ಸಾಹಿತ್ಯ ಪರಿಷತ್ತೇ? ಸಾಂಸ್ಕೃತಿಕ ಪರಿಷತ್ತೇ?
ನನ್ನ ಮುಂದಿದ್ದ ಮೊದಲ ಪ್ರಶ್ನೆಯೆಂದರೆ ಇಸ್ಮಾಯಿಲ್ ಅವರ ಲೇಖನಕ್ಕೆ ಉತ್ತರಿಸ ಬೇಕೆ ಅಥವಾ ಭಿನ್ನವಾದೊಂದು ಲೇಖನವನ್ನು ಮಾಡಬೇಕೆ ಎಂಬುದು. ಇದಕ್ಕೆ ಕಾರಣ ನನ್ನ ವಾದವನ್ನು ಮಂಡಿಸಲು ಪ್ರೇರಣೆಯಾದುದು ಅವರ ` ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ`. ಕೊನೆಗೆ ಪ್ರತ್ಯೇಕ ಲೇಖನವನ್ನೇ ಮಾಡಲು ನಿರ್ದರಿಸಿದೆ.
ಸಾಹಿತ್ಯ ಪರಿಷತ್‌ನ ಸ್ವರೂಪವೇನು ಎಂಬುದರ ಬಗೆಗೆ ಚರ್ಚೆ ಎತ್ತಿಕೊಂಡರೆ ತುಸು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಸಾಹಿತ್ಯ ಪರಿಷತ್ ಕನ್ನಡಿಗರ ಉದ್ಯೋಗಗಳ ಬಗೆಗೆ, ಕನ್ನಡದ ಸ್ಥಾನಮಾನದ ಬಗೆಗೂ ನಿಲುವ ತೆಗೆದು ಕೊಳ್ಳುತ್ತದೆ. ಯಾವ ಸಂಘಟನೆಗಳೂ ಈ ಬಗೆಗೆ ನಿಲುವು ತೆಗೆದುಕೊಳ್ಳ ಬಾರದು ಎಂದೇನಲ್ಲ. ಅದು ಹಲವು ಸಲ ಕನ್ನಡಿಗರ ಅಧಿಕೃತ ವಕ್ತಾರನಂತೆಯೂ ವರ್ತಿಸುತ್ತದೆ. ಹಾಗೆ ವರ್ತಿಸುವುದು ಏಕೆ? ಹಾಗೆಯೇ ನಾವು ಹಲವರು ಅದನ್ನು ಒಪ್ಪಿಕೊಳ್ಳುವುದೇ ಏಕೆ ಎಂಬ ಪ್ರಶ್ನೆ ನಮ್ಮನ್ನು ಎಲ್ಲಿಗೆ ಒಯ್ಯುತ್ತದೆ ಎಂಬ ಪ್ರಶ್ನೆಯ ಬಗೆಗೆ ನನ್ನ ಆಸಕ್ತಿ.
ಭಾಷೆಯ ಬಳಕೆ ಹೇಗಾಗುತ್ತದೆ ಎಂದು ತುಸು ಆಲೋಚಿಸಿ.
ಮೊದಲನೆಯದಾಗಿ ಸಮಾಜವೊಂದರ ವ್ಯವಹಾರಕ್ಕೆ ಭಾಷೆ ಅಗತ್ಯವಾದ್ದರಿಂದ ನಾವು ಬಳಸುತ್ತೇವೆ. ಇದು ನಾವು ಬಳಸುವ ಆಡು ಮಾತು. ಇದರಲ್ಲಿ ಪ್ರಾಂತೀಯ ವಿಭೇದಗಳೂ ಇರುತ್ತವೆ. ಅಲ್ಲದೆ ನಾವು ಗ್ರಾಂಥಿಕವಾಗಿ ಪ್ರಮಾಣೀಕೃತ ಭಾಷೆಯನ್ನೇ ಬಳಸುತ್ತೇವೆ. ಹೀಗೆ ಬಳಸುವ ಭಾಷೆ ಅದನ್ನು ಬಳಸುವ ಜನರ ಪ್ರಾಂಥೀಯ ಹಿನ್ನೆಲೆಯಿಂದಲೇ ಪ್ರಭಾವಿತವಾಗುತ್ತದೆ. ಇಲ್ಲಿನ ಒಂದು ಸರಳ ವಾದವೆಂದರೆ ಹೀಗೆ ಪ್ರಮಾಣೀಕೃತ ಭಾಷೆಯನ್ನು ಬಳಸುವ ಮೂಲಕ ನಾವು ಸಂವಹನ ಅಥವಾ ಕಮ್ಯುನಿಕೇಷನ್ ಸಾಧ್ಯವಾಗುತ್ತದೆ ಎಂಬುದು.
