತಂದಿದ್ದಾರೆ. ಇದುವರೆಗೂ ನಾವು ಕೇಳಿರಲು ಅಥವಾ ನೋಡಿರಲು ಸಾಧ್ಯವೇ ಇಲ್ಲದಂತ ಪ್ರಸಂಗವಿದು. ಹಿಂದೆ ನಾನು ಆಗಾಗ ಹೇಳಿದಂತೆ ವಿಚಿತ್ರ ಘಟನೆಗಳ ಹಿಂದೆ ದೊಡ್ಡ ಅಪರಾಧವಿರುವ ಸಾಧ್ಯತೆಗಳು ಕಡಿಮೆ. ಆದರೆ ಸಣ್ಣ-ಪುಟ್ಟ ಅಪರಾಧಗಳು ಖಂಡಿತಾ ಇರುತ್ತವೆ. ಆದರೆ ಈ ಘಟನೆಯ ಹಿಂದೆ ಅಪರಾಧ ನಡೆದಿದೆಯೋ ಅಥವಾ ಅಪರಾಧ ನಡೆಯುವ ಸಾಧ್ಯತೆಗಳು ಇವೆಯೋ ಎಂಬುದನ್ನು ನಿರ್ಧರಿಸುವುದೂ ಬಹು ತ್ರಾಸದಾಯಕ. ವಿಲ್ಸನ್, ಬಹುಶಃ ನೀವು ನಿಮ್ಮೆಲ್ಲಾ ಅನುಭವಗಳನ್ನೂ ನನ್ನ ಸ್ನೇಹಿತನೆದುರು ಮತ್ತೊಮ್ಮೆ ಹೇಳುವುದು ಬಹಳ ಉಚಿತವಾಗುತ್ತದೆ. ಇದು ಕೇವಲ ಅವರು ಈ ಮುಂಚೆ ಘಟನೆಗಳನ್ನು ಕೇಳಿಲ್ಲ ಎಂದಷ್ಟೇ ಅಲ್ಲ. ನಿಮ್ಮ ಈ ಕೇಸು ಬಹಳ ಅಪರೂಪದ ನಿದರ್ಶನವಾಗಿರುವುದರಿಂದ, ಮತ್ತೊಮ್ಮೆ ಕೇಳುವುದೆ ನನಗೂ ಒಳ್ಳೆಯದೇ, ನನ್ನ ಅನುಭವ ಬೇರೆ ಘಟನೆಗಳನ್ನು ಕೇಳುತ್ತಿದ್ದಂತೆಯೇ ಮುಂದೇನು ಎಂದು ಹೇಳಬಲ್ಲುದಾದರೂ, ನಿಮ್ಮ ತರಹದ ಈ ಅಪರೂಪದ ಕೇಸನ್ನು ನಾನೂ ಹಿಂದೆ ಕೇಳಿಲ್ಲವಾದುದರಿಂದ, ಮತ್ತೊಮ್ಮೆ ಕೇಳುವುದು ಬಹಳ ಮುಖ್ಯ."

ನನ್ನ ಗೆಳೆಯನ ಮಾತುಗಳನ್ನು ಕೇಳಿದ ಆ ವ್ಯಕ್ತಿ ಸ್ವಲ್ಪ ಹೆಮ್ಮೆಯಿಂದ ತನ್ನ ಕೋಟಿನ ಜೇಬಿನಿಂದ ಕೊಳೆಯಾದ, ಚಿಕ್ಕದಾಗಿ ಮಡಿಚಿದ ಒಂದು ವೃತ್ತಪತ್ರಿಕೆಯನ್ನು ತೆಗೆದು, ಅದರಲ್ಲಿನ ಜಾಹೀರಾತು ವಿಭಾಗವನ್ನು ಸೂಕ್ಷ್ಮವಾಗಿ ಗಮನಿಸತೊಡಗಿದನು. ತೊಡೆಯ ಮೇಲೆ ಹಳೆಯ ವೃತ್ತಪತ್ರಿಕೆಯನ್ನು ಹರಡಿಕೊಂಡು, ತಲೆ ಬಗ್ಗಿಸಿ ನೋಡುತ್ತಿದ್ದ ಆ ವ್ಯಕ್ತಿಯನ್ನು ನೋಡುತ್ತಾ, ನನಗೂ ಶೆರ್ಲಾಕನ ತರಹ ಆ ವ್ಯಕ್ತಿಯ ವಿಶ್ಲೇಷಣೆ ಮಾಡಬೇಕೆನ್ನಿಸಿತು.

ನಮ್ಮ ಆ ಗಿರಾಕಿಯನ್ನು ನೋಡುತ್ತಲೇ, ಯಾರಾದರೂ ಮಧ್ಯಮವರ್ಗದ ಬ್ರಿಟಿಶ್ ವ್ಯಾಪಾರಿ ಎಂದು ಹೇಳಬಹುದಿತ್ತು. ಎಲ್ಲಾ ವ್ಯಾಪಾರಿಗಳಂತೆಯೇ ಸ್ವಲ್ಪ ಬೊಜ್ಜು, ಒಂದಷ್ಟು ಒಣ ಹೆಮ್ಮೆ, ಮತ್ತು ನಿಧಾನಗತಿಯ ಕಾರ್ಯವಿಧಾನ ಅವನಲ್ಲಿ ಕಾಣುತ್ತಿತ್ತು. ಚೌಕುಳಿ ಚೌಕುಳಿಯ ದೊಗಲೆ ಪ್ಯಾಂಟ್‍ನ ಜೊತೆಗೆ ಕಪ್ಪು ಕೋಟನ್ನು ಧರಿಸಿದ್ದ ಅವನು ಕೋಟಿನ ಗುಂಡಿಗಳನ್ನು ಹಾಕಿಕೊಂಡಿರಲಿಲ್ಲ. ಅದರೊಳಗೆ ಒಂದು ತುಂಡು ವೇಸ್ಟ್‍ಕೋಟ್, ಅದರಿಂದ ನೇತಾಡುತ್ತಿದ್ದ ಹಿತ್ತಾಳೆಯ ಚೈನು ಮತ್ತು ಅದರ ತುದಿಗೆ ಅಯತಾಕಾರದ ಒಂದು ಬಿಲ್ಲೆ. ತಲೆಯ ಟೋಪಿ ಮತ್ತು ಸ್ವಲ್ಪ ಮಸುಕಾದ ಓವರ್‌ಕೋಟ್ ಆತನ ಪಕ್ಕದ ಕುರ್ಚಿಯಲ್ಲಿತ್ತು. ಇವನ್ನೆಲ್ಲಾ ನೋಡಿದ ನನಗೆ ಆತನ ಕೆಂಗೂದಲನ್ನು ಬಿಟ್ಟು ಬೇರೆ ಏನೂ ವಿಶೇಷವಿದೆ ಎನಿಸಲಿಲ್ಲ.

ನಾನು ಈ ರೀತಿ ಗಿರಾಕಿಯನ್ನು ಗಮನಿಸುತ್ತಿರುವುದನ್ನು ನೋಡಿದ ಶೆರ್ಲಾಕ್ ನಸುನಗುತ್ತಾ "ಹೌದು, ಇವರು ಸ್ವಲ್ಪ ಸಮಯದ ಹಿಂದೆ ತ್ರಾಸದಾಯಕ ಕೆಲಸ ಮಾಡುತ್ತಿದ್ದರು, ಜೊತೆಗೆ ನಸ್ಯದ ಸೇವನೆಯ ಅಭ್ಯಾಸ ಇದೆ, ಸ್ವಲ್ಪ ಕಾಲ ಚೀನಾದಲ್ಲಿ ಮೇಸ್ತ್ರಿಯಾಗಿದ್ದರು. ಹಾಗೂ ಇತ್ತೀಚೆಗೆ ಸಾಕಷ್ಟು ಬರವಣಿಗೆ ನಡೆಸಿದ್ದಾರೆ ಎಂಬುದನ್ನು ಬಿಟ್ಟರೆ ನಾನೂ ಸಹ ಬೇರೇನನ್ನೂ ಹೇಳಲು ಸಾಧ್ಯವಿಲ್ಲ" ಎಂದನು.

ಇದನ್ನು ಕೇಳಿದ ವಿಲ್ಸನ್ ವೃತ್ತಪತ್ರಿಕೆಯ ಮೇಲೆ ತೋರುಬೆರಳಿದ್ದಂತೆಯೇ ಮೇಲೆದ್ದು ನಿಂತು ಗಾಬರಿಯಿಂದ ನನ್ನ ಸ್ನೇಹಿತನನ್ನು ನೋಡತೊಡಗಿದನು. "ಮಿಸ್ಟರ್ ಶೆರ್ಲಾಕ್ ಹೋಮ್ಸ್, ನಿಮಗಿದೆಲ್ಲಾ ಹೇಗೆ ತಿಳಿಯಿತು? ಯಾವ ಮಂತ್ರಶಕ್ತಿಯಿಂದ ತಿಳಿಯಿತು?" ಎಂದನು. ನಂತರ ನಗುತ್ತಾ "ಹೌದು, ನನ್ನ ತಾರುಣ್ಯದ ದಿನಗಳಲ್ಲಿ ನಾನು ಹಡಗಿನಲ್ಲಿ ಬಡಗಿಯಾಗಿ ಕೆಲಸ ಮಾಡಿದ್ದುಂಟು" ಎಂದನು.

"ನಿಮ್ಮ ಕೈಗಳು, ಮಿ.ವಿಲ್ಸನ್, ನಿಮ್ಮ ಬಲಗೈ ಎಡಗೈಗಿಂತ ಸ್ವಲ್ಪ ಸುಮಾರಾಗಿಯೇ ದಪ್ಪನಾಗಿದೆ, ನೀವು ಅದರಲ್ಲೇ ಕೆಲಸ ಮಾಡಿದ ಕಾರಣ ಆ ಮಾಂಸಖಂಡಗಳು ಬಲಿಷ್ಟವಾಗಿವೆ"

"ಹಾಗಿದ್ದರೆ ನಸ್ಯದ ಅಭ್ಯಾಸ ಮತ್ತು ಮೇಸ್ತ್ರಿ ಕೆಲಸ...?"

"ನಿಮ್ಮ ಎದೆಪಟ್ಟಿಯಿಂದ ನೇತಾಡುತ್ತಿರುವ ನಸ್ಯ ಹೊಸೆಯುವ ಕಡ್ಡಿ. ಮತ್ತದರ ವಿನ್ಯಾಸ." ಮುಗುಳ್ನಗೆಯಿಂದ ಕೂಡಿದ ಶೆರ್ಲಾಕನ ಉತ್ತರ.

"ಅಯ್ಯೋ..! ನಾನದನ್ನು ಮರೆತೇ ಬಿಟ್ಟಿದ್ದೆ. ಹಾಗಿದ್ದರೆ ಬರವಣಿಗೆಯ ಬಗ್ಗೆ ಹೇಗೆ ನಿರ್ಧಾರಕ್ಕೆ ಬಂದಿರಿ?"

ನಿಮ್ಮ ಅಂಗಿಯ ಬಲತೋಳಿನ ಮುಂದಂಚು ಸುಮಾರು ಐದು ಇಂಚಿನವರೆಗೆ ಹೊಳೆಯುತ್ತಿದೆ. ಎಡಗಡೆಯ ತೋಳಿನ ಬಳಿ ಮೊಣಕೈನ ಭಾಗದಲ್ಲಿ ಸಣ್ಣ ಕಲೆಯಾಗಿರುವುದು ನೀವು ಇತ್ತೀಚಿಗೆ ಬರವಣಿಗೆಯಲ್ಲಿ ನಿರತರಾಗಿರುವುದನ್ನು ಸೂಚಿಸುತ್ತದೆ."

"ಚೀನಾದ ಪ್ರವಾಸ..?"

"ನಿಮ್ಮ ಬಲಮುಂಗೈ ಮೇಲುಭಾಗದಲ್ಲಿ ನೀವು ಹಾಕಿಸಿಕೊಂಡಿರುವ ಹಚ್ಚೆಯ ಮೇಲಿನ ಮೀನು. ಅಂತಹಾ ಮೀನಿನ ವಿನ್ಯಾಸದ ಹಚ್ಚೆ ಚೀನಾವನ್ನು ಬಿಟ್ಟು ಬೇರೆಲ್ಲೂ ಕಾಣುವುದಿಲ್ಲ. ಹಚ್ಚೆಯ ಬಗ್ಗೆ ನಾನೊಂದಿಷ್ಟು ಅಭ್ಯಾಸ ಮಾಡಿಕೊಂಡಿದ್ದೇನೆ, ಅಲ್ಲದೆ ಆ ಬಗ್ಗೆ ಒಂದು ಪುಸ್ತಕವನ್ನೂ ಬರೆದಿದ್ದೇನೆ, ನೋಡಿ, ನಿಮ್ಮ ಮುಂಗೈ ಮೇಲೆ ಕೆಂಪಗೆ ಕಾಣುವಂತಿರುವ ಮೀನಿನ ಹಚ್ಚೆ, ಚೀನಾವನ್ನು ಬಿಟ್ಟು ಬೇರೆಲ್ಲೂ ಮಾಡುವುದಿಲ್ಲ. ಜೊತೆಗೆ ನಿಮ್ಮ ಗಡಿಯಾರದ ಸರಪಳಿಯಿಂದ ಚೀನಾದ ನಾಣ್ಯದ ಬಿಲ್ಲೆ ನೇತಾಡುತ್ತಿರುವುದು ನಾನು ಹೇಳಿದ ಮಾತಿಗೆ ಪೂರಕವಾಗಿದೆ."

ವಿಲ್ಸನ್ ಜೋರಾಗಿ ನಗಾಡುತ್ತಾ " ನಾನು ನೀವೇನೋ ಮಾಯ-ಮಂತ್ರ ಮಾಡಿರಬೇಕೋ, ಅಥವಾ ಇನ್ನೇನೋ ಅತಿ ಬುದ್ಧಿವಂತಿಕೆಯ ಕೆಲಸ ಮಾಡಿರಬೇಕೆಂದುಕೊಂಡೆ. ಈಗ ಅರ್ಥವಾಯಿತು, ಅದು ಎಷ್ಟು ಸುಲಭವೆಂದು" ಎಂದ.

ಅದಕ್ಕೆ ಹುಳಿನಗೆ ನಗುತ್ತಾ ಶೆರ್ಲಾಕ್ ನನ್ನೆಡೆಗೆ ತಿರುಗಿ " ಹೀಗೆ ನಾನು ಹೇಗೆ ವಿಷಯಗಳ ವಿಷ್ಲೇಶಣೆ ಮಾಡುತ್ತೇನೆಂದು ಸರಳವಾಗಿ ಹೇಳಿಬಿಟ್ಟರೆ, ನನ್ನ ಬುದ್ಧಿಶಕ್ತಿಯ ಬಗ್ಗೆಜನರ ನಂಬಿಕೆ ಹೋಗಿ, ನನ್ನ ಖ್ಯಾತಿಗೆ ಕುಂದುಂಟಾಗುತ್ತದೇನೋ?" ಎಂದನು. ಮತ್ತೆ ವಿಲ್ಸನ್ನನ ಕಡೆ ತಿರುಗಿ "ನೀವು ಹುಡುಕುತ್ತಿರುವ ಜಾಹೀರಾತು ಸಿಕ್ಕಿತೇ?" ಎಂದನು.

"ಹಾ.. ಸಿಕ್ಕಿತು. ಇಲ್ಲೇ ಇದೆ ನೋಡಿ, ಇದನ್ನು ನೀವೇ ಓದಿ" ಎನ್ನುತ್ತಾ ವಿಲ್ಸನ್ ಜಾಹೀರಾತು ಕಾಲಮ್ಮಿನ ಮಧ್ಯಭಾಗದ ಜಾಹೀರಾತು ಒಂದರ ಮೇಲೆ ತನ್ನ ಕೈ ಬೆರಳನ್ನಿಟ್ಟು ನನಗೆ ತೋರಿಸಿದನು. ಅದರಲ್ಲಿ

"ಕೆಂಗೂದಲ ತಂಡದ ಸದಸ್ಯರಿಗೆ,

ವಾರಕ್ಕೆ ನಾಲ್ಕು ಪೌಂಡುಗಳ ಸಂಬಳದ ಕೆಲಸ. ಲೆಬನಾನಿನ ದಿವಂಗತ ಎಜ಼ೆಕಿನ್ ಹಾಪ್ಕಿನ್‍ರವರ ಇಚ್ಛೆಯ ಮೇರೆಗೆ.

ಕೇವಲ ಕೆಂಗೂದಲ ತಂಡದ ಸದಸ್ಯರಿಗೆ ಮಾತ್ರವೇ ಅವಕಾಶ.

ಅರೋಗ್ಯವಂತ ೨೧ ವರ್ಷ ತುಂಬಿದ ಕೆಂಗೂದಲಿರುವವರೆಲ್ಲರೂ ಅರ್ಹರು.

ಸಂಪರ್ಕಿಸಬೇಕಾದ ವಿಳಾಸ : ಡ್ಂಕನ್ ರಾಸ್, ॑೭, ಕೆಂಗೂದಲ ತಂಡದ ಕಛೇರಿ. ಪೋಪ್ ಕಛೇರಿ ಕಟ್ಟಡ, ಫ಼್ಲೀಟ್ ರಸ್ತೆ" ಎಂದಿತ್ತು.

ಅದು ನಿಜವಾಗಿಯೂ ವಿಚಿತ್ರವಾಗಿತ್ತು, ಎರಡೆರಡು ಬಾರಿ ಓದಿದರೂ ನನಗೆ ಅದು ವಿಚಿತ್ರವೆನ್ನುವುದು ದೃಢವಾಯಿತೇ ವಿನಹ ಅದರಲ್ಲಡಗಿದ ನಿಗೂಢತೆ ಅರಿವಾಗಲಿಲ್ಲ. ಆದರೆ ನನ್ನ ಪತ್ತೇದಾರೀ ಮಿತ್ರ ತುಂಬು ಉತ್ಸಾಹದಲ್ಲಿದ್ದಂತೆ ಕಂಡಿತು.

"ನಿಜ, ಇದು ವಿಚಿತ್ರವಾದ ಕತೆ, ವಿಲ್ಸನ್, ಮತ್ತೊಮ್ಮೆ ನಿನ್ನ ಹಿನ್ನೆಲೆ, ಸಂಬಂಧಿಕರು, ಗೆಳೆಯರು, ಕೆಲಸಗಾರರು, ಎಲ್ಲವನ್ನೂ ಹೇಳು, ನಿನ್ನ ಕೈಯಲ್ಲಿರುವ ಜಾಹೀರಾತಿನಿಂದ ನಿನಗುಂಟಾದ ಅನುಕೂಲ/ಅನಾನುಕೂಲಗಳೇನು? ಪ್ರತಿಯೊಂದು ವಿವರವನ್ನೂ ಹೇಳು. ಮೊದಲಿಗೆ ವಾಟ್ಸನ್, ಆ ಪತ್ರಿಕೆಯ ಹೆಸರು ದಿನಾಂಕಗಳನ್ನು ಬರೆದುಕೋ, ಟಿಪ್ಪಣಿ ಮಾಡುವ ಕೆಲಸ ಈಗಲೇ ಪ್ರಾರಂಭವಾಗಲಿ" ಎಂದನು.

