ಪಾಕ-ಫಜೀತಿ

ಪಾಕ-ಫಜೀತಿ

ಬರಹ

ಮಯ್ಯ ಸರ್ ನ "ನಳಪಾಕ" ಪುಸ್ತಕ ಕೈಗೆ ಬಂದದ್ದೇ ತಡ, ತುದಿಯಿಂದ ಕಡೆಯ ವರೆಗೆ ಓದಿ ಮುಗಿಸಿದೆ. ಮಾತ್ರವಲ್ಲ, ಕ್ರಿಸ್ಮಸ್ ರಜೆಗೆ ಮನೆ ಸೇರಿದ ಕೂಡಲೇ ಒಂದೊಂದಾಗಿ ಎಲ್ಲಾ ಅಡುಗೆ ಮಾಡಿ ಎಲ್ಲರಿಗೂ ತಿನ್ನಿಸಿ 'ಭೇಷ್' ಎನಿಸಿಕೊಳ್ಳಬೇಕೆಂದು ಲೆಕ್ಕ ಹಾಕಿದೆ.
ಅಂತೂ ರಜೆ ಬಂದಾಗ ಮನೆಯಲ್ಲಿ ವಿಧ ವಿಧ ರುಚಿಗಳು ತಯಾರಾಗಲು ಶುರುವಾಗುವುದರ ಜೊತೆಗೆ ಕಾಂಪ್ಲಿಮೆಂಟ್ಸೂ ಬರತೊಡಗಿತು(ನನಗಲ್ಲ, ಮಯ್ಯಸರ್ ಗೆ! ನನ್ನ ಅಡುಗೆಗಳೂ ರುಚಿ ಪಡೆದುಕೊಳ್ಳಲು ಕಾರಣರಾದುದಕ್ಕೆ!) "ನಿನ್ನ ವಯಸ್ಸಿಗೆ ಎಲ್ಲಾ ಅಡುಗೆ ಕಲಿತಿದ್ದೆ" ಎಂದು ಆಗಾಗ ಬೆನ್ನು ತಟ್ಟಿಕೊಳ್ಳುತ್ತಿದ್ದ ಅಮ್ಮನೆದುರು ಮೆರೆದದ್ದೇ ಮೆರೆದದ್ದು! ಸಣ್ಣ ಪುಟ್ಟ ಅಡುಗೆಗಳು ನನಗೆ ಸಂಪೂರ್ಣವಾಗಿ ಕರಗತವಾಗಿದೆ, ಹಾಗಾಗಿ ಇನ್ನು ದೊಡ್ಡ ಅಡುಗೆಗಳಿಗೆ ಕೈ ಹಾಕೋಣವೆಂದು ಯೋಚಿಸಿದೆ. ಸಾರು, ಪಲ್ಯಗಳು ಬಹು ಸುಲಭ. ನನಗೆ ಸವಾಲಾಗಲಾರವು, ಇನ್ನು.... ಎಣ್ಣೆ ತಿಂಡಿಗಳು... ಅಕಾಸ್ಮಾತ್ ಮಾಡಿದ ಹಿಟ್ಟು ಎಡವಟ್ಟಾಗಿ ಎಣ್ಣೆಯೆಲ್ಲಾ ಸುರ್ರ್...ನೆ ಹೀರಿ, ತೆಂಗಿನ ಗಾತ್ರ ಪಡೆದರೆ ತಿನ್ನುವವರಾರು? ಪುಟ ತಿರುವಿದಾಗ "ಕಡ್ಲೆ ಬೇಳೆ ಹೋಳಿಗೆ" ಕಣ್ಣಿಗೆ ಬಿತ್ತು. 'ಗಟ್ಟಿಗಳೆನಿಸಿದರೆ ಇದರಲ್ಲಿ ಎನಿಸಬೇಕು' ಎಂದುಕೊಂಡಾಗ, ಅಮ್ಮ "ಸದ್ಯಕ್ಕೆ ನಿತ್ಯದಡುಗೆಗಳನ್ನು ಕಲಿ" ಎಂದಳು. 'ಮುಖಭಂಗ'ವಾಯಿತು. ಅಮ್ಮನಿಗೇನು ಗೊತ್ತು ನನ್ನ ಪಾಕ ಪ್ರಾವೀಣ್ಯ? ಇರಲಿ, ತೊರಿಸುತ್ತೇನೆಂದು ಪಾಕಶಾಲೆ ಸೇರಿದೆ.