ಎರಡನೆಯದಾಗಿ ನಾವು ಬರೆವಣಿಗೆಯ ಮೂಲಕ ಧಾಖಲೆಗಳನ್ನು ಇಡುತ್ತೇವೆ. ಅವು ವೈಯಕ್ತಿಕ ಡೈರಿ ಆಗಬಹುದು, ಪೋನ್ ನಂಬರ್‌ಗಳ ದಾಖಲೆಗಳಾಗಬಹುದು, ಅಥವಾ ಮನೆಯ, ಅಂಗಡಿಯ ಲೆಕ್ಕ ಪತ್ರಗಳೇ ಆಗ ಬಹುದು, ದೇವರ ಭಕ್ತಿ ಪ್ರಕಟಣೆಯೇ ಆಗಬಹುದು. ಅಷ್ಟೇ ಅಲ್ಲ ನಮ್ಮ ಸಮಾಜ ಸಂಕೀರ್ಣವಾದಂತೆ ಹಲವು ಹತ್ತು ಉದ್ಯೋಗಗಳು ಕವಲೊಡೆಯುತ್ತವೆ. ಕೇವಲ ಬಡಿಗೆ, ಕಮ್ಮಾರ ಮಾತ್ರವಲ್ಲ ಡಾಕ್ಟರ್, ಇಂಜಿನಿಯರ್, ವಕೀಲರು ಮುಂತಾದವರು ಈ ಸಮಾಜದಲ್ಲಿರುತ್ತಾರೆ. ಇಲ್ಲಿಯೂ ಬಡಿಗೆ, ಕಮ್ಮಾರನನ್ನೂ ಒಳಗೊಂಡು ಎಲ್ಲರಿಗೂ ಒಂದಲ್ಲ ಒಂದು ದಾಖಲೆ ಇಡುವ, ವ್ಯವಹಿಸಬೇಕಾದ ಅಗತ್ಯವಿರುತ್ತದೆ. ಯುರೋಪಿನ ಸಮಾಜದಲ್ಲಿ ಈ ಸಂಕೀರ್ಣ ಸಮಾಜದ ಪ್ರಾರಂಭಿಕ ಹಂತದಲ್ಲೇ ಲ್ಯಾಟಿನ್ ಮಹತ್ವ ಕಳೆದುಕೊಂಡು ಪ್ರಾಂತೀಯ ಭಾಷೆಗಳಾದ ಇಂಗ್ಲೀಷ್, ಪ್ರೆಂಚ್, ಜರ್ಮನ್ ಮುಂತಾದವು ಮಹತ್ವ ಪಡೆದುಕೊಂಡವು. ಹೀಗಾಗಿ ಈ ಎಲ್ಲಾ ಪ್ರಕ್ರಿಯೆಗಳಿಗೂ ತಮ್ಮದೇ ಭಾಷೆಯನ್ನವರು ಬಳಸಿದರು, ಆ ಮೂಲಕ ತಮ್ಮ ಭಾಷೆಗಳನ್ನು ಬೆಳಸಿದರು ಸಹ. (ಇದು ರಾಷ್ಟ್ರೀಯ ತಳಹದಿಯ ಮೇಲೆ ಇದು ಸಾಧ್ಯವಾಯಿತು) ಆದರೆ ನಮ್ಮಲ್ಲಿನ ಸಂಕೀರ್ಣ ಸಮಾಜ ರೂಪ ತಳೆದುದೇ ನಾವಿನ್ನೂ ವಸುಹಾತು ಆಡಳಿತದಲ್ಲಿದ್ದಾಗ. ಹೀಗಾಗಿ ಅಂದಿನ ಸಂಕೀರ್ಣ ಸಮಾಜ ತಂದವರ ಭಾಷೆಯಲ್ಲಿಯೇ ಈ ಎಲ್ಲಾ ಮಾಡಲು ಸಾಧ್ಯ, ನಮ್ಮ ಭಾಷೆಗಳಲ್ಲಿ ಅವೆಲ್ಲವನ್ನೂ ಮಾಡಲಾಗುವುದಿಲ್ಲ ಎಂದೇ ಭಾವಿಸಿದೆವು. ಈ ಮನೋಭಾವ ಪೂರ್ಣವಾಗಿ ಹೋಗಿದೆ ಎಂದು ನಮಗೆ ಹೇಳಲಾಗುತ್ತಿಲ್ಲ.