"ಇದು ಏಪ್ರಿಲ್ ೨೫, ೧೮೯೦ರ ದಿ ಮಾರ್ನಿಂಗ್ ಕ್ರೋನಿಕಲ್, ಅಂದರೆ ಎರಡು ತಿಂಗಳ ಹಿಂದಿನ ಜಾಹೀರಾತು."

"ಮುಖ್ಯವಾದ ವಿಷಯವೇ..! ಮುಂದೇನಾಯಿತು ವಿಲ್ಸನ್?"

"ನಾನೊಂದು ಲೇವಾದೇವಿ ಅಂಗಡಿಯನ್ನಿಟ್ಟುಕೊಂಡಿದ್ದೇನೆ." ಹಣೆಯುಜ್ಜುತ್ತಾ ವಿಲ್ಸನ್ ಮುಂದುವರೆಸಿದ " ಇಲ್ಲೇ ಕೋಬರ್ಗ್ ಚೌಕದಲ್ಲಿ. ನನ್ನದೇನೂ ಹೇಳಿಕೊಳ್ಳುವಂತಹ ದೊಡ್ಡ ವ್ಯಾಪಾರವಲ್ಲ. ಬರೇ ನನ್ನ ಜೀವನ ನಿರ್ವಹಣೆಗಾದರೆ ಕೊರತೆಯಿಲ್ಲ. ಮುಂಚೆ ನನ್ನ ಬಳಿ ಇಬ್ಬರು ಕೆಲಸಗಾರರಿದ್ದರು. ಈಗ ಒಬ್ಬನೇ ಇದ್ದಾನೆ. ಅವನೂ ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಾನೆ. ಕೆಲಸ ಕಲಿಯಬೇಕೆಂದು ನನ್ನ ಬಳಿ ಬಂದ. ಕಮ್ಮಿ ಸಂಬಳಕ್ಕೂ ಒಪ್ಪಿಕೊಂಡ ಅವನು."

"ಅವನ ಹೆಸರೇನು?"

"ವಿನ್ಸೆಂಟ್ ಸ್ಪಾಲ್ಡಿಂಗ್, ಅಂತಹ ಯುವಕನೇನಲ್ಲ. ಅವನ ವಯಸ್ಸನ್ನು ಅಳೆಯುವುದು ಸ್ವಲ್ಪ ಕಷ್ಟವೇ! ಬಹಳ ಚುರುಕಿನ ಮನುಷ್ಯ. ಆತ ಹೊರಗೆ ಬೇರೆಲ್ಲಾದರೂ ಕೆಲಸಕ್ಕೆ ಹೋದರೂ ಈಗ ಸಿಗುತ್ತಿರುವ ಸಂಬಳದ ಎರಡರಷ್ಟನ್ನು ಸುಲಭವಾಗಿ ದುಡಿಯಬಲ್ಲ. ಆದರೆ ಅವನ ತಲೆಗೆ ನಾನೇಕೆ ಇವನ್ನೆಲ್ಲಾ ತುಂಬಲಿ? ಈಗ ಸಿಗುತ್ತಿರುವದರಲ್ಲೇ ಅವನು ತೃಪ್ತಿಯಿಂದಿದ್ದಾನೆ. ನನಗೂ ಕಡಿಮೆ ಖರ್ಚಿನಲ್ಲಿ ಒಬ್ಬ ಒಳ್ಳೆ ಕೆಲಸಗಾರ."

"ಹೌದು ಹೌದು, ನಿಮಗೆ ಸಿಕ್ಕಿರುವಂತಹ ಕೆಲಸಗಾರರು ಈಗಿನ ಕಾಲದಲ್ಲಿ ಎಲ್ಲಿ ಸಿಗುತ್ತಾರೆ ಬಹುಶಃ ಅವನು ನೀವು ಹೇಳುವಷ್ಟು ಚುರುಕಿನವನಲ್ಲವೆಂದು ನನ್ನ ಭಾವನೆ"

"ಇಲ್ಲ, ಅವನಲ್ಲೂ ಒಂದಷ್ಟು ದುರ್ಗುಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಅವನ ಫ಼ೊಟೋಗ್ರಫ಼ಿಯ ಹುಚ್ಚು. ನೋಡಿ, ಮಿದುಳು ಚುರುಕು ಮಾಡಿಕೊಳ್ಳುವ ಕಾಲದಲ್ಲಿ ಕ್ಯಾಮೆರಾ ಹಿಡಿದು ತಿರುಗುವುದು ಸಹಿಸಲು ಸಾಧ್ಯವೇ, ಅದರಲ್ಲೂ, ಫ಼ೊಟೋ ತೆಗೆದು ಬಂದನೆಂದರೆ, ನಮ್ಮ ನೆಲಮಾಳಿಗೆಯಲ್ಲಿ ಅವನೇ ಮಾಡಿಕೊಂಡಿರುವ ಡಾರ್ಕ್‍ರೂಮಿನೊಳಕ್ಕೆ ಪ್ರಿಂಟ್ ಡೆವಲಪ್ ಮಾಡಲು ನುಗ್ಗಿಬಿಡುತ್ತಾನೆ. ಇದನ್ನು ಬಿಟ್ಟರೆ ಮತ್ತೆಲ್ಲಾ ಒಳ್ಳೆಯದೇ"

"ಇನ್ನೂ ಅವನು ನಿಮ್ಮ ಬಳಿ ಕೆಲಸ ಮಾಡುತ್ತಿದ್ದಾನೆಯೇ?"

"ಹೌದು, ಅವನು ಮತ್ತೊಬ್ಬಳು ಕೆಲಸದ ಹುಡುಗಿ. ಮನೆಗೆಲಸ ತೂಗಿಸಿಕೊಂಡು ಹೋಗುತ್ತಾಳೆ. ಅವಳಿಗಿನ್ನೂ ಹದಿನಾಲ್ಕು. ಆದರೂ ಅಚ್ಚುಕಟ್ಟಾಗಿ ಅಡುಗೆ ನಿಭಾಯಿಸುತ್ತಾಳೆ. ನಾನೋ ವಿದುರ, ಹಾಗಾಗಿ ಮನೆಯಲ್ಲಿರುವುದು ನಾವು ಮೂವರೇ, ಬೇರೇನಕ್ಕೂ ಇಲ್ಲದಿದ್ದರೂ, ತಿನ್ನುಣ್ಣಲು ಕೊರತೆಯಿಲ್ಲ. ನನಗೆ ಈ ಜಾಹೀರಾತು ತೋರಿಸಿದೂ ಸ್ಪಾಲ್ಡಿಂಗೇ.. ಇವತ್ತಿಗೆ ಸರಿಯಾಗಿ ಎಂಟು ವಾರಗಳ ಹಿಂದೆ, ಈ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓಡಿ ಬಂದು ನನಗೆ ತೋರಿಸಿದ."

"'ಧಣೀ, ನನಗೂ ಕೆಂಪು ಕೂದಲಿದ್ದಿದ್ದರೆ ಚೆನ್ನಾಗಿರುತ್ತಿತ್ತು.'

'ಯಾಕೆ?'

'ನೋಡಿ, ಕೆಂಗೂದಲ ಮನುಷ್ಯರಿಗೆ ಮತ್ತೊಂದು ಕೆಲಸ. ಇದು ಸಿಕ್ಕಿದವರಿಗಂತೂ ನಿಜವಾಗಿಯೂ ಅದೃಷ್ಟ. ಈ ಪ್ರಪಂಚದಲ್ಲಿರುವ ಒಟ್ಟು ಕೆಂಪು ಕೂದಲ ಮನುಷ್ಯರಿಗಿಂತಲೂ ಹೆಚ್ಚೆನ ಕೆಲಸಗಳು ಖಾಲಿ ಇವೆ ಎಂದು ಕೇಳಿದ್ದೇನೆ. ಆದರೆ ನಿಜ ಸಂಗತಿ ಏನೆಂದರೆ ಆ ಸಂಘದ ಪದಾಧಿಕಾರಿಗಳು, ಸಂಘದ ದುಡ್ಡನ್ನು ಖರ್ಚು ಮಾಡುವ ದಾರಿ ತಿಳಿಯದೇ ಒದ್ದಾಡುತ್ತಿದ್ದಾರೆ. ಆದರೇನು ಮಾಡುವುದು? ಅದೆಲ್ಲಾ ಬರೀ ಕೆಂಗೂದಲವರಿಗೆ ಮಾತ್ರ.. ನನಗೀಗ ಕೆಂಗೂದಲು ಬರುವುದಿಲ್ಲವಲ್ಲಾ..? ಏನಾದರೂ ನನ್ನ ಕೂದಲಿನ ಬಣ್ಣ ಬದಲಾದರೆ ಅದರ ಕತೆಯೇ ಬೇರೆ! '

'ಕೆಂಗೂದಲ ತಂಡ..!!! ಹಾಗೆಂದರೇನು?' ಎಂದು ನಾನು ಅವನನ್ನು ಕೇಳಿದೆ. ಏಕೆಂದರೆ ಹೋಮ್ಸ್ ನೀವು ನಂಬಿದರೆ ನಂಬಿ, ಬಿಡಿ! ಹಲವಾರು ದಿನಗಳ ಕಾಲ ನಾನು ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ. ನನ್ನ ವ್ಯವಹಾರ ನಾನು ಕೂತಿದ್ದ ಜಾಗದಲ್ಲಿಯೇ ನಡೆಯುತ್ತದೆ. ಹಾಗಾಗಿ ಹೊರಪ್ರಪಂಚದ ಆಗುಹೋಗುಗಳ ಬಗ್ಗೆ ನನಗಷ್ಟಾಗರಿವಿರುವುದಿಲ್ಲ.

'ಹಾಗಿದ್ದರೆ ಕೆಂಗೂದಲ ತಂಡದ ಬಗ್ಗೆ ನೀವು ಕೇಳಿಯೇ ಇಲ್ಲವೇ?' ಇಷ್ಟಗಲ ಕಣ್ಣು ಬಿಟ್ಟುಕೊಂಡು ಅವನು ನನ್ನನ್ನು ಕೇಳಿದ.

'ಇಲ್ಲ'

'ಅಯ್ಯೋ..! ನಿಜ ಹೇಳಬೇಕೆಂದರೆ, ನೀವು ಅಲ್ಲಿ ಖಾಲಿ ಇರುವ ಕೆಲಸಕ್ಕೆ ಅರ್ಹರಾಗಿದ್ದೀರಿ'

'ಎಷ್ಟು ಸಂಬಳ ಕೊಡಬಹುದು?'

'ಬಹುಶಃ ವರ್ಷಕ್ಕೆ ಒಂದಿನ್ನೂರು ಪೌಂಡುಗಳಿರಬಹುದು. ಆದರೆ ಅಲ್ಲಿ ತುಂಬಾ ಸುಲಭದ ಕೆಲಸ ಇರುತ್ತದೆ. ಜೊತೆಗೆ ನಿಮ್ಮ ಬೇರೆ ಕೆಲಸಗಳಿದ್ದರೆ ಅದಕ್ಕೆ ತೊಂದರೆ ಆಗುವುದಿಲ್ಲ'

'ಇದನ್ನು ಕೇಳಿ ನನಗೊಂದಿಷ್ಟು ಹುರುಪು ಬಂತು. ನೋಡಿ ಹೋಮ್ಸ್, ನನ್ನ ವ್ಯವಹಾರ ಅಷ್ಟೇನೂ ಚೆನ್ನಾಗಿ ನಡೆಯುತ್ತಿಲ್ಲ, ಹಾಗಿರುವಾಗ ವರ್ಷಕ್ಕೆ ಇನ್ನೂರು ಪೌಂಡುಗಳ ಸಂಬಳದ ಕೆಲಸ ಸಿಕ್ಕರೆ ಯಾರು ಬೇಡಾಂತಾರೆ? 'ಸರಿ ಹಾಗಿದ್ದರೆ, ಅದರ ಬಗ್ಗೆ ಇನ್ನೂ ಸ್ವಲ್ಪ ವಿವರವಾಗಿ ಹೇಳು..' ಎಂದು ಅವನನ್ನು ಕೇಳಿದೆ.

'ನೋಡಿ ಕೆಂಗೂದಲ ತಂಡದಲ್ಲೊಂದು ಕೆಲಸ ಖಾಲಿ ಇದೆ. ಅದಕ್ಕೆ ಬೇಕಾದ ಅಗತ್ಯತೆ ಎಂದರೆ ಇಪ್ಪತ್ತೊಂದು ತುಂಬಿರಬೇಕು, ಮತ್ತು ಕೆಂಗೂದಲಿನ ಮನುಷ್ಯನಾಗಿರಬೇಕು. ಈ ತಂಡವನ್ನು ಕಟ್ಟಿದವನು ಎಜ಼ೆಕಿನ್ ಹಾಪ್ಕಿನ್ ಎಂಬೊಬ್ಬ ಶ್ರೀಮಂತ ಕೆಂಗೂದಲ ಮನುಷ್ಯ. ಅಮೆರಿಕಾದಲ್ಲಿ ಸಾಕಷ್ಟು ಸಂಪಾದಿಸಿ ಶ್ರೀಮಂತನಾದವನು. ಅವನ ಮರಣಾನಂತರ ಆಸ್ತಿಯನ್ನೆಲ್ಲಾ ಟ್ರಸ್ಟ್‍ವೊಂದಕ್ಕೆ ಬರೆದು ಕೆಂಗೂದಲಿರುವವರ ಒಳಿತಿಗಾಗಿ ಅದನ್ನು ಉಪಯೋಗಿಸಬೇಕೆಂದು ವಿಲ್ ಮಾಡಿಟ್ಟಿದ್ದಾನಂತೆ. ಅದರಿಂದಾಗಿ ಕೆಂಗೂದಲಿರುವವರಿಗೆ ತುಂಬಾ ಕಮ್ಮಿ ಕೆಲಸ ಹಾಗೂ ಕೈ ತುಂಬಾ ಸಂಬಳ.'

'ಆದರೆ ಈ ಪ್ರಪಂಚದಲ್ಲಿ ಲಕ್ಷಾಂತರ ಜನ ಕೆಂಗೂದಲಿನವರಿರಬಹುದಲ್ಲ. ಅವರೆಲ್ಲಾ ಅರ್ಜಿ ಹಾಕಿರುತ್ತಾರಲ್ಲ..!!'

'ಇಲ್ಲ.. ನೋಡಿ, ಈ ಕೆಲಸ ಕೇವಲ ಲಂಡನಿಗರಿಗೇ ಮೀಸಲು ಅದೂ ಇಪ್ಪತ್ತೊಂದು ತುಂಬಿದವರಿಗೆ ಮಾತ್ರ.ಹಾಪ್ಕಿನ್ ಮೊದಲು ಲಂಡನ್‍ನಿಂದಲೇ ಅಮೆರಿಕೆಗೆ ಹೋದನಂತೆ. ಅದಕ್ಕೇ ತನ್ನ ಮೂಲವಾಸ ಸ್ಥಳ ಲಂಡನ್ನಿನಿಂದ ಈ ಕೆಲಸ ಶುರು ಮಾಡಬೇಕೆಂದು ಕೂಡಾ ಮರಣ ಪತ್ರದಲ್ಲಿ ಬರೆದಿದ್ದಾನಂತೆ. ಅಲ್ಲದೆ ನಿಮ್ಮ ಕೂದಲು ನಸುಗೆಂಪು, ಎಣ್ಣೆಗೆಂಪು ಬಣ್ಣದ್ದಾದರೆ ನಿಮಗಲ್ಲಿ ಕೆಲಸವಿಲ್ಲ. ಅದು ಕಡುಗೆಂಪು ಬಣ್ಣದ ಕೂದಲೇ ಆಗಬೇಕು. ನಿಮಗೆ ಇಷ್ಟ ಇದ್ದರೆ ಸೋಮವಾರ ಸಂದರ್ಶನಕ್ಕೆ ಹಾಜರಾಗಿ, ಅದರಲ್ಲೇನೂ ನಷ್ಟವಿಲ್ಲವಲ್ಲ.'"

"ನೋಡಿ ಕೂದಲಿನ ಬಣ್ಣ ಒಂದೇ ಮುಖ್ಯ ವಿಷಯವಾದರೆ ನನ್ನ ಕೂದಲಿನ ಬಣ್ಣಕ್ಕೆ ಪಂಥವೊಡ್ಡುವ ಮಂದಿ ಕಡಿಮೆಯೇ, ಹಾಗಾಗಿ ನಾನು ಗೆಲ್ಲುವ ಸಾಧ್ಯತೆಗಳೂ ಹೆಚ್ಚು. ಅಲ್ಲದೇ ಆ ಸಂದರ್ಶನಕ್ಕೆ ಹಾಜರಾಗುವುದರಿಂದ ನಾನು ಕಳೆದುಕೊಳ್ಳುವುದೂ ಏನಿಲ್ಲ. ಮತ್ತೂ ನನ್ನ ಕೆಲಸಗಾರನಿಗೆ ಆ ತಂಡದ ಬಗ್ಗೆ ಅಷ್ಟೆಲ್ಲಾ ವಿವರಗಳು ಗೊತ್ತಿವೆ. ಇವನ್ನೆಲ್ಲಾ ಯೋಚಿಸಿ ನಾನು ಅಂಗಡಿಗೆ ಬಾಗಿಲು ಹಾಕಿ ನನ್ನೊಡನೆ ಬರುವಂತೆ ವಿನ್ಸೆಂಟನಿಗೆ ಆಅಞಪಿಸಿದೆ. ಅವನೂ ಖುಷಿಯಿಂದ ಬಾಗಿಲು ಹಾಕಿದ. ಜಾಹೀರಾತಿನಲ್ಲಿ ಕೊಟ್ಟ ವಿಳಾಸಕ್ಕೆ ನಾವಿಬ್ಬರೂ ಹೊರಟೆವು.

"ಅಲ್ಲಿ ನಾವು ಕಂಡಂತಹ ದೃಶ್ಯ ಮತ್ತೊಮ್ಮೆ ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ. ಅಲ್ಲಿ ನಮ್ಮ ದೇಶದ ಎಲ್ಲಾ ಕೆಂಗೂದಲ ಮನುಷ್ಯರೂ ಇದ್ದರೆಂದು ಕಾಣುತ್ತದೆ. ಅದೂ ಆ ಕೆಂಗೂದಲಿನಲ್ಲಿ ಎಂತೆಂತಹ ಬಣ್ಣ, ಎಂತೆಂತಹ ವಿನ್ಯಾಸ..? ತೆಳುಗುಲಾಬಿ, ನಸುಕಿತ್ತಳೆ, ಹಳದಿ ಮಿಶ್ರಿತ ಕೆಂಪು, ಹೀಗೆ ತರಹೇವಾರಿ ಬಣ್ಣದ ಕೂದಲಿನ ಜನರಿದ್ದರು. ಆದರೂ ನನ್ನಂತೆ ಕಡುಕೆಂಪಿನ ಕೂದಲಿನ ಜನ ಅಲ್ಲಿ ಅಷ್ಟಾಗಿ ಕಾಣಲಿಲ್ಲ. ಆದರೆ ಅಲ್ಲಿನ ಜನಸಂತೆ ನೋಡಿ ನನಗೆ ಗಾಬರಿಯಾಯಿತು. ಪೋಪ್-ಕಛೇರಿಯ ತುಂಬಾ ಜನ, ಅದೊಂದು ತುಂಬಿ ನಿಂತ ಕಿತ್ತಳೆ ತೋಟದ ಹಾಗೆ ಫಳಫಳಿಸುತ್ತಿತ್ತು. ನಾನು ಹಿಂತಿರುಗಿಬಿಡೋಣ ಎಂದುಕೊಂಡೆ. ಆದರೆ ವಿನ್ಸೆಂಟ್ ಅದು ಹೇಗೆ ದಾರಿ ಮಾಡಿಕೊಟ್ಟನೋ, ಯಾರನ್ನು ತಳ್ಳಿ, ಯಾರಿಗೆ ಗುದ್ದಿ ಏನು ಮಾಡಿದನೋ ಗೊತ್ತಿಲ್ಲ, ನಾವು ಹೇಗೆ ಹೋದೆವೋ ಅದೂ ಗೊತ್ತಿಲ್ಲ.. ಒಟ್ಟಿನಲ್ಲಿ ಸ್ವಲ್ಪ ಸಮಯದಲ್ಲೇ ಕೆಂಗೂದಲ ತಂಡದ ಕಚೇರಿಗೆ ಕರೆದೊಯ್ಯುವ ಮೆಟ್ಟಿಲ ಸಾಲ ಬಳಿ ತಲುಪಿದ್ದೆವು. ಅಲ್ಲಿಯೂ ಒಂದು ಸಾಲು ಮೇಲೇರುತ್ತಿದ್ದು, ಆ ಜನರ ಮುಖದಲ್ಲಿ ಕುತೂಹಲ ತುಂಬಿದ್ದರೆ, ಇನ್ನೊಂದು ಸಾಲು ಕೆಳಗಿಳಿದು ಬರುತ್ತಿದ್ದು, ಅವರ ಮುಖದಲ್ಲಿ ದುಖಃ ಕಾಣುತ್ತಿತ್ತು. ಸ್ವಲ್ಪ ಸಮಯದಲ್ಲೇ ನಾವು ಆ ತಂಡದ ಕಛೇರಿಯ ಒಳ ಹೊಕ್ಕೆವು."