ಒಂದು ಸೇರು ಕಡ್ಲೆ ಬೇಳೆಗೆ ೫೦ ಹೋಳಿಗೆ ಎಂದು ಬರೆದಿತ್ತು. ಸದ್ಯಕ್ಕೆ ೨೫ ಸಾಕಾದುದರಿಂದ ಎಲ್ಲಾ ಅಳತೆಗಳನ್ನು ಅರ್ಧಕ್ಕಿಳಿಸಿದೆ. ರುಚಿ ನೋಡಿದ ಬಳಿಕ ೧೦೦ ಹೋಳಿಗೆಗಳಿಗೆ ಆರ್ಡರು ಬಂದರೂ ಹೆಚ್ಚೇನಲ್ಲ ಎಂಬುದು ನನ್ನ ನಂಬಿಕಯಾಗಿತ್ತು. ನಾದಿದ ಕಣಕ ಒಂದು ಗಂಟೆ ಕಾಲ ಹಾಗೆಯೇ ಇಡಬೇಕಂದು ಪುಸ್ತಕದಲ್ಲಿ ಬರೆದಿತ್ತು. ನಾನು ಎಲ್ಲವನ್ನೂ ಅರ್ಧಕ್ಕಿಳಿಸಿದುದರಿಂದ ಅರ್ಧವೇ ಗಂಟೆ ಮುಚ್ಚಿಟ್ಟು ಕೆಲಸ ಮುಂದುವರಿಸಲು ಹೊರಟಾಗ ಅಮ್ಮನಿಂದ ನಗೆಪಾಟಲಿಗೀಡಾಗಬೇಕಾಯಿತು. ಇನ್ನೊಮ್ಮೆ ಮುಖಭಂಗವಾಯಿತು. ಇರಲಿ, "ಫೈಲ್ಯೂರ್ ಈಸ್ ದ ಸ್ಟೆಪ್ಪಿಂಗ್ ಸ್ಟೋನ್ ಆಫ್ ಸಕ್ಸೆಸ್" ಆದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿರುವ ಹೋಳಿಗೆ ತಯಾರಾಗುವ ಲಕ್ಷಣ ಎಂದಾಯಿತು. ಹೋಳಿಗೆ ತಯಾರಾಗುತ್ತಿದ್ದಂತೆ ಹೂರಣ "ಜವುಗು ಮಣ್ಣಿನ" ರೂಪ ಪಡೆಯಿತು. ಮಣೆ, ಲಟ್ಟಣಿಗೆಗಳೆಲ್ಲಾ ಅಂಟಂಟು ಹಿಟ್ಟುಮಯ. ಅಂತೂ ಹರಸಾಹಸದಿಂದ ಕಾವಲಿಯಿಂದ ಬಲವಂತವಾಗಿ ಹಿಡಿದೆಳೆದು ಬಡಿಸಿದಾಗ, ಹೊಟ್ಟೆಗೆ ಸೇರಿಸಿಕೊಂಡವರ ಮುಖ 'ಹರಳೆಣ್ಣೆ' ಕುಡಿದವರಂತಾಯಿತು. ಹೋಳಿಗೆಯ ಪರಿಮಳವಂತೂ ಇಲ್ಲವೇ ಇಲ್ಲ. ರಾಗಿ ಮುದ್ದೆಯ ಅಂಟು ಬೇರೆ! ಪುಸ್ತಕದಲ್ಲಿರುವಂತೆಯೇ ಮಾಡಿದ್ದೆ, ಹೀಗೇಕಾಯಿತು? ಅಮ್ಮನಿಗೆ ಅನುಮಾನ ಬಂದು ಕಡಲೆಬೇಳೆಯ ಡಬ್ಬ ತೋರಿಸಲು ಹೇಳಿದಾಗ, ಕರೆದೊಯ್ದು ತೋರಿಸಿದೆ. 