ಇದಕ್ಕೆ ಹೊಂಡಿಕೊಂಡಂತೆ ನಮ್ಮ ಶಿಕ್ಷಣ ಹಾಗೂ ಜ್ಞಾನ ಸೃಷ್ಟಿಯೂ ಈ ನಮ್ಮ ನಂಬಿಕೆಗೆ ಪೂರಕವಾಗಿಯೇ ಇದೆ. ಈ ಕಾರಣಕ್ಕೆ ಎಷ್ಟನೇ ಕ್ಲಾಸ್‌ನಿಂದ ನಾವು ನಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸ ಬೇಕು ಎಂಬ ವಾದವಿವಾದಗಳಲ್ಲಿ ತೊಡಗುತ್ತೇವೆ. ಇದರ ಅರ್ಥ ಇಂಗ್ಲೀಷ್‌ನ್ನೂ ಒಳಗೊಂಡು ಬೇರೆ ಭಾಷೆಗಳು ಬೇಡವೆಂದಲ್ಲ. ಆದರೆ ಇಂಗ್ಲೀಷ್‌ನ್ನು ಒಂದು ಜ್ಞಾನಕ್ಕಾಗಿರು ಭಾಷೆ ಎಂಬುದರ ಬದಲಾಗಿ ಕನ್ನಡಕ್ಕೆ ತರಲಾಗದ ಜ್ಞಾನವಿರುವ ಭಾಷೆ ಎಂದು ಬಾವಿಸತೊಡಗುವ ಅಪಾಯವೊಂದು ಈ ಸನ್ನಿವೇಶದಲ್ಲಿ ಯಾವಾಗಲೂ ಕನ್ನಡ ಮೇಲಿನ ತೂಗುಗತ್ತಿಯಾಗಿಯೇ ಇರುತ್ತದೆ. ಕನ್ನಡದಲ್ಲಿ ಅಥವಾ ಮಾತೃಭಾಷೆಯಲ್ಲಿ ಸರಳವಿರುವ ಅಭಿವ್ಯಕ್ತಿ ಇಂಗ್ಲೀಷ್‌ನಲ್ಲಿ ಸುಲಭವೇನಲ್ಲ. (ಒಂದರ್ಥದಲ್ಲಿ ಯಾವ ಜ್ಞಾನವೂ ಸರಳವಲ್ಲ ಏಕೆಂದರೆ ಅದು ಪ್ರಕೃತಿಯೊಂದಿಗೆ ಗುದ್ದಾಡುತ್ತಲೇ ರೂಪತಳೆಯುತ್ತದೆ, ಬದಲಾಗುತ್ತದೆ). ಈ ಕಾರಣಕ್ಕೆ ಕೇವಲ ಪುಸ್ತಕಗಳನ್ನು ಬೈಂಡ್ ಮಾಡುತ್ತಾ ಅವನ್ನೇ ಓದಿ ವಿಜ್ಞಾನದ ಬಗೆಗೆ ಅರಿತು ಮುಂದೆ ಅದರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ ಮೈಕಲ್ ಪ್ಯಾರಡೆಯಂತಹ ವಿಜ್ಞಾನಿಗಳನ್ನು ನಮ್ಮಲ್ಲಿ ಊಹಿಸಲೂ ಸಾಧ್ಯವಾಗುವುದಿಲ್ಲ. (ಇಂದು ವಿಜ್ಞಾನದ ಸ್ವರೂಪ ಬದಲಾಗಿದೆ. ಆದಾಗ್ಯೂ ಈ ಮೂಲಭೂತ ವಿಜ್ಞಾನದ ಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗೆ ಆಸಕ್ತಿ ಇಲ್ಲವಾಗಿದೆ ಎಂದೇ ನನ್ನ ಅನುಮಾನ)
ಮೂರನೆಯದಾಗಿ ನಮ್ಮ ಈ ಎಲ್ಲಾ ಜಂಜಡ, ಬದುಕಿನ ಅನಿವಾರ್ಯತೆಗಳ ನಡುವೆಯೂ ಜೀವನ ಬಗೆಗೆ, ಪ್ರಕೃತಿಯ ಬಗೆಗೆ, ಇದ್ದುದರ ಬಗೆಗೆ, ಇಲ್ಲದಿದ್ದುರ ಬಗೆಗೆ ನಾವು ಯೂಚಿಸುತ್ತೇವೆ ಊಹಿಸುತ್ತೇವೆ. ಅನುಭವಗಳನ್ನೂ, ಊಹೆಗಳನ್ನು, ತರ್ಕಗಳನ್ನು ಸೃಷ್ಟಿಸುತ್ತೇವೆ. ಚಿಂತನೆಯ ಬಹುಪಾಲು ಭಾಷೆಯಲ್ಲಿಯೇ ನಡೆಯುತ್ತದೆಯಾದ್ದರಿಂದ ಬರೆವಣಿಗೆಯ ದಾಖಲೆಗಳು ಈ ಬಗೆಗಿನ ಚಿಂತನೆಯ ದಾಖಲೆಗಳು. ಇದರಲ್ಲಿ ಪ್ರುಮುಖವಾದುದು ಸಾಹಿತ್ಯ ಪರಂಪರೆ.
ಒಟ್ಟಾರೆ ಒಂದು ಭಾಷೆಯ ಬಳಕೆಯ ಸಮುದಾಯದ ಒಂದು ಭಾಗ ಮಾತ್ರವಾದ ಈ ಸಾಹಿತ್ಯಿಕ ಸಮುದಾಯ ಭಾಷೆಯ ಪ್ರಗತಿಯ ಬಗೆಗೆ ಆಸಕ್ತಿ ತಳೆಯುವುದು ಅದರ ಆಸ್ತಿತ್ವದ ಪ್ರಶ್ನೆಯೂ ಹೌದು. ಇಂತಹ ಆಸ್ತಿತ್ವದ ಪ್ರಶ್ನೆ ಪತ್ರಿಕೆಗಳಿಗೂ, ಸಿನೆಮಾಕ್ಕೂ, ನಾಟಕಕ್ಕೂ (ಸಂಗೀತ), ಟಿವಿಗೂ ಅನ್ವಯಿಸುತ್ತದೆ. ಪತ್ರಿಕೆ, ಸಿನೆಮಾ, ಟಿವಿಗಳು ಇದು ಉದ್ಯಮಗಳಾಗಿ ಬೆಳೆದಿವೆ. ಹಾಗೆಯೆ ಇದು ಪುಸ್ತಕ ಪ್ರಕಾಶನ, ಪುಸ್ತಕ ಮಾರಾಟಕ್ಕೂ ಅನ್ವಯಿಸುತ್ತದೆ. ಈಗ ಇದಕ್ಕೆ ಮಾಹಿತಿ ತಂತ್ರಜ್ಞಾನದ ಉದ್ಯಮವನ್ನೂ ಸೇರಿಸ ಬಹುದು.