"ನಿಮ್ಮ ಈ ಅನುಭವ ತುಂಬಾ ಮಜವಾಗಿದೆ. ಅಲ್ಲದೇ ಕುತೂಹಲಕಾರಿಯಾಗಿಯೂ ಇದೆ. ಮುಂದೇನಾಯಿತು..?" ಎಂದು ಹೋಮ್ಸ್ ಕೇಳಿದನು.

ನಸ್ಯವನ್ನು ಮೂಗಿಗೇರಿಸುತ್ತಾ, ಒಂದೆರಡು ಬಾರಿ ಸೀನಿ, ನಮ್ಮ ಗಿರಾಕಿ ತನ್ನ ಕತೆಯನ್ನು ಮುಂದುವರೆಸಿದನು.

"ಆ ಕಛೇರಿಯಲ್ಲಿ ಒಂದೆರಡು ಮರದ ಕುರ್ಚಿಗಳಲ್ಲದೆ, ಮೇಜೊಂದನ್ನು ಬಿಟ್ಟು ಬೇರೇನೂ ಇರಲಿಲ್ಲ. ಅಲ್ಲೊಬ್ಬ ಸಣಕಲ ಮನುಷ್ಯ ಕುಳಿತಿದ್ದ. ಅವನ ತಲೆಗೂದಲು ನನ್ನದಕ್ಕಿಂತಾ ಕೆಂಪಾಗಿದ್ದಿತು. ಅವನು ಬಂದ ಅಭ್ಯರ್ಥಿಗಳಲ್ಲಿ ಏನಾದರೊಂದು ಪ್ರಶ್ನೆ ಕೇಳಿ ಏನಾದರೂ ಕಾರಣ ನೀಡಿ ತಿರಸ್ಕರಿಸಿ ಕಳಿಸುತ್ತಿದ್ದನು. ಅಲ್ಲಿ ಕೆಲಸ ಸಿಗುವುದು ಅಷ್ಟು ಸುಲಭದ ಮಾತಾಗಿರುವಂತೆ ತೋರಲಿಲ್ಲ. ಆದರೆ ನನ್ನ ಸರದಿ ಬಂದಾಗ, ಆ ಸಣಕಲ ಮನುಷ್ಯನ ವಿಧಾನವೇ ಬೇರೆಯಾದಂತೆ ಕಂಡಿತು. ನಾವು ಒಳಹೊಕ್ಕಾಗ ಅವನು ಬಾಗಿಲು ಮುಚ್ಚಿದನು. ಇದರಿಂದಾಗಿ ನಾವು ಏಕಾಂತವಾಗಿ ಮಾತನಾಡುವ ಅವಕಾಶ ಸಿಕ್ಕಿತು."

"ವಿನ್ಸೆಂಟ್, 'ಇವರು ಜಾಬೆಜ಼್ ವಿಲ್ಸನ್, ನಿಮ್ಮ ತಂಡದಲ್ಲಿ ಖಾಲಿ ಇರುವ ಕೆಲಸ ಪಡೆಯಲು ಆಸಕ್ತರಾಗಿದ್ದಾರೆ' ಎಂದು ಆ ವ್ಯಕ್ತಿಗೆ ನನ್ನ ಬಗ್ಗೆ ಹೇಳಿದನು. ಅದಕ್ಕೆ ಆ ಸಣಕಲ 'ನೋಡಲು ಇವರು ಅತಿ ಸೂಕ್ತ ವ್ಯಕ್ತಿಯಂತೆ ಕಾಣುತ್ತಾರೆ' ಎನ್ನುತ್ತಾ ನನ್ನ ಬಳಿ ಬಂದು ತಲೆಬಾಗಿಸಿ ನನ್ನ ಕೂದಲನ್ನೇ ದಿಟ್ಟಿಸಿ ನೋಡತೊಡಗಿದನು. ಅದೂ ನನಗೆ ಒಂದು ರೀತಿಯ ತಳಮಳ ಶುರುವಾಗುವವರೆಗೆ. ಆ ನಂತರ 'ನಾವು ಬೇಕೆಂದುಕೊಂಡಿದ್ದ ಎಲ್ಲಾ ಗುಣಗಳೂ ಇವರಲ್ಲಿ ಇರುವಂತೆ ತೋರುತ್ತದೆ. ಇದಕ್ಕಿಂತ ಉತ್ತಮ ಬಣ್ಣದ ಕೂದಲನ್ನು ನಾನು ಎಂದೂ ನೋಡಿಲ್ಲ. ಆದರೂ ನಾನು ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ತೆಗೆದುಕೊಳ್ಳಲೇಬೇಕಲ್ಲ?' ಎಂದು ನನ್ನ ಬಳಿಗೆ ಬಂದು, ತನ್ನ ಎರಡೂ ಕೈಗಳಿಂದ, ನನ್ನ ಕೂದಲನ್ನು ಹಿಡಿದು ಬಲವಾಗಿ ಎಳೆದನು. ಅದೂ ನಾನು ನೋವು ತಡೆಯಲಾರದೆ ಕೂಗಿಕೊಳ್ಳುವವರೆಗೆ. ಆ ನಂತರ ನನ್ನ ಕಣ್ಣನ್ನು ನೋಡುತ್ತಾ 'ಕಣ್ಣೀರು.... ನಿಜವಾದ ಕಣ್ಣೀರು..!! ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ, ಹಿಂದೆಯೂ ಎರಡು ಬಾರಿ ವಿಗ್ ಧರಿಸಿ, ಒಂದು ಬಾರಿ ಬಣ್ಣ ಹಚ್ಚಿಕೊಂಡು ನಮಗೆ ಮೋಸ ಮಾಡಿದ್ದಾರೆ. ಆದ್ದರಿಂದಲೇ ಎಚ್ಚರಿಕೆ ತೆಗೆದುಕೊಂದು ಈ ಪರೀಕ್ಷೆಯನ್ನು ನಡೆಸಬೇಕಾಯಿತು' ಎಂದನು. ನಂತರ ಕಿಟಕಿಯಿಂದ ತಲೆ ಹೊರಗೆ ಹಾಕಿ ' ಇಲ್ಲಿಗೆ ನಮ್ಮ ಸಂದರ್ಶನ ಪೂರ್ತಿಯಾಯಿತು. ಕಾಲಿಯಿದ್ದ ಕೆಲಸ ಈಗ ಭರ್ತಿಯಾಗಿದೆ. ಉಳಿದವರು ಹಿಂತಿರುಗಬಹುದು' ಎಂದನು. ಕೆಳಗೆ ಗುಂಪಿನಲ್ಲಿ ಅಸಮಧಾನದ ಹಾಗೂ ನಿರಾಶೆಯ ಗೌಜು ಎದ್ದು, ತಣ್ಣಗಾಯಿತು. ಅಲ್ಲಿದ್ದ ಆ ಕೆಂಗೂದಲ ಜನಸಾಗರ ಅಷ್ಟದಿಕ್ಕುಗಳಲ್ಲೂ ಕರಗಿ ಹೋಯಿತು. ಅಲ್ಲಿ ಉಳಿದ ಕೆಂಗೂದಲಿನವರೆಂದರೆ ನಾನು ಮತ್ತು ನನ್ನ ಮ್ಯಾನೇಜರ್ ಇಬ್ಬರೇ..

'ನನ್ನ ಹೆಸರು ಡಂಕನ್ ರಾಸ್, ನಮ್ಮ ಸಂಸ್ಥಾಪಕರು ಸ್ಥಾಪಿಸಿದ ಈ ತಂಡದ ಸಂಘಟನೆ ಮತ್ತು ಬಲವರ್ಧನೆಗಾಗಿ ಹಾಗೂ ಕೆಂಗೂದಲಿನವರ ಒಳಿತಿಗಾಗಿ ನಾನು ದುಡಿಯುತ್ತಿದ್ದೇನೆ. ಸಂಸ್ಥಾಪಕರ ನಿಧಿಯಿಂದಲೇ ಗೌರವ ಧನ ಸಿಗುವ ಕೆಲವರಲ್ಲಿ ನಾನೂ ಒಬ್ಬ. ಅಂದ ಹಾಗೆ ನಿಮಗೆ ಮದುವೆಯಾಗಿದೆಯೇ ನಿಮ್ಮ ಕುಟುಂಬ ಎಲ್ಲಿದೆ?'

'ನನಗೆ ಕುಟುಂಬ ಇಲ್ಲ" ಎಂದು ಉತ್ತರಿಸಿದೆ. ತಕ್ಷಣವೇ ಅವನ ಮುಖ ಕಳಾಹೀನವಾಯಿತು. 'ಹ.... ಈ ನಿಧಿ ಪ್ರಪಂಚದಲ್ಲಿನ ಕೆಂಪು ಕೂದಲಿನ ಮನುಜರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಅವರ ಜೀವನ ಮಟ್ಟವನ್ನಭಿವೃದ್ದಿಪಡಿಸಲೆಂದೇ ನಿಗದಿಯಾಗಿದೆ. ಬ್ರಹ್ಮಚಾರಿಗಳಿಗೆ ಈ ಸೌಲಭ್ಯ ಕೊಡುವುದರಿಂದ ಸಿಗುವ ಪ್ರಯೋಜನವಾದರೂ ಏನು?' ಎಂದ. ಇದನ್ನು ಕೇಳಿ ನನಗಿನ್ನು ಈ ಕೆಲಸ ಸಿಗುವುದಿಲ್ಲವೆಂದೆನಿಸಿತು. ಆದರೂ ಕೆಲವು ಕ್ಷಣಗಳ ಯೋಚನೆಯ ನಂತರ ಆತ ನನ್ನೆಡೆಗೆ ತಿರುಗಿ, ' ಇರಲಿ, ನಿನ್ನಂಥಾ ಕೆಂಪುಕೂದಲಿನವರಿಗಾಗಿ ಈ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಅಷ್ಟಕ್ಕೂ ನಿನಗೇನೂ ಹೆಚ್ಚಿನ ವಯಸ್ಸಾಗಿಲ್ಲವಲ್ಲ.. ಬೇಕೆಂದರೆ ನೀನು ಮತ್ತೆ ಮದುವೆ ಮಾಡಿಕೊಳ್ಳಬಹುದು. ಸರಿ ಈಗ ನೀನು ಎಂದಿನಿಂದ ಕೆಲಸಕ್ಕೆ ಹಾಜರಾಗುತ್ತೀಯ?' ಎಂದು ಕೇಳಿದ."

" 'ಹಾಗೆ ತಕ್ಷಣ ಕೇಳಿದರೆ ನಾನೇನೂ ಹೇಳಲಾರೆ, ನನಗೀಗಾಗಲೇ ಸ್ವಂತದ ವ್ಯವಹಾರವೊಂದಿದೆ'

'ಅದರ ಬಗ್ಗೆ ಯೋಚನೆ ಬಿಡಿ ಧಣೆಗಳೇ, ನಿಮ್ಮ ಅಂಗಡಿಯನ್ನು ನಾನು ಸರಿದೂಗಿಸಿಕೊಂಡು ಹೋಗಬಲ್ಲೆ' ಎಂದ ವಿನ್ಸೆಂಟ್.

'ಕೆಲಸದ ಸಮಯ ಹಾಗೂ ನಿಯಮಗಳೇನು?'

'ಬೆಳಿಗ್ಗೆ ಹತ್ತರಿಂದ ಎರಡು'

ಅಷ್ಟಕ್ಕೂ ನನ್ನ ಲೇವಾದೇವಿ ವ್ಯವಹಾರ ನಡೆಯುತ್ತಿದ್ದುದು ಸಂಜೆಯ ವೇಳೆಯಲ್ಲಿ. ಅದರಲ್ಲಿಯೂ ಗುರುವಾರ ಮತ್ತು ಶುಕ್ರವಾರದ ಸಂಜೆಗಳಂದು. ಆದ್ದರಿಂದ ಬೆಳಗಿನ ಸಮಯದಲ್ಲಿ ನಾನು ಬೇರೆ ಕೆಲಸಕ್ಕೆ ಹೋಗುವುದರಿಂದ ನನಗೆ ತೊಂದರೆಯೇನೂ ಇರಲಿಲ್ಲ. ಜೊತೆಗೆ ನನ್ನ ಕೆಲಸಗಾರನೂ ಚುರುಕಿನವನಲ್ಲವೇ? ಇದನ್ನೆಲ್ಲಾ ಯೋಚಿಸಿ

'ನನಗೆ ಇದು ಒಪ್ಪಿಗೆಯೇ.. ಆದರೆ ಸಂಬಳ?' ಎಂದೆ.

'ವಾರಕ್ಕೆ ನಾಲ್ಕು ಪೌಂಡುಗಳು.'

'ಕೆಲಸ?'

'ತುಂಬಾ ಸರಳವಾದುದು.'

'ಸರಳವಾದುದೆಂದರೆ?'

'ನೀನು ಸದಾ ಕಛೇರಿಯಲ್ಲಿಯೇ ಇರಬೇಕು. ಕಡೆಯ ಪಕ್ಷ ಇದೇ ಕಟ್ಟಡದಲ್ಲಿರಬೇಕು. ಅಕಸ್ಮಾತ್ ನೀನು ಬೇರೆಲ್ಲಾದರೂ ಹೋದರೆ, ನಮ್ಮ ಒಪ್ಪಂದ ಮುರಿಯುತ್ತದೆ. ಮತ್ತು ನೀನು ತಕ್ಷಣ ಕೆಲಸ ಕಳೆದುಕೊಳ್ಳುತ್ತೀಯ.'

'ಅಂದರೆ ದಿನಕ್ಕೆ ನಾಲ್ಕು ಗಂಟೆಗಳ ಸಮಯ ನಾನಿಲ್ಲಿಯೇ ಇರಬೇಕು.'

'ಹೌದು, ಯಾವುದೇ ಕಾರಣವಿರಲಿ, ಅನಾರೋಗ್ಯ, ವ್ಯವಹಾರ ಅಥವಾ ಕೌಟುಂಬಿಕ, ನೀನು ಪ್ರತಿದಿನ ಬೆಳಿಗ್ಗೆ, ಹತ್ತರಿಂದ ಮಧ್ಯಾಹ್ನ ಎರಡರವರೆಗೆ ಈ ಕಛೇರಿಯಲ್ಲಿರಬೇಕು.'

'ಮತ್ತು ಕೆಲಸ..?'

'ಈ ಬ್ರಿಟಾನಿಕಾ ವಿಶ್ವಕೋಶದ ನಕಲು ಮಾಡುವುದು. ಈ ಕೆಲಸಕ್ಕೆ ಬೇಕಾದ ಇಂಕು, ಪೇಪರ್, ಬ್ಲಾಟಿಂಗ್ ಪೇಪರ್ ಇವನ್ನೆಲ್ಲಾ ನೀನೇ ಹೊಂದಿಸಿಕೊಳ್ಳಬೇಕು. ನಾವು ಈ ವಿಶ್ವಕೋಶದ ಪ್ರತಿ ಹಾಗೂ ಈ ಮೇಜು ಕುರ್ಚಿಗಳನ್ನು ನಿನಗೆ ನೀಡುತ್ತೇವೆ. ನಾಳೆಯಿಂದಲೇ ನೀನು ಕೆಲಸಕ್ಕೆ ಬರುತ್ತೀಯಾ..?'

'ಖಂಡಿತಾ...' ಎಂದೆ ನಾನು"

" ' ಸರಿ ಹಾಗಾದರೆ ಮಿ. ಜಾಬೆಜ಼್ ವಿಲ್ಸನ್, ನಮ್ಮ ಈ ತಂಡದಲ್ಲಿ ಮುಂದಿನ ಮಹತ್ವದ ಜವಾಬ್ದಾರಿಯ ಕೆಲಸ ನಿಮಗೆ ವಹಿಸಲಿದ್ದೇವೆ. ಅದಕ್ಕಾಗಿ ನೀವು ಈಗ ವಹಿಸಿರುವ ಕೆಲಸವನ್ನು ನಿರ್ವಹಿಸುವ ರೀತಿಯನ್ನು ನಾವು ಗಮನಿಸುತ್ತೇವೆ. ನಮ್ಮ ತಂಡದ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಮತ್ತೊಮ್ಮೆ ನಿಮಗೆ ಶುಭಾಶಯಗಳು.' ಎಂದು ನಮ್ಮನ್ನು ಕಳಿಸಿಕೊಟ್ಟ. ನಾನು ವಿನ್ಸೆಂಟ್‍ನೊಂದಿಗೆ ಮನೆಗೆ ಹಿಂದಿರುಗಿದೆ. ದಾರಿಯಲ್ಲಿ ನನಗೆ ಏನು ಮಾತಾಡಬೇಕೋ ತಿಳಿಯಲಿಲ್ಲ. ಹಾಗಾಗಿ ಮೌನದಿಂದಿದ್ದೆ. ಮನದಾಳದಲ್ಲಿ ನನಗೊದಗಿ ಬಂದ ಅದೃಷ್ಟ ಕಂಡು ನನಗೆ ಸಂತಸವೇ ಆಗಿತ್ತು.

