ಮುಲ್ಲಾ ಕಥೆಗಳು: ೧೦:ಗೆಳೆಯನ ಗೆಳೆಯ, ಸಾರಿನ ಸಾರು

ಮುಲ್ಲಾ ಕಥೆಗಳು: ೧೦:ಗೆಳೆಯನ ಗೆಳೆಯ, ಸಾರಿನ ಸಾರು

ಬರಹ

ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ. ಕೊಂಚ ಹೊತ್ತಿನ ನಂತರ ಇನ್ನೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯ” ಅಂದ. ಮತ್ತೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯನ ಗೆಳೆಯ” ಅಂದ. ಹೀಗೇ ಗೆಳೆಯನ ಗೆಳೆಯನ...ಎಂದು ಹೇಳಿಕೊಂಡು ಬರುವವರು ಹೆಚ್ಚಾದರು. ಎಲ್ಲರೂ ಊಟಕ್ಕೆ ಬಂದವರೇ ಹೊರತು ಮುಲ್ಲಾಗೆ ಕೊಡಲು ಏನೂ ತಂದಿರಲಿಲ್ಲ. ಎಲ್ಲರಿಗೂ ಊಟಕ್ಕಿಟ್ಟು ಮುಲ್ಲಾನಿಗೆ ಸಾಕಾಗಿಹೋಯಿತು.
ಮೂರನೆ ದಿನ ಇನ್ನೊಬ್ಬ ಬಂದ. “ನಾನು ನಿಮಗೆ ಬಾತು ಕೋಳಿ ತಂದುಕೊಟ್ಟ ನಂಟನ ಗೆಳೆಯನ ಗೆಳೆಯನ ಗೆಳೆಯನ ಗೆಳೆಯ” ಎಂದು ಪರಿಚಯ ಮಾಡಿಕೊಂಡ. ನನ್ನನ್ನೂ ಊಟಕ್ಕೆ ಕರೆಯುತ್ತಾರೆ ಎಂದು ಕಾದು ಕುಳಿತ.
ಮುಲ್ಲಾ ಒಂದು ಬೋಗುಣಿಯಲ್ಲಿ ನೀರು ತಂದಿಟ್ಟ. “ಇದೇನು?” ಎಂದು ಅಚ್ಚರಿಯಿಂದ ಕೇಳಿದ ಅಭ್ಯಾಗತ.
“ಇದು ಬಾತು ಕೋಳಿಯ ಸಾರಿನ ಸಾರಿನ ಸಾರಿನ ಸಾರು. ದಯವಿಟ್ಟು ಊಟಮಾಡಿ” ಎಂದ ಮುಲ್ಲಾ.