ಮಾನವನ ಎಲ್ಲಾ ಕ್ರಿಯೆಗಳೂ ಸೃಜನಶೀಲತೆಯ ಪ್ರತೀಕವೆ. ಆದರೆ ಭಾಷೆಯ ಬರವಣಿಗೆ ಅದು ಸಾರ್ವಜನಿಕ ಸಂವಹನವಾದಾಗ ಮಹತ್ವ ಪಡೆದುಕೊಳ್ಳುತ್ತದೆ. ಇದನ್ನು ಎಲ್ಲಿಯವರೆಗೂ ಸಾಹಿತ್ಯ ಪರಿಷತ್ ಅರಿಯುವುದಿಲ್ಲವೋ ಅಲ್ಲಿಯವರೆಗೂ ಪವನಜರಂತಹವರ ವಿಜ್ಞಾನ ಬರವಣಿಗೆಯೂ ಸೃಜನಶೀಲ ಸಾಹಿತ್ಯವೆಂದು ಪರಿಗಣಿಸಿ ಎಂಬ ಸರಳ ಸಲಹೆ `ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗುತ್ತದೆ`. ಅಷ್ಟೇಕೆ ನಾನು ಹಿಂದಿನ ಸಾಹಿತ್ಯ ಸಮ್ಮೇಳನದಲ್ಲಿ ಬೋರ್ಡ ಒಂದನ್ನು ನೋಡಿದೆ. ಇಲ್ಲಿ ಎಲ್ಲಾ ಉತ್ತಮ ಕನ್ನಡ ಹಾಡುಗಳು ಲಭ್ಯ (ಸಿನೆಮಾ ಹಾಡುಗಳನ್ನು ಹೊರತು ಪಡಿಸಿ) ಎಂದಿತ್ತು. ಇದು ಏನನ್ನು ಸೂಚಿಸುತ್ತದೆ. ನನಗಾದರೋ ಅದೊಂದು ಹೋಗಬೇಕಾಗಿರು ಅಸ್ಪರ್ಶತೆಯ ಹೊಸ ಆಚರಣೆಯಾಗಿ ಕಂಡಿತು.
ತನಗರಿವು ಇಲ್ಲದಂತೆಯೇ ಸಾಹಿತ್ಯ ಪರಿಷತ್ ಕನ್ನಡಿಗರ ಸಾಂಸ್ಕೃತಿಕ ಪ್ರತಿನಿಧಿಯಾಗ ಹೊರಟಿದೆ, ಆದರೆ ಇದರಿಂದಾಗುವ ಪರಿಣಾಮಗಳ ಗ್ರಹಿಕೆ ಅದಕ್ಕಿದಂತಿಲ್ಲ. ಅದರ ಬೇಡಿಕೆಗಳು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲದೆ ಭಾಷೆಗೂ ಸಂಬಂಧಿಸಿವೆ. ಆದರೆ ಈ ಭಾಷಾ ಕಾಳಜಿ ಕೇವಲ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಮಾತ್ರ ಸೀಮಿತವಾಗಿಲ್ಲ. ಈ ಕಾರಣಕ್ಕೆ ಅದು ಸಾಂಸ್ಕೃತಿಕ ರಂಗದ ಇತರ ಆಯಾಮಗಳನ್ನು ನಿರ್ಲಕ್ಷಿಸುತ್ತಿದೆ ಅಥವಾ ಅಗತ್ಯ ಗಮನ ಕೊಡುತ್ತಿಲ್ಲ. ಅದು ನಿಜಾರ್ಥದಲ್ಲಿ ಕನ್ನಡಿಗರ ಸಾಂಸ್ಕೃತಿಕ ಪ್ರತಿನಿಧಿಯಾಗುತ್ತದೆಯೇ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ ಎಂದು ನನಗೆ ಭಾಸವಾಗುತ್ತಿದೆ.
ಈ ಬಗೆಗೆ ಚರ್ಚಿಸುವುದು ಒಳಿತಲ್ಲವೆ?
ಕೊನೆಯದಾಗಿ ಇಂತಹ ವಾದವನ್ನು ಸಂಪಂದಕ್ಕೂ ತುಸು ಅನ್ವಯಿಸ ಬಹುದಲ್ಲವೆ?