ಆದರೂ ಮನೆಗೆ ಹಿಂತಿರುಗಿದ ನಾನು ಆ ಕೆಲಸದ ಬಗ್ಗೆ ಸಾಕಷ್ಟು ಯೋಚನೆ ಮಾಡಿದೆ. ಯಾವನೋ ಒಬ್ಬ ಸಾಹುಕಾರ ತನ್ನ ಆಸ್ತಿಯನ್ನೆಲ್ಲಾ ಕೆಂಪು ಕೂದಲಿನವರ ಒಳಿತಿಗಾಗಿ ಏಕೆ ಬರೆಯಬೇಕು? ಕೇವಲ ಕೆಂಪು ಕೂದಲಿನ ಕಾರಣದಿಂದ ನಾನು ಇಷ್ಟು ಸುಲಭವಾಗಿ ಹಣ ಸಂಪಾದಿಸುವುದು ಒಳಿತಿಗೋ ಕೆಡುಕಿಗೋ..? ಯಾರಾದರೂ ನನ್ನ ಬಗ್ಗೆ ತಮಾಶೆ ಮಾಡಲು ಹೀಗೆ ಮಾಡಿರಬಹುದಾ..? ಹೀಗೆ ನಾನಾ ಪ್ರಶ್ನೆಗಳು ನನ್ನ ತಲೆ ತುಂಬಿ ಹೋದವು. ಏಕೋ ಮಂಕು ಕವಿದಂತಾಯಿತು. ನನ್ನನ್ನು ಖುಷಿ ಪಡಿಸಲು ವಿನ್ಸೆಂಟ್ ಏನೇನೋ ಪ್ರಯತ್ನ ಮಾಡಿದರೂ ನನಗೆ ಹಿಡಿದ ಮಂಕು ಬಿಡಲಿಲ್ಲ. ಮರುದಿನ ಬೆಳಿಗ್ಗೆ ಎದ್ದಾಗ ನಾನು ಮತ್ತೊಮ್ಮೆ ಉತ್ಸಾಹದಲ್ಲಿದ್ದೆ. ಅಲ್ಲಿ ಹೋಗಿ ನೋಡಿ ಬಂದರೆ ಕಳೆದುಕೊಳ್ಳುವುದು ಏನನ್ನು? ಎಂದು ಯೋಚಿಸಿ, ಒಂದು ಪೆನ್, ಶಾಯಿ, ಏಳು ಹಾಳೆಗಳು ಮತ್ತು ಒಂದಷ್ಟು ಹೀರುಕಾಗದ ಕೊಂಡು ಪೋಪ್-ಕಛೇರಿ ಕಟ್ಟಡಕ್ಕೆ ಹೋದೆ. ಅಲ್ಲಿ ನನಗೆ ಆಶ್ಚರ್ಯವಾಗುವಂತೆ ಮಿ.ಡಂಕನ್ ರಾಸ್ ನನಗಾಗಿ ಕಾಯುತ್ತಿದ್ದನು. ಬರೆಯಲು ಮೇಜು ಸಿದ್ದವಾಗಿತ್ತು. ನನಗೆ ಬ್ರಿಟಿಷ್ ವಿಶ್ವಕೋಶದ ಪ್ರತಿ ನೀಡಿ 'ಎ' ಅಕ್ಷರದಿಂದ ನಕಲು ಮಾಡಲು ಪ್ರಾರಂಭಿಸುವಂತೆ ಸೂಚನೆ ನೀಡಿದನು. ನಾನು ನನ್ನ ಕೆಲಸಕ್ಕಿಳಿದೆ. ಮಿಸ್ಟರ್ ಡಂಕನ್ ರಾಸ್ ಒಂದೆರಡು ಬಾರಿ ರೂಮಿನಿಂದ ಹೊರಹೋಗಿ ಬಂದರೂ ನಾನು ಅಲ್ಲಿಂದ ಅಲ್ಲಾಡಲಿಲ್ಲ. ಸರಿಯಾಗಿ ಎರಡು ಗಂಟೆಗೆ ನನ್ನ ಕೆಲಸದ ವೇಳೆ ಮುಗಿದಿದ್ದನ್ನು ತಿಳಿಸಿ ನನ್ನನ್ನು ಮನೆಗೆ ಕಳುಹಿಸಿಕೊಟ್ಟನು. ಮರುದಿನವೂ ಇದೇ ಕತೆ, ಅದರ ಮರುದಿನ ಕೂಡಾ, ಹೀಗೇ ಒಂದು ವಾರ ಕಳೆಯಿತು. ಈ ವೇಳೆಗೆ ಡಂಕನ್ ಬೆಳಿಗ್ಗೆ ನಾನು ರೂಮಿನ ಒಳಹೊಕ್ಕ ನಂತರ ಹೊರಹೋದರೆ ಯಾವಾಗಲೋ ಒಮ್ಮೆ ಬಂದು ನೋಡಿ ಹೋಗುತ್ತಿದ್ದನು. ನಾನಂತೂ ಆ ರೂಮಿನಿಂದ ಹೊರಗೆ ಕಾಲಿಡುತ್ತಲೂ ಇರಲಿಲ್ಲ. ಬರಬಹುದಾದ ಹಣವನ್ನು ಕಳೆದುಕೊಳ್ಳಲು ನಾನು ತಯಾರಿರಲಿಲ್ಲ. ಶನಿವಾರ ಮಿ.ಡಂಕನ್ ರಾಸ್ ನನ್ನ ಕೈಯಲ್ಲಿ ನಾಲ್ಕು ಚಿನ್ನದ ನಾಣ್ಯಗಳನ್ನಿತ್ತನು. ಇದೇ ಪ್ರತಿವಾರ ಪುನರಾವರ್ತನೆಯಾಯಿತು. 'ಎ' ಅಕ್ಷರದ ಬಹುಪಾಲನ್ನು ನಾನು ಈ ವೇಳೆಗೆ ಮುಗಿಸಿದ್ದೆ. ಇನ್ನು ಕೆಲವೇ ದಿನಗಳಲ್ಲಿ 'ಬಿ' ಅಕ್ಷರವನ್ನು ಪ್ರಾರಂಭಿಸಬಹುದೆಂದು ನಾನು ಹೆಮ್ಮೆ ಪಡುತ್ತಿದ್ದೆ. ಇದರಿಂದಾಗಿ ನನಗೂ ಎಷ್ಟೋ ಹೊಸ ವಿಷಯಗಳು ತಿಳಿದುಬಂದವು. ನನಗೆ ಹಾಳೆಗಳ ಖರ್ಚು ಬಂದರೂ ಅದೇನೂ ಹೆಚ್ಚಿನದಾಗಿರಲಿಲ್ಲ, ಬಿಡಿ, ಆ ಕೊಠಡಿಯ ಎಲ್ಲಾ ಕಪಾಟುಗಳೂ ನಾನು ನಕಲು ಮಾಡಿಟ್ಟಿದ್ದ ಹಾಳೆಗಳಿಂದ ತುಂಬಿ ಹೋಗಿದ್ದವು. ಆದರೆ ಈ ದಿನ ಬೆಳಿಗ್ಗೆ ಇವಕ್ಕೆಲ್ಲ ಒಂದು ಅಂತ್ಯ ಬಂದಿತು."

"ಅಂತ್ಯ..!! ಹೇಗೆ..??"

"ಹೌದು, ಎಂದಿನಂತೆ ಇಂದು ಬೆಳಿಗ್ಗೆ ಸರಿಯಾಗಿ ಹತ್ತು ಗಂಟೆಗೆ ನಾನು ನನ್ನ ಕಛೇರಿಗೆ ಹೋದೆ. ಆದರೆ ಕಛೇರಿಯ ಬೀಗ ತೆಗೆದಿರಲಿಲ್ಲ. ಬಾಗಿಲ ಮೇಲೆ ಅಂಟಿಸಿದ್ದ ಫಲಕ ನನ್ನನ್ನು ಅಣಕಿಸುತ್ತಿತ್ತು."

"ಏನಿತ್ತು ಅದರಲ್ಲಿ?"

"ಅದನ್ನು ನೀವು ನೋಡಲಿ ಎಂದೇ ತಂದಿದ್ದೇನೆ, ಇಲ್ಲಿ ನೋಡಿ" ಎನ್ನುತ್ತಾ ಒಂದು ರಟ್ಟಿನ ಫಲಕವನ್ನು ತೋರಿಸಿದನು. ಅದರಲ್ಲಿ 'ಕೆಂಗೂದಲ ತಂಡವನ್ನು ವಿಸರ್ಜಿಸಲಾಗಿದೆ. ಅಕ್ಟೋಬರ್ ೯, ೧೮೯೦' ಎಂದು ಬರೆಯಲಾಗಿತ್ತು. ಅದನ್ನು ನೋಡಿ ನನಗೂ, ಹೋಮ್ಸ್‍ಗೂ ನಗೆ ತಡೆಯಲಾಗಲಿಲ್ಲ. ಇಬ್ಬರೂ ನಕ್ಕೆವು.

"ಇದರಲ್ಲಿ ನಗುವುದೇನಿದೆ?" ಕೋಪದಿಂದ ನಮ್ಮ ಗಿರಾಕಿ ವಿಲ್ಸನ್ ಗೊಣಗುಟ್ಟುತ್ತಾ "ನೀವು ನನ್ನ ಕತೆ ಕೇಳಿ ನಗುವುದನ್ನು ಬಿಟ್ಟು ಬೇರೇನನ್ನೂ ಮಾಡದೇ ಹೋದರೆ, ನನಗೆ ಸಹಾಯ ಮಾಡಬಲ್ಲ ಯಾರನ್ನಾದರೂ ಹುಡುಕಿಕೊಂಡು ಹೋಗಬೇಕಾಗುತ್ತದೆ' ಎಂದನು.

"ಅರೇ, ನಿಮ್ಮ ಈ ಕೇಸು ನಾನು ಕೇಳಿದ ಎಲ್ಲಾ ಕೇಸುಗಳಿಗಿಂತಲೂ ವಿಚಿತ್ರವಾಗಿದೆ. ನಿಜಕ್ಕೂ ಅದು ತಮಾಶೆಯ ಹಾಗೇ ಇದೆ. ಆದರೆ ಇದರ ಮರ್ಮ ಬೇರೇನೋ ಇರಬಹುದು. ನಾನು ಇದನ್ನು ತೆಗೆದುಕೊಳ್ಳುತ್ತೇನೆ. ನೀವು ದಯಮಾಡಿ ಕುಳಿತುಕೊಂಡು ಮುಂದೆ ಏನು ಮಾಡಿದಿರಿ? ಎಂದು ತಿಳಿಸಬೇಕು" ಎಂದನು ಶೆರ್ಲಾಕ್.

"ನನಗೆ ಆ ಪ್ರಕಟಣೆ ನೋಡಿ ಆಘಾತವಾಯಿತು." ನಮ್ಮ ಗಿರಾಕಿ ತನ್ನ ಕತೆ ಮುಂದುವರೆಸಿದನು. "ನಾನು ಅಲ್ಲಿದ್ದ ಅಕ್ಕಪಕ್ಕದ ಕಛೇರಿಗಳಲ್ಲಿ ವಿಚಾರಿಸಿದೆ. ಯಾರಿಗೂ ಈ ತಂಡದ ಬಗ್ಗೆ ಏನೂ ತಿಳಿದಿರಲಿಲ್ಲ. ಕಡೆಗೆ ಆ ಕಟ್ಟಡದ ಮಾಲೀಕನನ್ನು ಕಂಡು ಮಾತನಾಡಿದೆ. ಕೆಂಗೂದಲ ತಂಡದ ಬಗ್ಗೆ ಆತನಿಗೆ ಏನೂ ಗೊತ್ತಿರಲಿಲ್ಲ.

'ಹಾಗಾದರೆ ಮಿಸ್ಟರ್ ಡಂಕನ್ ರಾಸ್ ನಿಮಗೆ ಗೊತ್ತಿಲ್ಲವೇ?'

'ಆ ಹೆಸರಿನವರು ಯಾರೂ ನನಗೆ ಗೊತ್ತಿಲ್ಲವಲ್ಲಾ..!'

'ಸರಿ, ಆ ನಾಲ್ಕನೇ ಸಂಖ್ಯೆಯ ಕೊಠಡಿಯಲ್ಲಿದ್ದವರು..?'

'ಅವನು ವಿಲಿಯಂ ಮೋರಿಸ್ ಅಲ್ಲವಾ..? ಅವನು ಲೆಕ್ಕ ಸಂಶೋಧಕ. ಅವನ ಕಛೇರಿ ಬೇರೆಲ್ಲೋ ಇದೆಯಂತೆ, ಅದು ಸಿದ್ಧವಾಗುವವರೆಗೆ ಈ ಕೊಠಡಿ ಬಳಸುವುದಾಗಿ ಹೇಳಿದ್ದ, ನಿನ್ನೆ ಖಾಲಿ ಮಾಡಿಕೊಂಡು ಹೋದ'

'ಹೊಸ ಕಛೇರಿಯ ವಿಳಾಸವೇನಾದರೂ ನಿಮ್ಮ ಬಳಿ ಇದೆಯೋ?'

'ಸಂ.೧೭, ಕಿಂಗ್-ಎಡ್ವರ್ಡ್ ಬೀದಿ, ಸೇಂಟ್-ಪಾಲ್ಸ್ ಹತ್ತಿರ'

ನಾನು ಆ ವಿಳಾಸ ಹುಡುಕಿ ಹೋದೆ. ಅದು ಕೃತಕ ಮಂಡಿ-ಚಿಪ್ಪು ತಯಾರಿಸುವ ಘಟಕವಾಗಿತ್ತು. ಮತ್ತು ಅಲ್ಲಿ ಯಾರೂ ವಿಲಿಯಂ ಮೋರಿಸ್‍ನ ಹೆಸರಾಗಲೀ, ಡಂಕನ್ ರ್‍ಆಸ್ ಹೆಸರನ್ನಾಗಲೀ ಕೇಳಿರಲಿಲ್ಲ."

"ಆಮೇಲೆ ನೀವೇನು ಮಾಡಿದಿರಿ?" ಶೆರ್ಲಾಕ್ ಪ್ರಶ್ನಿಸಿದನು.

"ಮನೆಗೆ ಹಿಂತಿರುಗಿ ನನ್ನ ಸಹಾಯಕನ ಸಲಹೆ ಕೇಳಿದೆ. ಅವನೂ ಹೆಚ್ಚಿಗೆ ಏನನ್ನೂ ಹೇಳಲಾಗಲಿಲ್ಲ. ಆದರೆ ನಾನು ಅದೇ ಕಛೇರಿಯ ಕಟ್ಟಡದ ಬಳಿ ಇರಬೇಕಿತ್ತೆಂತಲೂ, ಯಾವುದಾದರೂ ಅಂಚೆ ಬರುವ ಸಾಧ್ಯತೆಗಳಿದ್ದವೆಂತಲೂ ಹೇಳಿದ. ಶೆರ್ಲಾಕ್ ಹೋಮ್ಸ್, ಈ ರೀತಿಯ ಕೆಲಸವನ್ನು ಸುಲಭವಾಗಿ ನಾನು ಕಳೆದುಕೊಳ್ಳಲು ತಯಾರಿಲ್ಲ. ನೀವು ಇಂತಹ ಸಂದರ್ಭಗಳಲ್ಲಿ ಸೂಕ್ತ ಸಲಹೆ ನೀಡುವುದರಲ್ಲಿ ಗಟ್ಟಿಗರು ಎಂದು ತಿಳಿದು ಬಂತು. ತಕ್ಷಣವೇ ನಿಮ್ಮ ಬಳಿ ಓಡಿ ಬಂದೆ."

"ನಿಜವಾಗಿಯೂ ನೀವು ಸರಿಯಾದ ಕೆಲಸವನ್ನೇ ಮಾಡಿದ್ದೀರಿ. ನಿಮ್ಮ ಈ ಕೇಸು ತುಂಬಾ ರೋಚಕವಾದುದು. ಇದರಲ್ಲಿ ಮೇಲುನೋಟಕ್ಕೆ ಕಾಣುವುದಕ್ಕಿಂತಲೂ ದೊಡ್ಡದಾದ ದುರಂತವೊಂದು ಅಡಗಿರುವ ಸಾಧ್ಯತೆ ಇದೆ"

"ಹೌದು, ದೊಡ್ಡ ದುರಂತವೇ.. ನನಗೆ ವಾರಕ್ಕೆ ನಾಲ್ಕು ಪೌಂಡುಗಳ ನಷ್ಟ." ಎಂದ ವಿಲ್ಸನ್.

"ನಿಮ್ಮನ್ನು ವೈಯುಕ್ತಿಕವಾಗಿ ಪರಿಗಣಿಸಿದರೆ ನೀವು ಈ ತಂಡದಿಂದ ಮೂವತ್ತು ಪೌಂಡುಗಳಷ್ಟು ಶ್ರೀಮಂತರಾಗಿರುವಿರಿ. ಮತ್ತು ಬ್ರಿಟಾನಿಕಾ ವಿಶ್ವಕೋಶದ 'ಎ' ಅಕ್ಷರದ ಜ್ಞಾನ ಸಂಪಾದಿಸಿರುವಿರಿ. ನೀವು ಅವರಿಂದ ಕಳೆದುಕೊಂಡಿದ್ದು ಏನೂ ಇಲ್ಲ."

"ಹಾಗಲ್ಲ, ನನಗೆ ಅವರುಗಳ ಬಗ್ಗೆ ತಿಳಿಯಬೇಕಿದೆ. ನನ್ನ ಮೇಲೆ ಅವರು ಈ ತಮಾಷೆ ಮಾಡಿದ್ದರೂ ಅವರಿಗೆ ಮೂವತ್ತೆರಡು ಪೌಂಡುಗಳ ಖರ್ಚಾಗಿದೆ. ಅಂದರೆ ಇಷ್ಟು ದುಬಾರಿಯ ತಮಾಷೆ ಅವರೇಕೆ ಮಾಡಬೇಕು.?"

"ಅದನ್ನು ಕೆಲವು ಸಮಯದಲ್ಲೇ ನೀವು ತಿಳಿಯಲಿದ್ದೀರಿ., ವಿಲ್ಸನ್, ಅದಕ್ಕೂ ಮುಂಚೆ ನನ್ನ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ ಸಹಾಯಕ, ಈ ಜಾಹೀರಾತಿನ ಬಗ್ಗೆ ನಿಮ್ಮ ಗಮನ ಸೆಳೆದನಲ್ಲ! ಅವನು ... ಎಷ್ಟು ಕಾಲದಿಂದ ನಿಮ್ಮ ಜೊತೆ ಕೆಲಸ ಮಾಡುತ್ತಿದ್ದಾನೆ.?"

""ಆ ಜಾಹೀರಾತು ಬರಲು ಸುಮಾರು ಒಂದು ತಿಂಗಳ ಮುಂಚಿನಿಂದಲೂ.."

"ಅವನನ್ನು ಹೇಗೆ ಕೆಲಸಕ್ಕೆ ತೆಗೆದುಕೊಂಡಿರಿ?"

""ನಾನೂ ಕೆಲಸಕ್ಕೆ ಜನ ಬೇಕಾಗಿದ್ದಾರೆಂದು ಜಾಹೀರಾತು ನೀಡಿದ್ದೆ."

"ಅವನೊಬ್ಬನೇ ಉತ್ತರಿಸಿದ್ದನೇ?"

"ಇಲ್ಲ.. ಅವತ್ತು ಸುಮಾರು ಒಂದು ಡಜ಼ನ್ ಅಭ್ಯರ್ಥಿಗಳಿದ್ದರು."

"ಇವನನ್ನೇ ಆರಿಸಲು ಕಾರಣವೇನು?"

"ಏಕೆಂದರೆ ಇವನು ಉಳಿದವರಿಗಿಂತ ಕಡಿಮೆ ಸಂಬಳಕ್ಕೆ ಬರಲು ಸಿದ್ಧನಾಗಿದ್ದ."

"ಉಳಿದವರಿಗಿಂತ ಅರ್ಧ ಸಂಬಳಕ್ಕೆ..!!"

"ಹೌದು"

""ಅವನು ನೋಡಲು ಹೇಗಿದ್ದಾನೆ?"

