ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ

ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ

ಬರಹ

ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ

ತಿಂಗಳು ಶುರುವಾದರೆ ಎಲ್ಲರೂ ಸಂಬಳವನ್ನು ಡ್ರಾ ಮಾಡುವುದಕ್ಕಾಗಿ ಬ್ಯಾಂಕಿಗೆ ಧಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏ.ಟಿ.ಎಂ (ಅಟೋಮೆಟೆಡ್ ಟೆಲ್ಲರ್ ಮಶಿನ್), (ಆಲ್ ಟೈಂ ಮನಿ ಅಂತಲೂ ಕರೆಯಬಹುದು) ಬಂದಿದೆ. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸಂಬಳವನ್ನು ಪಡೆಯಬೇಕಾದ ಪರಿಸ್ಥಿತಿ ಈಗಿಲ್ಲ ಅಂತ ಎಲ್ಲರೂ ನಿಟ್ಟುಸಿರು ಬಿಟ್ಟರೂ ಈ ಸರದಿ ನಿಲ್ಲುವುದು ತಪ್ಪಲಿಲ್ಲ ನೋಡಿ. ಹೌದು ಈಗ ಏ.ಟಿ.ಏಂ. ಕೌಂಟರ್ ಗಳಲ್ಲೂ ಸರದಿ ದೊಡ್ಡದಾಗಿಯೇ ಇರುತ್ತದೆ. ಆ ಸರದಿಯಲ್ಲಿ ಕೆಲವು ಜನರಿಗೆ ಏ.ಟಿ.ಎಂ. ಹೇಗೆ ಬಳಸುವುದು ಎಂದು ಗೊತ್ತು, ಆದರೆ ಬಹುತೇಕ ಜನ ಬೇಕಾ ಬಿಟ್ಟಿ ಆಗಿ ಉಪಯೋಗಿಸುತ್ತಿರುವಾಗ ಹಿಂದೆ ಸರದಿಯಲ್ಲಿ ನಿಂತ ಜನ ಶಪಿಸುತ್ತಿರುವುದನ್ನು ನೋಡಬೇಕು. ಮೊನ್ನೆ ಒಂದು ಸಾರಿ ಹಣ ತೆಗೆದುಕೊಳ್ಳಲು ಹೋದಾಗ, ಉದ್ದನೆಯ ಸಾಲನ್ನು ಕಂಡು ಹೆದರಿದೆ. ಆದರೆ ಹಣ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಿಂದ ಆ ಸಾಲಲ್ಲೆ ನಿಲ್ಲಬೇಕಾಯಿತು. ಅಲ್ಲಿ ನನ್ನ ಮುಂದೆ ೧೦ ಜನ ಇದ್ದರು. ಒಬ್ಬ ಮಹಿಳೆ ಒಳಗಡೆ ಡ್ರಾ ಮಾಡ್ತಾ ಇದ್ದರು. ಅವರಿಗೆ ಡ್ರಾ ಮಾಡುವ ವಿಧಾನ ಸರಿಯಗಿ ಗೊತ್ತಿಲ್ಲವೇನೊ ಅಥವಾ ಬೇರೆ ಎನೋ ತೊಂದರೆ ಆಗಿದ್ದರಿಂದ ಒಬ್ಬರನ್ನು ಕರೆದು ಸಹಾಯ ಮಾಡಿ ಅಂದರು. ಅವರೂ ಆ ಮೇಡಂ ಗೆ ಸಹಾಯ ಮಾಡಿದರು. ಹಿಂದಿನ ಜನರು ಲೊಚಗುಡುತ್ತಿದ್ದರು. ನಂತರ ಒಂದು ಕುಟುಂಬ ಪೂರ್ತಿ ಏ.ಟಿ.ಎಂ. ಕೌಂಟರ್ ಗೆ ಧಾವಿಸಿತು. ಮಗ, ಅಮ್ಮ, ಅಪ್ಪ ಎಲ್ಲರೂ ಒಳಗೆ ಹೋದರು. ಮಗನ ಕೇಕೆ, ನಾನೇ ಹಣ ತೆಗೆಯುತ್ತೇನೆ ಎಂಬ ಮಗಳ ಹಠ ಹೀಗೆ ಅವರು ನಾಲ್ಕು ನಿಮಿಷವಾದರೂ ಹೊರಗೆ ಬರಲಿಲ್ಲ. ಅಲ್ಲಿದ್ದವರು ಎನ್ರಿ ಇವ್ರು ಬುದ್ಧಿ ಇಲ್ವಾ ಇವರಿಗೆ ಹಾಗೆ ಹೀಗೆ ಬೈತಾನೇ ಇದ್ದರು. ಒಟ್ಟು ಎಂಟು ನಿಮಿಷಗಳ ಕಾಲದ ನಂತರ ಹೊರಗೆ ಬಂದು ಎಲ್ಲರತ್ತ ನೋಡಿ ಹಾಗೆ ಹೋದರು. ಶಪಿಸಿದವರು ಮಾತ್ರ ತೆಪ್ಪಗೆ ನಿಂತಿದ್ದರು. ಇನ್ನೊಬ್ಬರು ಮೊದಲನೇಯ ಬಾರಿ ಬ್ಯಾಲೆನ್ಸ್ ಚೆಕ್ ಮಾಡಿ ನಂತರ ಹಣ ತೆಗೆದುಕೊಂಡರು. ಹಿಂದೆ ನಿಂತವರು ಲೊಚಗುಡುತ್ತಿರುತ್ತಾರೆ. ತಮ್ಮ ಪಾಳಿ ಬಂದಾಗ ಹಿಂದಿನವರು ಹಾಗೆ ಅನ್ನಬಹುದು ಅಲ್ಲವೆ. ಆದರೆ ಎಲ್ಲರೂ ಹಾಗೆ ಇರುವುದಿಲ್ಲ ಅನ್ನೊದು ಸತ್ಯ. ಈ ಬಾರಿ ನೀವು ಏ.ಟಿ.ಎಂ.ಗೆ ಹೋದಾಗ ಸರದಿ ದೊಡ್ಡದಿದ್ದರೂ ಅಲ್ಲಿನ ಜನರನ್ನು ನೋಡಿ, ನನಗೆ ಸಿಕ್ಕಂತವರು ನಿಮಗೆ ಸಿಕ್ಕರೆ ಬರೆಯಿರಿ. ಎನೇ ಹೊಸತು ಬರಲಿ, ಸರದಿ ನಿಲ್ಲೊದು ಮಾತ್ರ ತಪ್ಪಲ್ಲ ನೋಡಿ.....