ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

ಬರಹ
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು ಬಯಸುತ್ತ, ಆಗಲಿಲ್ಲವೆಂದು ಕೊರಗುತ್ತ ಇರುವ ಪ್ರಾಣಿ. ನನಗೆ ಸಿಕ್ಕ ಕುದುರೆಗಿಂತ ಇನ್ನು ಬೇರೆ ಕುದುರೆ ಸಿಕ್ಕಿದ್ದರೆ ಎಂದು ಬಯಸುತ್ತ, ಅಂಥ ಬಯಕೆಯ ಕುದುರೆ ಸಿಕ್ಕರೆ ಎಂದು ಆಶಿಸಿ ಹಲ್ಲಣವನ್ನು ಬೆನ್ನಮೇಲೆ ಹೊತ್ತು ತಿರುಗುತ್ತ ಇರುತ್ತೇವೆ. ಇದು ವೀರರ ಲಕ್ಷಣವೂ ಅಲ್ಲ, ಧೀರರ ಲಕ್ಷಣವೂ ಅಲ್ಲ. ತೆಂಗಿನ ಮರ ತಾನು ಹುಣಿಸೆ ಮರವಾಗಬೇಕಿತ್ತು, ಮಲ್ಲಿಗೆ ಗಿಡವಾಗಬೇಕಿತ್ತು ಎಂದು ಬಯಸುತ್ತದೆಯೇ? ನಾವೆಲ್ಲರೂ ಈಗ ಇರುವುದಕ್ಕಿಂತ ಬೇರೆ ಏನೋ ಆಗಬೇಕೆಂದು ಹಂಬಲಿಸುತ್ತ ಅಂಥ ಹಂಬಲದಲ್ಲೇ ಬದುಕನ್ನು ಕಳೆದುಬಿಡುತ್ತೇವಲ್ಲ! ಇಂಥ ಹಂಬಲವೇ ಎಸ್ಕೇಪಿಸಂ ಅಲ್ಲವೆ? ಇರುವ ಸತ್ಯವನ್ನು ಒಪ್ಪಿಕೊಳ್ಳದೆ ಇಷ್ಟವಾಗುವ ಸತ್ಯವನ್ನು, ಪ್ರಿಯವಾಗುವ ಸತ್ಯವನ್ನು ಬರಿದೇ ಹುಡುಕುತ್ತ ಬಳಲುತ್ತೇವೆ. ಹಾಗೆ ಬಳಲುವುದೇ ನಮ್ಮ ದೊಡ್ಡಸ್ತಿಕೆ ಎಂದು ಭ್ರಮಿಸುತ್ತೇವೆ. ವೀರರು, ಧೀರರು ಆದವರು ತಮ್ಮ ಸತ್ಯವನ್ನು ಒಪ್ಪಿಕೊಂಡು ತಮ್ಮ ಪಾಲಿಗೆ ಬಂದ ಕುದುರೆಯನ್ನು ಪಳಗಿಸಿಕೊಳ್ಳಬೇಕು ಅಲ್ಲವೆ?