"ಕುಳ್ಳಗೆ-ಗುಂಡಗೆ, ಮುಖದ ಮೇಲೊಂದೂ ಕೂದಲಿಲ್ಲ. ಆದರೂ ಮೂವತ್ತು ದಾಟಿದ ವಯಸ್ಸು ಆತನದು. ಆತನ ಹಣೆಯ ಮೇಲೆ ಆಸಿಡ್ ಚೆಲ್ಲಿ ಆದ ಗಾಯದ ಗುರುತು ಹಾಗೆಯೇ ಇದೆ."

ಇದನ್ನು ಕೇಳುತ್ತಲೇ ಹೋಮ್ಸ್ ಉದ್ವೇಗದ ಚುರುಕಿನಿಂದ ಎದ್ದು ಕೂತನು.

"ಅವನ ಕಿವಿಗೇನಾದರೂ ಚುಚ್ಚಿರುವುದನ್ನು ನೀವು ಗಮನಿಸಿದ್ದೀರಾ..?"

"ಹೌದು.. ಅವನು ಚಿಕ್ಕ ಹುಡುಗನಾಗಿದ್ದಾಗ ಯಾರೋ ಅಲೆಮಾರಿ ಚುಚ್ಚಿದನಂತೆ"

"ಅವನಿನ್ನೂ ನಿನ್ನ ಬಳಿಯೇ ಕೆಲಸದಲ್ಲಿದ್ದಾನಾ?" ತುಂಬಾ ಯೋಚನಾಮಗ್ನನಾಗಿ ಶೆರ್ಲಾಕ್ ಈ ಪ್ರಶ್ನೆ ಕೇಳಿದನು.

"ಹೌದು. ಅವನನ್ನು ಈಗ ತಾನೇ ಮನೆಯ ಬಳಿ ಬಿಟ್ಟು ಬಂದೆ"

"ನೀವಿಲ್ಲದಿದ್ದಾಗ ಅವನೇ ನಿಮ್ಮ ವ್ಯವಹಾರ ನೋಡಿಕೊಳ್ಳುತ್ತಾನೆಯೇ?"

"ಹೌದು ಅದರಲ್ಲೂ ಬೆಳಿಗ್ಗೆ ಅಂತ ವಿಶೇಷ ವ್ಯವಹಾರವೇನೂ ನಡೆಯುವುದಿಲ್ಲವಲ್ಲ."

"ಈಗ ಇಲ್ಲಿಗೆ ಸಾಕು, ಮಿ.ವಿಲ್ಸನ್, ಇನ್ನೊಂದೆರಡು ದಿನಗಳಲ್ಲಿ ನಿಮಗೆ ನನ್ನ ಅಭಿಮತ ತಿಳಿಸುತ್ತೇನೆ. ಇವತ್ತು ಶನಿವಾರ ಅಲ್ಲವೇ?.. ಬಹುಶಃ ಸೋಮವಾರದ ವೇಳೆಗೆ ನಾವೊಂದು ನಿರ್ಧಾರಕ್ಕೆ ಬರಬಹುದು."

ನಮ್ಮ ಗಿರಾಕಿ ಅಲ್ಲಿಂದ ಹೊರಟ ನಂತರ ನನ್ನತ್ತ ತಿರುಗಿ ಹೋಮ಼್ "ಇದನ್ನೆಲ್ಲಾ ನೋಡಿದರೆ ನಿನಗೇನೆನ್ನಿಸುತ್ತದೆ ವಾಟ್ಸನ್" ಎಂದು ಕೇಳಿದನು.

ನಾನು ಪ್ರಾಮಾಣಿಕವಾಗಿ "ನನಗಂತೂ ಇದು ಬಲು ನಿಗೂಢ ವ್ಯವಹಾರವೆನ್ನಿಸುತ್ತದೆ. ಇಷ್ಟೆಲ್ಲಾ ಕೇಳಿದ ಮೇಲೂ ನನಗೇನೂ ತೋಚದಂತಾಯಿತು" ಎಂದೆ.

"ಘಟನೆಯೊಂದಕ್ಕೆ ವೈಭವವಿದ್ದಷ್ಟೂ ಅದರಲ್ಲಿನ ನಿಗೂಢತೆಗಳು ಕಡಿಮೆಯಾಗುತ್ತವೆ. ಯಾವುದೇ ಉದ್ದೇಶವಿಲ್ಲದೆ ನಡೆದ ಅಪರಾಧದ ತನಿಖೆ ತುಂಬಾ ಕ್ಲಿಷ್ಟ. ಆದರೆ ಈ ಘಟನೆಯಲ್ಲಿ ಅಪರಾಧವಿದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲದೆ ಘಟನೆ ಕೇವಲ ತಮಾಷೆಯಾಗಿದೆ. ಇಂತಹ ತನಿಖೆಗಳಲ್ಲಿ ನಾವು ಯಾವುದೇ ಪೂರ್ವಾಗ್ರಹಗಳಿಲ್ಲದೆ ಹೊಸ ಮನಸ್ಸಿನಿಂದ ಪ್ರಾರಂಭಿಸಬೇಕು. ಮತ್ತು ಪ್ರಾಮಾಣಿಕವಾಗಿರಬೇಕು."

"ಹಾಗಿದ್ದರೆ ಈಗ ಏನು ಮಾಡಬೇಕೆಂದಿದ್ದೀ..?"

ಮೆಲುನಗೆ ನಗುತ್ತಾ ಶೆರ್ಲಾಕ್ ಹೇಳಿದ "ಸದ್ಯಕ್ಕಂತೂ ಇದಕ್ಕೆ ಮೂರು ಪೈಪ್ ಪೂರ್ತಿ ಸೇದಿ ಮುಗಿಸಬೇಕಾಗಿದೆ. ಮಿತ್ರಾ ಕಡೆಯ ಪಕ್ಷ ನೀನು ಮುಂದಿನ ಐವತ್ತು ನಿಮಿಷಗಳವರೆಗಾದರೂ ನನ್ನೊಡನೆ ಮಾತನಾಡದೇ ಇರಬೇಕು." ಎನ್ನುತ್ತಾ ತನ್ನ ಆರಾಮ ಕುರ್ಚಿಯಲ್ಲಿ ಮುದುರಿಕೊಂಡ. ಅವನ ಸಣಕಲು ಮಂಡಿ ಅವನ ಹದ್ದಿನ ಮೂಗಿನವರೆಗೂ ಬಂದು ಕುಳಿತಿತ್ತು. ಕಣ್ಣು ಮುಚ್ಚಿ ಕೇವಲ ಅವನ ಸಿಗಾರ್ ಪೈಪನ್ನು ಮಾತ್ರ ಅಲ್ಲಾಡಿಸುತ್ತಿದ್ದ ಅವನನ್ನು ನೋಡುತ್ತಾ ನಾನು ಅವನೆಲ್ಲೋ ನಿದ್ರೆಗೆ ಜಾರಿಬಿಟ್ಟಿರಬೇಕೆಂದುಕೊಂಡೆ. ಹಾಗೇ ನಾನು ತೂಕಡಿಸಲು ಪ್ರಾರಂಭಿಸಿದ್ದೆನೆನಿಸುತ್ತದೆ. ಆಗ ಶೆರ್ಲಾಕ್ ತನ್ನ ಕುರ್ಚಿ ಬಿಟ್ಟು, ನಿರ್ಧರಿತನಾಗಿ ಎದ್ದು ನಿಂತ. "ವಾಟ್ಸನ್ ಸೇಂಟ್ ಜೇಮ್ಸ್ ಹಾಲಿನಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮ ಕೇಳಲು ನಿನಗೆ ನನ್ನೊಡನೆ ಬರಲಾಗುತ್ತದೆಯೇ? ನಿನ್ನ ಪ್ರಾಕ್ಟೀಸ್ ನಿಲ್ಲಿಸಿ ನನ್ನ ಜೊತೆ ಬರಲು ನಿನ್ನ ರೋಗಿಗಳು ಬಿಡುತ್ತಾರೆಯೇ..?" ಎಂದ.

"ನನ್ನ ಪ್ರಾಕ್ಟೀಸ್ ಅಷ್ಟೊಂದು ಜೋರೇನಿಲ್ಲ. ಅಲ್ಲದೇ ನನಗೀ ದಿನ ಯಾವುದೇ ಅಪಾಯಿಂಟ್‍ಮೆಂಟ್‍ಗಳೂ ಇಲ್ಲ."

"ಸರಿ ಹಾಗಿದ್ದರೆ ಟೋಪಿ ತೊಟ್ಟುಕೋ, ಸ್ವಲ್ಪ ನಗರ ಸಂಚಾರ ಮಾಡಿ, ಅಲ್ಲೇ ಊಟ ಮಾಡಿಕೊಂಡು, ಆ ಕಾರ್ಯಕ್ರಮಕ್ಕೆ ಹೊರಡೋಣ. ಅದರಲ್ಲಿ ಜರ್ಮನ್ ಸಂಗೀತ ನನ್ನ ಅಭಿರುಚಿಗೆ ಅನುಗುಣವಾಗಿಯೇ ಇದೆ. ಫ಼್ರೆಂಚ್ ಅಥವಾ ಇಟಾಲಿಯನ್ ಸಂಗೀತಕ್ಕಿಂತ ಜರ್ಮನ್ ಸಂಗೀತದ ಅವಲೋಕನ ಗುಣ ದೊಡ್ಡದು. ನಾನೂ ಈಗ ಒಂದಷ್ಟು ಅವಲೋಕನ ಮಾಡಬೇಕಿದೆ. ಈಗಲೇ ಹೊರಡೋಣವೇ?"

ನಾವು ಅಲ್ಡರ್‌ಗೇಟ್‍ವರೆಗೂ ಗಾಡಿಯಲ್ಲಿ ಬಂದು, ಅಲ್ಲಿಂದ ಸಾಕ್ಸ್-ಕೋಬರ್ಗ್ ಚೌಕಕ್ಕೆ ನಡೆದು ಬಂದೆವು. ನಾವು ಇದುವರೆಗೂ ಕೇಳಿದ ಅದ್ವಿತೀಯ ಕತೆಯ ಕೇಂದ್ರಭಾಗವೇ ಅದು.

ಅಲ್ಲಿಯ ಮೂಲೆ ಮನೆಯೊಂದರ ಮೇಲೆ 'ಜಾಬೆಜ಼್ ವಿಲ್ಸನ್' ಹೆಸರಿನ ಬೋರ್ಡು ನೇತಾಡುತ್ತಿತ್ತು. ಅಲ್ಲೇ ನಮ್ಮ ಕೆಂಗೂದಲ ಗಿರಾಕಿ ತನ್ನ ವ್ಯವಹಾರ ನಡೆಸುತ್ತಿದ್ದುದು. ಆ ಮನೆಯ ಮುಂದೆ ನಿಂತು ಸುತ್ತಲೂ ಕಣ್ಣಾಡಿಸಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದನು ಶೆರ್ಲಾಕ್ ಹೋಮ್. ಮತ್ತೆ ಬೀದಿಯ ಕೊನೆಯವರೆಗೂ ಹೋಗಿ ಪಕ್ಕದ ಬೀದಿಗಳನ್ನೂ ಗಮನಿಸಿದನು. ಮತ್ತೆ ಚೌಕಕ್ಕೆ ಬಂದು ಎಡ-ಬಲಗಳನ್ನೂ ಅಭ್ಯಸಿಸಿದನು. ಮತ್ತೆ ಹಿಂತಿರುಗಿ ವಿಲ್ಸನ್ನನ ಮನೆಯ ಮುಂದೆ ಬಂದಾಗ ಹೋಮ್ಸನ ಕಣ್ಣುಗಳಲ್ಲಿ ಹೊಳಪಿತ್ತು. ವಿಲ್ಸನ್ನನ ಮನೆಯ ಮುಂದೆ ಹೋಮ್ಸ್ ತನ್ನ ಬೇಟನ್ನಿನಿಂದ ನಾಲ್ಕೈದು ಜಾಗಗಳಲ್ಲಿ ಜೋರಾಗಿ ಕುಟ್ಟಿ ನೋಡಿದ. ನಂತರ ಮನೆ ಬಾಗಿಲು ತಟ್ಟಿದ. ಕೂಡಲೇ ನೀಟಾಗಿ ಶೇವ್ ಮಾಡಿದ ಚುರುಕಿನ ಯುವಕನೊಬ್ಬ ಬಾಗಿಲು ತೆರೆದ.

"ಇಲ್ಲಿಂದ ಸೇಂಟ್-ಜೇಮ್ಸ್ ಹಾಲಿಗೆ ಹೋಗಲು ದಾರಿ ಹೇಗೆ?"

"ಮೂರನೇ ಕ್ರಾಸಿನಲ್ಲಿ ಬಲಕ್ಕೆ ತಿರುಗಿ, ಅಲ್ಲಿಂದ ನಾಲ್ಕನೇ ಕ್ರಾಸಿನಲ್ಲಿ ಎಡಕ್ಕೆ ಹೋಗಿ"

"ತುಂಬಾ ಉಪಕಾರವಾಯಿತು."

ಆ ಯುವಕ ಬಾಗಿಲು ಮುಚ್ಚಿಕೊಂಡು ಒಳಗಡೆ ಹೋದ. ಅವನು ಹೋದ ದಾರಿಯನ್ನೇ ನೋಡುತ್ತಾ ಹೋಮ್ಸ್ 'ಬುದ್ಧಿವಂತ' ಎಂದು ಉದ್ಗರಿಸಿದ. ನಾವು ಅಲ್ಲಿಂದ ಹೊರಟು ಮುಂದಕ್ಕೆ ಬರುತ್ತಿದ್ದಂತೆ "ನಾನು ಕಂಡಂತೆ ಲಂಡನ್ ನಗರದ ನಾಲ್ಕನೇ ಬುದ್ದಿವಂತ ಅವನು" ಎಂದ.

"ಈ ಕೇಸಿನಲ್ಲಿ ಅವನ ಕೈವಾಡ ಇರಬಹುದೆಂದು ಅವನನ್ನು ನೋಡಲು ಸುಮ್ಮನೇ ದಾರಿ ವಿಚಾರಿಸಿದೆಯಾ..?"

"ಅವನನ್ನು ಈ ಮೊದಲೇ ನಾನು ನೋಡಿದ್ದೇನೆ. ನನಗೆ ಅವನ ಬಗ್ಗೆ ಸಾಕಷ್ಟು ಗೊತ್ತು. ನಾನೀಗ ಅವನ ಮಂಡಿಯನ್ನು ನೋಡಬೇಕಿತ್ತು."

"ನೋಡಿದೆಯಾ? ಅದರಿಂದ ಏನು ತಿಳಿಯಿತು?"

"ನನಗೇನು ಬೇಕಿತ್ತೋ, ನಾನೇನು ಊಹಿಸಿದ್ದೆನೋ ಅದು"

"ಹಾಗಿದ್ದರೆ ಅವನ ಮನೆಯ ಮುಂದೆ ಕುಟ್ಟಿ ನೋಡಿದ್ದೇಕೆ?"

"ವಾಟ್ಸನ್, ನಾವೀಗ ಶತ್ರುಪಾಳೆಯದಲ್ಲಿರುವ ಗೂಢಚಾರರು, ಇದು ಕೇವಲ ಅವಲೋಕಿಸುವ ಸ್ಥಳ. ಚರ್ಚೆ ಮಾಡುವಂತಹ ಜಾಗವಲ್ಲ. ನಾವೀಗ ಈ ಕೋಬರ್ಗ್ ಚೌಕದ ಸ್ವಲ್ಪ ಸ್ಥಳಗಳನ್ನು ನೋಡಿದ್ದೇವೆ. ಉಳಿದವನ್ನು ನೋಡೋಣ ಬಾ.."

ನಾವು ಅದೇ ರಸ್ತೆಯಲ್ಲಿ ಬಂದು ಮೂಲೆಯಲ್ಲಿ ತಿರುಗಿದಾಗ ಮುಖ್ಯ ರಸ್ತೆಯೊಂದು ಎದುರಾಯಿತು. ಅದು ಲಂಡನ್ ನಗರದ ಪಶ್ಚಿಮ ಹಾಗೂ ಉತ್ತರ ಭಾಗಗಳನ್ನು ಸೇರಿಸುವ ಅತೀ ಮುಖ್ಯ ರಸ್ತೆ. ರಸ್ತೆಯಲ್ಲಿ ವಿವಿಧ ಗಾಡಿಗಳು ಎಡೆಬಿಡದೆ ಹರಿಯುತ್ತಿದ್ದವು. ಪಾದಚಾರಿಗಳಿಂದ ತುಂಬಿದ ಫ಼ುಟ್‍ಪಾತ್ ಚುರುಕಾಗಿತ್ತು. ಉದ್ದಕ್ಕೂ ಅಂಗಡಿಗಳು ಹೊಳೆಯುವ ದೀಪಗಳಿಂದ ವ್ಯವಹರಿಸುತ್ತಿದ್ದವು. ಕೆಲವು ಅತ್ಯುತ್ತಮ ಕಟ್ಟಡಗಳೂ ನಗರದ ಪ್ರಮುಖ ವ್ಯವಹಾರದ ಕಂಪನಿಗಳಿಂದ ಆ ಸ್ಥಳ ಕಂಗೊಳಿಸುತ್ತಿತ್ತು.

"ನೋಡಿಲ್ಲಿ ವಾಟ್ಸನ್, ನನಗೆ ಲಂಡನ್ ನಗರದ ಎಲ್ಲಾ ಭಾಗಗಳ ಪರಿಚಯವೂ ಇದೆ. ಇದೇ ಮಾರ್ಟಿಮರ್ ತಂಬಾಕು ಅಂಗಡಿ., ಪಕ್ಕದಲ್ಲೇ ಆ ಪುಸ್ತಕದ ಅಂಗಡಿ, ಅದು ಸಿಟಿಬ್ಯಾಂಕಿನ ಕೋಬರ್ಗ್ ಶಾಖೆ. ಪಕ್ಕದ್ದು ಹೋಟೆಲ್. ಆಮೇಲೆ ಮ್ಯಾಕ್ ಫ಼್ಲಾರೆನ್ಸ್‍ನ ಗೋಡೌನು. ಅದನ್ನು ದಾಟಿದರೆ ಪಕ್ಕದ ಬ್ಲಾಕಿಗೆ ಹೋಗುತ್ತೇವೆ. ಸರಿ, ಈಗ ಹೊಟ್ಟೆ ಕೂಡಾ ಹಸಿಯುತ್ತಿದೆ. ಒಂದೆರಡು ಸ್ಯಾಂಡ್‍ವಿಚ್ ತಿಂದು, ಕಾಫ಼ಿ ಕುಡಿದು, ನಂತರ ಸಂಗೀತ ಕಾರ್ಯಕ್ರಮಕ್ಕೆ ಹೋಗೋಣ. ಅಲ್ಲಿ ನಮ್ಮ ಸಂತೋಷ ಹಾಳು ಮಾಡಲು ಈ ಕೆಂಗೂದಲ ಗಿರಾಕಿ ಬರುವುದಿಲ್ಲ."