'ಲಾಫಿಂಗ್ ಗ್ಯಾಸ್' ಮೂಸಿದಂತೆ ನಗಲು ಸುರು ಮಾಡಿದ ಅಮ್ಮ ಡಬ್ಬವನ್ನು ಇತರರಿಗೂ ತೋರಿಸಿದಾಗ ನಗು ಸಾಂಕ್ರಾಮಿಕವಾಯಿತು. ತಲೆ ಬುಡ ಅರ್ಥವಾಗದಿದ್ದ ನನಗೆ ಅದು ತೊಗರಿಬೇಳೆಯೆಂದು ತಿಳಿದಾಗ ೩ ನೇ ಮುಖಭಂಗ! "ಮಾನನಷ್ಟ ಪರಿಹಾರ"ಕ್ಕೆ ಅಪ್ಪನಿಗೆ ಅರ್ಜಿ ಹಾಕಿದೆ. ಪುಣ್ಯಕ್ಕೆ ಅಪ್ಪ ನನ್ನ ಪಕ್ಷ ಸೇರಿ, ನನಗಿನ್ನೊಂದು ಅವಕಾಶ ನೀಡಿ, ಜಹಂಗೀರ್ ನನ್ನ ಕೈಯಿಂದ ಮಾಡಿಸುವುದೆಂಬ ತೀರ್ಪು ನೀಡಿದರು. ಆದರೂ ಆ ದಿನವಿಡೀ ಅಮ್ಮ ಕಂತು ಕಂತಿನಲ್ಲಿ ಮತ್ತೆ ಮತ್ತೆ ನೆನೆದು ನಗು ಉಕ್ಕಿಸುತ್ತಿದ್ದಳು.
ಇನ್ನೊಮ್ಮೆ ನನ್ನ 'ಪ್ರ್ಯಾಕ್ಟಿಕಲ್ಸ್' ಆರಂಭವಾಯ್ತು. "ಇದೇನು ಕಷ್ಟದ ಕೆಲಸ! ಏನೆಂದುಕೊಂಡೆ ನನ್ನ?" ಕೊಚ್ಚಿಕೊಳ್ಳುವಿಕೆ ಮುಂದುವರಿಸಿದೆ "ನಳ ಮಹಾರಾಜ ನನ್ನ ಕೈ ಕೆಳಗೆ ಟ್ರೈನಿಂಗ್ ತೆಗೊಂಡು...." ಅಮ್ಮನಿಂದ ತಲೆಗೆ ಮೊಟಕಿಸಿಕೊಳ್ಳಬೇಕಾಯಿತು "ಲಾಟು ಬಿಟ್ಟದ್ದು ಸಾಕು! ಅಸಂಬದ್ಧ ಹೇಳಿ ಅವರಿಗೆಲ್ಲ ಅವಮಾನ ಮಾಡ್ಬೇಡ!"
ಅಂತೂ ಈ ಬಾರಿ ಉದ್ದಿನಬೇಳೆಯನ್ನು ಎರಡೆರಡು ಬಾರಿ ಪರೀಕ್ಷಿಸಿ ಹೆಸರು ಬೇಳೆಯಲ್ಲವೆಂದು ಖಚಿತಪಡಿಸಿಕೊಂಡೇ ಪಾತ್ರೆಗೆ ಹಾಕಿದೆ. ಕೊನೆಗೆ ಹಿಟ್ಟನ್ನು ತೂತಿರುವ ಬಟ್ಟೆಗೆ ಹಾಕಿ ಎಣ್ಣೆಗೆ ಸುರಿಯುವಾಗ ಹಿಟ್ಟಿನ ಭಾರ ಹೆಚ್ಚಾಗಿ ತೆಳು ಬಟ್ಟೆಯ ತೂತು ಹರಿದೇ ಹೋಯ್ತು! ಜಹಂಗೀರ್ ಹೋಗಿ ಮದ್ದೂರು ವಡೆಯಾಯ್ತು. ಗ್ರಹಚಾರವೇ! ಸಕ್ಕರ ಪಾಕಕ್ಕೆ ಹಾಕಿದಾಗಲಂತೂ ನನ್ನ "ಪ್ರಯೋಗಶಿಶು" ಕ್ಷಣ ಕ್ಷಣಕ್ಕೂ ಉಬ್ಬತೊಡಗಿತು! ನಿಂತಲ್ಲೇ ನಾನು ಡ್ಯಾನ್ಸ್ ಮಾಡತೊಡಗಿದೆ.