ನನ್ನೀ ಗೆಳೆಯ ಸ್ವತಹ ಸಂಗೀತಗಾರ, ಕೇವಲ ಪಿಟೀಲು ನುಡಿಸಲಷ್ಟೇ ಅಲ್ಲ, ಕೆಲವು ರಾಗಗಳನ್ನು ಸ್ವತಹ ಸೃಷ್ಟಿ ಮಾಡಿರುವ ಪ್ರತಿಭಾವಂತ. ಆ ಮಧ್ಯಾಹ್ನ ಸೇಂಟ್-ಪೀಟರ್ ಹಾಲಿನ ಸಂಗೀತದಲ್ಲಿ ಮಗ್ನನಾಗಿ ತಾಳ ಹಾಕುತ್ತಾ ಕುಳಿತಿದ್ದ ಅವನನ್ನು ನೋಡುವುದೇ ಆಹ್ಲಾದಕರವಾಗಿತ್ತು. ತನ್ನ ತೀಕ್ಷ್ಣಬುದ್ದಿಯಿಂದ, ವಿಚಕ್ಷಣ ಮತಿಯಿಂದ ಹಾಗೂ ತನ್ನದೇ ಆದ ರೀತಿಗಳಿಂದ ಅಪರಾಧಿಗಳಿಗೆ ಸಿಂಹಸ್ವಪ್ನನಾದ ಪತ್ತೇದಾರನೆಲ್ಲಿ? ಎಲ್ಲವನ್ನೂ ಮರೆತು ಸಂಗೀತದಲ್ಲಿ ಮಗ್ನನಾಗಿ ತಾಳ ಹಾಕುತ್ತಾ ಕುಳಿತ ಈ ಕಲಾರಸಿಕನೆಲ್ಲಿ? ಆದರೆ ಅವನ ನಡವಳಿಕೆಗಳನ್ನು ಹತ್ತಿರದಿಂದ ಬಲ್ಲ ನನಗೆ, ಇಂದು ಅವನು ಬೆನ್ನು ಹತ್ತಿರುವ ಅಪರಾಧಿಗಳ ಕೇಡುಗಾಲ ಸಮೀಪಿಸಿರಬೇಕೆಂಬುದರಲ್ಲಿ ಸಂಶಯವಿರಲಿಲ್ಲ. ಸಂಗೀತ ಕಛೇರಿ ಮುಗಿದು ಮನೆಗೆ ಹಿಂತಿರುಗುವಾಗ, ಅವನು

"ವಾಟ್ಸನ್, ನೀನು ಮನೆಗೆ ಹೋಗಬೇಕಲ್ಲವಾ?" ಎಂದ.

"ಹೌದು, ಇನ್ನೇನು ತಾನೇ ಕೆಲಸವಿದೆ?"

"ನನಗಿಲ್ಲಿ ಒಂದಷ್ಟು ಕೆಲಸಗಳಿವೆ, ಗಂಟೆಗಳೇ ಹಿಡಿಯಬಹುದು. ಈ ಕೋಬರ್ಗ್ ಚೌಕದ ವ್ಯವಹಾರ ಸರಳವಾದದ್ದೇನಲ್ಲ."

"ತುಂಬಾ ಅಪಾಯಕಾರಿಯೇ?"

""ಇರಬಹುದು. ದೊಡ್ಡ ಅಪರಾಧವೇ ಘಟಿಸಲಿದೆ. ಬಹುಶಃ ನಾವದನ್ನು ತಡೆಯಲಿದ್ದೇವೆ. ಆದರೆ ಇಂದು ಶನಿವಾರವಾಗಿರುವುದು ಕೊಂಚ ತೊಂದರೆಗೆ ಕಾರಣವಾಗಬಹುದು. ರಾತ್ರಿ ನೀನೂ ನನ್ನ ಜೊತೆಗಿದ್ದರೆ ಒಳ್ಳೆಯದೆಂದು ನನಗನ್ನಿಸುತ್ತದೆ"

"ರಾತ್ರಿ ಎಷ್ಟು ಹೊತ್ತಿಗೆ?"

"ಹತ್ತು ಗಂಟೆ. ಅದಕ್ಕೂ ಮುಂಚೆ ಏನೂ ಕೆಲಸವಿರದು."

"ಹಾಗಿದ್ದರೆ ಸರಿಯಾಗಿ ಹತ್ತು ಗಂಟೆಗೆ ನಿನ್ನ ಬೇಕರ್ ಬೀದಿಯ ರೂಮಿನಲ್ಲಿರುತ್ತೇನೆ."

"ವೆರಿ-ವೆಲ್, ಅಂದಹಾಗೆ ಅಪಾಯಕಾರಿ ಎಂದೆನಲ್ಲವೇ..? ನಿನ್ನ ಸೈನ್ಯದ ಸರ್ವಿಸ್ ರಿವಾಲ್ವರ್ ನಿನ್ನ ಬಳಿ ಇದ್ದರೆ ಒಳ್ಳೆಯದು ಕೂಡಾ." ಎಂದವನೇ ಹಿಂತಿರುಗಿ ಗುಂಪಿನಲ್ಲಿ ಕರಗಿ ಹೋದ.

ನಾನು ನನ್ನ ನೆರೆಹೊರೆಯವರಷ್ಟು ಮಂದನಲ್ಲದಿದ್ದರೂ, ಶೆರ್ಲಾಕನ ಜೊತೆಯಲ್ಲಿದ್ದಾಗ ನಾನು ಮೂರ್ಖನಾಗಿ ಬಿಡುತ್ತೇನೆ. ನಾನು ಬೆಳಿಗ್ಗೆಯಿಂದಲೂ ಅವನ ಜೊತೆಯಲ್ಲೇ ಇದ್ದೆ. ಅವನು ಕೇಳಿದ್ದನ್ನೆಲ್ಲಾ ನಾನೂ ಕೇಳಿದ್ದೆ. ಅವನು ನೋಡಿದ್ದನ್ನೆಲ್ಲಾ ನಾನೂ ನೋಡಿದ್ದೆ. ಆದರೆ ಅವನು ಹೇಳಿದ ಮಾತುಗಳನ್ನು ಕೇಳಿದರೆ, ಅವನು ಇದುವರೆಗೂ ಏನಾಗಿದೆಯೆಂದು ಅರಿತುಕೊಂಡಿರುವುದಷ್ಟೇ ಅಲ್ಲದೆ, ಮುಂದೆ ಏನಾಗುತ್ತದೆಂದೂ ಊಹಿಸಿದ್ದಾನೆ. ಆದರೆ ನನಗಿನ್ನೂ ಈ ಘಟನಾವಳಿಗಳು ಪೂರ್ಣ ನಿಗೂಢವೂ, ಗೊಂದಲಮಯವೂ ಆಗಿವೆ. ಕೆನ್ಸಿಂಗ್‍ಟನ್‍ನ ನನ್ನ ಮನೆ ಬರುವವರೆಗೂ ಇದೇ ಯೋಚಿಸುತ್ತಾ ನಡೆದೆ. ನಮ್ಮ ಕೆಂಗೂದಲ ವಿಶ್ವಕೋಶದ ನಕಲುಗಾರನಿಂದ ಹಿಡಿದು, ಬೀಳ್ಕೊಡುವ ಮುಂಚೆ ಹೋಮ್ಸ್ ಹೇಳಿದ ಮಾತುಗಳವರೆಗೂ ಎಲ್ಲವನ್ನೂ ಮೆಲುಕು ಹಾಕಿದೆ. ಹಾಗಿದ್ದರೆ ಇಂದು ನಡೆಯಲಿರುವುದೇನು? ಹೋಮ್ಸ್‍ನ ಮಾತುಗಳಿಂದಲೇ ಆ ಲೇವಾದೇವಿಗಾರನ ಸಹಾಯಕ ಚುರುಕು ಬುದ್ದಿಯ ಕ್ರಿಮಿನಲ್ ಎಂದು ತಿಳಿದಿತ್ತು. ಅವನು ಇಂದು ಅದಿನ್ನೆಂತಾ ಆಟ ಆಡಲಿರಬಹುದು, ಅದೆಂಥಾ ಅಪಾಯಕಾರಿಯಾಗಿರಬಹುದು? ಅದೂ ನಾನು ಆಯುಧ ತರಬೇಕೆಂದು ಹೋಮ್ಸ್ ಹೇಳಿದನೆಂದರೆ ಇನ್ನೇನು ನಡೆಯಲಿರಬಹುದು? ಯೋಚಿಸಿದಷ್ಟೂ ತಲೆ ಬಿಸಿಯಾಯಿತು. ಕಡೆಗೆ ಇಂದು ರಾತ್ರಿ ಉತ್ತರ ದೊರೆಯಲಿದೆಯೆಂದು ಯೋಚಿಸುತ್ತಾ, ರಾತ್ರಿಯ ಸಾಹಸಕ್ಕೆ ಅಣಿಯಾಗತೊಡಗಿದೆ.

**************

ನಾನು ಒಂಬತ್ತೂಕಾಲಕ್ಕೆ ಮನೆ ಬಿಟ್ಟು ಪಾರ್ಕ್ ದಾಟಿ ಆಕ್ಸ್‍ಫ಼ರ್ಡ್ ಬೀದಿಯಲ್ಲಿ ನಡೆದು ಬೇಕರ್ ಬೀದಿಗೆ ಬಂದಾಗ ಶೆರ್ಲಾಕ್ ಹೋಮ್ಸನ ಮನೆಯ ಮುಂದೆ ಎರಡು ಗಾಡಿಗಳು ನಿಂತಿದ್ದವು. ಮೆಟ್ಟಿಲು ಹತ್ತಿ ನನ್ನ ಸ್ನೇಹಿತನ ರೂಮಿಗೆ ಬಂದಾಗ ಅಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳಿದ್ದರು. ಅವರಲ್ಲೊಬ್ಬ ಪೀಟರ್‌ಜೋನ್ಸ್. ಪೋಲೀಸ್ ಇನ್ಸ್‍ಪೆಕ್ಟರ್. ನನಗವನ ಪರಿಚಯವಿತ್ತು. ಮತ್ತೊಬ್ಬ ದುಬಾರಿ ಬಟ್ಟೆ ಧರಿಸಿದ್ದ ವ್ಯಕ್ತಿಯ ಮುಖದಲ್ಲಿ ಆತಂಕ ಮಡುಗಟ್ಟಿತ್ತು.

ನನ್ನನ್ನು ನೋಡಿ ಹೋಮ್ಸ್ "ಹಾ.. ಎಲ್ಲರೂ ಬಂದಾಯಿತು" ಎನ್ನುತ್ತಾ ತನ್ನ ಕೋಟನ್ನು ಧರಿಸಿಕೊಂಡು, ತಾನು ಯಾವಾಗಲೂ ಹಿಡಿಯುವ ಚಾಟಿಯನ್ನು ಕೈಗೆತ್ತಿಕೊಂಡ. "ವಾಟ್ಸನ್, ನಿನಗೆ ಜೋನ್ಸ್, ಸ್ಕಾಟ್ಲೆಂಡ್ ಯಾರ್ಡಿನ ಅಧಿಕಾರಿ ಗೊತ್ತಲ್ಲವೇ? ಇವರು ಮಿಸ್ಟರ್ ಮೆರ್ರಿ ವೆದರ್, ಈ ರಾತ್ರಿಯ ಸಾಹಸದಲ್ಲಿ ಇವರಿಬ್ಬರೂ ನಮ್ಮೊಂದಿಗಿರುತ್ತಾರೆ" ಎಂದ. ಅದಕ್ಕೆ ಜೋನ್ಸ್ " ನೋಡಿ ಡಾಕ್ಟರ್, ಮತ್ತೆ ನಾವಿಬ್ಬರೂ ಒಟ್ಟಿಗೆ ಬೇಟೆಯಾಡುತ್ತಿದ್ದೇವೆ. ನಿಮ್ಮ ಸ್ನೇಹಿತ ಛೂ ಬಿಡುವುದರಲ್ಲಿ ಪರಿಣಿತ, ಆದರೆ ಅಟ್ಟಿಸಿಕೊಂಡು ಹೋಗಿ ಹಿಡಿಯಬಲ್ಲ ಬೇಟೆ ನಾಯಿಯೊಂದು ಅವರಿಗೆ ಬೇಕು." ಎಂದ ತಮಾಷೆಯಾಗಿ.

"ಬೇಟೆಯಾಡಲು ಹೋಗಿ.... ಬೆಟ್ಟ ಅಗೆದು ಇಲಿ ಹಿಡಿಯುವಂತಾದೀತೇನೋ" ಎಂದು ಚಿಂತೆಯ ದನಿಯಲ್ಲಿ ಮೆರ್ರಿ ವೆದರ್ ಹೇಳಿದ.

"ಛೇ..ಛೇ.. ಶೆರ್ಲಾಕ್ ಹೋಮ್‍ನ ಬಗ್ಗೆ, ಮತ್ತವನ ವಿಧಾನಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರ ಈ ದಿನದ ಸಿದ್ಧತೆ ಸುಮ್ಮಸುಮ್ಮನೆ ಆಗಿರುವುದಲ್ಲ. ನೋಡಿ ಆಗ್ರಾದ ಸಂಪತ್ತಿನ ಕೇಸಿನಲ್ಲಿ ಹಾಗೂ ಶೊಲ್ಟೋ ಕೊಲೆ ಕೇಸಿನಲ್ಲಿ ಪೋಲೀಸರಿಗಿಂತ ಶೆರ್ಲಾಕೇ ಮೊದಲು ಗುರಿ ಸಾಧಿಸಿದ್ದು" ಎಂದ ಜೋನ್ಸ್.

ಅದಕ್ಕೆ "ನಿಮಗೆ ನಂಬಿಕೆ ಇದ್ದರೆ ಸರಿ" ಎಂದು ನಿರಾಸಕ್ತಿಯ ದನಿಯಲ್ಲಿ ಉತ್ತರಿಸಿದ ಮೆರ್ರಿ ವೆದರ್. ""ಇತ್ತೀಚಿನ ಇಪ್ಪತ್ತೇಳು ವರ್ಷಗಳಲ್ಲಿ ಶನಿವಾರ ರಾತ್ರಿ ಕ್ಲಬ್ಬಿಗೆ ಹೋಗದೇ ಇರುವುದು ಇದೇ ಮೊದಲು" ಎಂದ.

"ಹಾಗಿದ್ದರೆ ಈ ರಾತ್ರಿ ನಿಮ್ಮ ಆಟ ಅತ್ಯಾಸಕ್ತಕರವಾಗಿರುತ್ತದೆ, ಮೆರ್ರಿ ವೆದರ್, ಈ ರಾತ್ರಿ ನಿಮ್ಮಾಟದ ಪಣ ಮೂವತ್ತೆರಡು ಸಾವಿರ ಪೌಂಡುಗಳೆಂಬುದು ನಿಮ್ಮ ನೆನಪಿನಲ್ಲಿರಲಿ, ಜೋನ್ಸ್, ನೀನು ನಗರದ ಅಪರಾಧ ಜಗತ್ತಿನ ಅತೀ ಪ್ರಮುಖನೊಬ್ಬನನ್ನು ಸಂಧಿಸಲಿರುವೆ" ಎಂದ ಹೋಮ್ಸ್.

"ಜಾನ್ ಕ್ಲೇ, ಮೋಸಗಾರ, ಕಳ್ಳ, ಕೊಲೆಗಾರ, ನಗರದ ಅತೀ ದೊಡ್ಡ ಪಾತಕಿ. ಅವನಿನ್ನೂ ಯುವಕ ಮೆರ್ರಿ ವೆದರ್, ಅದರೆ ಅವನ ಕಸುಬಿನ ಅನುಭವ ಅಗಾಧ. ಅವನ ತಾತ ಡ್ಯೂಕ್ ಆಗಿದ್ದವರು, ಅವನೂ ಈಟನ್ ಮತ್ತು ಆಕ್ಸ್‍ಫ಼ರ್ಡ್‍ಗಳಲ್ಲಿ ಓದಿಕೊಂಡವನೆ, ಆದರೆ ಅವನ ಮೆದುಳು ಪಾತಕಗಳ ಹುಟ್ಟು ಸ್ಥಳ. ಬೆರಳು ಮೋಸ ಮಾಡುವ ಆಯುಧಗಳ ರಾಜ. ಈ ವಾರ ಸ್ಕಾಟ್ಲೆಂಡಿನಲ್ಲಿ ಕನ್ನಗಳ್ಳತನ ಮಾಡಿದ್ದರೆ, ಮುಂದಿನ ವಾರ ಕಾರ್ನ್‍ವಾಲಿನಲ್ಲಿ ಅನಾಥಾಶ್ರಮಕ್ಕೆ ನಿಧಿ ಸಂಗ್ರಹಣೆಯ ನಾಟಕ ಮಾಡುತ್ತಾನೆ. ನಾವು ನೋಡುವ ಬಹುತೇಕ ಪಾತಕಗಳಲ್ಲಿ ಅವನ ನೆರಳು ಇದ್ದೇ ಇದೆ. ನಾನೂ ನಾಲ್ಕು ವರ್ಷಗಳಿಂದ ಅವನ ಬೆನ್ನು ಹತ್ತಿದ್ದರೂ, ಇದುವರೆಗೂ ಅವನನ್ನು ನೋಡಲಾಗಿಲ್ಲ." ಎಂದ ಜೇಮ್ಸ್.

"ಹಾಗಿದ್ದರೆ, ಈ ರಾತ್ರಿ ಅವನನ್ನು ನಿಮಗೆ ತೋರಿಸುತ್ತೇನೆ. ನನಗೂ ಅವನು ಒಂದೆರಡು ಬಾರಿ ಕೈಕೊಟ್ಟಿದ್ದಾನೆ. ಅವನು ಪಾತಕಲೋಕದ ರಾಜನೆಂಬ ನಿಮ್ಮ ಮಾತನ್ನು ಒಪ್ಪುತ್ತೇನೆ. ಈಗಾಗಲೇ ಹತ್ತೂಕಾಲಾಗುತ್ತಾ ಬಂತು. ಇನ್ನು ನಾವು ಹೊರಡೋಣ. ಜೋನ್ಸ್ ಹಾಗೂ ಮೆರ್ರಿ ವೆದರ್ ಮೊದಲ ಗಾಡಿಯಲ್ಲಿ ಬರಲಿ, ನಾನೂ ವಾಟ್ಸನ್ ಎರಡನೆಯದರಲ್ಲಿ ಬರುತ್ತೇವೆ"

ನಮ್ಮ ಈ ದೀರ್ಘಪಯಣದಲ್ಲಿ ಹೋಮ್ಸ್ ಮಾತನಾಡಲಿಲ್ಲ. ಆದರೆ ಮಧ್ಯಾಹ್ನ ಕೇಳಿದ ಸಂಗೀತದ ಪಲಕುಗಳನ್ನು ಗುನುಗುತ್ತಿದ್ದ. ಕಡೆಗೂ ಫ಼ಾರಿಂಗ್ಡನ್ ಬೀದಿ ಬಂತು.

"ನಮ್ಮ ಗಮ್ಯ ಬಂತು. ಈ ಮೆರ್ರಿ ವೆದರ್, ಬ್ಯಾಂಕಿನ ನಿರ್ದೇಶಕ, ಅವನಿಗೆ ಈ ಕೇಸಿನಲ್ಲಿ ವೈಯುಕ್ತಿಕ ಜವಾಬ್ದಾರಿ ಇದೆ. ಜೋನ್ಸ್ ಕೂಡಾ ನಮ್ಮ ಜೊತೆಗಿದ್ದರೆ ಒಳಿತೆಂದು ಅವನನ್ನೂ ಕರೆದೆ. ಅವನ ಬುದ್ದಿಶಕ್ತಿ ಪೋಲೀಸು ಕೆಲಸಕ್ಕೆ ಪ್ರಯೋಜನವಿಲ್ಲದಿದ್ದರೂ, ದೇಹಶಕ್ತಿಯಲ್ಲಿ ಅವನಿಗೆಣೆಯಿಲ್ಲ. ಸೀಳುನಾಯಿಯಂತೆ ಬೆನ್ನತ್ತಿ ಹಿಡಿಯಬಲ್ಲ. ಏಡಿಯಂತೆ ಅವನು ಹಿಡಿದುಬಿಟ್ಟರೆ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನೋಡು ಅವರಿಬ್ಬರೂ ಈಗಾಗಲೇ ಬಂದು ನಮಗಾಗಿ ಕಾಯುತ್ತಿದ್ದಾರೆ" ಎನ್ನುತ್ತಾ ಹೋಮ್ಸ್ ಗಾಡಿಯಿಂದ ಇಳಿದ.

ಬೆಳಿಗ್ಗೆ ನಾವು ನೋಡಿದ್ದ ಓಣಿಯಲ್ಲಿ ಹಾದು, ಸಂದಿಯ ಬಾಗಿಲೊಂದರಿಂದ ಕಟ್ಟಡವೊಂದರ ಒಳ ಹೊಕ್ಕೆವು. ಮುಂದೆ ಸಣ್ಣ ಕಾರ್‍ಇಡಾರ್ ಒಂದರ ಬಾಗಿಲು ತೆರೆದ ಮೆರ್ರಿ ವೆದರ್ ನಮ್ಮನ್ನು ಒಳಕ್ಕೆ ಕರೆದೊಯ್ದ. ಅದು ನೇರವಾಗಿ ಭದ್ರವಾದ ದೊಡ್ಡ ಕಬ್ಬಿಣದ ಬಾಗಿಲ ಬಳಿ ಕರೆದೊಯ್ಯಿತು. ಅದರ ಬಾಗಿಲನ್ನೂ ವೆದರ್ ತೆರೆದ. ಅಲ್ಲಿಂದ ಸುರುಳಿಯಾದ ಕಲ್ಲಿನ ಮೆಟ್ಟಿಲುಗಳನ್ನಿಳಿದು ಮತ್ತೊಂದು ನೆಲಮಾಳಿಗೆಗೆ ಬಂದೆವು. ಅದರ ಬೀಗ ತೆರೆದು ಒಳಹೊಕ್ಕಾಗ ಮೆರ್ರಿ ವೆದರ್ ಅಲ್ಲಿದ್ದ ಲಾಟೀನು ಹಚ್ಚಿದ. ಅದರ ಬೆಳಕಿನಲ್ಲಿ ಅಲ್ಲಿ ಪೇರಿಸಿಟ್ಟ ಪೆಟ್ಟಿಗೆಗಳೂ, ದೊಡ್ಡದೊಂದು ಕಪಾಟೂ ಕಂಡಿತು.

"ಮೇಲಿನಿಂದ ಒಳಬರಲು ತುಂಬಾ ಕಷ್ಟ." ಎಂದ ಹೋಮ್ಸ್.

"ಕೆಳಗಿನಿಂದಲೂ.." ಎನ್ನುತ್ತಾ ನೆಲವನ್ನು ಕುಟ್ಟಿದ ಮೆರ್ರಿ ವೆದರ್.. ಅವನ ಮುಖ ಇದ್ದಕ್ಕಿದ್ದಂತೆ ಕಪ್ಪಾಯಿತು. "ಇಲ್ಲೆಲ್ಲಾ ಏಕೋ ಟೊಳ್ಳಾಗಿರುವಂತಿದೆ" ಎಂದ ನಡುಗುವ ಸ್ವರದಲ್ಲಿ.

"ಇದು ನೀವು ನಿಶ್ಯಬ್ದವಾಗಿರಬೇಕಾದ ಕ್ಷಣ, ನಿಮಗೀಗ ನಮ್ಮೀ ಪ್ರಯತ್ನ ಅರಿವಿಗೆ ಬಂದಿರಬಹುದು. ದಯವಿಟ್ಟು ಯಾವುದಾದರೊಂದು ಪೆಟ್ಟಿಗೆಯ ಮೇಲೆ ಸದ್ದಿಲ್ಲದಂತೆ ಕುಳಿತುಕೊಳ್ಳಿ" ಎಂದ ಹೋಮ್ಸ್.

ಮೆರ್ರಿ ವೆದರ್ ಘಾಸಿಗೊಂಡವನಂತೆ ಹಾಗೇ ಮಾಡಿದ. ಹೋಮ್ಸ್ ಮಂಡಿಯೂರಿ ನೆಲದ ಮೇಲೆ ಕುಳಿತು ತನ್ನ ಭೂತಗನ್ನಡಿಯಿಂದ ನೆಲವನ್ನೆಲ್ಲಾ ಪರಿಶೀಲಿಸತೊಡಗಿದ. ಕೆಲವು ಕ್ಷಣಗಳ ನಂತರ ತೃಪ್ತನಾಗಿ ಮೇಲೆದ್ದು ತನ್ನ ಭೂತಗನ್ನಡಿಯನ್ನು ಜೇಬೊಳಗಿಟ್ಟುಕೊಳ್ಳುತ್ತಾ "ಇನ್ನೂ ಒಂದು ಗಂಟೆಯ ಸಮಯವಿದೆ. ಆ ಕೆಂಗೂದಲ ಲೇವಾದೇವಿಗಾರ ಚೆನ್ನಾಗಿ ನಿದ್ರಿಸುವವರೆಗೂ ಏನೂ ಮಾಡಲಾರರು. ಆದರೆ ಅವನು ಮಲಗುತ್ತಿದ್ದಂತೆ ಇವರು ರಂಗಕ್ಕಿಳಿಯುತ್ತಾರೆ. ಏಕೆಂದರೆ ಅವರು ಎಷ್ಟು ಬೇಗ ಕೆಲಸ ಮುಗಿಸುತ್ತಾರೋ, ಅಷ್ಟೂ ಹೆಚ್ಚಿನ ಸಮಯ, ತಪ್ಪಿಸಿಕೊಳ್ಳಲು ಅವರಿಗೆ ಸಿಗುತ್ತದೆ. ವಾಟ್ಸನ್, ನೀನೀಗ ಸಿಟಿ ಬ್ಯಾಂಕಿನ ನೆಲಮಾಳಿಗೆಯ ತಿಜೋರಿಯಲ್ಲಿದ್ದೀಯಾ, ಮಿಸ್ಟರ್ ಮೆರ್ರಿ ವೆದರ್, ಈ ಬ್ಯಾಂಕಿನ ನಿರ್ದೇಶಕ ಮಂಡಳಿಯ ಅಧ್ಯಕ್ಷ. ನಗರದ ಪಾತಕಿಗಳಿಗೆ ಈ ಬ್ಯಾಂಕಿನ ನೆಲಮಾಳಿಗೆಯ ತಿಜೋರಿಯ ಮೇಲೇಕೆ ಕಣ್ಣು ಎಂದು ಅವರೇ ಹೇಳುತ್ತಾರೆ" ಎಂದ.

"ಇಲ್ಲಿರುವ ಚಿನ್ನ, ಈಗಾಗಲೇ ಅದನ್ನಪಹರಿಸಲು ಪ್ರಯತ್ನಿಸಬಹುದೆಂದು ನಮಗೆ ಎಚ್ಚರಿಕೆಯ ಸೂಚನೆ ಸಿಕ್ಕಿದೆ."

"ಚಿನ್ನ..!!"

"ಹೌದು, ಕೆಲವು ತಿಂಗಳ ಹಿಂದೆ, ನಮ್ಮ ವ್ಯವಹಾರ ವಿಸ್ತರಣೆಗೆಂದು ಫ಼್ರಾನ್ಸ್‍ನ ಬ್ಯಾಂಕಿನಿಂದ ಮೂವತ್ತು ಸಾವಿರ ನೆಪೋಲಿಯನ್ನುಗಳಷ್ಟು ಸಾಲ ತೆಗೆದುಕೊಂಡಿದ್ದೆವು. ಆದರೆ ಅದನ್ನು ಬಳಸುವ ಪ್ರಮೇಯವೇ ನಮಗೆ ಬರಲಿಲ್ಲ. ಹಾಗಾಗಿ ಆ ಪೆಟ್ಟಿಗೆಗಳನ್ನೂ ನಾವಿನ್ನೂ ಬಿಚ್ಚಿಲ್ಲ. ನಾನು ಕುಳಿತಿರುವ ಈ ಪೆಟ್ಟಿಗೆಯಲ್ಲಿ ಎರಡು ಸಾವಿರ ನೆಪೋಲಿಯನ್ನುಗಳಿವೆ. ಹೀಗಾಗಿ ಇಲ್ಲಿರುವ ನಿಧಿ ನಾವು ಯಾವುದೇ ಶಾಖೆಯಲ್ಲಿಡಬಹುದಾದ ನಿಧಿಗಿಂತಾ ತುಂಬಾ ಹೆಚ್ಚಿದೆ. ಅಷ್ಟೇ ಅಲ್ಲ. ಈ ವಿಷಯ ಬ್ಯಾಂಕಿನ ನಿರ್ದೇಶಕರಿಗೂ ಸಹ ಸರಿಯಾಗಿ ತಿಳಿದಿಲ್ಲ."

"ಅಂದರೆ ಅರ್ಥವಾಯಿತಾ ವಾಟ್ಸನ್.. , ಇರಲಿ ನಾವೀಗ ನಮ್ಮ ಯೋಜನೆ ರೂಪಿಸಬೇಕು. ಇನ್ನೊಂದು ಘಂಟೆಯಲ್ಲಿ ಎಲ್ಲಾ ಮುಗಿದಿರಬಹುದು. ನಾವೀಗ ದೀಪ ಆರಿಸಬೇಕಾಗಬಹುದು"

"ಅಂದರೆ ಕತ್ತಲೆಯಲ್ಲಿ ಕುಳಿತಿರಬೇಕೇ?"

"ಹೌದು.. ನಾನೇನೋ.. ಅವರೆಲ್ಲಾ ಬರುವವರೆಗೆ ನಿಮಗೆ ತಪ್ಪಿಹೋದ ಕ್ಲಬ್ಬಿನ ಅನುಭವಕ್ಕಾಗಿ ಆಡುತ್ತಿರೋಣವೆಂದು ಇಸ್ಪೀಟು ಪ್ಯಾಕನ್ನು ಜೇಬಿನಲ್ಲಿಟ್ಟುಕೊಂಡೇ ಬಂದೆ. ಆದರೆ ಶತ್ರುಗಳ ತಯಾರಿ ತುಂಬಾ ಸೊಗಸಾಗಿದೆ. ಬೆಳಕು ನಾವು ಮುಂದುವರೆಯಲು ಅಡ್ಡಿಯಾಗುತ್ತದೆ. ಹಾಗಾಗಿ ದೀಪ ಆರಿಸಲೇಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾವೀಗ ನಮ್ಮ ನಮ್ಮ ಜಾಗಗಳನ್ನು ಆರಿಸಿಕೊಂಡು ಕೂರಬೇಕು. ಅವರು ಮೊದಲೇ ಪಾತಕಿಗಳು, ಅವರ ಕಾರ್ಯಕ್ಕೆ ವಿಘ್ನ ತರುವುದೇ ಅಲ್ಲದೆ, ಅವರನ್ನು ಬಂಧಿಸಲೂ ಪ್ರಯತ್ನಿಸುವುದರಿಂದ ಅವರು ನಮ್ಮ ಮೇಲೆ ದಾಳಿ ಮಾಡಬಹುದು. ಅದಕ್ಕಾಗಿ ನಾವು ಎಚ್ಚರದಿಂದಿರಬೇಕು. ಅಷ್ಟೇ ಅಲ್ಲ ಸುರಕ್ಷಿತ ಸ್ಥಳಗಳಲ್ಲಿರಬೇಕು. ನಾನು ಈ ಕಪಾಟಿನ ಹಿಂದೆ ನಿಲ್ಲುತ್ತೇನೆ. ನೀವೂ ಅಷ್ಟೆ, ಕಪಾಟುಗಳ ಹಿಂದೆ ಸುರಕ್ಷಿತವಾಗಿ ನಿಂತಿರಿ. ನಾನು ಅವರ ಮೇಲೆ ಬ್ಯಾಟರಿ ಬೆಳಕು ಬಿಟ್ಟ ತಕ್ಷಣ, ನುಗ್ಗಿ ಮುಗಿ ಬೀಳಬೇಕು. ಅವರೇನಾದರೂ ಆಯುಧ ಪ್ರದರ್ಶಿಸಿದರೆ, ಉಪಯೋಗಿಸಲು ಯತ್ನಿಸಿದರೆ, ವಾಟ್ಸನ್ ಚೂರೂ ಯೋಚಿಸದೆ ನೀನು ಅವರತ್ತ ಗುಂಡು ಹಾರಿಸಬೇಕಾದೀತು."

ನಾನು ನನ್ನ ರಿವಾಲ್ವರಿನ ಕುದುರೆ ಎಳೆದು ಸಿದ್ದ ಮಾಡಿಕೊಂಡು, ನನ್ನ ಮುಂದಿದ್ದ ಪೆಟ್ಟಿಗೆಯ ಮೇಲಿಟ್ಟುಕೊಂಡೆ. ಹೋಮ್ಸ್ ಲಾಟೀನು ಆರಿಸಿದ. ಅಲ್ಲೆಲ್ಲಾ ಕರಾಳಕಗ್ಗತ್ತಲು ಆವರಿಸಿತು. ಬತ್ತಿ ಉರಿದಿದ್ದ ವಾಸನೆ, ಬೆಳಕಿನ ಆಸೆಯನ್ನು ನಮ್ಮಲ್ಲಿ ಹುಟ್ಟಿಸಿ ನಮಗೆ ಎಚ್ಚರಿಕೆ ನೀಡಿತು. ಆ ನೆಲಮಾಳಿಗೆಯ ಉಸಿರುಗಟ್ಟಿಸುವ ವಾತಾವರಣ, ಒಂದು ರೀತಿಯ ಮಂಕು ಕವಿಸಲಾರಂಭಿಸಿತು. ಹೋಮ್ಸ್ ಪಿಸುಮಾತಿನಲ್ಲಿ ಕೇಳಿದ "ಈಗವರಿಗೆ ತಪ್ಪಿಸಿಕೊಳ್ಳಲು ಒಂದೇ ದಾರಿ. ಜೋನ್ಸ್ ನಾನು ಹೇಳಿದ ಕೆಲಸ ಮಾಡಿದ್ದೀಯಾ ತಾನೆ?"

"ಆ ಮನೆ ಬಾಗಿಲಿನಲ್ಲಿ ಇಬ್ಬರು ಪೇದೆಗಳು ಹಾಗೂ ಒಬ್ಬ ಇನ್ಸ್‍ಪೆಕ್ಟರ್ ಆಯುಧಗಳೊಂದಿಗೆ ಕಾಯುತ್ತಿದ್ದಾರೆ."

"ಸರಿ ಹಾಗಾದರೆ ನಾವಿನ್ನು ನಿಶ್ಯಬ್ದವಾಗಿ ಕಾಯಬೇಕು ಅಷ್ಟೇ"

ಕಾಲ ಕಳೆದದ್ದು ಹೇಗೋ.. ಬರೇ ಒಂದೂಕಾಲು ಗಂಟೆಯಷ್ಟೇ.. ಆದರೆ ನನಗೆ ಪೂರ್ತಿ ರಾತ್ರಿ ಕಳೆದಂತಾಗಿತ್ತು, ಹೊರಗೆ ಬೆಳಕು ಹರಿದು ಸೂರ್ಯ ಮೂಡುತ್ತಿರಬೇಕೆಂದೆನಿಸುತ್ತಿತು. ಕೈ ಕಾಲು ಜೋಮು ಹಿಡಿಯಲಾರಂಭಿಸಿತು. ನಾನು ಕುಳಿತ ಭಂಗಿ ಬದಲಾಯಿಸಲೇಬೇಕೆನ್ನಿಸಿದರೂ, ಮುಂದಾಗುವ ಘಟನೆಯ ನಿರೀಕ್ಷೆಯ ಆತಂಕ ಹಾಗೆ ಮಾಡದಂತೆ ತಡೆಯಿತು. ನನ್ನ ಶ್ರವಣ ಶಕ್ತಿ ಚುರುಕಾಯಿತು. ನನ್ನ ಜೊತೆಗಾರರ ಉಸಿರಾಟದ ಸದ್ದೂ ಸಹ ಬರೀ ಕೇಳಿಸುವದಷ್ಟೇ ಅಲ್ಲ, ಯಾವುದು ಯಾರದೆಂದು ಗುರುತೂ ಹಿಡಿಯಬಲ್ಲೆನೆನಿಸಿತು. ಧಡೂತಿಕಾಯದ ಜೋನ್ಸ್ ದೀರ್ಘಶ್ವಾಸಗಳನ್ನೆಳೆದುಕೊಳ್ಳುತ್ತಿದ್ದರೆ, ಸಣಕಲ ಮೆರ್ರಿವೆದರ್ ಚುಟುಕಾಗಿ ಉಸಿರಾಡುತ್ತಿದ್ದ.

ನಾನು ಕುಳಿತಿದ್ದ ಜಾಗದಿಂದ ನೆಲ ತುಂಬಾ ಚೆನ್ನಾಗಿ ಕಾಣುತ್ತಿತ್ತು. ಆಗ ಇದ್ದಕ್ಕಿದ್ದಂತೆ ನೆಲದಿಂದ ಬೆಳಕು ಬಂದಂತಾಯಿತು.

ಮೊದಲಿಗೆ ನೆಲದಿಂದ ಸಣ್ಣಗೆ ಕಿಡಿಯಂತೆ ಹಾರಿದ ಬೆಳಕು, ನಿಧಾನವಾಗಿ ಹಳದಿ ಕೋಲಾಗಿ ತೂರಿ ಬರಲಾರಂಭಿಸಿತು. ಆಮೇಲೆ ಯಾವುದೇ ಮುನ್ಸೂಚನೆಯಿಲ್ಲದೆ ಕಿಂಡಿಯೊಂದು ತೆರೆದುಕೊಂಡು, ಅದರಿಂದೊಂದು ಕೈ ಮೇಲೆ ಬಂದಿತು. ಕೆಲವು ಕ್ಷಣಗಳವರೆಗೆ ಹಾಗೆ ತೂರಿ ಬಂದ ಕೈ ಸುತ್ತಲೂ ಅಳತೆ ತೆಗೆದುಕೊಂಡು ಮತ್ತೆ ಮಾಯವಾಯಿತು. ಮತ್ತೆ ಅಲ್ಲಿ ಕತ್ತಲು ತುಂಬಿತು. ಕಲ್ಲಿನ ಮೇಲೆ ಸುತ್ತಿಗೆಯ ಏಟು ಬಿದ್ದ ಸದ್ದು ಮತ್ತು ಅದರಿಂದೆದ್ದ ಕಿಡಿ ಕಾಣಲಾರಂಭಿಸಿತು.ಒಂದೆರಡು ನಿಮಿಷಗಳಲ್ಲೇ ಕಲ್ಲನ್ನು ಪಕ್ಕಕ್ಕೆ ಸರಿಸಿ, ಚೌಕುಳಿ ಕಿಂಡಿಯೊಂದು ಉದ್ಭವವಾಯಿತು. ಮತ್ತು ಆ ಕಿಂಡಿಯಿಂದ ಬಿಳುಚಿಕೊಂಡ, ಮುಗ್ಧ ಮುಖದ ಆಕೃತಿ ನಿಧಾನವಾಗಿ ಮೇಲೆ ಬರಲಾರಂಭಿಸಿತು. ಭುಜದವರೆಗೂ ಮೇಲೆ ಬಂದ ಮೇಲೆ, ನಿಧಾನವಾಗಿ ಕೈಗಳನ್ನು ಮೇಲೆತ್ತಿ ಕಿಂಡಿಯ ಎರಡೂ ಬದಿಗೂ ಊರಿ, ಮೇಲೆ ಬಂದು, ಮಂಡಿಯೂರಿ ಜಿಗಿದು ಪೂರ್ತಿಯಾಗಿ ಮೇಲೆ ಬಂತು. ಅದರ ಹಿಂದೆಯೇ ಮತ್ತೊಬ್ಬ ಸಂಪೂರ್ಣ ಕೆಂಗೂದಲಿನ ವ್ಯಕ್ತಿ ಮೇಲೆ ಬಂದ.