ಅಲ್ಲಿಗೆ ನನ್ನ ಮಾನ ಲಗಾಡಿ ತೆಗೆಯಲು ಅಮ್ಮನ ಸವಾರಿಯೂ ಬಂತು! ಸತ್ತೆ! ನನ್ನ ಕರ್ಮವೇ?! ಅಮ್ಮನ ಪ್ರಶ್ನೆ... "ಏನಾಯ್ತು?" ಬೇಗ ಬೇಗನೆ ಮುಚ್ಚಿಡುತ್ತಾ ಹೇಳಿದೆ "ಏನಿಲ್ಲ" ಅಮ್ಮನೆದುರು ಗುಟ್ಟು ರಟ್ಟಾಗದೆ ಉಳಿದೀತೇ? ಕೇಳಿಯೇ ಬಿಟ್ಟಳು "ಮತ್ಯಾಕೆ ಹಡಗು ಮುಳುಗಿದ ಹಾಗೆ ಮಾಡ್ತಾ ಇದ್ದೀ?" "ಓ ಅದಾ...?" ಮುಚ್ಚಳ ಸರಿಸಿ ಹಲ್ಲು ಕಿರಿದೆ! ನನ್ನ ಬ್ಯಾಟ್ರಿ ಅಲ್ಲಿಗೆ ಖಾಲಿ! ಕಡಿಮೆಯೆಂದರೆ, ಇನ್ನೊಂದು ನಾಲ್ಕು ತಿಂಗಳಿಗೆ ಸಾಕು "ಇವಳು ಅಡುಗೆ ಮಾಡಿದ ಹಾಗೆ" ಎನ್ನುವ ಗಾದೆ ಮಾತು! ಇಷ್ಟೆಲ್ಲಾ ನಡೆದರೂ ನಾನು ಅಡುಗೆ ಮಾಡುವುದು ನಿಲ್ಲಿಸಲಿಲ್ಲ. "ಟ್ರೈ ಆಂಡ್ ಟ್ರೈ ಅಂಟಿಲ್ ಯು ಸಕ್ಸೀಡ್". ಆದರೆ ಕ್ರಿಸ್ಮಸ್ ರಜೆ ಮಾತ್ರ ಮುಗಿಯಿತು. ಮುಂದಿನ ರಜೆಯಲ್ಲಿ ಮೂರನೇ ಬಾರಿಗೆ ಸಿಹಿತಿಂಡಿ ಮಾಡಲಿದ್ದೇನೆ. ಅದರ ರುಚಿ ನೋಡಿದವರು ಹಿಂದೆ ನನ್ನನ್ನು ಛೇಡಿಸಿದ್ದಕ್ಕೆ ಬೇಸರ ಪಟ್ಟು "ಅಡುಗೆ ಅಂದ್ರೆ ಇವಳ ಅಡುಗೆ" ಎಂಬ ಹೊಸ ಗಾದೆ ಮಾತು ಕಂಡುಕೊಳ್ಳಲಿದ್ದಾರೆ. ಖಂಡಿತವಾಗಿಯೂ ನಿಮಗೂ ಹಂಚುತ್ತೇನೆ. ರುಚಿ ನೋಡಿ ಮತ್ತೆ ಹೇಳಿ!!!