"ಸದ್ಯ ಎಲ್ಲಾ ಸರಿಯಾಯಿತು.. ಆರ್ಚೀ ಚೀಲ ಮತ್ತು ಉಳಿಗಳಿವೆಯಲ್ಲಾ..?" ಎಂದು ಪಿಸುಗುಡುತ್ತಿದ್ದವನು ನಮ್ಮನ್ನು ನೋಡಿಬಿಟ್ಟ. "ಓಡು.. ಓಡು.." ಎನ್ನುತ್ತಾ ಇಬ್ಬರೂ ಕಿಂಡಿಯಲ್ಲಿ ವಾಪಸ್ಸು ಧುಮುಕಲು ನೋಡಿದರು.. ಅಷ್ಟರಲ್ಲಾಗಲೇ ಜೋನ್ಸ್ ಮತ್ತು ಶೆರ್ಲಾಕ್ ಅವರ ಮೇಲೆ ಮುಗಿಬಿದ್ದಿದ್ದರು. ಬಟ್ಟೆ ಹರಿಯುವ ಶಬ್ದ ಕೇಳಿಸಿತು. ಜೋನ್ಸ್ ಕ್ಲೇನನ್ನು ಬಿಗಿಯಾಗಿ ಹಿಡಿದಿದ್ದ. ಆದರೆ ಕ್ಲೇ ಕೈಯಲ್ಲಿ ರಿವಾಲ್ವರ್ ಕಾಣಿಸಿಕೊಂಡಿತು. ನಾನು ನನ್ನ ರಿವಾಲ್ವರ್ ಗುರಿ ಹಿಡಿದೆ. ಶೆರ್ಲಾಕ್ ಅಷ್ಟರಲ್ಲೇ ತನ್ನ ಚಾಟಿಯಿಂದ ಅವನ ಮಣಿಕಟ್ಟಿಗೊಂದು ಬಿಟಾಯಿಸಿದ. ಅವನ ರಿವಾಲ್ವರ್ ಕೈ ಜಾರಿ, ಅವನ ಮಣಿಕಟ್ಟಿಗೆ ಜೋನ್ಸ್‍ನ ಕೋಳ ಬಿದ್ದಿತು.

"ಜಾನ್ ಕ್ಲೇ.. ಇನ್ನೇನೂ ಪ್ರಯೋಜನವಿಲ್ಲ" ಎಂದ ಹೋಮ್ಸ್ ತಣ್ಣಗೆ.

"ಹೋ.. ಹೋ.. ಪರವಾಗಿಲ್ಲ.. ನನ್ನ ಸ್ನೇಹಿತನ ಬಟ್ಟೆ ಚೂರು ಸಿಕ್ಕರೂ ಅವನು ಸುರಕ್ಷಿತವಾದನಲ್ಲ" ಎಂದ ಕ್ಲೇ

"ಬಾಗಿಲ ಬಳಿ ಅವನಿಗಾಗಿ ಮೂವರು ಕಾಯುತ್ತಿದ್ದಾರೆ"

"ಹಾಗಿದ್ದರೆ ನೀನೂ ನಮ್ಮಂತೆಯೇ ಪೂರ್ಣ ಕೆಲಸ ಮಾಡಿದ್ದೇಯ.. ಶಹಬ್ಬಾಶ್"

"ನಿನಗೂ ಶಭಾಶ್, ಕ್ಲೇ.. ಇಂತಹ ಯೋಜನೆ ಹಾಕಲು ನಿನ್ನಂತಹವನಿಗಷ್ಟೇ ಸಾಧ್ಯ."

ಅಷ್ಟರಲ್ಲಿ ಜೋನ್ಸ್ ಬಾಯಿ ಹಾಕಿದ. " ನಿನ್ನ ಸ್ನೇಹಿತ ನನಗಿಂತ ಚುರುಕಾಗಿ ಬಿಲದಲ್ಲಿಳಿದ ಅಷ್ಟೆ. ಆದರೆ ಅವನನ್ನು ನೀನು ಇನ್ನು ಕೆಲವೇ ಕ್ಷಣಗಳಲ್ಲಿ ನೋಡುತ್ತೀಯ."

"ಛೇ... ಈ ಕೊಳಕು ಕೈಗಳಿಂದ ನನ್ನನ್ನು ಮುಟ್ಟಬೇಡ, ನನ್ನ ಮೈಯಲ್ಲಿ ರಾಜರಕ್ತ ಹರಿಯುತ್ತಿರುವುದು ನಿನಗೆ ಗೊತ್ತಿಲ್ಲವೇ? ಅಷ್ಟೇ ಅಲ್ಲ ಮಾತಾಡಿಸುವಾಗ ಮರ್ಯಾದೆಯಿಂದ ಮಾತನಾಡು" ಎಂದ ಕ್ಲೇ.

ಜೋನ್ಸ್ "ಸರೀ, ಮಾನ್ಯರೇ, ತಾವೀಗ ಮೆಟ್ಟಿಲು ಹತ್ತಿ ಮೇಲಕ್ಕೆ ಬಿಜಯಂಗೈದರೆ ಅಲ್ಲಿಂದ ರಥವೇರಿ ನಮ್ಮ ಠಾಣೆಗೆ ಬರಬಹುದು" ಎಂದ ನಾಟಕೀಯವಾಗಿ.

"ಹಾ... ಹಾಗೇ.. ಮಾತನಾಡಿಸಬೇಕು" ಎಂದ ಕ್ಲೇ, ನಾವು ಮೂವರಿಗೂ ಬಗ್ಗಿ ವಂದಿಸಿ, ರಾಜಗಾಂಭೀರ್ಯದಿಂದ ಜೋನ್ಸ್ ಜೊತೆ ನಡೆದ.

"ಹೋಮ್ಸ್, ನಿಮ್ಮಿಂದಾಗಿ ನನ್ನ ಮತ್ತು ನನ್ನ ಬ್ಯಾಂಕಿನ ಮರ್ಯಾದೆ ಉಳಿಯಿತು. ನಿಮ್ಮ ಫ಼ೀಸ್ ಎಷ್ಟೆಂದು ದಯವಿಟ್ಟು ತಿಳಿಸಿ, ನನ್ನ ಅನುಭವದಲ್ಲೇ ಕಂಡು ಕೇಳರಿಯದಂತಹ ಬ್ಯಾಂಕ್ ದರೋಡೆಯನ್ನು ನಿಮ್ಮ ಪತ್ತೇದಾರಿಕೆ ಮತ್ತು ಜಾಣ್ಮೆಯಿಂದ ತಪ್ಪಿಸಿದ್ದೀರಿ, ನಿಮಗೆ ನಾನೆಷ್ಟು ಕೊಟ್ಟರೂ ಸಾಲದು" ಎಂದ ಮೆರ್ರಿ ವೆದರ್.

"ಜಾನ್ ಕ್ಲೇ ಜೊತೆಗೆ ನನ್ನ ಲೆಕ್ಕಾಚಾರ ಇದೆ" ಎಂದ ಹೋಮ್ಸ್ ನಗುತ್ತಾ "ಈ ಕೇಸಿನಲ್ಲಿ ನನಗೆ ಆಗಿರುವ ಖರ್ಚಿನ ಲೆಕ್ಕವನ್ನು ಬೆಳಿಗ್ಗೆ ಕಳಿಸುತ್ತೇನೆ. ಅದನ್ನು ಪಾವತಿ ಮಾಡಿದರೆ ಸಾಕು. ಈ ಅನುಭವ ನನಗೆ ದೊರೆತ ಅತೀ ದೊಡ್ಡ ಫ಼ೀಸು" ಎಂದನು.

ಬೆಳಗಿನ ಜಾವ ಬೇಕರ್ ಬೀದಿಗೆ ಹಿಂದಿರುಗಿ ಗ್ಲಾಸಿನಲ್ಲಿ ವಿಸ್ಕಿ ಹೀರುತ್ತಾ, "ವಾಟ್ಸನ್ ಕೆಂಗೂದಲ ತಂಡದ ಕಿತಾಪತಿಯಿಂದಾಗಿ ಒಂದು ವಿಷಯ ಖಾತರಿಯಾಗುತ್ತದೆ. ನೋಡು ಆ ಮಂಕು ಲೇವಾದೇವಿಗಾರನನ್ನು ದಿನವೂ ಒಂದಷ್ಟು ಹೊತ್ತು ಮನೆಯಿಂದ ದೂರವಿಡಲು ಇದಕ್ಕಿಂತಾ ಒಳ್ಳೇ ದಾರಿ ಬೇರೇನಾದರೂ ಇದೆಯೇ..? ವಾರಕ್ಕೆ ನಾಲ್ಕು ಪೌಂಡುಗಳ ಎರೆಹುಳ ಸಿಕ್ಕಿಸಿ ಮೂವತ್ತೆರಡು ಸಾವಿರ ಪೌಂಡುಗಳಿಗೆ ಗಾಳ ಹಾಕಿದ್ದರಲ್ಲ. ಒಬ್ಬ ಜಾಹೀರಾತು ಕೊಟ್ಟ, ಇನ್ನೊಬ್ಬ ಆ ಮಂಕನನ್ನು ಅಲ್ಲಿಗೆ ಎಳೆದೊಯ್ದು ಕೆಲಸ ಕೊಡಿಸಿದ ನಾಟಕವಾಡಿದ. ದುಡ್ಡಿನ ಆಸೆಗೆ ಅವನೂ ಒಪ್ಪಿಕೊಂಡ. ಮನೆಯಿಂದ ಅವನು ದೂರವಿದ್ದರೆ ಇವರಿಗೇನು ಲಾಭ..? ಆ ಮನೆಯಲ್ಲಿ ಯಾರಾದರೂ ಹೆಂಗಸೋ, ಅದರಲ್ಲೂ ಯುವತಿ ಇದ್ದಿದ್ದರೆ ಅಥವಾ ಆ ಮಂಕನ ಬಳಿ ಸಾಕಷ್ಟು ಹಣವಿದ್ದಿದ್ದರೆ ಅದು ಬೇರೆ ಮಾತು. ಈ ಕೇಸಿನಲ್ಲಿ ಅದಾವುದೂ ಇಲ್ಲ. ಅಂದರೆ ಅವರ ಉದ್ದೇಶ ಬೇರೇನೋ ಇರಬೇಕು. ಏನಿರಬಹುದು ಎಂದು ಯೋಚಿಸುತ್ತಿದ್ದ ನನಗೆ ಅವನ ಫ಼ೋಟೊ ತೆಗೆಯುವ ಹುಚ್ಚಿನ ಬಗ್ಗೆ, ನೆಲಮಾಳಿಗೆಗೆ ಅವನು ಓಡುವ ಬಗ್ಗೆ ಹೇಳಿದಾಗ ಅವರು ಸುರಂಗ ತೋಡುತ್ತಿರಬೇಕೇ ಎನಿಸಿತು. ಅಲ್ಲದೆ ಆ ಲೇವಾದೇವಿಗಾರ ಹೇಳಿದ ಚಹರೆಯಿಂದ ಅವನು ಜಾನ್ ಕ್ಲೇ ಇರಬೇಕೆಂದು ಊಹಿಸಿದೆ. ಅವನ ಪಾತಕತನ ಮತ್ತು ಬುದ್ದಿಮತ್ತೆಯ ಬಗ್ಗೆ ನನಗೆ ಅರಿವಿದ್ದುದರಿಂದ ಅವನು ಈ ಬಾರಿ ಏನೋ ದೊಡ್ಡದಕ್ಕೇ ಕೈ ಹಾಕಿರಬೇಕೆಂದೆನಿಸಿತು. ಈ ಕಾರಣಗಳಿಂದ ಅವರು ಸುರಂಗ ತೋಡುತ್ತಿರುವುದು ನಿಜವೇ ಎಂಬ ನಿರ್ಧಾರಕ್ಕೆ ಬಂದೆ."

"ಹಾಗಾದರೆ ಸುರಂಗ ಎಲ್ಲಿಗೆ ತೋಡುತ್ತಾರೆ..? ಇದನ್ನು ಪ್ರತ್ಯಕ್ಷವಾಗಿ ಆ ಸ್ಥಳವನ್ನು ನೋಡಿಯೇ ತಿಳಿಯಬೇಕೆಂದು ಅಲ್ಲಿಗೆ ನಾವಿಬ್ಬರೂ ಹೋದದ್ದು. ಮನೆಯ ಮುಂದೆ ಕುಟ್ಟಿ ನೋಡಿದ್ದು ಏತಕ್ಕೆಂದು ನೀನಾಗ ಕೇಳಿದೆಯಲ್ಲ. ಈಗ ತಿಳಿಯಿತೇ..? ಅದರಿಂದ ನನಗೆ ಸುರಂಗ ಮನೆಯ ಮುಂದೆ ಹೋಗುತ್ತಿಲ್ಲ. ಅದೇನಿದ್ದರೂ ಮನೆಯ ಹಿಂಭಾಗದಲ್ಲಿ ಹೋಗುತ್ತಿದೆಯೆಂದು ಖಾತರಿಯಾಯಿತು. ಅಷ್ಟೇ ಅಲ್ಲ. ಅವನು ಬಾಗಿಲು ತೆಗೆದಾಗ, ನಾನು ಹೇಳಿದಂತೆ ಅವನ ಪ್ಯಾಂಟಿನ ಮೊಣಕಾಲುಗಳ ಬಳಿ ನೋಡಿದೆ, ಅದು ಕೊಳೆಯಾಗಿ ಸುಕ್ಕಾಗಿತ್ತು. ಅಂದರೆ ಅವರು ಹಿಂಬಾಗದಲ್ಲಿ ಸುರಂಗ ತೋಡುತ್ತಿರುವುದು ಖಚಿತ. ಪುಣ್ಯಕ್ಕೆ ಅವನು ನನ್ನನು ಈ ಮೊದಲು ನೋಡಿರಲಿಲ್ಲ. ಈಗ ಮನೆಯ ಹಿಂಭಾಗದಲ್ಲಿ ಸುರಂಗ ಎಲ್ಲಿಗೆ ತೋಡುತ್ತಿರಬಹುದೆಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಅಲ್ಲಿ ನಡೆದಾಡಿದ್ದು. ಅಲ್ಲಿ ಯಾವಾಗ ಸಿಟಿ ಬ್ಯಾಂಕ್ ಕಣ್ಣಿಗೆ ಬಿತ್ತೋ.. ಅಲ್ಲಿಗೆ ಇವರ ಯೋಜನೆ ನಿಚ್ಚಳವಾಗಿ ನನಗೆ ಅರ್ಥವಾಗಿ ಹೋಯಿತು. ಆಮೇಲೆ ನಿನ್ನನ್ನು ಮನೆಗೆ ಕಳಿಸಿ ನಾನು ಸ್ಕಾಟ್ಲೆಂಡ್ ಯಾರ್ಡಿಗೂ, ಬ್ಯಾಂಕಿನ ನಿರ್ದೇಶಕನ ಮನೆಗೂ ಹೋದೆ. ಆಮೇಲೇನಾಯಿತು ಎಂದು ನಿನಗೆ ಗೊತ್ತೇ ಇದೆ." ಸುಧೀರ್ಘವಾಗಿ ಹೇಳಿ ಮುಗಿಸಿದ ಹೋಮ್ಸ್.

"ಆದರೆ ಇಂದು ರಾತ್ರಿಯೇ ಅವರು ಪ್ರಯತ್ನಿಸುತ್ತಾರೆಂಬ ನಿರ್ಧಾರಕ್ಕೆ ಹೇಗೆ ಬಂದೆ?"

"ಅವರು ಕೆಂಗೂದಲ ತಂಡದ ಕಛೇರಿ ಮುಚ್ಚಿದರೆಂದರೆ ಅದರ ಅರ್ಥ ವಿಲ್ಸನ್ ಮನೆಯಲ್ಲಿದ್ದರೂ ಅವರಿಗೇನೂ ತೊಂದರೆ ಇಲ್ಲವೆಂದು. ಅಂದರೆ ಸುರಂಗ ನಿರ್ಮಾಣ ಕಾರ್ಯ ಅಲ್ಲಿಗೆ ಮುಗಿದಿರಬೇಕು. ಅಷ್ಟೇ ಅಲ್ಲ., ಈ ಹಣ ಆ ಬ್ಯಾಂಕಿನಿಂದ ಯಾವಾಗ ಬೇಕಾದರೂ ತೆಗೆಯಬಹುದಾದುದರಿಂದ, ಅವರು ಸಾದ್ಯವಾದಷ್ಟು ಶೀಘ್ರವಾಗಿ ಈ ಕೆಲಸ ಮುಗಿಸಬೇಕಿತ್ತು. ಶನಿವಾರ ರಾತ್ರಿ ಅವರು ದೋಚಿದರೆ, ಗಮನಕ್ಕೆ ಬರುವ ವೇಳೆಗೆ ಸೋಮವಾರವಾಗುತ್ತದೆ, ಅಂದರೆ ಅವರಿಗೆ ತಪ್ಪಿಸಿಕೊಂಡು ಹೋಗಲು ಒಂದು-ಒಂದೂವರೆ ದಿನಗಳ ಕಾಲಾವಕಾಶವಿರುತ್ತದೆ. ಇದನ್ನೆಲ್ಲಾ ಯೋಚಿಸಿ ಅವರು ಇಂದೇ ಈ ಕೆಲಸಕ್ಕೆ ಕೈ ಹಾಕುತ್ತಾರೆಂದು ನಿಶ್ಚಯಿಸಿದೆ.

"ನಿನ್ನ ವಿಚಕ್ಷಣಾ ಸಾಮರ್ಥ್ಯ ಅದ್ಬುತ." ಮನಸ್ಸಿನಾಳದಿಂದ ಮೆಚ್ಚುಗೆಯ ಮಾತಾಡಿದೆ.

"ಈಗಾಗಲೇ ನಿದ್ದೆ ಬರುತ್ತಿದೆ. ನೀರಸ ಜೀವನದಲ್ಲಿ ಇಂತಹ ಘಟನೆಗಳು ನಮಗೆ ನಮ್ಮತನವನ್ನು ನೆನಪಿಸುತ್ತವೆ" ಎನ್ನುತ್ತಾ ಶೆರ್ಲಾಕ್ ನಿದ್ದೆಗೆ ಜಾರಿದ.

ಮೂಲ : ಸರ್ ಆರ್ಥರ್ ಕಾನನ್ ಡಯಲ್.

ಅನುವಾದ : ಮಂಜುನಾಥ್ .ವೆಂ.